Monday, November 25, 2024

ಅನುದಿನವೂ ಸುದಿನವೇ ಎನ್ನುವ ಇದೇ ಮಹಾ ಸುದಿನ 1965 (ಅಣ್ಣಾವ್ರ ಚಿತ್ರ ೬೪/೨೦೭)

ರಾಜಕುಮಾರ್ ಅವರ ಓರಗೆಯ ನಟ ಉದಯಕುಮಾರ್ ಅವರು ಧನ್ಸ ಜೀ ಕಲ್ಯಾಣ್ಹ ಜೀ ಅವರ ಸಹ ಭಾಗಿತ್ವದಲ್ಲಿ ನಿರ್ಮಾಣ ಮಾಡಿದ ಚಿತ್ರವೇ ಇದೇ ಮಹಾ ಸುದಿನ.. ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಉದಯಕುಮಾರ್ ಅವರೇ ಸಾಹಿತ್ಯ ರಚಿಸಿರೋದು.. ಇದೊಂದು ಅಪರೂಪದ ಘಟನೆ.. 

ಶಾಂತ್ ಫಿಲಂಮ್ಸ್ ಲಾಂಛನದಲ್ಲಿಬಿ ಪುಟ್ಟಪ್ಪ ಅರ್ಪಣೆ ಮಾಡಿದ ಈ ಚಿತ್ರವನ್ನು ಬಿ ಗೋಪಾಲ್ ಅವರು ಕಥೆ ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ಧಾರಿಯನ್ನು ನಿಭಾಯಿಸಿದ್ದಾರೆ. 

ಪಿ ಬಿ ಶ್ರೀನಿವಾಸ್ , ಗೋಪಾಲ್, ಎಸ್ ಜಾನಕೀ, ಪಿ ಲೀಲಾ, ಎಲ್ ಆರ್ ಈಶ್ವರಿ ಪೀಠಾಪುರಂ ನಾಗೇಶ್ವರ್ ರಾವ್ ಅವರ ಧ್ವನಿ ಉದಯಕುಮಾರ್ ಅವರ ಸಾಹಿತ್ಯಕ್ಕೆ ಒದಗಿಸಿ,ಆ ದಕ್ಕೆ ಸಂಗೀತ ಬಿ ಗೋಪಾಲ್ ಮಾಡಿದ್ದಾರೆ. ಛಾಯಾಗ್ರಹಣ ಡೆಬ್ರಿ ಎಂ ಏನ್ ಮಣಿ.  

ಆಧುನಿಕ ಉಡುಪಿನಲ್ಲಿ ಆರಂಭದ ದೃಶ್ಯಗಳಲ್ಲಿ ಮುದ್ದಾಗಿ ಕಾಣುವ ಲೀಲಾವತಿ ಪಾತ್ರದ ಸುತ್ತ ನೆಡೆದಾಡುವ ಕಥೆಯಿದು. ದುಡ್ಡಿನ ಅಹಂ, ತಾನೇ ಬುದ್ದಿವಂತೆ ಎನ್ನುವ ಗರ್ವ, ತಾ ಮಾಡಿದ್ದೆ ಸರಿ ಎನ್ನುವ ಧೋರಣೆ ಮನುಜನನ್ನು ಎಂಥಹ ಹೀನಾಯ ಸ್ಥಿತಿಗೆ ತಂದು ಬಿಡುತ್ತದೆ ಎಂದು ನವಿರಾದ ನಿರೂಪಣೆಯೊಂದಿಗೆ ಈ ಚಿತ್ರ ಮೂಡಿಬರುತ್ತದೆ, 

ಲೀಲಾವತಿ ಅಹಂ ಪಾತ್ರ, ಮತ್ತು ಅಹಂ ಇಳಿದು ಹೀನಾಯವಾದ ಸ್ಥಿತಿಗೆ ಇಳಿಯುವ ಪಾತ್ರ ಎರಡೂ ಕಡೆ ಅವರ ಅಭಿನಯ ಸೊಗಸಾಗಿದೆ.. ಅದರಲ್ಲೂ ಆರಂಭದಲ್ಲಿ ಇಂಗ್ಲಿಷ್ ಮಾತುಗಳನ್ನು ಸೇರಿಸಿ ಮಾತಾಡುವ ಶೈಲಿ ಸೊಗಸು.. 


ಜಯಶ್ರೀ ಸಾಮಾನ್ಯವಾಗಿ ಸಂಯಮ ಪಾತ್ರಗಳಲ್ಲಿ ಕಾಣುವ ಕಲಾವಿದೆ.. ಆದರೆ ಇಲ್ಲಿ ತುಸು ಕಠಿಣ ಹೃದಯಿ.. ಹಾಗೂ ಮಾತೃ ಮಮತೆಯಿಂದ ತುಸು ದೂರವಾಗಿರುವ ಪಾತ್ರ.. ಮತ್ತು ಕಡೆಯಲ್ಲಿ ತಾ ನಂಬಿದ್ದ ಆಸರೆ ನೀರಿನಲ್ಲಿ ಮುಳುಗಿದ ಮಣ್ಣಿನ ಹೆಂಟೆ ಎಂದು ಅರಿವಾದಾಗ ಅವರು ಪಡುವ ಬವಣೆಯ ಅಭಿನಯ ನೈಜವಾಗಿದೆ 

ರಾಘವೇಂದ್ರ ರಾವ್ ಉತ್ತಮ ನಟ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ..ಆರಂಭದ ಕೆಲವೇ ದೃಶ್ಯಗಳಲ್ಲಿ ಬರುವ ಅವರ ಪಾತ್ರ ಸೊಗಸಾದ ಛಾಪು ಮೂಡಿಸಿದೆ. 


ಸಂಯಮ ಪಾತ್ರದಲ್ಲಿ ಹರಿಣಿ ಮುಗ್ಧೆಯಾಗಿ ಕಂಡರೆ.. ಸಿರಿವಂತಿಕೆ ಬಂದ ಮೇಲೆ ಅಹಂ ತೋರದೆ ಮತ್ತೆ ಸಂಯಮವಾಗಿಯೇ ಇರುವ ಅವರ ಪಾತ್ರಾಭಿನಯ ಇಷ್ಟವಾಗುತ್ತದೆ 


ಪುಟ್ಟ ಪಾತ್ರವಾದರೂ ಬಾಲಣ್ಣ ಮನಸ್ಸಿಗೆ ತಾಕುವಂತಹ ಅಭಿನಯ ನೀಡಿದ್ದಾರೆ.. ತಮ್ಮ ಗಳಿಕೆಯನ್ನೆಲ್ಲ ತಮಗಿಷ್ಟವಾದವರಿಗೆ ದಾನ ಮಾಡಿ ಬರಿಗೈಯಲ್ಲಿ ಮೆಕ್ಕ ಪ್ರವಾಸ ಮಾಡುತ್ತೇನೆ ಎಂದು ಹೇಳುವ ದೃಶ್ಯ ಸೊಗಸಾಗಿದೆ. 


ಈ ಚಿತ್ರದ ಕತೃ ಉದಯಕುಮಾರ್ ಅವರು ಅಭಿನಯ ಈ ಚಿತ್ರದ ಜೀವಾಳ.. ತಾಯಿಗೆ ಎದುರಾಡುತ್ತಾ ತನ್ನ ಮನದ ಇಂಗಿತವನ್ನು ಹೇಳುವ ಅಭಿನಯ.. ರಾಮನಂತೆ ತಾನು ಅಣ್ಣನನ್ನು ಅನುಸರಿಸುತ್ತೇನೆ ಎನ್ನುತ್ತಾ.. ಅಣ್ಣನ ಮಾತನ್ನು ನಯವಾಗಿ ತಿರಸ್ಕರಿಸಿ.. ತನ್ನ ಜೀವನವನ್ನು ರೂಪಿಸಿಕೊಂಡು, ಕೈ ಹಿಡಿದ ಮಡದಿಯನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ.. ಜೊತೆಯಲ್ಲಿ ಕರ್ತವ್ಯ ನಿಷ್ಠೆ ಪ್ರದರ್ಶಿಸುವ ಪಾತ್ರದಲ್ಲಿ ಉದಯಕುಮಾರ್ ಗೆದ್ದಿದ್ದಾರೆ.. ಅಂತಿಮ ದೃಶ್ಯದಲ್ಲಿ ಅವರ ಅಭಿನಯ ಅಮೋಘ.. ಇತ್ತ ತಾಯಿಯನ್ನು ಆಕೆ ಮಾಡಿದ ತಪ್ಪನ್ನು ನಯವಾಗಿ ಹೇಳುತ್ತಾ.. ಅಣ್ಣ ತಾಯಿಯನ್ನು ಕಾಪಾಡದೇ ಬಿಟ್ಟು ಹೋಗಿದ್ದನ್ನು ನೆನಪಿಸಿ ಹೇಳುವ ಮಾತುಗಳು ಸೊಗಸಾಗಿದೆ. 

ಗುಪ್ತಗಾಮಿನಿಯ ಹಾಗೆ ತಮ್ಮ ಅಭಿನಯದ ಛಾಪನ್ನು ಮೂಡಿಸುವ., ತನ್ನ ಪಾತ್ರದ ಆಳವನ್ನು ಮನದಲ್ಲಿಟ್ಟುಕೊಂಡು, ಅದಕ್ಕೆ ತಕ್ಕ ಹಾಗೆ ತಮ್ಮ ಅಭಿನಯದ ಶಕ್ತಿಯನ್ನು ತೋರಿಸುವ ರಾಜಕುಮಾರ್ ಮೊದಲು ವೈದ್ಯರಾಗಿ ಆ ಪಾತ್ರಕ್ಕೆ ಬೇಕಾದ ಹಾಗೆ ತಮ್ಮನ್ನು ಒಗ್ಗಿಸಿಕೊಂಡು.. ತನ್ನ ಕ್ಲಿನಿಕ್ಕಿನಲ್ಲಿ ಇರುವವರನ್ನು ಚಿಕಿತ್ಸೆ ಕೊಟ್ಟು ಉಪಚರಿಸುವ ರೀತಿ .. ಹಾಗೆಯೇ ಮಾತೃಭಕ್ತಿ .. ತನ್ನ ಅಮ್ಮ ತಪ್ಪಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದಾಳೆ ಎಂದು ಅರಿವಿದ್ದರೂ, ಆಕೆಯನ್ನು ಬಿಡಲಾಗದೆ, ತನ್ನ ತಮ್ಮನ ನಿರ್ಧಾರ ಸರಿ ಇದೆ ಅಂತ ಗೊತ್ತಿದ್ದರೂ, ಅದನ್ನು ಹೇಳಲಾಗದೆ.. ಒದ್ದಾಡುವ ದೃಶ್ಯದ ಅಭಿನಯ ಸೂಪರ್. 

ಆಸ್ತಿಗೋಸ್ಕರ ಬಲವಂತವಾಗಿ ಮದುವೆ ಮಾಡಿಕೊಂಡ ಮಡದಿಯ ದರ್ಪವನ್ನು ತಿರಸ್ಕಾರದಿಂದ ನೋಡುವ ನೋಡುತ್ತಾ, ಮಡದಿಗೆ ಬುದ್ದಿ ಹೇಳಿದರೂ ಕೇಳದ ಹಂತಕ್ಕೆ ಹೋಗಿದ್ದಾಳೆ ಎಂದು ತಿಳಿದಾಗ, ತನ್ನ ತಾಯಿಗೆ ಮಾತ್ರ ಹೇಳಿ.. ಹೋಗುವ ದೃಶ್ಯ.. ವಿಧಿಯ ಆಟದಿಂದ ಬವಣೆ ಪಟ್ಟು ಕಣ್ಣು ಕಳೆದುಕೊಂಡು, ಮರಳಿ ದೃಷ್ಟಿ ಪಡೆದು.. ತನ್ನ ಮಡದಿಗೆ ಬುದ್ದಿ ಹೇಳಿದರೂ,ಟಿ ಅಣ್ಣ ತಾಯಿಯ ಮಮತೆ ಎಲ್ಲದಕ್ಕೂ ದೊಡ್ಡದು ಎಂದು ತಿಳಿಹೇಳುವ ಪಾತ್ರದಲ್ಲಿ ರಾಜಕುಮಾರ್ ಅವರು ತಮ್ಮ ಅಭಿನಯದ ಶಕ್ತಿಯನ್ನು ತೋರಿಸಿದ್ದಾರೆ.. 

ಇದೊಂದು ಉತ್ತಮ ಚಿತ್ರ.. ನನಗೆ ಅನಿಸಿದ್ದು, ಲೀಲಾವತಿ ಆರಂಭದ ದೃಶ್ಯದಲ್ಲಿ ಬಿಕ್ಷುಕನಿಗೆ ನೂರು ರೂಪಾಯಿ ಕೊಟ್ಟು, ವ್ಯಾಪಾರ ಮಾಡಿ ಮಕ್ಕಳನ್ನು ಸಾಕು ಎಂದು ಹೇಳುವ ದೃಶ್ಯವನ್ನು.. ಕಡೆಗೆ ಲೀಲಾವತಿ ಹಣಕ್ಕಾಗಿ ಒದ್ದಾಡುವ, ಅಹಂ ಇಳಿದು ಬಡತನದ ಬದುಕನ್ನು ಸಹಿಸಲಾಗದೆ ಕಡೆಯಲ್ಲಿ ತನ್ನ ಗೆಳತಿಯ ಹತ್ತಿರ ಸ್ವಲ್ಪ ಚೇಂಜ್ ಕೊಡೆ ಅನ್ನುವ ದೃಶ್ಯದ ಬದಲು.. ಭಿಕ್ಷೆ ಬೇಡಲು ಹೋಗಿ, ಆ ಸಿರಿವಂತನಾದ ತಿರುಕ ಈಕೆಯನ್ನು ಗುರುತು ಹಿಡಿದು ಸಹಾಯ ಮಾಡುವಂತೆ ತೋರಿಸಬಹುದಿತ್ತೋ ಏನೋ ಅನಿಸಿತ್ತು.. 


ಪುಟ್ಟ ಪಾತ್ರಗಳಲ್ಲಿ ದಿನೇಶ್ ಮತ್ತು ಜಯಅಭಿನಯಿಸಿದ್ದಾರೆ . 


ಉತ್ತಮ ಚಿತ್ರವಿದು..

Wednesday, November 20, 2024

ಉತ್ತಮ ಸಂಭಾಷಣೆ ಉತ್ತಮ ಚಿತ್ರಕಥೆ ಮತ್ತು ಸಂದೇಶವುಳ್ಳ ಸತಿ ಅನುಸೂಯ 1965 (ಅಣ್ಣಾವ್ರ ಚಿತ್ರ ೬೩/೨೦೭)

ಇದೊಂದು ಪೌರಾಣಿಕ ಕಥೆ.. ಅದನ್ನು ಒಪ್ಪುವ ಹಾಗೆ ಭೂಲೋಕಕ್ಕೆ ತಂದು ಅದ್ಭುತವಾಗಿ ಸಹನೀಯವಾಗುವಂತೆ ಮಹಾಸತಿ ಅನುಸೂಯ ಚಿತ್ರವನ್ನಾಗಿ ತಂದಿದ್ದಾರೆ. 


ಪ್ರತಿಯೊಂದು ಪಾತ್ರಕ್ಕೂ ಖಚಿತವಾದ ಮೌಲ್ಯ ಇದೆ.. ತೂಕವಿದೆ.. ಪ್ರತಿ ಪಾತ್ರವೂ ಸಂದರ್ಭಯೋಚಿತವಾಗಿ ಆಡುವ ಮಾತುಗಳು ಹೃದಯಕ್ಕೆ ತಾಕುತ್ತದೆ. ಚಿ ಉದಯಶಂಕರ್ ಅವರ ಸಂಭಾಷಣೆ ಈ ಚಿತ್ರದ ತೂಕವನ್ನು ಇನ್ನಷ್ಟು ಹೆಚ್ಚಿಸುತ್ತದೆ.. ಹಿಂದಿನ ಚಿತ್ರಗಳ ಸಂಭಾಷಣೆ ಕೂಡ ಅದ್ಭುತವಾಗಿತ್ತು.. ಕನ್ನಡದ ಸತ್ವಯುತ ಪದಗಳನ್ನು ಉತ್ತಮ ಮಾಲೆಯಾಗಿ ಪೋಣಿಸಿದ್ದರು.. ಈ ಚಿತ್ರದಲ್ಲಿ ಸರಳವಾಗಿ ಬರುವ ಮಾತುಗಳು ಮನಸ್ಸಿಗೆ  ಅದೇ ರೀತಿ ಮುದ ಕೊಡುತ್ತವೆ.. ಆದರೆ ಮಾತುಗಳು ಸರಳವಾಗಿವೆ ಅದೇ ವಿಶೇಷತೆ.... ಚಿ ಉದಯಶಂಕರ್ ಅವರ ಉದಯ ಸೊಗಸಾಗಿದೆ!

ಇಲ್ಲಿ ಮೂರು ಕುಟುಂಬಗಳ ಚಿತ್ರವಿದೆ 

ಮೊದಲನೆಯದು ಅತ್ರಿ ಮಹರ್ಷಿ ಮತ್ತು ಅನುಸೂಯ


ಪತಿಯೇ ಪರಮೇಶ್ವರ ಎಂದು ನಂಬಿದ ಅನುಸೂಯ.. ತ್ರಿಮೂರ್ತಿಗಳನ್ನು ಶಿಶುಗಳನ್ನಾಗಿ ಮಾಡುವಷ್ಟು ಶಕ್ತಳಾಗಿರುತ್ತಾಳೆ.. ತ್ರಿಶಕ್ತಿ ದೇವತೆಗಳಾದ ದಾಕ್ಷಾಯಿಣಿ, ಲಕ್ಷ್ಮಿ ಹಾಗೂ ಸರಸ್ವತಿಯರನ್ನು ತನ್ನ ಪತಿವ್ರತಾ ಶಕ್ತಿಯಿಂದ ಅವರು ಒಡ್ಡಿದ  ಗೆಲ್ಲುತ್ತಾಳೆ. ಅದಕ್ಕೆ ಕಾರಣ ಏನು ಅಂತ ಕೇಳಿದರೆ ಪತಿಯೇ ಶಕ್ತಿ, ಪತಿಯ ಆಶೀರ್ವಾದವೇ ಶಕ್ತಿ ಎಂದು ನಮ್ರಳಾಗಿ ಹೇಳುತ್ತಾಳೆ.. ಚಿತ್ರದ ಉದ್ದಕ್ಕೂ ಲೋಕ ಕಲ್ಯಾಣಕ್ಕಾಗಿ ತನ್ನನ್ನು ಕಷ್ಟಕ್ಕೆ ಗುರಿ ಮಾಡಿಕೊಂಡರು ಪರವಾಗಿಲ್ಲ ಲೋಕ ಕ್ಷೇಮದಿಂದ ಇರಬೇಕು ಎನ್ನುತ್ತಾ ತನ್ನ ಸಹನಾ ಶಕ್ತಿಯನ್ನು ಪ್ರದರ್ಶಿಸುತ್ತಾಳೆ ಮತ್ತೆಅದರಲ್ಲಿ ಯಶಸ್ವಿಯಾಗಿ ತ್ರಿಮೂರ್ತಿಗಳು ಅವಳ ಶಕ್ತಿಗೆ ನಮಿಸುತ್ತಾರೆ. ಅತ್ರಿ ಮಹರ್ಷಿ ತನ್ನ ಸಹನಾ ಗುಣ, ತನ್ನ ಸಮಯೋಚಿತವಾದ ಪರಿಹಾರ ಕೊಡುತ್ತಾ ತನ್ನ ಮಡದಿಯ ಶಕ್ತಿಗೆ ಮಾರ್ಗ ತೋರಿಸುತ್ತಾರೆ. 

ಪತಿ ಪತ್ನಿ ಸಮರಸದಿಂದ ಜೀವನ ಮಾಡಿದಾಗ ತಾವು ಮಾತ್ರ ಸುಖವಾಗಿರುವುದಷ್ಟೇ ಅಲ್ಲದೆ ತಮ್ಮ ನೆರೆಹೊರೆಯನ್ನು ಉತ್ತಮವಾಗಿ ನೋಡಿಕೊಳ್ಳಬಲ್ಲರು ಎಂಬ ಸಂದೇಶವಿದೆ.. ಜೊತೆಯಲ್ಲಿ ತಮ್ಮ ಕಾರ್ಯಾಚರಣೆ ಸರಿ ಮಾರ್ಗದಲ್ಲಿದ್ದಾಗ ತ್ರಿಮೂರ್ತಿಗಳು, ತ್ರಿಶಕ್ತಿಗಳು ಕೂಡ ಸಹಯೋಗ ನೀಡುತ್ತಾರೆ ಎಂಬ ಸಂದೇಶವಿದೆ

ಎರಡನೆಯದು ಕೌಶಿಕ ಮತ್ತು ಸುಮತಿ 

ಐಶ್ವರ್ಯ,ಆ ಅಧಿಕಾರಗಳು ಇದ್ದಾಗ ಪ್ರೀತಿ ಮಮತೆ ದಾರಿ ತಪ್ಪುತ್ತವೆ.. ಬೇಡದ ಹವ್ಯಾಸಗಳು ದಾರಿ ತಪ್ಪಿಸಿ ಸುಂದರವಾದ ಬದುಕನ್ನು ನರಕಮಾಡಿಕೊಳ್ಳುತ್ತಾರೆ ಎಂದು ತೋರಿಸುವ ಈ ಕುಟುಂಬ ಚಿತ್ರಣ ಸೊಗಸಾಗಿದೆ.. ಹಣ ಅಧಿಕಾರ ಇದ್ದ ಕೌಶಿಕ, ಸುಂದರ ಮಡದಿಯನ್ನು ಮದುವೆಯಾದಾಗ ಅವಳೇ ತನ್ನ ಕುಟುಂಬ ಎಂದು ಮೊದಲು ಅನಿಸಿದರೂ, ಹಣದ ಮದ ಮನೆಯ ಹೊರಗೆ ಸುಖ ಕಂಡುಕೊಳ್ಳಲು ಹೋಗಿ, ಖಾಯಿಲೆ ತಂದು ಕೊಂಡು ಬಳಲುತ್ತಾ, ತಾನು ಇಷ್ಟ ಪಡದ ಮಡದಿಯೇ ಯೋಗಕ್ಷೇಮ ನೋಡಿಕೊಳ್ಳುತ್ತ, ತನ್ನಪತಿವ್ರತಾ ಶಕ್ತಿಯಿಂದ ತನ್ನ ಪತಿಗೆ ಬಂದಿದ್ದ ಖಾಯಿಲೆ ಮತ್ತು ಧನ ಸೌಕರ್ಯಗಳನ್ನು ಮರಳಿ ಪಡೆಯುತ್ತಾಳೆ. 

ಪ್ರೀತಿ ಪ್ರೇಮ ಮಮತೆ ಇವೆಲ್ಲವೂ ಮನೆಯ ಒಳಗೆ ಹಂಚಿಕೊಳ್ಳುವ ಭಾವವೇ ಹೊರತು, ಮನೆಯ ಹೊರಗಿನ ವ್ಯಕ್ತಿಗಳ ಜೊತೆಯಲ್ಲ, ಮನೆಯನ್ನು ಗೆದ್ದಾಗ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸುತ್ತದೆ. 

ಮೂರನೆಯದು ತಾಂಡವ ಮತ್ತು ನಾಗಿ 


ತಾಳ ಮೇಳವಿಲ್ಲದ ಸಂಸಾರ, ಹೆಣ್ಣು ಘಟವಾಣಿ, ಗಂಡು ಅಧೈರ್ಯಶಾಲಿ.. ಇತ್ತ ಕಡೆ ಸುಖವೂ ಇಲ್ಲ, ದುಃಖವೂ ಇಲ್ಲ.. ಪರಿವಾರದಲ್ಲಿ ಸಮರಸವಿಲ್ಲ.. ದುರಾಸೆಯೇ ಎಂದರೆ ಅಲ್ಲ, ಅನುಮಾನವೇ ಅದೂ ಅಲ್ಲ, ಹಣದ ಕೊರತೆಯೇ ಅದಲ್ಲ. ಹೀಗೆ ಎಲ್ಲದ್ದಕ್ಕೂ ಇಲ್ಲ ಇಲ್ಲ ಅನಿಸುವ ಈ ಕುಟುಂಬದಲ್ಲಿ ನಿಜವಾಗಿಯೂ ಬೇಕಾಗಿರೋದು ಪತಿ ಭಕ್ತಿ, ಸತಿ ಪ್ರೀತಿ.. ಇವೆರಡೂ ಇಲ್ಲದೆ ಸಂಸಾರ ಸಾಗದು ಎಂದು ವಿವರಿಸುವ ಸಂದೇಶ.. 

ಈ ಮೂರು ಕುಟುಂಬಗಳನ್ನು ಕತೆಗೆ ಒಗ್ಗಿಸಿಕೊಂಡು, ಚಿತ್ರ ರೂಪಿಸಿರುವುದು ವಿಕ್ರಂ ಪ್ರೊಡಕ್ಷನ್ಸ್ ಕತೃ ನಿರ್ಮಾಪಕ ಮತ್ತು ನಿರ್ದೇಶಕರಾದ ಬಿ ಎಸ್ ರಂಗ ಅವರ ಜಾಣ್ಮೆ.. 

ಛಾಯಾಗ್ರಾಹಕರಾಗಿ ಬಿ ಎನ್ ಹರಿದಾಸ್ ಅವರ ಕೈಚಳಕವಿದೆ.. ಸಂಗೀತ ಎಸ್ ಹನುಮಂತ ರಾವ್ ಅವರದ್ದು .. ಸಾಹಿತ್ಯ ಸಂಭಾಷಣೆ ಚಿ ಉದಯಶಂಕರ್ ಅವರದ್ದು, ಹಾಡುಗಳಿಗೆ ದನಿಗಳಾಗಿ ಪಿ ಬಿ ಶ್ರೀನಿವಾಸ್, ಜಾನಕಿ, ಎಲ್ ಆರ್ ಈಶ್ವರೀ, ಲತಾ, ಸುಮಿತ್ರಾ ಮತ್ತು ಸತ್ಯಂ  ಇದ್ದಾರೆ.. 

ಚಿ ಉದಯಶಂಕರ್ ಅವರು ಸಹನಿರ್ದೇಶಕರಾಗಿ ಕೂಡ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.. 


ನಾರದರಾಗಿ ರಾಜಕುಮಾರ್ ಅಮೋಘವಾಗಿ ನಟಿಸಿದ್ದಾರೆ.. ಆ ಪಾತ್ರಕ್ಕೆ ಬೇಕಾದ ತುಂಟತನ, ಜಾಣ್ಮೆಯ ಮಾತುಗಳು, ಕಲಹಪ್ರಿಯ ಅಂತ ಅನಿಸಿಕೊಂಡರೂ, ಲೋಕ ಕಲ್ಯಾಣಕ್ಕಾಗಿ ತಂದಿಡುವ ಕಲಹ.. ನಾರಾಯಣ ನಾರಾಯಣ ಎನ್ನುವಾಗ ಒಂದು ಸಣ್ಣಗಿನ ನಗು.. ಈ ಪಾತ್ರಕ್ಕೆ ತಮ್ಮನ್ನು ಒಗ್ಗಿಸಿಕೊಂಡಿವುವೂ ರೀತಿ ಖುಷಿಯಾಗುತ್ತದೆ.. ಇತ್ತ ನಾಯಕನ ಪಾತ್ರವೂ ಅಲ್ಲ, ಇತ್ತ ಖಳನಾಯಕನ ಪಾತ್ರವೂ ಅಲ್ಲ.. ಆದರೂ ಚಿತ್ರದುದ್ದಕ್ಕೂ ಕಾಣಸಿಗುವ ಅವರ ಪಾತ್ರ ಅವರನ್ನು ಪ್ರತಿ ದೃಶ್ಯದಲ್ಲೂ ಕಂಡರೆ ಚೆನ್ನಾಗಿರುತ್ತದೆ ಅನಿಸುವಂತೆ, ಚಿತ್ರದಲ್ಲಿ ಆವರಿಸಿಕೊಂಡಿದ್ದಾರೆ. 

ಮುಖ್ಯ ಪಾತ್ರದಲ್ಲಿ ಪಂಡರಿಬಾಯಿ ಸಂಯಮದ ಅಭಿನಯ.. ಆ ಮಾತುಗಳು, ಆ ಮುಗ್ಧತೆ, ಬಲು ಇಷ್ಟವಾಗುತ್ತದೆ.. ಸತಿ ಅನುಸೂಯ ಬಹುಶಃ ಹೀಗೆ ಇದ್ದಾರೆ ಅನಿಸುತ್ತದೆ.. 

ಅತ್ರಿ ಪಾತ್ರದಲ್ಲಿ ಅಶ್ವಥ್.. ಸಹಜಾಭಿನಯ  ನೀಡಿದ್ದಾರೆ.. ಅವರ ದೃಶ್ಯಗಳು ಅವರಲ್ಲಿರುವ ಅದ್ಭುತ ಕಲಾವಿದನನ್ನು ಪರಿಚಯಿಸುತ್ತದೆ. 

ನಗೆಯುಕ್ಕಿಸುವ ಪಾತ್ರದಲ್ಲಿ ನರಸಿಂಹರಾಜು, ಮತ್ತು ಆತನನ್ನು ಕಾಡುವ ಪತ್ನಿಯಾಗಿ ಲಕ್ಷ್ಮೀದೇವಿ, ಸಿನಿಮಾಕ್ಕೆ ಬೇಕಾದ ಹಾಸ್ಯವನ್ನು ತುಂಬಿಸುತ್ತಾರೆ.. ಸಿನಿಮಾ ಒಂದು ಸ್ವಲ್ಪ ಗಂಭೀರವಾಗುತ್ತಿದೆ ಅನಿಸಿದಾಗ ಇವರಿಬ್ಬರೂ ನಿರಾಳತೆ ಒದಗಿಸುತ್ತಾರೆ

ಬಾಲಕೃಷ್ಣ ಮತ್ತು ಲೀಲಾವತಿ.. ಅಪರೂಪಕ್ಕೆ ಬಾಲಣ್ಣ ಅವರಿಗೆ ಮುಖ್ಯ ನಾಯಕನ ಪಾತ್ರ ಸಿಕ್ಕಿದೆ.. ಆದರಲ್ಲಿ ಭರ್ಜರಿ ಅಭಿನಯ ನೀಡಿದ್ದಾರೆ.. ಹಿತಮಿತವಾದ ಅಧಿಕಾರ ದರ್ಪ, ನಂತರ ನರ್ತಕಿಯೊಂದಿಗೆ ಪ್ರೇಮ ಸಲ್ಲಾಪ.. ಮಡದಿಯ ಮೇಲೆ ಕೋಪ, ಹತಾಶೆ, ರೋಗ ಬಂದು ಆವರಿಸಿಕೊಂಡಾಗ ಪಡುವ ಭಾವನೆ.. ಆತನನ್ನು ಉಪಚರಿಸುತ್ತಾ ತಮ್ಮ ಪತಿ ಸೇವೆ ಮಾಡುವ ಲೀಲಾವತಿ.. ಇಬ್ಬರದೂ ಸೂಪರ್ ಅಭಿನಯ ಮೂಡಿ ಬಂದಿದೆ. ಒಂದು ಪುಟ್ಟ ಪಾತ್ರದಲ್ಲಿ ನರ್ತಕಿಯಾಗಿ ಜಯಂತಿ ಅಭಿನಯಿಸಿದ್ದಾರೆ ಮುದ್ದಾಗಿ ಕಾಣುವ ಅವರ ಅಭಿನಯ ಸೊಗಸಾಗಿದೆ. 




ತ್ರಿಶಕ್ತಿಯಲ್ಲಿ ಮೈನಾವತಿ, ಮತ್ತು ಆರ್ ಟಿ ರಮಾ ಮತ್ತು ಇನ್ನೊಬ್ಬ ಸಹಕಲಾವಿದೆ .. ಅಭಿನಯ ಇಷ್ಟವಾಗುತ್ತದೆ.. ಹಾಗೆಯೇ ತ್ರಿಮೂರ್ತಿಗಳ ಅಭಿನಯ ಕೂಡ.. 

ಹಾಡುಗಳು ಅನೇಕ ಇವೆ.. ಅದರಲ್ಲಿ ತ್ರಿಮೂರ್ತಿ ರೂಪ ದತ್ತಾತ್ರೇಯ ಹಾಡು ಪ್ರಸಿದ್ದಿಯಾಗಿದೆ.. 

ನಾಯಕನೇ ಆಗಬೇಕಿಲ್ಲ.. ಇತರ ಪಾತ್ರಗಳಲ್ಲೂ ಮಿಂಚಬಹುದು ತನ್ನ ಕೊಡುಗೆ ಕೊಡಬಹುದು ಎಂದು ರಾಜಕುಮಾರ್ ನಾರದನ ಪಾತ್ರದಲ್ಲಿ ತೋರಿಸಿದ್ದಾರೆ.. 

Saturday, November 16, 2024

ಸತ್ಯವನ್ನೇ ಉಲಿಯುತ್ತಾ ಜಗತ್ತಿನಲ್ಲಿ ಶಾಶ್ವತವಾಗಿ ಉಳಿದ ಸತ್ಯ ಹರಿಶ್ಚಂದ್ರ 1965 (ಅಣ್ಣಾವ್ರ ಚಿತ್ರ ೬೨/೨೦೭)

ನಿಂತೇ ಹೋಗಿದ್ದ ಯೋಜನೆ ಮತ್ತೆ ಚುರುಕಾಗಿದ್ದು ನೋಡಿ ಅಣ್ಣಾವ್ರು ಏನಪ್ಪಾ ಶ್ರೀಕಾಂತಪ್ಪ ಮತ್ತೆ ಶುರು ಮಾಡಿಯೇ ಬಿಟ್ಟಿದ್ದೀಯ.. ಹೂಂ ಜಮಾಯಿಸಿ ಬಿಡು.. 

ಅಣ್ಣಾವ್ರೇ ನಿಮ್ಮ ಆಶೀರ್ವಾದ ನಿಮ್ಮದೇ ಚಿತ್ರಗಳನ್ನು ಮತ್ತೊಮ್ಮೆ ಸಾಲಾಗಿ ನೋಡುವ ಅವಕಾಶ.. ಮತ್ತೆ ನಿಮ್ಮ ಅಭಿನಯದ ತೀವ್ರತೆಯನ್ನು ನೀವು ಬೇಡರ ಕಣ್ಣಪ್ಪ ಚಿತ್ರದಿಂದ ಶುರು ಮಾಡಿದ ರೀತಿ ಅದ್ಭುತವಾಗಿದೆ.. ಇದು ದಾಖಲೆಯ ಪ್ರಕಾರ ಅರವತ್ತೆರಡನೇಯ ಚಿತ್ರ ಆದರೆ ನಿಮ್ಮ ಅಭಿನಯದಲ್ಲಿ ಮಗ್ನತೆ ಇದಕ್ಕೆ ಇನ್ನೊಂದಷ್ಟು ನೂರಾರು ಚಿತ್ರಗಳನ್ನು ಸೇರಿಸಿಬಿಡಬಹದೇನೋ.. 

ಅಯ್ಯೋ ಇದೆಲ್ಲ ನಿಮ್ಮಗಳ ಅಭಿಮಾನ.. ಮುತ್ತುರಾಜನನ್ನು ರಾಜಕುಮಾರ ಮಾಡಿದವರು ನೀವು ಅಲ್ಲವೇ.. ಅದಿರಲಿ ಏನೋ ಚಿಂತೆ ಕಾಡುತ್ತಿದೆ ಏನದು?

ಈ ಚಿತ್ರವನ್ನು ಕಪ್ಪು ಬಿಳುಪು ವರ್ಣದಲ್ಲಿ ನೋಡಬೇಕೇ ಅಥವ ಆಧುನಿಕ ಯುಗದ ತಾಂತ್ರಿಕತೆಯಲ್ಲಿ ಅದ್ದಿ ತೆಗೆದ ವರ್ಣಮಯ ಚಿತ್ರವನ್ನು ನೋಡಬೇಕೆ ಎಂದು?

ಕಾಲಕ್ಕೆ ತಕ್ಕಂತೆ ನೆಡೆಯಬೇಕು..ಎಂದೂ ತಾಳಕ್ಕೆ ತಕ್ಕಂತೆ ಕುಣಿಯಬೇಕು.. ಅಷ್ಟೇ ಮುಂದುವರೆಸು.. ವರ್ಣಮಯವಾಗಲಿ.. 

ಧನ್ಯೋಸ್ಮಿ ಅಣ್ಣಾವ್ರೇ.!

ಹೀಗೊಂದು ಗೊಂದಲವಿದ್ದಾಗ ಅಣ್ಣಾವ್ರು ಪರಿಹಾರ ಮಾಡೋದು ಇದೇನು ನನಗೆ ಹೊಸದಲ್ಲ. ಹಾಗಾಗಿ ಆ ಸಂಭಾಷಣೆಯ ಮೂಲಕ ಈ ಅನರ್ಘ್ಯ ರತ್ನವನ್ನು ನೋಡುತ್ತಿದ್ದೇನೆ!

********

ಇದೊಂದು ಚಿತ್ರವೋ ಇದೊಂದು ಸಾರ್ವಕಾಲೀಕ ದೃಶ್ಯಗಳೋ.. ನಮ್ಮನ್ನು ನಮಗೆ ತೋರಿಸಿ.. ಹೀಗಿರಬೇಕು ಎಂಬ ಸಂದೇಶವುಳ್ಳ ಚಿತ್ರವೋ..


ಹೌದು ಈ ಚಿತ್ರ ಎಲ್ಲಾ ವರ್ಗಕ್ಕೂ ಸಲ್ಲುವ ಚಿತ್ರ.. ಜನರ ಮನಸ್ಸಿನಲ್ಲಿ ಜನಜನಿತವಾಗಿರುವ.. ಪ್ರತಿಘಟನೆಯೂ, ಪ್ರತಿ ದೃಶ್ಯವೂ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಈ ಪೌರಾಣಿಕ ಕತೆಯೆನ್ನಿ, ದೃಷ್ಟಾಂತ ಕತೆಯೆನ್ನಿ.. ಇದೊಂದು ಸಾಮಾಜಿಕ ಚರಿತೆಯೆನ್ನಿ ಹೇಗೆ ಹೇಳಿದರೂ .. ನೀರಿನಂತೆ ಅದಕ್ಕೆ ಒಗ್ಗುವ ಚಿತ್ರವಿದು.. 

ಭಾರತೀಯ ಮೊದಲ ಚಿತ್ರವಾದದ್ದು ಇದೆ ಕಥೆಯ ಆಧಾರದ ಮೇಲೆ.. ಅನೇಕಾನೇಕ ಭಾಷೆಗಳಲ್ಲಿ ಬಂದು, ಹೆಸರು, ಹಣ ಎಲ್ಲಾ ಮಾಡಿರುವ ಕಥೆಯನ್ನು ಕನ್ನಡಕ್ಕೆ ಒಗ್ಗಿಸಿ, ಅದಕ್ಕೆ ಇಲ್ಲಿಯ ಸ್ಪರ್ಶ ನೀಡಿ, ತುಸು ಹಾಸ್ಯ, ಭಾವಪೂರಿತ ದೃಶ್ಯಗಳು, ಅನೇಕಾನೇಕ ಹಾಡುಗಳು, ಪುಟ್ಟ ಪುಟ್ಟ ಗೀತೆಗಳು, ಕೊಂಚ ಸಾಹಸ.. ವೇಷಭೂಷಣ, ಅದಕ್ಕೆ ಬೇಕಾದ ನುರಿತ ಕಲಾವಿದರು..ಸಂಗೀತ, ಸಂಭಾಷಣೆ, ನೃತ್ಯ.. ಹೀಗೆ ಸಿನಿಮಾದ ಹತ್ತಾರು ವ್ಯಾಕರಣಗಳನ್ನು ಹದವಾಗಿ ಬೆರೆಸಿ.. ಚಿತ್ರಿಸಿದ ಕೀರ್ತಿ ನಿರ್ದೇಶಕ ಹುಣಸೂರ್ ಕೃಷ್ಣಮೂರ್ತಿ ಅವರದ್ದು.. 

ಪೌರಾಣಿಕ ದೃಶ್ಯಗಳಿಗೆ ಸಂಭಾಷಣೆ ಒದಗಿಸುವ ಪರಿ ಅವರನ್ನು ಬಿಟ್ಟರೆ ಕೊಂಚ ಅದೇ ಸಮಕಾಲೀನತೆ ಹೊಂದಿದ್ದು ಚಿ ಉದಯಶಂಕರ್ ಮಾತ್ರ.. 

ನಿರ್ದೇಶಕರು ಸಾಹಿತ್ಯ ಮತ್ತು ಸಂಭಾಷಣೆಯ ಜೊತೆಗೆ ನಿರ್ದೇಶನ ಮಾಡಿ.. ಒಂದು ಜನಜನಿತವಾದ ಕತೆಯನ್ನು ಪ್ರೇಕ್ಷಕ ಪ್ರಭುಗಳಿಗೆ ಬೇಸರವಾಗದಂತೆ, ಅತೀಯಾದ ಭಾವುಕತೆ ತುಂಬದೇ ನವಿರಾಗಿ ಚಿತ್ರಿಸಿ ಗೆದ್ದಿರುವುದು ನಿರ್ದೇಶಕರ ಹೆಗ್ಗಳಿಕೆ.. 

ವರ್ಣಮಯವಾದ ಮೇಲೆ ಬಿಡುಗಡೆಯಾದಾಗಲೂ ಭರ್ಜರಿ ಯಶಸ್ಸು ಗಳಿಸಿದ್ದು ಈ ಚಿತ್ರದ ಹೆಗ್ಗಳಿಕೆ.. 

ಹರಿಶ್ಚಂದ್ರನನ್ನು ನಾವು ನೋಡಿಲ್ಲ.. ಆದರೆ ಇದ್ದರೇ ಹೀಗೆ ಇದ್ದಾರೆ ಅನಿಸುವಷ್ಟರಮಟ್ಟಿಗೆ ರಾಜಕುಮಾರ್ ಅವರ ಅಭಿನಯ ನೀಡಿದ್ದಾರೆ.. ಓಹ್ ಕ್ಷಮಿಸಿ.. ಅವರೇ  ಹರಿಶ್ಚಂದ್ರನಾಗಿಬಿಟ್ಟಿದ್ದಾರೆ.. ಆ ಗತ್ತು, ಗಾಂಭೀರ್ಯ, ಮುಗ್ಧ ನಗೆ, ಆ ಪೋಷಾಕುಗಳಲ್ಲಿ ಕಾಣುವ ಸುಂದರತೆ, ಕಷ್ಟ ಕಾರ್ಪಣ್ಯಗಳಲ್ಲೂ ಹದವಾದ ಮಾತುಗಳು, ತನ್ನ ಹೆಂಡತಿಯನ್ನೇ ಮಗನ ಜೊತೆ ಮಾರುವಾಗ ಅವರ ಕಣ್ಣವುಗಳು, ತನ್ನ ಸುತ ಹಾವಿನ ವಿಷಕ್ಕೆ ಬಲಿಯಾಗಿದ್ದಾನೆ ಎಂದು ತಿಳಿದಾಗ, ತನ್ನ ಮಡದಿಯನ್ನೇ ಶಿರಚ್ಚೇದನ ಮಾಡುವಾಗಿನ ತಣ್ಣಗಿನ ಅಭಿನಯ, ತನ್ನನ್ನೇ ತಾನು ಮಾರಿಕೊಂಡು ಸ್ಮಶಾನ ಕಾಯುವ ದೃಶ್ಯಗಳು ಅಬ್ಬಬ್ಬಾ ಈ ಮಹಾ ನಟನಲ್ಲಿ ಅಡಗಿರುವುದು ಅದ್ಭುತ ನಟನ ಪ್ರತಿಭೆಯೂ ಅಥವ ನಾಟಕಗಳಲ್ಲಿ ಪರದೆ ಹಿಂದೆ ಕುಳಿತು.. ಒಂದೊಂದೇ ಪಾತ್ರಗಳು ಹೊರಬರುವ ಹಾಗೆ.. ಇವರಲ್ಲಿರುವ ಪಾತ್ರಗಳು ಅವರ ದೇಹದಲ್ಲಿ ಕುಳಿತು.. ಬೇಕಾದ ಚಿತ್ರಕ್ಕೆ ಅದೇ ದಾಟಿಯಲ್ಲಿ ಹೊರಬರುತ್ತೇನೋ ಅನಿಸುತ್ತದೆ.. 


ಅವರಿಗೆ ಸತಿಯಾಗಿ ಪಂಡರಿಬಾಯಿ ಅವರು ಆ ಪಾತ್ರವೇ ಆಗಿದ್ದಾರೆ.. ಪತಿಯನ್ನು ಸದಾ ಸತ್ಯ ಮಾರ್ಗದಲ್ಲಿ ನೆಡೆಯಲು ಸಹಕರಿಸುವ ಈ ಅಭಿನಯ ಅದ್ಭುತವಾಗಿದೆ.. ಮಾಯಾರೂಪದಲ್ಲಿ ಈಕೆಯಾಗಿ ಬರುವ ರಕ್ಕಸನ ಅಭಿನಯ ಬಹುಷಃ ಪಂಡರಿಬಾಯಿಯವರ ಅವರ ಚಿತ್ರಜೀವನದಲ್ಲಿ ಅದೊಂದು ದೃಶ್ಯ ಅನಿಸುತ್ತದೆ.. ಆ ರೀತಿ ಆವೇಗ ಮತ್ತು ಖಳಛಾಯೆಯಲ್ಲಿ ಅಭಿನಯಿಸಿರೋದು.. 

ಉದಯಕುಮಾರ್ ಈ ಚಿತ್ರವನ್ನು ರಾಜಕುಮಾರ್ ಅವರ ಜೊತೆಯಲ್ಲಿ ತಮ್ಮ ಭುಜದ ಮೇಲೆ ಹೊತ್ತು ನೆಡೆದಿದ್ದಾರೆ.. ವಿಶ್ವಾಮಿತ್ರನ ಕೋಪ, ಅಹಂ, ವಾಕ್ ಚಾತುರ್ಯ, ಛಲ, ರೋಷ ಎಲ್ಲವನ್ನೂ ಜೊತೆಯಲ್ಲಿ ಅದ್ಭುತವಾದ ದೀರ್ಘ ಸಂಭಾಷಣೆಗಳನ್ನು ನಿರರ್ಗಳವಾಗಿ ಏರಿಳಿತದ ಸಹಿತ ಅಭಿನಯಿಸಿರೋದು ಭರ್ಜರಿಯಾಗಿದೆ 

ಅಶ್ವಥ್ ಇಂದಿನ ಸಂಯಮದ ಪಾತ್ರದಲ್ಲಿ ಇಷ್ಟವಾಗುತ್ತದೆ.  ವಸಿಷ್ಠನ ಪಾತ್ರದಲ್ಲಿ  ಆ ಪಾತ್ರಕ್ಕೆ ಬೇಕಾಗುವ ಸಂಯಮ, ದೂರಾಲೋಚನೆ, ಹಾಗೆಯೇ ಮಾಯಾ ರಕ್ಕಸ ಇವರ ರೂಪದಲ್ಲಿ ಬಂದಾಗ ಅದೇ ರೀತಿಯ ರಕ್ಕಸ ಗುಣದ ಮಾತುಗಳು, ಅಭಿನಯ, ಹಾವಭಾವ ವಾಹ್ ಎನಿಸುತ್ತದೆ


ಚಿತ್ರದುದ್ದಕ್ಕೂ ಕಾಡುವ ನಕ್ಷತ್ರಿಕನ ಪಾತ್ರದಲ್ಲಿ ನರಸಿಂರಾಜು ನಗೆಯುಕ್ಕಿಸುತ್ತಾರೆ.. ಉದಯಕುಮಾರ್ ಅವರಿಗೆ ಠಕ್ಕರ್ ಕೊಡುತ್ತಾ, ಮಾತಾಡುವ ದೃಶ್ಯಗಳು ಈ ಗಂಬೀರವಾದ ಸಿನಿಮಾದಲ್ಲಿ ಕೊಂಚ ನಿರಾಳತೆಯನ್ನು ಒದಗಿಸಿದ್ದಾರೆ.. 



 

ಬಜಾರಿ ಹೆಣ್ಣಿನ ಪಾತ್ರದ ರಮಾದೇವಿ, ಕಲಾಕೌಶಿಕನ ಪಾತ್ರದ ಸುಬ್ಬಣ್ಣ, ಅವರ ಶಿಷ್ಯವರ್ಗದ ನಾಗೇಶ್, ರತ್ನಾಕರ್, ದ್ವಾರಕೀಶ್ ಮುದನೀಡುತ್ತಾರೆ.. ಲೋಹಿತನ ಪಾತ್ರ ಮುದ್ದಾಗಿದೆ. ಹಾಗೆಯೇ ಒಂದೆರಡು ದೃಶ್ಯಗಳಲ್ಲಿ ಕಾಣುವ ಗೌತಮನ ಪಾತ್ರಧಾರಿ ರಾಮಚಂದ್ರ ಶಾಸ್ತ್ರಿ, ಇಷ್ಟವಾಗುತ್ತಾರೆ 

ಕಡೆಯಲ್ಲಿ ಬಂದರೂ ಅಂದಿನಿಂದ ಇಂದಿಗೂ ಈ ಚಿತ್ರದ ಅಭಿನಯಕ್ಕೆ ಹೆಸರಾಗಿರುವ ಮತ್ತು ಹಾಡಿಗೆ, ನೃತ್ಯಕ್ಕೆ ಹೆಸರಾಗಿರುವ ಎಂ ಪಿ ಶಂಕರ್.. ಮತ್ತು ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ನರ್ತನ ಸೂಪರ್.. 

ಹಾಡುಗಳು ಸೊಗಸಾಗಿವೆ.. ನನ್ನ ನೀನೋ  ನಿನ್ನ ನಾನೋ.. ಕುಲದಲ್ಲಿ ಕೀಳ್ಯಾವುದೋ, ನಮೋ ಭೂತನಾಥ, ಹೀಗೆ ಸುಮಾರು ಇಪ್ಪತ್ತು ಹಾಡುಗಳಿವೆ 

ಛಾಯಾಗ್ರಹಣ ಮಾಧವ್ ಬುಲ್ ಬುಲ್ ಅವರದ್ದು, ಸಂಗೀತ ಪೆಂಡ್ಯಾಲ ನಾಗೇಶ್ವರರಾವ್ ಅವರದ್ದು.. ನಿರ್ಮಾಪಕರಾಗಿ ಕೆ ವಿ ರೆಡ್ಡಿ ವಿಜಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ.. 

Sunday, November 10, 2024

ಅಣ್ಣ ತಂಗಿಯರ ಬಾಂಧವ್ಯ ಅದೇ - ವಾತ್ಸಲ್ಯ 1965 (ಅಣ್ಣಾವ್ರ ಚಿತ್ರ ೬೧/೨೦೭)

ಹೇಗೆ ಸೈಕಲ್ ಹೊಡೆದರೂ ರಕ್ತ ಸಂಬಂಧ ಎಂದಿಗೂ ದೂರಾಗದು.. ಮನಸ್ಸು ಕೆಲವು ಕಠಿಣ ಮಾತುಗಳಿಂದ, ಅಥವ ಸುತ್ತ ಮುತ್ತಾ ಕಾಡುವ ಹಿಂಸೆ ಮಾಡುವ ಮನಸ್ಸುಗಳಿಂದ, ಜೀವಿಗಳಿಂದ ಹಿಂಸೆಯಾಗಬಹುದು ಆದರೆ ಬಂಧ ಮಾತ್ರ ಎಂದೂ ಮುಗಿಯದು, ಹರಿಯದು.. ಅದೊಂದು ಗಿರಿಶಿಖರಗಳಲ್ಲಿ ಪುಟ್ಟ ನೀರಿನ ಸೆಲೆಯಾಗಿ, ನಂತರ ಝರಿಯಾಗಿ, ತೊರೆಯಾಗಿ, ನದಿಯಾಗಿ, ಕಡಲು ಸೇರುವ ಬಂಧವದು.. ಹೌದು ಮಾರ್ಗದಲ್ಲಿ ಅಡಚಣೆ ಬರಬಹುದು.. ಬೆಟ್ಟ ಗುಡ್ಡಗಳು, ಕಲ್ಲು ಬಂಡೆಗಳು, ಅಣೆಕಟ್ಟುಗಳು, ಪ್ರಪಾತ ಎಲ್ಲವೂ ಇದ್ದರೂ ಅದರ ಓಟ ನಿಲ್ಲದು. 

ಅದೇ ತಳಹದಿಯ ಮೇಲೆ ತಮಿಳಿನ ಚಿತ್ರದ ಕನ್ನಡದ ಅವತರಣಿಕೆಯಾದರೂ ಇಲ್ಲಿ ರಾಜಕುಮಾರ್, ಲೀಲಾವತಿ, ನರಸಿಂಹರಾಜು, ಪಾಪಮ್ಮ, ಉದಯಕುಮಾರ್, ರಮಾ ಮತ್ತು ಗಣಪತಿ ಭಟ್ ಮುಖ್ಯ ಪಾತ್ರಗಳಲ್ಲಿ ಕಥೆಯ ಹಾದಿಯಲ್ಲಿ ಕಾಣಸಿಗುತ್ತಾರೆ,, 

ಪುಟ್ಟ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಳ್ಳುವ ಅಣ್ಣ ತಂಗಿ ಮುಂದೆ ಬೆಳೆಯುತ್ತಾ ಹೋದ ಹಾಗೆಲ್ಲ.. ಅವರ ಬೆಳವಣಿಗೆಯಂತೆಯೇ ಅವರ ಬಾಂಧ್ಯವ ಕೂಡ ಬೆಳೆಯುತ್ತದೆ.. ಹರಿಯದ, ಮುರಿಯದ, ಉಳಿಯುವ ಬಂಧವದು 

ರಾಜಕುಮಾರ್ ಮತ್ತು ಲೀಲಾವತಿ ಅಣ್ಣ ತಂಗಿಯ ಪಾತ್ರದಲ್ಲಿ ಬಹುಶಃ ಮೊದಲ ಬಾರಿಗೆ ಮತ್ತು ಕಡೆಯ ಬಾರಿಗೆ ನಟಿಸಿದ್ದಾರೆ.. 


ಒಟ್ಟಿಗೆ ಕಷ್ಟ ಸುಖಗಳಲ್ಲಿ ಬೆಳೆಯುವ ಅಣ್ಣ ತಂಗಿ.. ಮುಂದೆ ಅಣ್ಣನ ಪಾತ್ರದಲ್ಲಿ ರಾಜಕುಮಾರ್  ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ .. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುವ ಉದಯಕುಮಾರ್ ಇವರಿಗೆ ಬಲು ಆಪ್ತ ಸ್ನೇಹಿತರು.. ಮುಂದಿನ ಕೆಲವು ದೃಶ್ಯಗಳಲ್ಲಿ ರಾಜಕುಮಾರ್ ತಂಗಿ ಲೀಲಾವತಿಯಲ್ಲಿ ಉದಯಕುಮಾರ್ ಅನುರಕ್ತರಾಗುತ್ತಾರೆ.. ಆದರೆ ಅಣ್ಣನ ಭಯ, ಮತ್ತು ಗೆಳೆಯನ ಜೊತೆಯ ಸ್ನೇಹ ಸೆಳೆತ.. ಇಬ್ಬರೂ ಇದನ್ನು ಅಣ್ಣನ ಮುಂದೆ ವ್ಯಕ್ತಪಡಿಸೋಕೆ ಹಿಂಜರಿಯುತ್ತಾರೆ.. 



ಮುಂದೆ ಕೆಲವು ಘಟನಾವಳಿಯಲ್ಲಿ ಉದಯಕುಮಾರ್ ತಮ್ಮ ಹಳ್ಳಿಗೆ ಕೆಲಸ ಮೇಲೆ ಹೋಗಿರುತ್ತಾರೆ.. ಅದೇ ಸಮಯದಲ್ಲಿ ರಾಜಕುಮಾರ್ ಒಂದು ಬೊಂಬೆ ತಯಾರು ಮಾಡುವ ಕಂಪನಿ ತೆಗೆದು.. ನಂತರ ಮೊದಲು ಕೆಲಸ ಮಾಡುತ್ತಿದ್ದ ಕಾರ್ಖಾನೆಯನ್ನೇ ಕೊಂಡು ಅದರ ಮಾಲೀಕರಾಗಿರುತ್ತಾರೆ.. ಕೆಲಸಾರ್ಥಿಯಾಗಿ ಉದಯಕುಮಾರ್ ವಾಪಸ್ ಬಂದಾಗ ಬದಲಾದ ಕಾಲಘಟ್ಟದಲ್ಲಿ ರಾಜಕುಮಾರ್ ವಿಧಿಯಿಲ್ಲದೇ ಸ್ನೇಹಕ್ಕೆ ಕಟ್ಟುಬಿದ್ದು ಅವರಿಗೆ ಕೆಲಸ ನೀಡುತ್ತಾರೆ. ಹಾಗೆಯೇ ತಂಗಿಯ ಮಮತಾಮಯಿ ಹೃದಯಕ್ಕೆ ಕರಗಿ, ಆಕೆಯನ್ನು ಉದಯಕುಮಾರ್ ಅವರಿಗೆ ಕೊಟ್ಟು ಮದುವೆ ಮಾಡಿ ಮನೆಯ ಅಳಿಯನಾಗಿ ಇಟ್ಟುಕೊಳ್ಳುತ್ತಾರೆ.. 



ಚಿತ್ರ ಇಲ್ಲಿಯ ತನಕ ಹೂವಿನಂತೆ ಸಾಗುತ್ತದೆ.. ಆದರೆ ಪಾಪಮ್ಮ, ಮತ್ತು ನರಸಿಂಹರಾಜು ಅವರ ಎಡಬಿಡಂಗಿತನದ ಕುಯುಕ್ತಿಯಿಂದ ಅಣ್ಣ ತಂಗಿಯರ ಬದುಕು ಮೂರಾಬಟ್ಟೆಯಾಗುತ್ತದೆ.. ತನ್ನ ಅಣ್ಣ ಮದುವೆ ಮಾಡಿಕೊಂಡರೂ, ವಿಧಿಯಾಟ ಹೆಂಡತಿ ಸತ್ತು.. ಮಗುವಿನ ಜವಾಬ್ಧಾರಿಯನ್ನು ಹೊತ್ತು..ಜೊತೆಗೆ ತಂಗಿಯ ಮನೆಯವಲ್ಲಿನ ಕುಯುಕ್ತಿಗಳಿಂದ ತಮ್ಮ ಆಸ್ತಿ, ಅಂತಸ್ತು, ಸ್ಥಾನ ಮಾನ ಎಲ್ಲವನ್ನು ಕಳೆದುಕೊಂಡು ಕಡೆಗೆ ನಿರ್ಗತಿಕರಾಗಿ ತನ್ನ ಮಗುವನ್ನು ತಂಗಿಯ ಮಡಿಲಿಗೆ ಹಾಕಿ ಅಸು ನೀಗುತ್ತಾರೆ.. ಅಣ್ಣನ ಅಂತ್ಯವನ್ನು ನೋಡಲಾಗದೆ ತಾನೂ ಅಸು ನೀಗುತ್ತಾಳೆ.. ಕಡೆಯಲ್ಲಿ ತನ್ನ ಮಗು ಮತ್ತು ತನ್ನ ಸ್ನೇಹಿತನ ಮಗುವನ್ನು ಕರೆದುಕೊಂಡು ಉದಯಕುಮಾರ್ ನಿಲ್ಲುವಲ್ಲಿ ಚಿತ್ರ ಮುಗಿಯುತ್ತದೆ.. 

ಇಲ್ಲಿ ವಿಶೇಷತೆಯೆಂದರೆ ರಾಜಕುಮಾರ್ ಅವರ ಇಂಗ್ಲಿಷ್ ಮಾತುಗಳು, ಕಾರ್ಮಿಕನಾಗಿ, ಮಾಲೀಕನಾಗಿ ಅವರ ಅಭಿನಯ.. ಹಾಗೆಯೇ ತನ್ನ ತಂಗಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ, ಆಕೆಗೆ ಒಂದು ಚೂರು ನೋವಾಗದಂತೆ, ತನ್ನ ಸ್ಥಿತಿ ಹಾಳಾದರೂ ಪರವಾಗಿಲ್ಲ ತಂಗಿ ಮನೆ ಚೆನ್ನಾಗಿರಬೇಕು ಎಂದು ಹಾರೈಸುವ, ಹರಸುವ ಅದರಂತೆ ನೆಡೆದುಕೊಳ್ಳುವ ಪಾತ್ರದಲ್ಲಿ ಅದ್ಭುತ ಅಭಿನಯ.. ರಾಜಕುಮಾರ್ ಧೂಮಪಾನ ಮಾಡುವ ದೃಶ್ಯಗಳು ಅವರ ಚಿತ್ರಜೀವನದಲ್ಲಿ ಬಲು ವಿರಳ.. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ಧೂಮಪಾನ ಮಾಡುತ್ತಾರೆ...ಅವರ ವೇಷಭೂಷಣ, ಆಂಗೀಕ ಅಭಿನಯ, ಇಂಗ್ಲೀಷಿನಲ್ಲಿ ಮಾತಾಡುವ ಶೈಲಿ, ಆ ಸಿರಿವಂತರ ಸೋಗಿನ ಅಭಿನಯ ಎಲ್ಲವೂ ಅದ್ಭುತ.. ತಾನೊಬ್ಬ ಬೆಳೆಯುತ್ತಿರುವ ನಟ ಎಂದು ಅಮೋಘವಾದ ಶೈಲಿಯಲ್ಲಿ ಅಭಿನಯಿಸಿದ್ದಾರೆ.. 

ತಂಗಿಯಾಗಿ ಲೀಲಾವತಿ ಅದ್ಭುತ.. ಅಣ್ಣನ ಮೇಲಿನ ಪ್ರೀತಿ, ಒಲವಿನ ಹೃದಯದ ಮೇಲಿನ ಪ್ರೇಮ, ಮಮತಾಮಯಿಯಾಗಿ ಪ್ರತಿ ದೃಶ್ಯದಲ್ಲಿಯೂ ಸೊಗಸಾದ ಅಭಿನಯ ನೀಡಿದ್ದಾರೆ.. ತೂಕಬದ್ಧವಾದ ಅಭಿನಯ.. ಅದರಲ್ಲೂ ಅಣ್ಣ ನಿನಗೆ ಮದುವೆ ಮಾಡುತ್ತೇನೆ ಎಂದಾಗ, ನೀನು ಯಾವ ಹುಡುಗನನ್ನು ನೋಡಿದರೂ ಮದುವೆಯಾಗುತ್ತೇನೆ ಎಂದು ಹೇಳಿ.. ನಂತರ ತನ್ನ ಪ್ರಿಯಕರನೇ ತನ್ನ ಅಣ್ಣ ಆರಿಸಿದ ಹುಡುಗ ಎಂದು ಅರಿವಾದಾಗ.. ಮತ್ತು ಕಡೆಯ ದೃಶ್ಯದಲ್ಲಿನ ಅಭಿನಯ ಮನಸ್ಸಿಗೆ ನಾಟುತ್ತದೆ.. 

ಗೆಳೆಯನಾಗಿ ಉದಯಕುಮಾರ ಅವರ ಅಭಿನಯ ಸೊಗಸು.. ಗೆಳೆಯನ ಮೇಲಿನ ಅಭಿಮಾನ, ಕೆಲಸ ಕೇಳುವುದೋ ಬೇಡವೋ ಎನ್ನುವ ಗೊಂದಲದ ದೃಶ್ಯ, ನಂತರ ಗೆಳೆಯನ ಕಾರ್ಖಾನೆಯಲ್ಲಿ ತನ್ನ ಸಹೋದ್ಯೋಗಿಗಳನ್ನು ರಕ್ಷಿಸಲು ಮಾಡುವ ಮುಷ್ಕರದ ದೃಶ್ಯದಲ್ಲಿ ಅಭಿನಯ.. ಸೊಗಸಾಗಿದೆ. 

ಉಳಿದ ಪಾತ್ರಗಳಲ್ಲಿ ನರಸಿಂಹರಾಜು ಅವರಿಗೆ ಇತ್ತ ಹಾಸ್ಯ ದೃಶ್ಯವೂ ಅಲ್ಲ.. ಇತ್ತ ಖಳನು ಅಲ್ಲ ಎನ್ನುವ ವಿಚಿತ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.. ಎಂದಿನಂತೆ ಪಾಪಮ್ಮ ಮನೆ ಮುರುಕಿಯ  ಪಾತ್ರದಲ್ಲಿ ಯಥಾಪ್ರಕಾರ ಮಿಂಚುತ್ತಾರೆ.. ಒಂದೆರಡು ದೃಶ್ಯಗಳಲ್ಲಿ ಕಾಣುವ ಜಯಂತಿ ಮುದ್ದಾಗಿ ಕಾಣುತ್ತಾರೆ.. ಗಣಪತಿ ಭಟ್ ಕೆಲವು ದೃಶ್ಯಗಳಲ್ಲಿ ಕಾಣುತ್ತಾರೆ.


 

ಇಡೀ ಚಿತ್ರದಲ್ಲಿ ಕಾಣ ಸಿಗುವುದು ಅಣ್ಣ ತಂಗಿಯರ ಬಾಂಧವ್ಯ ಮತ್ತು ಒಬ್ಬರು ಚೆನ್ನಾಗಿರಲಿ ಅಂತ ಇನ್ನೊಬ್ಬರು ಕಷ್ಟ ಪಡುವುದು.. ಹುಳಿ ಹಿಂಡುವರು ಇದ್ದರೂ ಕೂಡ, ಅಣ್ಣ ತಂಗಿಯ ಪ್ರೀತಿ ಕಡಿಮೆಯಾಗೋಲ್ಲ.. ಜೊತೆಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಅಸೂಯೆ, ಅನುಮಾನ ಬರೋಲ್ಲ ಬದಲಿಗೆ .. ಈ ಕಷ್ಟಗಳೆಲ್ಲ ಅವರ ಸುತ್ತಮುತ್ತಲೂ ಇರುವ ಕೆಟ್ಟ ಮನಸ್ಸುಗಳು ಮಾಡುವ ಆತ ಎಂದು ನಿಶ್ಚಿತವಾಗಿ ನಂಬುವ ಚಿತ್ರಕಥೆ ಇಷ್ಟವಾಗುತ್ತದೆ..

ಸುಚಿತ್ರ ಮೂವೀಸ್ ಲಾಂಛನದಲ್ಲಿ ಕೆ ವಿ ಕೊಟ್ಟಾರಕರ್ ಕತೆಯನ್ನು ವಿಜಯ ಕೃಷ್ಣಮೂರ್ತಿಯವರ ಸಂಗೀತದಲ್ಲಿ, ಸೋರಟ್ ಅಶ್ವಥ್ ಅವರ ಸಂಭಾಷಣೆ ಹಾಗೂ ಗೀತೆಗಳಲ್ಲಿ ಆರ್ ಮಧುವಿನ ಛಾಯಾಗ್ರಹಣದಲ್ಲಿ ವೈ ಆರ್ ಸ್ವಾಕ್ಮೀ ನಿರ್ದೇಶಿಸಿದ್ದಾರೆ.... 

ರಾಜಕುಮಾರ್ ಈ ಪಾತ್ರದ ಶಕ್ತಿ.. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.. 

Sunday, October 27, 2024

ಬಲ್ಲವರಿಂದ ಕಲಿತು ಉತ್ತುಂಗಕ್ಕೆ ಏರಿದ ಸರ್ವಜ್ಞಮೂರ್ತಿ 1965 (ಅಣ್ಣಾವ್ರ ಚಿತ್ರ ೬೦/೨೦೭)

ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ||

ಇದೊಂದು ವಚನ ಸಾಕು ಸರ್ವಜ್ಞ ಮೂರ್ತಿ ಎಂಬ ಮಹಾಶಿಖರವನ್ನು, ವಿದ್ಯೆ, ಅನುಭವ ಎಂಬ ಮಹಾನ್ ಪ್ರತಿಭೆಯನ್ನು ಗುರುತಿಸೋಕೆ... 


ಡಿವಿಜಿ ಅಜ್ಜನ ಕಗ್ಗಗಳು, ಸರ್ವಜ್ಞನ ವಚನಗಳು ಇವೆರಡು ಸಮಾಜವನ್ನು ನೋಡುತ್ತಾ, ಸಮಾಜದಲ್ಲಿನ ಹುಳುಕುಗಳು, ಸಮಾಜದಲ್ಲಿನ ಉತ್ತಮ ದೃಶ್ಯಗಳು, ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡಬಲ್ಲ ಮಹಾನ್ ಮಾರ್ಗಸೂಚಿಗಳು.. ಇತ್ತ ಆಧ್ಯಾತ್ಮವೂ ಹೌದು, ಇತ್ತ ಗುಣಾತ್ಮಕ ಸಂದೇಶಗಳು ಹೌದು.. ಎರಡರ ಸಮಮಿಶ್ರಣಗಳು ಇವು. 

ಈ ಪಾತ್ರ ಒಂದು ರೀತಿಯ ವಿಶಿಷ್ಟತೆಯಿಂದ ಕೂಡಿದೆ ಕಾರಣ.. ಸಿದ್ಧ ಸೂತ್ರಗಳ ಸುತ್ತ ಸುತ್ತೋದಿಲ್ಲ.. ನಿರ್ದಿಷ್ಟ ನಾಯಕಿ, ಖಳನಾಯಕ, ಹಾಸ್ಯ.. ಹಾಡುಗಳು ಇವುಗಳ ಜಂಜಾಟವಿಲ್ಲದೆ.. ಎಲ್ಲರಿಗೂ ತಿಳಿದ.. ಎಲ್ಲರಿಗೂ ತಿಳಿಯದ .. ಹೌದು ಮತ್ತೊಮ್ಮೆ ಓದಿ.. ವಿಷಯಗಳನ್ನು, ಆ ಮಹಾನ್ ಪ್ರತಿಭೆಯ ಜೀವನ ಚರಿತ್ರೆಯನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನವನ್ನು ಸಾಹಿತಿ ಎಂ ನರೇಂದ್ರಬಾಬು ಅವರು ಮಾಡಿದ್ದಾರೆ. ಅವರ ಪರಿಶ್ರಮ ಎದ್ದು ಕಾಣುತ್ತದೆ, ಕಾರಣ ಕಥೆ, ಸಂಭಾಷಣೆ, ಹಾಡುಗಳು, ನಿರ್ಮಾಣ ಅವರದ್ದೇ.. ಇಡೀ ಚಿತ್ರವನ್ನು ತಮ್ಮ ಭುಜದ ಮೇಲೆ ಹಾಕಿಕೊಂಡಿದ್ದಾರೆ.. ಸಿದ್ಧ ಪ್ರತಿಯನ್ನು ನಿರ್ದೇಶಕ ಆರೂರು ಪಟ್ಟಾಭಿಯವರಿಗೆ ವಹಿಸಿದ್ದಾರೆ. 

ಇಡೀ ಚಿತ್ರ ಕೆಲವೊಂದು ದೃಶ್ಯಗಳನ್ನು ಬಿಟ್ಟರೆ, ಮಿಕ್ಕ ದೃಶ್ಯಗಳು ಸ್ಟುಡಿಯೋ ಸೆಟ್ಟಿನಲ್ಲಿಯೇ ಅಂದರೆ ಒಳಾಂಗಣದಲ್ಲಿ ನೆಡೆದಿರುವುದು. ಹಾಗಾಗಿ ದೃಶ್ಯ ಜೋಡಣೆ ಕೆಲವೊಮ್ಮೆ ಆಹಾ ಅನಿಸಿದರೆ.. ಕೆಲವೊಮ್ಮೆ ಉಫ್ ಎನಿಸುತ್ತದೆ. 

ಸರ್ವಜ್ಞ ಮೂರ್ತಿ ಇದೊಂದು ಕಾಲ್ಪನಿಕವಲ್ಲ.. ತನ್ನದೇ ಶತಮಾನದಲ್ಲಿ ತನ್ನ ಜೀವಿತಕಾಲದಲ್ಲಿ ತನ್ನ ಬುದ್ಧಿಮತ್ತೆಗೆ ತಾಕಿದಂತೆ, ಸಮಾಜದಲ್ಲಿ ನೆಡೆವ ಘಟನೆಗಳನ್ನು ಕೆಲವು ಪದಗಳಲ್ಲಿ ಹಿಡಿದಿಟ್ಟು ಅಂದಿನ ಸಮಾಜಕ್ಕೂ.. ಇಂದಿನ ಸಮಾಜಕ್ಕೂ.. ಮತ್ತೆ ಶತಮಾನಗಳೇ ಕಳೆದರೂ ಎಂದಿಗೂ ಚಿರನೂತನವಾಗಿರುವ ಸಂದೇಶಗಳನ್ನು ಕೊಟ್ಟ ಮಹಾನ್ ಪ್ರತಿಭಾವಂತ.. 

ಶಿವಗಣದ ಒಂದು ಪ್ರಮುಖ ಎಂಬ ವ್ಯಾಖ್ಯಾನ ಈ ಚಿತ್ರಕತೆಯಲ್ಲಿ ಸಿಗುತ್ತದೆ.. ಅದು ನಿಜವಿದ್ದರೂ ಇರಬಹುದು.. ಕಾರಣ.. ಆತನಿಗೆ ಲಿಂಗಧಾರಣೆಯಾದ ಮೇಲೆ, ಶಿವಶರಣರ ಪದ್ದತಿಗಳನ್ನು ಪಾಲಿಸುವುದು ಇದೊಂದು ಕಾರಣಸಿಗುತ್ತದೆ. 

ಈ ಚಿತ್ರದ  ತನಕ ರಾಜಕುಮಾರ್ ಅವರ ಹೆಸರು ಪರದೆಯ ಮೇಲೆ "ರಾಜಕುಮಾರ್"ಅಂತ ತೋರಿಸುತ್ತಿದ್ದರು.. ಈ ಚಿತ್ರದಲ್ಲಿ "ವರನಟ" ಎಂಬ ಬಿರುದು ತೋರಿಸುತ್ತಾರೆ... 



ರಾಜಕುಮಾರ್ ಅವರ ಇಮೇಜ್ ಅಥವ ಅಲ್ಲಿಯ ತನಕ ಅಭಿನಯಿಸಿದ ಹಲವಾರು ಚಿತ್ರಗಳಲ್ಲಿ ಚಿತ್ರಕಥೆ ಅವರ ಸುತ್ತಲೇ ಸುತ್ತುವುದು.. ಮತ್ತು ಅವರ ಪಾತ್ರದ ಬೆಳವಣಿಗೆ ಕೂಡ ಅದ್ಭುತವಾಗಿರುವುದು ಸಾಬೀತಾಗಿತ್ತು.. ಮತ್ತೆ ಅವರ ಚಿತ್ರಗಳು ಇದೆ ಕಾರಣಕ್ಕೆ ಯಶಸ್ವಿ ಕೂಡ ಆಗಿತ್ತು.. ಪ್ರೇಕ್ಷಕರು ಕೂಡ ಈ ರೀತಿಯ ಪಾತ್ರಗಳನ್ನೇ ರಾಜಕುಮಾರ್ ಅವರು ಮಾಡಬೇಕು ಎಂದು ಪ್ರೇಕ್ಷಕರು, ಅವರ ಅಭಿಮಾನಿಗಳು ಇಷ್ಟ ಪಡುತ್ತಿದ್ದರು.. 



ಈ ಚಿತ್ರದಲ್ಲಿ ಅನೇಕ ಬಾರಿ ಹೇಳುವುದು "ಇದು ಮನುಷ್ಯರಿಗೆ ಅನ್ವಯಿಸುತ್ತದೆ.. ಆದರೆ ನಾನು ಮನುಷ್ಯನೇ ಅಲ್ಲ.. ಹಾಗಾಗಿ ಇದು ನನಗೆ ಅನ್ವಯಿಸುವುದಿಲ್ಲ" ಅಂತ.. ಆ ಸಂಭಾಷಣೆಯನ್ನೇ ಹಿಡಿದು ಅವರ ದೃಶ್ಯಗಳನ್ನು ಚಿತ್ರಿಸಿದ್ದಾರೆ ಅನಿಸುತ್ತದೆ.. ಕಾರಣ.. ಸಾಮಾನ್ಯ ಚಿತ್ರದ ದೃಶ್ಯಗಳ ಚಿತ್ರೀಕರಣಗಳಲ್ಲಿ ಪ್ರತಿ ಪಾತ್ರವೂ ಕೂಡ ತನ್ನ ಸುತ್ತಲ ಪಾತ್ರಗಳನ್ನ ನೋಡುತ್ತಾ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅಭಿನಯಿಸುವುದು ವಾಡಿಕೆಯಾಗಿತ್ತು.. ಆದರೆ ಈ ಚಿತ್ರದಲ್ಲಿ ರಾಜಕುಮಾರ್ ಅವರು ಯಾವುದೇ ಪಾತ್ರಗಳ್ನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ.. ಬದಲಿಗೆ ಆ ಪಾತ್ರ ನೇರ ದೃಷ್ಟಿಯಿಂದ ನೋಡುತ್ತಾ ಮಾತಾಡುವುದು.. ರಾಜಕುಮಾರ್ ಅವರು ಪ್ರಾಯಶಃ ಪರಕಾಯ ಪ್ರವೇಶ ಮಾಡಿದ್ದಾರೆ (ಅವರ ಪ್ರತಿ ಚಿತ್ರದ ಅಭಿನಯ ಕೂಡ ಪರಕಾಯ ಪ್ರವೇಶವೇ ಹೌದು)



ಅಶ್ವಥ್ ಅವರ ಪಾತ್ರ ಬಹಳ ಚಿಕ್ಕದು.. ಆದರೆ ಚಿತ್ರಕ್ಕೆ ತಿರುವು ಕೊಡುವುದೇ ಅವರ ಪಾತ್ರ.. ಸಂತಾನವಾಗದೆ ಇರುವುದು ಅವರನ್ನು ಕಾಶಿ ಯಾತ್ರೆ ಮಾಡಲು ಪ್ರೇರೇಪಿಸುತ್ತದೆ.. ಕಾಶಿ ವಿಶ್ವನಾಥನ ದರ್ಶನ ಮಾಡಿಕೊಂಡು ಬರುವಾಗ ಬಿರುಗಾಳಿ ಮಳೆಗೆ ಸಿಕ್ಕಿ..  ವಿಚಿತ್ರ ಪರಿಸ್ಥಿತಿಯಲ್ಲಿ ಮಡಿಕೆ ಮಾಡುವ ಮನೆಯಲ್ಲಿ ತಂಗುತ್ತಾರೆ.. ಮತ್ತೆ ಆ ಮನೆಯ ಒಡತಿಯ ಜೊತೆಯಲ್ಲಿ ಬಂಧ ಏರ್ಪಾಡುಗುತ್ತದೆ.. ಆ ಕಾರಣಕ್ಕೆ ಆಕೆ ಗರ್ಭವತಿಯಾಗುತ್ತಾಳೆ.. ಜೊತೆಗೆ ಹಳ್ಳಿಯ ಜನತೆಯ ಜತೆ ಜಗಳವಾಡಿ ಒಬ್ಬಂಟಿಯಾಗುತ್ತಾಳೆ.. ವಿಚಿತ್ರ ಎಂದರೆ ಮತ್ತೆ ಅಶ್ವಥ್ ಅವರು ಆ ಮಹಿಳೆಯನ್ನು ಭೇಟಿಯಾಗೋದೇ ಇಲ್ಲ.. 

ಅದೇ ಸಮಯದಲ್ಲಿ ಬಿರುಗಾಳಿ ಮಳೆಗೆ ಸಿಲುಕಿದ ಅಮ್ಮ ಮತ್ತೆ ಗರ್ಭವತಿ ಮಗಳು ಆ ಮಹಿಳೆಯ ಮನೆಯಲ್ಲಿ ಆಶ್ರಯ ಪಡೆಯುತ್ತಾರೆ.. ಆ ತಾಯಿ ಇಬ್ಬರಿಗೂ ಹೆರಿಗೆ ಮಾಡಿ.. ಯಾರ ಮಗು ಯಾರದು ಎನ್ನುವ ಗೊಂದಲದಲ್ಲಿ ಮಕ್ಕಳನ್ನು ಅದಲು ಬದಲು ಮಾಡುತ್ತಾರೆ.. ಆದರೆ ಪರ ಊರಿನಿಂದ ಬಂದ ಮಹಿಳೆಯ ಹತ್ತಿರದಲ್ಲಿದ್ದ ಮಗು ಅಸುನೀಗುತ್ತದೆ.. ಅದೇ ಬೇಸರದಲ್ಲಿ ಅಮ್ಮ ಮಗಳು ತಮ್ಮ ಊರಿಗೆ ಹೋಗುತ್ತಾರೆ.. ಆದರೆ ಆ ಮನೆಯ ಒಡತಿಗೆ ಇದು ಅನುಮಾನ ಉಂಟುಮಾಡುತ್ತದೆ.. ಮತ್ತೆ ಸತ್ತ ಮಗು ನಂದು.. ಈ ಮಗುವಲ್ಲ ಅಂತ ಅನುಮಾನ ಬಲವಾಗುತ್ತದೆ.. ಮತ್ತೆ ಅದೇ ಅನುಮಾನದಲ್ಲಿ ಆ ಮಗುವನ್ನು ತಿರಸ್ಕಾರದ ದೃಷ್ಟಿಯಿಂದ ಬೆಳಸುತ್ತಾಳೆ.. ಮತ್ತೆ ಮಮತೆ, ಪ್ರೀತಿ ಆ ಮಗುವಿಗೆ ಮರೀಚಿಕೆಯಾಗುತ್ತದೆ.. 

ಅದೇ ಸ್ಥಿತಿಯಲ್ಲಿ ಬೆಳೆಯುವ ಮಗುವಿಗೆ ವಿದ್ಯೆ ಬುದ್ದಿ ಕಲಿಸುವ ಪಾತ್ರದಲ್ಲಿ ಬಾಲಣ್ಣ ಬರುತ್ತಾರೆ.. ತನ್ನ ಹೆತ್ತ ಮಗುವಿಗಿಂತಲೂ ಅಧಿಕ ಪ್ರೀತಿ ಮಾಡುತ್ತಾರೆ.. ಆದರೆ ಆ ಮಗು ಸರ್ವಜ್ಞ ಮೂರ್ತಿ ಅಂತ ನಾಮಕರಣ ಮಾಡಿ.. ಲಿಂಗಧಾರಣೆ ಮಾಡಿದ ಮೇಲೆ.. ಆಧ್ಯಾತ್ಮಿಕ ಧಾಟಿಯಲ್ಲಿ ಮಾತಾಡುವ ಸರ್ವಜ್ಞ ಮೂರ್ತಿ ಯ ವಚನಗಳು ಚಿತ್ರದುದ್ದಕ್ಕೋ ಹರಿದಾಡುತ್ತದೆ.. 

ಬಾಲಣ್ಣ ಅವರ ಪಾತ್ರ ಚಿತ್ರದುದ್ದಕ್ಕೂ ಬರುತ್ತಲೇ ಇರುತ್ತದೆ.. ಅವರ ಪಂಚಿಂಗ್ ಸಂಭಾಷಣೆಗಳು ಖುಷಿ ಕೊಡುತ್ತದೆ.. 

ಉಳಿದಂತೆ..ಮೈನಾವತಿ, ಎಂ ಏನ್ ಲಕ್ಷ್ಮೀದೇವಿ, ಹರಿಣಿ ಮುಂತಾದವರು ಚಿತ್ರಕ್ಕೆ ಆಧಾರವಾಗಿದ್ದಾರೆ.. 

ಸಂಗೀತ ಒಂದು ಪ್ರಮುಖ ಪಾತ್ರ ವಹಿಸಿದೆ ಅದು ಜಿ ಕೆ ವೆಂಕಟೇಶ್ ಅವರದ್ದು.. ಛಾಯಾಗ್ರಹಣ ಕೆ ಜಾನಕಿರಾಮ್ ಅವರದ್ದು.. ಉದಯಕುಮಾರ್ ಅವರ ಪುಟ್ಟ ಪಾತ್ರ ಚಿತ್ರದ ಅಂತ್ಯದಲ್ಲಿ ಬಂದಿದೆ.. ಆದರೆ ಗಮನ ಸೆಳೆಯುತ್ತದೆ.. 








ನಿರಂಜನ ಚಿತ್ರದ ಲಾಂಛನದಲ್ಲಿ ಈ ಚಿತ್ರ ಮೂಡಿ ಬಂದಿದೆ.. 

ಮತ್ತೆ ಮುಂದಿನ ಚಿತ್ರದಲ್ಲಿ ಸೇರೋಣ !

Sunday, September 15, 2024

ವಿಧಿಯ ಅಟ್ಟಹಾಸ ಚಂದ್ರಹಾಸ 1965 (ಅಣ್ಣಾವ್ರ ಚಿತ್ರ ೫೯/೨೦೭)

ಕನ್ನಡದ ಪ್ರಸಿದ್ಧ ಲೇಖಕ, ಕವಿ ಲಕ್ಷ್ಮೀಶ ಅವರ ಜೈಮಿನಿ ಭಾರತದ ಸಣ್ಣ ಅಧ್ಯಾಯವನ್ನು ಆಧರಿಸಿ ಚಿ ಸದಾಶಿವಯ್ಯ, ಮತ್ತು ಸದಾಶಿವ ಬ್ರಹಂ ಅವರು ರಚಿಸಿದ ಕಥೆಗೆ , ಚಿ ಸದಾಶಿವಯ್ಯ ಅವರು ಸಂಭಾಷಣೆ ಹಾಡುಗಳನ್ನು ಬರೆದು ಬಿ ಎಸ್ ರಂಗ ಅವರು ವಸಂತ್ ಪಿಕ್ಟ್ಚರ್ಸ್ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶಿಸಿದ ಚಿತ್ರ "ಚಂದ್ರಹಾಸ"

ಚಂದ್ರಹಾಸ ಚಿತ್ರದ  ವಿಶೇಷತೆ ಹೆಸರನ್ನು ತೋರಿಸುವ ವಿಧಾನ.. ಪ್ರತಿ ಪುಟವನ್ನು ಒಂದು ಕೈ ತೆಗೆಯುತ್ತಾ ಹೋಗುತ್ತದೆ.. ಅದರ ವಿವರ ಕಾಣಿಸುತ್ತದೆ.. ಬದುಕನ್ನು ನಿಯಂತ್ರಿಸುವ ವಿಧಿಯೂ ಹಾಗೆ ಅಲ್ಲವೇ.. ಪ್ರತಿ ಪುಟವನ್ನು ತೆರೆಯುತ್ತಾ ಹೋಗುತ್ತದೆ ನಮ್ಮ ಬದುಕಿನ ಹಲವಾರು ಮುಖಗಳು ಘಟನೆಗಳು ಕಾಣುತ್ತ ಹೋಗುತ್ತದೆ.. ಅದ್ಭುತ ಕಲ್ಪನೆ .. ಇಲ್ಲಿಯೇ ಈ ಚಿತ್ರದ ಆಶಯ ಕಾಣುತ್ತದೆ.. 

ಚಿತ್ರದ ಆಶಯ ಹೆಸರು ತೋರಿಸುವ ವಿಧಾನ 



ರಾಜಕುಮಾರ್ ಅವರು ಚಂದ್ರಹಾಸ ಪಾತ್ರದಲ್ಲಿ ಸುಮಾರು ಐವತ್ತೊಂದು ನಿಮಿಷ ಕಳೆದ ಮೇಲೆ ತೆರೆಯಲ್ಲಿ ಕಾಣುತ್ತಾರೆ.. ಅಲ್ಲಿಯ ತನಕ ಚಂದ್ರಹಾಸನ ಕಠಿಣವಾದ ಬಾಲ್ಯ, ಅದರ ಕಷ್ಟ ಕೋಟಲೆಗಳು, ನಂತರ ಸಾಮಂತ ರಾಜನ ಕೈಗೆ ಸಿಗುವುದು ನಂತರ ಅರಮನೆಯ ರಾಜಕುಮಾರನಾಗಿ ಬೆಳೆಯುವುದು, ಶಸ್ತ್ರ ಅಭ್ಯಾಸಗಳಲ್ಲಿ ಪರಿಣಿತಿ ಹೊಂದುವುದು ಹೀಗೆ ಸಾಗುತ್ತದೆ. ತೆರೆಗೆ ಬಂದ ನಂತರ ಎಲ್ಲರನ್ನೂ ನುಂಗಿ ಹಾಕುವ ಅಭಿನಯ ನೀಡುತ್ತಾರೆ.. ಅದರಲ್ಲೂ ಚಿತ್ರದ ಅಂತಿಮ ದೃಶ್ಯದಲ್ಲಿ ಕಾಳಿಯ ಮುಂದೆ ನಿಂತು ಹೇಳುವ ಶ್ಯಾಮಲಾ ದಂಡಕದ ಒಂದು ಭಾಗ.. ಮನಸ್ಸೆಳೆಯುತ್ತದೆ.. ಅಲ್ಲಿಯ ತನಕ ಅದುಮಿಟ್ಟು ಅಭಿನಯಿಸಿದ ಅವರ ಕಲಾಪ್ರೌಢಿಮೆ ಭುಗಿಲೆದ್ದು ನಿಲ್ಲುತ್ತದೆ.. ಮತ್ತೆ ಚಿತ್ರ ಇಷ್ಟವಾಗುತ್ತದೆ.. ಸಮಯವಾಗಿ ಇಡೀ ಚಿತ್ರದಲ್ಲಿ ನಟಿಸಿರುವ ರಾಜ್ ಕುಮಾರ್ ಅವರು ಕಡೆಯ ದೃಶ್ಯದಲ್ಲಿ ಭಾವುಕರಾಗಿ ಮಾತಾಡುವ ದೃಶ್ಯ ಇಷ್ಟವಾಗುತ್ತದೆ.. 

ಆದರೆ ಇಡೀ ಚಿತ್ರವನ್ನು ಆವರಿಸಿರುವುದು ಉದಯಕುಮಾರ್.. ಅದ್ಭುತವಾದ ಗತ್ತಿನಲ್ಲಿ ಇಡೀ ಚಿತ್ರದಲ್ಲಿ ಅಬ್ಬರಿಸಿರುವ ಅವರು ಪ್ರತಿ ದೃಶ್ಯದಲ್ಲಿಯೂ ಒಂದಲ್ಲ ಒಂದು ರೀತಿ ಕಾಣಿಸಿಕೊಳ್ಳುತ್ತಾರೆ.. ಆ ಧ್ವನಿ, ಅಬ್ಬರ, ಆ ಗತ್ತು, ಭಾವ ತೀವ್ರತೆ, ಮುಖ ಭಾವ.. ಕುಟಿಲತನ ಎಲ್ಲವೂ ಅದ್ಭುತವಾಗಿ ಮೇಳೈಸಿದೆ.

ಅಶ್ವಥ್ ಕೆಲವೇ ದೃಶ್ಯಗಳಲ್ಲಿ ಬರುತ್ತಾರೆ ಆದರೆ ಅವರ ಮಾತುಗಳೇ ಚಿತ್ರದ ಕಥೆಯನ್ನು ಮುಂದುವರೆಸುತ್ತದೆ.. ಆರಂಭದಲ್ಲಿ ಹೇಳುವ ಉದಯಕುಮಾರ್ ಅವರ ಭವಿಷ್ಯ ಚಿತ್ರದ ತಿರುವಿಗೆ ಬಹು ಮುಖ್ಯ ಪಾತ್ರ ವಹಿಸುತ್ತದೆ.  


ಆರ್ ನಾಗೇಂದ್ರರಾಯರ ಅಭಿನಯ ದೃಶ್ಯಗಳು ಒಂದೇ ಕೋಣೆಯಲ್ಲಿ  ಭಾಗಶಃ ಒಂದೇ ಚೌಕಟ್ಟಿನಲ್ಲಿ ಕಾಣುವುದು ಆ ಮಹಾರಾಜನ ಪಾತ್ರಧಾರಿಯ ಅವಲಂಬಿತ ಗುಣವನ್ನು ತೋರಿಸುವುದಕ್ಕಾಗಿಯೇ ಹೀಗೆ ಚಿತ್ರಿಸಿದ್ದಾರೆ.. ಅವರ ವಯಸ್ಸು ಬದಲಾಗುತ್ತಿದೆ ಎಂದು ತೋರುವ ಕಪ್ಪು ಕೂದಲು, ಬೆಳ್ಳಗಾಗುವುದು ಬಿಟ್ಟರೆ ಮತ್ಯಾವ ಬದಲಾವಣೆಯೂ ಕಾಣದೆ, ಒಂದು ರೀತಿಯಲ್ಲಿ ಅವಲಂಬಿತ ರಾಜ ಎನ್ನುವ ಪಾತ್ರದ ಆಶಯವನ್ನು ಚೆನ್ನಾಗಿ ತೋರಿಸಿದ್ದಾರೆ.. ಅವರ ಜೊತೆಯಲ್ಲಿ ಇರುವ ಭಟ್ಟಂಗಿ ರತ್ನಾಕರ್ ಪಾತ್ರವೂ ಕೂಡ ಹಾಗೆಯೇ.. 

ಚಿತ್ರದ ಮುಖ್ಯ ಆಶಯಕ್ಕೆ ನರಸಿಂಹರಾಜು ಅವರ ಪಾತ್ರ ಅಷ್ಟೊಂದು ಮುಖ್ಯವಾಗಿಲ್ಲ ಆದ್ದರಿಂದ ಹಾಸ್ಯ ದೃಶ್ಯಗಳು ಮತ್ತು ಅವರ ಪಾತ್ರ ಪೋಷಣೆಗೆ ಅಷ್ಟೊಂದು ದೃಶ್ಯಗಳೂ ಇಲ್ಲ, ಮತ್ತೆ ಕತೆಗೂ ಅಗತ್ಯವಿಲ್ಲ.. ಒಂದೆರಡು ದೃಶ್ಯಗಳು ಅವರ ಹಾಸ್ಯ ಪ್ರಜ್ಞೆಗೆ ಸಾಕ್ಷಿ ನೀಡುತ್ತದೆ.. ಪಾತ್ರ ಪೋಷಣೆ, ಸಂಭಾಷಣೆ ಮತ್ತು ಕತೆಯಲ್ಲಿ ಅವರ ಅವಶ್ಯಕತೆ ಅದ್ಭುತ ದೃಶ್ಯಗಳನ್ನು ಸೃಷ್ಟಿಸುತ್ತದೆ.. 

ಚಿತ್ರಕತೆಯನ್ನು ಸೂಕ್ಷವಾಗಿ ಹೆಣೆದಿದ್ದಾರೆ.. ಕತೆಯನ್ನು ಮುಂದುವರೆಸುತ್ತಲೇ, ಯಾವುದೇ ದೃಶ್ಯಗಳು ಅನಗತ್ಯ ಅನಿಸುವುದಿಲ್ಲ.. ಮತ್ತೆ ಯಾವುದೇ ಬೋರ್ ಅನಿಸುವ ದೃಶ್ಯಗಳು ಇಲ್ಲ.. ಇದು ಚಿತ್ರಕತೆ ಹೆಣೆದ ಚಿ ಸದಾಶಿವಯ್ಯನವರ ಶಕ್ತಿ. 

ಒಂದು ಸಣ್ಣ ಪಾತ್ರದಲ್ಲಿ ಆದರೆ ಅಷ್ಟೇ ಚಿತ್ರಕ್ಕೆ ತಿರುವು ನೀಡುವ ಪಾತ್ರದಲ್ಲಿ ಸುದರ್ಶನ್ ಪಾತ್ರ ಸೊಗಸಾಗಿದೆ.. 


ಈ ಚಿತ್ರದ ಒಂದು ವಿಶೇಷತೆ ರಾಜಕುಮಾರ್ ಅವರು ಒಂದು ದೃಶ್ಯದಲ್ಲಿ ಹೆಣ್ಣಿನ ವೇಷದಲ್ಲಿ ಅಭಿನಯಿಸುತ್ತಾರೆ..ಅವರಿಗೆ ಧ್ವನಿ ನೀಡಿದವರು ಜಯಂತಿ.. ಮತ್ತೆ ಜಯಂತಿ ಕಡೆಯ ದೃಶ್ಯದಲ್ಲಿ ಕಾಳಿ ಮಾತೆಯಾಗಿ ಗಮನ ಸೆಳೆಯುತ್ತಾರೆ.. 




ಉಳಿದಂತೆ, ಜಯಶ್ರೀ, ಪಂಡರಿಬಾಯಿ, ದಿನೇಶ್, ಲೀಲಾವತಿ ಚಿತ್ರಕಥೆಗೆ ಅಗತ್ಯವಿರುವಷ್ಟು ಅಭಿನಯ  ಸೊಗಸಾಗಿದೆ.. 




ಘಂಟಸಾಲ, ಪಿಬಿ ಶ್ರೀನಿವಾಸ್, ಪಿ ಸುಶೀಲ, ಎಸ್ ಜಾನಕೀ, ಪಿ ಲೀಲಾ, ಬಿ ಆರ್ ಲತಾ, ನರಸಿಂಹರಾಜು ಗಾಯಕರ ಸ್ಥಾನದಲ್ಲಿ ಹಾಡುಗಳಿಗೆ ಜೀವ ತುಂಬಿದ್ದಾರೆ 

ಛಾಯಾಗ್ರಹಣ ಬಿ ಎನ್ ಹರಿದಾಸ್,ಮತ್ತು ಸಂಗೀತ ಎಸ್ ಹನುಮಂತ ರಾವ್ .. 

ಚಂದ್ರಹಾಸ ರಾಜಕುಮಾರನ ಜೀವನ ಯಾತ್ರೆಯನ್ನು ಬಿಂಬಿಸುವ ಈ ಚಿತ್ರ ಸಲ್ಲಿಸುವ ಸಂದೇಶ.. ವಿಧಿಯಾಟ ಬಹು ವಿಚಿತ್ರ, .. ಅದರ ಚಿತ್ರಕತೆಯೇ ನೆಡೆಯುವುದು.. !