Saturday, November 16, 2024

ಸತ್ಯವನ್ನೇ ಉಲಿಯುತ್ತಾ ಜಗತ್ತಿನಲ್ಲಿ ಶಾಶ್ವತವಾಗಿ ಉಳಿದ ಸತ್ಯ ಹರಿಶ್ಚಂದ್ರ 1965 (ಅಣ್ಣಾವ್ರ ಚಿತ್ರ ೬೨/೨೦೭)

ನಿಂತೇ ಹೋಗಿದ್ದ ಯೋಜನೆ ಮತ್ತೆ ಚುರುಕಾಗಿದ್ದು ನೋಡಿ ಅಣ್ಣಾವ್ರು ಏನಪ್ಪಾ ಶ್ರೀಕಾಂತಪ್ಪ ಮತ್ತೆ ಶುರು ಮಾಡಿಯೇ ಬಿಟ್ಟಿದ್ದೀಯ.. ಹೂಂ ಜಮಾಯಿಸಿ ಬಿಡು.. 

ಅಣ್ಣಾವ್ರೇ ನಿಮ್ಮ ಆಶೀರ್ವಾದ ನಿಮ್ಮದೇ ಚಿತ್ರಗಳನ್ನು ಮತ್ತೊಮ್ಮೆ ಸಾಲಾಗಿ ನೋಡುವ ಅವಕಾಶ.. ಮತ್ತೆ ನಿಮ್ಮ ಅಭಿನಯದ ತೀವ್ರತೆಯನ್ನು ನೀವು ಬೇಡರ ಕಣ್ಣಪ್ಪ ಚಿತ್ರದಿಂದ ಶುರು ಮಾಡಿದ ರೀತಿ ಅದ್ಭುತವಾಗಿದೆ.. ಇದು ದಾಖಲೆಯ ಪ್ರಕಾರ ಅರವತ್ತೆರಡನೇಯ ಚಿತ್ರ ಆದರೆ ನಿಮ್ಮ ಅಭಿನಯದಲ್ಲಿ ಮಗ್ನತೆ ಇದಕ್ಕೆ ಇನ್ನೊಂದಷ್ಟು ನೂರಾರು ಚಿತ್ರಗಳನ್ನು ಸೇರಿಸಿಬಿಡಬಹದೇನೋ.. 

ಅಯ್ಯೋ ಇದೆಲ್ಲ ನಿಮ್ಮಗಳ ಅಭಿಮಾನ.. ಮುತ್ತುರಾಜನನ್ನು ರಾಜಕುಮಾರ ಮಾಡಿದವರು ನೀವು ಅಲ್ಲವೇ.. ಅದಿರಲಿ ಏನೋ ಚಿಂತೆ ಕಾಡುತ್ತಿದೆ ಏನದು?

ಈ ಚಿತ್ರವನ್ನು ಕಪ್ಪು ಬಿಳುಪು ವರ್ಣದಲ್ಲಿ ನೋಡಬೇಕೇ ಅಥವ ಆಧುನಿಕ ಯುಗದ ತಾಂತ್ರಿಕತೆಯಲ್ಲಿ ಅದ್ದಿ ತೆಗೆದ ವರ್ಣಮಯ ಚಿತ್ರವನ್ನು ನೋಡಬೇಕೆ ಎಂದು?

ಕಾಲಕ್ಕೆ ತಕ್ಕಂತೆ ನೆಡೆಯಬೇಕು..ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು.. ಅಷ್ಟೇ ಮುಂದುವರೆಸು.. ವರ್ಣಮಯವಾಗಲಿ.. 

ಧನ್ಯೋಸ್ಮಿ ಅಣ್ಣಾವ್ರೇ.!

ಹೀಗೊಂದು ಗೊಂದಲವಿದ್ದಾಗ ಅಣ್ಣಾವ್ರು ಪರಿಹಾರ ಮಾಡೋದು ಇದೇನು ನನಗೆ ಹೊಸದಲ್ಲ. ಹಾಗಾಗಿ ಆ ಸಂಭಾಷಣೆಯ ಮೂಲಕ ಈ ಅನರ್ಘ್ಯ ರತ್ನವನ್ನು ನೋಡುತ್ತಿದ್ದೇನೆ!

********

ಇದೊಂದು ಚಿತ್ರವೋ ಇದೊಂದು ಸಾರ್ವಕಾಲೀಕ ದೃಶ್ಯಗಳೋ.. ನಮ್ಮನ್ನು ನಮಗೆ ತೋರಿಸಿ.. ಹೀಗಿರಬೇಕು ಎಂಬ ಸಂದೇಶವುಳ್ಳ ಚಿತ್ರವೋ..


ಹೌದು ಈ ಚಿತ್ರ ಎಲ್ಲಾ ವರ್ಗಕ್ಕೂ ಸಲ್ಲುವ ಚಿತ್ರ.. ಜನರ ಮನಸ್ಸಿನಲ್ಲಿ ಜನಜನಿತವಾಗಿರುವ.. ಪ್ರತಿಘಟನೆಯೂ, ಪ್ರತಿ ದೃಶ್ಯವೂ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಈ ಪೌರಾಣಿಕ ಕತೆಯೆನ್ನಿ, ದೃಷ್ಟಾಂತ ಕತೆಯೆನ್ನಿ.. ಇದೊಂದು ಸಾಮಾಜಿಕ ಚರಿತೆಯೆನ್ನಿ ಹೇಗೆ ಹೇಳಿದರೂ .. ನೀರಿನಂತೆ ಅದಕ್ಕೆ ಒಗ್ಗುವ ಚಿತ್ರವಿದು.. 

ಭಾರತೀಯ ಮೊದಲ ಚಿತ್ರವಾದದ್ದು ಇದೆ ಕಥೆಯ ಆಧಾರದ ಮೇಲೆ.. ಅನೇಕಾನೇಕ ಭಾಷೆಗಳಲ್ಲಿ ಬಂದು, ಹೆಸರು, ಹಣ ಎಲ್ಲಾ ಮಾಡಿರುವ ಕಥೆಯನ್ನು ಕನ್ನಡಕ್ಕೆ ಒಗ್ಗಿಸಿ, ಅದಕ್ಕೆ ಇಲ್ಲಿಯ ಸ್ಪರ್ಶ ನೀಡಿ, ತುಸು ಹಾಸ್ಯ, ಭಾವಪೂರಿತ ದೃಶ್ಯಗಳು, ಅನೇಕಾನೇಕ ಹಾಡುಗಳು, ಪುಟ್ಟ ಪುಟ್ಟ ಗೀತೆಗಳು, ಕೊಂಚ ಸಾಹಸ.. ವೇಷಭೂಷಣ, ಅದಕ್ಕೆ ಬೇಕಾದ ನುರಿತ ಕಲಾವಿದರು..ಸಂಗೀತ, ಸಂಭಾಷಣೆ, ನೃತ್ಯ.. ಹೀಗೆ ಸಿನಿಮಾದ ಹತ್ತಾರು ವ್ಯಾಕರಣಗಳನ್ನು ಹದವಾಗಿ ಬೆರೆಸಿ.. ಚಿತ್ರಿಸಿದ ಕೀರ್ತಿ ನಿರ್ದೇಶಕ ಹುಣಸೂರ್ ಕೃಷ್ಣಮೂರ್ತಿ ಅವರದ್ದು.. 

ಪೌರಾಣಿಕ ದೃಶ್ಯಗಳಿಗೆ ಸಂಭಾಷಣೆ ಒದಗಿಸುವ ಪರಿ ಅವರನ್ನು ಬಿಟ್ಟರೆ ಕೊಂಚ ಅದೇ ಸಮಕಾಲೀನತೆ ಹೊಂದಿದ್ದು ಚಿ ಉದಯಶಂಕರ್ ಮಾತ್ರ.. 

ನಿರ್ದೇಶಕರು ಸಾಹಿತ್ಯ ಮತ್ತು ಸಂಭಾಷಣೆಯ ಜೊತೆಗೆ ನಿರ್ದೇಶನ ಮಾಡಿ.. ಒಂದು ಜನಜನಿತವಾದ ಕತೆಯನ್ನು ಪ್ರೇಕ್ಷಕ ಪ್ರಭುಗಳಿಗೆ ಬೇಸರವಾಗದಂತೆ, ಅತೀಯಾದ ಭಾವುಕತೆ ತುಂಬದೇ ನವಿರಾಗಿ ಚಿತ್ರಿಸಿ ಗೆದ್ದಿರುವುದು ನಿರ್ದೇಶಕರ ಹೆಗ್ಗಳಿಕೆ.. 

ವರ್ಣಮಯವಾದ ಮೇಲೆ ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸು ಗಳಿಸಿದ್ದು ಈ ಚಿತ್ರದ ಹೆಗ್ಗಳಿಕೆ.. 

ಹರಿಶ್ಚಂದ್ರನನ್ನು ನಾವು ನೋಡಿಲ್ಲ.. ಆದರೆ ಇದ್ದರೇ ಹೀಗೆ ಇದ್ದಾರೆ ಅನಿಸುವಷ್ಟರಮಟ್ಟಿಗೆ ರಾಜಕುಮಾರ್ ಅವರ ಅಭಿನಯ ನೀಡಿದ್ದಾರೆ.. ಓಹ್ ಕ್ಷಮಿಸಿ.. ಅವರೇ  ಹರಿಶ್ಚಂದ್ರನಾಗಿಬಿಟ್ಟಿದ್ದಾರೆ.. ಆ ಗತ್ತು, ಗಾಂಭೀರ್ಯ, ಮುಗ್ಧ ನಗೆ, ಆ ಪೋಷಾಕುಗಳಲ್ಲಿ ಕಾಣುವ ಸುಂದರತೆ, ಕಷ್ಟ ಕಾರ್ಪಣ್ಯಗಳಲ್ಲೂ ಹದವಾದ ಮಾತುಗಳು, ತನ್ನ ಹೆಂಡತಿಯನ್ನೇ ಮಗನ ಜೊತೆ ಮಾರುವಾಗ ಅವರ ಕಣ್ಣವುಗಳು, ತನ್ನ ಸುತ ಹಾವಿನ ವಿಷಕ್ಕೆ ಬಲಿಯಾಗಿದ್ದಾನೆ ಎಂದು ತಿಳಿದಾಗ, ತನ್ನ ಮಡದಿಯನ್ನೇ ಶಿರಚ್ಚೇದನ ಮಾಡುವಾಗಿನ ತಣ್ಣಗಿನ ಅಭಿನಯ, ತನ್ನನ್ನೇ ತಾನು ಮಾರಿಕೊಂಡು ಸ್ಮಶಾನ ಕಾಯುವ ದೃಶ್ಯಗಳು ಅಬ್ಬಬ್ಬಾ ಈ ಮಹಾ ನಟನಲ್ಲಿ ಅಡಗಿರುವುದು ಅದ್ಭುತ ನಟನ ಪ್ರತಿಭೆಯೂ ಅಥವ ನಾಟಕಗಳಲ್ಲಿ ಪರದೆ ಹಿಂದೆ ಕುಳಿತು.. ಒಂದೊಂದೇ ಪಾತ್ರಗಳು ಹೊರಬರುವ ಹಾಗೆ.. ಇವರಲ್ಲಿರುವ ಪಾತ್ರಗಳು ಅವರ ದೇಹದಲ್ಲಿ ಕುಳಿತು.. ಬೇಕಾದ ಚಿತ್ರಕ್ಕೆ ಅದೇ ದಾಟಿಯಲ್ಲಿ ಹೊರಬರುತ್ತೇನೋ ಅನಿಸುತ್ತದೆ.. 


ಅವರಿಗೆ ಸತಿಯಾಗಿ ಪಂಡರಿಬಾಯಿ ಅವರು ಆ ಪಾತ್ರವೇ ಆಗಿದ್ದಾರೆ.. ಪತಿಯನ್ನು ಸದಾ ಸತ್ಯ ಮಾರ್ಗದಲ್ಲಿ ನೆಡೆಯಲು ಸಹಕರಿಸುವ ಈ ಅಭಿನಯ ಅದ್ಭುತವಾಗಿದೆ.. ಮಾಯಾರೂಪದಲ್ಲಿ ಈಕೆಯಾಗಿ ಬರುವ ರಕ್ಕಸನ ಅಭಿನಯ ಬಹುಷಃ ಪಂಡರಿಬಾಯಿಯವರ ಅವರ ಚಿತ್ರಜೀವನದಲ್ಲಿ ಅದೊಂದು ದೃಶ್ಯ ಅನಿಸುತ್ತದೆ.. ಆ ರೀತಿ ಆವೇಗ ಮತ್ತು ಖಳಛಾಯೆಯಲ್ಲಿ ಅಭಿನಯಿಸಿರೋದು.. 

ಉದಯಕುಮಾರ್ ಈ ಚಿತ್ರವನ್ನು ರಾಜಕುಮಾರ್ ಅವರ ಜೊತೆಯಲ್ಲಿ ತಮ್ಮ ಭುಜದ ಮೇಲೆ ಹೊತ್ತು ನೆಡೆದಿದ್ದಾರೆ.. ವಿಶ್ವಾಮಿತ್ರನ ಕೋಪ, ಅಹಂ, ವಾಕ್ ಚಾತುರ್ಯ, ಛಲ, ರೋಷ ಎಲ್ಲವನ್ನೂ ಜೊತೆಯಲ್ಲಿ ಅದ್ಭುತವಾದ ದೀರ್ಘ ಸಂಭಾಷಣೆಗಳನ್ನು ನಿರರ್ಗಳವಾಗಿ ಏರಿಳಿತದ ಸಹಿತ ಅಭಿನಯಿಸಿರೋದು ಭರ್ಜರಿಯಾಗಿದೆ 

ಅಶ್ವಥ್ ಇಂದಿನ ಸಂಯಮದ ಪಾತ್ರದಲ್ಲಿ ಇಷ್ಟವಾಗುತ್ತದೆ.  ವಸಿಷ್ಠನ ಪಾತ್ರದಲ್ಲಿ  ಆ ಪಾತ್ರಕ್ಕೆ ಬೇಕಾಗುವ ಸಂಯಮ, ದೂರಾಲೋಚನೆ, ಹಾಗೆಯೇ ಮಾಯಾ ರಕ್ಕಸ ಇವರ ರೂಪದಲ್ಲಿ ಬಂದಾಗ ಅದೇ ರೀತಿಯ ರಕ್ಕಸ ಗುಣದ ಮಾತುಗಳು, ಅಭಿನಯ, ಹಾವಭಾವ ವಾಹ್ ಎನಿಸುತ್ತದೆ


ಚಿತ್ರದುದ್ದಕ್ಕೂ ಕಾಡುವ ನಕ್ಷತ್ರಿಕನ ಪಾತ್ರದಲ್ಲಿ ನರಸಿಂರಾಜು ನಗೆಯುಕ್ಕಿಸುತ್ತಾರೆ.. ಉದಯಕುಮಾರ್ ಅವರಿಗೆ ಠಕ್ಕರ್ ಕೊಡುತ್ತಾ, ಮಾತಾಡುವ ದೃಶ್ಯಗಳು ಈ ಗಂಬೀರವಾದ ಸಿನಿಮಾದಲ್ಲಿ ಕೊಂಚ ನಿರಾಳತೆಯನ್ನು ಒದಗಿಸಿದ್ದಾರೆ.. 



 

ಬಜಾರಿ ಹೆಣ್ಣಿನ ಪಾತ್ರದ ರಮಾದೇವಿ, ಕಲಾಕೌಶಿಕನ ಪಾತ್ರದ ಸುಬ್ಬಣ್ಣ, ಅವರ ಶಿಷ್ಯವರ್ಗದ ನಾಗೇಶ್, ರತ್ನಾಕರ್, ದ್ವಾರಕೀಶ್ ಮುದನೀಡುತ್ತಾರೆ.. ಲೋಹಿತನ ಪಾತ್ರ ಮುದ್ದಾಗಿದೆ. ಹಾಗೆಯೇ ಒಂದೆರಡು ದೃಶ್ಯಗಳಲ್ಲಿ ಕಾಣುವ ಗೌತಮನ ಪಾತ್ರಧಾರಿ ರಾಮಚಂದ್ರ ಶಾಸ್ತ್ರಿ, ಇಷ್ಟವಾಗುತ್ತಾರೆ 

ಕಡೆಯಲ್ಲಿ ಬಂದರೂ ಅಂದಿನಿಂದ ಇಂದಿಗೂ ಈ ಚಿತ್ರದ ಅಭಿನಯಕ್ಕೆ ಹೆಸರಾಗಿರುವ ಮತ್ತು ಹಾಡಿಗೆ, ನೃತ್ಯಕ್ಕೆ ಹೆಸರಾಗಿರುವ ಎಂ ಪಿ ಶಂಕರ್.. ಮತ್ತು ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ನರ್ತನ ಸೂಪರ್.. 

ಹಾಡುಗಳು ಸೊಗಸಾಗಿವೆ.. ನನ್ನ ನೀನೋ  ನಿನ್ನ ನಾನೋ.. ಕುಲದಲ್ಲಿ ಕೀಳ್ಯಾವುದೋ, ನಮೋ ಭೂತನಾಥ, ಹೀಗೆ ಸುಮಾರು ಇಪ್ಪತ್ತು ಹಾಡುಗಳಿವೆ 

ಛಾಯಾಗ್ರಹಣ ಮಾಧವ್ ಬುಲ್ ಬುಲ್ ಅವರದ್ದು, ಸಂಗೀತ ಪೆಂಡ್ಯಾಲ ನಾಗೇಶ್ವರರಾವ್ ಅವರದ್ದು.. ನಿರ್ಮಾಪಕರಾಗಿ ಕೆ ವಿ ರೆಡ್ಡಿ ವಿಜಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ.. 

No comments:

Post a Comment