Thursday, July 30, 2020

ಬೆನ್ನಲ್ಲಿ ಬಿದ್ದವರನ್ನು ಕಾಪಾಡುವ ರತ್ನವೇ ಕನ್ಯಾರತ್ನ (1963) (ಅಣ್ಣಾವ್ರ ಚಿತ್ರ ೩೭ / ೨೦೭)

ರಾಜ್ ಕುಮಾರ್ ಅವರಿಗೆ ಸಿಗುತ್ತಿದ್ದ ಚಿತ್ರಗಳು, ಪಾತ್ರ ಪೋಷಣೆ, ಅವರ ಅಭಿನಯ ನೋಡಿದಾಗ ಬೆರಗಾಗುತ್ತದೆ.. ಹಲವಾರು ಛಾಯೆಯೊಂದಿದ್ದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ತಮ್ಮ ಅಭಿನಯದ ಬಗ್ಗೆ ಮಾತ್ರ ಗಮನ ಕೊಟ್ಟು ಮುಂದುವರೆಯುತಿದ್ದ ಅವರ ಪ್ರತಿಭೆಗೆ ನಿಧಾನವಾಗಿ ಸಾಣೆ ಹಿಡಿಯುತ್ತಾ ಸಾಗುತ್ತಿತ್ತು ಚಿತ್ರಗಳ ಸರಣಿಗಳು.

ಅಂತಹ ಚಿತ್ರಸರಣಿಯಲ್ಲಿ ಕಾಣಿಸಿದ್ದು ಕನ್ಯಾರತ್ನ.



ಡಿ ಬಿ ಎನ್ ಪ್ರೊಡಕ್ಷನ್ಸ್ ಅರ್ಥಾತ್ ಡಿ ಬಿ ನಾರಾಯಣ ಅವರ ನಿರ್ಮಾಣದಲ್ಲಿ ಮೂಡಿ ಬಂದ ಚಿತ್ರವನ್ನು ಜೆ ಡಿ ತೋಟಾನ್ ನಿರ್ದೇಶಿಸಿದ್ದಾರೆ.

ವಿಜಯನಾರಸಿಂಹ ಮತ್ತು ಚಿ ಸದಾಶಿವಯ್ಯ ಅವರ ರಚನೆಗೆ ಹಾಡುಗಳನ್ನು ಕಣಗಾಲ್ ಪ್ರಭಾಕರ್ ಶಾಸ್ತ್ರೀ, ಕು ರಾ ಸೀತಾರಾಮ ಶಾಸ್ತ್ರಿ, ಚಿ ಸದಾಶಿವಯ್ಯ ಮತ್ತು ವಿಜಯನಾರಸಿಂಹ ಅವರುಗಳು ರಚಿಸಿದ್ದಾರೆ.

ಸಂಗೀತ ಜಿ ಕೆ ವೆಂಕಟೇಶ್ ಅವರದ್ದು.. ಗಾಯನ ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಟಿ. ಎ ಮೋತಿ ಅವರುಗಳದ್ದು.

ಎಂ ಕೆ ರಾಜು ಅವರ ಛಾಯಾಗ್ರಹಣವಿದ್ದ ಈ ಚಿತ್ರ ಕಲಾವಿದರ ಸಶಕ್ತ ಅಭಿನಯದಿಂದ ನೋಡಿಸಿಕೊಂಡು ಹೋಗುತ್ತದೆ.

ಆಗಿನ ಕಾಲದಲ್ಲಿ ಹಳ್ಳಿಯಲ್ಲಿ ಓದೋಕೆ ಅವಕಾಶ ಹೆಚ್ಚು ಇರದ ಕಾರಣ, ಪಟ್ಟಣದಲ್ಲಿ ಓದುವುದು ಮಾಮೂಲು ಅಂತಹ ಕಾಲೇಜು ಓದುವ ಹುಡುಗನಾಗಿ ರಾಜ್ ಕುಮಾರ್ ಅವರ ಅಭಿನಯ ಲವಲವಿಕೆಯಿಂದ ಕೂಡಿದೆ. ಮನೆಯಲ್ಲಿ ಬಡತನವಿದ್ದರೂ ಅದನ್ನು ಲೆಕ್ಕಿಸದೆ, ಮನೆಯಿಂದ ಹಠಮಾಡಿ ದುಡ್ಡು ತರಿಸಿಕೊಂಡು, ಮೋಜು ಮಾಡುವ ಹುಡುಗನಾಗಿ ರಾಜ್ ಗಮನಸೆಳೆಯುತ್ತಾರೆ.
ಓದುವುದನ್ನು ಬಿಟ್ಟು, ಪ್ರೀತಿ ಮಾಡುತ್ತಾ, ನಾಯಕಿ ಲೀಲಾವತಿಯನ್ನು ಮದುವೆಯಾಗಳು ತಯಾರಾಗುತ್ತಾರೆ.


ಆದರೆ ಅವರ ತಾಯಿಗೆ ಇವರ ಮೋಜಿನ ವಿಚಾರ ಗೊತ್ತಾಗಿ, ಓದಿಗಾಗಿ ಮಾಡಿದ ಸಾಲವನ್ನು ತೀರಿಸುವ ಚಿಂತೆಯಿಂದಾಗಿ ಹಾಸಿಗೆ ಹಿಡಿದು ಅಸು ನೀಗಿದ ಮೇಲೆ, ರಾಜ್ ಕುಮಾರ್ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಓದುವುದರಲ್ಲಿ ಶ್ರದ್ಧೆ ತೋರಿಸಿಕೊಂಡು, ವಿದ್ಯಾವಂತನಾಗುತ್ತಾರೆ ಜೊತೆಗೆ ತಾವು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಅವರ ಅಕ್ಕ ಸಾಹುಕಾರ್ ಜಾನಕೀ ನೆರವಾಗುತ್ತಾರೆ..

ಮುಂದೆ, ಸುಂದರ ಅಕ್ಕ ತಮ್ಮನ ಬಾಂಧ್ಯವನ್ನು ಕೆಡಿಸಲು ಆಸ್ತಿಗಾಗಿ ಹೊಂಚು ಹಾಕಿ ಕಾದಿದ್ದ ರಮಾದೇವಿ, ತನ್ನ ತಮ್ಮನ ಮನೆಯಲ್ಲಿಯೇ ಉಳಿದಿದ್ದ ಸಾಹುಕಾರ್ ಜಾನಕಿಯನ್ನು ಮನೆಯಿಂದ ಹೊರಗೆ ಹಾಕಿ, ನಂತರ ತನ್ನ ಮೊದ್ದು ಮಗನಿಗೆ ಆಸ್ತಿ ಗಳಿಸಿಕೊಡುವ ಇರಾದೆಯಿಂದ ಮನೆಯಲ್ಲಿನ ಒಡವೆಗಳನ್ನು ಕದ್ದು, ಆ ತಪ್ಪನ್ನು ಸಾಹುಕಾರ್ ಜಾನಕಿಯ ಮೇಲೆ ಬರುವಂತೆ ಮಾಡಿ ಕಿರುಕುಳ ಕೊಡುತ್ತಾಳೆ.

ಆದರೆ ನಿಜಾಂಶ ಗೊತ್ತಾಗಿ, ರಾಜ್ ಕುಮಾರ್ ಅವರ ತಂದೆಯನ್ನು ಕೊಂದಿದ್ದವರಿಗೆ ಶಿಕ್ಷೆಯಾಗಿ, ಕಾನೂನಿನ ಸಮರದಲ್ಲಿ ಗೆದ್ದು, ತಮ್ಮ ಸಂಸಾರವನ್ನು ಮತ್ತೆ ಸುಖಾಂತ್ಯಕ್ಕೆ ತಂದು ನಿಲ್ಲಿಸುತ್ತಾರೆ.


ಈ ಇಡೀ ಕತೆಯಲ್ಲಿ ಬರುವ ಮುಖ್ಯ ಪಾತ್ರಗಳು ರಾಜ್ ಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಾಶಂಕರ್, ಸಾಹುಕಾರ್ ಜಾನಕೀ, ಡಿಕ್ಕಿ ಮಾಧವರಾವ್, ರತ್ನಾಕರ್, ಅಶ್ವಥ್ ನಾರಾಯಣ, ಜಯ, ಪಾಪಮ್ಮ.

ತಮ್ಮ ತಮ್ಮ ಪಾತ್ರಗಳಿಗೆ ಅನುಸಾರವಾಗಿ ಗಮನಸೆಳೆಯುವ ಅಭಿನಯ ನೀಡಿದ್ದಾರೆ.

ಹಾಡುಗಳ ಚಿತ್ರೀಕರಣ ಸೊಗಸಾಗಿದೆ. ಹಳೆಯ ಚಿತ್ರಗಳನ್ನು ನೋಡುವುದರ ಭಾಗ್ಯ ಅಂದರೆ, ಇಂದು ಅನೇಕ ತಾಣಗಳಲ್ಲಿ ಚಿತ್ರೀಕರಣ ನಿಷೇಧವಾಗಿರುವ ಅನೇಕ ತಾಣಗಳನ್ನು ನೋಡುವ ಸಂತಸ. ಅಚ್ಚುಕಟ್ಟಾಗಿ ಚಿತ್ರಿಸಿ, ಸರಳ ನೃತ್ಯಗಳನ್ನು ಆಯೋಜಿಸಿ, ಕಣ್ಣಿಗೆ, ಕಿವಿಗೆ ತಂಪೆನಿಸುವಂತೆ ಮೂಡಿಸುವ ಹಾಡುಗಳನ್ನು, ಅಬ್ಬರವಿಲ್ಲದ ವೇಷಭೂಷಣಗಳನ್ನು ನೋಡುವುದೇ ಒಂದು ಖುಷಿ.

ಈ ಚಿತ್ರದ ಹೆಸರಾದ ಹಾಡುಗಳಾದ :"ಬಿಂಕದ ಸಿಂಗಾರಿ", "ಸುವ್ವಿ ಸುವ್ವಿ ಸುವ್ವಾಲೆ", "ಮೈಸೂರ್ ದಸರಾ ಬೊಂಬೆ" ಗಮನಸೆಳೆಯುತ್ತವೆ.

ತಾನು ನೆನೆದು, ಮನೆಯನ್ನು ಬೆಳಗುವ ಪಾತ್ರದಲ್ಲಿ ಅಕ್ಕನಾಗಿ ಸಾಹುಕಾರ್ ಜಾನಕಿ ಸ್ಮರಣೀಯ ಅಭಿನಯ, ತಮ್ಮ ಸುಖವನ್ನು ಮರೆತು, ತಮ್ಮನ ಏಳಿಗೆಗಾಗಿ ಜೀವ ತೇಯುವ ಪಾತ್ರ ಇಷ್ಟವಾಗುತ್ತದೆ. ಕಷ್ಟ ಪಟ್ಟರೆ ಸುಖ ಸಿಗುತ್ತದೆ ಎನ್ನುವ ಹಾಗೆ ಅಂತ್ಯದಲ್ಲಿ ತಾನು ಪ್ರೀತಿಸಿದ್ದವರ ಜೊತೆ ಮದುವೆಯಾಗುವದರೊಂದಿಗೆ ಸಿನೆಮಾ ಸುಖಾಂತ್ಯ ಕಾಣುತ್ತದೆ.



ಹಾಗೆಯೇ ಅಸೆ ದುರಾಸೆಯಿಂದ ತಮ್ಮ ಅಣ್ಣನ ಮನೆಯನ್ನು ನಾಶ ಮಾಡಲು ಪ್ಲಾನ್ ಮಾಡುವ ರಮಾದೇವಿ, ಕಡೆಯಲ್ಲಿ ಕಾನೂನಿನ ಕೈಗೆ ಸಿಗುವುದು, ಮತ್ತೆ ಅಡ್ಡ ದಾರಿಯಲ್ಲಿ ದುಡಿಯಲು ಹೋಗಿ ತಪ್ಪಿನ ಮೇಲೆ ತಪ್ಪು ಮಾಡುತ್ತಾ ಕಡೆಯಲ್ಲಿ ಕಾನೂನಿಗೆ ಶರಣಾಗುವ ಪಾತ್ರದಲ್ಲಿ ಡಿಕ್ಕಿ ಮಾಧವರಾವ್ ಇದ್ದಾರೆ.


ಜೀವನದಲ್ಲಿ ಕಷ್ಟ ನಷ್ಟಗಳು ಏನೇ ಬರಲಿ ಸಂತೋಷ ತುಂಬಾ ಸಂತೋಷ ಎನ್ನುತ್ತಾ, ಮಗಳಿಗೆ ತಿಳಿ ಹೇಳುವ ಪಾತ್ರದಲ್ಲಿ ಬಾಲಕೃಷ್ಣ ಮನಸೆಳೆಯುತ್ತಾರೆ.

ಉಳಿದ ಪೋಷಕ ಪಾತ್ರಗಳಲ್ಲಿ ರಾಜಾಶಂಕರ್, ಗುಗ್ಗು, ರತ್ನಾಕರ್, ಅಶ್ವಥ್ ನಾರಾಯಣ, ಪಾಪಮ್ಮ, ಜಯ ತಮ್ಮ ಛಾಪನ್ನು ಮೂಡಿಸುತ್ತಾರೆ.


ರಾಜ್ ಅವರ ವೇಷಭೂಷಣಗಳು, ಮಾತಿನ ಐಸಿರಿ, ಹಾಡುಗಳಲ್ಲಿನ ನೃತ್ಯ, ಭಾವಾಭಿನಯ ಇಷ್ಟವಾಗುತ್ತದೆ. ರಾಜ್ ಕುಮಾರ್ ಅಭಿನಯದ ರಾಜರಾಗಿ ಇಡುತ್ತಿರುವ ಹೆಜ್ಜೆಗಳು ದೃಢವಾಗುತ್ತ ಸಾಗುತ್ತಿರುವುದು ಅರಿವಾಗುತ್ತದೆ.


ಮತ್ತೆ ಮುಂದಿನ ಸಿನಿಮಾ.. ನಮ್ಮ ನಿಮ್ಮ ಜೊತೆ ನಮ್ಮ ನೆಚ್ಚಿನ ರಾಜ್ ಕುಮಾರ್ ಇದ್ದೆ ಇರುತ್ತಾರೆ.. ಸಿಗೋಣವೇ.. !

Monday, July 20, 2020

ನಿಸ್ವಾರ್ಥದ ದೀಪ ಸದಾ ಬೆಳಕನ್ನು ಪಸರಿಸುತ್ತದೆ - ನಂದಾದೀಪ (1963) (ಅಣ್ಣಾವ್ರ ಚಿತ್ರ ೩೬ / ೨೦೭)

ಈ ಚಿತ್ರದ ನಿಜವಾದ ನಾಯಕ ಸೋರಟ್ ಅಶ್ವಥ್.. ಚಿತ್ರಕಥೆ, ಸಂಭಾಷಣೆ, ಹಾಡುಗಳು, ಹಾಗೂ ಒಂದು ಮುಖ್ಯ ಪಾತ್ರದಲ್ಲಿ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ..


ಒಂದು ಕೌಟುಂಬಿಕ ಕಥೆಯನ್ನು ವಾದಿರಾಜ್ ಬರೆದು ನಿರ್ಮಿಸಿದ್ದಾರೆ.  ಶ್ರೀ ಭಾರತಿ ಚಿತ್ರದ ಲಾಂಛನದಲ್ಲಿ ಮೂಡಿಬಂದ ಚಿತ್ರವನ್ನು ಪ್ರಥಮ ಬಾರಿಗೆ ನಿರ್ದೇಶಕರಾಗಿರುವ ಎಂ ಆರ್ ವಿಠ್ಠಲ್ ಮೂಡಿಸಿದ್ದಾರೆ.

ಎಂ ವೆಂಕಟರಾಜು ಅವರ ಸುಮಧುರ ಸಂಗೀತದಲ್ಲಿ ಮೂಡಿರುವ ಹಾಡುಗಳು ಸೊಗಸಾಗಿವೆ.

ಕನಸೊಂದು ಕಂಡೆ ಕನ್ನಡ ಮಾತೆ.. ನಾಡು ನುಡಿಯ ಬಗ್ಗೆ ಬಣ್ಣಿಸುವ ಹಾಡಾಗಿದೆ
ನಲಿವ ಮನ ಒಂದೇ ದಿನ ಯುಗಳ ಗೀತೆಯಾಗಿ ಪ್ರೇಮಿಗಳ ಮನದಾಳದ ಹಾಡಾಗಿದೆ
ಒಂದು ಗೂಡಿದೆ - ವೇಗವಾದ ಸಂಗೀತ ಇರುವ ಹಾಡು
ಗಾಳಿ ಗೋಪುರ ನಿನ್ ಆಶಾತೀರಾ - ಹಿಂದಿನ ಘಟನೆ ನೆನೆದು ತನ್ನ ಬಗ್ಗೆಯೇ ಹೇಳಿಕೊಳ್ಳುವ ಗೀತೆ
ಯಾರಿಗೆ ಯಾರೋ ನಿನಗಿನ್ಯಾರೋ - ಹತಾಶೆಯ ಹಾಡಾಗಿದೆ
ನಾಡಿನಂದ ಈ ದೀಪಾವಳಿ - ಹಬ್ಬದ ವಿಶೇಷದ ಹಾಡಾಗಿ ಇಂದಿಗೂ ಜನಪ್ರಿಯ
ನ್ಯಾಯಕೆ ಕಣ್ಣಿಲ್ಲ ಪ್ರೀತಿಗೆ ಬೆಲೆಯಿಲ್ಲ - ವಿಷಾದದ ಹಾಡು

ಪಿಬಿ ಶ್ರೀನಿವಾಸ್, ನಾಗೇಂದ್ರಪ್ಪ, ಎಸ್ ಜಾನಕಿ, ಪಿ ಲೀಲಾ, ಜಿಕ್ಕಿ ಹಾಡಿದ್ದಾರೆ..

ಕಚಗುಳಿ ಇಡುವ ಸಂಭಾಷಣೆಗಳು ಇವೆ..

ನರಸಿಂಹ ರಾಜು ಮನೆಯ ಕಾರ್ ಡ್ರೈವರ್.. ಅವರ ಒಂದು ಸಂಭಾಷಣೆ
ತಾಳಿ ಇಲ್ಲದ ಮದುವೆ.. ಬ್ರೇಕ್ ಇಲ್ಲದ ಲಾರಿ ಇದ್ದಂಗೆ 



ಡೈಲಾಗ್ ಮಾಸ್ಟರ್ ಎನ್ನಬಹುದಾದ ನೆಚ್ಚಿನ ಬಾಲಣ್ಣ ಒಂದೆರಡು ದೃಶ್ಯಗಳಲ್ಲಿ ಬಂದು ಹೋದರು ಮಾತುಗಳು ಇಷ್ಟವಾಗುತ್ತವೆ..



"ನಾನು ದಲ್ಲಾಳಿ ದಶಾವತಾರದ ಭೀಮಣ್ಣ... ನಂ ಕಂಪನಿ ಬಿಸಿನೆಸ್  ಮೆಣಸಿನಕಾಯಿಂದ ಹಿಡಿದು ಮನೆ ಮಠ ಹೊಲ ಗದ್ದೆ ಇದು ಇಹಲೋಕದ್ದು.. ಪತಿ ಪತ್ನಿಯರನ್ನು, ಗಂಡು ಹೆಣ್ಣನ್ನು ಸೇರಿಸೋದು.. ಇದು ಪರಲೋಕದ್ದು.".

"ಮಾತುಬಾರದ ಮಕ್ಕಳಿಗೆ ಅಕ್ಷರ ಕಲಿಸುವ ಪ್ರೈಮರಿ ಸ್ಕೂಲ್ ಮಾಸ್ಟರ ಪರಿಸ್ಥಿತಿ ಎಲ್ಲಿ ತನಕ ಸುಧಾರಿಸೊಲ್ವೊ.. ಅಲ್ಲಿವರೆಗೆ ದೇಶ ಸುಧಾರಿಸೋಲ್ಲ.. "

ಅದ್ಭುತ ಸಂಭಾಷಣೆ.. ಬಾಲಣ್ಣ ಅದನ್ನು ಹೇಳುವ ಪರಿ ಆಆಆಹಾ ...

ರಾಜ್ ಕುಮಾರ್ ಹರಿಣಿ ಒಬ್ಬರನ್ನೊಬ್ಬರು ಇಷ್ಟ ಪಡುತ್ತಾರೆ.. ಆದರೆ ಹಣದಾಸೆಯ ರಾಜ್ ಅವರ ಅಪ್ಪ ಈ ಮದುವೆಯನ್ನು ಒಪ್ಪೋದಿಲ್ಲ..


ಹರಿಣಿಯ ಅಣ್ಣನಾಗಿ ಉದಯಕುಮಾರ್ ಕಷ್ಟ ಪಟ್ಟು ಓದಿ ಪಟ್ಟಣದಲ್ಲಿ ಕೆಲಸಕ್ಕೆ ಸೇರಿಕೊಂಡು, ತಾನು ಅನಾಥ ಎಂದು ಹೇಳಿಕೊಂಡು ಕಂಪನಿಯ ಯಜಮಾನರ ಮಗಳನ್ನೇ ಮದುವೆಯಾಗುತ್ತಾರೆ.. ಮತ್ತೆ ತಮ್ಮ ಸಂಸ್ಥೆಯನ್ನು ನೋಡಿಕೊಳ್ಳಲು ಲಂಡನ್ ಗೆ ಹೋಗುತ್ತಾರೆ..



ಕಂಪನಿಯ ಯಜಮಾನ ಅಶ್ವಥ್ ಒಬ್ಬಂಟಿಯಾಗಿ ಒದ್ದಾಡುವಾಗ ಆತನ ಗೆಳೆಯನ ಸಲಹೆಯಂತೆ ಮದುವೆಗೆ ಒಪ್ಪುತ್ತಾರೆ

ಇತ್ತ ಹಳ್ಳಿಯಲ್ಲಿರುವ ಆತನ ಅಪ್ಪ.. ಮಗಳ ಓದಿಗೆ ಮಾಡಿದ ಸಾಲ ತೀರಿಸಲಾಗದೆ, ಒದ್ದಾಡುವಾಗ,
ಬಾಲಣ್ಣ ಹರಿಣಿಯನ್ನು ಅಶ್ವಥ್ ಜೊತೆಯಲ್ಲಿ ಮದುವೆ ಮಾಡಿಸಿ ಆಕೆಯ ಅಪ್ಪನಿಗೆ ಸಹಾಯ ಮಾಡುತ್ತಾರೆ.


ಆದರೆ ಅಪ್ಪ ಸೋರಟ್ ಅಶ್ವಥ್ ಇತ್ತ ಮಗಳ ಮನೆಗೂ ಹೋಗದೆ, ಊರಲ್ಲೂ ಇರದೇ ದೇಶಾಂತರ ಹೋಗುತ್ತಾರೆ..

ಇತ್ತ ಮದುವೆಯಾಗಿ ಜೀವನಕ್ಕೆ ಒಗ್ಗಿಕೊಳ್ಳುತ್ತಿರುವಾಗ.. ತನ್ನ ಪತಿರಾಯ ಮಗಳು ಲೀಲಾವತಿ ಗಂಡ ಉದಯಕುಮಾರ್ ಜೊತೆಯಲ್ಲಿ ದೇಶಕ್ಕೆ ಮರಳುತ್ತಾರೆ..


ತನ್ನ ತಂಗಿ ಎಂದು ಹೇಳಿಕೊಳ್ಳಲಾಗದೆ ಉದಯಕುಮಾರ್, ತನ್ನ ಅಣ್ಣ ಎಂದು ಹೇಳಿಕೊಳ್ಳಲಾಗದ ಹರಿಣಿ ಒದ್ದಾಡುತ್ತಾರೆ.. ಪರಸ್ಪರ ಮಾತಾಡುವಾಗ ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಅಶ್ವಥ್ ಮತ್ತು ಲೀಲಾವತಿ ಹರಿಣಿಗೆ ಅವಮಾನ ಮಾಡುತ್ತಾರೆ.. ಇದರಿಂದ ಬೇಸತ್ತ ಹರಿಣಿ ಅಂತಿಮ ದೃಶ್ಯದಲ್ಲಿ ಅವರ ಹೆಸರಲ್ಲಿಯೇ ಕಟ್ಟಡ ನಿರ್ಮಾಣವಾಗುವ ಕ್ರಿಯೆಯಲ್ಲಿ ಮಾರಣಾಂತಿಕ ಪೆಟ್ಟಾಗುತ್ತದೆ. ... ಕಡೆಯ ದೃಶ್ಯದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡು ಲೀಲಾವತಿ ಮತ್ತು ಅಶ್ವಥ್ ಹರಿಣಿಯಲ್ಲಿ ಕ್ಷಮೆ ಕೇಳುತ್ತಾರೆ.. ನೆಮ್ಮದಿಯಿಂದ ಕೊನೆಯುಸಿರು ಎಳೆಯುತ್ತಾರೆ.. ನಂದಾದೀಪದಂತೆ ತನ್ನನ್ನೇ ಸುಟ್ಟುಕೊಂಡು ಬೆಳಕು ನೀಡುತ್ತಾರೆ..


ಸರಳ ಕತೆಯನ್ನು ಸಂಭಾಷಣೆ ಮತ್ತು ಹಾಡುಗಳ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿರುವ ಸೋರಟ್ ಅಶ್ವಥ್ ಈ ಚಿತ್ರದ ನಿಜವಾದ ಹೀರೋ..


ಪ್ರೇಮಿಯಾಗಿ, ತನ್ನ ತಂದೆಯ ದುಡ್ಡಿನ ದುರಾಸೆಗೆ ಸೆಡ್ಡು ಹೊಡೆದು ಮನೆಯಿಂದ ಹೊರಗೆ ಹೋಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನ ಪಡುವ ಪಾತ್ರದಲ್ಲಿ ರಾಜ್ ಕುಮಾರ್ ಮಿಂಚುತ್ತಾರೆ.. ತಾನು ಬರೆಯುವ ಸಾಹಿತ್ಯ ಉತ್ತಮ ಮಟ್ಟದ್ದು, ಮತ್ತೆ ಅದಕ್ಕೆ ಎಂದೂ ಬೆಲೆ ಕಟ್ಟಿ ಹೊಟ್ಟೆ ಹೊರೆಯಬಾರದು, ವ್ಯಾಪಾರ ದೃಷ್ಟಿಯಲ್ಲಿ ಬಳಕೆಯಾಗಬಾರದು ಎನ್ನುವ ಉದಾತ್ತ ಮನಸಿನಿಂದ ಬಂದ ಅವಕಾಶಗಳನ್ನು ತಿರಸ್ಕರಿಸುತ್ತಾರೆ.. ಆದರೆ ತನ್ನ ಪ್ರೇಯಸಿ ಹರಿಣಿಯ ಮನೆಯ ಕಷ್ಟ ಅರಿತು, ಅವರಿಗೆ ಸಹಾಯ ಮಾಡಲು ಊರನ್ನು ಬಿಟ್ಟು, ಸಮಾಜದಲ್ಲಿ ಚಾಲ್ತಿಯಲ್ಲಿರಲು, ದುಡ್ಡು ಮಾಡಲು ಜಾಹಿರಾತುಗಳಿಗೆ ಕವನ ಬರೆದುಕೊಟ್ಟು, ಸಣ್ಣ ಸಣ್ಣ ಕಾದಂಬರಿಗಳನ್ನು ಓದುಗರ ಅಭಿರುಚಿಗೆ ತಕ್ಕಂತೆ ಬರೆಯಲು ಮುಂದಾಗಿ.. ದುಡ್ಡು ಗಳಿಸಿ ಊರಿಗೆ ಬಂದಾಗ ಹರಿಣಿಯ ಮದುವೆಯಾಗಿದೆ ಎಂದು ತಿಳಿದಾಗ ಅವರ ಅಭಿನಯ ಸೊಗಸಾಗಿದೆ..




ಬೇಡದ ಬದುಕನ್ನು ಬೇಸರದಿಂದ ಕಳೆಯುವಾಗಿನ ಅಭಿನಯ ಸೊಗಸಾಗಿದೆ.. ನಂತರ ವಾದಿರಾಜ್ ಅವರ ಸಹಾಯದಿಂದ ಒಂದು ಆಶ್ರಮ ಕಟ್ಟಿ ಬೆಳೆಸುವ ಪಾತ್ರವಾಗಿ ಅಭಿನಯ  ಮನೋಜ್ಞವಾಗಿದೆ

ಆರಾಮಾಗಿ, ಲೀಲಾಜಾಲವಾಗಿ ಸಾಗುವ ಅವರ ಅಭಿನಯ... ಅರೆ ಎಷ್ಟು ಸುಲಭ ಈ ಅಭಿನಯ ಅನ್ನುವಂತೆ ಮಾಡಿದ್ದಾರೆ.. ರಾಜ್ ಕುಮಾರ್ ಮನಸೆಳೆಯುತ್ತಾರೆ.

ಕಥೆಯ ಓಟಕ್ಕೆ ಭಂಗ ತರದೇ ಹಾಸ್ಯ ದೃಶ್ಯಗಳು ಕತೆಗೆ ಪೂರಕವಾಗಿ ಸಾಗುತ್ತವೆ.. ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ ಮತ್ತು ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿರುವ ರತ್ನಾಕರ ಅವರ ಅಭಿನಯ ಕಚಗುಳಿ ಇಡುವ ಸಂಭಾಷಣೆಗಳು ಚೆನ್ನಾಗಿವೆ.





ಸಹನಟರಲ್ಲಿ, ಪೋಷಕ ಪಾತ್ರಗಳಲ್ಲಿ ರಾಮಚಂದ್ರ ಶಾಸ್ತ್ರೀ, ಜಯಶ್ರೀ, ವಾದಿರಾಜ್, ಹನುಮಂತ ಚಾರ್, ರಮಾದೇವಿ ಕಾಣಿಸಿಕೊಂಡಿದ್ದಾರೆ..





ಈ ಚಿತ್ರದಲ್ಲಿ ಕೆಲವು ತಾಂತ್ರಿಕ ಅಂಶಗಳು ಗಮನ ಸೆಳೆಯುತ್ತದೆ ಕಾರಣ ಛಾಯಾಗ್ರಾಹಕ ಟ್ರಿಕ್ ಶಾಟ್ ಸ್ಪೆಷಲಿಸ್ಟ್ ಆರ್ ಮಧು ಅವರ ಛಾಯಾಗ್ರಹಣ.

ಅಶ್ವಥ್ ಮತ್ತು ಅವರ ಗೆಳೆಯ ಮಾತಾಡುವ ಎರಡು ದೃಶ್ಯಗಳನ್ನು ಒಂದೇ ಫ್ರೇಮಿನಲ್ಲಿ ಕೂರಿಸುವ ಕೈಚಳಕ ಸೂಪರ್..


ಹಾಗೆ ಸೈಕಲ್ ಚಕ್ರದಲ್ಲಿ ರಾಜ್ ಮತ್ತು ವಾದಿರಾಜ್ ಅವರನ್ನು ತೋರಿಸುವ ದೃಶ್ಯ ಗಮನ ಸೆಳೆಯುತ್ತದೆ

ವಿರಾಮದ ದೃಶ್ಯವನ್ನು ರಾಜ್ ಕುಮಾರ್ ಅವರ ಕೈಯಿಂದ ಜಾರಿ ಹೋಗುವ ನೋಟುಗಳು ಮತ್ತು ಅದನ್ನು ವಿರಾಮ ಎಂಬ ಕನ್ನಡದ ಪದಗಳಲ್ಲಿ ತೋರಿಸುವುದು ವಿಶೇಷ..


ಒಂದು ಸರಳ ಕತೆಯನ್ನು ಮನಮುಟ್ಟುವ ಹಾಗೆ ಮೂಡಿಸಿರುವ ಜಾದೂ ನಿರ್ದೇಶಕರಿಂದ ಸಾಧ್ಯವಾಗಿದೆ.. !

ಮತ್ತೊಂದು ಚಿತ್ರ.. ಮತ್ತೊಂದು ಬರಹ.. ಸಿಗೋಣ ಅಲ್ಲವೇ !

Sunday, July 19, 2020

ಸಾಕಿದ ಗಿಡದ ಹಾಗೆ ಸಾಕಿದ ಮಗಳು ಎಂದಿಗೂ ನೆರಳು ನೀಡುವುದು - ಸಾಕುಮಗಳು (1963) (ಅಣ್ಣಾವ್ರ ಚಿತ್ರ ೩೫ / ೨೦೭)

ಮೊದಲ ಒಂದು ಘಂಟೆ ಚಿತ್ರ ನೋಡಿದಾಗ ಅಬ್ಬಬ್ಬಾ ರಾಜಕುಮಾರ್ ಈ ರೀತಿಯ ಪಾತ್ರದಲ್ಲೂ ಮಿಂಚುತ್ತಾರೆ ಅನ್ನಿಸಿತು.. ಬೇಜವಾಬ್ಧಾರಿ ಹುಡುಗನಾಗಿ, ದುರಾಸೆಯ ಅಪ್ಪನ ಜೊತೆ ಸೇರಿ ದುಡ್ಡು ಬರುವ ಕುಸ್ತಿ, ರೇಸು, ಇಸ್ಪೀಟು ಆಡುತ್ತಾ, ದುಡ್ಡು ಬೇಕೆನಿಸಿದರೆ, ಮನೆಯ ಪದಾರ್ಥಗಳನ್ನು ಮಾರುವ ಪಾತ್ರ..

ಎಷ್ಟು ಕರಾರುವಕ್ಕಾಗಿ ನಟಿಸಿದ್ದಾರೆ ಅಂದರೆ, ಹಿಂದಿನ ಚಿತ್ರಗಳಲ್ಲಿ ಇವರೇನಾ ಅಭಿನಯಿಸಿದ್ದು ಅನಿಸುವ ಹಾಗೆ.. ಕಾಯಿಲೆಯಿಂದ ತಾಯಿ ನರಳುತ್ತಿದ್ದರು, ಅದರ ಕಡೆಗೆ ಗಮನ ಕೊಡದೆ, ಮನೆಯಲ್ಲಿ ಹಸಿವೆಯಿಂದ ಪರದಾಡುತ್ತಿದ್ದರು, ತಮ್ಮ ಮೋಜಿಗೆ ತಮ್ಮಲಿರುವ ದುಡ್ಡನ್ನು ಉಪಯೋಗಿಸುವಷ್ಟು ಉಡಾಫೆಯ ಪಾತ್ರ.. ತನ್ನ ತಂಗಿ ಶಾಲೆಯಿಂದ ತಂದಿದ್ದ ಉತ್ತರ ಪತ್ರಿಕೆಗಳನ್ನು ರೇಸು ಆಡುವುದಕ್ಕಾಗಿ ಮಾರಿ, ಅದು ತಮ್ಮ ತಪ್ಪಲ್ಲ ಎಂದು ಸಾಧಿಸಿ ಜೈಲಿಗೆ ಹೋಗುವ ಪಾತ್ರ..


ಪ್ರತಿ ದೃಶ್ಯದಲ್ಲಿಯೂ ಅವರ ಅಭಿನಯ ಮನಸೆಳೆಯುತ್ತದೆ..


ತನ್ನ ತಂಗಿ ತನ್ನನ್ನು ಮತ್ತು ದುರಾಸೆಯ ಅಪ್ಪನನ್ನು ಜೈಲಿಂದ ಬಿಡಿಸಲು, ಆಸ್ತಿವಂತ ಮುದುಕನನ್ನು ಮದುವೆಯಾಗಲು ಸಿದ್ಧವಾಗುವ ವಿಚಾರ ತಿಳಿದು, ಬದಲಾಗುತ್ತಾರೆ.. ಪರಿಶ್ರಮ ಪಟ್ಟು ದುಡಿಯಲು ಶುರುಮಾಡುತ್ತಾರೆ.. ಮತ್ತೆ ತನ್ನ ತಂಗಿ ಒಬ್ಬ ವಿದ್ಯಾವಂತನನ್ನು ಮದುವೆಯಾದದ್ದು ತಿಳಿದು ಸಂತೋಷ ಪಡುತ್ತಾರೆ..


ಆದರೆ ವಿಧಿಲಿಖಿತ.. ಅವರ ಮೊದಲ ಬೇಜವಾಬ್ಧಾರಿ ನಡತೆಯಿಂದ.. ತಂಗಿಯ ಗಂಡನ ಮನೆಯವರು ಈತನನ್ನು ತಪ್ಪಿತಸ್ಥನಾಗಿ ನೋಡುತ್ತಾರೆ.. ನಂತರ ತನ್ನ ತಪ್ಪನ್ನು ತಿದ್ದಿಕೊಳ್ಳಲು, ಅಪಘಾತದಿಂದ ತನ್ನ ಕಣ್ಣು ಕಳೆದುಕೊಳ್ಳುವಳನ್ನು ಮದುವೆಯಾದರೂ.. ಅದು ಸರಿಯಾಗದೆ.. ಹೆಂಡತಿಯ ಕೈಲಿ ಬೈಸಿಕೊಂಡು ಮನೆಯಿಂದ ಹೊರಗೆ ಹೋಗುತ್ತಾರೆ.. ನಂತರ ವಿರಾಗಿ ಜೀವನ ಮಾಡುತ್ತಾ.. ಮತ್ತೆ ವಿಧಿಯ ಆಟದಂತೆ, ತನ್ನ ಹೆಂಡತಿಗೆ ಸೇವೆ ಮಾಡುತ್ತಾ.. ಅವಳಿಗೆ ಕಣ್ಣು ಬಂದಾಗ ಖುಷಿ ಪಡುವ ಪಾತ್ರದಲ್ಲಿ ರಾಜ್ ಕುಮಾರ್ ಅವರ ಅಭಿನಯ ಮನಸೆಳೆಯುತ್ತದೆ..

ಪ್ರತಿ ಮಾತುಗಳು, ಭಾವಾಭಿನಯದಲ್ಲಿ ಮನಗೆಲ್ಲುತ್ತಾರೆ..

ಸಾಕುಮಗಳಾಗಿ ಕಲ್ಪನಾ ಮೊದಲ ಚಿತ್ರದಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.. ಬೇಜವಾಬ್ಧಾರಿ ಅಣ್ಣ, ಅಪ್ಪನನ್ನು ಸಾಕುತ್ತಾ, ರೋಗಿಷ್ಟೆ ತಾಯಿಯನ್ನು ಸಲುವುವ ಪಾತ್ರ, ಮತ್ತೆ ಮದುವೆಯಾಗಿ ಗಂಡನ ಮನೆಯಲ್ಲಿದ್ದಾಗಿಯೂ... ತನ್ನ ಅಪ್ಪ ಮಾಡುವ ಅಪರಾಧವನ್ನು ಮುಚ್ಚಲು ಹೋಗಿ ಸಿಕ್ಕಿಹಾಕಿಕೊಂಡು ಮನೆಯಿಂದ ಹೊರಬೀಳುವ ಸೊಸೆಯಾಗಿ, ನಂತರ ಮಗುವಿಗೆ ಜನ್ಮ ಕೊಟ್ಟು ಯಾರೋ ಕೊಟ್ಟ ಆಶ್ರಯದಲ್ಲಿ ಬೆಳೆದು, ಕೊನೆಯಲ್ಲಿ ಸುಖಾಂತ್ಯ ಹೊಂದುವ ಸಂಸಾರದ ಸೂತ್ರಧಾರಿಯಾಗಿ ಅವರ ಅಭಿನಯ ಸೂಪರ್..


ಬೇಜವಾಬ್ಧಾರಿ ಅಪ್ಪನಾಗಿ ಡಿಕ್ಕಿ ಮಾಧವರಾವ್ ಅದ್ಭುತ ಅಭಿನಯ.. ನಾಚಿಕೆ ಏನೂ ಇಲ್ಲದೆ ಕಳ್ಳತನ ಮಾಡುವ ಅವರ ಪಾತ್ರ ಸೊಗಸಾಗಿ ಚಿತ್ರಿಸಿದ್ದಾರೆ.. ಗಮನ ಸೆಳೆಯುತ್ತಾರೆ..


ಥ್ರಿಲ್ ರೋಮಾಂಚನ ಎನ್ನುವ ಬಾಲಕೃಷ್ಣ.. ಪ್ರತಿ ದೃಶ್ಯದಲ್ಲಿಯೂ ನಗೆ ಉಕ್ಕಿಸುತ್ತಾರೆ  ಸಂಸಾರವನ್ನು ತೊಗಿಸುವ ಬರದಲ್ಲಿಯೂ ತಮ್ಮ ಪತ್ತೆಧಾರಿ ಸ್ವಭಾವದಿಂದ ಪೇಚಿಗೆ ಸಿಲುಕುವ.. ತನ್ನ ಘಟವಾಣಿ ಹೆಂಡತಿಯನ್ನು ಬದಲಾಯಿಸುವ ಪಾತ್ರದಲ್ಲಿ ಬಾಲಣ್ಣ ಸೂಪರ್..


ಬಜಾರಿ ಎನ್ನುವಂಥಹ ಸ್ವಭಾವ ಅಲ್ಲದಿದ್ದರೂ ಹಠವಾದಿಯಾಗಿ ಸಾಹುಕಾರ್ ಜಾನಕೀ ಗಮನ ಸೆಳೆಯುವ ಅಭಿನಯ.. ಕಣ್ಣು ಕುರುಡಾದರೂ ಛಲ ಬಿಡದೆ ಗಂಡನನ್ನು, ಮನೆಯವರನ್ನು ದಬಾಯಿಸುವ ಪಾತ್ರ, ತನ್ನ ಗಂಡನ ಸೇವೆಯಿಂದ ಮನಕರಗುವ ಅಭಿನಯ ಇಷ್ಟವಾಗುತ್ತದೆ.


ಪಾತ್ರ ಚಿಕ್ಕದಾದರೂ ಚಿತ್ರಕ್ಕೆ ಬೇಕಾದ ತಿರುವು ಕೊಡುವ ಪಾತ್ರದಲ್ಲಿ ರಾಜಾಶಂಕರ್ ಇಷ್ಟವಾಗುತ್ತಾರೆ..

ಎಂದಿನಂತೆ ಘಟವಾಣಿ ಅಂದರೆ ರಮಾದೇವಿ ಎನ್ನವ ಹೆಸರನ್ನು ಮತ್ತೆ ನಿಜ ಮಾಡುತ್ತಾರೆ.

ಸಣ್ಣ ಪಾತ್ರ ಆದರೆ ಸುಮಾರು ಚಿತ್ರದುದ್ದಕ್ಕೂ ಇರುವ ನರಸಿಂಹರಾಜು ಅವರು ಈ ಚಿತ್ರದಲ್ಲಿ ಇದ್ದಾರೆ.


ಕಷ್ಟಕ್ಕೆ ಆಗುವವರು ರಕ್ತ ಸಂಬಂಧಿಗಳೇ ಆಗಬೇಕೆಂದಿಲ್ಲ.. ಮನ ಕರಗುವವರು ಆಗುತ್ತಾರೆ ಎಂಬ ಮಾತನ್ನು ಈ ಚಿತ್ರದಲ್ಲಿ ತಳಹದಿಯಾಗಿ ಉಪಯೋಗಿಸಿದ್ದಾರೆ. ಈರ ಷಣ್ಮುಗಂ ಅವರ ಕತೆಗೆ ಇದೆ ಬುನಾದಿ.

ಚಿನಕುರಳಿಯಂತಹ ಸಂಭಾಷಣೆ ಜಿ ವಿ ಅಯ್ಯರ್ ಅವರದ್ದು.

ಸಹ ನಿರ್ದೇಶಕರಾಗಿ ಪುಟ್ಟಣ್ಣ ಕಣಗಾಲ್ ಹಾಗೂ ಕೆ ಸಿಂಗಮುತ್ತು ಕೆಲಸ ಮಾಡಿದ್ದಾರೆ

ಈ ಚಿತ್ರದ ಟೈಟಲ್ ಕಾರ್ಡ್ ಸ್ವಲ್ಪ ವಿಭಿನ್ನವಾಗಿ ತೋರಿಸಿದ್ದಾರೆ.. ಮಗುಚಿ ಹಾಕುವ ಮ್ಯಾಗಜಿನ್ ತೋರಿಸುತ್ತಾ.. ಬದಲಾಗುವ ಪ್ರಪಂಚ.. ಬದಲಾಗುವ ಮನುಜನ ಬದುಕು ಹೀಗೆ ಅನೇಕ ಮಜಲುಗಳನ್ನು ತೋರಿಸುತ್ತಾ ಹೋಗುತ್ತಾರೆ.

ಪದ್ಮಿನಿ ಪಿಕ್ಚರ್ಸ್ ಲಾಂಛನದ ಈ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ್ದು ಬಿ ಆರ್ ಪಂತುಲು..



ಅವರ ಆಸ್ಥಾನದ ಸಂಗೀತ ವಿದ್ವಾಂಸ ಟಿ ಜಿ ಲಿಂಗಪ್ಪ ಅವರ ಸಂಗೀತವಿರುವ ಈ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್, ಘಂಟಸಾಲ, ಪಿ ಸುಶೀಲ, ಎಸ್ ಜಾನಕೀ, ಪಿ  ಲೀಲಾ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಅವರ ಸಾಹಿತ್ಯವನ್ನು ಹಾಡಿದ್ದಾರೆ.

ಹೇಳಿದ ಮಾತ ಕೇಳಿ.. ಅಪ್ಪ ಮಗನ ಗುಣಗಳನ್ನು ಪರಿಚಯಿಸುವ ಹಾಡಾಗಿದೆ
ಜೀವನ ರಾಗ ಈ ಅನುರಾಗ .. ಪ್ರಣಯಗೀತೆ ಇಷ್ಟವಾಗುತ್ತದೆ
ಒಂದೇ ಒಂದು ಹೊಸ ಹಾಡು.. ಇಂದಿಗೂ ಮನಸೆಳೆಯುವ ಹಾಡು
ಬಾ ಬೇಗ ಮನಮೋಹನ ನೃತ್ಯಕ್ಕೆ ಹಾಡಾಗಿದೆ
ನಾನು ಅಂಧಳಾದೆ ನೀನು ಮೂಗನಾದೆ.. ಪತಿ ಪತ್ನಿಯ ನಡುವಿನ ಭಾವನಾತ್ಮಕ ಗೀತೆಯಾಗಿದೆ
ಎಲ್ಲಿ ಹೊಂಬೆಳಕೆಲ್ಲಿ .. ವಿಷಾದ ಗೀತೆಯಾಗಿದೆ

ಸೊಗಸಾದ ಸಾಮಾಜಿಕ ಚಿತ್ರವಾಗಿದೆ.. ಇಷ್ಟವಾಗುತ್ತದೆ..

ಮುಂದೊಂದು ಚಿತ್ರ ಹೊತ್ತು ಬರುವೆ.. ಜೊತೆಯಲ್ಲಿ ಇರ್ತೀರ ಅಲ್ಲವೇ.. !

Sunday, July 12, 2020

ಆಶಾಪಾಶವೆಂಬ ವಲ್ಮೀಕದಲ್ಲಿ ಇರಬಾರದೆಂದು ಸಾರಿದ ವಾಲ್ಮೀಕಿ (1963) (ಅಣ್ಣಾವ್ರ ಚಿತ್ರ ೩೪ / ೨೦೭)

ರಾಮಾಯಣ ಮಹಾಭಾರತ ನಮ್ಮ ಪ್ರಪಂಚದ ಎರಡು ಅದ್ಭುತ ಕಾವ್ಯಗಳು..

ರಾಮಾಯಣ ಕಾವ್ಯವನ್ನು ರಚಿಸಿದ ಕಿರಾತನಾಗಿದ್ದ ವಾಲ್ಮೀಕಿಯ ಕುರಿತಾದ ಚಿತ್ರವಿದು.  ದೇವರ್ಷಿಯ ಶಾಪಗ್ರಸ್ತ ಮಗನಾಗಿದ್ದ ಈತ ಕಿರಾತನಾಗಿ ಭುವಿಯಲ್ಲಿ ಜನ್ಮ ತಾಳುತ್ತಾನೆ. ಕುಲಕಸುಬೆಂಬಂತೆ ದಾರಿ ಹೋಕರನ್ನು ಸುಲಿದು, ಕೊಂದು ದೋಚುವ ಗುಂಪಿನ ನಾಯಕ ಈತ.


ಒಮ್ಮೆ ಕಾಡಿನಲ್ಲಿ ಬರುತ್ತಿದ್ದ ರಾಜಕುಮಾರಿ ಮತ್ತು ಆಕೆಯ ಸಖಿಯರನ್ನು ದೋಚಿದಾಗ.. ಕಿರಾತನ ರೂಪಿಗೆ ಮಾರು ಹೋಗುತ್ತಾಳೆ.. ಅರಮನೆಯಲ್ಲಿ ದಾರಿಗಳ್ಳರಿಂದ ಕಿರಾತನೇ ರಕ್ಷಿಸಿದ್ದು ಎಂದು ಸುಳ್ಳು ಹೇಳಿ.. ಆತನಿಗೆ ಗೌರವ ಕೊಡಿಸುತ್ತಾಳೆ.. ಆದರೆ ಸೇನಾಧಿಪತಿ ಕಿರಾತನನ್ನು ಗುರುತು ಹಿಡಿದು.. ಇವನೇ ದಾರಿಗಳ್ಳ ಅಂತ ಗೊತ್ತಾದಾಗ ರಾಜ ಮರಣ ದಂಡನೆ ಶಿಕ್ಷೆ ವಿಧಿಸುತ್ತಾನೆ.


ಮೋಹಿತಳಾದ ರಾಜಕುಮಾರಿ ಕಿರಾತ ತಪ್ಪಿಸಿಕೊಂಡು ಹೋಗಲು ಸಹಾಯ ಮಾಡುತ್ತಾಳೆ.. ತಪ್ಪಿಸಿಕೊಳ್ಳುವ ಕಿರಾತ.. ಬೆಟ್ಟದಿಂದ ನೀರಿಗೆ ಧುಮುಕುತ್ತಾನೆ .. ಪೆಟ್ಟಾಗಿ ಬಿದ್ದ ಕಿರಾತನನ್ನು.. ಕಿರಾತ ಗುಂಪಿನ ಇನ್ನೊಬ್ಬಳು ರಕ್ಷಿಸುತ್ತಾಳೆ.. ಮತ್ತೆ ಅವನಲ್ಲಿ ಅನುರಕ್ತಳಾಗುತ್ತಾಳೆ..

ದೃಶ್ಯ ಜೋಡಣೆ ಚೆನ್ನಾಗಿದೆ 
ಇತ್ತ ರಾಜಕುಮಾರಿ ಕಿರಾತನನ್ನು ಹುಡುಕಿಕೊಂಡು ಕಾಡಿಗೆ ಬಂದಾಗ.. ಅವನು ಇನ್ನೊಬ್ಬಳಲ್ಲಿ ಅನುರಕ್ತವಾಗಿರುವ ವಿಷಯ ತಿಳಿದು ಬೇಸರಗೊಳ್ಳುತ್ತಾಳೆ.. ತನ್ನ ತಂದೆಯಲ್ಲಿ ತನ್ನ ಪ್ರೀತಿಯನ್ನು ಅರಿಕೆ ಮಾಡಿಕೊಂಡಾಗ ಆತ ಕಿರಾತನ ಕುಟುಂಬದ ಬಳಿ ಕೇಳಿಕೊಳ್ಳುತ್ತಾನೆ.. ಆದರೆ ಕಿರಾತ ತನ್ನನ್ನು ರಕ್ಷಿಸಿದವಳನ್ನು ಮದುವೆಯಾಗಿರುತ್ತಾನೆ..

ಆಗ ರಾಜಕುಮಾರಿ ನಾ  ವಿರಹ ವೇದನೆಯಿಂದ ಒದ್ದಾಡಿದ ಹಾಗೆ.. ನೀನು ವಿರಹವೇದನೆಯಿಂದ ನಶಿಸಿಹೋಗು ಎಂದು ಶಾಪ ಕೊಟ್ಟು ಮೃತಳಾಗುತ್ತಾಳೆ..

ಮುಂದೆ ಕಿರಾತ ಪ್ರೀತಿಯನ್ನು ತೋರಿಸುವ ಬರದಲ್ಲಿ ನಾಗರತ್ನ ಮಾಲೆ  ತಂದು ಕೊಡುತ್ತೇನೆ ಎಂದು ಮಾತು ಕೊಟ್ಟು.. ರತ್ನವನ್ನು ಸಂಗ್ರಹಿಸುವುದಕ್ಕಾಗಿ ಭುವಿಯ ಹಾವನ್ನೆಲ್ಲ ಕೊಂದರೂ ಸಿಗೋದಿಲ್ಲ.. ಹಾವುಗಳೆಲ್ಲ ನಶಿಸಿ ಹೋಗುತ್ತಿರುವುದನ್ನು ಕಂಡು ವಿಷ್ಣು.. ನಾರದನ ಮೂಲಕ ಕಿರಾತನಿಗೆ ಜ್ಞಾನೋದಯವಾಗಿಸಲು ಉಪಾಯ ಮಾಡುತ್ತಾನೆ..









ಮಹಾಲಕ್ಷ್ಮಿ ಮೂರ್ತಿಯಲ್ಲಿದ್ದ ನಾಗರತ್ನ ಮಾಲೆಯನ್ನು ಹೊತ್ತೊಯ್ಯುವಾಗ ನಾರದ ಅಡ್ಡಿ ಬಂದು..  ನಿನ್ನ ಪಾಪ ಪುಣ್ಯಗಳಲ್ಲಿ ನಿನ್ನ ತಂಡ ಪಾಲು ಪಡೆಯುತ್ತದೆಯಾ ಎಂದು ಕೇಳಲು ಹೇಳುತ್ತಾನೆ.. ಆಗ ಅವನ ತಂಡದವರು, ತನ್ನ ಹೆತ್ತವರು, ಕೈ ಹಿಡಿದ ಮಡದಿ ಎಲ್ಲರೂ ಪಾಪದಲ್ಲಿ ಪಾಲು ತೆಗೆದುಕೊಳ್ಳಲು ಹಿಂದೆ ಸರಿದಾಗ.. ಅವನಿಗೆ ಜ್ಞಾನೋದಯವಾಗಿ.. ನಾರದನ ಮಾತಿನಂತೆ ನಾರಾಯಣ ಧ್ಯಾನ ಮಾಡುತ್ತಾ ತಪಸ್ಸಿಗೆ ಕೂರುತ್ತಾನೆ.. ಅದನ್ನು ಕಂಡ ಆತನ ಮಡದಿ ಕೂಡ ಧ್ಯಾನ ಮಾಡುತ್ತಾ .. ವಿಷ್ಣುವಿನ ಆಶೀರ್ವಾದದಂತೆ ಭುವಿಯನ್ನು ತ್ಯಜಿಸಿ ಸ್ವರ್ಗಕ್ಕೆ ಹೋಗುತ್ತಾಳೆ..




ಇತ್ತ ಕಿರಾತ ವರ್ಷಾನುಗಟ್ಟಲೆ ನಾರಾಯಣ ಧ್ಯಾನ ಮಾಡುತ್ತಲೇ ಇರುತ್ತಾನೆ.. ಆಗ ನಾರದ ಮತ್ತೆ ಬಂದು ರಾಮ ಮಂತ್ರ ಜಪಿಸಲು ಉಪದೇಶಿಸುತ್ತಾನೆ....


ಶಿವನು ಪ್ರತ್ಯಕ್ಷನಾಗಿ ವಲ್ಮೀಕ ಅಂದರೆ ಹುತ್ತದಲ್ಲಿ ಇದ್ದವನಾಗಿದ್ದರಿಂದ ವಾಲ್ಮೀಕಿ ಎಂದು  ಹರಸುತ್ತಾನೆ.



ಒಮ್ಮೆ ಕಿರಾತನ ವೇಷದಲ್ಲಿ ವಿಷ್ಣು ಕ್ರೌ೦ಚ ಪಕ್ಷಿಗಳ ವೇಷದಲ್ಲಿದ್ದ ರಾಕ್ಷಸರನ್ನು ಸಂಹಾರ ಮಾಡುತ್ತಾನೆ.. ಇದನ್ನರಿಯದ ವಾಲ್ಮೀಕಿ ಆ ಪಕ್ಷಿಯ ಆರ್ತನಾದ ಕೇಳಲಾರದೆ.. ದುಃಖಪೂರಿತ ಶ್ಲೋಕ ಹೇಳುತ್ತಾನೆ.. ಅದೇ ರಾಮಾಯಣ ಕೃತಿಯ ರಚನೆಗೆ ಸ್ಪೂರ್ತಿಯಾಗುತ್ತದೆ..






ಇಷ್ಟು ಕತೆಯನ್ನು ಉತ್ತಮವಾಗಿ ನೋಡುವಂತೆ ಚಿತ್ರಿಸಿದವರು ನಿರ್ದೇಶಕ ಸಿ ಎಸ್ ರಾವ್..
ಜ್ಯೂಪಿಟರ್ ಪಿಕ್ಚರ್ಸ್ ಲಾಂಛನದಲ್ಲಿ ಎಸ್ ಕೆ ಹಬೀಬುಲ್ಲಾ ನಿರ್ಮಿಸಿದ್ದಾರೆ.

ಚಿತ್ರದ ಅಂತ್ಯದಲ್ಲಿ ಇಡೀ ರಾಮಾಯಣವನ್ನು ತೋರಿಸಿದ್ದಾರೆ..

ನಾಗರತ್ನ ಮಾಲೆ ತೆಗೆದುಕೊಳ್ಳುವ ದೃಶ್ಯ.. ಕಿರಾತನ ಇಬ್ಬರೂ ಪ್ರೇಯಸಿಯರನ್ನು ಬೇರೆ ಬೇರೆ ದೃಶ್ಯಗಳನ್ನು ಒಂದೇ ಫ್ರೇಮಿನಲ್ಲಿ ತೋರಿಸಿರುವುದು ಎಲ್ಲವೂ ಸೊಗಸು.

ಘಂಟಸಾಲ ಅವರ ಸಂಗೀತದಲ್ಲಿ ಜಲಲ ಜಲಲ ಜಲಧಾರೆ ಮತ್ತು ಮನಸೇ ಮಹಾ ಬಯಕೆ ಹಾಡುಗಳು  ಗಮನ ಸೆಳೆಯುತ್ತದೆ.. ಸಾಹಿತ್ಯ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರದ್ದು..

ಘಂಟಸಾಲ, ಸುಶೀಲ, ಲೀಲಾ, ಜಾನಕೀ, ಕೋಮಲ =ಮ್ ರಾಘವುಲು, ಸತ್ಯಂ ಹಿನ್ನೆಲೆ ಗಾಯಕರಾಗಿದ್ದಾರೆ.

ಛಾಯಾಗ್ರಹಣ ಎಂ ಎ ರೆಹಮಾನ್ ಮತ್ತು ಪಿ ದತ್ತಾತ್ರೇಯ..

ಇನ್ನೊಂದು ವಿಶೇಷವೆಂದರೆ ಸಿದ್ದಲಿಂಗಯ್ಯನವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ರಾಜ್ ಕುಮಾರ್ ಅವರ ಅಭಿನಯ ಎತ್ತರಕ್ಕೆ ಏರುತ್ತಿರುವ ಹಂತವನ್ನು ಇಲ್ಲಿ ಗಮನಿಸಬಹುದು.. ದಾರಿಗಳ್ಳನಾಗಿ ಇರಬೇಕಾದ ಕೋಪ, ದರ್ಪ, ಪ್ರೇಮಿಯಾಗಿ ಇರಬೇಕಾದ ನವಿರು ಭಾವ, ಪತ್ನಿಯ ಆಸೆಯನ್ನು ಈಡೇರಿಸುವ ಪತಿಯಾಗಿ ಇರುವ ಅಹಂ..  ಮಾರ್ಪಾಡಾದ ಮೇಲೆ ತಾಳ್ಮೆಯ ಭಾವ, ತಪಸ್ವಿ ಮನಸ್ಸು ಎಲ್ಲದರಲ್ಲೂ ಮಿಂಚುತ್ತಾರೆ.. ಸಂಭಾಷಣೆಯನ್ನು ಕೇಳೋದೇ ಒಂದು ಖುಷಿ..
ಅವರಿರದ ಚಿತ್ರಗಳನ್ನು ಊಹಿಸಿಕೊಳ್ಳಲು ಕಷ್ಟವಾಗುತ್ತಿರುವ ಸನ್ನಿವೇಶ ಸೃಷ್ಟಿಯಾಗುತ್ತಿರುವ ಸೂಚನೆಗಳು ಕಾಣಿಸಲು ಶುರುವಾಗುತ್ತಿದೆ.. ಅಭಿನಯ, ನೃತ್ಯ, ಹೊಡೆದಾಟ, ಸಂಭಾಷಣೆ ಹೇಳು ಭಾವ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ ..



ಉಳಿದ ಪಾತ್ರಗಳಲ್ಲಿ ನಟಿಸಿರುವ ಲೀಲಾವತಿ, ನರಸಿಂಹರಾಜು, ಎಂ ಎನ್ ಲಕ್ಷ್ಮೀದೇವಿ, ಮತ್ತು ಇತರ ಸಹಕಲಾವಿದರ ಅಭಿನಯ ಚಿತ್ರಕ್ಕೆ ಪೂರಕವಾಗಿದೆ.





ಚಿತ್ರವೂ ಎಲ್ಲೂ ಬೋರ್ ಆಗದೆ ನೋಡಿಸಿಕೊಂಡು ಹೋಗುತ್ತದೆ..

ಮುಂದೆ ಇನ್ನೊಂದು ಚಿತ್ರ. ಇನ್ನೊಂದು ಬರಹ.. !