Friday, March 21, 2025

ಭಯವಿಲ್ಲದೆ ಸವಾಲು ಹಾಕಿ ಗೆದ್ದ ಸತಿ ಸಾವಿತ್ರಿ 1965 (ಅಣ್ಣಾವ್ರ ಚಿತ್ರ ೬೬/೨೦೭)

ಇಮೇಜ್ ಹಂಗು ಇಲ್ಲದೆ ತನ್ನ ಕಾಯಕವನ್ನೇ ಮಾಡುತ್ತಾ ಗಾಣ ಸುತ್ತುವ ಎತ್ತಿನಂತೆ, ನೊಗವನ್ನು ಹೊತ್ತು ರೈತನಿಗೆ ಉಳುಮೆ ಮಾಡುವ ಜೋಡಿ ಎತ್ತುಗಳಂತೆ.. ತನ್ನ ಪಾತ್ರ ತನ್ನ ಅಭಿನಯ ಇವೆ ನನ್ನ ಪ್ರಪಂಚ ಎಂದು ನಂಬಿ ಅಭಿನಯಿಸುವ ರಾಜಕುಮಾರ್ ಅವರ ಚಿತ್ರಗಳನ್ನು ನೋಡುವುದೇ, ಅದರಿಂದ ಕಲಿಯುವುದೇ ಒಂದು ಚಂದದ ಅನುಭವ.. 

ಚಿತ್ರದ ಹೆಸರೇ ಹೇಳುವಂತೆ ಸತಿ ಸಾವಿತ್ರಿ ಸ್ತ್ರೀ ಪ್ರಧಾನ ಕಥಾನಕ ಇರುವ ಚಿತ್ರ.. ಪುರಾಣ ಪ್ರಸಿದ್ಧ ಯಮನೊಡನೆ ಹೋರಾಡಿ ತನ್ನ ಪತಿದೇವನಿಗೆ ಆಯುಷ್ಯವನ್ನು, ತನ್ನ ಅತ್ತೆ ಮಾವಂದಿರಿಗೆ, ತನ್ನ ಹೆತ್ತವರಿಗೆ ಕರುಣಾಳುವಿನಿಂದ ವರಗಳನ್ನು ಪಡೆಯುವ ಕಥೆಯನ್ನು  ಚಿತ್ರೀಕರಿಸಿರುವ ರೀತಿ ಶ್ಲಾಘನೀಯ. 

ರಾಜಕುಮಾರ್, ಕೃಷ್ಣಕುಮಾರಿ, ಅಶ್ವಥ್ಮ್,  ರಾಘವೇಂದ್ರರಾವ್,  ಜಯಶ್ರೀ, ನರಸಿಂಹರಾಜು, ಜಯ, ರಾಮಚಂದ್ರಶಾಸ್ತ್ರಿ ಇವರೆಲ್ಲರ ಜೊತೆಯಲ್ಲಿ ಅಂತಿಮ ಕೆಲವು ದೃಶ್ಯಗಳಲ್ಲಿ ಬರುವ ಉದಯಕುಮಾರ್.. ಸೊಗಸಾದ ನಟನೆಯಿಂದ ಕೂಡಿದೆ. 

ಜಿಕೆ ವೆಂಕಟೇಶ್ ಅವರ ಹದಭರಿತ ಸಂಗೀತ ಚಿತ್ರದ ಪರಿಣಾಮವನ್ನು ಹೆಚ್ಚಿಸಿದೆ. ಚಿ ಸದಾಶಿವಯ್ಯ ಇಲ್ಲಿ ಮುಖ್ಯ ರೂವಾರಿ.  ಕಥೆ ಸಂಭಾಷಣೆ ಪದ್ಯಗಳು ಹಾಗೂ ಸಹ ನಿರ್ದೇಶನದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. 

ಆರ್ ಏನ್ ಜಯಗೋಪಾಲ್ ಮತ್ತು ಚಿ ಉದಯಶಂಕರ್ ಹಾಡುಗಳ ಸಾರಥ್ಯ ವಹಿಸಿಕೊಂಡಿದ್ದಾರೆ. ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕೀ ಹಾಡುಗಳಿಗೆ ಜೀವ ತುಂಬಿದ್ದಾರೆ. ಇಡೀ ಚಿತ್ರವನ್ನು ಸೆರೆ ಹಿಡಿದಿರೋದು ಬಿ ಎನ್ ಹರಿದಾಸ್.. ಇದರ ಕಪ್ತಾನ ಅಂದರೆ ನಿರ್ದೇಶಕ ಪಿ ಆರ್ ಕೌಂಡಿನ್ಯ. 

ನಿರ್ದೇಶಕರ ಜಾಣ್ಮೆ ಚಿತ್ರದ ಹೆಸರು ಪಾತ್ರವರ್ಗ ತೋರಿಸುವಾಗಲೇ ಸಾವಿತ್ರಿಯ ಜನನದ ಕಥಾನಕ ಹೇಳಿರೋದು. ನಂತರ ಪ್ರೌಢಾವಸ್ಥೆಗೆ ಬಂದ ಮೇಲೆ ಚಿತ್ರ ಶುರುವಾಗುತ್ತೆ. ಆ ಕಪ್ಪು ಬಿಳುಪಿನಿನಲ್ಲಿ ನಾಯಕಿ ಕೃಷ್ಣಕುಮಾರಿ ಹಾಗೂ ನಾಯಕ ರಾಜಕುಮಾರ್ ಅವರ ಸೌಂದರ್ಯ ಪರಿಪೂರ್ಣತೆ ಇಂದ ಕೂಡಿದೆ. 

ಎಲ್ಲರಿಗೂ ಗೊತ್ತಿರುವ ಕಥೆ ಸತ್ಯವಾನ ಸಾವಿತ್ರಿಯದು. ಕಥೆಯನ್ನು ಬೋರ್ ಹೊಡೆಸದಂತೆ ಚಾಕಚಕ್ಯತೆಯಿಂದ, ಮತ್ತು ಕ್ಷೀತ್ರಗತಿಯ ಸಂಕಲನದಿಂದ ಮೂಡಿಸಿದಿದ್ದಾರೆ. ಪ್ರತಿಯೊಂದು ಪಾತ್ರಧಾರಿಯೂ ಅಮೋಘ ಅಭಿನಯ ನೀಡಿದ್ದಾರೆ . 

ಸತ್ಯವಾನನ ಪಾತ್ರದಲ್ಲಿ ರಾಜಕುಮಾರ್ ಹದಭರಿತ ಅಭಿನಯ. ತಮ್ಮ ಪಾತ್ರ ದೊಡ್ಡದು ಸಣ್ಣದು ಎಂದು ತಲೆ ಕೆಡಿಸಿಕೊಳ್ಳದೆ ಆ ಪಾತ್ರಕ್ಕೆ ಬೇಕಾಗಿರುವ ಪೋಷಣೆ ನೀಡಿದ್ದಾರೆ. ಮನುಜ ಪರಿಸ್ಥಿತಿಯ ಕೈಗೊಂಬೆ, ಅದನ್ನು ಮೀರಿ ನೆಡೆದುಕೊಳ್ಳಲಾಗದು. ಈ ತತ್ವವನ್ನು ಆತನ ತಂದೆ ತಾಯಿಯರು ಹೇಳಿದಾಗ ತಮ್ಮ ಕುಟುಂಬಕ್ಕೆ ಆದ ಅವಮಾನ, ಮೋಸವನ್ನು ಕಂಡು ಕ್ಷುದ್ರರಾಗಿ ಕೂಗುವ ಅಭಿನಯ ಸೂಪರ್ ಎನಿಸುತ್ತದೆ. ಆದರೆ ಅಷ್ಟೇ ಶಾಂತವಾಗಿ ತಂದೆತಾಯಿಯರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಮತ್ತು ಅದರಲ್ಲೂ ಇಬ್ಬರೂ ವಯೋವೃದ್ಧರು ಹಾಗೂ ದೃಷ್ಟಿ ಹೀನರನ್ನು ನೋಡಿಕೊಳ್ಳುವ ಹೊಣೆ ತನ್ನದು ಎಂದು ಅರಿವಾದಾಗ ತಕ್ಷಣ ಶಾಂತ ಸ್ವಭಾವದ ಅಭಿನಯ ಅವರ ಅಭಿನಯ ಚತುರತೆಯನ್ನು ತೋರಿಸುತ್ತದೆ 

ಹೌದು ಪರಿಸ್ಥಿತಿ ನಮ್ಮನ್ನುಅಲುಗಾಡಿಸುತ್ತದೆ . ಆದರೆ ಆ ಸಮಯದಲ್ಲಿ ಮುಖ್ಯವಾಗಿ ಬೇಕಾಗಿರೋದು ಶಾಂತಿ, ತಾಳ್ಮೆ, ಮುಂದಾಲೋಚನೆ ಮತ್ತು ಪರಿಸ್ತಿಯಂತೆ ನೆಡೆದುಕೊಳ್ಳುವ ಜಾಣ್ಮೆ. ಈ ಗುಣಗಳನ್ನು ಅಂತಃಸತ್ವದಿಂದ ಪ್ರಚುರ ಪಡಿಸುವ ರಾಜಕುಮಾರ್ ನೀಡಿರುವ ಅಭಿನಯ ಸೂಪರ್. 

ಸಾವಿತ್ರಿಯಾಗಿ ಕೃಷ್ಣಕುಮಾರಿ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ, ಸೊಗಸಾದ ಅಭಿನಯ ಕೂಡ ನೀಡಿದ್ದಾರೆ. 


ರಾಘವೇಂದ್ರರಾವ್ ಮತ್ತು ಜಯಶ್ರೀ ಸಾವಿತ್ರಿಯ ತಂದೆತಾಯಿಯರಾಗಿ, ಹಾಗೂ ಸಹಕಲಾವಿದೆಯೊಂದಿಗೆ ರಾಮಚಂದ್ರಶಾಸ್ತ್ರಿ ತಂದೆ ತಾಯಿಯರ ತೊಳಲಾಟ, ವೇದನೆಗಳನ್ನು ಶಕ್ತವಾಗಿ ವ್ಯಕ್ತ ಪಡಿಸಿದ್ದಾರೆ. 




ಈ ರೀತಿಯ ಗಂಭೀರ ಕಥಾವಸ್ತುಗಳಿಗೆ ಸ್ವಲ್ಪ ಹಾಸ್ಯರಸ ಸೇರಿಸುವಲ್ಲಿ ನರಸಿಂಹರಾಜು ಮತ್ತು ಜಯ ಯಶಸ್ವಿಯಾಗಿದ್ದಾರೆ. 



ಕನ್ನಡ ಪೌರಾಣಿಕ ಚಿತ್ರಗಳ ಖಾಯ ನಾರದ ಪಾತ್ರಧಾರಿ ಅಶ್ವಥ್ ಅದ್ಭುತ ಅಭಿನಯದ ಕೇಂದ್ರ. ನಾರದನ ಪಾತ್ರಕ್ಕೆ ಬೇಕಾದ ಮುಗ್ಧತೆ , ತುಂಟತನ, ಜಾಣ್ಮೆ, ಸಮಯಕ್ಕೆ ಸರಿಯಾಗಿ ಪರಿಹಾರ ನೀಡುವ ಯುಕ್ತಿ, ಮಾತಿನ ಚಟಪಟ ಎಲ್ಲವೂ ಮೇಳೈಸಿದೆ!


ಇದೊಂದು ಅಪರೂಪದ ಚಿತ್ರ ಮತ್ತು ಅಷ್ಟೇ ಶಕ್ತಿಶಾಲಿಯಾಗಿ ಮೂಡಿದ ಚಿತ್ರವೂ ಹೌದು. 

ಅರೆ ಅರೆ ಇರಪ್ಪ ಯಮರಾಜ ಭೂಲೋಕದ ಎಲ್ಲರ ನಿಯಂತ್ರಣವನ್ನು ಹೊಂದಿರುವ ನಿನ್ನನ್ನು ಮರೆಯಲಾದೀತೆ. ಉತ್ತಮವಾದದ್ದು ಕಡೆಯಲ್ಲಿ ಬರುತ್ತದೆ ಅರ್ಥಾತ್ Best Comes At The Last ಎನ್ನುವಂತೆ ಉದಯಕುಮಾರ್ ಅವರ ಯಮರಾಜನ ಪಾತ್ರದ ಪ್ರವೇಶ ನಿಜಕ್ಕೂ ಒಮ್ಮೆ ಮೈ ಜುಮ್ ಎನಿಸುತ್ತದೆ. ಆ ನೆರಳು ಬೆಳಕಿನಲ್ಲಿ ಆ ಭರ್ಜರಿ ದೇಹಾಕಾರ ಎತ್ತರದ ನಿಲುವು ಪೊದೆಯಂತಹ ಮೀಸೆ, ಅದರ ಹಿಂದೆ ಕೋಣನ ಆಕೃತಿ ಜೊತೆಗೆ ಅಮೋಘವಾದ ಸಿಂಹನಾದದಂತಹ ಧ್ವನಿ.. ಸಾವಿತ್ರಿಯ ಪ್ರತಿ ಸವಾಲಿಗೂ ಶಾಂತವಾಗಿ ಉತ್ತರ ಕೊಡುತ್ತಲೇ ಸಿಟ್ಟಿಗೆ ಏಳುವಾಗ ತಾರಕಕ್ಕೆ ಹೋಗುವ ಅವರ ಧ್ವನಿ.. ಅಬ್ಬಬ್ಬಾ.. 



ಯಮರಾಜ ಈಗ ಸಂತೋಷವೇ.. 

ಓಯ್ ನನ್ನ ಫೋಟೋ ಹಾಕು ಎಂದರೆ ಕಲಹಪ್ರಿಯ ನಾರದನ ಫೋಟೋ ಹಾಕ್ತೀಯ.. 

ಅಯ್ಯೋ ತಪ್ಪಾಯಿತಪ್ಪ ತಗೋ ನಿನ್ನ ಫೋಟೋ.. 


ಹಾ ಈಗ ಸರಿ.. ಶುಭವಾಗಲಿ!

No comments:

Post a Comment