Monday, April 20, 2020

ಯಶಸ್ಸಿನ ಗೋಪುರ ಏರಿ ಆದ್ರೆ ಶ್ರಮದಿಂದ ಗಾಳಿಯಿಂದಲ್ಲ ಎನ್ನುವ ಗಾಳಿ ಗೋಪುರ (1962) (ಅಣ್ಣಾವ್ರ ಚಿತ್ರ ೨೬ / ೨೦೭)

ರಾಜ್ ಕುಮಾರ್ ಅವರ ಚಿತ್ರ ಯಾತ್ರೆಯಲ್ಲಿ ಇದೊಂದು ಪರಿಪೂರ್ಣ ಸಾಮಾಜಿಕ ಚಿತ್ರ.. ಹಾಡುಗಳಿವೆ.. ಮುದಕೊಡುವ  ಸಂಭಾಷಣೆ ಇದೆ.. ಹೊಡೆದಾಟವಿದೆ.. ಅಚ್ಚುಕಟ್ಟಾದ ಅಭಿನಯವಿದೆ.. ಅದ್ಭುತ ನಿರ್ದೇಶನ .. ಸಾಮಾಜಿಕ ಕಳಕಳಿ ಇರುವ ಕಥೆ.. 



ರಾಜಕುಮಾರ್ ಅಭಿನಯ ಈ ಚಿತ್ರದಲ್ಲಿ ಅದ್ಭುತ .. ಹಿಂದಿನ ಯಾವ ಚಿತ್ರದ ನೆರಳೂ ಅವರ  ಅಭಿನಯದಲ್ಲಿ ಇಲ್ಲ.. ಒಬ್ಬ ಹಳ್ಳಿ ಮುಗ್ಧ ಹೇಗೆ ಇನ್ನೊಬ್ಬರ ಆಸೆ ದುರಾಸೆಗಳ ಸಮರದಲ್ಲಿ ಸಿಕ್ಕಿ ನಲುಗುತ್ತಾನೆ.. ಅದನ್ನು ಹೇಗೆ ವ್ಯಕ್ತ ಪಡಿಸಬೇಕು ಎನ್ನುವುದನ್ನು ಸರಳವಾಗಿ ತೋರಿಸಿದ್ದಾರೆ.. 


ಹಳ್ಳಿ ಹೈದನ ಜುಟ್ಟಿನಲ್ಲಿ ಮುದ್ದಾಗಿ ಕಾಣುವ ರಾಜ್ .. ಅವರ ಸಾಕಿದ ಅಪ್ಪ ಅಮ್ಮನ ಜೊತೆ ಮಾತಾಡುವಾಗ ಕಾಣುವ ಆಪ್ತತೆ.. ತನ್ನನ್ನು ಪ್ರೀತಿಸುವ ಹುಡುಗಿಯ ಜೊತೆ ಮಾತಾಡುವಾಗ ಅಷ್ಟೇ ಪ್ರೀತಿಯಿಂದ ಮಾತಾಡುವ ಪಾತ್ರ ಇಷ್ಟವಾಗುತ್ತೆ.. 


ತಮ್ಮಯ್ಯ ನಂದು ಒಂದು ಫೋಟೋ ತೆಗೆಯೋ.. ಅನ್ನುತ್ತಾ ಅಂಗಿಯನ್ನು ಸರಿ ಮಾಡಿಕೊಳ್ಳುವಾಗಿನ ಮುಗ್ಧತೆ.. ತನ್ನಮ್ಮನಿಗೆ ಬಳೆ ತಂದು.. ತನ್ನ ಪ್ರಿಯ ಗೆಳತಿಗೂ ಬಳೆ ತೊಡಿಸುವಾಗಿನ ಪ್ರೀತಿಯ ಅಭಿನಯ.. ಅಪ್ಪ ಬಂದಾಗ ಲಾಡು ತಿನ್ನಿಸುವುದು, ತಾನು ಕ್ರಾಪ್ ಮಾಡಿಸಿಕೊಂಡಿದ್ದನ್ನು ವ್ಯಕ್ತ ಪಡಿಸುವ ಅಭಿನಯ..ರಾಜ್ ಕುಮಾರ್  ಆಪ್ತರಾಗುತ್ತಾರೆ.. 

ತಾನು ಸಾಕಿದ ಮಗ ಎಂಬ ಸತ್ಯ ಗೊತ್ತಾಗಿ.. ಮನೆಯಿಂದ ಹೊರಗೆ ಹಾಕಿದಾಗ.. ಇದಕ್ಕೆ ಒಪ್ಪದ ಅಮ್ಮನನ್ನು ತನ್ನ ಅಪ್ಪ ಹೊಡೆಯುವಾಗ.. ಅಪ್ಪ ಅವ್ವನನ್ನು ಹೊಡೆಯಬೇಡ.. ನಾ ಹೋಗ್ತೀನಿ ಹೋಗ್ತೀನಿ ಅಂತ ಹೊರಗೆ ಹೋಗಿ.. ಮತ್ತೆ ಅಪ್ಪ ಒಂದೇ ಒಂದು ಬಾರಿ ಅಮ್ಮನ ಕೈಯಿಂದ ಕಡೆ ತುತ್ತು ತಿನ್ನೋಕೆ ಅವಕಾಶ ಕೊಡು ಅಂತ ಬೇಡಿ ಕೊಳ್ಳುವ ದೃಶ್ಯ.. ಅದ್ಭುತ.. 

ಪಟ್ಟಣಕ್ಕೆ ಬರುವ ರಾಜ್ .. ಅಲ್ಲಿನ ಪರಿಸರಕ್ಕೆ ತಕ್ಕ ಭಾಷೆ ಉಡುಪು .. ಇಷ್ಟವಾಗುತ್ತಾರೆ.. 

ಇಡೀ ಚಿತ್ರದುದ್ದಕ್ಕೂ ರಾಜ್ ಕುಮಾರ್ ಇದ್ದರೂ ಜೊತೆ ಜೊತೆಯಲ್ಲಿ ಇತರ ಪಾತ್ರಗಳಿಗೂ ಸಮಾನ ಅವಕಾಶ ಇರೋದು ವಿಶೇಷ.. 

ಅಕ್ಷರಶಃ ಈ ಚಿತ್ರ ಚಿತ್ರರಂಗದ ಭೀಷ್ಮ ನಾಗೇಂದ್ರರಾಯರಿಗೆ ಸಲ್ಲುತ್ತೆ.. ದುರಾಸೆ ಗಾಳಿ ಗೋಪುರ ಕಟ್ಟುವ ಕುಟಿಲ ಮನಸ್ಸಿನ ಗೋವಿಂದಯ್ಯನ ಪಾತ್ರವಾಗಿದ್ದಾರೆ.. ತನ್ನ ಗೆಳೆಯ ಮರಣಶಯ್ಯೆಯಲ್ಲಿದ್ದರೂ ಆಮೇಲೆ ನೋಡಿದರಾಯ್ತು ಎಂದು. ನಂತರ  ಮಗುವಿನ ಜೊತೆ ಹತ್ತು ಸಾವಿರ ದುಡ್ಡನ್ನು ಕೊಟ್ಟಾಗ.. ದುಡ್ಡಿನ ಕಡೆ ಗಮನ ಹರಿಸಿ.. ಅಸ್ತಿ ಬೆಳೆಸಿ.. ಮಗುವಿಗೆ ಓದು ಬರಹ ಕಲಿಸದೇ .. ತಾನು ಹೆತ್ತ ಮಗುವಿಗೆ ಆ ದುಡ್ಡನ್ನು ವ್ಯಯಿಸೋದು... ತಾ ಹೆತ್ತ ಮಗನ ಭವಿಷ್ಯಕ್ಕಾಗಿ ಅಡ್ಡ ದಾರಿ ಹಿಡಿಯುವುದು .... ತನ್ನಂತೆ ಮಗನೂ ಮೋಸ ಮಾಡಿ.. ಅಪ್ಪನನ್ನೇ ಮನೆಯಿಂದ ಹೊರಗೆ ಹಾಕಿದಾಗ ತನ್ನ ತಪ್ಪು ಅರಿವಾಗಿ ಪರಿತಾಪ ಪಡುವ ಪಾತ್ರದಲ್ಲಿ ವಿಜೃಂಭಿಸಿದ್ದಾರೆ.. 


ತಾಯಿ ಮಮತೆ ಅಂದ್ರೆ ಹೀಗಿರಬೇಕು  ಎನ್ನುವಂತೆ ಪಾತ್ರವಾಗಿದ್ದಾರೆ ಎಂ ವಿ ರಾಜಮ್ಮ.. ತಾನು ಸಾಕಿದ ಮಗನನ್ನು  ತನ್ನ ಪತಿರಾಯ ಮನೆಯಿಂದ ಹೊರಗೆ ಹಾಕಿದಾಗ ಅವರ ಅಭಿನಯ ಸೊಗಸಾಗಿದೆ.. ಮಗನಿಗೆ ಒಂದು ತುತ್ತು ತಿನ್ನಿಸಲು ಒಪ್ಪಿಗೆ ಕೊಟ್ಟಾಗ ಅವರ ಅಭಿನಯ ನೋಡಿಯೇ
ನಲಿಯಬೇಕು .. ತನ್ನ ಗಂಡನ ದುರಾಸೆಯ ಪ್ರತಿ ಹಂತದಲ್ಲೂ ಎಚ್ಚರಿಸುವ ಮಡದಿಯಾಗಿ ಹದವಾದ ಅಭಿನಯ.. 


ಸರಳ ಕತೆಯಿದು.. ರಂಗಣ್ಣ ಎನ್ನುವ ಶ್ರೀಮಂತನಿಗೆ ಕ್ಷಯ  ಬಂದು ಬದುಕುವ ಅವಕಾಶ ಕಡಿಮೆ ಎಂದು ಗೊತ್ತಾದಾಗ ಅವನ ಸ್ನೇಹಿತ ಗೋವಿಂದಯ್ಯನಿಗೆ ಹಣ ಮತ್ತು ತನ್ನ ಮಗುವನ್ನು ಕೊಟ್ಟು  ಜೋಪಾನ ಮಾಡಿಕೊಳ್ಳಲು ಹೇಳುತ್ತಾನೆ .. ಮಗುವಿಲ್ಲದ ಗೋವಿಂದಯ್ಯ, ಆ ಮಗುವಿಗೆ ವಿದ್ಯೆ ಕಲಿಸದೇ.. ಆ ದುಡ್ಡನ್ನು ಆಸ್ತಿ ಮಾಡಿಕೊಳ್ಳಲು ಬಳಸಿಕೊಂಡು.. ಆ ಊರನ್ನೇ ಬಿಡುತ್ತಾನೆ .. ಬೇರೆ ಊರಿಗೆ ಬಂದು ಜಮೀನು ಮನೆ ಮಾಡಿಕೊಂಡು ತನ್ನ ಸ್ವಂತ ಮಗನಿಗೆ ವಿದ್ಯೆ ಕಲಿಯಲು ಪೇಟೆಗೆ ಕಳಿಸುತ್ತಾನೆ.. ಅವನ ಸ್ನೇಹಿತನಿಗೆ ಮರುಳು ಮಾಡಿ, ಮಗನಿಗೆ ವಿದ್ಯೆ ಕಲಿಸಲು ಅವನಿಂದಲೇ ಹಣ ಕಿತ್ತು, ತನ್ನ ಮಗನನ್ನು ಸ್ನೇಹಿತನ ಮಗಳಿಗೆ ಮದುವೆ ಮಾಡಿಸುವುದಾಗಿ ಸುಳ್ಳು ಸುಳ್ಳು ಆಶ್ವಾಸನೆ ಕೊಡುತ್ತಾನೆ.. 

ಪೇಟೆಯಲ್ಲಿ ಓದದೇ  ಕೆಟ್ಟ ಚಾಳಿಗೆ ಬೀಳುವ ಮಗ.. ಅಲ್ಲಿನ ಸಿರಿವಂತನ ಮಗಳಿಗೆ ಜೋಡಿಯಾಗುತ್ತಾನೆ.. ಮತ್ತು ತಾನು ಬಾರಿ ಶ್ರೀಮಂತನ ಮಗ ಎಂದು ನಂಬಿಸಿ ಮದುವೆಗೆ ತಯಾರಾಗುತ್ತಾನೆ.. ಇದನ್ನು ತಿಳಿದ ಗೋವಿಂದಯ್ಯ ಸಲೀಸಾಗಿ ಲಕ್ಷಾಂತರ ಆಸ್ತಿ ಬರುವ  ಆಸೆಗೆ ಬಿದ್ದು, ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಮುರಿಯುತ್ತಾನೆ.. ಜೊತೆಯಲ್ಲಿ ಸ್ನೇಹಿತನ ಮಗಳಿಗೆ ಪುಸಲಾಯಿಸಿ, ಮನೆ ಬಿಟ್ಟು ತನ್ನ ಸಾಕು ಮಗನನ್ನ ಹುಡುಕುವಂತೆ ಪೇಟೆಗೆ ಕಳಿಸುತ್ತಾನೆ.. 

ಇತ್ತ ತನ್ನ ಮಗನಿಗೆ ಮದುವೆಯಾಗುತ್ತೆ.. ಆದರೆ ನಿಜ ತಿಳಿದಾಗ ಗೋವಿಂದಯ್ಯನ ಬಾಳು ಬೀದಿಗೆ ಬರುತ್ತದೆ.. 

ಇಲ್ಲಿಂದ ಕತೆ  ತಿರುವು ತೆಗೆದುಕೊಂಡು ಎಲ್ಲರಿಗೂ ಬುದ್ದಿ ಬಂದು ಚಿತ್ರ ಸುಖಾಂತ್ಯವಾಗುತ್ತದೆ.. 

ರಂಗಣ್ಣನಾಗಿ ಅಶ್ವಥ್ ಚಿತ್ರದ ಆರಂಭದಲ್ಲಿ ಮತ್ತು ಉತ್ತರಾರ್ಧದಲ್ಲಿ ಬರುತ್ತಾರೆ.. ಕಳೆದುಕೊಂಡ ಮಗನನ್ನು ಹುಡುಕುತ್ತಲೇ ಇರುವ ಪಾತ್ರ.. ಅಸ್ತಿ ಇದ್ದರೂ ನೆಮ್ಮದಿ ಇಲ್ಲದೆ ಪರಿತಪಿಸುವ ಪಾತ್ರದಲ್ಲಿ ಅಶ್ವಥ್ ಅವರದ್ದು ಎಂದಿನಂತೆ ನೈಜ ಅಭಿನಯ.. 


ಬಿತ್ತಿದ್ದೆ ಬೆಳೆಯೋದು ಎನ್ನುವ ಗಾದೆಯಂತೆ .. ದುರಾಸೆಯ ಅಪ್ಪನ ಮಗನಾಗಿ ಮಗನಾಗಿ ಕಲ್ಯಾಣ್ ಕುಮಾರ್ ಮುದ್ದಾಗಿ ಕಾಣುತ್ತಾರೆ.. ಜೊತೆಯಲ್ಲಿ ಕುಟಿಲ ಮಾತುಗಳು, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಪಾತ್ರದಲ್ಲಿ ಮಿಂಚುತ್ತಾರೆ.. 


ರಮಾದೇವಿ ಅವರ ಅಬ್ಬರದ ಧ್ವನಿಗೆ ಅಷ್ಟೇ ಮಾರ್ಮಿಕವಾಗಿ   ಪಂಚ್ ಕೊಡುವ ಬಾಲಕೃಷ್ಣ ಕಲ್ಯಾಣ್ ಕುಮಾರ್ ಅವರನ್ನು ದಂಡಿಸುವ ಪಾತ್ರದಲ್ಲಿದ್ದಾರೆ.. ಬಾಲಕೃಷ್ಣ ಅವರ ಪಂಚಿಂಗ್ ಸಂಭಾಷಣೆ ಚಿತ್ರದುದ್ದಕ್ಕೂ ಇದೆ.. ಅವರ ಹಾಸ್ಯ ಪ್ರಜ್ಞೆ ಅದ್ಭುತ.. 




ಕಲ್ಯಾಣ್ ಅವರ ಪೋಲಿ ಸ್ನೇಹಿತನಾಗಿ ನರಸಿಂಹರಾಜ ಅಭಿನಯ ನಗೆ ತರಿಸುತ್ತದೆ.. ನಂತರ ಒಳ್ಳೆಯವನಾಗಿ ತನ್ನ ಗೆಳತೀ ಎಂ ಎನ್ ಲಕ್ಷ್ಮೀದೇವಿಯವರ ಜೊತೆಯಲ್ಲಿ ಒಂದಷ್ಟು ಹಾಸ್ಯ ದೃಶ್ಯಗಳಲ್ಲಿ ಕಂಡು, ಚಿತ್ರದ ಅಂತ್ಯಕ್ಕೆ ಎಲ್ಲವನ್ನು ಸರಿ ಪಡಿಸುವಲ್ಲಿ ಸಹಾಯ ಮಾಡುವ ಪಾತ್ರದಲ್ಲಿ ಸೊಗಸಾದ ಅಭಿನಯ.. 


ಎಂ ಎನ್ ಲಕ್ಷ್ಮೀದೇವಿಯವರ ಹಾಸ್ಯಭರಿತ ಅಭಿನಯ.. ಹೋಟೆಲಿನಲ್ಲಿ ಬರುವ ತರಲೆಗಳಿಗೆ ಗಂಡು ವೇಷದಲ್ಲಿ ಕಾಡುವ ಪಾತ್ರಧಾರಿಯಾಗಿ ಇಷ್ಟವಾಗುತ್ತಾರೆ.. 


ನಾಯಕಿ ಲೀಲಾವತಿ ಸುಂದರವಾಗಿ ಕಾಣುತ್ತಾರೆ.. ಅಭಿನಯ ಚಿತ್ರಕಥೆಗೆ ಬೇಕಾದಂತೆ ಅಚ್ಚುಕಟ್ಟಾಗಿದೆ.. 

ಕಲ್ಯಾಣ್ ಕುಮಾರ್ ಅವರಿಗೆ ಜೋಡಿಯಾಗಿ ಚಿಂದೋಡಿ ಲೀಲಾ ಪುಟ್ಟ ಪಾತ್ರದಲ್ಲಿದ್ದಾರೆ.. 


ಡಿಕ್ಕಿ ಮಾಧವರಾವ್ ನೊಂದ ಹೆಣ್ಣಿನ ತಂದೆಯಾಗಿ, ಗೋವಿಂದಯ್ಯನಿಂದ ಮೋಸ ಹೋಗುವ ಪಾತ್ರದಲ್ಲಿ ಇದ್ದಾರೆ. 


ಎಲ್ಲಾ ಘಟಾನುಘಟಿಗಳನ್ನು ಜೋಡಿಸಿಕೊಂಡು ಚಿತ್ರದ ಕ್ಯಾಪ್ಟನ್ ಆಗಿರುವವರು ಬಿ ಆರ್ ಪಂತುಲು. ಈ ಚಿತ್ರವನ್ನು ಪದ್ಮಿನಿ ಪಿಕ್ಟರ್ಸ್ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶಿಸಿದ್ದಾರೆ. 

ಎಂ ಎಸ್ ಸೋಲಮಲೈ ಅವರ ಮೂಲಕತೆಯನ್ನು ದಾದಾಮ ರಾಸಿ ಮತ್ತು ಪದ್ಮಿನಿ ಪಿಕ್ಟರ್ಸ್ ಸಾಹಿತ್ಯ ಶಾಖೆ ಸಹಯೋಗದಲ್ಲಿ ಚಿತ್ರಕತೆಯಾಗಿಸಿದ್ದಾರೆ. ಜಿ ವಿ ಅಯ್ಯರ್ ಅವರ ಚುರುಕಾದ ಸಂಭಾಷಣೆಯಿದೆ. ಪದ್ಮಿನಿ ಪಿಕ್ಟರ್ಸ್ ಆಸ್ಥಾನ ಸಂಗೀತ ವಿದ್ವಾಂಸರಾದ ಟಿ ಜಿ ಲಿಂಗಪ್ಪ ಅವರ ಸಂಗೀತವಿದೆ. ಹಾಡುಗಳನ್ನು ಜಿ ವಿ ಅಯ್ಯರ್ ಮತ್ತು ವಿಜಯನಾರಸಿಂಹ ರಚಿಸಿದ್ದಾರೆ.. ಪುರಂದರ ದಾಸರ "ಯಾರಿಗೆ ಯಾರುಂಟು ಎರವಿನ ಸಂಸಾರ" ಗೀತೆಯನ್ನು ಉಪಯೋಗಿಸಿಕೊಂಡಿದ್ದಾರೆ.. 

ಹಾಡುಗಳು ಇಷ್ಟವಾಗುತ್ತವೆ.. ಹಳ್ಳಿಸೊಗಡಿನ ಸಾಹಿತ್ಯ, ಸಂಗೀತ ಸೊಗಸಾಗಿದೆ... ಗಾಯಕರ ದಂಡೇ ಇದೆ .. ಪಿ ಬಿ ಶ್ರೀನಿವಾಸ್, ಘಂಟಸಾಲ, ಪಿ  ನಾಗೇಶ್ವರ ರಾವ್, ಎಂ ಸತ್ಯ, ರಾಘವುಲು, ಪಿ ಸುಶೀಲ, ಜಾನಕೀ, ರೇಣುಕಾ,ರಾಣಿ. 

ಡಬ್ಲ್ಯೂ ಆರ್ ಸುಬ್ಬರಾವ್ ಅವರ ಛಾಯಾಗ್ರಹವಿರುವ ಈ ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ 
ನಿರ್ದೇಶಕರಿಗೆ ಸಹಾಯಕರಾಗಿದ್ದಾರೆ. 

ಈ ಚಿತ್ರದ ಇನ್ನೊಂದು ವಿಶೇಷತೆ ಅಂದರೆ.. ಆ ಕಾಲದಲ್ಲಿ ಕುಮಾರತ್ರಯರೆಂದೇ ಹೆಸರಾಗಿದ್ದ ರಾಜ್ ಕುಮಾರ್, ಉದಯ ಕುಮಾರ್, ಮತ್ತು ಕಲ್ಯಾಣ್ ಕುಮಾರ್ ಒಂದೇ ಚಿತ್ರದಲ್ಲಿರುವುದು..ಉದಯ್ ಕುಮಾರ್ ಅವರದ್ದು ಒಂದೇ ದೃಶ್ಯದ ಪಾತ್ರ  ಅವರ ಕಂಚಿನ ಕಂಠ ಗಮನ ಸೆಳೆಯುತ್ತದೆ. 


ಇದೆ ಮೊದಲು ಮೂರು ಕುಮಾರರು ಒಂದೇ ಚಿತ್ರದಲ್ಲಿ ಅಭಿನಯಿಸಿರುವುದು.. ಒಟ್ಟಿಗೆ ಒಂದೇ ದೃಶ್ಯದಲ್ಲಿಲ್ಲದಿದ್ದರೂ ಮೂವರು ಒಟ್ಟಿಗೆ ಅಭಿನಯಿಸಿದ್ದು .. ನಂತರ ಭೂದಾನ ಎನ್ನುವ ಚಿತ್ರದಲ್ಲಿ ಮತ್ತೆ ಒಟ್ಟಿಗೆ ಅಭಿನಯಿಸಿದ್ದಾರೆ. 

ಇನ್ನೊಂದು ಚಿತ್ರದ ಜೊತೆಗೆ ಸಿಗೋಣ!

No comments:

Post a Comment