Friday, April 24, 2020

ನಾನ್ಯಾರು .. ಈ ಪ್ರಶ್ನೆಯನ್ನು ಸದಾ ನಮ್ಮನ್ನೇ ಕೇಳಿಕೊಳ್ಳುತ್ತಲೇ ಇರಬೇಕು.. ಅಣ್ಣಾವ್ರ ಜನುಮದಿನ (2020)

ಅಣ್ಣಾವ್ರೇ ಏನು ಬರೆಯೋಕು ಹೊಳೀತಿಲ್ಲ.. ನೀವೇ ದಾರಿ ತೋರಬೇಕು.. ಯೋಚಿಸುತ್ತಾ ಇದ್ದೆ ೨೩ನೇ ಏಪ್ರಿಲ್ ತಾರೀಕು..

ಸಂಜೆ ಸುಮಾರು ಐದು ಮೂವತ್ತು ಆಸುಪಾಸಿಗೆ ಗುರುಗಳು, ಅಣ್ಣಾವ್ರನ್ನು ಹತ್ತಿರದಿಂದ ನೋಡಿದ ನಮ್ಮ ಗುರುಗಳು ವೆಂಕಟೇಶ್ ಮೂರ್ತಿಯವರು ದೊರೈ ಭಗವಾನ್ ಜೋಡಿಯ  ಭಗವಾನ್ ಅವರು ಒಂದು ಸಂದರ್ಶನದಲ್ಲಿ ಅಣ್ಣಾವ್ರ ಬಗ್ಗೆ ಹೇಳಿದ ಕೆಲವು ಮಾತುಗಳನ್ನು  ಹೇಳಲು ಕರೆ ಮಾಡಿದರು.. ಅಲ್ಲಿಂದ ಮುಂದೆ ನೆಡೆದದ್ದು ಅಮೋಘ ಒಂದು ಕಾಲುಘಂಟೆ ಫೋನ್ ಕರೆ..  ಅಪಾರ ವಿಷಯಗಳನ್ನು ತಿಳಿಸಿದರು.

ಅದೇ ಗುಂಗಿನಲ್ಲಿ ಮಲಗಿದೆ..  ಬೆಳಿಗ್ಗೆ ಶುಭನುಡಿ ಏನು  ಬರೆಯೋದು ಎಂಬ ಗೊಂದಲವಿದ್ದಾಗ ಮತ್ತೆ ಸಹಾಯಕ್ಕೆ ಬಂದವರು ಅಣ್ಣಾವ್ರೇ..

ಅವರ ಸರಳತೆ, ಕಾರ್ಯಶೀಲತೆ.. ಇದನ್ನೇ ವಿಷಯವನ್ನಾಗಿಸಿ ಕೆಳಗಿನ ಸಾಲುಗಳು ಉಗಮವಾದವು..

ದೇವರ ಆಟ ಬಲ್ಲವರಾರು.. ಇಂದಿಗೆ ಹಲವಾರು ದಶಕಗಳ ಹಿಂದೆ ಸ್ವತಂತ್ರ ಪೂರ್ವದಲ್ಲಿ ಹುಟ್ಟಿದ ಒಂದು ಜೀವಿಯನ್ನು ಇಂದಿಗೂ ಎಂದಿಗೂ ಎಂದೆಂದಿಗೂ ನೆನೆಸಿಕೊಳ್ಳುತ್ತೇವೆ ಎಂದು ಯಾರಾದರೂ ಹೇಳಲಿಕ್ಕೆ ಸಾಧ್ಯವಿತ್ತೇ..


ಅಣ್ಣಾವ್ರು ಅನ್ನುವ ಒಂದು ಭಗವಂತನ ಸೃಷ್ಟಿ ತಾನು ನಂಬಿದ ಕಾಯಕವನ್ನು ಶ್ರದ್ಧೆಯಿಂದ ಮಾಡಿದ್ದರು...ಹಾಗಾಗಿ ಇಂದಿಗೂ ಎಂದಿಗೂ ಅವರು ಪ್ರಸ್ತುತ!


ಆ ಕಾರ್ಯಶೀಲತೆ ಸರಳತೆ ಮಾರ್ಗದರ್ಶನವಾಗಿರಲಿ!



ಶುಭದಿನ!


ಚಿತ್ರಕೃಪೆ : ಗೂಗಲೇಶ್ವರ 



ಅದಕ್ಕೆ ಸಹನಾ, ದಿನಕರ್ ಅವರಿಂದ ಬಂದ ಪ್ರತಿಕ್ರಿಯೆಯೆಗಳು.. "ನಾನಾರು"..

ಎದ್ದು ಬಂದು ಮನೆಯಲ್ಲಿದ್ದ ಅಣ್ಣಾವ್ರ ಫೋಟೋ ನೋಡಿದೆ.. "ಶ್ರೀಕಾಂತವ್ರೆ ಜಮಾಯಿಸಿಬಿಡಿ" ಅಂದ ಹಾಗೆ ಭಾಸವಾಯಿತು.. "

ಸಲ್ಯೂಟ್ ಹೊಡೆದದ್ದೇ ಕೂತೆ ಕಂಪ್ಯೂಟರ್ ಮುಂದೆ.. ಫಲಿತಾಂಶ  ಈ ಲೇಖನ ... ಅಣ್ಣಾವ್ರ ಜನುಮದಿನಕ್ಕೆ ಅರ್ಪಿತಾ..

ಶ್ರೀ : ಅಣ್ಣಾವ್ರೇ.. ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಶಿಪು ಪಾತ್ರದ ಬಗ್ಗೆ ಹೇಳಿ.. ಹೆಚ್ಚು ಕಮ್ಮಿ ನನ್ನ ತಲೆಮಾರಿನಲ್ಲಿ ನಿಮ್ಮ ಸಿನೆಮಾ ಪಾತ್ರಗಳು ತುಂಬಾ ನವಿರಾಗಿದ್ದವು.. ಈ ರೀತಿ ಅಬ್ಬರದ ಪಾತ್ರ ನೋಡಿರಲೇ  ಇಲ್ಲ. ಈ ಚಿತ್ರದ ಹಿಂದೆ ಮುಂದೆ ಕೂಡ ಸಾಂಸಾರಿಕ ಕಥಾವಸ್ತುಗಳೇ ಇದ್ದವು.. ಈ ಪಾತ್ರದ ಬಗ್ಗೆ ಹೇಳಿ ಅಣ್ಣ..  ಸತಿ ಶಕ್ತಿ ಪಾತ್ರದ ನಂತರ ಖಳಛಾಯೆಯಲ್ಲಿ ಈ ರೀತಿ ಅಬ್ಬರಿಸಿದ್ದು ಇಲ್ಲವೇ ಇಲ್ಲ..

ಅಣ್ಣಾವ್ರು: ಶ್ರೀ.. ನಮ್ಮ ತಂಡ ಈ ಚಿತ್ರದ ಕಥಾವಸ್ತುವನ್ನು ಮಾಡಬೇಕು ಎಂದಾಗ.. ನನ್ನ ತಮ್ಮ ವರದಪ್ಪ ಅಣ್ಣ ನೀ ಮಾಡು ಈ ಚಿತ್ರವನ್ನು .. ಅಪ್ಪನನ್ನು ಮತ್ತೊಮ್ಮೆ ನೋಡಿದ ಹಾಗೆ ಆಗುತ್ತೆ.. ಅಂದ.. ಎಲ್ಲರೂ ನನಗೆ ಸ್ಫೂರ್ತಿ ತುಂಬಿದರು.. ಅವರ ಬೆನ್ನು ತಟ್ಟುವಿಕೆ ಈ ಪಾತ್ರವಾಯಿತು.. ಶೂಟಿಂಗ್ ಶುರು ಮಾಡೋದಕ್ಕೆ ಮೊದಲು ಸುಮಾರು ದಿನಗಳಿಂದ ಅಪ್ಪಾಜಿ ಅವರ ಫೋಟೋ ನೋಡೋದು.. ಅವರನ್ನು ಆವಾಹಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ..  ಅಪ್ಪಾಜಿ ಯಾವಾಗಲೂ ನನ್ನ ಮನದಲ್ಲಿ ಇರುತ್ತಾರೆ.. ಆದರೆ ಈ ಪಾತ್ರಕ್ಕೆ ಅವರ ಸ್ಫೂರ್ತಿ ಆಶೀರ್ವಾದ ಬೇಕಿತ್ತು.. ಆಗ ಸಿದ್ಧವಾಯಿತು ನೋಡಿ ಈ ಪಾತ್ರ..

ಚಿತ್ರಕೃಪೆ : ಗೂಗಲೇಶ್ವರ 

ಅದೇ  ರೀತಿಯ ಮೀಸೆ.. ಅದೇ ರೀತಿಯ ನಗು.. ಜೊತೆಯಲ್ಲಿ ನಮ್ಮ ನಟ ಭಯಂಕರ ವಜ್ರಮುನಿ ಅವರ ಗಹಗಹಿಸಿ ಬರುವ ನಗು ಕೂಡ ನನಗೆ ಸ್ಫೂರ್ತಿ ಆಯ್ತು .. ನಮ್ಮ ಚಿ ಉದಯಶಂಕರ್.. ಅಣ್ಣಾವ್ರೇ ನಿಮ್ಮ ಧ್ವನಿಯನ್ನು ಕೊಂಚ ಗಡುಸು ಮಾಡಿಕೊಳ್ಳಬೇಕು.. ಇಡೀ ಚಿತ್ರದಲ್ಲಿ ನಿಮ್ಮ ಹಿಂದಿನ ಚಿತ್ರಗಳ ಧ್ವನಿ ಇರದ ಹಾಗೆ ನೋಡಿಕೊಳ್ಳಿ.. ಎಂದು ಹುರಿದುಂಬಿಸಿದರು..

ಚಿತ್ರಕೃಪೆ : ಗೂಗಲೇಶ್ವರ 
ಒಂದು ಪುಟ್ಟ ಮಗು ಶಾಲೆಗೇ ಹೋಗುವಾಗ ಹೇಗೆ ತಯಾರಿ ಮಾಡುತ್ತಾರೋ ಹಾಗೆ ನನ್ನನ್ನು ತಯಾರಿ ಮಾಡಿದರು..  ಅದರ ಪರಿಣಾಮ ಹಿರಣ್ಯಕಶಿಪು...

ಶ್ರೀ: ಅಬ್ಬಬ್ಬಾ ಎಷ್ಟೊಂದು ವಿವರಣೆ ಅಣ್ಣಾವ್ರೇ.. ನಿಮ್ಮ ಎರಡು ನಿಮಿಷದ ಸ್ವಗತ "ನಾನ್ಯಾರು.. " ಈ ಸಂಭಾಷಣೆ ಬಗ್ಗೆ ಹೇಳಿ.. "

ಚಿತ್ರಕೃಪೆ : ಗೂಗಲೇಶ್ವರ 
ಅಣ್ಣಾವ್ರು: ಶ್ರೀ.. ನಮ್ಮ ಉದಯಶಂಕರ್ ಇದ್ದಾರಲ್ಲ ಮಹಾನ್ ಪ್ರತಿಭೆ.. ಸುಮಾರು ಎರಡೂ ಮೂರು ಪುಟಗಳ ಸಂಭಾಷಣೆ ಬರೆದೆ ಬಿಟ್ಟರು.. ಅದನ್ನು ಉರು ಹೊಡೆದೆ... ಉದಯಶಂಕರ್, ವರದಪ್ಪ, ನಿರ್ದೇಶಕ ವಿಜಯ್ ಎಲ್ಲರ ಜೊತೆ  ಆ ಸಂಭಾಷಣೆಯಲ್ಲಿ ಬೇಕಾದ  ಏರಿಳಿತದ ಬಗ್ಗೆ ಚರ್ಚಿಸಿದೆವು.. ಶೂಟಿಂಗ್ ದಿನ ಬಂದೆ ಬಿಟ್ಟಿತು.. ಅಪ್ಪನ ಫೋಟೋಗೆ ನಮಸ್ಕಾರ ಮಾಡಿ.. "ಅಪ್ಪಾಜಿ ಈ ದೃಶ್ಯ ಚೆನ್ನಾಗಿ ಬರುವ ಹಾಗೆ ಆಶೀರ್ವದಿಸಿ.." ಎಂದೇ.. ಇಡೀ ಸಿನಿಮಾದ ಪ್ರತಿ ದೃಶ್ಯದ ಚಿತ್ರೀಕರಣಕ್ಕೂ ಮುನ್ನ ಅಪ್ಪಾಜಿಯ  ಆಶೀರ್ವಾದ ತೆಗೆದುಕೊಳ್ಳುವುದು ಇದ್ದೆ ಇತ್ತು.. ಆದರೆ ನಿರ್ದೇಶಕ ವಿಜಯ್ ಹೇಳಿದ್ದರು ಅಣ್ಣಾವ್ರೇ ಈ ದೃಶ್ಯ  ಚಿತ್ರದ ಹೈ ಲೈಟ್ ಆಗುತ್ತೆ ಅಂತ...


ಚಿತ್ರಕೃಪೆ : ಗೂಗಲೇಶ್ವರ 

ಶ್ರೀ: ಹೌದು ಅಣ್ಣಾವ್ರೇ ಇದು ಅದ್ಭುತ ಸಂಭಾಷಣೆ.. ಮಯೂರ, ಜೀವನ ಚೈತ್ರ, ಕವಿರತ್ನ ಕಾಳಿದಾಸ, ರಣಧೀರ ಕಂಠೀರವ, ಶ್ರೀ ಕೃಷ್ಣದೇವರಾಯ ಮುಂತಾದ ಚಿತ್ರಗಳ ಉದ್ದುದ್ದ ಸಂಭಾಷಣೆ ಕೇಳಿದ್ದೇವೆ ನೋಡಿದ್ದೇವೆ, ಖುಷಿ ಪಟ್ಟಿದ್ದೇವೆ.. ಈ  ಚಿತ್ರದ ಸಂಭಾಷಣೆ ಅದ್ಭುತ.. ಅದರಲ್ಲೂ ನಿಮ್ಮ ಬಾಡಿ ಲ್ಯಾಂಗ್ವೇಜ್ ಇದೆಯಲ್ಲ ಅಬ್ಬಬ್ಬಾ ಎನಿಸುತ್ತದೆ, ಇದೆ ಅಣ್ಣಾವ್ರ ಬೇಡರಕಣ್ಣಪ್ಪದಿಂದ ಇಲ್ಲಿಯ ತನಕ ನೋಡಿದ್ದು ಅನಿಸುತ್ತದೆ..

ಅಣ್ಣಾವ್ರು:ಹೌದು ಶ್ರೀ.. ನಾ ನನ್ನ ಚಿತ್ರಗಳನ್ನಾಗಲಿ ದೃಶ್ಯಗಳನ್ನಾಗಲಿ ನೋಡೋಲ್ಲ .. ಮಂತ್ರಾಲಯ ಮಹಾತ್ಮೆ ಒಂದೇ ಇಷ್ಟ ಪಟ್ಟು ನೋಡೋದು.. ಆದರೆ ಈ ದೃಶ್ಯ ಅಪ್ಪಾಜಿಯೇ ನನ್ನ  ಒಳಗೆ ನುಗ್ಗಿ ಅಭಿನಯಿಸಲು ಸ್ಫೂರ್ತಿ ತುಂಬಿದ್ದರು.. ಹಾಗಾಗಿ ಅದರ ಶ್ರೇಯಸ್ಸು ಅಪ್ಪಾಜಿಗೆ..

ಶ್ರೀ: ಅಣ್ಣಾವ್ರೇ ಈ ನಿಮ್ಮ ವಿನಯ, ಸರಳತೆ, ಪಾತ್ರಕ್ಕೆ ಬೇಕಾಗುವ ಶ್ರದ್ಧೆ ಇದೆ ನಿಮ್ಮನ್ನು ಇಷ್ಟು ಎತ್ತರಕ್ಕೆ ಕೂರಿಸಿದೆ.. ನಿಮ್ಮ ಈ ಗುಣವೇ ನಮಗೆ ಮಾರ್ಗದರ್ಶಿ..

ಅಣ್ಣಾವ್ರು: ಏನೋಪ್ಪ ನೀವೆಲ್ಲ  ಅಭಿಮಾನಿ ದೇವರುಗಳು .. ಈ ರಾಜಕುಮಾರನನ್ನು ಹೀಗೆ ನೋಡಬೇಕು ಎಂದು ಬಯಸಿದಿರಿ ಹಾಗೆ ಆಯಿತು ಅಷ್ಟೇ ..  ಸರಿ ಕಣಪ್ಪ ನಾ ಹೋಗಿ ಬರುತ್ತೇನೆ.. ಮತ್ತೆ ಸಿಗುತ್ತೇನೆ..

ಶ್ರೀ : ಅಣ್ಣಾವ್ರೇ ಜನುಮದಿನಕ್ಕೆ ಶುಭಾಶಯಗಳು ನಿಮ್ಮ ಆಶೀರ್ವಾದ ಕರುನಾಡ ಚಿತ್ರರಸಿಕರ ಸದಾ ಇರಲಿ..

****
ಈ ಬರಹ ಕಾಲ್ಪನಿಕ.. ಭಕ್ತ ಪ್ರಹ್ಲಾದ ಚಿತ್ರದ ಈ ಸಂಭಾಷಣೆ ಕೇಳಿದಾಗೆಲ್ಲ.. ನೋಡಿದಾಗೆಲ್ಲ ಈ ರೀತಿ ಇರಬಹುದೇ .. ಅನಿಸುತ್ತದೆ.. ಪ್ರತಿ ಯುಗಕ್ಕೂ ವಿಷ್ಣು ಅವತಾರ ಎತ್ತಿದ ಹಾಗೆ.. ಚಿತ್ರರಸಿಕರ ಮನವನ್ನು ಸೂರೆಗೊಳ್ಳಲು ಎತ್ತಿದ ಅವತಾರವೇ ಅಣ್ಣಾವ್ರು ಅರ್ಥಾತ್ ಕರುನಾಡಿನ ರಾಜಕುಮಾರ್..

Wednesday, April 22, 2020

ಹಣವಂತರ ಬಲವಂತರ ನಡುವೆ ಸಿಕ್ಕಿ ಒದ್ದಾಡುವ ಶ್ರಮದಾನವೇ ಈ ಭೂದಾನದ ತಿರುಳು (1962) (ಅಣ್ಣಾವ್ರ ಚಿತ್ರ ೨೭ / ೨೦೭)

ಕೆಲವೊಂದು ಚಿತ್ರಗಳನ್ನ ನೋಡಿದ ಮೇಲೆ ಅಯ್ಯೋ ಯಾಕೆ  ಇದೂವರೆಗೂ ಈ ಚಿತ್ರ ನೋಡಿಲ್ಲ ಅಥವಾ ನೋಡಲಾಗಿಲ್ಲ ಅನ್ನುವ ಹಾಗೆ ಮಾಡುತ್ತೆ.. ಅಂತಹ ಚಿತ್ರಗಳಲ್ಲಿ ಭೂದಾನ ಚಿತ್ರ ಒಂದು. 



ಈ ಚಿತ್ರ ಅರಳಿದ್ದು ಜಿ ವಿ ಅಯ್ಯರ್  ಅವರ ಮೂಸೆಯಲ್ಲಿ.   ಓದಿದ್ದು ನೆನಪು.. ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯನ್ನು ಚಿತ್ರ ಮಾಡಲು ಅವರ ಬಳಿ ಹಕ್ಕಿಗಾಗಿ ಕೇಳಿದಾಗ .. ಹಕ್ಕು  ಕೊಡಲು ನಿರಾಕರಿಸಿ .. ಕಥೆಯ ತಿರುಳನ್ನು ಉಪಯೋಗಿಸಲು ಅನುಮತಿ ನೀಡಿದರಂತೆ.. 


ಈ ಸಿನಿಮಾ ನೋಡುತ್ತಾ ಹೋದ ಹಾಗೆ ಚೋಮನ ದುಡಿಯ ಅನೇಕ ಅಂಶಗಳು ಕಣ್ಣ ಮುಂದೆ ಬಂದವು.. ಅದೇ ತಿರುಳನ್ನು ಹಿಡಿದಿಟ್ಟು ಅದಕ್ಕೆ ಶ್ರೀ ವಿನೋಬಾ ಭಾವೆ ಅವರ ಭೂಸುಧಾರಣೆ ಚಳುವಳಿ ವಿಷಯ ಸೇರಿಸಿ ಸುಂದರ ಚಿತ್ರಕಥೆ ಮಾಡಿ, ಅದಕ್ಕೆ ಸಂಭಾಷಣೆ, ಹಾಡುಗಳು ಬರೆದು ಪಿ ಎಸ್ ಗೋಪಾಲಕೃಷ್ಣ ಅವರ ಜೊತೆ  ನಿರ್ದೇಶನ ಮಾಡಿದ್ದಾರೆ. 

ಈ ಚಿತ್ರದ ಜೀವಾಳ ಅವರು ರಚಿಸಿದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತೆ ಊರಿನ ಪ್ರಮುಖ ಜಮೀನ್ದಾರನಾಗಿ  ಅವರ ಖಳ ಛಾಯೆಯ ಅಭಿನಯ.. ನಾಜೂಕಿನ ಮಾತುಗಳನ್ನು ಹೇಳುತ್ತಲೇ ತಣ್ಣಗಿನ ಕ್ರೌರ್ಯ ಪ್ರದರ್ಶಿಸುವ ಅವರ ಪಾತ್ರ ಅದ್ಭುತವಾಗಿದೆ.. ಆ ಪಾತ್ರ ಪೋಷಣೆಯೂ ಇತರ  ಪಾತ್ರಗಳನ್ನೂ ನುಂಗಿಹಾಕದಂತೆಚಿತ್ರೀಕರಿಸಿದ್ದಾರೆ .. 


ಚಿತ್ರದ ಆರಂಭ ಭಾಗ್ಯದ ಲಕ್ಷ್ಮಿ ಬಾರಮ್ಮ ಎನ್ನುವ ಪುರಂದರ ವಿಠಲರ ಹಾಡಿನೊಂದಿಗೆ ಶುರುವಾಗುತ್ತೆ.. ಅದರಿಂದ ಅರಿವಾಗೋದು ಹಣದ ಆಸೆ ಈ ಚಿತ್ರದುದ್ದಕ್ಕೂ ಇದೆ ಅಂತ.. 

ಈ ಚಿತ್ರದ ಕಥೆ ಹೀಗಿದೆ.. ದಾಸಣ್ಣ ಊರಿನ ಒಂದು ಜೀತದಾಳಿನ ಕುಟುಂಬದ ಹಿರಿಯ.. ಗೌರಿ, ರಾಮ, ಲಕ್ಷಣ ಮೂವರು ಮಕ್ಕಳು.. ತಮ್ಮ ಹಾಗು ತಮ್ಮನ  ಹೆಂಡತಿ ಪಕ್ಕದ ಮನೆಯಲ್ಲಿಯೇ ವಾಸ.. ತಮ್ಮನ ಹೆಂಡತಿಗೆ ಅಣ್ಣ ತಮ್ಮಂದಿರ ಅನ್ಯೋನ್ಯತೆ ಇಷ್ಟವಾಗೋಲ್ಲ.. ಕಾರಣ ಹಣದಾಸೆ.. 

ದಾಸಣ್ಣನಿಗೆ ಜೀತ ಮಾಡಿ ಬದುಕೋಕಿಂತ ಸಾಯೋದರ ಒಳಗೆ ಒಂದಷ್ಟು ಜಮೀನನ್ನು ಸ್ವಂತವಾಗಿ ಉತ್ತು ಬಿತ್ತು ಬೆಳೆ ಬೆಳೆಯಬೇಕು ಎನ್ನುವ ಹಂಬಲ..  ಅದಕ್ಕಾಗಿ ಜಮೀನ್ದಾರನನ್ನು ಆಗಾಗ ಕೇಳುತ್ತಲೇ ಇರುತ್ತಾನೆ.. ಆದರೆ ದಾಸಣ್ಣನ ಮಕ್ಕಳಿಗೆ ಜಮೀನ್ದಾರನ ಮೇಲೆ ನಂಬಿಕೆ ಇರೋಲ್ಲ.. 

ಆ ಊರಿಗೆ ವಿನೋಬಾ ಭಾವೆ ಅವರನ್ನು ನೆನೆಸಿಕೊಂಡು ಭೂದಾನ  ತಂಡ ಬರುತ್ತದೆ.. ಆ ಊರಿನ ಸುಮಾರು ರೈತರು ಭೂದಾನದ ಚಳುವಳಿಗೆ ತಮ್ಮ ತಮ್ಮ ಜಮೀನಿನ ಕೆಲವು ಭಾಗಗಳನ್ನು ದಾನವಾಗಿ ನೀಡುತ್ತಿರುತ್ತಾರೆ.. ಅಲ್ಲಿ ಕೂತಿದ್ದ ದಾಸಣ್ಣ ತನ್ನ ಪಕ್ಕಾದವನಿಗೆ.. ನನಗೊಂದು ಚೂರು ಪಾರು ಜಾಮೀನು  ಎಷ್ಟು ಚೆನ್ನಾ.. ಆದರೆ ಇರೋರಿಗೆ ಮಾತ್ರ ಭೂದಾನ ಮಾಡುತ್ತಾರೆ ಅಂತ ಗೊಣಗುತ್ತಾನೆ.. 

ಅದನ್ನು ಕೇಳಿಸಿಕೊಂಡ ಚಳುವಳಿಯ ಪ್ರಮುಖ.. ಜಮೀನ್ದಾರನಿಗೆ ಹೇಳಿದಾಗ.. ಐದು ಎಕರೆ ಜಮೀನು ಕೊಡುತ್ತಾನೆ.. ಆದರೆ ನಂತರ ನೋಡಿದಾಗ ಆ ಜಮೀನು ಬರೀ ಕಲ್ಲು ಬಂಡೆಗಳಿಂದ ಕೂಡಿದ್ದು ಅಂತ ಗೊತ್ತಾಗುತ್ತದೆ.. ಆದರೆ ಎದೆಗುಂದದ ದಾಸಣ್ಣ ತನ್ನ ಮಕ್ಕಳ ಜೊತೆ ಭೂ ಕೆಲಸ ಶುರುಮಾಡುತ್ತಾನೆ.. ಆದರೆ ಆಳುಗಳು ಇನ್ನಷ್ಟು ಬೇಕು ಎಂದಾಗ ಜಮೀನ್ದಾರ ಕೈಸಾಲ ಎಂದು ಎರಡು ಸಾವಿರ ಕೊಡುತ್ತಾನೆ.. ನಂತರ ದಾಸಣ್ಣ ಆ ಬಂಜರು ಭೂಮಿಯನ್ನು ಹಸನು ಮಾಡಿ, ಬೆಳೆ ಬೆಳೆದಿದ್ದನ್ನು ಕಂಡು.. ಸಾಲ, ಅದಕ್ಕೆ ಬಡ್ಡಿ ಅಂತ ಕಾರಣ ಹೇಳಿ, ಜಮೀನು ಮತ್ತು ಬೆಳೆದಿದ್ದ ಬೆಳೆಯನ್ನು ಕಬಳಿಸುತ್ತಾನೆ.. ಮಕ್ಕಳಿಗೆ ಕೋಪ ಬಂದು.. ಕಾಫೀ ತೋಟದ ಕೂಲಿಯಿಂದ ಹೆಚ್ಚು ಹಣ ಸಿಗುತ್ತದೆ ಎಂದು.. ಆ ಹಣದಿಂದ ಜಮೀನು ಕೊಳ್ಳಬಹುದು ಎಂದು ಹೋಗುತ್ತಾರೆ.. 

ಇತ್ತ.. ದಾಸಣ್ಣ ಮಕ್ಕಳ ನ್ನು ನೆನೆದು ಬೇಸರದಿಂದ ಇದ್ದರೇ.. ಅತ್ತ ಅವನ ತಮ್ಮನ ಹೆಂಡತಿ ಅಸೂಯೆಯಿಂದ ದಾಸಣ್ಣನ ಹಸುವಿಗೆ ವಿಷ ಹಾಕುತ್ತಾಳೆ.. ಆದರೆ ವಿಧಿ ಅವಳ ಗಂಡನಿಗೆ ಹಾವು ಕಡಿದು ಮರಣ ಹೊಂದುವಂತೆ ಮಾಡುತ್ತದೆ.. 

ಜಮೀನ್ದಾರ ಆಕೆಯನ್ನು ಹೊಂದುವಂತೆ ಬಲವಂತ ಮಾಡುತ್ತಾನೆ.. ಆದರೆ ಅವಳು ತಿರುಗುಬಿದ್ದಾಗ ಊರಿನ ಜನರನ್ನು ಸೇರಿಸಿ, ಅವಳ ಮೇಲೆ ತಪ್ಪು ಭಾವ ಬರುವಂತೆ ಮಾಡಿ.. ಬಹಿಷ್ಕಾರ ಹಾಕುತ್ತಾರೆ.. 

ಇತ್ತ ಕಾಫೀ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ ಹಣ ಒಟ್ಟು ಮಾಡುತ್ತಾ ರಾಮ ಲಕ್ಷಣ ಇರುತ್ತಾರೆ.. ಲಕ್ಷಣನಿಗೆ ಒಬ್ಬ ಕ್ರಿಶ್ಚಿಯನ್ ಹುಡುಗಿ ಪರಿಚಯ ಇರುತ್ತದೆ.. ಪ್ರೀತಿಗೆ ತಿರುಗಿ.. ರಾಮನ ಇಷ್ಟದ ವಿರುದ್ಧ  ಹಣದಲ್ಲಿ ಸ್ವಲ್ಪ ಎತ್ತುಕೊಂಡು ಮದುವೆಯಾಗುತ್ತಾನೆ.. ಮದುವೆಗೆ ಚರ್ಚ್ ನವರು ಹತ್ತು ಎಕರೆ ಭೂಮಿ ಮತ್ತು ಹಣ ಕೊಟ್ಟಿರುತ್ತಾರೆ.. ಲಕ್ಶ್ಮಣನ ಜೀವನ ನೋಡಿ..ಬೇಸರಗೊಂಡು ಅದೇ ಚಿಂತೆಯಲ್ಲಿ ಹಾಸಿಗೆ ಹಿಡಿಯುತ್ತಾನೆ.. ಕಾಫೀ ತೋಟದವ ಗಾಡಿ ಮಾಡಿಕೊಟ್ಟು ದಾಸಣ್ಣನ ಮನೆಗೆ ಕಳಿಸುತ್ತಾನೆ.. ದಾರಿಯಲ್ಲಿ ಕೂಡಿಟ್ಟ ಹಣವನ್ನು ಒಬ್ಬ ಕದ್ದುಕೊಂಡು ಹೋಗುತ್ತಾನೆ.. 

ದಾಸಣ್ಣ ಕರೀಂ ಸಾಬಿಯಿಂದ ಔಷಧಿ ಕೊಡಿಸುತ್ತಾನೆ.. ಹುಷಾರಾದ ರಾಮ ಕರೀಂ ಹತ್ತಿರ ನಾನು ನಿನ್ನ ಜಾತಿಗೆ ಸೇರುತ್ತೀನಿ..ಇಬ್ಬರೂ ಒಟ್ಟಿಗೆ ವ್ಯವಸಾಯ ಮಾಡೋಣ ಎನ್ನುತ್ತಾನೆ.. ಒಪ್ಪಿದ ಕರೀಂ ಅವನನ್ನು ತನ್ನ ಜಾತಿಗೆ ಸೇರಿಸಿಕೊಂಡು ಐದು ಎಕರೆ ಜಮೀನು ಕೊಡಿಸುತ್ತಾನೆ.. 

ಇದನ್ನೆಲ್ಲಾ ಕಂಡು ಹುಚ್ಚು ಹಿಡಿಯುವ ದಾಸಣ್ಣ ತನ್ನ ಮನೆಯನ್ನು ಕೆಡವಿ ಆ ಜಾಗದಲ್ಲಿ ವ್ಯವಸಾಯ ಮಾಡಲು ಹೋಗುತ್ತಾನೆ..

ಅಂತ್ಯದಲ್ಲಿ ಮತ್ತೆ ಆ ಊರಿಗೆ ಭೂದಾನ ಚಳುವಳಿ ಮತ್ತೆ ಬಂದಾಗ.. ದಾಸಣ್ಣ ತಾನು ಜಮೀನ್ದಾರನಿಂದ ಮೋಸ ಹೋಗಿ ತನ್ನ ಕುಟುಂಬವನ್ನು ಕಳೆದುಕೊಂಡದ್ದನ್ನು ಹೇಳುತ್ತಾನೆ.. 
ಅಷ್ಟರಲ್ಲಿ ರಾಮ ಲಕ್ಷಣ ಇಬ್ಬರೂ ಮತ್ತೆ ದಾಸಣ್ಣನ ಮಡಿಲಿಗೆ ಸೇರುತ್ತಾರೆ .. ದಾಸಣ್ಣ ಮಕ್ಕಳು ಬೇರೆ ಧರ್ಮಕ್ಕೆ ಸೇರಿದ್ದರೂ ತನ್ನ ಮಕ್ಕಳೆಂದು ಸ್ವೀಕರಿಸುತ್ತಾನೆ.. 

ಜಮೀನ್ದಾರನ ಬಣ್ಣವನ್ನು ಊರಿನ ಜನ ಬಯಲು ಮಾಡುತ್ತಾರೆ.. ತಪ್ಪು ಅರಿತ ಜಮೀನ್ದಾರ ತನ್ನ ಜಮೀನನ್ನು ಊರಿನ ಎಲ್ಲರಿಗೂ ಹಂಚಿ ಸಾಗುವಳಿ ಮಾಡಲು ಹೇಳುತ್ತಾನೆ.. 


ದಾಸಣ್ಣನ ಪಾತ್ರದಲ್ಲಿ ರಾಜ್ ಕುಮಾರ್ ಅಕ್ಷರಶಃ  ಪರಕಾಯ ಪ್ರವೇಶ ಮಾಡಿದ್ದಾರೆ..  ವಯಸ್ಸಿಗೆ ಬಂದ ಮೂರು ಮಕ್ಕಳ ತಂದೆಯ ಪಾತ್ರವದು.. ವಯಸ್ಸಾದ ಪಾತ್ರ.. ಆದರೆ ಅದಕ್ಕೆ ಬೇಕಾದ ಅಂಗೀಕಾ ಅಭಿನಯ ನೀಡಿದ್ದಾರೆ.. ಅವರ ವೇಷಭೂಷಣ ಸೊಗಸಾಗಿದೆ.. ಆ ಪಾತ್ರಕ್ಕೆ ತಕ್ಕ ಹಾಗೆ ಇದೆ. 
ಧ್ವನಿ, ಏರಿಳಿತ.. ಆ ಮೀಸೆ, ತಲೆಗೂದಲು.. ಬಡ ಕುಟುಂಬದ ಮುಖ್ಯಸ್ಥನ ಪಾತ್ರ ತೆರೆಯಿಂದ ಎದ್ದು ಬಂದ ಹಾಗಿದೆ.. ರಾಜ್ ಕುಮಾರ್ ಸೂಪರ್ ಪಾತ್ರ ಈ ಚಿತ್ರದಲ್ಲಿ..  ಇನ್ನೊಂದು ಗಮನಿಸಬೇಕಾದ ಅಂಶ  ಎಂದರೆ ಹಿಂದಿನ ಸಿನೆಮಾಗಳಲ್ಲಿ ಅವರೇ ನಾಯಕ.. ಈ ಚಿತ್ರದಲ್ಲಿ ತನ್ನ ಸಮಕಾಲೀನ ನಟರಿಗೆ ಅಪ್ಪನಾಗಿ ಅಭಿನಯಿಸುವ ಪಾತ್ರ.. ಮುಂದೆ ಅವರ ಚಿತ್ರ ಜೀವನ ಹೇಗೆ ಬೇಕಾದರೂ ಸಾಗಬಹುದಿತ್ತು.. ಆದರೆ ಧೈರ್ಯವಾಗಿ ಅಭಿನಯಿಸಿ.. ಪಾತ್ರಕ್ಕಾಗಿ ನಾನೆ ಹೊರತು ನನಗಾಗಿ ಪಾತ್ರವಲ್ಲ ಎಂದು ತೋರಿಸಿದ್ದಾರೆ.. ರಾಜ್ ಕುಮಾರ್ ಅವರಿಗೆ ಒಂದು ಹ್ಯಾಟ್ಸಾಫ್.. 


ಆ ಕಾಲದ ಎಲ್ಲಾ ಕಾಲದ  ಹಿಟ್ ಹಾಸ್ಯ ಜೋಡಿ ಬಾಲಕೃಷ್ಣ ಮತ್ತು ನರಸಿಂಹರಾಜು.. ಇಬ್ಬರೂ ಚಿತ್ರದುದ್ದಕ್ಕೂ ನಗಿಸುತ್ತಲೇ ಸಾಗುತ್ತಾರೆ.. ಅದ್ಭುತ ಹಾಸ್ಯ ಪ್ರಜ್ಞೆ, ಚುರುಕು ಸಂಭಾಷಣೆ..  ಅವರಿಬ್ಬರ ಅಭಿನಯ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ.. ಕತೆಗೆ ಪೂರಕವಾಗಿರುವ ಅವರಿಬ್ಬರ ದೃಶ್ಯಗಳು ಜೀವನವನ್ನು ನೋಡುವ ಪರಿ ಹೇಳಿಕೊಡುತ್ತದೆ ..ನರಸಿಂಹರಾಜು ಕುಟುಂಬದಲ್ಲಿ ಮಕ್ಕಳ ಸೈನ್ಯವೇ ಇರುತ್ತದೆ.. ಆದರೆ ಬಾಲಕೃಷ್ಣ ಕುಟುಂಬದಲ್ಲಿ ಮಕ್ಕಳ ಭಾಗ್ಯವೇ ಇಲ್ಲ.. ನಾಲ್ಕು ಹೆಂಡತಿಯರು ಸ್ವರ್ಗವಾಸಿಯಾಗಿ ಐದನೇ ಹೆಂಡತಿಗೆ ಮಕ್ಕಳ ಭಾಗ್ಯ ಇರುವುದಿಲ್ಲ.. ಅತೀವೃಷ್ಟಿ ಅನಾವೃಷ್ಟಿ.. ಕಡೆಗೆ ನರಸಿಂಹರಾಜು ಮಕ್ಕಳನ್ನೇ ತನ್ನ ಮಕ್ಕಳು ಎಂದು ಒಟ್ಟಿಗೆ ಜೀವನ ಸಾಗಿಸೋಣ ಅಂತ ಎರಡೂ ಕುಟುಂಬ ಒಟ್ಟಿಗೆ ಬಾಳುವ ನಿರ್ಧಾರ ಕೈಗೊಂಡು ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ತತ್ವಕ್ಕೆ ಬಾಗುತ್ತಾರೆ.. 


ಲೀಲಾವತಿ ಪಾತ್ರ ಚುಟುಕು ಅಂದರೆ.. ದಾಸಣ್ಣನ ಮಗಳ ಪಾತ್ರ..  ಚಿತ್ರಕ್ಕೆ ಸಹಕಾರಿಯಾಗಿದೆ. .. 


ದಾಸಣ್ಣನ ತಮ್ಮನ ಪಾತ್ರದಲ್ಲಿ ಅಶ್ವಥ್ ಅವರದು  ಕಿರು ಪಾತ್ರ.. ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.. 


ಅವರ ಹೆಂಡತಿಯ ಪಾತ್ರದಾರಿ ಆದವಾನಿ ಲಕ್ಷ್ಮೀದೇವಿ ಬೆಂಕಿಯ ಉಂಡೆ.. ಅಸೂಯೆ, ದ್ವೇಷ, ಸಿಟ್ಟು ಎಲ್ಲವನ್ನು ಮೇಳೈಸಿಕೊಂಡು ಚಿತ್ರದಲ್ಲಿ ಕಾಣುತ್ತಾರೆ.. 


ದಾಸಣ್ಣನ ಮಕ್ಕಳಾಗಿ ಉದಯಕುಮಾರ್ ರಾಮನಾದರೆ... ಕಲ್ಯಾಣ್ ಕುಮಾರ್ ಲಕ್ಷ್ಮಣನಾಗಿ ಅಭಿನಯಿಸಿದ್ದಾರೆ.. ಇಬ್ಬರೂ ಮುದ್ದಾಗಿ ಕಾಣುತ್ತಾರೆ.. ಅಭಿನಯ ಸೊಗಸಾಗಿದೆ.. 


ಕುಮಾರತ್ರಯರು ಒಂದೇ ಸಿನಿಮಾದಲ್ಲಿ ಪೂರ್ಣ ಪೂರ್ಣಪ್ರಮಾಣದಲ್ಲಿ ಅಭಿನಯಿಸಿದ್ದೆ ಇದೆ ಮೊದಲು ಇದೆ ಕೊನೆ.. ಇದರ ಹಿಂದಿನ ಚಿತ್ರ ಗಾಳಿಗೋಪುರದಲ್ಲಿ ಮೂವರು ಇದ್ದರೂ ಉದಯಕುಮಾರ್ ಒಂದೇ ದೃಶ್ಯದಲ್ಲಿ ಅಭಿನಯಿಸಿದ್ದರು ಹಾಗಾಗಿ ಇದೆ ವಿಶೇಷ ಈ ಚಿತ್ರದ್ದೂ.. 

ಹಲವಾರು ವರ್ಷಗಳಾದರೂ ಈ ಚಿತ್ರ ತನ್ನ ಸಾಮಾಜಿಕ ಕಳಕಳಿಯಿಂದ ಇನ್ನೂ ಪ್ರಸ್ತುತ ಎನಿಸುತ್ತದೆ.. 

ಈ ಚಿತ್ರವನ್ನು ಇದೂವರೆಗೂ ನೋಡದೆ ಇದ್ದದ್ದಕ್ಕೆ ಬೇಸರ ಎನಿಸಿದರೂ.. ಈಗಲಾದರೂ ನೋಡಿ ಇದರ ಬಗ್ಗೆ ನನಗೆ ಅನಿಸಿದ ಎರಡು ಅಕ್ಷರ ಬರೆದ ತೃಪ್ತಿ ನನ್ನದು.. !

ಮುಂದಿನ ಚಿತ್ರದೊಂದಿಗೆ ಸಿಗೋಣ.. !

Monday, April 20, 2020

ಯಶಸ್ಸಿನ ಗೋಪುರ ಏರಿ ಆದ್ರೆ ಶ್ರಮದಿಂದ ಗಾಳಿಯಿಂದಲ್ಲ ಎನ್ನುವ ಗಾಳಿ ಗೋಪುರ (1962) (ಅಣ್ಣಾವ್ರ ಚಿತ್ರ ೨೬ / ೨೦೭)

ರಾಜ್ ಕುಮಾರ್ ಅವರ ಚಿತ್ರ ಯಾತ್ರೆಯಲ್ಲಿ ಇದೊಂದು ಪರಿಪೂರ್ಣ ಸಾಮಾಜಿಕ ಚಿತ್ರ.. ಹಾಡುಗಳಿವೆ.. ಮುದಕೊಡುವ  ಸಂಭಾಷಣೆ ಇದೆ.. ಹೊಡೆದಾಟವಿದೆ.. ಅಚ್ಚುಕಟ್ಟಾದ ಅಭಿನಯವಿದೆ.. ಅದ್ಭುತ ನಿರ್ದೇಶನ .. ಸಾಮಾಜಿಕ ಕಳಕಳಿ ಇರುವ ಕಥೆ.. 



ರಾಜಕುಮಾರ್ ಅಭಿನಯ ಈ ಚಿತ್ರದಲ್ಲಿ ಅದ್ಭುತ .. ಹಿಂದಿನ ಯಾವ ಚಿತ್ರದ ನೆರಳೂ ಅವರ  ಅಭಿನಯದಲ್ಲಿ ಇಲ್ಲ.. ಒಬ್ಬ ಹಳ್ಳಿ ಮುಗ್ಧ ಹೇಗೆ ಇನ್ನೊಬ್ಬರ ಆಸೆ ದುರಾಸೆಗಳ ಸಮರದಲ್ಲಿ ಸಿಕ್ಕಿ ನಲುಗುತ್ತಾನೆ.. ಅದನ್ನು ಹೇಗೆ ವ್ಯಕ್ತ ಪಡಿಸಬೇಕು ಎನ್ನುವುದನ್ನು ಸರಳವಾಗಿ ತೋರಿಸಿದ್ದಾರೆ.. 


ಹಳ್ಳಿ ಹೈದನ ಜುಟ್ಟಿನಲ್ಲಿ ಮುದ್ದಾಗಿ ಕಾಣುವ ರಾಜ್ .. ಅವರ ಸಾಕಿದ ಅಪ್ಪ ಅಮ್ಮನ ಜೊತೆ ಮಾತಾಡುವಾಗ ಕಾಣುವ ಆಪ್ತತೆ.. ತನ್ನನ್ನು ಪ್ರೀತಿಸುವ ಹುಡುಗಿಯ ಜೊತೆ ಮಾತಾಡುವಾಗ ಅಷ್ಟೇ ಪ್ರೀತಿಯಿಂದ ಮಾತಾಡುವ ಪಾತ್ರ ಇಷ್ಟವಾಗುತ್ತೆ.. 


ತಮ್ಮಯ್ಯ ನಂದು ಒಂದು ಫೋಟೋ ತೆಗೆಯೋ.. ಅನ್ನುತ್ತಾ ಅಂಗಿಯನ್ನು ಸರಿ ಮಾಡಿಕೊಳ್ಳುವಾಗಿನ ಮುಗ್ಧತೆ.. ತನ್ನಮ್ಮನಿಗೆ ಬಳೆ ತಂದು.. ತನ್ನ ಪ್ರಿಯ ಗೆಳತಿಗೂ ಬಳೆ ತೊಡಿಸುವಾಗಿನ ಪ್ರೀತಿಯ ಅಭಿನಯ.. ಅಪ್ಪ ಬಂದಾಗ ಲಾಡು ತಿನ್ನಿಸುವುದು, ತಾನು ಕ್ರಾಪ್ ಮಾಡಿಸಿಕೊಂಡಿದ್ದನ್ನು ವ್ಯಕ್ತ ಪಡಿಸುವ ಅಭಿನಯ..ರಾಜ್ ಕುಮಾರ್  ಆಪ್ತರಾಗುತ್ತಾರೆ.. 

ತಾನು ಸಾಕಿದ ಮಗ ಎಂಬ ಸತ್ಯ ಗೊತ್ತಾಗಿ.. ಮನೆಯಿಂದ ಹೊರಗೆ ಹಾಕಿದಾಗ.. ಇದಕ್ಕೆ ಒಪ್ಪದ ಅಮ್ಮನನ್ನು ತನ್ನ ಅಪ್ಪ ಹೊಡೆಯುವಾಗ.. ಅಪ್ಪ ಅವ್ವನನ್ನು ಹೊಡೆಯಬೇಡ.. ನಾ ಹೋಗ್ತೀನಿ ಹೋಗ್ತೀನಿ ಅಂತ ಹೊರಗೆ ಹೋಗಿ.. ಮತ್ತೆ ಅಪ್ಪ ಒಂದೇ ಒಂದು ಬಾರಿ ಅಮ್ಮನ ಕೈಯಿಂದ ಕಡೆ ತುತ್ತು ತಿನ್ನೋಕೆ ಅವಕಾಶ ಕೊಡು ಅಂತ ಬೇಡಿ ಕೊಳ್ಳುವ ದೃಶ್ಯ.. ಅದ್ಭುತ.. 

ಪಟ್ಟಣಕ್ಕೆ ಬರುವ ರಾಜ್ .. ಅಲ್ಲಿನ ಪರಿಸರಕ್ಕೆ ತಕ್ಕ ಭಾಷೆ ಉಡುಪು .. ಇಷ್ಟವಾಗುತ್ತಾರೆ.. 

ಇಡೀ ಚಿತ್ರದುದ್ದಕ್ಕೂ ರಾಜ್ ಕುಮಾರ್ ಇದ್ದರೂ ಜೊತೆ ಜೊತೆಯಲ್ಲಿ ಇತರ ಪಾತ್ರಗಳಿಗೂ ಸಮಾನ ಅವಕಾಶ ಇರೋದು ವಿಶೇಷ.. 

ಅಕ್ಷರಶಃ ಈ ಚಿತ್ರ ಚಿತ್ರರಂಗದ ಭೀಷ್ಮ ನಾಗೇಂದ್ರರಾಯರಿಗೆ ಸಲ್ಲುತ್ತೆ.. ದುರಾಸೆ ಗಾಳಿ ಗೋಪುರ ಕಟ್ಟುವ ಕುಟಿಲ ಮನಸ್ಸಿನ ಗೋವಿಂದಯ್ಯನ ಪಾತ್ರವಾಗಿದ್ದಾರೆ.. ತನ್ನ ಗೆಳೆಯ ಮರಣಶಯ್ಯೆಯಲ್ಲಿದ್ದರೂ ಆಮೇಲೆ ನೋಡಿದರಾಯ್ತು ಎಂದು. ನಂತರ  ಮಗುವಿನ ಜೊತೆ ಹತ್ತು ಸಾವಿರ ದುಡ್ಡನ್ನು ಕೊಟ್ಟಾಗ.. ದುಡ್ಡಿನ ಕಡೆ ಗಮನ ಹರಿಸಿ.. ಅಸ್ತಿ ಬೆಳೆಸಿ.. ಮಗುವಿಗೆ ಓದು ಬರಹ ಕಲಿಸದೇ .. ತಾನು ಹೆತ್ತ ಮಗುವಿಗೆ ಆ ದುಡ್ಡನ್ನು ವ್ಯಯಿಸೋದು... ತಾ ಹೆತ್ತ ಮಗನ ಭವಿಷ್ಯಕ್ಕಾಗಿ ಅಡ್ಡ ದಾರಿ ಹಿಡಿಯುವುದು .... ತನ್ನಂತೆ ಮಗನೂ ಮೋಸ ಮಾಡಿ.. ಅಪ್ಪನನ್ನೇ ಮನೆಯಿಂದ ಹೊರಗೆ ಹಾಕಿದಾಗ ತನ್ನ ತಪ್ಪು ಅರಿವಾಗಿ ಪರಿತಾಪ ಪಡುವ ಪಾತ್ರದಲ್ಲಿ ವಿಜೃಂಭಿಸಿದ್ದಾರೆ.. 


ತಾಯಿ ಮಮತೆ ಅಂದ್ರೆ ಹೀಗಿರಬೇಕು  ಎನ್ನುವಂತೆ ಪಾತ್ರವಾಗಿದ್ದಾರೆ ಎಂ ವಿ ರಾಜಮ್ಮ.. ತಾನು ಸಾಕಿದ ಮಗನನ್ನು  ತನ್ನ ಪತಿರಾಯ ಮನೆಯಿಂದ ಹೊರಗೆ ಹಾಕಿದಾಗ ಅವರ ಅಭಿನಯ ಸೊಗಸಾಗಿದೆ.. ಮಗನಿಗೆ ಒಂದು ತುತ್ತು ತಿನ್ನಿಸಲು ಒಪ್ಪಿಗೆ ಕೊಟ್ಟಾಗ ಅವರ ಅಭಿನಯ ನೋಡಿಯೇ
ನಲಿಯಬೇಕು .. ತನ್ನ ಗಂಡನ ದುರಾಸೆಯ ಪ್ರತಿ ಹಂತದಲ್ಲೂ ಎಚ್ಚರಿಸುವ ಮಡದಿಯಾಗಿ ಹದವಾದ ಅಭಿನಯ.. 


ಸರಳ ಕತೆಯಿದು.. ರಂಗಣ್ಣ ಎನ್ನುವ ಶ್ರೀಮಂತನಿಗೆ ಕ್ಷಯ  ಬಂದು ಬದುಕುವ ಅವಕಾಶ ಕಡಿಮೆ ಎಂದು ಗೊತ್ತಾದಾಗ ಅವನ ಸ್ನೇಹಿತ ಗೋವಿಂದಯ್ಯನಿಗೆ ಹಣ ಮತ್ತು ತನ್ನ ಮಗುವನ್ನು ಕೊಟ್ಟು  ಜೋಪಾನ ಮಾಡಿಕೊಳ್ಳಲು ಹೇಳುತ್ತಾನೆ .. ಮಗುವಿಲ್ಲದ ಗೋವಿಂದಯ್ಯ, ಆ ಮಗುವಿಗೆ ವಿದ್ಯೆ ಕಲಿಸದೇ.. ಆ ದುಡ್ಡನ್ನು ಆಸ್ತಿ ಮಾಡಿಕೊಳ್ಳಲು ಬಳಸಿಕೊಂಡು.. ಆ ಊರನ್ನೇ ಬಿಡುತ್ತಾನೆ .. ಬೇರೆ ಊರಿಗೆ ಬಂದು ಜಮೀನು ಮನೆ ಮಾಡಿಕೊಂಡು ತನ್ನ ಸ್ವಂತ ಮಗನಿಗೆ ವಿದ್ಯೆ ಕಲಿಯಲು ಪೇಟೆಗೆ ಕಳಿಸುತ್ತಾನೆ.. ಅವನ ಸ್ನೇಹಿತನಿಗೆ ಮರುಳು ಮಾಡಿ, ಮಗನಿಗೆ ವಿದ್ಯೆ ಕಲಿಸಲು ಅವನಿಂದಲೇ ಹಣ ಕಿತ್ತು, ತನ್ನ ಮಗನನ್ನು ಸ್ನೇಹಿತನ ಮಗಳಿಗೆ ಮದುವೆ ಮಾಡಿಸುವುದಾಗಿ ಸುಳ್ಳು ಸುಳ್ಳು ಆಶ್ವಾಸನೆ ಕೊಡುತ್ತಾನೆ.. 

ಪೇಟೆಯಲ್ಲಿ ಓದದೇ  ಕೆಟ್ಟ ಚಾಳಿಗೆ ಬೀಳುವ ಮಗ.. ಅಲ್ಲಿನ ಸಿರಿವಂತನ ಮಗಳಿಗೆ ಜೋಡಿಯಾಗುತ್ತಾನೆ.. ಮತ್ತು ತಾನು ಬಾರಿ ಶ್ರೀಮಂತನ ಮಗ ಎಂದು ನಂಬಿಸಿ ಮದುವೆಗೆ ತಯಾರಾಗುತ್ತಾನೆ.. ಇದನ್ನು ತಿಳಿದ ಗೋವಿಂದಯ್ಯ ಸಲೀಸಾಗಿ ಲಕ್ಷಾಂತರ ಆಸ್ತಿ ಬರುವ  ಆಸೆಗೆ ಬಿದ್ದು, ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಮುರಿಯುತ್ತಾನೆ.. ಜೊತೆಯಲ್ಲಿ ಸ್ನೇಹಿತನ ಮಗಳಿಗೆ ಪುಸಲಾಯಿಸಿ, ಮನೆ ಬಿಟ್ಟು ತನ್ನ ಸಾಕು ಮಗನನ್ನ ಹುಡುಕುವಂತೆ ಪೇಟೆಗೆ ಕಳಿಸುತ್ತಾನೆ.. 

ಇತ್ತ ತನ್ನ ಮಗನಿಗೆ ಮದುವೆಯಾಗುತ್ತೆ.. ಆದರೆ ನಿಜ ತಿಳಿದಾಗ ಗೋವಿಂದಯ್ಯನ ಬಾಳು ಬೀದಿಗೆ ಬರುತ್ತದೆ.. 

ಇಲ್ಲಿಂದ ಕತೆ  ತಿರುವು ತೆಗೆದುಕೊಂಡು ಎಲ್ಲರಿಗೂ ಬುದ್ದಿ ಬಂದು ಚಿತ್ರ ಸುಖಾಂತ್ಯವಾಗುತ್ತದೆ.. 

ರಂಗಣ್ಣನಾಗಿ ಅಶ್ವಥ್ ಚಿತ್ರದ ಆರಂಭದಲ್ಲಿ ಮತ್ತು ಉತ್ತರಾರ್ಧದಲ್ಲಿ ಬರುತ್ತಾರೆ.. ಕಳೆದುಕೊಂಡ ಮಗನನ್ನು ಹುಡುಕುತ್ತಲೇ ಇರುವ ಪಾತ್ರ.. ಅಸ್ತಿ ಇದ್ದರೂ ನೆಮ್ಮದಿ ಇಲ್ಲದೆ ಪರಿತಪಿಸುವ ಪಾತ್ರದಲ್ಲಿ ಅಶ್ವಥ್ ಅವರದ್ದು ಎಂದಿನಂತೆ ನೈಜ ಅಭಿನಯ.. 


ಬಿತ್ತಿದ್ದೆ ಬೆಳೆಯೋದು ಎನ್ನುವ ಗಾದೆಯಂತೆ .. ದುರಾಸೆಯ ಅಪ್ಪನ ಮಗನಾಗಿ ಮಗನಾಗಿ ಕಲ್ಯಾಣ್ ಕುಮಾರ್ ಮುದ್ದಾಗಿ ಕಾಣುತ್ತಾರೆ.. ಜೊತೆಯಲ್ಲಿ ಕುಟಿಲ ಮಾತುಗಳು, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವ ಪಾತ್ರದಲ್ಲಿ ಮಿಂಚುತ್ತಾರೆ.. 


ರಮಾದೇವಿ ಅವರ ಅಬ್ಬರದ ಧ್ವನಿಗೆ ಅಷ್ಟೇ ಮಾರ್ಮಿಕವಾಗಿ   ಪಂಚ್ ಕೊಡುವ ಬಾಲಕೃಷ್ಣ ಕಲ್ಯಾಣ್ ಕುಮಾರ್ ಅವರನ್ನು ದಂಡಿಸುವ ಪಾತ್ರದಲ್ಲಿದ್ದಾರೆ.. ಬಾಲಕೃಷ್ಣ ಅವರ ಪಂಚಿಂಗ್ ಸಂಭಾಷಣೆ ಚಿತ್ರದುದ್ದಕ್ಕೂ ಇದೆ.. ಅವರ ಹಾಸ್ಯ ಪ್ರಜ್ಞೆ ಅದ್ಭುತ.. 




ಕಲ್ಯಾಣ್ ಅವರ ಪೋಲಿ ಸ್ನೇಹಿತನಾಗಿ ನರಸಿಂಹರಾಜ ಅಭಿನಯ ನಗೆ ತರಿಸುತ್ತದೆ.. ನಂತರ ಒಳ್ಳೆಯವನಾಗಿ ತನ್ನ ಗೆಳತೀ ಎಂ ಎನ್ ಲಕ್ಷ್ಮೀದೇವಿಯವರ ಜೊತೆಯಲ್ಲಿ ಒಂದಷ್ಟು ಹಾಸ್ಯ ದೃಶ್ಯಗಳಲ್ಲಿ ಕಂಡು, ಚಿತ್ರದ ಅಂತ್ಯಕ್ಕೆ ಎಲ್ಲವನ್ನು ಸರಿ ಪಡಿಸುವಲ್ಲಿ ಸಹಾಯ ಮಾಡುವ ಪಾತ್ರದಲ್ಲಿ ಸೊಗಸಾದ ಅಭಿನಯ.. 


ಎಂ ಎನ್ ಲಕ್ಷ್ಮೀದೇವಿಯವರ ಹಾಸ್ಯಭರಿತ ಅಭಿನಯ.. ಹೋಟೆಲಿನಲ್ಲಿ ಬರುವ ತರಲೆಗಳಿಗೆ ಗಂಡು ವೇಷದಲ್ಲಿ ಕಾಡುವ ಪಾತ್ರಧಾರಿಯಾಗಿ ಇಷ್ಟವಾಗುತ್ತಾರೆ.. 


ನಾಯಕಿ ಲೀಲಾವತಿ ಸುಂದರವಾಗಿ ಕಾಣುತ್ತಾರೆ.. ಅಭಿನಯ ಚಿತ್ರಕಥೆಗೆ ಬೇಕಾದಂತೆ ಅಚ್ಚುಕಟ್ಟಾಗಿದೆ.. 

ಕಲ್ಯಾಣ್ ಕುಮಾರ್ ಅವರಿಗೆ ಜೋಡಿಯಾಗಿ ಚಿಂದೋಡಿ ಲೀಲಾ ಪುಟ್ಟ ಪಾತ್ರದಲ್ಲಿದ್ದಾರೆ.. 


ಡಿಕ್ಕಿ ಮಾಧವರಾವ್ ನೊಂದ ಹೆಣ್ಣಿನ ತಂದೆಯಾಗಿ, ಗೋವಿಂದಯ್ಯನಿಂದ ಮೋಸ ಹೋಗುವ ಪಾತ್ರದಲ್ಲಿ ಇದ್ದಾರೆ. 


ಎಲ್ಲಾ ಘಟಾನುಘಟಿಗಳನ್ನು ಜೋಡಿಸಿಕೊಂಡು ಚಿತ್ರದ ಕ್ಯಾಪ್ಟನ್ ಆಗಿರುವವರು ಬಿ ಆರ್ ಪಂತುಲು. ಈ ಚಿತ್ರವನ್ನು ಪದ್ಮಿನಿ ಪಿಕ್ಟರ್ಸ್ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶಿಸಿದ್ದಾರೆ. 

ಎಂ ಎಸ್ ಸೋಲಮಲೈ ಅವರ ಮೂಲಕತೆಯನ್ನು ದಾದಾಮ ರಾಸಿ ಮತ್ತು ಪದ್ಮಿನಿ ಪಿಕ್ಟರ್ಸ್ ಸಾಹಿತ್ಯ ಶಾಖೆ ಸಹಯೋಗದಲ್ಲಿ ಚಿತ್ರಕತೆಯಾಗಿಸಿದ್ದಾರೆ. ಜಿ ವಿ ಅಯ್ಯರ್ ಅವರ ಚುರುಕಾದ ಸಂಭಾಷಣೆಯಿದೆ. ಪದ್ಮಿನಿ ಪಿಕ್ಟರ್ಸ್ ಆಸ್ಥಾನ ಸಂಗೀತ ವಿದ್ವಾಂಸರಾದ ಟಿ ಜಿ ಲಿಂಗಪ್ಪ ಅವರ ಸಂಗೀತವಿದೆ. ಹಾಡುಗಳನ್ನು ಜಿ ವಿ ಅಯ್ಯರ್ ಮತ್ತು ವಿಜಯನಾರಸಿಂಹ ರಚಿಸಿದ್ದಾರೆ.. ಪುರಂದರ ದಾಸರ "ಯಾರಿಗೆ ಯಾರುಂಟು ಎರವಿನ ಸಂಸಾರ" ಗೀತೆಯನ್ನು ಉಪಯೋಗಿಸಿಕೊಂಡಿದ್ದಾರೆ.. 

ಹಾಡುಗಳು ಇಷ್ಟವಾಗುತ್ತವೆ.. ಹಳ್ಳಿಸೊಗಡಿನ ಸಾಹಿತ್ಯ, ಸಂಗೀತ ಸೊಗಸಾಗಿದೆ... ಗಾಯಕರ ದಂಡೇ ಇದೆ .. ಪಿ ಬಿ ಶ್ರೀನಿವಾಸ್, ಘಂಟಸಾಲ, ಪಿ  ನಾಗೇಶ್ವರ ರಾವ್, ಎಂ ಸತ್ಯ, ರಾಘವುಲು, ಪಿ ಸುಶೀಲ, ಜಾನಕೀ, ರೇಣುಕಾ,ರಾಣಿ. 

ಡಬ್ಲ್ಯೂ ಆರ್ ಸುಬ್ಬರಾವ್ ಅವರ ಛಾಯಾಗ್ರಹವಿರುವ ಈ ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ 
ನಿರ್ದೇಶಕರಿಗೆ ಸಹಾಯಕರಾಗಿದ್ದಾರೆ. 

ಈ ಚಿತ್ರದ ಇನ್ನೊಂದು ವಿಶೇಷತೆ ಅಂದರೆ.. ಆ ಕಾಲದಲ್ಲಿ ಕುಮಾರತ್ರಯರೆಂದೇ ಹೆಸರಾಗಿದ್ದ ರಾಜ್ ಕುಮಾರ್, ಉದಯ ಕುಮಾರ್, ಮತ್ತು ಕಲ್ಯಾಣ್ ಕುಮಾರ್ ಒಂದೇ ಚಿತ್ರದಲ್ಲಿರುವುದು..ಉದಯ್ ಕುಮಾರ್ ಅವರದ್ದು ಒಂದೇ ದೃಶ್ಯದ ಪಾತ್ರ  ಅವರ ಕಂಚಿನ ಕಂಠ ಗಮನ ಸೆಳೆಯುತ್ತದೆ. 


ಇದೆ ಮೊದಲು ಮೂರು ಕುಮಾರರು ಒಂದೇ ಚಿತ್ರದಲ್ಲಿ ಅಭಿನಯಿಸಿರುವುದು.. ಒಟ್ಟಿಗೆ ಒಂದೇ ದೃಶ್ಯದಲ್ಲಿಲ್ಲದಿದ್ದರೂ ಮೂವರು ಒಟ್ಟಿಗೆ ಅಭಿನಯಿಸಿದ್ದು .. ನಂತರ ಭೂದಾನ ಎನ್ನುವ ಚಿತ್ರದಲ್ಲಿ ಮತ್ತೆ ಒಟ್ಟಿಗೆ ಅಭಿನಯಿಸಿದ್ದಾರೆ. 

ಇನ್ನೊಂದು ಚಿತ್ರದ ಜೊತೆಗೆ ಸಿಗೋಣ!

Sunday, April 19, 2020

ಮುಂದಿನ ದಿನಗಳ ಟ್ರೈಲರ್ ನಾಗಾರ್ಜುನ (1961) (ಅಣ್ಣಾವ್ರ ಚಿತ್ರ ೨೫ / ೨೦೭)

ಬದುಕು ಒಂದು ಹೂವಿನ ಹಾಗೆ.. ಅನ್ನುವ ಮಾತಿನಂತೆ.. ನಮ್ಮ ಬದುಕು ನಮಗೆ ಅರಿವಿಲ್ಲದೆ ಮುಂದಿನ ಕಾಲದಲ್ಲಿ ನೆಡೆಯುವ ಘಟನೆಗಳ ಝಲಕ್ ತೋರಿಸುತ್ತದೆ..



ರಾಜ್ ಅವರ ರಜತ ಸಂಭ್ರಮದ ಚಿತ್ರವಿದು (ನನ್ನ ಬಳಿ ಇರುವ ಚಿತ್ರಗಳ ಪಟ್ಟಿಯ ಪ್ರಕಾರ). ಈ ಕಳೆದ ೨೪ ಚಿತ್ರಗಳನ್ನು ನೋಡಿದಾಗ ನನಗೆ ಅನಿಸಿದ್ದು ರಾಜ್ ಕುಮಾರ್ ಅವರಿಗೆ ಈ ರೀತಿಯ ಪಾತ್ರಗಳು ಕರತಲಾಮಲಕವಾಗುತ್ತಿದೆ ಎಂದು.. ಆದರೂ ೨೪ ಚಿತ್ರಗಳು ವಿಭಿನ್ನ ಮತ್ತು ಅವರ ಅಭಿನಯ ಒಂದಕ್ಕಿಂತ ಒಂದು ವಿಭಿನ್ನ ಜೊತೆಯಲ್ಲಿ ಅರೆ ರಾಜ್ ಕುಮಾರ್ ಅವರು ಆ ಚಿತ್ರದಲ್ಲಿ ಈ ರೀತಿಯ ಅಭಿನಯ ನೀಡಿದ್ದಾರೆ ಅನ್ನುವ ಹಾಗೆ ಇಲ್ಲ..  ಒಂದರ ಪಕ್ಕದಲ್ಲಿ ಒಂದು ಇಟ್ಟರೆ ಎಲ್ಲವೂ ಇಸ್ಪೀಟು ಎಳೆಗಳ ಹಾಗೆ ಬೇರೆ ಬೇರೆ..


ವೈ ವಿ ರಾವ್ ಅವರು ಪೌರಾಣಿಕ ಕಥೆಯಾಧರಿಸಿದ ಈ ಚಿತ್ರವನ್ನು ಲೀಲಾಜಾಲವಾಗಿ ನಿರ್ದೇಶಿಸಿದ್ದಾರೆ..
ಮೂಲಕತೆ ತಾಂಡ ಸುಬ್ರಮಣ್ಯಂ ಅವರದ್ದು..
ಅದಕ್ಕೆ ಹಾಡುಗಳು ಮತ್ತು ಸಂಭಾಷಣೆಯ ಹೊಣೆಗಾರಿಕೆ ಹುಣಸೂರು ಕೃಷ್ಣಮೂರ್ತಿಯವರದ್ದು.. ಇವರ ಜೊತೆ ಹಾಡುಗಳಿಗೆ ಮತ್ತೆ ಪದ್ಯಗಳಿಗೆ ಹಸ್ತ ಜೋಡಿಸಿದವರು ವಿಜಯನಾರಸಿಂಹ..  ಛಾಯಾಗ್ರಹಣ ಎನ್ ಪ್ರಕಾಶ್ ಮತ್ತು ಸಂಗೀತ ರಾಜನ್ ನಾಗೇಂದ್ರ.. ಮೊದಲ ಬಾರಿಗೆ ರಾಜ್ ಕುಮಾರ್ ಚಿತ್ರಗಳಿಗೆ ಕಾಲಿಟ್ಟಿದ್ದಾರೆ..
ಈ ಚಿತ್ರಕ್ಕೆ ಅಗತ್ಯವಿದ್ದೆಡೆ ಉದ್ದುದ್ದ ಹಾಡುಗಳ ಬದಲಿಗೆ ಪದ್ಯಗಳನ್ನು ಬಳಸಿಕೊಳ್ಳಲಾಗಿದೆ, ಆ ಪದ್ಯಗಳಿಗೆ ಸಂಗೀತ ಕೊಟ್ಟವರು ಜಂಧ್ಯಾಲ ಲಕ್ಷ್ಮೀನಾರಾಯಣ..
ಪಿ ಬಿ ಶ್ರೀನಿವಾಸ್, ಮಾಧವ, ಎಂ ಎಸ್ ರಾಮರಾವ್, ಪೀಠಾಪುರಂ, ಟಿ ಶ್ರೀ ರಾಮುಲು, ಅಪ್ಪಾರಾವ್, ನಾಗೇಂದ್ರನ್, ರಾಮಚಂದ್ರ ಶರ್ಮ, ಕೆ ಎಸ್ ಮಲ್ಲಿಕಾರ್ಜುನ ಹೀಗೆ ಗಾಯಕರ ದಂಡೇ ಇದೆ..

ಪರಿಚಿತ ನಟ ನಟಿಯರಲ್ಲಿ ರಾಜ್ ಕುಮಾರ್, ಹರಿಣಿ, ನರಸಿಂಹರಾಜು, ವಿ ನಾಗಯ್ಯ,ರಮಾದೇವಿ, ಅಶ್ವಥ್ ಮತ್ತು ಸಹನಟರಲ್ಲಿ ಅನೇಕ ಕಲಾವಿದರಿದ್ದಾರೆ..

ಇದೊಂದು ಮಹಾಭಾರತ ಎನ್ನುವ ಕಡಲಿಂದ ಎತ್ತಿ ತಂದ ಒಂದೆರಡು ಮುತ್ತುಗಳನ್ನು ಪೋಣಿಸಿದ ಚಿತ್ರ..

ದ್ರೌಪದಿಯನ್ನು ಮದುವೆಯಾದ ಪಾಂಡವರು ನಾರದರ ಸಲಹೆಯಂತೆ ಒಬ್ಬೊಬ್ಬರ ಬಳಿ ಒಂದು ವರ್ಷ ಇರುವುದು ಎಂದು, ಅವರ ಏಕಾಂತಕ್ಕೆ ಯಾವ ಪಾಂಡವನೇ ಆಗಲಿ ಭಂಗ ಪಡಿಸಿದರೆ, ಒಂದು ವರ್ಷ ತೀರ್ಥಯಾತ್ರೆ ಹೋಗಬೇಕೆಂದು ನಿಗದಿಯಾಗಿರುತ್ತದೆ..

ಪಾಂಡವರ ರಾಜ್ಯದಲ್ಲಿ ಕಳ್ಳಕಾಕರರ ಭಯ ಇಲ್ಲದೆ ಇದ್ದರೂ, ಲೋಕ ಕಲ್ಯಾಣಕ್ಕಾಗಿ ನೆಡೆಯುವ ಗೋವುಗಳ ಅಪಹರಣ ಘಟನೆ ಕತೆಗೆ ತಿರುವು ಕೊಡುತ್ತದೆ.. ಅದನ್ನು ರಕ್ಷಿಸಲು ಶಸ್ತ್ರಾಗಾರಕ್ಕೆ ಹೋಗುವಾಗ ಧರ್ಮರಾಯ ಮತ್ತು ದ್ರೌಪದಿ ಏಕಾಂತದಲ್ಲಿ ಇದ್ದುದ್ದನ್ನು ನೋಡಿ.. ಗೋವುಗಳನ್ನು ರಕ್ಷಿಸಿದ ಮೇಲೆ.. ಅರ್ಜನ ತೀರ್ಥಯಾತ್ರೆಗೆ ಹೋಗುತ್ತಾನೆ.. ಹಾದಿ ಮಧ್ಯ.. ರಾಮ ಮೇಲು.. ಕೃಷ್ಣ ಮೇಲು ಎನ್ನುವ ಪುಟ್ಟ ಅಹಂ ತುಂಬಿದ ಘಟನೆ ಅರ್ಜುನ ಮತ್ತು ಹನುಮಂತನ ಮಧ್ಯೆ ನೆಡೆಯುತ್ತದೆ.. ಇಬ್ಬರಿಗೂ ತಮ್ಮ ತಪ್ಪಿನ ಅರಿವಾದ ಮೇಲೆ.. ಮುಂದೆ ನೆಡೆಯುವ ಯುದ್ಧದಲ್ಲಿ ಹನುಮಂತನಿಗೆ ಪಾಂಡವರಿಗೆ ಸಹಾಯ ಮಾಡುವಂತೆ ರಾಮನಾಗಿ ಕೃಷ್ಣ ಹೇಳುತ್ತಾನೆ..



ಅರ್ಜುನ ಸೌಂದರ್ಯ ನೋಡಿದ ನಾಗಕನ್ಯೆ ಉಲೂಚಿ ಅವನನ್ನು ಅಪಹರಿಸಿ, ಗಾಂಧರ್ವ ರೀತಿಯಲ್ಲಿ ಕೂಡುತ್ತಾಳೆ.. ಅದಕ್ಕೆ ಫಲವಾಗಿ ಮಗುವಾಗುತ್ತದೆ.. ಆದರೆ ಶಾಪ ನಿಮಿತ್ತ ಅರ್ಜುನ ಉಲೂಚಿಯನ್ನು ಮರೆತಿರುತ್ತಾನೆ... ಲೋಕಾಪವಾದಕ್ಕೆ ಗುರಿಯಾಗುವ ಉಲೂಚಿಯನ್ನು ಕಾಪಾಡಲು ಮಗುವನ್ನು ಪಾರ್ವತೀ ಕೈಲಾಸಕ್ಕೆ ಒಯ್ಯುತ್ತಲೇ.. ಮತ್ತು ಅದಕ್ಕೆ ಆಯುಷ್ಯ ತುಂಬಲು ತಲೆಯ ಮೇಲೆ ಶೃಂಗವನ್ನು ಇಡುತ್ತಾಳೆ.. ನಾಗಾರ್ಜುನ ಎಂದು ನಾಮಕರಣ ಆಗುತ್ತದೆ ಹಾಗೆಯೇ ತಲೆಯ ಮೇಲೆ ಶೃಂಗ ಇರುವ ತನಕ ಈ ಮಗು ಅಜೇಯ ಎಂದು ಹರಸುತ್ತಾಳೆ..




ಏಕಲವ್ಯನ ಕತೆ ಬರುತ್ತದೆ.. ಏಕಲವ್ಯನ ಹೆಬ್ಬೆರಳು ಗುರುದಕ್ಷಿಣೆಯಾದ ಘಟನೆ ಕೇಳಿ.. ಅರ್ಜುನನ ಮೇಲೆ ನಾರ್ಜುನನಿಗೆ ಕೋಪ ಬರುತ್ತದೆ.. ಅವಕಾಶ ಸಿಕ್ಕರೆ ಅರ್ಜುನನ ಜೊತೆ ಕಾಳಗ ಮಾಡಬೇಕೆಂದು ಹಠ ತೊಡುತ್ತಾನೆ.. 


ಇತ್ತ ಅರ್ಜುನನಿಗೆ ಕೃಷ್ಣನ ಸಹಕಾರದಿಂದ ಸುಭದ್ರಾ ಪರಿಣಯವಾಗುತ್ತದೆ..




ಮುಂದೆ.. ನಾರದನಿಗೆ ಪಾಂಡವರ ತಂದೆ ಪಾಂಡುರಾಜ ಇನ್ನೂ ಮೋಕ್ಷ ಸಿಗದೇ ಕೆಸರಿನಲ್ಲಿ ತಲೆಯ ತನಕ ,ಮುಳುಗಿದ್ದಾನೆ ಎಂದು ಗೊತ್ತಾಗುತ್ತದೆ.. ಅದಕ್ಕೆ ಪರಿಹಾರ ತಲೆಯ ಮೇಲೆ ಶೃಂಗ ಇರುವ ಬಾಲಕನ ಕತ್ತಿನ ರಕ್ತತರ್ಪಣ ಕೊಟ್ಟರೆ ಮೋಕ್ಷ ಸಿಗುತ್ತದೇ ಎಂದು ತಿಳಿಯುತ್ತದೆ..




ಅರ್ಜುನ ಇದಕ್ಕಾಗಿ ಅಪ್ಪಣೆ ಪಡೆದು ಹೊರಡುತ್ತಾನೆ.. ಆದರೆ ಅವನಿಗೆ ನಂತರ ಅರಿವಾಗುತ್ತದೆ.. ಆ ಶೃಂಗ ಇರುವ ಬಾಲಕ ತನ್ನ ಮಗನೆಂದು.. ಕಾಳಗ ನೆಡೆಯುತ್ತದೆ.. ಆಗ ಶಾಪವಿಮೋಚನೆಯಾದ ಉಲೂಚಿ, ದೇವಿ ಪಾರ್ವತಿಯ ಸಹಾಯದಿಂದ ತನ್ನ ಮಗನಿಗೆ ಜನ್ಮ ರಹಸ್ಯ ಹೇಳುತ್ತಾಳೆ.. ಅದನ್ನು ಕೇಳಿದ ಆ ಬಾಲಕ ನಾಗಾರ್ಜುನ.. ಬಾಣದಿಂದ ಕತ್ತನ್ನು ಕತ್ತರಿಸಿ ತನ್ನ ತಾತನ ಮೋಕ್ಷಕ್ಕೆ ನೆರವಾಗುತ್ತಾನೆ.

ಇದರಿಂದ ಸಂತುಷ್ಟನಾದ ಶ್ರೀ ಕೃಷ್ಣ ಮುಂದೆ ಬುದ್ದನ ಅವತಾರದಲ್ಲಿ ಬುದ್ಧನ ಪರಮಶಿಷ್ಯನಾಗಿ ಅಹಿಂಸೆ ಸಾರುವ ಕಾಯಕ ಮಾಡು ಎಂದು ಆಶೀರ್ವದಿಸುವುದರಿಂದ ಚಿತ್ರ ಕೊನೆಗೊಳ್ಳುತ್ತದೆ.

ಅರ್ಜುನನಾಗಿ ಲೀಲಾಜಾಲವಾಗಿ ಅಭಿನಯಿಸಿರುವ ರಾಜ್ ಕುಮಾರ್ ಇಷ್ಟವಾಗುತ್ತಾರೆ.. ಉಳಿದ ಪಾತ್ರಗಳಲ್ಲಿ ಕಲಾವಿದರ ಅಭಿನಯ ಸೊಗಸಾಗಿದೆ..

ಹಾಸ್ಯಕ್ಕಾಗಿ ನರಸಿಂಹರಾಜು ರಮಾದೇವಿ ಇದ್ದಾರೆ.




ಸರಳ ಸುಂದರ ಚಿತ್ರವೇ ಮುಂದೆ ಬಬ್ರುವಾಹನಕ್ಕೆ ನಾಂದಿ ಹಾಡಿದೆ ಅನಿಸಿತು ನನಗೆ.

ಮುಂದಿನ ಚಿತ್ರಕ್ಕೆ ಜೊತೆಯಾಗುವ ಅಲ್ವೇ.. !


Friday, April 17, 2020

ಕಟ್ಟುಪಾಡುಗಳಿಂದ ಹೊರಬನ್ನಿ ಎನ್ನುವ ಚೇತನ ಭಕ್ತ ಚೇತ (1961) (ಅಣ್ಣಾವ್ರ ಚಿತ್ರ ೨೪ / ೨೦೭)

ಆಟಗಾರ ಅನುಭವ ಹೊಂದುತ್ತಾ ಹೋದ ಹಾಗೆ ಎಂಥಹ ಕಠಿಣ ಸವಾಲುಗಳೇ ಆಗಲಿ ಆರಾಮಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳುತ್ತಾನೆ..


ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತಾ ಬಂದಿರುವ ನನಗೆ ಈ ಅಂಶ ನಿಚ್ಚಳವಾಗಿ ಕಾಣಿಸುತ್ತದೆ. ಒಂದೊಂದು ಚಿತ್ರದಲ್ಲಿ ಒಂದೊಂದು ರೀತಿಯ ಪಾತ್ರ ಪೋಷಣೆ.. ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಾ ಸಾಗಿರುವ ಅವರ ಅಭಿನಯದ ಹಾದಿ ಖುಷಿಯಾಗುತ್ತದೆ.


ಶಂಕರ್ ಡಿ ಸಿಂಗ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಬಹುಶಃ ಸಿನಿಮಾದ ಪ್ರತಿಯೊಂದು ದೃಶ್ಯದಲ್ಲಿಯೂ ಇದ್ದಾರೆ.  ಹದಭರಿತ ಅಭಿನಯ, ಚಪ್ಪಲಿ ಹೊಲೆಯುವ ಚಮ್ಮಾರನ ಪಾತ್ರದಲ್ಲಿ ಅವರು ತೋರುವ ತನ್ಮಯತೆ, ಚಪ್ಪಲಿ ಹೊಲೆಯುವಾಗ ಮೊಗದಲ್ಲಿ ಇರಬೇಕಾದ ಒಂದು ರೀತಿಯ ನಿರ್ವಿಕಾರ ಭಾವ, ಅವರ ಆಂಗೀಕ ಅಭಿನಯ... ನಿಜಕ್ಕೂ ಸೋಜಿಗವೆನಿಸುತ್ತದೆ.  ಒಬ್ಬ ನಟ ಅಷ್ಟು ತನ್ಮಯತೆಯಿಂದ ಆ ಪಾತ್ರವಾಗಲು ಸಾಧ್ಯವೇ ಎಂದು. ಪರಿಪೂರ್ಣತೆ ಎನ್ನುವುದು ಕಲಾವಿದನಿಗೆ ಸಿಕ್ಕ ಅವಕಾಶವನ್ನು  ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಸಿಗಬಹುದಾದ ಒಂದು ರತ್ನ.

ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದು ಇರಲಿ ಎನ್ನುವ ಪಾಠ ಈ ಚಿತ್ರದಿಂದ ಕಲಿಯಬಹುದು.

ಎಂ ಬಿ ಗಣೇಶ್ ಸಿಂಗ್ ನಿರ್ದೇಶನದಲ್ಲಿ ಸತ್ಯಂ ಅವರ  ಸಂಗೀತ ತುಂಬಿಕೊಂಡು ಬಂದಿರುವ ಈ ಚಿತ್ರವನ್ನು ಕೆ ಎಸ್ ಗೋವಿಂದಸ್ವಾಮಿ ಚಿತ್ರೀಕರಿಸಿದ್ದಾರೆ.  ಹಾಡುಗಳನ್ನು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಬಿ ಕೆ  ಸುಮಿತ್ರಾ ಮತ್ತು ಎಲ್ ಆರ್ ಈಶ್ವರಿ ಹಾಡಿದ್ದಾರೆ.

ಬಡವ ಚೇತ ಚಪ್ಪಲಿ ಹೊಲೆದು ಮಾರಿ ಅದರಿಂದ ಜೀವನ ಸಾಗಿಸುವ ಒಬ್ಬ ಜೀವಿ. ತನ್ನ ಸಂಸಾರದ ಅಗತ್ಯಗಳನ್ನು ಪೂರೈಸಲು ಹೆಣಗಾಡುವ ಪಾತ್ರ. ಮನೆಯಲ್ಲಿ ಬಡತನ ತಾಂಡವ ನೃತ್ಯ ಮಾಡುತ್ತಿರುವ ಸಂಸಾರವನ್ನು ಎತ್ತಿ ಹಿಡಿಯಲು ಒದ್ದಾಡುವ ಗೃಹಿಣಿ ಪಾತ್ರದಲ್ಲಿ ನಿರ್ಮಾಪಕ ಶಂಕರ್ ಸಿಂಗ್ ಅವರ ಮಡದಿ ಪ್ರತಿಮಾ ದೇವಿ ಅಭಿನಯಿಸಿದ್ದಾರೆ. ಆ ಪಾತ್ರದಲ್ಲಿ ತೊಳದಾಡುವ ಅಭಿನಯ,  ಚೇತನಿಗೆ ಭಗವಂತ ಒಲಿದ ಮೇಲೆ ಭಕ್ತಿಯ ಮಾರ್ಗಕ್ಕೆ ತಿರುಗುವ ಆಕೆಯ ಅಭಿನಯ ಸೊಗಸಾಗಿದೆ.   ಮಗನ ಪಾತ್ರಧಾರಿ ಕೂಡ ಹದವಾದ ಅಭಿನಯ ನೀಡಿದ್ದಾನೆ.



ಚೇತನಿಗೆ ಭಗವಂತನನ್ನು ಒಲಿಸಿಕೊಳ್ಳುವ ಅವಕಾಶ ನೀಡಿ, ಭಗವಂತನ  ಮೂರ್ತಿಯನ್ನು ಒಬ್ಬ ಗುರುಗಳು ನೀಡುತ್ತಾರೆ. ನಿತ್ಯವೂ ಪೂಜೆ ಮಾಡುತ್ತಾ ಸಮಯ ಕಳೆಯುವುದನ್ನು ಕಂಡು ಕುಪಿತಳಾಗಿ ಒಂದು ರಾತ್ರಿ ಆ ಮೂರ್ತಿಯನ್ನು ಬಾವಿಗೆ ಎಸೆಯುವುದನ್ನು ಕನಸಲ್ಲಿ ಕಂಡ ಚೇತ.. ಮತ್ತೆ ಭಗವಂತನನ್ನು ಪ್ರಾರ್ಥಿಸಿದಾಗ ಮೂರ್ತಿಯ ಜೊತೆಯಲ್ಲಿ ತಾಳೆಗರಿಯ ಗ್ರಂಥವೂ ಸಿಗುತ್ತದೆ. ವಿದ್ಯಾ ಸಂಸ್ಕಾರವಿಲ್ಲದ ಚೇತ ಮತ್ತೆ ಪ್ರಾರ್ಥನೆ ಮಾಡಿದಾಗ ಅವನಿಗೆ ಜ್ಞಾನ ಪ್ರಾಪ್ತಿಯಾಗುತ್ತದೆ.


ಹೀಗೆ ಒಲಿದ ಜ್ಞಾನದಿಂದ ತನ್ನ ಸುತ್ತ ಮುತ್ತಲಿನ ಸಮಾಜವನ್ನು ಸರಿಯಾದ ಹಾದಿಗೆ ಬರಲು ಪ್ರೇರೇಪಿಸುತ್ತಾನೆ.  ಇವನ ಜನಪ್ರಿಯತೆಯನ್ನು ಕಂಡು ಕುಪಿತ ಗೊಳ್ಳುವ ರಾಜಗುರು ಮತ್ತು ರಾಜ ಚೇತನಿಗೆ ಎಚ್ಚರಿಕೆ ಕೊಡುತ್ತಾರೆ, ಶಿಕ್ಷಿಸುವುದಾಗಿ ಹೆದರಿಸುತ್ತಾರೆ.. ಆದರೆ  ಧೈರ್ಯವಾಗಿ ನಿಭಾಯಿಸುವ ಚೇತ, ರಾಜ ಕೊಟ್ಟ ಶಿಕ್ಷೆಯನ್ನು ಭಗವಂತನ ಅನುಗ್ರಹದಿಂದ ಒಂದೇ ರಾತ್ರಿಯಲ್ಲಿ ಒಂದು ಸಾವಿರ ಪಾದರಕ್ಷೆ ಜೊತೆಯನ್ನು ಸಿದ್ಧ ಮಾಡುತ್ತಾನೆ.. ಊರ ಜನರ ಮೌಢ್ಯವನ್ನು ನಿವಾರಿಸುವ ಪ್ರಯತ್ನ ಮಾಡಿ ಯಶಸ್ವಿಯಾಗುತ್ತಾನೆ..






ಒಳ್ಳೆಯವರು ಇದ್ದ ಮೇಲೆ.. ಕಾಟ ಕೊಡೋಕೆ ಒಬ್ಬರು ಇರಲೇ ಬೇಕಲ್ಲ.. ಹಾಗಾಗಿ ಡಿಕ್ಕಿ ಮಾಧವರಾವ್ ಆ ಕೊರತೆಯನ್ನು ತುಂಬುತ್ತಾರೆ.



ಈ ಚಿತ್ರ ಸರಳವಾಗಿದೆ .. ಹಾಗೂ ಚಿತ್ರಕಥೆ ಕೂಡ ನೇರವಾಗಿದೆ.. ಈ ಚಿತ್ರದ ಇನ್ನೊಂದು ಹೈ ಲೈಟ್  ಚುರುಕಾದ ಸಂಭಾಷಣೆ.. ಸರಳವಾಗಿದೆ, ನಗು ಉಕ್ಕಿಸುತ್ತದೆ.. ಹುಣಸೂರು ಕೃಷ್ಣಮೂರ್ತಿ ಬರೆದಿರುವ ಸಂಭಾಷಣೆ ಸೊಗಸಾಗಿದೆ.. ಹಾಡುಗಳನ್ನು ಅವರೇ ರಚಿಸಿದ್ದಾರೆ.

ಹಾಸ್ಯ ಎಂದಾಗ ಅಲ್ಲಿ ಬಾಲಕೃಷ್ಣ ಇರಲೇಬೇಕಲ್ಲವೇ.. ರಾಜಗುರುವಿನ ಮನೆಯಲ್ಲಿ ಕೆಲಸ ಮಾಡುವವನ ಪಾತ್ರದಲ್ಲಿ ಇದ್ದಾರೆ.. ಅವರ ಜೊತೆಯಲ್ಲಿ ಸಹನಟನ ಸಮಾಗಮದಲ್ಲಿ ಒಂದಷ್ಟು ಹಾಸ್ಯ ದೃಶ್ಯಗಳು ಚಿತ್ರದ ಓಘಕ್ಕೆ ಸಹಾಯ ಮಾಡುತ್ತದೆ.


ರಾಜಗುರುವಿನ ಪಾತ್ರದಲ್ಲಿ ಎಂದಿನಂತೆ ರಾಮಚಂದ್ರ ಶಾಸ್ತ್ರೀ  ಗಮನ ಸೆಳೆಯುತ್ತಾರೆ.


ಒಂದು ಸರಳ ಚಿತ್ರ.. ಸರಳ ಕತೆಯನ್ನು ಯಾವುದೇ ಜಂಜಾಟವಿಲ್ಲದೆ ಹೇಗೆ ಚಿತ್ರಿಸಬಹುದು ಎಂದು ತೋರಿಸಿದ್ದಾರೆ.. !

ಮುಂದಿನ ಚಿತ್ರ.. ರಾಜ್ ಅವರ ಚಿತ್ರ ಬದುಕಿನ ೨೫ನೇ ಚಿತ್ರ.. ಅದರೊಂದಿಗೆ ಮತ್ತೆ ಸಿಗೋಣ.. !