Friday, April 24, 2020

ನಾನ್ಯಾರು .. ಈ ಪ್ರಶ್ನೆಯನ್ನು ಸದಾ ನಮ್ಮನ್ನೇ ಕೇಳಿಕೊಳ್ಳುತ್ತಲೇ ಇರಬೇಕು.. ಅಣ್ಣಾವ್ರ ಜನುಮದಿನ (2020)

ಅಣ್ಣಾವ್ರೇ ಏನು ಬರೆಯೋಕು ಹೊಳೀತಿಲ್ಲ.. ನೀವೇ ದಾರಿ ತೋರಬೇಕು.. ಯೋಚಿಸುತ್ತಾ ಇದ್ದೆ ೨೩ನೇ ಏಪ್ರಿಲ್ ತಾರೀಕು..

ಸಂಜೆ ಸುಮಾರು ಐದು ಮೂವತ್ತು ಆಸುಪಾಸಿಗೆ ಗುರುಗಳು, ಅಣ್ಣಾವ್ರನ್ನು ಹತ್ತಿರದಿಂದ ನೋಡಿದ ನಮ್ಮ ಗುರುಗಳು ವೆಂಕಟೇಶ್ ಮೂರ್ತಿಯವರು ದೊರೈ ಭಗವಾನ್ ಜೋಡಿಯ  ಭಗವಾನ್ ಅವರು ಒಂದು ಸಂದರ್ಶನದಲ್ಲಿ ಅಣ್ಣಾವ್ರ ಬಗ್ಗೆ ಹೇಳಿದ ಕೆಲವು ಮಾತುಗಳನ್ನು  ಹೇಳಲು ಕರೆ ಮಾಡಿದರು.. ಅಲ್ಲಿಂದ ಮುಂದೆ ನೆಡೆದದ್ದು ಅಮೋಘ ಒಂದು ಕಾಲುಘಂಟೆ ಫೋನ್ ಕರೆ..  ಅಪಾರ ವಿಷಯಗಳನ್ನು ತಿಳಿಸಿದರು.

ಅದೇ ಗುಂಗಿನಲ್ಲಿ ಮಲಗಿದೆ..  ಬೆಳಿಗ್ಗೆ ಶುಭನುಡಿ ಏನು  ಬರೆಯೋದು ಎಂಬ ಗೊಂದಲವಿದ್ದಾಗ ಮತ್ತೆ ಸಹಾಯಕ್ಕೆ ಬಂದವರು ಅಣ್ಣಾವ್ರೇ..

ಅವರ ಸರಳತೆ, ಕಾರ್ಯಶೀಲತೆ.. ಇದನ್ನೇ ವಿಷಯವನ್ನಾಗಿಸಿ ಕೆಳಗಿನ ಸಾಲುಗಳು ಉಗಮವಾದವು..

ದೇವರ ಆಟ ಬಲ್ಲವರಾರು.. ಇಂದಿಗೆ ಹಲವಾರು ದಶಕಗಳ ಹಿಂದೆ ಸ್ವತಂತ್ರ ಪೂರ್ವದಲ್ಲಿ ಹುಟ್ಟಿದ ಒಂದು ಜೀವಿಯನ್ನು ಇಂದಿಗೂ ಎಂದಿಗೂ ಎಂದೆಂದಿಗೂ ನೆನೆಸಿಕೊಳ್ಳುತ್ತೇವೆ ಎಂದು ಯಾರಾದರೂ ಹೇಳಲಿಕ್ಕೆ ಸಾಧ್ಯವಿತ್ತೇ..


ಅಣ್ಣಾವ್ರು ಅನ್ನುವ ಒಂದು ಭಗವಂತನ ಸೃಷ್ಟಿ ತಾನು ನಂಬಿದ ಕಾಯಕವನ್ನು ಶ್ರದ್ಧೆಯಿಂದ ಮಾಡಿದ್ದರು...ಹಾಗಾಗಿ ಇಂದಿಗೂ ಎಂದಿಗೂ ಅವರು ಪ್ರಸ್ತುತ!


ಆ ಕಾರ್ಯಶೀಲತೆ ಸರಳತೆ ಮಾರ್ಗದರ್ಶನವಾಗಿರಲಿ!



ಶುಭದಿನ!


ಚಿತ್ರಕೃಪೆ : ಗೂಗಲೇಶ್ವರ 



ಅದಕ್ಕೆ ಸಹನಾ, ದಿನಕರ್ ಅವರಿಂದ ಬಂದ ಪ್ರತಿಕ್ರಿಯೆಯೆಗಳು.. "ನಾನಾರು"..

ಎದ್ದು ಬಂದು ಮನೆಯಲ್ಲಿದ್ದ ಅಣ್ಣಾವ್ರ ಫೋಟೋ ನೋಡಿದೆ.. "ಶ್ರೀಕಾಂತವ್ರೆ ಜಮಾಯಿಸಿಬಿಡಿ" ಅಂದ ಹಾಗೆ ಭಾಸವಾಯಿತು.. "

ಸಲ್ಯೂಟ್ ಹೊಡೆದದ್ದೇ ಕೂತೆ ಕಂಪ್ಯೂಟರ್ ಮುಂದೆ.. ಫಲಿತಾಂಶ  ಈ ಲೇಖನ ... ಅಣ್ಣಾವ್ರ ಜನುಮದಿನಕ್ಕೆ ಅರ್ಪಿತಾ..

ಶ್ರೀ : ಅಣ್ಣಾವ್ರೇ.. ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಶಿಪು ಪಾತ್ರದ ಬಗ್ಗೆ ಹೇಳಿ.. ಹೆಚ್ಚು ಕಮ್ಮಿ ನನ್ನ ತಲೆಮಾರಿನಲ್ಲಿ ನಿಮ್ಮ ಸಿನೆಮಾ ಪಾತ್ರಗಳು ತುಂಬಾ ನವಿರಾಗಿದ್ದವು.. ಈ ರೀತಿ ಅಬ್ಬರದ ಪಾತ್ರ ನೋಡಿರಲೇ  ಇಲ್ಲ. ಈ ಚಿತ್ರದ ಹಿಂದೆ ಮುಂದೆ ಕೂಡ ಸಾಂಸಾರಿಕ ಕಥಾವಸ್ತುಗಳೇ ಇದ್ದವು.. ಈ ಪಾತ್ರದ ಬಗ್ಗೆ ಹೇಳಿ ಅಣ್ಣ..  ಸತಿ ಶಕ್ತಿ ಪಾತ್ರದ ನಂತರ ಖಳಛಾಯೆಯಲ್ಲಿ ಈ ರೀತಿ ಅಬ್ಬರಿಸಿದ್ದು ಇಲ್ಲವೇ ಇಲ್ಲ..

ಅಣ್ಣಾವ್ರು: ಶ್ರೀ.. ನಮ್ಮ ತಂಡ ಈ ಚಿತ್ರದ ಕಥಾವಸ್ತುವನ್ನು ಮಾಡಬೇಕು ಎಂದಾಗ.. ನನ್ನ ತಮ್ಮ ವರದಪ್ಪ ಅಣ್ಣ ನೀ ಮಾಡು ಈ ಚಿತ್ರವನ್ನು .. ಅಪ್ಪನನ್ನು ಮತ್ತೊಮ್ಮೆ ನೋಡಿದ ಹಾಗೆ ಆಗುತ್ತೆ.. ಅಂದ.. ಎಲ್ಲರೂ ನನಗೆ ಸ್ಫೂರ್ತಿ ತುಂಬಿದರು.. ಅವರ ಬೆನ್ನು ತಟ್ಟುವಿಕೆ ಈ ಪಾತ್ರವಾಯಿತು.. ಶೂಟಿಂಗ್ ಶುರು ಮಾಡೋದಕ್ಕೆ ಮೊದಲು ಸುಮಾರು ದಿನಗಳಿಂದ ಅಪ್ಪಾಜಿ ಅವರ ಫೋಟೋ ನೋಡೋದು.. ಅವರನ್ನು ಆವಾಹಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ..  ಅಪ್ಪಾಜಿ ಯಾವಾಗಲೂ ನನ್ನ ಮನದಲ್ಲಿ ಇರುತ್ತಾರೆ.. ಆದರೆ ಈ ಪಾತ್ರಕ್ಕೆ ಅವರ ಸ್ಫೂರ್ತಿ ಆಶೀರ್ವಾದ ಬೇಕಿತ್ತು.. ಆಗ ಸಿದ್ಧವಾಯಿತು ನೋಡಿ ಈ ಪಾತ್ರ..

ಚಿತ್ರಕೃಪೆ : ಗೂಗಲೇಶ್ವರ 

ಅದೇ  ರೀತಿಯ ಮೀಸೆ.. ಅದೇ ರೀತಿಯ ನಗು.. ಜೊತೆಯಲ್ಲಿ ನಮ್ಮ ನಟ ಭಯಂಕರ ವಜ್ರಮುನಿ ಅವರ ಗಹಗಹಿಸಿ ಬರುವ ನಗು ಕೂಡ ನನಗೆ ಸ್ಫೂರ್ತಿ ಆಯ್ತು .. ನಮ್ಮ ಚಿ ಉದಯಶಂಕರ್.. ಅಣ್ಣಾವ್ರೇ ನಿಮ್ಮ ಧ್ವನಿಯನ್ನು ಕೊಂಚ ಗಡುಸು ಮಾಡಿಕೊಳ್ಳಬೇಕು.. ಇಡೀ ಚಿತ್ರದಲ್ಲಿ ನಿಮ್ಮ ಹಿಂದಿನ ಚಿತ್ರಗಳ ಧ್ವನಿ ಇರದ ಹಾಗೆ ನೋಡಿಕೊಳ್ಳಿ.. ಎಂದು ಹುರಿದುಂಬಿಸಿದರು..

ಚಿತ್ರಕೃಪೆ : ಗೂಗಲೇಶ್ವರ 
ಒಂದು ಪುಟ್ಟ ಮಗು ಶಾಲೆಗೇ ಹೋಗುವಾಗ ಹೇಗೆ ತಯಾರಿ ಮಾಡುತ್ತಾರೋ ಹಾಗೆ ನನ್ನನ್ನು ತಯಾರಿ ಮಾಡಿದರು..  ಅದರ ಪರಿಣಾಮ ಹಿರಣ್ಯಕಶಿಪು...

ಶ್ರೀ: ಅಬ್ಬಬ್ಬಾ ಎಷ್ಟೊಂದು ವಿವರಣೆ ಅಣ್ಣಾವ್ರೇ.. ನಿಮ್ಮ ಎರಡು ನಿಮಿಷದ ಸ್ವಗತ "ನಾನ್ಯಾರು.. " ಈ ಸಂಭಾಷಣೆ ಬಗ್ಗೆ ಹೇಳಿ.. "

ಚಿತ್ರಕೃಪೆ : ಗೂಗಲೇಶ್ವರ 
ಅಣ್ಣಾವ್ರು: ಶ್ರೀ.. ನಮ್ಮ ಉದಯಶಂಕರ್ ಇದ್ದಾರಲ್ಲ ಮಹಾನ್ ಪ್ರತಿಭೆ.. ಸುಮಾರು ಎರಡೂ ಮೂರು ಪುಟಗಳ ಸಂಭಾಷಣೆ ಬರೆದೆ ಬಿಟ್ಟರು.. ಅದನ್ನು ಉರು ಹೊಡೆದೆ... ಉದಯಶಂಕರ್, ವರದಪ್ಪ, ನಿರ್ದೇಶಕ ವಿಜಯ್ ಎಲ್ಲರ ಜೊತೆ  ಆ ಸಂಭಾಷಣೆಯಲ್ಲಿ ಬೇಕಾದ  ಏರಿಳಿತದ ಬಗ್ಗೆ ಚರ್ಚಿಸಿದೆವು.. ಶೂಟಿಂಗ್ ದಿನ ಬಂದೆ ಬಿಟ್ಟಿತು.. ಅಪ್ಪನ ಫೋಟೋಗೆ ನಮಸ್ಕಾರ ಮಾಡಿ.. "ಅಪ್ಪಾಜಿ ಈ ದೃಶ್ಯ ಚೆನ್ನಾಗಿ ಬರುವ ಹಾಗೆ ಆಶೀರ್ವದಿಸಿ.." ಎಂದೇ.. ಇಡೀ ಸಿನಿಮಾದ ಪ್ರತಿ ದೃಶ್ಯದ ಚಿತ್ರೀಕರಣಕ್ಕೂ ಮುನ್ನ ಅಪ್ಪಾಜಿಯ  ಆಶೀರ್ವಾದ ತೆಗೆದುಕೊಳ್ಳುವುದು ಇದ್ದೆ ಇತ್ತು.. ಆದರೆ ನಿರ್ದೇಶಕ ವಿಜಯ್ ಹೇಳಿದ್ದರು ಅಣ್ಣಾವ್ರೇ ಈ ದೃಶ್ಯ  ಚಿತ್ರದ ಹೈ ಲೈಟ್ ಆಗುತ್ತೆ ಅಂತ...


ಚಿತ್ರಕೃಪೆ : ಗೂಗಲೇಶ್ವರ 

ಶ್ರೀ: ಹೌದು ಅಣ್ಣಾವ್ರೇ ಇದು ಅದ್ಭುತ ಸಂಭಾಷಣೆ.. ಮಯೂರ, ಜೀವನ ಚೈತ್ರ, ಕವಿರತ್ನ ಕಾಳಿದಾಸ, ರಣಧೀರ ಕಂಠೀರವ, ಶ್ರೀ ಕೃಷ್ಣದೇವರಾಯ ಮುಂತಾದ ಚಿತ್ರಗಳ ಉದ್ದುದ್ದ ಸಂಭಾಷಣೆ ಕೇಳಿದ್ದೇವೆ ನೋಡಿದ್ದೇವೆ, ಖುಷಿ ಪಟ್ಟಿದ್ದೇವೆ.. ಈ  ಚಿತ್ರದ ಸಂಭಾಷಣೆ ಅದ್ಭುತ.. ಅದರಲ್ಲೂ ನಿಮ್ಮ ಬಾಡಿ ಲ್ಯಾಂಗ್ವೇಜ್ ಇದೆಯಲ್ಲ ಅಬ್ಬಬ್ಬಾ ಎನಿಸುತ್ತದೆ, ಇದೆ ಅಣ್ಣಾವ್ರ ಬೇಡರಕಣ್ಣಪ್ಪದಿಂದ ಇಲ್ಲಿಯ ತನಕ ನೋಡಿದ್ದು ಅನಿಸುತ್ತದೆ..

ಅಣ್ಣಾವ್ರು:ಹೌದು ಶ್ರೀ.. ನಾ ನನ್ನ ಚಿತ್ರಗಳನ್ನಾಗಲಿ ದೃಶ್ಯಗಳನ್ನಾಗಲಿ ನೋಡೋಲ್ಲ .. ಮಂತ್ರಾಲಯ ಮಹಾತ್ಮೆ ಒಂದೇ ಇಷ್ಟ ಪಟ್ಟು ನೋಡೋದು.. ಆದರೆ ಈ ದೃಶ್ಯ ಅಪ್ಪಾಜಿಯೇ ನನ್ನ  ಒಳಗೆ ನುಗ್ಗಿ ಅಭಿನಯಿಸಲು ಸ್ಫೂರ್ತಿ ತುಂಬಿದ್ದರು.. ಹಾಗಾಗಿ ಅದರ ಶ್ರೇಯಸ್ಸು ಅಪ್ಪಾಜಿಗೆ..

ಶ್ರೀ: ಅಣ್ಣಾವ್ರೇ ಈ ನಿಮ್ಮ ವಿನಯ, ಸರಳತೆ, ಪಾತ್ರಕ್ಕೆ ಬೇಕಾಗುವ ಶ್ರದ್ಧೆ ಇದೆ ನಿಮ್ಮನ್ನು ಇಷ್ಟು ಎತ್ತರಕ್ಕೆ ಕೂರಿಸಿದೆ.. ನಿಮ್ಮ ಈ ಗುಣವೇ ನಮಗೆ ಮಾರ್ಗದರ್ಶಿ..

ಅಣ್ಣಾವ್ರು: ಏನೋಪ್ಪ ನೀವೆಲ್ಲ  ಅಭಿಮಾನಿ ದೇವರುಗಳು .. ಈ ರಾಜಕುಮಾರನನ್ನು ಹೀಗೆ ನೋಡಬೇಕು ಎಂದು ಬಯಸಿದಿರಿ ಹಾಗೆ ಆಯಿತು ಅಷ್ಟೇ ..  ಸರಿ ಕಣಪ್ಪ ನಾ ಹೋಗಿ ಬರುತ್ತೇನೆ.. ಮತ್ತೆ ಸಿಗುತ್ತೇನೆ..

ಶ್ರೀ : ಅಣ್ಣಾವ್ರೇ ಜನುಮದಿನಕ್ಕೆ ಶುಭಾಶಯಗಳು ನಿಮ್ಮ ಆಶೀರ್ವಾದ ಕರುನಾಡ ಚಿತ್ರರಸಿಕರ ಸದಾ ಇರಲಿ..

****
ಈ ಬರಹ ಕಾಲ್ಪನಿಕ.. ಭಕ್ತ ಪ್ರಹ್ಲಾದ ಚಿತ್ರದ ಈ ಸಂಭಾಷಣೆ ಕೇಳಿದಾಗೆಲ್ಲ.. ನೋಡಿದಾಗೆಲ್ಲ ಈ ರೀತಿ ಇರಬಹುದೇ .. ಅನಿಸುತ್ತದೆ.. ಪ್ರತಿ ಯುಗಕ್ಕೂ ವಿಷ್ಣು ಅವತಾರ ಎತ್ತಿದ ಹಾಗೆ.. ಚಿತ್ರರಸಿಕರ ಮನವನ್ನು ಸೂರೆಗೊಳ್ಳಲು ಎತ್ತಿದ ಅವತಾರವೇ ಅಣ್ಣಾವ್ರು ಅರ್ಥಾತ್ ಕರುನಾಡಿನ ರಾಜಕುಮಾರ್..

3 comments:

  1. ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟೊಂದು ವೈವಿದ್ಯಮಯ ವಾದ ಪಾತ್ರಗಳಲ್ಲಿ ನಟಿಸಿದ ನಟ ಬೇರೊಬ್ಬರು ಇರಲಾರರು.

    ನೆಚ್ಚಿನ ಅಣ್ಣಾವ್ರ ಜನುಮದಿನದಂದು ನೀವು ಪ್ರಸ್ತುತಪಡಿಸಿದ ಈ ಲೇಖನ ಮುದಕೊಟ್ಟಿತು.

    ReplyDelete
  2. ಅಣ್ಣಾವ್ರ ನಟನೆಗೆ ಸಾಟಿ ಯಾರುಂಟು ?? ಅದ್ಭುತ ಅನುಭವ ಅದು.ಪ್ರತಿ ಬಾರಿ ಅವರ ಚಲನಚಿತ್ರ ನೋಡಿದಾಗಲೂ ಮೈ ರೋಮಾಂಚನ ಆಗುತ್ತದೆ.ನಿಜವಾದ ಮಾಸ್ಟರ್ ಪೀಸ್ ಅವರು...

    ನಿಮ್ಮ ಪದಗುಚ್ಛ ಅವರ ಮೇಲಿನ ಅಭಿಮಾನ ಇನ್ನೂ ಜಾಸ್ತಿ ಮಾಡಿತು.. ನಿಮಗೆ ಅವರ ಮೇಲೆ ಇರೋ ಪ್ರೀತಿಗೆ 🙏

    ReplyDelete
  3. ಶ್ರೀಕಾಂತ್ ಮಂಜುನಾಥ್ ನಮಸ್ಕಾರ🙏

    ನಿಮ್ಮ ಬರವಣಿಗೆ ಅದ್ಭುತ ಹಾಗೂ ಸ್ಪೂರ್ತಿಯಿಂದ ಕೂಡಿದೆ..
    ಮನಸ್ಸಿಗೆ ಬಹಳ ಸಂತೋಷ ಸಿಕ್ಕ ಅನುಭವ

    ReplyDelete