ಇದೊಂದು ಪೌರಾಣಿಕ ಕಥೆ.. ಅದನ್ನು ಒಪ್ಪುವ ಹಾಗೆ ಭೂಲೋಕಕ್ಕೆ ತಂದು ಅದ್ಭುತವಾಗಿ ಸಹನೀಯವಾಗುವಂತೆ ಮಹಾಸತಿ ಅನುಸೂಯ ಚಿತ್ರವನ್ನಾಗಿ ತಂದಿದ್ದಾರೆ.
ಪ್ರತಿಯೊಂದು ಪಾತ್ರಕ್ಕೂ ಖಚಿತವಾದ ಮೌಲ್ಯ ಇದೆ.. ತೂಕವಿದೆ.. ಪ್ರತಿ ಪಾತ್ರವೂ ಸಂದರ್ಭಯೋಚಿತವಾಗಿ ಆಡುವ ಮಾತುಗಳು ಹೃದಯಕ್ಕೆ ತಾಕುತ್ತದೆ. ಚಿ ಉದಯಶಂಕರ್ ಅವರ ಸಂಭಾಷಣೆ ಈ ಚಿತ್ರದ ತೂಕವನ್ನು ಇನ್ನಷ್ಟು ಹೆಚ್ಚಿಸುತ್ತದೆ.. ಹಿಂದಿನ ಚಿತ್ರಗಳ ಸಂಭಾಷಣೆ ಕೂಡ ಅದ್ಭುತವಾಗಿತ್ತು.. ಕನ್ನಡದ ಸತ್ವಯುತ ಪದಗಳನ್ನು ಉತ್ತಮ ಮಾಲೆಯಾಗಿ ಪೋಣಿಸಿದ್ದರು.. ಈ ಚಿತ್ರದಲ್ಲಿ ಸರಳವಾಗಿ ಬರುವ ಮಾತುಗಳು ಮನಸ್ಸಿಗೆ ಅದೇ ರೀತಿ ಮುದ ಕೊಡುತ್ತವೆ.. ಆದರೆ ಮಾತುಗಳು ಸರಳವಾಗಿವೆ ಅದೇ ವಿಶೇಷತೆ.... ಚಿ ಉದಯಶಂಕರ್ ಅವರ ಉದಯ ಸೊಗಸಾಗಿದೆ!
ಇಲ್ಲಿ ಮೂರು ಕುಟುಂಬಗಳ ಚಿತ್ರವಿದೆ
ಮೊದಲನೆಯದು ಅತ್ರಿ ಮಹರ್ಷಿ ಮತ್ತು ಅನುಸೂಯ
ಪತಿಯೇ ಪರಮೇಶ್ವರ ಎಂದು ನಂಬಿದ ಅನುಸೂಯ.. ತ್ರಿಮೂರ್ತಿಗಳನ್ನು ಶಿಶುಗಳನ್ನಾಗಿ ಮಾಡುವಷ್ಟು ಶಕ್ತಳಾಗಿರುತ್ತಾಳೆ.. ತ್ರಿಶಕ್ತಿ ದೇವತೆಗಳಾದ ದಾಕ್ಷಾಯಿಣಿ, ಲಕ್ಷ್ಮಿ ಹಾಗೂ ಸರಸ್ವತಿಯರನ್ನು ತನ್ನ ಪತಿವ್ರತಾ ಶಕ್ತಿಯಿಂದ ಅವರು ಒಡ್ಡಿದ ಗೆಲ್ಲುತ್ತಾಳೆ. ಅದಕ್ಕೆ ಕಾರಣ ಏನು ಅಂತ ಕೇಳಿದರೆ ಪತಿಯೇ ಶಕ್ತಿ, ಪತಿಯ ಆಶೀರ್ವಾದವೇ ಶಕ್ತಿ ಎಂದು ನಮ್ರಳಾಗಿ ಹೇಳುತ್ತಾಳೆ.. ಚಿತ್ರದ ಉದ್ದಕ್ಕೂ ಲೋಕ ಕಲ್ಯಾಣಕ್ಕಾಗಿ ತನ್ನನ್ನು ಕಷ್ಟಕ್ಕೆ ಗುರಿ ಮಾಡಿಕೊಂಡರು ಪರವಾಗಿಲ್ಲ ಲೋಕ ಕ್ಷೇಮದಿಂದ ಇರಬೇಕು ಎನ್ನುತ್ತಾ ತನ್ನ ಸಹನಾ ಶಕ್ತಿಯನ್ನು ಪ್ರದರ್ಶಿಸುತ್ತಾಳೆ ಮತ್ತೆಅದರಲ್ಲಿ ಯಶಸ್ವಿಯಾಗಿ ತ್ರಿಮೂರ್ತಿಗಳು ಅವಳ ಶಕ್ತಿಗೆ ನಮಿಸುತ್ತಾರೆ. ಅತ್ರಿ ಮಹರ್ಷಿ ತನ್ನ ಸಹನಾ ಗುಣ, ತನ್ನ ಸಮಯೋಚಿತವಾದ ಪರಿಹಾರ ಕೊಡುತ್ತಾ ತನ್ನ ಮಡದಿಯ ಶಕ್ತಿಗೆ ಮಾರ್ಗ ತೋರಿಸುತ್ತಾರೆ.
ಪತಿ ಪತ್ನಿ ಸಮರಸದಿಂದ ಜೀವನ ಮಾಡಿದಾಗ ತಾವು ಮಾತ್ರ ಸುಖವಾಗಿರುವುದಷ್ಟೇ ಅಲ್ಲದೆ ತಮ್ಮ ನೆರೆಹೊರೆಯನ್ನು ಉತ್ತಮವಾಗಿ ನೋಡಿಕೊಳ್ಳಬಲ್ಲರು ಎಂಬ ಸಂದೇಶವಿದೆ.. ಜೊತೆಯಲ್ಲಿ ತಮ್ಮ ಕಾರ್ಯಾಚರಣೆ ಸರಿ ಮಾರ್ಗದಲ್ಲಿದ್ದಾಗ ತ್ರಿಮೂರ್ತಿಗಳು, ತ್ರಿಶಕ್ತಿಗಳು ಕೂಡ ಸಹಯೋಗ ನೀಡುತ್ತಾರೆ ಎಂಬ ಸಂದೇಶವಿದೆ
ಎರಡನೆಯದು ಕೌಶಿಕ ಮತ್ತು ಸುಮತಿ
ಐಶ್ವರ್ಯ,ಆ ಅಧಿಕಾರಗಳು ಇದ್ದಾಗ ಪ್ರೀತಿ ಮಮತೆ ದಾರಿ ತಪ್ಪುತ್ತವೆ.. ಬೇಡದ ಹವ್ಯಾಸಗಳು ದಾರಿ ತಪ್ಪಿಸಿ ಸುಂದರವಾದ ಬದುಕನ್ನು ನರಕಮಾಡಿಕೊಳ್ಳುತ್ತಾರೆ ಎಂದು ತೋರಿಸುವ ಈ ಕುಟುಂಬ ಚಿತ್ರಣ ಸೊಗಸಾಗಿದೆ.. ಹಣ ಅಧಿಕಾರ ಇದ್ದ ಕೌಶಿಕ, ಸುಂದರ ಮಡದಿಯನ್ನು ಮದುವೆಯಾದಾಗ ಅವಳೇ ತನ್ನ ಕುಟುಂಬ ಎಂದು ಮೊದಲು ಅನಿಸಿದರೂ, ಹಣದ ಮದ ಮನೆಯ ಹೊರಗೆ ಸುಖ ಕಂಡುಕೊಳ್ಳಲು ಹೋಗಿ, ಖಾಯಿಲೆ ತಂದು ಕೊಂಡು ಬಳಲುತ್ತಾ, ತಾನು ಇಷ್ಟ ಪಡದ ಮಡದಿಯೇ ಯೋಗಕ್ಷೇಮ ನೋಡಿಕೊಳ್ಳುತ್ತ, ತನ್ನಪತಿವ್ರತಾ ಶಕ್ತಿಯಿಂದ ತನ್ನ ಪತಿಗೆ ಬಂದಿದ್ದ ಖಾಯಿಲೆ ಮತ್ತು ಧನ ಸೌಕರ್ಯಗಳನ್ನು ಮರಳಿ ಪಡೆಯುತ್ತಾಳೆ.ಪ್ರೀತಿ ಪ್ರೇಮ ಮಮತೆ ಇವೆಲ್ಲವೂ ಮನೆಯ ಒಳಗೆ ಹಂಚಿಕೊಳ್ಳುವ ಭಾವವೇ ಹೊರತು, ಮನೆಯ ಹೊರಗಿನ ವ್ಯಕ್ತಿಗಳ ಜೊತೆಯಲ್ಲ, ಮನೆಯನ್ನು ಗೆದ್ದಾಗ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸುತ್ತದೆ.
ಮೂರನೆಯದು ತಾಂಡವ ಮತ್ತು ನಾಗಿ
ತಾಳ ಮೇಳವಿಲ್ಲದ ಸಂಸಾರ, ಹೆಣ್ಣು ಘಟವಾಣಿ, ಗಂಡು ಅಧೈರ್ಯಶಾಲಿ.. ಇತ್ತ ಕಡೆ ಸುಖವೂ ಇಲ್ಲ, ದುಃಖವೂ ಇಲ್ಲ.. ಪರಿವಾರದಲ್ಲಿ ಸಮರಸವಿಲ್ಲ.. ದುರಾಸೆಯೇ ಎಂದರೆ ಅಲ್ಲ, ಅನುಮಾನವೇ ಅದೂ ಅಲ್ಲ, ಹಣದ ಕೊರತೆಯೇ ಅದಲ್ಲ. ಹೀಗೆ ಎಲ್ಲದ್ದಕ್ಕೂ ಇಲ್ಲ ಇಲ್ಲ ಅನಿಸುವ ಈ ಕುಟುಂಬದಲ್ಲಿ ನಿಜವಾಗಿಯೂ ಬೇಕಾಗಿರೋದು ಪತಿ ಭಕ್ತಿ, ಸತಿ ಪ್ರೀತಿ.. ಇವೆರಡೂ ಇಲ್ಲದೆ ಸಂಸಾರ ಸಾಗದು ಎಂದು ವಿವರಿಸುವ ಸಂದೇಶ..
ಈ ಮೂರು ಕುಟುಂಬಗಳನ್ನು ಕತೆಗೆ ಒಗ್ಗಿಸಿಕೊಂಡು, ಚಿತ್ರ ರೂಪಿಸಿರುವುದು ವಿಕ್ರಂ ಪ್ರೊಡಕ್ಷನ್ಸ್ ಕತೃ ನಿರ್ಮಾಪಕ ಮತ್ತು ನಿರ್ದೇಶಕರಾದ ಬಿ ಎಸ್ ರಂಗ ಅವರ ಜಾಣ್ಮೆ..
ಛಾಯಾಗ್ರಾಹಕರಾಗಿ ಬಿ ಎನ್ ಹರಿದಾಸ್ ಅವರ ಕೈಚಳಕವಿದೆ.. ಸಂಗೀತ ಎಸ್ ಹನುಮಂತ ರಾವ್ ಅವರದ್ದು .. ಸಾಹಿತ್ಯ ಸಂಭಾಷಣೆ ಚಿ ಉದಯಶಂಕರ್ ಅವರದ್ದು, ಹಾಡುಗಳಿಗೆ ದನಿಗಳಾಗಿ ಪಿ ಬಿ ಶ್ರೀನಿವಾಸ್, ಜಾನಕಿ, ಎಲ್ ಆರ್ ಈಶ್ವರೀ, ಲತಾ, ಸುಮಿತ್ರಾ ಮತ್ತು ಸತ್ಯಂ ಇದ್ದಾರೆ..
ಚಿ ಉದಯಶಂಕರ್ ಅವರು ಸಹನಿರ್ದೇಶಕರಾಗಿ ಕೂಡ ತಮ್ಮ ಕೊಡುಗೆ ಸಲ್ಲಿಸಿದ್ದಾರೆ..
ನಾರದರಾಗಿ ರಾಜಕುಮಾರ್ ಅಮೋಘವಾಗಿ ನಟಿಸಿದ್ದಾರೆ.. ಆ ಪಾತ್ರಕ್ಕೆ ಬೇಕಾದ ತುಂಟತನ, ಜಾಣ್ಮೆಯ ಮಾತುಗಳು, ಕಲಹಪ್ರಿಯ ಅಂತ ಅನಿಸಿಕೊಂಡರೂ, ಲೋಕ ಕಲ್ಯಾಣಕ್ಕಾಗಿ ತಂದಿಡುವ ಕಲಹ.. ನಾರಾಯಣ ನಾರಾಯಣ ಎನ್ನುವಾಗ ಒಂದು ಸಣ್ಣಗಿನ ನಗು.. ಈ ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡಿವುವೂ ರೀತಿ ಖುಷಿಯಾಗುತ್ತದೆ.. ಇತ್ತ ನಾಯಕನ ಪಾತ್ರವೂ ಅಲ್ಲ, ಇತ್ತ ಖಳನಾಯಕನ ಪಾತ್ರವೂ ಅಲ್ಲ.. ಆದರೂ ಚಿತ್ರದುದ್ದಕ್ಕೂ ಕಾಣಸಿಗುವ ಅವರ ಪಾತ್ರ ಅವರನ್ನು ಪ್ರತಿ ದೃಶ್ಯದಲ್ಲೂ ಕಂಡರೆ ಚೆನ್ನಾಗಿರುತ್ತದೆ ಅನಿಸುವಂತೆ, ಚಿತ್ರದಲ್ಲಿ ಆವರಿಸಿಕೊಂಡಿದ್ದಾರೆ.
ಮುಖ್ಯ ಪಾತ್ರದಲ್ಲಿ ಪಂಡರಿಬಾಯಿ ಸಂಯಮದ ಅಭಿನಯ.. ಆ ಮಾತುಗಳು, ಆ ಮುಗ್ಧತೆ, ಬಲು ಇಷ್ಟವಾಗುತ್ತದೆ.. ಸತಿ ಅನುಸೂಯ ಬಹುಶಃ ಹೀಗೆ ಇದ್ದಾರೆ ಅನಿಸುತ್ತದೆ..
ಅತ್ರಿ ಪಾತ್ರದಲ್ಲಿ ಅಶ್ವಥ್.. ಸಹಜಾಭಿನಯ ನೀಡಿದ್ದಾರೆ.. ಅವರ ದೃಶ್ಯಗಳು ಅವರಲ್ಲಿರುವ ಅದ್ಭುತ ಕಲಾವಿದನನ್ನು ಪರಿಚಯಿಸುತ್ತದೆ.
ನಗೆಯುಕ್ಕಿಸುವ ಪಾತ್ರದಲ್ಲಿ ನರಸಿಂಹರಾಜು, ಮತ್ತು ಆತನನ್ನು ಕಾಡುವ ಪತ್ನಿಯಾಗಿ ಲಕ್ಷ್ಮೀದೇವಿ, ಸಿನಿಮಾಕ್ಕೆ ಬೇಕಾದ ಹಾಸ್ಯವನ್ನು ತುಂಬಿಸುತ್ತಾರೆ.. ಸಿನಿಮಾ ಒಂದು ಸ್ವಲ್ಪ ಗಂಭೀರವಾಗುತ್ತಿದೆ ಅನಿಸಿದಾಗ ಇವರಿಬ್ಬರೂ ನಿರಾಳತೆ ಒದಗಿಸುತ್ತಾರೆ
ಬಾಲಕೃಷ್ಣ ಮತ್ತು ಲೀಲಾವತಿ.. ಅಪರೂಪಕ್ಕೆ ಬಾಲಣ್ಣ ಅವರಿಗೆ ಮುಖ್ಯ ನಾಯಕನ ಪಾತ್ರ ಸಿಕ್ಕಿದೆ.. ಆದರಲ್ಲಿ ಭರ್ಜರಿ ಅಭಿನಯ ನೀಡಿದ್ದಾರೆ.. ಹಿತಮಿತವಾದ ಅಧಿಕಾರ ದರ್ಪ, ನಂತರ ನರ್ತಕಿಯೊಂದಿಗೆ ಪ್ರೇಮ ಸಲ್ಲಾಪ.. ಮಡದಿಯ ಮೇಲೆ ಕೋಪ, ಹತಾಶೆ, ರೋಗ ಬಂದು ಆವರಿಸಿಕೊಂಡಾಗ ಪಡುವ ಭಾವನೆ.. ಆತನನ್ನು ಉಪಚರಿಸುತ್ತಾ ತಮ್ಮ ಪತಿ ಸೇವೆ ಮಾಡುವ ಲೀಲಾವತಿ.. ಇಬ್ಬರದೂ ಸೂಪರ್ ಅಭಿನಯ ಮೂಡಿ ಬಂದಿದೆ. ಒಂದು ಪುಟ್ಟ ಪಾತ್ರದಲ್ಲಿ ನರ್ತಕಿಯಾಗಿ ಜಯಂತಿ ಅಭಿನಯಿಸಿದ್ದಾರೆ ಮುದ್ದಾಗಿ ಕಾಣುವ ಅವರ ಅಭಿನಯ ಸೊಗಸಾಗಿದೆ.
ತ್ರಿಶಕ್ತಿಯಲ್ಲಿ ಮೈನಾವತಿ, ಮತ್ತು ಆರ್ ಟಿ ರಮಾ ಮತ್ತು ಇನ್ನೊಬ್ಬ ಸಹಕಲಾವಿದೆ .. ಅಭಿನಯ ಇಷ್ಟವಾಗುತ್ತದೆ.. ಹಾಗೆಯೇ ತ್ರಿಮೂರ್ತಿಗಳ ಅಭಿನಯ ಕೂಡ..
ಹಾಡುಗಳು ಅನೇಕ ಇವೆ.. ಅದರಲ್ಲಿ ತ್ರಿಮೂರ್ತಿ ರೂಪ ದತ್ತಾತ್ರೇಯ ಹಾಡು ಪ್ರಸಿದ್ದಿಯಾಗಿದೆ..
ನಾಯಕನೇ ಆಗಬೇಕಿಲ್ಲ.. ಇತರ ಪಾತ್ರಗಳಲ್ಲೂ ಮಿಂಚಬಹುದು ತನ್ನ ಕೊಡುಗೆ ಕೊಡಬಹುದು ಎಂದು ರಾಜಕುಮಾರ್ ನಾರದನ ಪಾತ್ರದಲ್ಲಿ ತೋರಿಸಿದ್ದಾರೆ..
No comments:
Post a Comment