Wednesday, April 1, 2020

ಮನಸ್ಸಿನ ಜೊತೆಗೆ ಕಣ್ಣನ್ನು ತೆರೆದು ನೋಡಬೇಕಿನಿಸುವ ಕಣ್ತೆರೆದು ನೋಡು (1961) (ಅಣ್ಣಾವ್ರ ಚಿತ್ರ ೨೨ / ೨೦೭)

ಶ್ರೀ ಒಮ್ಮೆ ಕಣ್ತೆರೆಯಪ್ಪ..

ಪರಿಚಿತ ಧ್ವನಿ.. ಅರೆ ಇದ್ಯಾರಪ್ಪಾ ನನ್ನ ಕರೀತಾ ಇದ್ದಾರೆ.. ಎಂದು ಕಣ್ಣುಜ್ಜಿಕೊಂಡು ಕಣ್ಣುಬಿಟ್ಟೆ .. ಬಿಳಿ ಪಂಚೆ.. ಬಿಳಿ ಅಂಗಿ.. ನಗುವಾಗ ಸೊಗಸಾಗಿ ಕಾಣುವ ಮುಂದಿನ ಎರಡು ಹಲ್ಲುಗಳು.. ಬೆರಳಿನಲ್ಲಿ ಒಂದು ಉಂಗುರ.. ಕಾಲಲ್ಲಿ ಚಪ್ಪಲಿ ಇಲ್ಲ.. 

ಕಣ್ಣುಜ್ಜಿಕೊಂಡು ಮತ್ತೆ ನೋಡಿದೆ.. ಹೌದು ಅನುಮಾನವೇ ಇಲ್ಲ.. ಇದು ಅಣ್ಣಾವ್ರೇ.. 

ನಮಸ್ಕಾರ ಅಣ್ಣಾವ್ರೇ.. ನೀವು ಬಂದಿದ್ದೀರಾ..  ನಂಬೋಕೆ ಆಗ್ತಾ ಇಲ್ಲ.. ಧನ್ಯನಾದೆ.. 

ಶ್ರೀ.. ನೀನು ನನ್ನ ಚಿತ್ರಗಳ ಬಗ್ಗೆ ಬರೀತಾ ಇರೋದು ನನಗೆ ಗೊತ್ತು.. ನಿನ್ನ ಮನಸ್ಸು ಕದಡಿದ ಸರೋವರವಾಗಿದೆ ಅನ್ನೊದು ಗೊತ್ತು.. ಅದಕ್ಕೆ ತಿಳಿ ಮಾಡೋಣ ಅಂತ ಬಂದೆ.. ಹೋಗಿ ಮುಖ ತೊಳೆದು ಬಾ.. ಕಾಫೀ ಕುಡಿಯುತ್ತಾ ನಾ ಹೇಳ್ತೀನಿ.. ನೀ ಬರೀತಾ ಹೋಗು.. !

ಸರಿ ಅಣ್ಣಾವ್ರೇ ಹೀಗೆ ಬಂದೆ.. ಎನ್ನುತ್ತಾ ಅರ್ಧ  ನಿಮಿಷದಲ್ಲಿ ಅಣ್ಣಾವ್ರ ಎದುರಿಗೆ ಲ್ಯಾಪ್ಟಾಪ್ ಹಿಡಿದು ಕೂತೆ.. 

****

ಶ್ರೀ ಇದು  ಅರುಣಾಚಲಂ ಸ್ಟುಡಿಯೋಸ್ ಲಾಂಛನದಲ್ಲಿ.. ಎ ಕೆ ವೇಲನ್ ಅವರು ಕತೆ ಬರೆದು ನಿರ್ಮಿಸಿದ ಚಿತ್ರವೇ ಕಣ್ತೆರೆದು ನೋಡು.. ಇದರಲ್ಲಿ ನನ್ನ ನೆಚ್ಚಿನ  ನಿರ್ದೇಶಕರಲ್ಲಿ ಒಬ್ಬರಾದ ಟಿ ವಿ ಸಿಂಗ್ ಠಾಕೂರ್ ನಿರ್ದೇಶಿಸಿದ ಚಿತ್ರ. ಇದಕ್ಕೆ  ಸಾಹಿತ್ಯ ಮತ್ತು ಸಹ  ನಿರ್ದೇಶನ  ಮಾಡಿದವರು ನನ್ನ ಗೆಳೆಯ ಜಿ ವಿ ಅಯ್ಯರ್.. ಉತ್ತಮ ಹಾಡುಗಳಿರುವ ಈ ಸಾಹಿತ್ಯಕ್ಕೆ ಸಂಗೀತದ ಪೋಷಾಕು ತೊಡಿಸಿದವರು ನನ್ನಿಂದ ಮಹಿಷಾಸುರ ಮರ್ಧಿನಿ, ಓಹಿಲೇಶ್ವರ ಚಿತ್ರದಲ್ಲಿ ಹಾಡಿಸಿರುವ ಜಿ ಕೆ ವೆಂಕಟೇಶ್.. ಕ್ಯಾಮೆರಾ ಹೊಣೆ ಹೊತ್ತವರು ಬಿ ದೊರೈರಾಜ್  ಮತ್ತು ನಿರ್ದೇಶನಕ್ಕೆ ಸಹಾಯಕ ನಿರ್ದೇಶಕರು ಎಸ್ ಕೆ ಭಗವಾನ್.. 

ಶ್ರೀ.. ಈ ಚಿತ್ರದ ಬಗ್ಗೆ ಬರೆಯೋಕೆ ನಿನಗೆ ಗೊಂದಲ ಇರೋದರಿಂದ ನಾ ಹೇಳಿದ ಹಾಗೆ ನೀ ಬರಿ.. 

ಈ ಚಿತ್ರದ ಕತೆಯನ್ನು ಕೇಳಿದಾಗ.. ಉತ್ತಮ ಕತೆ ಎನಿಸಿತು.. ಜೊತೆಯಲ್ಲಿ ಹಾಸ್ಯ ಜಬರ್ದಸ್ತ್ ಆಗಿದೆ ಅನಿಸಿತು.. ಜಿ ವಿ ಅಯ್ಯರ್ ಅವರ ಸಂಭಾಷಣೆ ಸೊಗಸಾಗಿದೆ.. ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ ..  ಗೆಳೆಯ ಜಿ ವಿ ಅಯ್ಯರ್ ಅವರು ಒಂದು  ಪಾತ್ರವಾಗಿ ಈ ಚಿತ್ರದಲ್ಲಿದ್ದಾರೆ.. ಇನ್ನೊಂದು ವಿಶೇಷ ಅಂದರೆ ನನ್ನ ಜೀವದ ಗೆಳೆಯರಾದ ನರಸಿಂಹ ರಾಜು, ಬಾಲಕೃಷ್ಣ, ಜಿ ವಿ ಅಯ್ಯರ್ ಜೊತೆಯಲ್ಲಿ ನಾನು ನಟಿಸಿದ ಚಿತ್ರವಿದು.. 




ನಾಯಕಿಯಾಗಿ ಲೀಲಾವತಿ, ಸಹ ನಾಯಕಿಯಾಗಿ ರಾಜಶ್ರೀ, ಇತರ ಚಿಕ್ಕ ಚಿಕ್ಕ  ಪಾತ್ರಗಳಲ್ಲಿ ಈಶ್ವರಪ್ಪ, ರಮಾದೇವಿ, ಗಣಪತಿ ಭಟ್, ಜಯಶ್ರೀ ,ಮತ್ತಿತರರು ಇದ್ದಾರೆ..

 ನಾ ನಾಯಕನಾಗಿದ್ದರು ಈ ಚಿತ್ರ ಬಾಲಣ್ಣ ಅವರಿಗೆ ಸೇರಿದ್ದು.. ನೀ ಮೊದಲೇ ಈ ಚಿತ್ರದ ಬಗ್ಗೆ ಬಾಲಣ್ಣನನ್ನ ಕೇಂದ್ರವಾಗಿರಿಸಿಕೊಂಡು ಬರೆದಿದ್ದೀಯ ..ಹಾಗಾಗಿ ಮತ್ತೆ ಇದರ ಬಗ್ಗೆ ಹೆಚ್ಚು ಹೇಳೊಲ್ಲ ..   


                                         


                                         

ಆದರೆ ಬಾಲಣ್ಣನ ಪಾತ್ರ ತೆಗೆದುಬಿಟ್ಟರೆ ಈ ಚಿತ್ರದ ಆತ್ಮವೇ ಹೊರತು ಹೋಗುತ್ತೆ ಅದ್ಭುತ ಕಲಾವಿದ ಆತ.. ಕುಂಟುತ್ತಲೇ ಸಮಾಜದ ಕುಂಟನ್ನು  ಎತ್ತಿ ಹಿಡಿಯುತ್ತಾ, ಓರೇ ಕೋರೆಗಳನ್ನೂ ತಿಳಿಸುವ ಈ ಪಾತ್ರ ಬಾಲಣ್ಣ ಅವರ ಜೀವನದ ಅದ್ಭುತ ಚಿತ್ರ ... ರಾಗವಾಗಿ ಮಾತಾಡುವ, ಕಣ್ಣಿನಲ್ಲಿಯೇ ಅನೇಕ ಭಾವವನ್ನು ಹೊರಸೂಸುವ ಪಾತ್ರದಲ್ಲಿ ಮಿಂಚಿದ್ದಾರೆ.. ಕೆಲವು ಹಾಸ್ಯ ಸನ್ನಿವೇಶಗಳ ತುಣುಕನ್ನು ಹಾಕಿಬಿಡು .. ಈ ಲೇಖನಕ್ಕೆ ಹೊಳಪು ಬರುತ್ತದೆ.. ಎಷ್ಟೋ ದೃಶ್ಯಗಳಲ್ಲಿ ಅವರ ಜೊತೆ ನಟಿಸುವಾಗ ಅವರ ಸಂಭಾಷಣೆ ಕೇಳಿ ನನಗೆ ತಡೆಯಲಾಗದಷ್ಟು ನಗು ಬರುತಿತ್ತು..







"ಆ.. ನನಗೆ ಇರೋಕೆ ಜಾಗವಿಲ್ಲ .. ಈ ಕತ್ತಲು ಮನೆಯಲ್ಲಿ ಅವನ್ನು ಕೂಡಿ ಹಾಕೋದು ಬೇಡ ಅಂತ  ದೇವರನ್ನ ಬಯಲಿಗೆ ಬಿಟ್ಟಿದೀನಿ.. "

"ಯಾರಪ್ಪ  ಬೆಣ್ಣೆ ಮಸಾಲೆ ತಿನ್ನೋರು"

"ಊರಲ್ಲೆಲ್ಲ ಬಟ್ಟೆ ಅಂಗಡಿ .. ಬೆತ್ತಲೆ ತಿರುಗೋರನ್ನು ಕೇಳೋರೇ ಇಲ್ಲ .. "

"ಟೋಪಿ ಹಾಕೋಕೆ ಒಬ್ಬಳು, ಬಾಗಿಲ ಸಂಧಿಯಲ್ಲಿ ಒಬ್ಬ, ಕುರುಡನಾಗಿ ಒಬ್ಬ.. ಯಾಕ್ರೋ ಯಾಕ್ರೋ.. ಬನ್ರೋ ನನ್ನ ಜೊತೆ ಉಗುರು ಮಣ್ಣಾಗದೆ ಇರೋ ತರಹ ಬದುಕೋಕೆ ಹೇಳಿಕೊಡ್ತೀನಿ"

"ಆ ನಿನ್ನ ಹೆಣ ಸ್ಮಶಾನಕ್ಕೆ ದಾನ"

ಈ ರೀತಿಯ ಸಾಮಾನ್ಯ ಮಾತುಗಳನ್ನು ಅದ್ಭುತವಾಗಿ ಹೇಳಿ ಪರಕಾಯ ಪ್ರವೇಶ ಮಾಡುವ ಪರಿ ಅನನ್ಯ ಶ್ರೀ.. 

ಹಾಡುಗಳು ಎಲ್ಲವೂ ಸೊಗಸಾಗಿದೆ.. ಒಂದಕ್ಕಿಂತ ಒಂದು ಚೆನ್ನಾ ..

ಇಷ್ಟು ಶ್ರೀ.. ನಾ ಹೇಳಬೇಕಿದ್ದು.. ಬರೆದುಕೊಂಡೆಯ.. ?

ಅಣ್ಣಾವ್ರೇ ನಿಮ್ಮ ಪಾತ್ರದ ಬಗ್ಗೆ ಏನು ಹೇಳಲೇ ಇಲ್ಲ.. ?

ಏನ್ರಪ್ಪ ಯಾವ ಪಾತ್ರದ ಬಗ್ಗೆ ಬೇಕು.. 

ರಾಗವಾಗಿ ಬಂದ ಮಾತು ಕೇಳಿಯೇ  ಗೊತ್ತಾಯ್ತು.. ಇದು ಬಾಲಣ್ಣ ಅಂತ.. 

ನಮಸ್ಕಾರ ಬಾಲಣ್ಣ.. ನಾ ಕೈಮುಗಿದದ್ದನು ನೋಡಿ.. 

ಶ್ರೀ ನಮಸ್ಕಾರ.. . ರಾಜ್  ಕುಮಾರ್ ಪಾತ್ರದ ಬಗ್ಗೆ ನಾ ಹೇಳ್ತೀನಿ ಬರೆದುಕೊ.. "

ಸರಿ ಬಾಲಣ್ಣ

ರಾಜ್ ಕುಮಾರ್ ಈ ಚಿತ್ರದಲ್ಲಿ ಸಂಯಮಯುತ ಪಾತ್ರ.. ನನ್ನ  ಕೈಗೆ ಸಿಕ್ಕಿ ನಾ ಅವರನ್ನು ಅವರಿಗೆ ಗೊತ್ತಿಲ್ಲದಂತೆ ಸುಲಿಗೆ ಮಾಡುವಾಗ ಅವರ ಮುಗ್ಧ ಅಭಿನಯ ಇಷ್ಟವಾಗುತ್ತದೆ.

ಕಣ್ಣಿಲ್ಲದೆ ನದಿದಂಡೆಯಲ್ಲಿ ಹಾಡುವ ದೃಶ್ಯ ಸೊಗಸಾಗಿದೆ.. ಕಣ್ಣು ಬಂದ ಮೇಲೆ, ನನ್ನ ಹತ್ತಿರ ಮತ್ತೆ ಸಿಕ್ಕಿ ಹಾಕಿಕೊಂಡು ತಂಗಿಗಾಗಿ ತಮ್ಮ ವಿದ್ಯೆಯನ್ನು ಬೇರೆಯವರು ಅರ್ಥಾತ್ ನಾನೇ ದುರುಪಯೋಗ ಮಾಡಿಕೊಳ್ಳುತ್ತಿದ್ದೀನಿ ಎಂಬ ಅರಿವಿದ್ದರೂ ಸಂಯಮದಿಂದ ಅಭಿನಯ ನೀಡುವ ಶೈಲಿ ಇಷ್ಟವಾಗುತ್ತದೆ..

ರಾಜ್ ಕುಮಾರ್ ಅವರ ಪಾತ್ರ ಇಲ್ಲದ್ದಿದ್ದರೆ ನನ್ನ ಪಾತ್ರ ಸೊರಗಿಬಿಡುತ್ತಿತ್ತು ಶ್ರೀ.. ಅವರು ನಾಯಕನಾಗಿದ್ದರೂ ಖಳ ಪಾತ್ರದಲ್ಲಿ ನನ್ನ ಪಾತ್ರಕ್ಕೆ ಉತ್ತಮ ಅವಕಾಶ ಇದೆ ಎಂದು ಗೊತ್ತಿದ್ದರೂ, ಒಂದು ಚೂರು ಬೇಸರವಿಲ್ಲದೆ ಅಭಿನಯಿಸಿದ್ದಾರೆ.. ಇದು ಕಲಾವಿದನ ಶ್ರದ್ಧೆ ತೋರಿಸುತ್ತದೆ.. ಮುಂದೆ ದೊಡ್ಡ ಕಲಾವಿದನಾಗುವ ಹಾದಿಯಲ್ಲಿದ್ದಾರೆ..

ಶ್ರೀ.. ಅವರ ಚಿತ್ರಗಳ ಬಗ್ಗೆ ಬರೆಯುತ್ತಾ ಇದ್ದೀಯ ಶುಭವಾಗಲಿ ನಿನಗೆ.. ಅಲ್ಲ ಕಣಪ್ಪ ನನ್ನ ಚಿತ್ರಗಳ ಬಗ್ಗೆ ಬರೆಯೋಕೆ ಶುರು ಮಾಡಿ  ನಿಲ್ಲಿಸಿದ್ದೀಯಾ.. ಮುಂದುವರೆಸಪ್ಪ.. ಶ್ರೀ ಎಂದು ಕಣ್ಣು ಹೊಡೆದರು.. 
ಭಗವಾನ್ -- ದೊರೈ ಭಗವಾನ್ ಜೋಡಿಯಲ್ಲಿ ಒಬ್ಬರು 

ಸಂಗೀತ ಮಾಂತ್ರಿಕ ಜಿ ಕೆ ವೆಂಕಟೇಶ್ 


ಬಾಲಣ್ಣ ತುಂಬಾ ಸಂತೋಷವಾಯಿತು.. ನೀವಿಬ್ಬರು ಬಂದು ನನ್ನ ಗೊಂದಲ  ದೂರ ಮಾಡಿದ್ದೆ ಅಲ್ಲದೆ.. ಚಿತ್ರದಲ್ಲಿ ನಿಮ್ಮ ಪಾತ್ರಗಳ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದೀರಾ .. ಈ ಚಿತ್ರದಲ್ಲಿ ಜಿ ಕೆ ವೆಂಕಟೇಶ್ ಅವರನ್ನು ತೆರೆಯ ಮೇಲೆ ನೋಡುವುದೇ ಒಂದು ಖುಷಿ.. ಜೊತೆಯಲ್ಲಿ ಭಗವಾನ್ ಅವರು ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.. ಬಾಲಣ್ಣ ನಿಮ್ಮ ಚಿತ್ರಗಳ ಬಗ್ಗೆ ಮತ್ತೆ ಶುರು ಮಾಡ್ತೀನಿ.. 

ಒಮ್ಮೆ ಕಣ್ಣುಜ್ಜಿಕೊಂಡೆ.. ಅಣ್ಣಾವ್ರು, ಬಾಲಣ್ಣ ಅವರು ನನ್ನ ಮನೆಯಲ್ಲಿ ತೂಗು ಹಾಕಿದ್ದ ಚಿತ್ರದ ಒಳಗೆ ಹೋಗುತ್ತಾ ಶ್ರೀ ಮುಂದಿನ ಚಿತ್ರದಲ್ಲಿ ಸಿಗ್ತೀವಿ ಅಂತ ಅದೃಶ್ಯರಾದರು.. 

ಮತ್ತೊಂದು ಚಿತ್ರದ ಬರವಣಿಗೆಯಲ್ಲಿ ಸಿಗೋಣವೇ.. !

1 comment:

  1. Point of view tumba unique.. Endhinanthe chalana chitra adrallu raj avara chitrada bagge nimm baravanige yaavaaglu super se uper... Keep it coming... 😊😊😊

    ReplyDelete