Monday, November 25, 2024

ಅನುದಿನವೂ ಸುದಿನವೇ ಎನ್ನುವ ಇದೇ ಮಹಾ ಸುದಿನ 1965 (ಅಣ್ಣಾವ್ರ ಚಿತ್ರ ೬೪/೨೦೭)

ರಾಜಕುಮಾರ್ ಅವರ ಓರಗೆಯ ನಟ ಉದಯಕುಮಾರ್ ಅವರು ಧನ್ಸ ಜೀ ಕಲ್ಯಾಣ್ಹ ಜೀ ಅವರ ಸಹ ಭಾಗಿತ್ವದಲ್ಲಿ ನಿರ್ಮಾಣ ಮಾಡಿದ ಚಿತ್ರವೇ ಇದೇ ಮಹಾ ಸುದಿನ.. ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಉದಯಕುಮಾರ್ ಅವರೇ ಸಾಹಿತ್ಯ ರಚಿಸಿರೋದು.. ಇದೊಂದು ಅಪರೂಪದ ಘಟನೆ.. 

ಶಾಂತ್ ಫಿಲಂಮ್ಸ್ ಲಾಂಛನದಲ್ಲಿಬಿ ಪುಟ್ಟಪ್ಪ ಅರ್ಪಣೆ ಮಾಡಿದ ಈ ಚಿತ್ರವನ್ನು ಬಿ ಗೋಪಾಲ್ ಅವರು ಕಥೆ ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ಧಾರಿಯನ್ನು ನಿಭಾಯಿಸಿದ್ದಾರೆ. 

ಪಿ ಬಿ ಶ್ರೀನಿವಾಸ್ , ಗೋಪಾಲ್, ಎಸ್ ಜಾನಕೀ, ಪಿ ಲೀಲಾ, ಎಲ್ ಆರ್ ಈಶ್ವರಿ ಪೀಠಾಪುರಂ ನಾಗೇಶ್ವರ್ ರಾವ್ ಅವರ ಧ್ವನಿ ಉದಯಕುಮಾರ್ ಅವರ ಸಾಹಿತ್ಯಕ್ಕೆ ಒದಗಿಸಿ,ಆ ದಕ್ಕೆ ಸಂಗೀತ ಬಿ ಗೋಪಾಲ್ ಮಾಡಿದ್ದಾರೆ. ಛಾಯಾಗ್ರಹಣ ಡೆಬ್ರಿ ಎಂ ಏನ್ ಮಣಿ.  

ಆಧುನಿಕ ಉಡುಪಿನಲ್ಲಿ ಆರಂಭದ ದೃಶ್ಯಗಳಲ್ಲಿ ಮುದ್ದಾಗಿ ಕಾಣುವ ಲೀಲಾವತಿ ಪಾತ್ರದ ಸುತ್ತ ನೆಡೆದಾಡುವ ಕಥೆಯಿದು. ದುಡ್ಡಿನ ಅಹಂ, ತಾನೇ ಬುದ್ದಿವಂತೆ ಎನ್ನುವ ಗರ್ವ, ತಾ ಮಾಡಿದ್ದೆ ಸರಿ ಎನ್ನುವ ಧೋರಣೆ ಮನುಜನನ್ನು ಎಂಥಹ ಹೀನಾಯ ಸ್ಥಿತಿಗೆ ತಂದು ಬಿಡುತ್ತದೆ ಎಂದು ನವಿರಾದ ನಿರೂಪಣೆಯೊಂದಿಗೆ ಈ ಚಿತ್ರ ಮೂಡಿಬರುತ್ತದೆ, 

ಲೀಲಾವತಿ ಅಹಂ ಪಾತ್ರ, ಮತ್ತು ಅಹಂ ಇಳಿದು ಹೀನಾಯವಾದ ಸ್ಥಿತಿಗೆ ಇಳಿಯುವ ಪಾತ್ರ ಎರಡೂ ಕಡೆ ಅವರ ಅಭಿನಯ ಸೊಗಸಾಗಿದೆ.. ಅದರಲ್ಲೂ ಆರಂಭದಲ್ಲಿ ಇಂಗ್ಲಿಷ್ ಮಾತುಗಳನ್ನು ಸೇರಿಸಿ ಮಾತಾಡುವ ಶೈಲಿ ಸೊಗಸು.. 


ಜಯಶ್ರೀ ಸಾಮಾನ್ಯವಾಗಿ ಸಂಯಮ ಪಾತ್ರಗಳಲ್ಲಿ ಕಾಣುವ ಕಲಾವಿದೆ.. ಆದರೆ ಇಲ್ಲಿ ತುಸು ಕಠಿಣ ಹೃದಯಿ.. ಹಾಗೂ ಮಾತೃ ಮಮತೆಯಿಂದ ತುಸು ದೂರವಾಗಿರುವ ಪಾತ್ರ.. ಮತ್ತು ಕಡೆಯಲ್ಲಿ ತಾ ನಂಬಿದ್ದ ಆಸರೆ ನೀರಿನಲ್ಲಿ ಮುಳುಗಿದ ಮಣ್ಣಿನ ಹೆಂಟೆ ಎಂದು ಅರಿವಾದಾಗ ಅವರು ಪಡುವ ಬವಣೆಯ ಅಭಿನಯ ನೈಜವಾಗಿದೆ 

ರಾಘವೇಂದ್ರ ರಾವ್ ಉತ್ತಮ ನಟ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ..ಆರಂಭದ ಕೆಲವೇ ದೃಶ್ಯಗಳಲ್ಲಿ ಬರುವ ಅವರ ಪಾತ್ರ ಸೊಗಸಾದ ಛಾಪು ಮೂಡಿಸಿದೆ. 


ಸಂಯಮ ಪಾತ್ರದಲ್ಲಿ ಹರಿಣಿ ಮುಗ್ಧೆಯಾಗಿ ಕಂಡರೆ.. ಸಿರಿವಂತಿಕೆ ಬಂದ ಮೇಲೆ ಅಹಂ ತೋರದೆ ಮತ್ತೆ ಸಂಯಮವಾಗಿಯೇ ಇರುವ ಅವರ ಪಾತ್ರಾಭಿನಯ ಇಷ್ಟವಾಗುತ್ತದೆ 


ಪುಟ್ಟ ಪಾತ್ರವಾದರೂ ಬಾಲಣ್ಣ ಮನಸ್ಸಿಗೆ ತಾಕುವಂತಹ ಅಭಿನಯ ನೀಡಿದ್ದಾರೆ.. ತಮ್ಮ ಗಳಿಕೆಯನ್ನೆಲ್ಲ ತಮಗಿಷ್ಟವಾದವರಿಗೆ ದಾನ ಮಾಡಿ ಬರಿಗೈಯಲ್ಲಿ ಮೆಕ್ಕ ಪ್ರವಾಸ ಮಾಡುತ್ತೇನೆ ಎಂದು ಹೇಳುವ ದೃಶ್ಯ ಸೊಗಸಾಗಿದೆ. 


ಈ ಚಿತ್ರದ ಕತೃ ಉದಯಕುಮಾರ್ ಅವರು ಅಭಿನಯ ಈ ಚಿತ್ರದ ಜೀವಾಳ.. ತಾಯಿಗೆ ಎದುರಾಡುತ್ತಾ ತನ್ನ ಮನದ ಇಂಗಿತವನ್ನು ಹೇಳುವ ಅಭಿನಯ.. ರಾಮನಂತೆ ತಾನು ಅಣ್ಣನನ್ನು ಅನುಸರಿಸುತ್ತೇನೆ ಎನ್ನುತ್ತಾ.. ಅಣ್ಣನ ಮಾತನ್ನು ನಯವಾಗಿ ತಿರಸ್ಕರಿಸಿ.. ತನ್ನ ಜೀವನವನ್ನು ರೂಪಿಸಿಕೊಂಡು, ಕೈ ಹಿಡಿದ ಮಡದಿಯನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ.. ಜೊತೆಯಲ್ಲಿ ಕರ್ತವ್ಯ ನಿಷ್ಠೆ ಪ್ರದರ್ಶಿಸುವ ಪಾತ್ರದಲ್ಲಿ ಉದಯಕುಮಾರ್ ಗೆದ್ದಿದ್ದಾರೆ.. ಅಂತಿಮ ದೃಶ್ಯದಲ್ಲಿ ಅವರ ಅಭಿನಯ ಅಮೋಘ.. ಇತ್ತ ತಾಯಿಯನ್ನು ಆಕೆ ಮಾಡಿದ ತಪ್ಪನ್ನು ನಯವಾಗಿ ಹೇಳುತ್ತಾ.. ಅಣ್ಣ ತಾಯಿಯನ್ನು ಕಾಪಾಡದೇ ಬಿಟ್ಟು ಹೋಗಿದ್ದನ್ನು ನೆನಪಿಸಿ ಹೇಳುವ ಮಾತುಗಳು ಸೊಗಸಾಗಿದೆ. 

ಗುಪ್ತಗಾಮಿನಿಯ ಹಾಗೆ ತಮ್ಮ ಅಭಿನಯದ ಛಾಪನ್ನು ಮೂಡಿಸುವ., ತನ್ನ ಪಾತ್ರದ ಆಳವನ್ನು ಮನದಲ್ಲಿಟ್ಟುಕೊಂಡು, ಅದಕ್ಕೆ ತಕ್ಕ ಹಾಗೆ ತಮ್ಮ ಅಭಿನಯದ ಶಕ್ತಿಯನ್ನು ತೋರಿಸುವ ರಾಜಕುಮಾರ್ ಮೊದಲು ವೈದ್ಯರಾಗಿ ಆ ಪಾತ್ರಕ್ಕೆ ಬೇಕಾದ ಹಾಗೆ ತಮ್ಮನ್ನು ಒಗ್ಗಿಸಿಕೊಂಡು.. ತನ್ನ ಕ್ಲಿನಿಕ್ಕಿನಲ್ಲಿ ಇರುವವರನ್ನು ಚಿಕಿತ್ಸೆ ಕೊಟ್ಟು ಉಪಚರಿಸುವ ರೀತಿ .. ಹಾಗೆಯೇ ಮಾತೃಭಕ್ತಿ .. ತನ್ನ ಅಮ್ಮ ತಪ್ಪಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾಳೆ ಎಂದು ಅರಿವಿದ್ದರೂ, ಆಕೆಯನ್ನು ಬಿಡಲಾಗದೆ, ತನ್ನ ತಮ್ಮನ ನಿರ್ಧಾರ ಸರಿ ಇದೆ ಅಂತ ಗೊತ್ತಿದ್ದರೂ, ಅದನ್ನು ಹೇಳಲಾಗದೆ.. ಒದ್ದಾಡುವ ದೃಶ್ಯದ ಅಭಿನಯ ಸೂಪರ್. 

ಆಸ್ತಿಗೋಸ್ಕರ ಬಲವಂತವಾಗಿ ಮದುವೆ ಮಾಡಿಕೊಂಡ ಮಡದಿಯ ದರ್ಪವನ್ನು ತಿರಸ್ಕಾರದಿಂದ ನೋಡುವ ನೋಡುತ್ತಾ, ಮಡದಿಗೆ ಬುದ್ದಿ ಹೇಳಿದರೂ ಕೇಳದ ಹಂತಕ್ಕೆ ಹೋಗಿದ್ದಾಳೆ ಎಂದು ತಿಳಿದಾಗ, ತನ್ನ ತಾಯಿಗೆ ಮಾತ್ರ ಹೇಳಿ.. ಹೋಗುವ ದೃಶ್ಯ.. ವಿಧಿಯ ಆಟದಿಂದ ಬವಣೆ ಪಟ್ಟು ಕಣ್ಣು ಕಳೆದುಕೊಂಡು, ಮರಳಿ ದೃಷ್ಟಿ ಪಡೆದು.. ತನ್ನ ಮಡದಿಗೆ ಬುದ್ದಿ ಹೇಳಿದರೂ,ಟಿ ಅಣ್ಣ ತಾಯಿಯ ಮಮತೆ ಎಲ್ಲದಕ್ಕೂ ದೊಡ್ಡದು ಎಂದು ತಿಳಿಹೇಳುವ ಪಾತ್ರದಲ್ಲಿ ರಾಜಕುಮಾರ್ ಅವರು ತಮ್ಮ ಅಭಿನಯದ ಶಕ್ತಿಯನ್ನು ತೋರಿಸಿದ್ದಾರೆ.. 

ಇದೊಂದು ಉತ್ತಮ ಚಿತ್ರ.. ನನಗೆ ಅನಿಸಿದ್ದು, ಲೀಲಾವತಿ ಆರಂಭದ ದೃಶ್ಯದಲ್ಲಿ ಬಿಕ್ಷುಕನಿಗೆ ನೂರು ರೂಪಾಯಿ ಕೊಟ್ಟು, ವ್ಯಾಪಾರ ಮಾಡಿ ಮಕ್ಕಳನ್ನು ಸಾಕು ಎಂದು ಹೇಳುವ ದೃಶ್ಯವನ್ನು.. ಕಡೆಗೆ ಲೀಲಾವತಿ ಹಣಕ್ಕಾಗಿ ಒದ್ದಾಡುವ, ಅಹಂ ಇಳಿದು ಬಡತನದ ಬದುಕನ್ನು ಸಹಿಸಲಾಗದೆ ಕಡೆಯಲ್ಲಿ ತನ್ನ ಗೆಳತಿಯ ಹತ್ತಿರ ಸ್ವಲ್ಪ ಚೇಂಜ್ ಕೊಡೆ ಅನ್ನುವ ದೃಶ್ಯದ ಬದಲು.. ಭಿಕ್ಷೆ ಬೇಡಲು ಹೋಗಿ, ಆ ಸಿರಿವಂತನಾದ ತಿರುಕ ಈಕೆಯನ್ನು ಗುರುತು ಹಿಡಿದು ಸಹಾಯ ಮಾಡುವಂತೆ ತೋರಿಸಬಹುದಿತ್ತೋ ಏನೋ ಅನಿಸಿತ್ತು.. 


ಪುಟ್ಟ ಪಾತ್ರಗಳಲ್ಲಿ ದಿನೇಶ್ ಮತ್ತು ಜಯಅಭಿನಯಿಸಿದ್ದಾರೆ . 


ಉತ್ತಮ ಚಿತ್ರವಿದು..

1 comment: