ಕೆಲವೊಂದು ಚಿತ್ರಗಳನ್ನ ನೋಡಿದ ಮೇಲೆ ಅಯ್ಯೋ ಯಾಕೆ ಇದೂವರೆಗೂ ಈ ಚಿತ್ರ ನೋಡಿಲ್ಲ ಅಥವಾ ನೋಡಲಾಗಿಲ್ಲ ಅನ್ನುವ ಹಾಗೆ ಮಾಡುತ್ತೆ.. ಅಂತಹ ಚಿತ್ರಗಳಲ್ಲಿ ಭೂದಾನ ಚಿತ್ರ ಒಂದು.
ಈ ಚಿತ್ರ ಅರಳಿದ್ದು ಜಿ ವಿ ಅಯ್ಯರ್ ಅವರ ಮೂಸೆಯಲ್ಲಿ. ಓದಿದ್ದು ನೆನಪು.. ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯನ್ನು ಚಿತ್ರ ಮಾಡಲು ಅವರ ಬಳಿ ಹಕ್ಕಿಗಾಗಿ ಕೇಳಿದಾಗ .. ಹಕ್ಕು ಕೊಡಲು ನಿರಾಕರಿಸಿ .. ಕಥೆಯ ತಿರುಳನ್ನು ಉಪಯೋಗಿಸಲು ಅನುಮತಿ ನೀಡಿದರಂತೆ..
ಈ ಸಿನಿಮಾ ನೋಡುತ್ತಾ ಹೋದ ಹಾಗೆ ಚೋಮನ ದುಡಿಯ ಅನೇಕ ಅಂಶಗಳು ಕಣ್ಣ ಮುಂದೆ ಬಂದವು.. ಅದೇ ತಿರುಳನ್ನು ಹಿಡಿದಿಟ್ಟು ಅದಕ್ಕೆ ಶ್ರೀ ವಿನೋಬಾ ಭಾವೆ ಅವರ ಭೂಸುಧಾರಣೆ ಚಳುವಳಿ ವಿಷಯ ಸೇರಿಸಿ ಸುಂದರ ಚಿತ್ರಕಥೆ ಮಾಡಿ, ಅದಕ್ಕೆ ಸಂಭಾಷಣೆ, ಹಾಡುಗಳು ಬರೆದು ಪಿ ಎಸ್ ಗೋಪಾಲಕೃಷ್ಣ ಅವರ ಜೊತೆ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಜೀವಾಳ ಅವರು ರಚಿಸಿದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತೆ ಊರಿನ ಪ್ರಮುಖ ಜಮೀನ್ದಾರನಾಗಿ ಅವರ ಖಳ ಛಾಯೆಯ ಅಭಿನಯ.. ನಾಜೂಕಿನ ಮಾತುಗಳನ್ನು ಹೇಳುತ್ತಲೇ ತಣ್ಣಗಿನ ಕ್ರೌರ್ಯ ಪ್ರದರ್ಶಿಸುವ ಅವರ ಪಾತ್ರ ಅದ್ಭುತವಾಗಿದೆ.. ಆ ಪಾತ್ರ ಪೋಷಣೆಯೂ ಇತರ ಪಾತ್ರಗಳನ್ನೂ ನುಂಗಿಹಾಕದಂತೆಚಿತ್ರೀಕರಿಸಿದ್ದಾರೆ ..
ಚಿತ್ರದ ಆರಂಭ ಭಾಗ್ಯದ ಲಕ್ಷ್ಮಿ ಬಾರಮ್ಮ ಎನ್ನುವ ಪುರಂದರ ವಿಠಲರ ಹಾಡಿನೊಂದಿಗೆ ಶುರುವಾಗುತ್ತೆ.. ಅದರಿಂದ ಅರಿವಾಗೋದು ಹಣದ ಆಸೆ ಈ ಚಿತ್ರದುದ್ದಕ್ಕೂ ಇದೆ ಅಂತ..
ಈ ಚಿತ್ರದ ಕಥೆ ಹೀಗಿದೆ.. ದಾಸಣ್ಣ ಊರಿನ ಒಂದು ಜೀತದಾಳಿನ ಕುಟುಂಬದ ಹಿರಿಯ.. ಗೌರಿ, ರಾಮ, ಲಕ್ಷಣ ಮೂವರು ಮಕ್ಕಳು.. ತಮ್ಮ ಹಾಗು ತಮ್ಮನ ಹೆಂಡತಿ ಪಕ್ಕದ ಮನೆಯಲ್ಲಿಯೇ ವಾಸ.. ತಮ್ಮನ ಹೆಂಡತಿಗೆ ಅಣ್ಣ ತಮ್ಮಂದಿರ ಅನ್ಯೋನ್ಯತೆ ಇಷ್ಟವಾಗೋಲ್ಲ.. ಕಾರಣ ಹಣದಾಸೆ..
ದಾಸಣ್ಣನಿಗೆ ಜೀತ ಮಾಡಿ ಬದುಕೋಕಿಂತ ಸಾಯೋದರ ಒಳಗೆ ಒಂದಷ್ಟು ಜಮೀನನ್ನು ಸ್ವಂತವಾಗಿ ಉತ್ತು ಬಿತ್ತು ಬೆಳೆ ಬೆಳೆಯಬೇಕು ಎನ್ನುವ ಹಂಬಲ.. ಅದಕ್ಕಾಗಿ ಜಮೀನ್ದಾರನನ್ನು ಆಗಾಗ ಕೇಳುತ್ತಲೇ ಇರುತ್ತಾನೆ.. ಆದರೆ ದಾಸಣ್ಣನ ಮಕ್ಕಳಿಗೆ ಜಮೀನ್ದಾರನ ಮೇಲೆ ನಂಬಿಕೆ ಇರೋಲ್ಲ..
ಆ ಊರಿಗೆ ವಿನೋಬಾ ಭಾವೆ ಅವರನ್ನು ನೆನೆಸಿಕೊಂಡು ಭೂದಾನ ತಂಡ ಬರುತ್ತದೆ.. ಆ ಊರಿನ ಸುಮಾರು ರೈತರು ಭೂದಾನದ ಚಳುವಳಿಗೆ ತಮ್ಮ ತಮ್ಮ ಜಮೀನಿನ ಕೆಲವು ಭಾಗಗಳನ್ನು ದಾನವಾಗಿ ನೀಡುತ್ತಿರುತ್ತಾರೆ.. ಅಲ್ಲಿ ಕೂತಿದ್ದ ದಾಸಣ್ಣ ತನ್ನ ಪಕ್ಕಾದವನಿಗೆ.. ನನಗೊಂದು ಚೂರು ಪಾರು ಜಾಮೀನು ಎಷ್ಟು ಚೆನ್ನಾ.. ಆದರೆ ಇರೋರಿಗೆ ಮಾತ್ರ ಭೂದಾನ ಮಾಡುತ್ತಾರೆ ಅಂತ ಗೊಣಗುತ್ತಾನೆ..
ಅದನ್ನು ಕೇಳಿಸಿಕೊಂಡ ಚಳುವಳಿಯ ಪ್ರಮುಖ.. ಜಮೀನ್ದಾರನಿಗೆ ಹೇಳಿದಾಗ.. ಐದು ಎಕರೆ ಜಮೀನು ಕೊಡುತ್ತಾನೆ.. ಆದರೆ ನಂತರ ನೋಡಿದಾಗ ಆ ಜಮೀನು ಬರೀ ಕಲ್ಲು ಬಂಡೆಗಳಿಂದ ಕೂಡಿದ್ದು ಅಂತ ಗೊತ್ತಾಗುತ್ತದೆ.. ಆದರೆ ಎದೆಗುಂದದ ದಾಸಣ್ಣ ತನ್ನ ಮಕ್ಕಳ ಜೊತೆ ಭೂ ಕೆಲಸ ಶುರುಮಾಡುತ್ತಾನೆ.. ಆದರೆ ಆಳುಗಳು ಇನ್ನಷ್ಟು ಬೇಕು ಎಂದಾಗ ಜಮೀನ್ದಾರ ಕೈಸಾಲ ಎಂದು ಎರಡು ಸಾವಿರ ಕೊಡುತ್ತಾನೆ.. ನಂತರ ದಾಸಣ್ಣ ಆ ಬಂಜರು ಭೂಮಿಯನ್ನು ಹಸನು ಮಾಡಿ, ಬೆಳೆ ಬೆಳೆದಿದ್ದನ್ನು ಕಂಡು.. ಸಾಲ, ಅದಕ್ಕೆ ಬಡ್ಡಿ ಅಂತ ಕಾರಣ ಹೇಳಿ, ಜಮೀನು ಮತ್ತು ಬೆಳೆದಿದ್ದ ಬೆಳೆಯನ್ನು ಕಬಳಿಸುತ್ತಾನೆ.. ಮಕ್ಕಳಿಗೆ ಕೋಪ ಬಂದು.. ಕಾಫೀ ತೋಟದ ಕೂಲಿಯಿಂದ ಹೆಚ್ಚು ಹಣ ಸಿಗುತ್ತದೆ ಎಂದು.. ಆ ಹಣದಿಂದ ಜಮೀನು ಕೊಳ್ಳಬಹುದು ಎಂದು ಹೋಗುತ್ತಾರೆ..
ಇತ್ತ.. ದಾಸಣ್ಣ ಮಕ್ಕಳ ನ್ನು ನೆನೆದು ಬೇಸರದಿಂದ ಇದ್ದರೇ.. ಅತ್ತ ಅವನ ತಮ್ಮನ ಹೆಂಡತಿ ಅಸೂಯೆಯಿಂದ ದಾಸಣ್ಣನ ಹಸುವಿಗೆ ವಿಷ ಹಾಕುತ್ತಾಳೆ.. ಆದರೆ ವಿಧಿ ಅವಳ ಗಂಡನಿಗೆ ಹಾವು ಕಡಿದು ಮರಣ ಹೊಂದುವಂತೆ ಮಾಡುತ್ತದೆ..
ಜಮೀನ್ದಾರ ಆಕೆಯನ್ನು ಹೊಂದುವಂತೆ ಬಲವಂತ ಮಾಡುತ್ತಾನೆ.. ಆದರೆ ಅವಳು ತಿರುಗುಬಿದ್ದಾಗ ಊರಿನ ಜನರನ್ನು ಸೇರಿಸಿ, ಅವಳ ಮೇಲೆ ತಪ್ಪು ಭಾವ ಬರುವಂತೆ ಮಾಡಿ.. ಬಹಿಷ್ಕಾರ ಹಾಕುತ್ತಾರೆ..
ಇತ್ತ ಕಾಫೀ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ ಹಣ ಒಟ್ಟು ಮಾಡುತ್ತಾ ರಾಮ ಲಕ್ಷಣ ಇರುತ್ತಾರೆ.. ಲಕ್ಷಣನಿಗೆ ಒಬ್ಬ ಕ್ರಿಶ್ಚಿಯನ್ ಹುಡುಗಿ ಪರಿಚಯ ಇರುತ್ತದೆ.. ಪ್ರೀತಿಗೆ ತಿರುಗಿ.. ರಾಮನ ಇಷ್ಟದ ವಿರುದ್ಧ ಹಣದಲ್ಲಿ ಸ್ವಲ್ಪ ಎತ್ತುಕೊಂಡು ಮದುವೆಯಾಗುತ್ತಾನೆ.. ಮದುವೆಗೆ ಚರ್ಚ್ ನವರು ಹತ್ತು ಎಕರೆ ಭೂಮಿ ಮತ್ತು ಹಣ ಕೊಟ್ಟಿರುತ್ತಾರೆ.. ಲಕ್ಶ್ಮಣನ ಜೀವನ ನೋಡಿ..ಬೇಸರಗೊಂಡು ಅದೇ ಚಿಂತೆಯಲ್ಲಿ ಹಾಸಿಗೆ ಹಿಡಿಯುತ್ತಾನೆ.. ಕಾಫೀ ತೋಟದವ ಗಾಡಿ ಮಾಡಿಕೊಟ್ಟು ದಾಸಣ್ಣನ ಮನೆಗೆ ಕಳಿಸುತ್ತಾನೆ.. ದಾರಿಯಲ್ಲಿ ಕೂಡಿಟ್ಟ ಹಣವನ್ನು ಒಬ್ಬ ಕದ್ದುಕೊಂಡು ಹೋಗುತ್ತಾನೆ..
ದಾಸಣ್ಣ ಕರೀಂ ಸಾಬಿಯಿಂದ ಔಷಧಿ ಕೊಡಿಸುತ್ತಾನೆ.. ಹುಷಾರಾದ ರಾಮ ಕರೀಂ ಹತ್ತಿರ ನಾನು ನಿನ್ನ ಜಾತಿಗೆ ಸೇರುತ್ತೀನಿ..ಇಬ್ಬರೂ ಒಟ್ಟಿಗೆ ವ್ಯವಸಾಯ ಮಾಡೋಣ ಎನ್ನುತ್ತಾನೆ.. ಒಪ್ಪಿದ ಕರೀಂ ಅವನನ್ನು ತನ್ನ ಜಾತಿಗೆ ಸೇರಿಸಿಕೊಂಡು ಐದು ಎಕರೆ ಜಮೀನು ಕೊಡಿಸುತ್ತಾನೆ..
ಇದನ್ನೆಲ್ಲಾ ಕಂಡು ಹುಚ್ಚು ಹಿಡಿಯುವ ದಾಸಣ್ಣ ತನ್ನ ಮನೆಯನ್ನು ಕೆಡವಿ ಆ ಜಾಗದಲ್ಲಿ ವ್ಯವಸಾಯ ಮಾಡಲು ಹೋಗುತ್ತಾನೆ..
ಅಂತ್ಯದಲ್ಲಿ ಮತ್ತೆ ಆ ಊರಿಗೆ ಭೂದಾನ ಚಳುವಳಿ ಮತ್ತೆ ಬಂದಾಗ.. ದಾಸಣ್ಣ ತಾನು ಜಮೀನ್ದಾರನಿಂದ ಮೋಸ ಹೋಗಿ ತನ್ನ ಕುಟುಂಬವನ್ನು ಕಳೆದುಕೊಂಡದ್ದನ್ನು ಹೇಳುತ್ತಾನೆ..
ಅಷ್ಟರಲ್ಲಿ ರಾಮ ಲಕ್ಷಣ ಇಬ್ಬರೂ ಮತ್ತೆ ದಾಸಣ್ಣನ ಮಡಿಲಿಗೆ ಸೇರುತ್ತಾರೆ .. ದಾಸಣ್ಣ ಮಕ್ಕಳು ಬೇರೆ ಧರ್ಮಕ್ಕೆ ಸೇರಿದ್ದರೂ ತನ್ನ ಮಕ್ಕಳೆಂದು ಸ್ವೀಕರಿಸುತ್ತಾನೆ..
ಜಮೀನ್ದಾರನ ಬಣ್ಣವನ್ನು ಊರಿನ ಜನ ಬಯಲು ಮಾಡುತ್ತಾರೆ.. ತಪ್ಪು ಅರಿತ ಜಮೀನ್ದಾರ ತನ್ನ ಜಮೀನನ್ನು ಊರಿನ ಎಲ್ಲರಿಗೂ ಹಂಚಿ ಸಾಗುವಳಿ ಮಾಡಲು ಹೇಳುತ್ತಾನೆ..
ದಾಸಣ್ಣನ ಪಾತ್ರದಲ್ಲಿ ರಾಜ್ ಕುಮಾರ್ ಅಕ್ಷರಶಃ ಪರಕಾಯ ಪ್ರವೇಶ ಮಾಡಿದ್ದಾರೆ.. ವಯಸ್ಸಿಗೆ ಬಂದ ಮೂರು ಮಕ್ಕಳ ತಂದೆಯ ಪಾತ್ರವದು.. ವಯಸ್ಸಾದ ಪಾತ್ರ.. ಆದರೆ ಅದಕ್ಕೆ ಬೇಕಾದ ಅಂಗೀಕಾ ಅಭಿನಯ ನೀಡಿದ್ದಾರೆ.. ಅವರ ವೇಷಭೂಷಣ ಸೊಗಸಾಗಿದೆ.. ಆ ಪಾತ್ರಕ್ಕೆ ತಕ್ಕ ಹಾಗೆ ಇದೆ.
ಧ್ವನಿ, ಏರಿಳಿತ.. ಆ ಮೀಸೆ, ತಲೆಗೂದಲು.. ಬಡ ಕುಟುಂಬದ ಮುಖ್ಯಸ್ಥನ ಪಾತ್ರ ತೆರೆಯಿಂದ ಎದ್ದು ಬಂದ ಹಾಗಿದೆ.. ರಾಜ್ ಕುಮಾರ್ ಸೂಪರ್ ಪಾತ್ರ ಈ ಚಿತ್ರದಲ್ಲಿ.. ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಹಿಂದಿನ ಸಿನೆಮಾಗಳಲ್ಲಿ ಅವರೇ ನಾಯಕ.. ಈ ಚಿತ್ರದಲ್ಲಿ ತನ್ನ ಸಮಕಾಲೀನ ನಟರಿಗೆ ಅಪ್ಪನಾಗಿ ಅಭಿನಯಿಸುವ ಪಾತ್ರ.. ಮುಂದೆ ಅವರ ಚಿತ್ರ ಜೀವನ ಹೇಗೆ ಬೇಕಾದರೂ ಸಾಗಬಹುದಿತ್ತು.. ಆದರೆ ಧೈರ್ಯವಾಗಿ ಅಭಿನಯಿಸಿ.. ಪಾತ್ರಕ್ಕಾಗಿ ನಾನೆ ಹೊರತು ನನಗಾಗಿ ಪಾತ್ರವಲ್ಲ ಎಂದು ತೋರಿಸಿದ್ದಾರೆ.. ರಾಜ್ ಕುಮಾರ್ ಅವರಿಗೆ ಒಂದು ಹ್ಯಾಟ್ಸಾಫ್..
ಆ ಕಾಲದ ಎಲ್ಲಾ ಕಾಲದ ಹಿಟ್ ಹಾಸ್ಯ ಜೋಡಿ ಬಾಲಕೃಷ್ಣ ಮತ್ತು ನರಸಿಂಹರಾಜು.. ಇಬ್ಬರೂ ಚಿತ್ರದುದ್ದಕ್ಕೂ ನಗಿಸುತ್ತಲೇ ಸಾಗುತ್ತಾರೆ.. ಅದ್ಭುತ ಹಾಸ್ಯ ಪ್ರಜ್ಞೆ, ಚುರುಕು ಸಂಭಾಷಣೆ.. ಅವರಿಬ್ಬರ ಅಭಿನಯ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ.. ಕತೆಗೆ ಪೂರಕವಾಗಿರುವ ಅವರಿಬ್ಬರ ದೃಶ್ಯಗಳು ಜೀವನವನ್ನು ನೋಡುವ ಪರಿ ಹೇಳಿಕೊಡುತ್ತದೆ ..ನರಸಿಂಹರಾಜು ಕುಟುಂಬದಲ್ಲಿ ಮಕ್ಕಳ ಸೈನ್ಯವೇ ಇರುತ್ತದೆ.. ಆದರೆ ಬಾಲಕೃಷ್ಣ ಕುಟುಂಬದಲ್ಲಿ ಮಕ್ಕಳ ಭಾಗ್ಯವೇ ಇಲ್ಲ.. ನಾಲ್ಕು ಹೆಂಡತಿಯರು ಸ್ವರ್ಗವಾಸಿಯಾಗಿ ಐದನೇ ಹೆಂಡತಿಗೆ ಮಕ್ಕಳ ಭಾಗ್ಯ ಇರುವುದಿಲ್ಲ.. ಅತೀವೃಷ್ಟಿ ಅನಾವೃಷ್ಟಿ.. ಕಡೆಗೆ ನರಸಿಂಹರಾಜು ಮಕ್ಕಳನ್ನೇ ತನ್ನ ಮಕ್ಕಳು ಎಂದು ಒಟ್ಟಿಗೆ ಜೀವನ ಸಾಗಿಸೋಣ ಅಂತ ಎರಡೂ ಕುಟುಂಬ ಒಟ್ಟಿಗೆ ಬಾಳುವ ನಿರ್ಧಾರ ಕೈಗೊಂಡು ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ತತ್ವಕ್ಕೆ ಬಾಗುತ್ತಾರೆ..
ಲೀಲಾವತಿ ಪಾತ್ರ ಚುಟುಕು ಅಂದರೆ.. ದಾಸಣ್ಣನ ಮಗಳ ಪಾತ್ರ.. ಚಿತ್ರಕ್ಕೆ ಸಹಕಾರಿಯಾಗಿದೆ. ..
ದಾಸಣ್ಣನ ತಮ್ಮನ ಪಾತ್ರದಲ್ಲಿ ಅಶ್ವಥ್ ಅವರದು ಕಿರು ಪಾತ್ರ.. ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ..
ಅವರ ಹೆಂಡತಿಯ ಪಾತ್ರದಾರಿ ಆದವಾನಿ ಲಕ್ಷ್ಮೀದೇವಿ ಬೆಂಕಿಯ ಉಂಡೆ.. ಅಸೂಯೆ, ದ್ವೇಷ, ಸಿಟ್ಟು ಎಲ್ಲವನ್ನು ಮೇಳೈಸಿಕೊಂಡು ಚಿತ್ರದಲ್ಲಿ ಕಾಣುತ್ತಾರೆ..
ದಾಸಣ್ಣನ ಮಕ್ಕಳಾಗಿ ಉದಯಕುಮಾರ್ ರಾಮನಾದರೆ... ಕಲ್ಯಾಣ್ ಕುಮಾರ್ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ.. ಇಬ್ಬರೂ ಮುದ್ದಾಗಿ ಕಾಣುತ್ತಾರೆ.. ಅಭಿನಯ ಸೊಗಸಾಗಿದೆ..
ಕುಮಾರತ್ರಯರು ಒಂದೇ ಸಿನಿಮಾದಲ್ಲಿ ಪೂರ್ಣ ಪೂರ್ಣಪ್ರಮಾಣದಲ್ಲಿ ಅಭಿನಯಿಸಿದ್ದೆ ಇದೆ ಮೊದಲು ಇದೆ ಕೊನೆ.. ಇದರ ಹಿಂದಿನ ಚಿತ್ರ ಗಾಳಿಗೋಪುರದಲ್ಲಿ ಮೂವರು ಇದ್ದರೂ ಉದಯಕುಮಾರ್ ಒಂದೇ ದೃಶ್ಯದಲ್ಲಿ ಅಭಿನಯಿಸಿದ್ದರು ಹಾಗಾಗಿ ಇದೆ ವಿಶೇಷ ಈ ಚಿತ್ರದ್ದೂ..
ಹಲವಾರು ವರ್ಷಗಳಾದರೂ ಈ ಚಿತ್ರ ತನ್ನ ಸಾಮಾಜಿಕ ಕಳಕಳಿಯಿಂದ ಇನ್ನೂ ಪ್ರಸ್ತುತ ಎನಿಸುತ್ತದೆ..
ಈ ಚಿತ್ರವನ್ನು ಇದೂವರೆಗೂ ನೋಡದೆ ಇದ್ದದ್ದಕ್ಕೆ ಬೇಸರ ಎನಿಸಿದರೂ.. ಈಗಲಾದರೂ ನೋಡಿ ಇದರ ಬಗ್ಗೆ ನನಗೆ ಅನಿಸಿದ ಎರಡು ಅಕ್ಷರ ಬರೆದ ತೃಪ್ತಿ ನನ್ನದು.. !
ಮುಂದಿನ ಚಿತ್ರದೊಂದಿಗೆ ಸಿಗೋಣ.. !
No comments:
Post a Comment