Monday, March 16, 2020

ಪ್ರೀತಿ ಪ್ರೇಮಗಳ ಜೊತೆಯಲ್ಲಿ ಗೆಳೆತನದ ಕಾದಾಟ ಆಶಾ ಸುಂದರಿ (1960) (ಅಣ್ಣಾವ್ರ ಚಿತ್ರ ೧೭ / ೨೦೭)

ಬಡವ ರಾಸ್ಕಲ್... 
ಅಣ್ಣಾವ್ರ ಚಿರಪರಿಚಿತ ಹಿತವಾದ ಬೈಗುಳ..
ಎಲ್ಲಿಂದ ಬರ್ತಿದೆ ಈ ಧ್ವನಿ ಅಂತ.. ಕೋಳಿಯ ತರಹ ಕತ್ತನ್ನು ಎಲ್ಲಾ ಕಡೆ ತಿರುಗಿಸಿದೆ.. ಎಲ್ಲೂ ಕಾಣಲಿಲ್ಲ.. ಯಾಕೋ ಅನುಮಾನ ಬಂದು ಮನೆಯಲ್ಲಿ ತೂಗು ಹಾಕಿದ್ದ ಅಣ್ಣಾವ್ರ ಫೋಟೋ ಕಡೆ ನೋಡಿದೆ.. ನಗುತ್ತಾ ಯಾಕೆ ಶ್ರೀ.. ಜೂನ್ ೨೦೧೯ ಆದ ಮೇಲೆ ಒಂದು ಚಿತ್ರದ ಬಗ್ಗೆಯೂ ಬರೆದಿಲ್ಲ.. ಯಾಕೆ ಸುಸ್ತಾಯಿತೇ.. ಅಥವ ನನ್ನ ಚಿತ್ರಗಳ ಬಗ್ಗೆ ಬೋರ್ ಆಯ್ತಾ..

ಅಣ್ಣಾವ್ರೇ ಎಂಥಹ ಮಾತು.. ನಿಮ್ಮ ಪ್ರತಿ ಚಿತ್ರಗಳು ವಿಶ್ವವಿದ್ಯಾಲಯದಂತೆ .. ನಾನೇ ಜೀವನದ  ಹಾದಿಯಲ್ಲಿ ಲಯ ತಪ್ಪಿ ವಿಶ್ವದಲ್ಲಿ ವಿದ್ಯೆ ಇದ್ದರೂ ಲಯವಾಗುತ್ತಿದ್ದೆ.. ಮತ್ತೆ ಬರಹದ ಬದುಕು, ನಿಮ್ಮ ಚಿತ್ರಗಳು, ಹಾಡುಗಳು ಅಂತ ನನ್ನ ಸ್ಪೂರ್ತಿಯನ್ನು ಮತ್ತೆ ಹಾದಿಗೆ ತರೋಕೆ ಅಡಿ ಇಟ್ಟಿದ್ದೇನೆ.. ನಿಮ್ಮ ಆಶೀರ್ವಾದ ಇರಲಿ..!

ತಥಾಸ್ತು ಶ್ರೀ.. ನಿನ್ನ ಬರಹದ ಮೂಲಕ ನನ್ನ ಚಿತ್ರಗಳನ್ನು ಮತ್ತೆ ನೋಡುವ ತವಕ ನನಗೂ ಇದೆ.. ಸರಿ ಮುಂದುವರೆಸು.. ಅಂತ ಹೇಳಿದ್ದೆ ಮತ್ತೆ ಫೋಟೋದಲ್ಲಿ ಚಿತ್ರವಾದರು ಅಣ್ಣಾವ್ರು.. !

****
ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವಂತೆ.. ಸ್ನೇಹಕ್ಕೆ, ಪ್ರೇಮಕ್ಕೆ ಹೆಣ್ಣು ಎಷ್ಟು ಬಾಗುತ್ತಾಳೆ ಎನ್ನುವುದಕ್ಕೆ ಈ ಚಿತ್ರ ಉದಾಹರಣೆ..



ಯಕ್ಷ ಕನ್ಯೆ ಮಿತ್ರವಿಂದ ತನ್ನ ಪ್ರಿಯಕರ ಮಣಿಭದ್ರನ ಜೊತೆಯಲ್ಲಿ ವಿಹಾರಮಾಡುತ್ತಿದ್ದಾಗ.. ರಾಜಕುಮಾರಿ ಹೇಮಾವತಿಯ ನೃತ್ಯಕಲೆಯನ್ನು ಕಂಡು ಮರುಳಾಗಿ.. ಹೇಮಾವತಿಯ ಗೆಳೆತನದ ಹಸ್ತಕ್ಕೆ ತಲೆ ಬಾಗಿ.. ಇಬ್ಬರೂ ಮದುವೆಯೇ ಆಗದೆ ಜಗತ್ತಿನಲ್ಲಿ ಹೀಗೆ ಇದ್ದು ಬಿಡೋಣ ಅಂತ ನಿರ್ಧಾರ ಮಾಡುತ್ತಾರೆ..

ಆಕೆಯ ಪ್ರಿಯಕರ ಮಣಿಭದ್ರ.. ತನ್ನ ಪ್ರಿಯತಮೆಯನ್ನು ಬಿಡಲಾರದೆ.. ಅದಕ್ಕೆ ಒಂದು ಉಪಾಯ ಮಾಡುತ್ತಾನೆ.. ಇತ್ತಾ... ಪಕ್ಕದ ದೇಶದ ರಾಜಕುಮಾರನ ಕನಸ್ಸಲ್ಲಿ ಈ ರಾಜಕುಮಾರಿ ಹೇಮಾವತಿ ಬಂದು.. ಆಕೆಯ ಚಿತ್ರವನ್ನು ರಚಿಸಿ .. ಅವಳನ್ನು ಹುಡುಕುತ್ತಾ.. ಅವಳ ರಾಜ್ಯಕ್ಕೆ ಬರುತ್ತಾನೆ.. ಆಗ ಮಣಿಭದ್ರ.. ಸನ್ಯಾಸಿ ವೇಷ ಧರಿಸಿ.. ರಾಜಕುಮಾರನಿಗೆ ಸಹಾಯ ಮಾಡುವಂತೆ ನಟಿಸಿ.. ರಾಜಕುಮಾರಿ ಮತ್ತು ರಾಜಕುಮಾರನಿಗೆ ಪ್ರೀತಿ, ಅನುರಾಗ ಮೂಡುವಂತೆ ಮಾಡುತ್ತಾನೆ..

ಅನುರಾಗದ ಹೊಳೆಯಲ್ಲಿ ಮುಳುಗೇಳುವ ಈ ಪ್ರೇಮಿಗಳ ಕಂಡು.. ಕುಪಿತಗೊಂಡ.. ಮಿತ್ರವಿಂದಾ.. ಇವರಿಬ್ಬರಿಗೆ ನಾನಾ ರೀತಿಯ ಕೋಟಲೆ ಕೊಡುತ್ತಾಳೆ.. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ಒಳನೋಟ ಈ ಚಿತ್ರದಲ್ಲಿ ಮೂಡಿ ಬರುತ್ತದೆ.. ಆದರೆ ಕಷ್ಟಗಳು ಬಂದಾಗ ಮರುಗದೆ, ಮರುಳಾಗದೆ ಗಟ್ಟಿಯಾಗಿ ತಾವು ನಂಬಿದ ದೇವರನ್ನು ಸ್ತುತಿಸುತ್ತಾ ಹೋದಾಗ ಕಷ್ಟಗಳು ಹೂವಿನ ಮಾಲೆಯಾಗುತ್ತದೆ ಎನ್ನುವ ಸುಂದರ ಸಂದೇಶ ಕೊಡುತ್ತದೆ.. !

ರಾಜಕುಮಾರಿಯಾಗಿ ಕೃಷ್ಣಕುಮಾರಿಯದು ಸಂಯಮದ ಅಭಿನಯ.. ಕಪ್ಪು ಬಿಳುಪಿನ ಚಿತ್ರಗಳಲ್ಲಿ ಅವರ ಸ್ನಿಗ್ಧ ಸೌಂದರ್ಯ ನೋಡುವುದೇ ಒಂದು ಖುಷಿ.. ಕೋಪೋದ್ರಿಕ್ತಳಾಗಿ, ಗೆಳತಿಯ ಪ್ರಾಣ ಸಖಿಯಾಗಿ, ತನ್ನ ಪ್ರಿಯಕರನನ್ನು ಮಣಿಸುವ ಪ್ರೇಮಿಯಾಗಿ, ಕೋಟಲೆ ಕೊಡುವ ಯಕ್ಷಿಣಿಯಾಗಿ ಹರಿಣಿಯವರ ಅಭಿನಯ ಸೊಗಸಾಗಿದೆ..

ಮಿಕ್ಕಂತೆ ರಾಮಚಂದ್ರಶಾಸ್ತ್ರಿ, ಮತ್ತೆ ಇತರ ಪಾತ್ರಧಾರಿಗಳ ಅಭಿನಯ ಚಿತ್ರಕ್ಕೆ ಭೂಷಣ ನೀಡಿದೆ.. ಚಿತ್ರದ ಓಟಕ್ಕೆ ಒಂದು ರೀತಿಯ ಸಾತ್ ಕೊಡುವ ನರಸಿಂಹರಾಜು ಮತ್ತು ಎಂ ಏನ್ ಲಕ್ಷ್ಮೀದೇವಿಯವರ ಹಾಸ್ಯ ಚಿತ್ರಕ್ಕೆ ಹೊಸತನ ನೀಡಿದೆ..

ಈ ಚಿತ್ರದ ಮೂಲಕ್ಕೆ ಬಂದಾಗ ಚಿತ್ರವನ್ನು ಆವರಿಸಿಕೊಳ್ಳುವುದು ರಾಜ್ ಎನ್ನುವ ಶಕ್ತಿ.. ಪ್ರತಿ ದೃಶ್ಯಗಳಲ್ಲಿಯೂ ಅವರ ಅಭಿನಯ ಕಳೆಗಟ್ಟುತ್ತಾ ಹೋಗುತ್ತದೆ.. ಅವರ ಮುಂದಿನ ಚಿತ್ರಗಳಲ್ಲಿನ ಅವರ ಅಭಿನಯದ ರಸಗವಳದ ತುಣುಕು ಕೊಡುತ್ತಾ ಹೋಗುತ್ತಾರೆ.. ಯಾಚಿಸುವ ಪ್ರೇಮಿಯಾಗಿ, ಗೆಳೆತನಕ್ಕೆ ಬಾಗುವ ಗೆಳೆಯನಾಗಿ, ತಂದೆಗೆ ತಕ್ಕ ಮಗನಾಗಿ, ಎಲ್ಲ ರೀತಿಯ ಅಭಿನಯಕ್ಕೂ ಸೈ .. ಅವರ ಅಭಿನಯ ನೋಡೋದರಲ್ಲಿಯೇ ಮನಸ್ಸು ಹಾಯ್ ಅನಿಸುತ್ತದೆ..

ಹುಣುಸೂರ್ ಕೃಷ್ಣಮೂರ್ತಿಯವರ ದಕ್ಷ ನಿರ್ದೇಶನ, ಸಂಭಾಷಣೆ, ಹಾಡುಗಳು, ಚಿತ್ರಕತೆ ಎಲ್ಲಾ ವಿಭಾಗಗಳಲ್ಲಿ ಮಿಂಚಿದ್ದಾರೆ.. ಎಲ್ಲೂ ಸಪ್ಪೆ ಅನಿಸಿದಂತೆ ಪುಟ್ಟ ಕತೆಯನ್ನು ಹಿಗ್ಗಿಸಿ ವೀಕ್ಷಕರಿಗೆ ಉತ್ತಮ ಚಿತ್ರ ನೀಡಿದ್ದಾರೆ.. ಹಾಸ್ಯ ದೃಶ್ಯಗಳನ್ನು ಕಟ್ಟಿ ಕೊಡುವುದರಲ್ಲಿ, ಕಚಗುಳಿ ಕೊಡುವ ಸಂಭಾಷಣೆ  ಕಟ್ಟಿ ದೃಶ್ಯಗಳನ್ನು ಸಂಭ್ರಮಿಸುವಂತೆ ಮಾಡಿದ್ದಾರೆ..

ರಾಜ್ ಎನ್ನುವ ಶಕ್ತಿಯನ್ನು ಉತ್ತಮವಾಗಿ ಆಣೆಕಟ್ಟು ಕಟ್ಟಿ.. ಹಿತಮಿತವಾಗಿ ಹರಿಬಿಡುವ ಬಾಗಿಲಿನಂತೆ ಉಪಯೋಗಿಸಿಕೊಂಡಿದ್ದಾರೆ..

ರಾಜ್ ಪ್ರತಿ ಚಿತ್ರಗಳಲ್ಲಿಯೂ ತಾವು ನಿರ್ದೇಶಕರ ನಟ ಎನ್ನುವುದನ್ನು ಈ ಹದಿನೇಳನೇ ಚಿತ್ರದಲ್ಲಿ ತೋರಿಸುತ್ತಾ ಹೋಗಿದ್ದಾರೆ.. ಎಲ್ಲೂ ಎಲ್ಲೇ ಮೀರದ ಅಭಿನಯ.. ಅಭಿನಯದ ಶಾಲೆಯನ್ನು ಮೆಲ್ಲನೆ ಮೆಲ್ಲನೆ ತೆಗೆಯುವಂತೆ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ..

ಹೆಚ್ ಎಸ್ ವೇಣು ಮತ್ತು ಜೆ ಸತ್ಯನಾರಾಯಣ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.. ಅನೇಕಾನೇಕ ಹಾಡುಗಳಿರುವ ಈ ಸಿನಿಮಾಕ್ಕೆ ಸಂಗೀತ ನೀಡಿರುವುದು ಸುಸರ್ಲಾ ದಕ್ಷಿಣಾಮೂರ್ತಿ.. ಎಸ್ ಭಾವನಾರಾಯಣ್ ಅವರು ಗೌರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ..

ಈ ಚಿತ್ರದಲ್ಲಿ ಇಷ್ಟವಾಗುವ ಹಿನ್ನೆಲೆ ಸಂಗೀತದಲ್ಲಿ ಹಿಂದಿ ಚಿತ್ರದ "ದುಃಖಿ ಮನ್ ಮೇರೇ ಸುನೋ ಮೇರೇ ಕೆಹನಾ.. ಮತ್ತು ಚೌದ್ವೀ ಕಾ ಚಾಂದ್ ಹೊ.. ಈ ಎರಡು ಹಾಡುಗಳ ಸಂಗೀತ ಕೇಳಿ ಬರುತ್ತದೆ.. ಮತ್ತು ಇಷ್ಟವಾಗುತ್ತದೆ..

ಕೆಲವು ಈ ಚಿತ್ರದ ತುಣುಕುಗಳು ನಿಮಗಾಗಿ..
ರಾಜ್ ಎಂಟ್ರಿ 

ಸ್ನಿಗ್ಧ ಸೌಂದರ್ಯ ಕೃಷ್ಣಕುಮಾರಿ 

ಲಕ್ಷೀದೇವಿ ಮತ್ತು ಹರಿಣಿ 

ನಗೆಯ ಬಗ್ಗೆ ನರಸಿಂಹರಾಜು 

ನಾಯಕ ನಾಯಕಿ 

ಆತ್ಮೀಯ ಗೆಳೆಯರು 

ಹಾಸ್ಯ ಜೋಡಿ .. 

ಹಾಸ್ಯ ದೃಶ್ಯ 

ರಾಮಚಂದ್ರ ಶಾಸ್ತ್ರಿ 

ಯಕ್ಷ ನಾಯಕನಿಗೆ ಸಹಾಯ ಮಾಡುವ ದೃಶ್ಯ 

ಯಕ್ಷ ಪ್ರೇಮಿಗಳು 

ಹರಿಣಿ 
 

No comments:

Post a Comment