Saturday, April 4, 2020

ಕೈಯಲ್ಲಿಯೇ ವರ ಕೊಡುವ ಕೈವಾರ ಮಹಾತ್ಮೆ (1961) (ಅಣ್ಣಾವ್ರ ಚಿತ್ರ ೨೩ / ೨೦೭)

ಭಗವಂತನ ಅಪ್ಪಣೆ ಇಲ್ಲದೆ ಹುಲ್ಲು ಕಡ್ಡಿ ಕೂಡಾ ಚಲಿಸೋಲ್ಲಾ ಅಂತಾರೆ..ಭಗವಂತನ ಸಂಕಲ್ಪವಿದ್ದಂತೆ ನೆಡೆಯುತ್ತದೆ..ಆದರೆ ನಮಗೆ ಅರಿವಿಗೆ ಬರೋಲ್ಲ..ಎಂದೋ ಒಂದು ದಿನ ಘಟನೆಗಳನ್ನು ಮೆಲುಕು ಹಾಕಿದಾಗ ಎಲ್ಲವೂ ಸರಪಳಿಯಂತೆ ಒಂದಕ್ಕೊಂದು ಬೆಸುಗೆ ಹಾಕಿಕೊಂಡಿರುತ್ತದೆ

ಮಕ್ಕಳಿಲ್ಲದ ದಂಪತಿಗಳು ಕೈವಾರ ಕ್ಷೇತ್ರದ ಅಮರನಾರಾಯಣ ದೇವಸ್ಥಾನದಲ್ಲಿನ ದೀಕ್ಷಿತರಿಂದ ಕೈವಾರ ಕ್ಷೇತ್ರದ ಮಹಿಮೆ ಅರಿಯುತ್ತಾರೆ




ದೇವೇಂದ್ರ ತನ್ನ  ಇಂದ್ರ ಪಟ್ಟಕ್ಕೆ ಸಂಚಕಾರ ಬಂದಾಗ.. ತಪೋನಿರತ ಋಷಿಕುಮಾರನನ್ನು ಸಂಹರಿಸಲು ಋಷಿ ದಧೀಚಿಯ ಬೆನ್ನು ಮೂಳೆಯಿಂದಾದ ವಜ್ರಾಯುಧದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾನೆ ..  ಆದರೆ ಋಷಿಯನ್ನು ಕೊಂದ ಬ್ರಹ್ಮ ಹತ್ಯೆ ದೋಷವನ್ನು ನಿವಾರಿಸಿಕೊಳ್ಳಲು ಕೈವಾರದಲ್ಲಿ ಅಮರನಾರಾಯಣನನ್ನು ಪ್ರತಿಷ್ಠಾಪಿಸುತ್ತಾನೆ... 

ರಾಮಾಯಣದಲ್ಲಿ ವನವಾಸದಲ್ಲಿದ್ದ ಶ್ರೀ ರಾಮ ಬಾಯಾರಿಕೆಯಿಂದ ಲಕ್ಷಣನಿಗೆ ಬಾಣ ಬಿಡೋಕೆ ಹೇಳಿ, ಯಮುನೆಯನ್ನು ಪ್ರಾರ್ಥಿಸುತ್ತಾನೆ.. ಆಗ ಉದ್ಭವಿಸುವುದೇ  ಲಕ್ಶ್ಮಣ ತೀರ್ಥ.. 

ಏಕಚಕ್ರನಗರದಲ್ಲಿ ಬಕಾಸುರನ ವಧೆ  ಮಾಡುವ ಭೀಮಸೇನಾ.. ದೋಷ ಪರಿಹಾರಕ್ಕಾಗಿ ನಾರದರ ಸಲಹೆಯಂತೆ ಲಕ್ಷ್ಮಣ ತೀರ್ಥದಲ್ಲಿ ಮಿಂದು ಭೀಮಲಿಂಗೇಶ್ವರನನ್ನು ಜೊತೆಯಲ್ಲಿ ಉಳಿದ ಪಾಂಡವರು ಲಿಂಗ ಪ್ರತಿಷ್ಠಾಪಿಸಿ ಪಂಚಲಿಂಗ ಕ್ಷೇತ್ರ ಮಾಡುತ್ತಾರೆ.. 

ಈ ಪುರಾಣವನ್ನು ಹೇಳಿದ ದೀಕ್ಷಿತರು, ಅಮರನಾರಾಯಣನ ವರಪ್ರಸಾದದಿಂದ ಮಗುವಾಗುತ್ತದೆ ಎಂದು ಆಶೀರ್ವದಿಸುತ್ತಾರೆ.  ಅದೇ ರೀತಿಯಲ್ಲಿ ಕನಸ್ಸಲ್ಲಿ ಬರುವ ಆ ದೇವ ದಂಪತಿಗಳಿಗೆ ಸಂತಾನ ಕರುಣಿಸುತ್ತಾನೆ.. ಆದರೆ ಅಸ್ತಿ ಆಸೆಗೆ ತಂಗಿ ಮತ್ತು ಬಾವ ಹುಟ್ಟಿದ ಮಗುವನ್ನು ಸತ್ತಿದೆ ಅಂತ ಸುಳ್ಳು ಹೇಳಿ.. ಆ ದಂಪತಿಗಳು  ಅಸುನೀಗುವಂತೆ ಮಾಡುತ್ತಾರೆ.. 


 ಮಗುವನ್ನು ಮಣ್ಣಿನಲ್ಲಿ ಹೂತು ಬಿಡು ಎಂದು ದಾಸಿಗೆ ಹೇಳುತ್ತಾಳೆ.. ಆದರೆ ಆ ದಾಸಿಗೆ  ಹಾವು ಎದುರಾಗಿ ಮಗುವನ್ನು ದೇವಸ್ಥಾನದ ಬಳಿ ಬಿಟ್ಟು ಓಡಿ ಹೋಗುತ್ತಾಳೆ .. 

ಆ ಮಗುವಿನ ಅಳು ದನಿ ಕೇಳಿ.. ಅದೇ ಹಾದಿಯಲ್ಲಿ ಬರುತ್ತಿದ್ದ ದೀಕ್ಷಿತರು ಆ ಮಗುವನ್ನು ಸಾಕುತ್ತಾರೆ.. ಬೆಳೆಯುತ್ತಾ ಹೋದಂತೆ. ಆ ಮಗು ಅಮರನಾರಾಯಣನ ದೇವರ ಸೇವೆಯಲ್ಲಿ ನಿರತನಾಗುತ್ತಾನೆ .. ಆತನಿಗೆ ನಾರಾಯಣ ಅಂತ ಹೆಸರಿಡುತ್ತಾರೆ. 


ಕಾಲಾನುಕ್ರಮೇಣ, ಮಗುವಿನ ಸೋದರತ್ತೆ ತನ್ನ  ಮಗಳನ್ನು ಕೊಟ್ಟು ಮದುವೆ  ಮಾಡಿಸುತ್ತಾರೆ.. ಹಣ ಅಸ್ತಿ ಇದರ  ವ್ಯಾಮೋಹವಿಲ್ಲದಿದ್ದರೂ, ನಾರಾಯಣನಿಗೆ  ಸಾಕಿದ ಅಪ್ಪನ ಕಡೆಯಿಂದ ಅಸ್ತಿ, ಹಣ, ಮನೆ ಬರುತ್ತದೆ.. ಆದರೆ ಸಾಕಿದ ಅಮ್ಮನ ತಮ್ಮ ಶಾನುಭೋಗ ಈ ಆಸ್ತಿಯ ಮೇಲೆ ಕಣ್ಣು ಹಾಕುತ್ತಾನೆ.. ಇದಕ್ಕೆ ಅನುಕೂಲವಾಗುವಂತೆ ನಾರಾಯಣನ ಸಾಕಿದ ಅಪ್ಪ ಅಮ್ಮ.. ಮತ್ತು ಅತ್ತೆ ಮಾವ  ಕಾಶಿ ಯಾತ್ರೆಗೆ ಹೋಗುತ್ತಾರೆ. 


 ಮುಂದೆ ಅನುಕ್ಷಣವೂ ತೊಂದರೆ ಕೋಟಲೆ ಕೊಡುತ್ತಾ.. ನಾರಾಯಣನನ್ನ  ಮಾನಸಿಕ ಹಿಂಸೆ,  ಜೊತೆಯಲ್ಲಿ ಆತನ ಹೆಂಡತಿಗೆ ಇಲ್ಲ ಸಲ್ಲದ ಚಾಡಿ ಹೇಳಿಕೊಡುತ್ತಾ..  ನಾರಾಯಣನ ಹೆಂಡತಿ ತನ್ನ ಗಂಡನನ್ನು ಮನೆಯಿಂದ ಹೊರಗೆ ಅಟ್ಟುವಂತೆ ಮಾಡುತ್ತಾರೆ. 


ಆ ದೇವನ ಆಶೀರ್ವಾದದಿಂದ ಅರಿಷಡ್ವರ್ಗಗಳು ನಾರಾಯಣನಿಂದ ಹೊರಗೆ  ಭಕ್ತಿ,ಶ್ರದ್ದೆಗಳು ಮನೆ ಮಾಡುತ್ತವೆ.. ಇದನ್ನು ಸುಂದರವಾಗಿ ಚಿತ್ರಿಸಿದ್ದಾರೆ.


ಟಿಪ್ಪು ಸುಲ್ತಾನ್ ದೃಶ್ಯವನ್ನು ಈ ಚಿತ್ರದಲ್ಲಿ ತರುತ್ತಾರೆ.. ಜೊತೆಯಲ್ಲಿ ನಾರಾಯಣನ ಗುರುವನ್ನು ಬೇಡದ ನಂಬಿಕೆಯನ್ನು  ಬಿತ್ತುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಮರದಂಡನೆ ಕೊಟ್ಟು ನದಿಗೆ ಎಸೆಯುತ್ತಾರೆ.. ಆದರೆ ದೇವನ ಮಹಿಮೆ ಮತ್ತು ನಾರಾಯಣನ ಉಪಸ್ಥಿತಿಯಿಂದ ಬದುಕುತ್ತಾರೆ.. 


ಅಲ್ಲಿಗೂ ಶಾನುಭೋಗ ಬಿಡುವುದಿಲ್ಲ.. ಊರಿಗೆ ಉಪಕಾರ ಮಾಡಲು ಬಾವಿ ತೆಗೆಯೋಕೆ ನಿಂತಾಗಲೂ ಕಾಡುವ ಈತ.. ಬಾವಿಯಲ್ಲಿ  ನೀರು ಬಂದು... ಊರಿಗೆ ಸಂತಸವಾದ ಮೇಲೆ  ಊರಿನ ಜನತೆ ಆ ಶಾನುಭೋಗ ಮತ್ತು ಆತನ ಸಹಪಾಠಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ 






ತನ್ನ ಊರು ಉತ್ತಮ ಸ್ಥಿತಿಯಲ್ಲಿ ಇರುವುದನ್ನು ಕಂಡು ಧನ್ಯತೆಯಿಂದ ಅಜೀವ ಸಮಾಧಿಯಾಗಿ ಭಕ್ತರನ್ನು ಪೊರೆಯುತ್ತಾರೆ.. 



ಈ ಕತೆಯನ್ನು ಅಚ್ಚುಕಟ್ಟಾಗಿ ಚಿತ್ರಕತೆ, ಸಾಹಿತ್ಯ ಬರೆದು, ಸಹ ನಿರ್ದೇಶನ ಮಾಡಿ, ಶಾನುಭೋಗರಾಗಿ ನಟನೆ ಮಾಡಿರುವ ನಟನೆ ಮಾಡಿರುವ ಜಿವಿ ಅಯ್ಯರ್ ಮನಸ್ಸೆಳೆಯುತ್ತಾರೆ.. 


ಸಂಗೀತ ನೀಡಿರುವುದು ಜಿಕೆ ವೆಂಕಟೇಶ್.. ಛಾಯಾಗ್ರಹಣ ಬಿ ದೊರೈರಾಜ್. ಸಹಾಯಕ ದಿಗ್ದರ್ಶಕ ಎಸ್ ಕೆ ಭಗವಾನ್. ನಿರ್ಮಾಪಕರು ಕೈವಾರ ಫಿಲಂಸ್ ಪ್ರೈ ಲಿಮಿಟೆಡ್.   ಇಡೀ ತಂಡವನ್ನು ನಿಭಾಯಿಸಿ ನಿರ್ದೇಶನ ಮಾಡಿರೋದು ಟಿ ವಿ ಸಿಂಗ್ ಠಾಕೂರ್.  ಈ ಚಿತ್ರಕ್ಕೆ ರಾಜ್ ಕುಮಾರ್ ತಮ್ಮ ಎಸ್ ಪಿ ವರದರಾಜ್ ಸಹ ನಿರ್ದೇಶನ ಮಾಡಿದ್ದಾರೆ. 


ಕೈವಾರದ ತಾತಯ್ಯ ಅಥವ ನಾರಾಯಣನ ಪಾತ್ರದಲ್ಲಿ  ರಾಜ್ ಕುಮಾರ್ ಪಾತ್ರ ಸೊಗಸಾಗಿದೆ. ಮುಗ್ಧ ನಗು, ಮುಗ್ಧ ನಟನೆ, ಭಾಷಾ ಉಚ್ಚಾರಣೆ, ಪಾತ್ರಕ್ಕೆ ತಕ್ಕ ಅಭಿನಯ, ಮನೆಸ್ಸೆಳೆಯುತ್ತಾರೆ.  ಅವರ ಮೈಕಟ್ಟು ನೋಡಲೇ ಸೊಗಸು. ಪ್ರತಿ ಚಿತ್ರದಲ್ಲೂ ಅವರು ಅಭಿನಯದ ಮೆಟ್ಟಿಲುಗಳನ್ನು  ಏರುತ್ತಿರುವುದನ್ನು ನೋಡುವುದೇ ಒಂದು ಖುಷಿ. ಪಾತ್ರ ಸಣ್ಣದೋ ದೊಡ್ಡದೋ ಅದರ ಬಗ್ಗೆ ಯೋಚಿಸದೆ ತಮ್ಮ ಪಾಲಿಗೆ ಬಂದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪರಿ ಸುಂದರ. 


ಶಾನುಭೋಗರಾಗಿ ಜಿವಿ ಅಯ್ಯರ್ ಗಮನ ಸೆಳೆಯುತ್ತಾರೆ. ಹಾಸ್ಯಭರಿತ, ಕ್ರೌರ್ಯ ತುಂಬಿದ ಪಾತ್ರ.. ಅವರಿಗೆ ಸಾತ್ ಕೊಟ್ಟಿರುವ ಆತನ ಮಡದಿ ಜಯಶ್ರೀ... ಹೇಳಿದ್ದಕ್ಕೆ ಹೂ ಹೂ ಎನ್ನುವ ಆತನ ಆಳುಗಳು ನರಸಿಂಹರಾಜು ಮತ್ತು ಬಾಲಕೃಷ್ಣ ಹಾಸ್ಯಜೋಡಿ. ಇವರಿಬ್ಬರು  ಇರುವ ದೃಶ್ಯಗಳು ಹಾಸ್ಯದ ಹೊನಲನ್ನು ಹರಿಸುತ್ತವೆ. 







ನಾರಾಯಣನ ಹೆಂಡತಿಯಾಗಿ ಲೀಲಾವತಿ ಮತ್ತು ಮಗಳಾಗಿ ಜಯ ಅಭಿನಯ ಇಷ್ಟವಾಗುತ್ತದೆ.. ಉಳಿದ ಪುಟ್ಟ ಪಾತ್ರಗಳಲ್ಲಿ ರಾಮಚಂದ್ರ ಶಾಸ್ತ್ರಿ, ಶಾಂತಮ್ಮ, ಅಶ್ವಥ್ ಗಮನ ಸೆಳೆಯುವಂಥ ಅಭಿನಯ ನೀಡಿದ್ದಾರೆ. 




ಮಹಿಮೆಯ ಚಿತ್ರವನ್ನು ಅಷ್ಟೇ ಸುಂದರವಾಗಿ ತೆರೆಗೆ ತಂದಿರುವುದು ಈ ತಂಡದ ಹೆಗ್ಗಳಿಕೆ. .. 

ಮತ್ತೊಂದು ಚಿತ್ರದ ಜೊತೆಗೆ ಬರೋಣವೇ!!!

No comments:

Post a Comment