Sunday, April 12, 2020

ಅಣ್ಣಾವ್ರ ಸಹನಟರ ಬಗ್ಗೆ ಅನಿಸಿಕೆ... ಪುಣ್ಯ ದಿನ 2020

ವರ್ಷಗಳು ಕಳೆದೆ ಹೋಯ್ತು ..  ಕಳೆದದ್ದು ಕಾಲವೇ ಹೊರತು ಅಣ್ಣಾವ್ರ ನೆನಪಲ್ಲ.. ಕರುನಾಡ ಚಿತ್ರರಸಿಕರ ಹೃದಯದಲ್ಲಿ ಸದಾ ರಾರಾಜಿಸುತ್ತಿರುವ ಅಣ್ಣಾವ್ರ ನೆನಪಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ..

ಕನ್ನಡ ಭಾಷೆ ಇರುವವರೆಗೆ.. ಚಲನ ಚಿತ್ರ ಎನ್ನುವ ಪದ ಇರುವವರೆಗೆ ಅಣ್ಣಾವ್ರು ಅಜರಾಮರ.. 

ಅಣ್ಣಾವ್ರನ್ನು ಮಾತಾಡಿಸಬೇಕೆಂಬ ಹಂಬಲ ಆಸೆಯಾಗಿ ಉಳಿಯಿತು.. ಆದರೆ ದೂರದಿಂದ ಅವರನ್ನು ಕಣ್ಣ ತುಂಬಾ ತುಂಬಿಕೊಂಡಿದ್ದು.. ಮತ್ತೆ ಆಗಾಗ ಮನದ ಜೊತೆ ಮಾತಾಡುತ್ತಲೇ ಇರುವ ನನಗೆ ಅಣ್ಣಾವ್ರು ಅಂದರೆ ಇಲ್ಲೇ ಪಕ್ಕದಲ್ಲಿ ಇದ್ದಾರೆ ಎನ್ನಿಸುವಷ್ಟು ಹತ್ತಿರ ಅಂತ ಭಾಸವಾಗುತ್ತದೆ... ..

ಅವರ ಸಹನಟರ ಬಗ್ಗೆ ಅವರ ಮಾತುಗಳಲ್ಲಿಯೇ ಬರೆಯಬೇಕು ಅನಿಸಿತು.. ಇದು ಕಾಲ್ಪನಿಕವಾದರೂ ಅವರ ಚಿತ್ರಗಳನ್ನು ನೋಡಿ ಅವರ ಸಹನಟರ ಬಗ್ಗೆ ಅವರ ಅನಿಸಿಕೆ ಇದು ಇರಬಹುದು ಎನ್ನುವ  ಒಂದು ಚಿಕ್ಕ ಪ್ರಯತ್ನ.. 


ನಾಗಪ್ಪ : 



ನನ್ನ ಸಾಮಾಜಿಕ ಚಿತ್ರಗಳು ಶುರುವಾದಾಗ ಕೇಡಿ ಅಂದರೆ ನಾಗಪ್ಪ.. ಮುಖದ ಮೇಲೆ ಸಾಮಾನ್ಯ ಒಂದು  ಚುಕ್ಕೆ... ದೊಗಳೆ ಜುಬ್ಬಾ.. ಬಾಯಲ್ಲಿ ಬೀಡಿ.. ಪಟ್ಟೆ ಪಟ್ಟೆ ತುಸು ವಿಚಿತ್ರವಾಗಿ ಕಟ್ಟಿಕೊಂಡಿರುವ ಲುಂಗಿ.. ಗಡುಸು ಮಾತು.. ಇದು ಸಾಮಾನ್ಯ ಇವರ ವೇಷಭೂಷಣ.. ನೋಡೋಕೆ ತೆಳ್ಳಗಿದ್ದರೂ ಅವರ ಕೇಡಿ ಪಾತ್ರಗಳ ಅಭಿನಯ ಆ ಕಾಲಕ್ಕೆ ಎದೆಯನ್ನು ಝಲ್ ಎನಿಸಿತ್ತು.. ಹೊರಗಡೆ ಮೃದು ಮಾತು ಆದರೂ ಪಾತ್ರ ಅಂತ ಬಂದಾಗ ಅಕ್ಷರಶಃ ನಡುಗಿಸುತ್ತಿದ್ದರು. 

ದಿನೇಶ್:


ಇವರು ಮುಂದೆ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದರೂ ಆರಂಭದ ದಿನಗಳಲ್ಲಿ ಖಳನಾಯಕ ಅಂದ್ರೆ ಇವರೇ.. ಹಾವಭಾವ, ಮಾತು, ವೇಷಭೂಷಣ ಎಲ್ಲವೂ ಮಾಮೂಲಿ.. ನಡುಗಿಸುವ ಮಾತುಗಳಾಗಲಿ.. ಹೊಡೆದಾಟವಾಗಲಿ ಇವರ ಪಾತ್ರಗಳಲ್ಲಿ ಇರುತ್ತಿರಲಿಲ್ಲ.. ಆದರೆ ಅವರ ಪಾತ್ರ ಪ್ರವೇಶ ಸೊಗಸಾಗಿರುತ್ತಿತ್ತು.. ಕೆಂಡವನ್ನು ಮಂಜಿನ ಪೊಟ್ಟಣದಲ್ಲಿ ಇಟ್ಟುಕೊಂಡಂತಹ ಖಳ ಪಾತ್ರಾಭಿನಯ ಇವರದಾಗಿರುತಿತ್ತು.. 

ಎಚ್ ಆರ್ ರಾಮಚಂದ್ರಶಾಸ್ತ್ರಿ:



ಮನೆಯಲ್ಲಿ ಹಿರಿಯರೊಬ್ಬರು ಇದ್ದರೇ ಹೀಗಿರಬೇಕು ಎನ್ನಿಸುವಷ್ಟು ಹತ್ತಿರವಾಗಿದ್ದವರು.. ಚಿತ್ರರಂಗಕ್ಕೆ ಬರುವಷ್ಟರಲ್ಲಿಯೇ ಅರ್ಧ ಶತಕ ದಾಟಿದ್ದರೂ.. ಅಭಿನಯಕ್ಕೆ ವಯಸಾಗಿರಲಿಲ್ಲ.. ನನ್ನ ಹಲವಾರು ಚಿತ್ರಗಳಲ್ಲಿ ಇವರ ಅಭಿನಯ  ಸೊಗಸು.. ಇವರ ಭಾಷಾಪ್ರಯೋಗ, ಉಚ್ಚಾರಣೆ, ಮುಖಾಭಿನಯ ಇವರಿಂದ ನಾ ಕಲಿತಿದ್ದೆ.. 

ಶನಿಮಹಾದೇವಪ್ಪ :



ಇವರಿಗೆ ಶಿವಪ್ರಕಾಶ ಅಂತಾನೂ ಕೆಲವು ಚಿತ್ರಗಳಲ್ಲಿ ಹೆಸರಿತ್ತು ಅಂತಕೇಳಿದ್ದೆ ..ಇವರ ಕಂಚಿನ ಕಂಠ ನನಗೆ  ಬಲು ಇಷ್ಟ.. ನನ್ನ ಚಿತ್ರಜೀವನದ ಆರಂಭದ ದಿನಗಳಿಂದಲೂ ಒಂದಲ್ಲ ಒಂದು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ನನಗೆ ಹತ್ತಿರವಾದರು.. ನಂತರ ನಮ್ಮದೇ ಚಿತ್ರನಿರ್ಮಾಣ ಸಂಸ್ಥೆ ಆರಂಭವಾದ ಮೇಲೆ.. ನನ್ನ ಪ್ರತಿ ಚಿತ್ರದಲ್ಲಿಯೂ ಒಂದಲ್ಲ ಒಂದು ಪಾತ್ರವಿದ್ದೇ ಇರುತಿತ್ತು.. ನನಗೆ ಇವರ ಉತ್ತಮ ಚಿತ್ರ ಅನಿಸಿದ್ದು.. ಡಿಂಡಿಮ ಕವಿಯಾಗಿ ಕವಿರತ್ನ ಕಾಳಿದಾಸ.. ಅದ್ಭುತ ಸಂಭಾಷಣೆಯನ್ನು ಅಷ್ಟೇ ಸೊಗಸಾಗಿ ಹೇಳಿ ಅದಕ್ಕೆ ತಕ್ಕ ಅಭಿನಯ ಕೊಟ್ಟಿದ್ದಾರೆ.. 

ಹೊನ್ನವಳ್ಳಿ ಕೃಷ್ಣ:



ಇವರು ಚಿತ್ರರಂಗದಲ್ಲಿ ಮಾಡದ ಕೆಲಸವೇ ಇಲ್ಲ .. ಸರಿ ಸುಮಾರು ನನ್ನ ಅರ್ಧ ಆಯಸ್ಸಷ್ಟು ವರ್ಷ ಇವರು ನನ್ನ ಜೊತೆ  ತಮ್ಮ ಕೈಲಾದ ಕೆಲಸ ಮಾಡುತ್ತಾ ನಮ್ಮ ಕುಟುಂಬದವರೇ  ಆಗಿ ಬಿಟ್ಟಿದ್ದಾರೆ.. 
ನಟ, ಸಂಭಾಷಣೆ ನಿರ್ದೇಶನ, ಸಹ ನಿರ್ದೇಶನ ಜೊತೆಯಲ್ಲಿ ನಿಮ್ಮೆಲ್ಲರ ಅಭಿಮಾನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಾಲನಟನಾಗಿದ್ದಾಗ ತಿದ್ದಿ ತೀಡಿದ ಖ್ಯಾತಿ ಇವರದ್ದು... ಖಳನಟ, ಪುಟ್ಟ ಪಾತ್ರ, ಹಾಸ್ಯ ಪಾತ್ರ ಯಾವುದಕ್ಕೂ ಸೈ.. ಅಣ್ಣ ನಿಮ್ಮ ಜೊತೆ ನಾ ಇರಬೇಕು ಅಭಿನಯಿಸಬೇಕು ಅಷ್ಟೇ ಅನ್ನುತ್ತಾ ನನ್ನ ಜೀವನದ ಬಹುಭಾಗದಲ್ಲಿ ಇವರು ನನ್ನ ಜೊತೆಗಿದ್ದರು

ಸಂಪತ್:


ಅಪ್ಪನ ಪ್ರತಿಕೃತಿ ಅಂದರೆ ತಪ್ಪಿಲ್ಲ.. ನನ್ನ ಹಲವಾರು ಚಿತ್ರಗಳಲ್ಲಿ ಅಪ್ಪನ ಪಾತ್ರ ಮಾಡಿದ್ದಾರೆ.. ಅದರಲ್ಲೂ ಬಡವರ ಬಂಧು ಚಿತ್ರ ನನಗೆ ಅಚ್ಚು ಮೆಚ್ಚು.. ಖಳಪಾತ್ರದಲ್ಲಿದ್ದರೂ ಸರಿ, ಪೋಷಕಪಾತ್ರದಲ್ಲಿದ್ದರೂ ಸರಿ.. ಇವರಿಂದ ಕಲಿತದ್ದು ಅಪಾರ.. ಇಂಗ್ಲಿಷ್  ಸಂಭಾಷಣೆ ಎಂದರೆ ನನಗೆ ಕಬ್ಬಿಣದ ಕಡಲೆ.. ಆದರೆ ಇವರಿಗೆ ನಿರರ್ಗಳ.. ನನಗೆ ಇಂಗ್ಲಿಷ್ ಸಂಭಾಷಣೆ ಮತ್ತು ಉಚ್ಚಾರಣೆಯನ್ನು ಹೇಳಿಕೊಟ್ಟ ಮೇಷ್ಟ್ರು ನನಗೆ.. ಅದ್ಭುತ ಅಭಿನಯ ಇವರದ್ದು ಮತ್ತು ಇವರ ಧ್ವನಿ ಬಲು ಇಷ್ಟ.. ಅವರ ಜೀವಿತದ ಅಂತ್ಯದವರೆಗೂ ನಾ ಇವರ ಜೊತೆ ಅಭಿನಯಿಸಿದ್ದೆ ಎನ್ನುವುದು ನನಗೆ ಹೆಮ್ಮೆ.

ಶಾಂತಮ್ಮ:



ಸೌಮ್ಯ ರೂಪಿ.. ಇವರ ಮಾತು ಅಷ್ಟೇ ಮೃದು.. ಕಾಮನಬಿಲ್ಲಿನಲ್ಲಿ ನನ್ನ ತಾಯಿ ಪಾತ್ರ.. ಅದರಲ್ಲಿ ಮಾತ್ರ ತುಸು ಕಠಿಣವಾಗಿ ಮಾತಾಡಿದ್ದು ನೋಡಿದ್ದು.. ತುಂಬಾ ಸಹನೆಯ ಮೂರ್ತಿ ಇವರು.. ಉತ್ತಮ ನಟಿ ಕೂಡ.. ನಮ್ಮ ಮನೆಯಲ್ಲಿಯೇ ಅನೇಕ ವರ್ಷಗಳು ಇದ್ದರು ಮತ್ತು ನಮ್ಮನ್ನು ಆಶೀರ್ವದಿಸಿದ್ದರು.. 

ಪಾಪಮ್ಮ:


ಕುಟಿಲ ಹೆಂಗಸು ಹೇಗಿರುತ್ತಾರೆ..ನೋಡಬೇಕೆ.. ಚಂದವಳ್ಳಿಯ ತೋಟ ನೋಡಿ.. ನನಗೆ ಅಚ್ಚರಿಯಾಗುತಿತ್ತು.. ಯಪ್ಪಾ ಈ ವಮ್ಮ ಅದೆಂಗೆ ಆ ರೀತಿಯ ಅಭಿನಯ ಮಾಡುತ್ತಾರೆ ಅಂತ. ಸಂಭಾಷಣೆ, ಆಂಗೀಕ ಅಭಿನಯ.. ನನ್ನ ಸುಮಾರು ಚಿತ್ರಗಳಲ್ಲಿ ಮನೆ ಮನ ಒಡೆಯುವ ಪಾತ್ರಗಳನ್ನೇಮಾಡುತಿದ್ದ ಇವರಿಗೆ ಧ್ರುವತಾರೆ ಚಿತ್ರದಲ್ಲಿ ಒಂದು ಸೌಮ್ಯ ಪಾತ್ರ ಒದಗಿತ್ತು.. ಆ ಸಿನಿಮಾದಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದ ನನಗೆ ಅಪ್ಪ ಅಮ್ಮನಾಗಿ ಇವರು ಮತ್ತು ದೊಡ್ಡಯ್ಯನ ಪಾತ್ರಧಾರಿ ಪ್ರೀತಿ ತೋರಿಸಿರುತ್ತಾರೆ.. ಅವರ ಮನೆಗೆ ಬಂದಾಗ.. ಊಟಕ್ಕೆ ಏನಾದರೂ ಕೊಡು ಅಂತ ಆಕೆಯ ಪತಿ ಸನ್ನೆ ಮಾಡುತ್ತಾರೆ.. ಊಟ ತಂದುಕೊಡುವ ಈಕೆ.. ತಿನ್ನಿಸಲಾ ಅಂದಾಗ ನಿಜವಾಗಿಯೂ ನನ್ನ  ಕಣ್ಣಲ್ಲಿ ನೀರು ಬಂದಿತ್ತು.. ಸೊಗಸಾದ ಅಭಿನಯ 

 ಅಶ್ವಥ್ ನಾರಾಯಣ:



ಇವರು ಉತ್ತಮ ಸಹ ನಟ.. ಪಾತ್ರ ಚಿಕ್ಕದಾದರೇನು ನನ್ನ ಅಭಿನಯ ನನಗೆ ಎನ್ನುತ್ತಾ ಸಹನಟ, ಹಾಸ್ಯ ನಟ, ಖಳ ನಟ.. ಹೀಗೆ ಹತ್ತಾರು [ಪಾತ್ರಗಳಲ್ಲಿ ಮಿಂಚಿದ್ದ ಇವರ ಪಾತ್ರ ನನಗೆ ತುಂಬಾ ಇಷ್ಟವಾಗಿದ್ದು ಮನೆ ಮುರುಕನ ಪಾತ್ರದಲ್ಲಿ ಚಂದವಳ್ಳಿಯ ತೋಟ ಮತ್ತು ಅಷ್ಟೇ ಮಮತೆ ಮಿಡಿಯುವ ಶೆಟ್ಟರ ಪಾತ್ರ ಕಾಮನಬಿಲ್ಲು ಚಿತ್ರದಲ್ಲಿ.. ಅನೇಕ ಉತ್ತಮ ಹಾಸ್ಯ ಸನ್ನಿವೇಶಗಳಲ್ಲಿಯೂ ಇವರು ಎತ್ತಿದ ಕೈ.. ಇವರಿಗೆ ತುಂಬಾ ಒಪ್ಪುತ್ತಿದ್ದ ಪಾತ್ರ ದೇವಸ್ಥಾನದ ಅರ್ಚಕರದ್ದು.

ಜೋಕರ್ ಶ್ಯಾಮ್:



ಈ ನಟ ಹೆಸರಿದ್ದ ಹಾಗೆ ಹಾಸ್ಯ ನಟ.. ಬಂಗಾರದ ಮನುಷ್ಯದ ಪುಟ್ಟ ಪಾತ್ರ, ಬಡವರಬಂಧು ಚಿತ್ರದುದ್ದಕ್ಕೂ ನನ್ನ ಜೊತೆ ಇದ್ದ ಪಾತ್ರ, ಸಂಪತ್ತಿಗೆ ಸವಾಲ್ ಚಿತ್ರದ ಸ್ನೇಹಿತ ಹೀಗೆ ಹತ್ತಾರು ಚಿತ್ರಗಳಲ್ಲಿ ಇವರ ಜೊತೆ ಅಭಿನಯಿಸಿದ್ದ ತೃಪ್ತಿ ನನಗೆ.. ಇವರ ಕೀರಲು ಧ್ವನಿ ಜೊತೆಗೆ ಹಾಸ್ಯ ಪ್ರಜ್ಞೆ  ಇವರನ್ನು ಉತ್ತಮ ನಟನನ್ನಾಗಿ ಮಾಡಿತ್ತು.. 


ಶ್ರೀ ಇವರೆಲ್ಲರ ಜೊತೆ ಅಭಿನಯಿಸುವ ಪುಣ್ಯ ನನಗೆ.. ನಮ್ಮ  ಸರ್ವಜ್ಞರ ಪದ ನೆನಪಿಗೆ ಬಂತು 

ಸರ್ವಜ್ಞನೆಂಬುವನು ಗರ್ವದಿಂದಾದವನೆ?|
ಸರ್ವರೊಳಗೊಂದು ನುಡುಗಲಿತು ವಿದ್ಯೆಯ|

ಪರ್ವತವೇ ಆದ ಸರ್ವಜ್ಞ||

 ಈ ಎಲ್ಲಾ ನಟ ನಟಿಯರ ಅಭಿನಯ ನೋಡಿ ನೋಡಿ ಕಲಿತದ್ದು ಹೆಚ್ಚು.. ಚಿತ್ರರಸಿಕರು  ನಟಸಾರ್ವಭೌಮ  ಅಂತ ಕೊಟ್ಟಿರುವ ಬಿರುದು  ಮೇಲೆ ಹೇಳಿದವರಿಗೆ ಮತ್ತು ನನ್ನ ಜೊತೆ ನಟಿಸಿದ ನಟ ನಟಿಯರು, ನನ್ನ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರಿಗೆ ಸೇರಬೇಕು..

ಇಷ್ಟು ಹೇಳುತ್ತಾ ಶ್ರೀ.. ನಾ ಹೇಳಬೇಕಾದ್ದು ಹೇಳಿದೆ.. ನಾ ಹೋಗಿ ಬರುತ್ತೇನೆ.. ಕನ್ನಡ ಚಿತ್ರಗಳನ್ನು ನೋಡುತ್ತಾ ಈ ಕೊರೋನಾ ಎನ್ನುವ ಮಹಾಮಾರಿಯಿಂದ ನಿಮಗೆ ಒಂದಷ್ಟು ಬಿಡುವು ಸಿಕ್ಕಿದೆ.. ಕುಟುಂಬದ ಜೊತೆಯಲ್ಲಿ ಕಳೆಯಿರಿ, ನಲಿಯಿರಿ.. ಮತ್ತೆ ಹನ್ನೆರಡು  ದಿನ ಬಿಟ್ಟು ಬರುತ್ತೇನೆ.. !

******
ಅಣ್ಣಾವ್ರ ಈ ಪುಣ್ಯದಿನಕ್ಕೆ ಲೇಖನ ಬರೆಯಬೇಕೆಂಬ ಹಂಬಲ ಬಂದಾಗ.. ಅರೆ ಅಣ್ಣಾವ್ರ ಜೊತೆ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿರುವ ಕೆಲವು ನಟರ ಬಗ್ಗೆ ಬರೆಯೋಣ ಎಂದು ಅನಿಸಿದಾಗ ಮೂಡಿದ್ದು ಈ ಲೇಖನ..

ಅಣ್ಣಾವ್ರ ನೆನಪು ಸದಾ ಹಸಿರು.. !

No comments:

Post a Comment