Saturday, March 1, 2025

ಕರುನಾಡಿನ ಚಿತ್ರರಸಿಕರ ಮನವ ಕದ್ದ ಬೆಟ್ಟದ ಹುಲಿ 1965 (ಅಣ್ಣಾವ್ರ ಚಿತ್ರ ೬೫/೨೦೭)

ಹಿಂದಿನ ಅರವತ್ತನಾಲ್ಕು ಚಿತ್ರಗಳನ್ನು ನೋಡುತ್ತಾ ಬಂದ ನನಗೆ ಈ ಚಿತ್ರ ರಾಜಕುಮಾರ್ ಅವರ ಜೀವನದ ಒಂದು ತಿರುವಿನ ಚಿತ್ರ ಅನಿಸಿತು.. ಅಲ್ಲಿಯ ತನಕ ಭಕ್ತಿ ಪ್ರಧಾನ, ಪೌರಾಣಿಕ, ಕೆಲವು ಗ್ರಾಮೀಣ ಹಿನ್ನೆಲೆಯ ಚಿತ್ರ ಪಾತ್ರಗಳೇ ಹೆಚ್ಚಾಗಿತ್ತು.. ಭಕ್ತಿ ಪರಾಕಾಷ್ಠೆ ತಲುಪಿದ್ದ ಪರ್ವಕಾಲದ ಚಿತ್ರಗಳು.. ಏಕಾಏಕಿ ಬದಲಾವಣೆಯ ಗಾಳಿ ಬೀಸಿದ ಚಿತ್ರವೆನಿಸಿತು ನನಗೆ.. 

ಕಳ್ಳನ ಪಾತ್ರಧಾರಿ ಆದರೆ ಕಳ್ಳತನ ಮಾಡೋದಿಲ್ಲ.. 

ದರೋಡೆಕಾರರ ಗುಂಪಿನ ಜೊತೆ ಇರುತ್ತಾರೆ ಆದರೆ ಮನುಷ್ಯತ್ವ ಕಳೆದುಕೊಳ್ಳದೆ ಇರುವ ಪಾತ್ರ 

ಬಡವರನ್ನು ಸಿರಿವಂತರನ್ನು ನಿಷ್ಕರುಣೆಯಿಂದ ಶೋಷಿಸಬೇಕು ಆದರೆ ಹಾಗೆ ಮಾಡೋದಿಲ್ಲ.. 

ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಅವರನ್ನು ನಗೆಪಾಟಲಿಗೆ ಗುರಿ ಮಾಡಬೇಕು.. ಆದರೆ ಹಾಗಿಲ್ಲ 

ಅತೀವವಾಗಿ ಮೇಕಪ್ ಮಾಡಿಕೊಂಡು ಖಳನ ನಗೆ ನಗುತ್ತಾ ಭಯ ಹುಟ್ಟಿಸಬೇಕು ಆದರೆ ಸಂಯಮದಿಂದ ಕಾಣುತ್ತಾರೆ 

ಹೀಗೆ ಅಂದುಕೊಂಡ ಯಾವುದೇ ಸಿದ್ಧಸೂತ್ರವಿರದ ಪಾತ್ರಪೋಷಣೆಯಿಂದ ಕೂಡಿದ ಚಿತ್ರ ಬೆಟ್ಟದ ಹುಲಿ ಚಿತ್ರ ಇಷ್ಟವಾಗುತ್ತದೆ.

ನಾವೆಲ್ಲಿಯಾದರೂ ಇರಬಹುದು, ಬೆಳೆಯಬಹುದು.. ಆದರೆ ನಮ್ಮೊಳಗಿನ ಸಂಸ್ಕಾರ ಜಾಗೃತವಾಗಿದ್ದಾಗ ಎಲ್ಲಿಯೇ ಇದ್ದರೂ ಹೇಗೆ ಇದ್ದರೂ ನಮ್ಮ ತನವನ್ನು ಉಳಿಸಿಕೊಳ್ಳಬಹುದು ಎನ್ನುವ ಸಾರಾಂಶ ಅದ್ದಿಕೊಂಡು ಹೊರಬಂದ ಚಿತ್ರವಿದು.. 

ರಾಜಕುಮಾರ್ ಮುದ್ದಾಗಿ ಕಾಣುತ್ತಾರೆ. ಎತ್ತಿ ಬಾಚಿದ ತಲೆಗೂದಲು (ಕೃತಕ ಕೇಶವಿನ್ಯಾಸವಾದರೂ ಅದು ಒಪ್ಪುತ್ತದೆ ಮತ್ತು ಮುದ್ದಾಗಿ ಕಾಣುತ್ತಾರೆ). ಸದಾ ಕಪ್ಪು ವರ್ಣದ ವೇಷಭೂಷಣ.. ಕಿವಿಗೆ ಒಂದು ಕಡೆ ರಿಂಗ್.. ಕಡಿದು ಹದಮಾಡಿದಂತ ಶರೀರ.. ಕುದುರೆಯ ಮೇಲೆ "ಆಡುತ್ತಿರುವ ಹಕ್ಕಿಗಳೇ" ಹಾಡನ್ನು ಹಾಡಿಕೊಂಡು ಬರುವಾಗ ಅತಿ ಮುದ್ದಾಗಿ ಕಾಣುತ್ತಾರೆ.. 

ಚಿತ್ರಪಾತ್ರದಲ್ಲಿ ತನ್ನ ತಂದೆ ಎಂದು ಹೇಳುವ ಉದಯಕುಮಾರ್ ಅವರ ಪಾತ್ರದೊಂದಿಗೆ ಕಟುವಾಗಿ ಮಾತಾಡುವ ಅವರು .. ಅತ್ತೆ ಎಂದು ಕರೆಸಿಕೊಂಡರೂ ಮಾತೃ ಪ್ರೇಮವನ್ನು ತೋರುವ ಪಂಡರಿಬಾಯಿ ಅವರೊಂದಿಗೆ ಮಮತಾಮಯಿ ಮಾತುಗಳು.. ತನ್ನ ಕಳ್ಳನೆಂದು ತಿಳಿದಿದ್ದರೂ ತನ್ನನ್ನು ಪ್ರೇಮಿಸುವ ಜಯಂತಿ ಪಾತ್ರದೊಂದಿಗೆ ಮಾತಾಡುವ ಶೈಲಿ, ತನ್ನನ್ನು ಸ್ನೇಹಿತ ಎಂದು ಕರೆದುಕೊಂಡು ಮಾತಾಡುವ ನರಸಿಂಹರಾಜು ಅವರೊಂದಿಗೆ ಜುಗಲಬಂದಿ.. ತಂದೆಯಂತೆ ಭಾಸವಾಗುವ ಅಶ್ವತ್ ಪಾತ್ರದ ಜೊತೆ ಒಂದೆರಡು ದೃಶ್ಯಗಳೇ ಆದರೂ ಭಾವನಾತ್ಮಕವಾಗಿ ಬೆಸೆದುಕೊಳ್ಳುವ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ.. 

ಉದಯಕುಮಾರ್ ಅವರ ಖಳ ಪಾತ್ರ ಈ ಚಿತ್ರದ ವಿಶೇಷ.. ಸರಿಸುಮಾರು ರಾಜಕುಮಾರ್ ಅವರ ವಯೋಮಾನದವರೇ ಆಗಿದ್ದರೂ, ಆತನಿಗೆ ಅಪ್ಪನ ಪಾತ್ರದಲ್ಲಿ ಮಿಂಚುತ್ತಾರೆ.. ಅಬ್ಬರಿಸುವ ಮಾತುಗಳು, ಆ ಭಯ ಹುಟ್ಟಿಸುವ ಕಣ್ಣುಗಳು, ಆಂಗೀಕ ಅಭಿನಯ "ಹೈದ" ಎನ್ನುವಾಗ ಇರುವ ದರ್ಪ ಅದ್ಭುತ

ಮಮತಾಮಯಿ ಪಂಡರಿಬಾಯಿ.. ತಾಯಿ ಪಾತ್ರ ಮಾಡಲೆಂದೇ ಭುವಿಗೆ ಬಂದಿದ್ದಾರೆ ಅನಿಸುವಷ್ಟು ಸಹಜ ಮಾತುಗಳು, ಅಭಿನಯ.. 

ಪೊಲೀಸ್ ಅಧಿಕಾರಿಯಾಗಿ ಖಡಕ್ ಆಗಿ ಕಾಣುವ, ಹಾಗೆ ತನ್ನ ಸಾಕುಮಗಳು ಆಡುವ ಮಾತುಗಳನ್ನು ಕೇಳುತ್ತಾ ವಿಲಿವಿಲಿ ಎಂದು ತಳಮಳಿಸುವ ಪಾತ್ರದಲ್ಲಿ  ಗಮನೀಯ ಅಭಿನಯ ನೀಡಿದ್ದಾರೆ 

ಜಯಂತಿ ಕೆಲವೇ ದೃಶ್ಯಗಳಲ್ಲಿ ಇದ್ದರೂ, ಮುದ್ದಾಗಿ ಕಾಣುತ್ತಾ ಚಿತ್ರದ ಅಂತ್ಯದಲ್ಲಿ ವಿಭಿನ್ನ ತಿರುವು ಕೊಡುವ ಪಾತ್ರದಲ್ಲಿ ಮಿಂಚುತ್ತಾರೆ. 

ಉಳಿದಂತೆ ಚಿತ್ರದ ಹಾಸ್ಯ ದೃಶ್ಯಗಳಲ್ಲಿ ಜಯ ಮತ್ತುನರಸಿಂಹರಾಜು ನಗಿಸುತ್ತಾರೆ. ಕೆಲವು ಹಿತಕರ ಮಾತುಗಳನ್ನು ಹೇಳುವ ಅಡಿಗೆ ಭಟ್ಟನ ಮಾತ್ರದಲ್ಲಿ ಗಣಪತಿ ಭಟ್ ಇಷ್ಟವಾಗುತ್ತಾರೆ. 

ಟಿ ಜಿ ಲಿಂಗಪ್ಪ ಅವರ ಸಂಗೀತದ ಬಗ್ಗೆ ಒಂದೆರಡು ಮಾತು.. ಆಡುತ್ತಿರುವ ಮೋಡಗಳೇ ಹಾಡಿನಲ್ಲಿ ಸಂಗೀತ ವಾದ್ಯ ಹಿತಮಿತವಾಗಿದೆ... ಸುಮಾರು ಮೂರು ನಿಮಿಷ ಸಂಗೀತ ವಾದ್ಯಗಳೇ ಮೊಳಗುವ ಕ್ಯಾಬರೆ ದೃಶ್ಯದ ವಾದ್ಯ ಗೋಷ್ಠಿ ಇಷ್ಟವಾಗುತ್ತದೆ.. ಹಾಡು ಇವಾಗ ಶುರುವಾಗುತ್ತೆ ಆಗ ಶುರುವಾಗುತ್ತೆ ಅಂತ ನೋಡುತ್ತಲೇ ಇದ್ದರೂ ಹಾಡು ಶುರುವಾಗೋದರ ಬದಲಿಗೆ ವಾದ್ಯಗೋಷ್ಠಿಯ ಸಂಯೋಜನೆ ಮನಸೆಳೆಯುತ್ತದೆ.. 

ಭಗವತಿ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ಎ ವಿ ಶೇಷಗಿರಿ ರಾವ್ ಅವರು ನಿರ್ದೇಶಿಸಿ ಕೆ ಜಾನಕಿರಾಮ್ ಅವರ ಛಾಯಾಗ್ರಹಣ ಹೊಂದಿದ್ದ ಈ ಚಿತ್ರಕ್ಕೆ ಸಾಹಿತ್ಯ ಒದಗಿಸಿದವರು ಗೀತಪ್ರಿಯ. ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ ದನಿ ನೀಡಿದ್ದಾರೆ. 

ಪುಟ್ಟ ಪಾತ್ರಗಳಲ್ಲಿ ಎಂ ಪಿ ಶಂಕರ್, ದಿನೇಶ್, ಪಾಪಮ್ಮ ಕಾಣಿಸಿಕೊಳ್ಳುತ್ತಾರೆ.. 

ರಾಜಕುಮಾರ್ ಅವರ ಚಿತ್ರಜೀವನದ ಒಂದು ಮುಖ್ಯ ತಿರುವಿನಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ಚಿತ್ರದ ಕೆಲವು ತುಣುಕುಗಳು ನಿಮಗಾಗಿ!

                                

















No comments:

Post a Comment