Friday, April 17, 2020

ಕಟ್ಟುಪಾಡುಗಳಿಂದ ಹೊರಬನ್ನಿ ಎನ್ನುವ ಚೇತನ ಭಕ್ತ ಚೇತ (1961) (ಅಣ್ಣಾವ್ರ ಚಿತ್ರ ೨೪ / ೨೦೭)

ಆಟಗಾರ ಅನುಭವ ಹೊಂದುತ್ತಾ ಹೋದ ಹಾಗೆ ಎಂಥಹ ಕಠಿಣ ಸವಾಲುಗಳೇ ಆಗಲಿ ಆರಾಮಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳುತ್ತಾನೆ..


ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತಾ ಬಂದಿರುವ ನನಗೆ ಈ ಅಂಶ ನಿಚ್ಚಳವಾಗಿ ಕಾಣಿಸುತ್ತದೆ. ಒಂದೊಂದು ಚಿತ್ರದಲ್ಲಿ ಒಂದೊಂದು ರೀತಿಯ ಪಾತ್ರ ಪೋಷಣೆ.. ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಾ ಸಾಗಿರುವ ಅವರ ಅಭಿನಯದ ಹಾದಿ ಖುಷಿಯಾಗುತ್ತದೆ.


ಶಂಕರ್ ಡಿ ಸಿಂಗ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಬಹುಶಃ ಸಿನಿಮಾದ ಪ್ರತಿಯೊಂದು ದೃಶ್ಯದಲ್ಲಿಯೂ ಇದ್ದಾರೆ.  ಹದಭರಿತ ಅಭಿನಯ, ಚಪ್ಪಲಿ ಹೊಲೆಯುವ ಚಮ್ಮಾರನ ಪಾತ್ರದಲ್ಲಿ ಅವರು ತೋರುವ ತನ್ಮಯತೆ, ಚಪ್ಪಲಿ ಹೊಲೆಯುವಾಗ ಮೊಗದಲ್ಲಿ ಇರಬೇಕಾದ ಒಂದು ರೀತಿಯ ನಿರ್ವಿಕಾರ ಭಾವ, ಅವರ ಆಂಗೀಕ ಅಭಿನಯ... ನಿಜಕ್ಕೂ ಸೋಜಿಗವೆನಿಸುತ್ತದೆ.  ಒಬ್ಬ ನಟ ಅಷ್ಟು ತನ್ಮಯತೆಯಿಂದ ಆ ಪಾತ್ರವಾಗಲು ಸಾಧ್ಯವೇ ಎಂದು. ಪರಿಪೂರ್ಣತೆ ಎನ್ನುವುದು ಕಲಾವಿದನಿಗೆ ಸಿಕ್ಕ ಅವಕಾಶವನ್ನು  ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಸಿಗಬಹುದಾದ ಒಂದು ರತ್ನ.

ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದು ಇರಲಿ ಎನ್ನುವ ಪಾಠ ಈ ಚಿತ್ರದಿಂದ ಕಲಿಯಬಹುದು.

ಎಂ ಬಿ ಗಣೇಶ್ ಸಿಂಗ್ ನಿರ್ದೇಶನದಲ್ಲಿ ಸತ್ಯಂ ಅವರ  ಸಂಗೀತ ತುಂಬಿಕೊಂಡು ಬಂದಿರುವ ಈ ಚಿತ್ರವನ್ನು ಕೆ ಎಸ್ ಗೋವಿಂದಸ್ವಾಮಿ ಚಿತ್ರೀಕರಿಸಿದ್ದಾರೆ.  ಹಾಡುಗಳನ್ನು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಬಿ ಕೆ  ಸುಮಿತ್ರಾ ಮತ್ತು ಎಲ್ ಆರ್ ಈಶ್ವರಿ ಹಾಡಿದ್ದಾರೆ.

ಬಡವ ಚೇತ ಚಪ್ಪಲಿ ಹೊಲೆದು ಮಾರಿ ಅದರಿಂದ ಜೀವನ ಸಾಗಿಸುವ ಒಬ್ಬ ಜೀವಿ. ತನ್ನ ಸಂಸಾರದ ಅಗತ್ಯಗಳನ್ನು ಪೂರೈಸಲು ಹೆಣಗಾಡುವ ಪಾತ್ರ. ಮನೆಯಲ್ಲಿ ಬಡತನ ತಾಂಡವ ನೃತ್ಯ ಮಾಡುತ್ತಿರುವ ಸಂಸಾರವನ್ನು ಎತ್ತಿ ಹಿಡಿಯಲು ಒದ್ದಾಡುವ ಗೃಹಿಣಿ ಪಾತ್ರದಲ್ಲಿ ನಿರ್ಮಾಪಕ ಶಂಕರ್ ಸಿಂಗ್ ಅವರ ಮಡದಿ ಪ್ರತಿಮಾ ದೇವಿ ಅಭಿನಯಿಸಿದ್ದಾರೆ. ಆ ಪಾತ್ರದಲ್ಲಿ ತೊಳದಾಡುವ ಅಭಿನಯ,  ಚೇತನಿಗೆ ಭಗವಂತ ಒಲಿದ ಮೇಲೆ ಭಕ್ತಿಯ ಮಾರ್ಗಕ್ಕೆ ತಿರುಗುವ ಆಕೆಯ ಅಭಿನಯ ಸೊಗಸಾಗಿದೆ.   ಮಗನ ಪಾತ್ರಧಾರಿ ಕೂಡ ಹದವಾದ ಅಭಿನಯ ನೀಡಿದ್ದಾನೆ.



ಚೇತನಿಗೆ ಭಗವಂತನನ್ನು ಒಲಿಸಿಕೊಳ್ಳುವ ಅವಕಾಶ ನೀಡಿ, ಭಗವಂತನ  ಮೂರ್ತಿಯನ್ನು ಒಬ್ಬ ಗುರುಗಳು ನೀಡುತ್ತಾರೆ. ನಿತ್ಯವೂ ಪೂಜೆ ಮಾಡುತ್ತಾ ಸಮಯ ಕಳೆಯುವುದನ್ನು ಕಂಡು ಕುಪಿತಳಾಗಿ ಒಂದು ರಾತ್ರಿ ಆ ಮೂರ್ತಿಯನ್ನು ಬಾವಿಗೆ ಎಸೆಯುವುದನ್ನು ಕನಸಲ್ಲಿ ಕಂಡ ಚೇತ.. ಮತ್ತೆ ಭಗವಂತನನ್ನು ಪ್ರಾರ್ಥಿಸಿದಾಗ ಮೂರ್ತಿಯ ಜೊತೆಯಲ್ಲಿ ತಾಳೆಗರಿಯ ಗ್ರಂಥವೂ ಸಿಗುತ್ತದೆ. ವಿದ್ಯಾ ಸಂಸ್ಕಾರವಿಲ್ಲದ ಚೇತ ಮತ್ತೆ ಪ್ರಾರ್ಥನೆ ಮಾಡಿದಾಗ ಅವನಿಗೆ ಜ್ಞಾನ ಪ್ರಾಪ್ತಿಯಾಗುತ್ತದೆ.


ಹೀಗೆ ಒಲಿದ ಜ್ಞಾನದಿಂದ ತನ್ನ ಸುತ್ತ ಮುತ್ತಲಿನ ಸಮಾಜವನ್ನು ಸರಿಯಾದ ಹಾದಿಗೆ ಬರಲು ಪ್ರೇರೇಪಿಸುತ್ತಾನೆ.  ಇವನ ಜನಪ್ರಿಯತೆಯನ್ನು ಕಂಡು ಕುಪಿತ ಗೊಳ್ಳುವ ರಾಜಗುರು ಮತ್ತು ರಾಜ ಚೇತನಿಗೆ ಎಚ್ಚರಿಕೆ ಕೊಡುತ್ತಾರೆ, ಶಿಕ್ಷಿಸುವುದಾಗಿ ಹೆದರಿಸುತ್ತಾರೆ.. ಆದರೆ  ಧೈರ್ಯವಾಗಿ ನಿಭಾಯಿಸುವ ಚೇತ, ರಾಜ ಕೊಟ್ಟ ಶಿಕ್ಷೆಯನ್ನು ಭಗವಂತನ ಅನುಗ್ರಹದಿಂದ ಒಂದೇ ರಾತ್ರಿಯಲ್ಲಿ ಒಂದು ಸಾವಿರ ಪಾದರಕ್ಷೆ ಜೊತೆಯನ್ನು ಸಿದ್ಧ ಮಾಡುತ್ತಾನೆ.. ಊರ ಜನರ ಮೌಢ್ಯವನ್ನು ನಿವಾರಿಸುವ ಪ್ರಯತ್ನ ಮಾಡಿ ಯಶಸ್ವಿಯಾಗುತ್ತಾನೆ..






ಒಳ್ಳೆಯವರು ಇದ್ದ ಮೇಲೆ.. ಕಾಟ ಕೊಡೋಕೆ ಒಬ್ಬರು ಇರಲೇ ಬೇಕಲ್ಲ.. ಹಾಗಾಗಿ ಡಿಕ್ಕಿ ಮಾಧವರಾವ್ ಆ ಕೊರತೆಯನ್ನು ತುಂಬುತ್ತಾರೆ.



ಈ ಚಿತ್ರ ಸರಳವಾಗಿದೆ .. ಹಾಗೂ ಚಿತ್ರಕಥೆ ಕೂಡ ನೇರವಾಗಿದೆ.. ಈ ಚಿತ್ರದ ಇನ್ನೊಂದು ಹೈ ಲೈಟ್  ಚುರುಕಾದ ಸಂಭಾಷಣೆ.. ಸರಳವಾಗಿದೆ, ನಗು ಉಕ್ಕಿಸುತ್ತದೆ.. ಹುಣಸೂರು ಕೃಷ್ಣಮೂರ್ತಿ ಬರೆದಿರುವ ಸಂಭಾಷಣೆ ಸೊಗಸಾಗಿದೆ.. ಹಾಡುಗಳನ್ನು ಅವರೇ ರಚಿಸಿದ್ದಾರೆ.

ಹಾಸ್ಯ ಎಂದಾಗ ಅಲ್ಲಿ ಬಾಲಕೃಷ್ಣ ಇರಲೇಬೇಕಲ್ಲವೇ.. ರಾಜಗುರುವಿನ ಮನೆಯಲ್ಲಿ ಕೆಲಸ ಮಾಡುವವನ ಪಾತ್ರದಲ್ಲಿ ಇದ್ದಾರೆ.. ಅವರ ಜೊತೆಯಲ್ಲಿ ಸಹನಟನ ಸಮಾಗಮದಲ್ಲಿ ಒಂದಷ್ಟು ಹಾಸ್ಯ ದೃಶ್ಯಗಳು ಚಿತ್ರದ ಓಘಕ್ಕೆ ಸಹಾಯ ಮಾಡುತ್ತದೆ.


ರಾಜಗುರುವಿನ ಪಾತ್ರದಲ್ಲಿ ಎಂದಿನಂತೆ ರಾಮಚಂದ್ರ ಶಾಸ್ತ್ರೀ  ಗಮನ ಸೆಳೆಯುತ್ತಾರೆ.


ಒಂದು ಸರಳ ಚಿತ್ರ.. ಸರಳ ಕತೆಯನ್ನು ಯಾವುದೇ ಜಂಜಾಟವಿಲ್ಲದೆ ಹೇಗೆ ಚಿತ್ರಿಸಬಹುದು ಎಂದು ತೋರಿಸಿದ್ದಾರೆ.. !

ಮುಂದಿನ ಚಿತ್ರ.. ರಾಜ್ ಅವರ ಚಿತ್ರ ಬದುಕಿನ ೨೫ನೇ ಚಿತ್ರ.. ಅದರೊಂದಿಗೆ ಮತ್ತೆ ಸಿಗೋಣ.. !

No comments:

Post a Comment