ಕನ್ನಡದ ಪ್ರಸಿದ್ಧ ಲೇಖಕ, ಕವಿ ಲಕ್ಷ್ಮೀಶ ಅವರ ಜೈಮಿನಿ ಭಾರತದ ಸಣ್ಣ ಅಧ್ಯಾಯವನ್ನು ಆಧರಿಸಿ ಚಿ ಸದಾಶಿವಯ್ಯ, ಮತ್ತು ಸದಾಶಿವ ಬ್ರಹಂ ಅವರು ರಚಿಸಿದ ಕಥೆಗೆ , ಚಿ ಸದಾಶಿವಯ್ಯ ಅವರು ಸಂಭಾಷಣೆ ಹಾಡುಗಳನ್ನು ಬರೆದು ಬಿ ಎಸ್ ರಂಗ ಅವರು ವಸಂತ್ ಪಿಕ್ಟ್ಚರ್ಸ್ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶಿಸಿದ ಚಿತ್ರ "ಚಂದ್ರಹಾಸ"
ಚಂದ್ರಹಾಸ ಚಿತ್ರದ ವಿಶೇಷತೆ ಹೆಸರನ್ನು ತೋರಿಸುವ ವಿಧಾನ.. ಪ್ರತಿ ಪುಟವನ್ನು ಒಂದು ಕೈ ತೆಗೆಯುತ್ತಾ ಹೋಗುತ್ತದೆ.. ಅದರ ವಿವರ ಕಾಣಿಸುತ್ತದೆ.. ಬದುಕನ್ನು ನಿಯಂತ್ರಿಸುವ ವಿಧಿಯೂ ಹಾಗೆ ಅಲ್ಲವೇ.. ಪ್ರತಿ ಪುಟವನ್ನು ತೆರೆಯುತ್ತಾ ಹೋಗುತ್ತದೆ ನಮ್ಮ ಬದುಕಿನ ಹಲವಾರು ಮುಖಗಳು ಘಟನೆಗಳು ಕಾಣುತ್ತ ಹೋಗುತ್ತದೆ.. ಅದ್ಭುತ ಕಲ್ಪನೆ .. ಇಲ್ಲಿಯೇ ಈ ಚಿತ್ರದ ಆಶಯ ಕಾಣುತ್ತದೆ..
ಚಿತ್ರದ ಆಶಯ ಹೆಸರು ತೋರಿಸುವ ವಿಧಾನ |
ರಾಜಕುಮಾರ್ ಅವರು ಚಂದ್ರಹಾಸ ಪಾತ್ರದಲ್ಲಿ ಸುಮಾರು ಐವತ್ತೊಂದು ನಿಮಿಷ ಕಳೆದ ಮೇಲೆ ತೆರೆಯಲ್ಲಿ ಕಾಣುತ್ತಾರೆ.. ಅಲ್ಲಿಯ ತನಕ ಚಂದ್ರಹಾಸನ ಕಠಿಣವಾದ ಬಾಲ್ಯ, ಅದರ ಕಷ್ಟ ಕೋಟಲೆಗಳು, ನಂತರ ಸಾಮಂತ ರಾಜನ ಕೈಗೆ ಸಿಗುವುದು ನಂತರ ಅರಮನೆಯ ರಾಜಕುಮಾರನಾಗಿ ಬೆಳೆಯುವುದು, ಶಸ್ತ್ರ ಅಭ್ಯಾಸಗಳಲ್ಲಿ ಪರಿಣಿತಿ ಹೊಂದುವುದು ಹೀಗೆ ಸಾಗುತ್ತದೆ. ತೆರೆಗೆ ಬಂದ ನಂತರ ಎಲ್ಲರನ್ನೂ ನುಂಗಿ ಹಾಕುವ ಅಭಿನಯ ನೀಡುತ್ತಾರೆ.. ಅದರಲ್ಲೂ ಚಿತ್ರದ ಅಂತಿಮ ದೃಶ್ಯದಲ್ಲಿ ಕಾಳಿಯ ಮುಂದೆ ನಿಂತು ಹೇಳುವ ಶ್ಯಾಮಲಾ ದಂಡಕದ ಒಂದು ಭಾಗ.. ಮನಸ್ಸೆಳೆಯುತ್ತದೆ.. ಅಲ್ಲಿಯ ತನಕ ಅದುಮಿಟ್ಟು ಅಭಿನಯಿಸಿದ ಅವರ ಕಲಾಪ್ರೌಢಿಮೆ ಭುಗಿಲೆದ್ದು ನಿಲ್ಲುತ್ತದೆ.. ಮತ್ತೆ ಚಿತ್ರ ಇಷ್ಟವಾಗುತ್ತದೆ.. ಸಮಯವಾಗಿ ಇಡೀ ಚಿತ್ರದಲ್ಲಿ ನಟಿಸಿರುವ ರಾಜ್ ಕುಮಾರ್ ಅವರು ಕಡೆಯ ದೃಶ್ಯದಲ್ಲಿ ಭಾವುಕರಾಗಿ ಮಾತಾಡುವ ದೃಶ್ಯ ಇಷ್ಟವಾಗುತ್ತದೆ..
ಆದರೆ ಇಡೀ ಚಿತ್ರವನ್ನು ಆವರಿಸಿರುವುದು ಉದಯಕುಮಾರ್.. ಅದ್ಭುತವಾದ ಗತ್ತಿನಲ್ಲಿ ಇಡೀ ಚಿತ್ರದಲ್ಲಿ ಅಬ್ಬರಿಸಿರುವ ಅವರು ಪ್ರತಿ ದೃಶ್ಯದಲ್ಲಿಯೂ ಒಂದಲ್ಲ ಒಂದು ರೀತಿ ಕಾಣಿಸಿಕೊಳ್ಳುತ್ತಾರೆ.. ಆ ಧ್ವನಿ, ಅಬ್ಬರ, ಆ ಗತ್ತು, ಭಾವ ತೀವ್ರತೆ, ಮುಖ ಭಾವ.. ಕುಟಿಲತನ ಎಲ್ಲವೂ ಅದ್ಭುತವಾಗಿ ಮೇಳೈಸಿದೆ.
ಅಶ್ವಥ್ ಕೆಲವೇ ದೃಶ್ಯಗಳಲ್ಲಿ ಬರುತ್ತಾರೆ ಆದರೆ ಅವರ ಮಾತುಗಳೇ ಚಿತ್ರದ ಕಥೆಯನ್ನು ಮುಂದುವರೆಸುತ್ತದೆ.. ಆರಂಭದಲ್ಲಿ ಹೇಳುವ ಉದಯಕುಮಾರ್ ಅವರ ಭವಿಷ್ಯ ಚಿತ್ರದ ತಿರುವಿಗೆ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಆರ್ ನಾಗೇಂದ್ರರಾಯರ ಅಭಿನಯ ದೃಶ್ಯಗಳು ಒಂದೇ ಕೋಣೆಯಲ್ಲಿ ಭಾಗಶಃ ಒಂದೇ ಚೌಕಟ್ಟಿನಲ್ಲಿ ಕಾಣುವುದು ಆ ಮಹಾರಾಜನ ಪಾತ್ರಧಾರಿಯ ಅವಲಂಬಿತ ಗುಣವನ್ನು ತೋರಿಸುವುದಕ್ಕಾಗಿಯೇ ಹೀಗೆ ಚಿತ್ರಿಸಿದ್ದಾರೆ.. ಅವರ ವಯಸ್ಸು ಬದಲಾಗುತ್ತಿದೆ ಎಂದು ತೋರುವ ಕಪ್ಪು ಕೂದಲು, ಬೆಳ್ಳಗಾಗುವುದು ಬಿಟ್ಟರೆ ಮತ್ಯಾವ ಬದಲಾವಣೆಯೂ ಕಾಣದೆ, ಒಂದು ರೀತಿಯಲ್ಲಿ ಅವಲಂಬಿತ ರಾಜ ಎನ್ನುವ ಪಾತ್ರದ ಆಶಯವನ್ನು ಚೆನ್ನಾಗಿ ತೋರಿಸಿದ್ದಾರೆ.. ಅವರ ಜೊತೆಯಲ್ಲಿ ಇರುವ ಭಟ್ಟಂಗಿ ರತ್ನಾಕರ್ ಪಾತ್ರವೂ ಕೂಡ ಹಾಗೆಯೇ..
ಚಿತ್ರದ ಮುಖ್ಯ ಆಶಯಕ್ಕೆ ನರಸಿಂಹರಾಜು ಅವರ ಪಾತ್ರ ಅಷ್ಟೊಂದು ಮುಖ್ಯವಾಗಿಲ್ಲ ಆದ್ದರಿಂದ ಹಾಸ್ಯ ದೃಶ್ಯಗಳು ಮತ್ತು ಅವರ ಪಾತ್ರ ಪೋಷಣೆಗೆ ಅಷ್ಟೊಂದು ದೃಶ್ಯಗಳೂ ಇಲ್ಲ, ಮತ್ತೆ ಕತೆಗೂ ಅಗತ್ಯವಿಲ್ಲ.. ಒಂದೆರಡು ದೃಶ್ಯಗಳು ಅವರ ಹಾಸ್ಯ ಪ್ರಜ್ಞೆಗೆ ಸಾಕ್ಷಿ ನೀಡುತ್ತದೆ.. ಪಾತ್ರ ಪೋಷಣೆ, ಸಂಭಾಷಣೆ ಮತ್ತು ಕತೆಯಲ್ಲಿ ಅವರ ಅವಶ್ಯಕತೆ ಅದ್ಭುತ ದೃಶ್ಯಗಳನ್ನು ಸೃಷ್ಟಿಸುತ್ತದೆ..
ಚಿತ್ರಕತೆಯನ್ನು ಸೂಕ್ಷವಾಗಿ ಹೆಣೆದಿದ್ದಾರೆ.. ಕತೆಯನ್ನು ಮುಂದುವರೆಸುತ್ತಲೇ, ಯಾವುದೇ ದೃಶ್ಯಗಳು ಅನಗತ್ಯ ಅನಿಸುವುದಿಲ್ಲ.. ಮತ್ತೆ ಯಾವುದೇ ಬೋರ್ ಅನಿಸುವ ದೃಶ್ಯಗಳು ಇಲ್ಲ.. ಇದು ಚಿತ್ರಕತೆ ಹೆಣೆದ ಚಿ ಸದಾಶಿವಯ್ಯನವರ ಶಕ್ತಿ.
ಒಂದು ಸಣ್ಣ ಪಾತ್ರದಲ್ಲಿ ಆದರೆ ಅಷ್ಟೇ ಚಿತ್ರಕ್ಕೆ ತಿರುವು ನೀಡುವ ಪಾತ್ರದಲ್ಲಿ ಸುದರ್ಶನ್ ಪಾತ್ರ ಸೊಗಸಾಗಿದೆ..
ಈ ಚಿತ್ರದ ಒಂದು ವಿಶೇಷತೆ ರಾಜಕುಮಾರ್ ಅವರು ಒಂದು ದೃಶ್ಯದಲ್ಲಿ ಹೆಣ್ಣಿನ ವೇಷದಲ್ಲಿ ಅಭಿನಯಿಸುತ್ತಾರೆ..ಅವರಿಗೆ ಧ್ವನಿ ನೀಡಿದವರು ಜಯಂತಿ.. ಮತ್ತೆ ಜಯಂತಿ ಕಡೆಯ ದೃಶ್ಯದಲ್ಲಿ ಕಾಳಿ ಮಾತೆಯಾಗಿ ಗಮನ ಸೆಳೆಯುತ್ತಾರೆ..
ಉಳಿದಂತೆ, ಜಯಶ್ರೀ, ಪಂಡರಿಬಾಯಿ, ದಿನೇಶ್, ಲೀಲಾವತಿ ಚಿತ್ರಕಥೆಗೆ ಅಗತ್ಯವಿರುವಷ್ಟು ಅಭಿನಯ ಸೊಗಸಾಗಿದೆ..
ಘಂಟಸಾಲ, ಪಿಬಿ ಶ್ರೀನಿವಾಸ್, ಪಿ ಸುಶೀಲ, ಎಸ್ ಜಾನಕೀ, ಪಿ ಲೀಲಾ, ಬಿ ಆರ್ ಲತಾ, ನರಸಿಂಹರಾಜು ಗಾಯಕರ ಸ್ಥಾನದಲ್ಲಿ ಹಾಡುಗಳಿಗೆ ಜೀವ ತುಂಬಿದ್ದಾರೆ
ಛಾಯಾಗ್ರಹಣ ಬಿ ಎನ್ ಹರಿದಾಸ್,ಮತ್ತು ಸಂಗೀತ ಎಸ್ ಹನುಮಂತ ರಾವ್ ..
ಚಂದ್ರಹಾಸ ರಾಜಕುಮಾರನ ಜೀವನ ಯಾತ್ರೆಯನ್ನು ಬಿಂಬಿಸುವ ಈ ಚಿತ್ರ ಸಲ್ಲಿಸುವ ಸಂದೇಶ.. ವಿಧಿಯಾಟ ಬಹು ವಿಚಿತ್ರ, .. ಅದರ ಚಿತ್ರಕತೆಯೇ ನೆಡೆಯುವುದು.. !
No comments:
Post a Comment