Sunday, April 19, 2020

ಮುಂದಿನ ದಿನಗಳ ಟ್ರೈಲರ್ ನಾಗಾರ್ಜುನ (1961) (ಅಣ್ಣಾವ್ರ ಚಿತ್ರ ೨೫ / ೨೦೭)

ಬದುಕು ಒಂದು ಹೂವಿನ ಹಾಗೆ.. ಅನ್ನುವ ಮಾತಿನಂತೆ.. ನಮ್ಮ ಬದುಕು ನಮಗೆ ಅರಿವಿಲ್ಲದೆ ಮುಂದಿನ ಕಾಲದಲ್ಲಿ ನೆಡೆಯುವ ಘಟನೆಗಳ ಝಲಕ್ ತೋರಿಸುತ್ತದೆ..



ರಾಜ್ ಅವರ ರಜತ ಸಂಭ್ರಮದ ಚಿತ್ರವಿದು (ನನ್ನ ಬಳಿ ಇರುವ ಚಿತ್ರಗಳ ಪಟ್ಟಿಯ ಪ್ರಕಾರ). ಈ ಕಳೆದ ೨೪ ಚಿತ್ರಗಳನ್ನು ನೋಡಿದಾಗ ನನಗೆ ಅನಿಸಿದ್ದು ರಾಜ್ ಕುಮಾರ್ ಅವರಿಗೆ ಈ ರೀತಿಯ ಪಾತ್ರಗಳು ಕರತಲಾಮಲಕವಾಗುತ್ತಿದೆ ಎಂದು.. ಆದರೂ ೨೪ ಚಿತ್ರಗಳು ವಿಭಿನ್ನ ಮತ್ತು ಅವರ ಅಭಿನಯ ಒಂದಕ್ಕಿಂತ ಒಂದು ವಿಭಿನ್ನ ಜೊತೆಯಲ್ಲಿ ಅರೆ ರಾಜ್ ಕುಮಾರ್ ಅವರು ಆ ಚಿತ್ರದಲ್ಲಿ ಈ ರೀತಿಯ ಅಭಿನಯ ನೀಡಿದ್ದಾರೆ ಅನ್ನುವ ಹಾಗೆ ಇಲ್ಲ..  ಒಂದರ ಪಕ್ಕದಲ್ಲಿ ಒಂದು ಇಟ್ಟರೆ ಎಲ್ಲವೂ ಇಸ್ಪೀಟು ಎಳೆಗಳ ಹಾಗೆ ಬೇರೆ ಬೇರೆ..


ವೈ ವಿ ರಾವ್ ಅವರು ಪೌರಾಣಿಕ ಕಥೆಯಾಧರಿಸಿದ ಈ ಚಿತ್ರವನ್ನು ಲೀಲಾಜಾಲವಾಗಿ ನಿರ್ದೇಶಿಸಿದ್ದಾರೆ..
ಮೂಲಕತೆ ತಾಂಡ ಸುಬ್ರಮಣ್ಯಂ ಅವರದ್ದು..
ಅದಕ್ಕೆ ಹಾಡುಗಳು ಮತ್ತು ಸಂಭಾಷಣೆಯ ಹೊಣೆಗಾರಿಕೆ ಹುಣಸೂರು ಕೃಷ್ಣಮೂರ್ತಿಯವರದ್ದು.. ಇವರ ಜೊತೆ ಹಾಡುಗಳಿಗೆ ಮತ್ತೆ ಪದ್ಯಗಳಿಗೆ ಹಸ್ತ ಜೋಡಿಸಿದವರು ವಿಜಯನಾರಸಿಂಹ..  ಛಾಯಾಗ್ರಹಣ ಎನ್ ಪ್ರಕಾಶ್ ಮತ್ತು ಸಂಗೀತ ರಾಜನ್ ನಾಗೇಂದ್ರ.. ಮೊದಲ ಬಾರಿಗೆ ರಾಜ್ ಕುಮಾರ್ ಚಿತ್ರಗಳಿಗೆ ಕಾಲಿಟ್ಟಿದ್ದಾರೆ..
ಈ ಚಿತ್ರಕ್ಕೆ ಅಗತ್ಯವಿದ್ದೆಡೆ ಉದ್ದುದ್ದ ಹಾಡುಗಳ ಬದಲಿಗೆ ಪದ್ಯಗಳನ್ನು ಬಳಸಿಕೊಳ್ಳಲಾಗಿದೆ, ಆ ಪದ್ಯಗಳಿಗೆ ಸಂಗೀತ ಕೊಟ್ಟವರು ಜಂಧ್ಯಾಲ ಲಕ್ಷ್ಮೀನಾರಾಯಣ..
ಪಿ ಬಿ ಶ್ರೀನಿವಾಸ್, ಮಾಧವ, ಎಂ ಎಸ್ ರಾಮರಾವ್, ಪೀಠಾಪುರಂ, ಟಿ ಶ್ರೀ ರಾಮುಲು, ಅಪ್ಪಾರಾವ್, ನಾಗೇಂದ್ರನ್, ರಾಮಚಂದ್ರ ಶರ್ಮ, ಕೆ ಎಸ್ ಮಲ್ಲಿಕಾರ್ಜುನ ಹೀಗೆ ಗಾಯಕರ ದಂಡೇ ಇದೆ..

ಪರಿಚಿತ ನಟ ನಟಿಯರಲ್ಲಿ ರಾಜ್ ಕುಮಾರ್, ಹರಿಣಿ, ನರಸಿಂಹರಾಜು, ವಿ ನಾಗಯ್ಯ,ರಮಾದೇವಿ, ಅಶ್ವಥ್ ಮತ್ತು ಸಹನಟರಲ್ಲಿ ಅನೇಕ ಕಲಾವಿದರಿದ್ದಾರೆ..

ಇದೊಂದು ಮಹಾಭಾರತ ಎನ್ನುವ ಕಡಲಿಂದ ಎತ್ತಿ ತಂದ ಒಂದೆರಡು ಮುತ್ತುಗಳನ್ನು ಪೋಣಿಸಿದ ಚಿತ್ರ..

ದ್ರೌಪದಿಯನ್ನು ಮದುವೆಯಾದ ಪಾಂಡವರು ನಾರದರ ಸಲಹೆಯಂತೆ ಒಬ್ಬೊಬ್ಬರ ಬಳಿ ಒಂದು ವರ್ಷ ಇರುವುದು ಎಂದು, ಅವರ ಏಕಾಂತಕ್ಕೆ ಯಾವ ಪಾಂಡವನೇ ಆಗಲಿ ಭಂಗ ಪಡಿಸಿದರೆ, ಒಂದು ವರ್ಷ ತೀರ್ಥಯಾತ್ರೆ ಹೋಗಬೇಕೆಂದು ನಿಗದಿಯಾಗಿರುತ್ತದೆ..

ಪಾಂಡವರ ರಾಜ್ಯದಲ್ಲಿ ಕಳ್ಳಕಾಕರರ ಭಯ ಇಲ್ಲದೆ ಇದ್ದರೂ, ಲೋಕ ಕಲ್ಯಾಣಕ್ಕಾಗಿ ನೆಡೆಯುವ ಗೋವುಗಳ ಅಪಹರಣ ಘಟನೆ ಕತೆಗೆ ತಿರುವು ಕೊಡುತ್ತದೆ.. ಅದನ್ನು ರಕ್ಷಿಸಲು ಶಸ್ತ್ರಾಗಾರಕ್ಕೆ ಹೋಗುವಾಗ ಧರ್ಮರಾಯ ಮತ್ತು ದ್ರೌಪದಿ ಏಕಾಂತದಲ್ಲಿ ಇದ್ದುದ್ದನ್ನು ನೋಡಿ.. ಗೋವುಗಳನ್ನು ರಕ್ಷಿಸಿದ ಮೇಲೆ.. ಅರ್ಜನ ತೀರ್ಥಯಾತ್ರೆಗೆ ಹೋಗುತ್ತಾನೆ.. ಹಾದಿ ಮಧ್ಯ.. ರಾಮ ಮೇಲು.. ಕೃಷ್ಣ ಮೇಲು ಎನ್ನುವ ಪುಟ್ಟ ಅಹಂ ತುಂಬಿದ ಘಟನೆ ಅರ್ಜುನ ಮತ್ತು ಹನುಮಂತನ ಮಧ್ಯೆ ನೆಡೆಯುತ್ತದೆ.. ಇಬ್ಬರಿಗೂ ತಮ್ಮ ತಪ್ಪಿನ ಅರಿವಾದ ಮೇಲೆ.. ಮುಂದೆ ನೆಡೆಯುವ ಯುದ್ಧದಲ್ಲಿ ಹನುಮಂತನಿಗೆ ಪಾಂಡವರಿಗೆ ಸಹಾಯ ಮಾಡುವಂತೆ ರಾಮನಾಗಿ ಕೃಷ್ಣ ಹೇಳುತ್ತಾನೆ..



ಅರ್ಜುನ ಸೌಂದರ್ಯ ನೋಡಿದ ನಾಗಕನ್ಯೆ ಉಲೂಚಿ ಅವನನ್ನು ಅಪಹರಿಸಿ, ಗಾಂಧರ್ವ ರೀತಿಯಲ್ಲಿ ಕೂಡುತ್ತಾಳೆ.. ಅದಕ್ಕೆ ಫಲವಾಗಿ ಮಗುವಾಗುತ್ತದೆ.. ಆದರೆ ಶಾಪ ನಿಮಿತ್ತ ಅರ್ಜುನ ಉಲೂಚಿಯನ್ನು ಮರೆತಿರುತ್ತಾನೆ... ಲೋಕಾಪವಾದಕ್ಕೆ ಗುರಿಯಾಗುವ ಉಲೂಚಿಯನ್ನು ಕಾಪಾಡಲು ಮಗುವನ್ನು ಪಾರ್ವತೀ ಕೈಲಾಸಕ್ಕೆ ಒಯ್ಯುತ್ತಲೇ.. ಮತ್ತು ಅದಕ್ಕೆ ಆಯುಷ್ಯ ತುಂಬಲು ತಲೆಯ ಮೇಲೆ ಶೃಂಗವನ್ನು ಇಡುತ್ತಾಳೆ.. ನಾಗಾರ್ಜುನ ಎಂದು ನಾಮಕರಣ ಆಗುತ್ತದೆ ಹಾಗೆಯೇ ತಲೆಯ ಮೇಲೆ ಶೃಂಗ ಇರುವ ತನಕ ಈ ಮಗು ಅಜೇಯ ಎಂದು ಹರಸುತ್ತಾಳೆ..




ಏಕಲವ್ಯನ ಕತೆ ಬರುತ್ತದೆ.. ಏಕಲವ್ಯನ ಹೆಬ್ಬೆರಳು ಗುರುದಕ್ಷಿಣೆಯಾದ ಘಟನೆ ಕೇಳಿ.. ಅರ್ಜುನನ ಮೇಲೆ ನಾರ್ಜುನನಿಗೆ ಕೋಪ ಬರುತ್ತದೆ.. ಅವಕಾಶ ಸಿಕ್ಕರೆ ಅರ್ಜುನನ ಜೊತೆ ಕಾಳಗ ಮಾಡಬೇಕೆಂದು ಹಠ ತೊಡುತ್ತಾನೆ.. 


ಇತ್ತ ಅರ್ಜುನನಿಗೆ ಕೃಷ್ಣನ ಸಹಕಾರದಿಂದ ಸುಭದ್ರಾ ಪರಿಣಯವಾಗುತ್ತದೆ..




ಮುಂದೆ.. ನಾರದನಿಗೆ ಪಾಂಡವರ ತಂದೆ ಪಾಂಡುರಾಜ ಇನ್ನೂ ಮೋಕ್ಷ ಸಿಗದೇ ಕೆಸರಿನಲ್ಲಿ ತಲೆಯ ತನಕ ,ಮುಳುಗಿದ್ದಾನೆ ಎಂದು ಗೊತ್ತಾಗುತ್ತದೆ.. ಅದಕ್ಕೆ ಪರಿಹಾರ ತಲೆಯ ಮೇಲೆ ಶೃಂಗ ಇರುವ ಬಾಲಕನ ಕತ್ತಿನ ರಕ್ತತರ್ಪಣ ಕೊಟ್ಟರೆ ಮೋಕ್ಷ ಸಿಗುತ್ತದೇ ಎಂದು ತಿಳಿಯುತ್ತದೆ..




ಅರ್ಜುನ ಇದಕ್ಕಾಗಿ ಅಪ್ಪಣೆ ಪಡೆದು ಹೊರಡುತ್ತಾನೆ.. ಆದರೆ ಅವನಿಗೆ ನಂತರ ಅರಿವಾಗುತ್ತದೆ.. ಆ ಶೃಂಗ ಇರುವ ಬಾಲಕ ತನ್ನ ಮಗನೆಂದು.. ಕಾಳಗ ನೆಡೆಯುತ್ತದೆ.. ಆಗ ಶಾಪವಿಮೋಚನೆಯಾದ ಉಲೂಚಿ, ದೇವಿ ಪಾರ್ವತಿಯ ಸಹಾಯದಿಂದ ತನ್ನ ಮಗನಿಗೆ ಜನ್ಮ ರಹಸ್ಯ ಹೇಳುತ್ತಾಳೆ.. ಅದನ್ನು ಕೇಳಿದ ಆ ಬಾಲಕ ನಾಗಾರ್ಜುನ.. ಬಾಣದಿಂದ ಕತ್ತನ್ನು ಕತ್ತರಿಸಿ ತನ್ನ ತಾತನ ಮೋಕ್ಷಕ್ಕೆ ನೆರವಾಗುತ್ತಾನೆ.

ಇದರಿಂದ ಸಂತುಷ್ಟನಾದ ಶ್ರೀ ಕೃಷ್ಣ ಮುಂದೆ ಬುದ್ದನ ಅವತಾರದಲ್ಲಿ ಬುದ್ಧನ ಪರಮಶಿಷ್ಯನಾಗಿ ಅಹಿಂಸೆ ಸಾರುವ ಕಾಯಕ ಮಾಡು ಎಂದು ಆಶೀರ್ವದಿಸುವುದರಿಂದ ಚಿತ್ರ ಕೊನೆಗೊಳ್ಳುತ್ತದೆ.

ಅರ್ಜುನನಾಗಿ ಲೀಲಾಜಾಲವಾಗಿ ಅಭಿನಯಿಸಿರುವ ರಾಜ್ ಕುಮಾರ್ ಇಷ್ಟವಾಗುತ್ತಾರೆ.. ಉಳಿದ ಪಾತ್ರಗಳಲ್ಲಿ ಕಲಾವಿದರ ಅಭಿನಯ ಸೊಗಸಾಗಿದೆ..

ಹಾಸ್ಯಕ್ಕಾಗಿ ನರಸಿಂಹರಾಜು ರಮಾದೇವಿ ಇದ್ದಾರೆ.




ಸರಳ ಸುಂದರ ಚಿತ್ರವೇ ಮುಂದೆ ಬಬ್ರುವಾಹನಕ್ಕೆ ನಾಂದಿ ಹಾಡಿದೆ ಅನಿಸಿತು ನನಗೆ.

ಮುಂದಿನ ಚಿತ್ರಕ್ಕೆ ಜೊತೆಯಾಗುವ ಅಲ್ವೇ.. !


No comments:

Post a Comment