ಇನ್ನೇನಪ್ಪಾ
ನನ್ನ ಚಿತ್ರಗಳ ನಿರ್ದೇಶಕರಾದರು
ಸಂಗೀತ ನಿರ್ದೇಶಕರಾದರು
ನಾಯಕಿಯಾದರು
ಸಹಕಲಾವಿದರಾದರೂ.
ಇವತ್ತು ಏನಪ್ಪಾ ನಿನ್ನ ಹರಿಕಥೆ ಶ್ರೀಕಾಂತಪ್ಪ!
ಅಣ್ಣಾವ್ರೇ ನಿಮ್ಮ ಚಿತ್ರಗಳಲ್ಲಿ ತಾಯಿಯ ಪಾತ್ರಕ್ಕೆ ಹೆಚ್ಚು ಒತ್ತು ಇರುತ್ತದೆ.. ಆದರೆ ನಿಮ್ಮ ನಿಜ ಜೀವನದಲ್ಲಿ ನಿಮ್ಮ ಅಪ್ಪಾಜಿಯ ಬಗ್ಗೆ ಹೇಳಿದಷ್ಟು ಅಮ್ಮನ ಬಗ್ಗೆ ಹೇಳಿರೋದು ಕಡಿಮೆ.. ಕೊಂಚ ಬದಲಾವಣೆ ನಿಮ್ಮ ಚಿತ್ರಜೀವನದ ತಾಯಿಯ ಪಾತ್ರಗಳ ಬಗ್ಗೆ ಅಲ್ಲ.. ತಂದೆಯ ಪಾತ್ರದ ಬಗ್ಗೆ ಹೇಳಿ.. ಅಣ್ಣಾವ್ರೇ..
ನೀನೊಂದು ವಿಚಿತ್ರ ಪುರುಷಾಮೃಗ ಶ್ರೀ.. ಪ್ರತಿವರ್ಷವೂ ಒಂದೊಂದೇ ಸಿಕ್ಕುಗಳನ್ನು ತಂದು ನನ್ನ ಮುಂದೆ ನನ್ನ ಕೈಯಲ್ಲಿಯೇ ಬಿಡಿಸಿ ಖುಷಿ ಪಡುತ್ತೀಯ.. ನಿನ್ನ ಓದುಗರಿಗೆ ಖುಷಿ ಕೊಡುತ್ತೀಯಾ.. ಇರಲಿ ಏನು ಮಾಡಲಿ ಅಭಿಮಾನಿ ದೇವರುಗಳೇ ಅಂದು ಬಿಟ್ಟಿದ್ದೀನಿ.. ಹಾಗಾಗಿ ದೇವರ ಅಪೇಕ್ಷೆ ಪೂರೈಸುವುದು ನನ್ನ ಕೆಲಸವೋ ಕರ್ತವ್ಯವೋ ಗೊತ್ತಿಲ್ಲ.. ಇರಲಿ ಶುರು ಮಾಡುತ್ತೇನೆ..
ನನ್ನ ಚಿತ್ರಜೀವನದಲ್ಲಿ ತಂದೆಯ ಪಾತ್ರಗಳಿಗೆ ಪ್ರಾಮುಖ್ಯತೆ ಸ್ವಲ್ಪ ಕಡಿಮೆ.. ಯಾವಾಗಲೂ ತಾಯಿಯೇ ಅಲ್ಲಿ ಗೆದ್ದಿರುವುದು.. ಆದರೂ ಕೆಲವು ತಂದೆಯ ಪಾತ್ರಗಳು ಮತ್ತು ಕೆಲವು ತಂದೆಗೆ ಸಮಾನಾಂತರ ಪಾತ್ರಗಳು ಕೆಲವು ತಂದೆಯ ಪಾತ್ರವಿರಬಹುದು, ಕೆಲವು ಪೋಷಕ ಪಾತ್ರಗಳು, ಕೆಲವು ಖಳಛಾಯೆ ಇರುವ ಪಾತ್ರ, ಕೆಲವು ಗುರುವಿನ ಪಾತ್ರ.. ಎಲ್ಲವೂ ಅದ್ಭುತ.. ಅದ್ಭುತ..
ಇಗೋ ನಿನ್ನ ಕೋರಿಕೆಗಾಗಿ ಆ ಅದ್ಭುತ ಪಾತ್ರಗಳ ನಟರನ್ನು ನೆನಪಿಸಿಕೊಂಡಿದ್ದೇನೆ.. ಓದು ಖುಷಿಪಡು.. ಕಾಂತಾ ಶ್ರೀಕಾಂತಾ!!!!
ಕೆ ಎಸ್ ಅಶ್ವಥ್..
ಇವರು ನನಗಿಂತ ಕೊಂಚ ಹಿರಿಯರು ಐದು ವರ್ಷಗಳು ಅಷ್ಟೇ.. ಆದರೆ ಅವರ ಜೊತೆಯಲ್ಲಿ ಅನೇಕಚಿತ್ರಗಳನ್ನು ಮಾಡುವ ಸೌಭಾಗ್ಯ ನನಗೆ ಸಿಕ್ಕಿತು.. ಕೆಲವು ಚಿತ್ರಗಳಲ್ಲಿ ಅವರು ನನ್ನ ಅಪ್ಪನ ಸ್ಥಾನದಲ್ಲಿ ಅಭಿನಯ ಮಾಡಿದ್ದರು ಅನ್ನೋದಕ್ಕಿಂತ ಆ ಚಿತ್ರಗಳಲ್ಲಿ ನನಗೆ ಅಪ್ಪನೇ ಆಗಿದ್ದರು.. ನಾನು ಚಿತ್ರಜೀವನಕ್ಕೆ ಪ್ರವೇಶ ಮಾಡುವ ಹೊತ್ತಿಗೆ ನನ್ನ ಜನುಮದಾತ ಹನುಮನ ಪಾದಕ್ಕೆ ಸೇರಿದ್ದರು.. ಹಾಗಾಗಿ ಅಕ್ಷರಶಃ ನಾನು ಅಶ್ವಥ್ ಅವರಲ್ಲಿ ನಾನು ಅಪ್ಪನ ಪ್ರೀತಿಯನ್ನು ಅನುಭವಿಸಿದ್ದೆ..
ಇದು ನಿನ್ನ ಕೈಯಲ್ಲ ಕಾಲು ಅಂದುಕೋ ರಾಮು ಅಮ್ಮನನ್ನು ಉಳಿಸಿಕೊಡು ಅಂತ ಎರಡು ಕನಸು ಚಿತ್ರದಲ್ಲಿ ಹೇಳಿದಾಗ.. ಬರಿ ವೀಕ್ಷಕರು ಅಷ್ಟೇ ಅಲ್ಲ ನಾನು ಕೂಡ ಕಣ್ಣೀರಾಗಿದ್ದೆ..
"ಕೋಪ ಮಾಡಿಕೊ ಬೇಡ ಕಂದ" ಅಂದಾಗ.. "ಏನು ಮಾಡಲಪ್ಪ ಅವನು ನಿನಗೆ ಹೊಡೆದಾಗ ಅದೆಲ್ಲಿ ಇತ್ತೋ ರೋಷ.. ಅವನನ್ನು ಸಿಗಿದು ಹಾಕಬೇಕು ಅನ್ನುವಷ್ಟು ಕೋಪವಿತ್ತು.. ""ಬೇಡ ಕಂದ ಅಷ್ಟು ರೋಷ ಬೇಡ" ಪ್ರಾಯಶಃ ನಾನು ಅವರು ಒಟ್ಟಿಗೆ ಅಭಿನಯಿಸಿದ್ದ ಕಡೆಯ ಅತ್ಯುತ್ತಮ ದೃಶ್ಯ. ಇದು ಒಡಹುಟ್ಟಿದವರು ಚಿತ್ರ
"ನಿನಗೆ ಗೊತ್ತೇನಮ್ಮ ಈ ಕೇಸು ಶುರುವಾದಾಗಿನಿಂದ ಮೂರ್ತಿ ಸರಿಯಾಗಿ ಊಟ ಮಾಡಿಲ್ಲ.. ಅವನ ಸ್ನೇಹಿತನ ಹತ್ತಿರ ಯಾಕಾದರೂ ಈ ಕೇಸು ತೆಗೆದುಕೊಂಡೆನೋ ಅಂತ ಅವನ ಸ್ನೇಹಿತ ಹತ್ತಿರ ಮಾತಾಡುತ್ತಿದ್ದಾಗ" ಚಲಿಸುವ ಮೋಡಗಳು ಚಿತ್ರದ ಈ ಸಂಭಾಷಣೆ ನನಗೆ ಬಹಳ ಇಷ್ಟ..
"ಬೀರ ಸುಮ್ನೆ ತಿನ್ನು" "ಥೂ ನಿನ್ನ".. ಏನ್ಲಾ ಬೀರ ನಿನ್ನ ಕ್ಯಾತೆ" ಈ ಸಂಭಾಷಣೆಗಳು ಬಂಗಾರದ ಪಂಜರದ ಚಿತ್ರದ ಮೊದಲರ್ಧದಲ್ಲಿ ಅವರ ಮತ್ತು ನನ್ನ ದೃಶ್ಯಗಳು ಬಲು ಸೊಗಸು..
ಹಾಗೆಯೇ ನ್ಯಾಯವೇ ದೇವರು ಚಿತ್ರದಲ್ಲಿ ತಕ್ಕಡಿ ತೋರಿಸಿ ಅದರ ಬಗ್ಗೆ ಹೇಳುತ್ತಲೇ ಬದುಕಿನ ಸೂತ್ರವನ್ನು ಹೇಳುವ ಶೈಲಿ.. ಸುಂದರ..
"ಬಿಡುಗಡೆ" ಚಿತ್ರದಲ್ಲಿ ಮಾಡದ ಕೊಲೆಗೆ ತಪ್ಪಿತಸ್ಥನಾಗುವ ಪಾತ್ರ.. ಆ ಮಾತುಗಳು ಅದ್ಭುತ..
"ಕಸ್ತೂರಿ ನಿವಾಸ" ರಾಮಯ್ಯನ ಪಾತ್ರವನ್ನು ಯಾರು ಮರೆಯಲು ಸಾಧ್ಯ..
ಹೀಗೆ ಅವರ ಹತ್ತಾರು ಚಿತ್ರಗಳಲ್ಲಿ ಅವರ ಜೊತೆಗಿನ ಸಂಭಾಷಣೆಗಳು ಬಹಳ ಸೊಗಸಾಗಿವೆ..
ರಾಜಾನಂದ್
ಸಾಗರ್ ಈ ಊರಿನಲ್ಲಿ ಕಾಳಿಂಗ ಮಾಡುತ್ತಿರುವ ಅನ್ಯಾಯಗಳನ್ನು ತಡೆಯುವ ಶಕ್ತಿ ನನಗಿಲ್ಲದೆ ನೀನು ಚಿತ್ರಕಾರನಾಗಬಾರದು ಅಂತ ಅದಕ್ಕೆ ಒತ್ತಾಸೆ ನೀಡಲಿಲ್ಲ.. ಎರಡನೇ ಮದುವೆ ಮಾಡಿಕೊಂಡು ನಿನಗೆ ಅನ್ಯಾಯ ಮಾಡಿದೆ ಸಾಗರ್ ನನ್ನ ಕ್ಷಮಿಸಿ ಬಿಡು ಸಾಗರ್ ಅನ್ನುವ ಧ್ರುವತಾರೆ ಚಿತ್ರ.ತಂದೆಯ ಪಾತ್ರವಲ್ಲ ಆದರೆ ತಂದೆಯ ತೂಕದ ಪಾತ್ರದಲ್ಲಿ ಬಹದ್ದೂರ್ ಗಂಡು ಚಿತ್ರದಲ್ಲಿ "ಪಂಜು ಮಾಡುವ ಕೆಲಸದಲ್ಲಿ ಜಾಣತನ ಇರುತ್ತೆ ಕಣಮ್ಮ" ಅಂತ ಹೇಳುವ ಸುಂದರ ಪಾತ್ರ
ಹಾಗೆಯೇ ಎರಡು ಕನಸು ಚಿತ್ರದಲ್ಲಿ ನಾಯಕಿಯ ಅಪ್ಪನಾಗಿ ಮೊದಲು ನನ್ನ ಪಾತ್ರದ ಹತ್ತಿರ ಪ್ರೀತಿಯಿಂದ ಮಾತಾಡುತ್ತಾ.. ನಂತರ ಸಂಸಾರದ ಜಗಳದಿಂದ ನನ್ನ ಪಾತ್ರವನ್ನು ಕೊಲ್ಲಲು ಬರುವ ರೋಷಯುಕ್ತ ಪಾತ್ರದಲ್ಲಿ ರಾಜಾನಂದ್ ಅದ್ಭುತವಾಗಿದ್ದಾರೆ.
"ಬಭೃವಾಹನ ಚಿತ್ರದಲ್ಲಿ ನನ್ನ ಎರಡನೇ ಪಾತ್ರದಲ್ಲಿ ನನಗೆ ಗುರುವಾಗಿ ಮಂತ್ರಿಯ ಪಾತ್ರದಲ್ಲಿ ರಾಜಾನಂದ್ ಅಭಿನಯ ಸೊಗಸು..
"ರಾಜ ನನ್ನ ರಾಜ, ಮಯೂರ ಚಿತ್ರಗಳಲ್ಲಿ ಕೂಡ ನನ್ನ ಅವರ ಜುಗಲ್ ಬಂದಿ ಅತ್ಯುತ್ತಮವಾಗಿದೆ..
ಸಂಪತ್
ಕರುನಾಡಿನಲ್ಲಿ ಜನಜನಿತವಾಗಿರುವ ಹಾಡು "ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕತೆಯ ಹೇಳಿದೆ" ಬಡವರ ಬಂಧು ಯಾರು ಮರೆಯಲು ಸಾಧ್ಯ.. ಆ ಕರುಣಾಜನಕ ಕಣ್ಣುಗಳು, ಅಭಿನಯ ಆಹಾ.. ಅವರ ಇಂಗ್ಲಿಷ್ ಪದಗಳು ಕೇಳಲು ಬಲು ಇಷ್ಟ ನನಗೆ..
ತ್ರಿಮೂರ್ತಿ ಚಿತ್ರದಲ್ಲಿ ಖಳನಾದರೂ ಅವರ ಜೊತೆಗಿನ ಅಭಿನಯ ಖುಷಿ ಕೊಟ್ಟಿತ್ತು..
ಶಂಕರ್ ಗುರು ಚಿತ್ರದ ಗುರುಮೂರ್ತಿ ತಾತನ ಪಾತ್ರ.. ಅವರು ಮತ್ತು ನನ್ನ ದೃಶ್ಯಗಳು ಬಲು ಖುಷಿ ಕೊಟ್ಟಿತ್ತು
"ಸನಾದಿ ಅಪ್ಪಣ್ಣ" ಯಾಕಲೇ ಪ್ರಸಾದಾ ಕೊಡ್ಲಾ ಎನ್ನುತ್ತಾ ನನ್ನ ಪಾತ್ರವನ್ನು ರಕ್ಷಿಸುವ ದೃಶ್ಯ.. ಹೋಗಲೇ ತಲೆ ಕೆಟ್ಟವನೇ ಎಂದು ಬಾಲಣ್ಣನ ಪಾತ್ರಧಾರಿಗೆ ಬಯ್ಯುವ ದೃಶ್ಯ
"ಗಿರಿ ಕನ್ಯೆ" ಚಿತ್ರದ ನನ್ನ ಪಾತ್ರಧಾರಿಗೆ ಕೆಲಸ ಕೊಟ್ಟ ಯಜಮಾನನ ಪಾತ್ರ
ರಾಘವೇಂದ್ರ ರಾವ್, ಉದಯಕುಮಾರ್, ಎಚ್ ರಾಮಚಂದ್ರ ಶಾಸ್ತ್ರೀ, ಆರ್ ನಾಗೇಂದ್ರ ರಾವ್, ಪೃಥ್ವಿರಾಜ್ ಕಪೂರ್ ಹೀಗೆ ಹತ್ತಾರು ಉತ್ತಮೋತ್ತಮ ಕಲಾವಿದರು ಮಹಾನ್ ನಂತರ ಜೊತೆ ನನಗೆ ಅಭಿನಯದ ಪ್ರಯತ್ನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಸರಿ..
******
ಅಣ್ಣಾವ್ರೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು.. ಎಷ್ಟು ಸರಳವಾಗಿ ಎಲ್ಲಾ ನಟರ ಪಾತ್ರಗಳನ್ನೂ ವಿವರಿಸಿದ್ದೀರಿ.. ಬಹಳ ಖುಷಿಯಾಯಿತು.. ನಿಮ್ಮ ಜನುಮದಿನಕ್ಕೆ ಉಡುಗೊರೆ ಕೊಡೋಣ ಅಂತ ಅಂದುಕೊಂಡರೆ ನೀವೇ ನನಗೆ ಉತ್ತಮ ಉಡುಗೊರೆ ಕೊಟ್ಟಿದ್ದೀರಿ.. ಧನ್ಯವಾದಗಳು ಅಣ್ಣಾವ್ರೇ.. ಮತ್ತೊಮ್ಮೆ ಜನುಮದಿನದ ಶುಭಾಶಯಗಳು...!








ನನ್ನ ಮಟ್ಟಿಗೆ ಎಲ್ಲ ಸಹ ಕಲಾವಿದರಿಗಿಂತಲೂ ರಾಜ್ ಮತ್ತು ಬಾಲಕೃಷ್ಣ ಅವರದು ಒಂದು ತೂಕ ಹೆಚ್ಚು. ಅವರಿಬ್ಬರೂ ಅದೆಷ್ಟೋ ಅಭಿನಯವನ್ನು ಕಣ್ಣುಗಳ ಮೂಲಕವೇ ಮುಗಿಸಿ ಬಿಡುತ್ತಿದ್ದರು.
ReplyDeleteಒಂದು ಆಪ್ತ ಬರಹ ಓದಿಸಿದ ತಮಗೆ ಶರಣು...
- ಬದರಿನಾಥ ಪಳವಳ್ಳಿ
ನಿಜವಾದ ಮಾತು..
Deleteಬಾಲಣ್ಣ ಎಲ್ಲಾ ಪಾತ್ರಕ್ಕೂ ಸೈ...ಬಾಲಣ್ಣ ರಾಜಣ್ಣ ಅವರ ಚಿತ್ರಯಾನದ ಬಗ್ಗೆ ಬರೆಯಬೇಕು ಅನ್ನುವ ಹಂಬಲವಿದೆ...