Sunday, October 4, 2026

ಕೈಲಾಸ ಕಾಣಬೇಕೇ ಮೊದಲು ಕೈಯಲ್ಲಿ ಕಾಸಿದೆಯಾ ಎಂದು ಕೇಳುವ ಕಾಸಿದ್ರೆ ಕೈಲಾಸ 1971 (ಅಣ್ಣಾವ್ರ ಚಿತ್ರ ೧೩೨/೨೦೭)


ಭಗವಂತ ಎರಡು ರೀತಿಯಲ್ಲಿ ಪಾಠ ಕಳಿಸುತ್ತಾನೆ.. 
ಒಂದು : ಕಷ್ಟದ ಸರಮಾಲೆ ಕೊಟ್ಟು, ತಾನು ಮಾಡಿದ ತಪ್ಪನ್ನು ಅರಿಯುವಂತೆ ಮಾಡಿ.. ಪಾಠ ಕಳಿಯೊಂದು
ಎರಡು : ತಾನಿದ್ದ ಮೇಲ್ದರ್ಜೆಯ ಸ್ಥಿತಿಯ ಸನ್ನಿವೇಶವನ್ನು ಉಲ್ಟಾ ಮಾಡಿ ಆ ಪರಿಸ್ಥಿಯಲ್ಲಿ ಮೇಲಿದ್ದ ಸನ್ನಿವೇಶವನ್ನು ಕೆಳದರ್ಜೆಗೆ ವರ್ಗಾಯಿಸಿ.. ತಾನು ಮಾಡಿದ್ದ ತಪ್ಪು ತನಗೆ ಅರಿವಾಗುವಂತೆ ಮಾಡಿ ಪಾಠ ಕಲಿಯೋದು.. 

ಈ ಚಿತ್ರ ಎರಡನೇ ದೃಶ್ಯದ ರೀತಿಯಲ್ಲಿ ಮೂಡಿ ಬಂದಿದೆ.. ಶ್ರೀಮಂತನಾಗಿದ್ದ ನಾಯಕ.. ತನ್ನ ಉಡಾಳ ಗೆಳೆಯರನ್ನು ಕೂಡಿಕೊಂಡು ಮೋಜು ಮಸ್ತಿಗಳಲ್ಲಿ ದಿನ ಕಳೆಯುತ್ತಾ.. ಎಷ್ಟು ತಿಂದರೂ ಕರಗದ ಆಸ್ತಿಯನ್ನು ಸ್ವಲ್ಪಸ್ವಲ್ಪವೇ ಮುಕ್ಕುತ್ತಿದ್ದ ಗೆಳೆಯರನ್ನು ದೇವರೆಂದು ನಂಬಿ.. ಬದುಕನ್ನು ನಿಭಾಯಿಸಿರುತ್ತಾನೆ.. 

ಕಷ್ಟದಲ್ಲಿದ್ದ ದಾರಿಹೋಕನನ್ನು ಕರುಣೆಯ ದೃಷ್ಟಿಯಿಂದ ಮನೆಗೆ ಕರೆದುಕೊಂಡು ಬಂದು.. ತನ್ನ ಉಡಾಳ ಗೆಳೆಯರ ಜೊತೆ ನೀನು ಒಬ್ಬ ಎಂದು ಆತನನ್ನು ಸೇರಿಸಿಕೊಂಡು ಸಾಗುವಾಗ.. ಅಚಾನಕ್ ಆ ಗೆಳೆಯರ ದುಷ್ಟಬುದ್ಧಿಯ ಒಂದು ಯೋಜನೆ ಹೊಸ ಗೆಳೆಯನಿಗೆ ಗೊತ್ತಾಗುತ್ತದೆ.. ಅದರಿಂದ ತನ್ನ ಸ್ನೇಹಿತನನ್ನು ರಕ್ಷಿಸಲು ಹೋಗಿ ತನ್ನ ಕಾಲು ಕಳೆದುಕೊಳ್ಳುತ್ತಾನೆ.. 

ತನ್ನನ್ನು ರಕ್ಷಿಸಲು ತನ್ನ ಪ್ರಾಣವನ್ನು ಲೆಕ್ಕಿಸದೆ ಶ್ರಮಿಸಿದ ತನ್ನ ಹೊಸ ಗೆಳೆಯನ ಬದುಕಿಗಾಗಿ ಮತ್ತೆ ಸ್ನೇಹದ ಋಣ ಸ್ವಲ್ಪ ಮಟ್ಟಿಗೆ ತೀರಿಸಿಕೊಳ್ಳುವ ಸಲುವಾಗಿ ತಾನಂ ಇಡೀ ಆಸ್ತಿ ಹಣ ಸಂಪತ್ತನ್ನು ಆತನ ಸ್ನೇಹಿತನಿಗೆ ಬರೆದುಕೊಡುತ್ತಾನೆ.. 

ಅಲ್ಲಿಂದ ಚಿತ್ರದ ಇನ್ನೊಂದು ಮಗ್ಗುಲು ಶುರುವಾಗುತ್ತದೆ.. ಕೈತುಂಬಾ ಸದಾ ದುಡ್ಡಿಟ್ಟುಕೊಂಡು ಅದರ ಬೆಲೆ ಗೊತ್ತಿಲದಂತೆ ಬೆಳಿದಿದ್ದ ನಾಯಕ.. ಪ್ರತಿಯೊಂದು ಪೈಸಕ್ಕೂ ತನ್ನ ಸ್ನೇಹಿತನ ಮುಂದೆ ಕೈಚಾಚಬೇಕೆಂದು ತಿಳಿದಾಗ ಬದುಕಿನ ತೀವ್ರತೆ ಅನುಭವಕ್ಕೆ ಬರುತ್ತದೆ.. 

ನಂತರ ನೆಡೆಯುವ ಕೆಲವು ಘಟನೆಗಳು ನಾಯಕನಿಗೆ ಬದುಕಿನ ಪೂರ್ತಿ ಚಕ್ರ ಅರ್ಥವಾಗುತ್ತದೆ.. ತನ್ನ ಸ್ನೇಹಿತ ತನ್ನ ಆಸ್ತಿಯನ್ನು ಉಳಿಸಲೆಂದೇ ಇಷ್ಟು ನಾಟಕ ಮಾಡಿದ ಅನ್ನುವ ಸಂದೇಶ ಗೊತ್ತಾದಾಗ ಮತ್ತೆ ಸುಖಾಂತ್ಯ 

ಈ ರೀತಿಯ ಸಂಕೀರ್ಣತೆಯ ಪಾತ್ರವನ್ನು ಸಾಮಾನ್ಯವಾಗಿ ಚಲಾವಣೆಯಲ್ಲಿರುವ, ಹೆಸರು ಮಾಡಿರುವ, ಅದರಲ್ಲೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕರುನಾಡ ರಸಿಕರ ಕಣ್ಮಣಿಯಾಗಿರುವ ನಾಯಕ ನಟ ಒಪ್ಪಿಕೊಳ್ಳುವಂಥಹ ಪಾತ್ರವಲ್ಲ ಇದು.. ಆಯಾದರೆ ನಿರ್ದೇಶಕರ ಮೇಲೆ ನಂಬಿಕೆ, ಪಾತ್ರ ಮುಖ್ಯ ಎನ್ನುವ ಗುಣ.. ಮತ್ತು ಸಹನಟರ ಸಹಯೋಗ.. ಇದು ರಾಜಕುಮಾರ್ ಅಂತಹ ರಾಜಕುಮಾರ್ ಅವರನ್ನು ಬೆಳೆಸಿದ ಮಾರ್ಗವಿದು.. 

ಸಿರಿವಂತನಾಗಿದ್ದಾಗ ತೋರುವ ಗತ್ತು.. ಬಿಡಿಗಾಸು ಇಲ್ಲದೆ, ಮಡದಿ ಗರ್ಭಿಣಿಯಾಗಿದ್ದಾಗ ಔಷಧಿಗೂ ಹಣವಿಲ್ಲದೆ ತನ್ನ ಸ್ನೇಹಿತನ ಮುಂದೆ ತನ್ನ ಮಡದಿ, ಅರ್ಥಾತ್ ತನ್ನ ಸ್ನೇಹಿತನ ತಂಗಿಗಾಗಿ ಹಣ ಸಾಲ ಕೊಡು ಎಂದು ಬೇಡಿ ಕೊಂಡಾಗ.. ದುಡಿಯುವ ಯೋಗ್ಯತೆ ಇಲ್ಲದೆ ಹೋದಾಗ ನಿನಗೆ ಮದುವೆ ಮಕ್ಕಳು ಯಾಕೆ ಅಂತ ಹೀನಾಯವಾಗಿ ಅವಮಾನ ಮಾಡಿದರೂ ಅವುಡುಗಚ್ಚಿಕೊಂಡು ನಿಲ್ಲುವ, ಮತ್ತೆ ಸಹಾಯ ಮಾಡು ಎಂದು ಕೇಳುವ ಆ ಅಭಿನಯ ಮನದೊಳಗೆ ನಿಲ್ಲುತ್ತದೆ.. 

ರಾಜಕುಮಾರ್ ಇಲ್ಲಿ ಅಕ್ಷರಶಃ ಪಾತ್ರವನ್ನು ಜೀವಿಸಿದ್ದಾರೆ.. ಬದುಕಲ್ಲಿ ಎಲ್ಲವೂ ಕ್ಷಣಿಕ.. ಸುಖವೇ ಆಗಲಿ ದುಃಖವೇ ಆಗಲಿ.. ಎಲ್ಲವನ್ನು ಅನುಭವಿಸಿ ಅನುಭವಿಸಬೇಕು ಎನ್ನುವ ಅವರ ಪಾತ್ರ ಪೋಷಣೆ ಮುಖ್ಯ...

ಉದಯಕುಮಾರ್ ರಾಜಕುಮಾರ್ ಅವರ ಸ್ನೇಹಿತನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ದಯನೀಯವಾಗಿ ಕೇಳಿಕೊಳ್ಳುವ ದೃಶ್ಯವೇ ಆಗಲಿ.. ದರ್ಪದಿಂದ ಸ್ನೇಹಿತನಿಗೆ ಹೀನಾಮಾನವಾಗಿ ಬಯ್ಯುವ ದೃಶ್ಯಾವಳಿ.. ತನ್ನ ತಾಯಿ ತಂಗಿಯರು.. ತನ್ನ ಬಗ್ಗೆ ಬಯ್ಯುವಾಗಲಿ ತೋರಿಸುವ ಅವರ ಅಭಿನಯ ಸೊಗಸು.. 

ವಾಣಿಶ್ರೀ, ಪಂಡರಿಬಾಯಿ, ನರಸಿಂಹರಾಜು, ಬಿ ಜಯ, ಶ್ರೀನಾಥ್, ನಾಗಪ್ಪ, ಬೆಂಗಳೂರು ನಾಗೇಶ್, ಎಂ ಎಸ್ ಸತ್ಯು, ಗಣಪತಿ ಭಟ್, ಜೋಕರ್ ಶ್ಯಾಮ್, ಗುಗ್ಗು, ಶನಿ ಮಹದೇವಪ್ಪ, ಕಾಂಚಾಣ.. ಎಲ್ಲರ ದೊಡ್ಡ ತಾರಾಗಣವಿರುವ ಈ ಚಿತ್ರ.. ಬಿಂಬ ಪ್ರತಿಬಿಂಬವನ್ನು ಹೋಲುತ್ತದೆ.. 

ಮೊದಲಾರ್ಧ ಉದಯಕುಮಾರ್ ಅವರಿದ್ದ ಪರಿಸ್ಥಿತಿ, ಎರಡನೇ ಭಾಗದಲ್ಲಿ ರಾಜಕುಮಾರ್ ಅವರಿಗೆ ವರ್ಗಾವಣೆ.. ಅಂತ್ಯದಲ್ಲಿ ಪಾಠ, ಸಂದೇಶ.. ಅದು ತಾನೇ ಬೇಕಾಗಿರೋದು.. !  














ಶ್ರೀ ರಾಮ ಎಂಟರ್ಪ್ರೈಸ್ ಅವರ ಲಾಂಛನದಲ್ಲಿ ಕೆ ಜಾನಕಿರಾಮ್ ಅವರು ಬಾಲಮುರುಗನ್ ಅವರ ಕತೆ ಚಿತ್ರಕತೆಯನ್ನು ಛಾಯಾಗ್ರಹಣಮ್ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. 

ಸಂಗೀತದ ಸಾರಥ್ಯ ಸತ್ಯಂ ಅವರದ್ದು.

ಪಿಬಿ ಶ್ರೀನಿವಾಸ್ ಪಿ ಸುಶೀಲ ಎಲ್ ಆರ್ ಈಶ್ವರಿ ಎಸ್ ಪಿ ಬಾಲಸುಬ್ರಮಣ್ಯಂ ಗಾಯನ ಮಾಡಿದ್ದಾರೆ 

ಆರ್ ಎನ್ ಜಯಗೋಪಾಲ್ ಮತ್ತು ಚಿ ಉದಯಶಂಕರ್ ಹಾಡುಗಳನ್ನು ಒದಗಿಸಿದ್ದಾರೆ.

No comments:

Post a Comment