Tuesday, March 31, 2020

ಸ್ವತಂತ್ರ ಕಹಳೆ ಮೊಳಗಿಸಿದ ಕಿತ್ತೂರು ಚೆನ್ನಮ್ಮ (1961) (ಅಣ್ಣಾವ್ರ ಚಿತ್ರ ೨೧ / ೨೦೭)

ಕಡಲಲ್ಲಿ ಬರುವ ಅಲೆಗಳೆ ಆಗಲಿ.. ಬದುಕಲ್ಲಿ ಬರುವ ಅವಕಾಶಗಳೇ ಆಗಲಿ ಎಂದಿಗೂ ಒಂದೇ ತರಹ ಇರೋದಿಲ್ಲ.. ಬದಲಾಗುತ್ತಲೇ ಇರುತ್ತದೆ.. ಹಾವು ಏಣಿ ಆಟದಂತೆ ಮೇಲೆ ಕೆಳಗೆ ಓಡಾಡುತ್ತಲೇ ಇರಬೇಕಾಗುತ್ತದೆ.. 


ಹಿಂದಿನ ಚಿತ್ರದಲ್ಲಿ ವಿಜೃಂಭಿಸಿದ್ದ ರಾಜ್ ಕುಮಾರ್ ಈ ಚಿತ್ರದಲ್ಲಿ ಸಿನಿಮಾದ ಮಧ್ಯದಲ್ಲಿಯೇ ಮುಗಿಯುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.  ಆದರೆ ಇಡೀ ಚಿತ್ರ ತನ್ನ ಹೆಗಲ ಮೇಲಿದೆಯೋ ಎನ್ನುವಂತಹ ಅಭಿನಯ.. ಕೊಂಚವೂ ಅವರ ಅಭಿನಯದಲ್ಲಿ  ಈ ಚಿತ್ರದಲ್ಲಿ ನನ್ನ ಪಾತ್ರ ಮುಖ್ಯವಲ್ಲ ಎನ್ನುವ ಒಂದಷ್ಟು ಲವಲೇಶವೂ  ಗೊತ್ತಾಗದಂತೆ  ಅಭಿನಯ ನೀಡಿದ್ದಾರೆ. 




ಮಲ್ಲಸರ್ಜ ದೇಸಾಯಿಯಾಗಿ ಚಿತ್ರದ ಆರಂಭದಲ್ಲಿ ಟಿಪ್ಪುವಿನ  ಜೊತೆಯಲ್ಲಿನ ಮಾತುಕತೆ, ವೀರ ಸಂಭಾಷಣೆ, ಆ ಗತ್ತು  ಎಲ್ಲವೂ ಸೊಗಸಾಗಿದೆ .. ವೀರ ಧೀರನ ನೆಡೆ.. ವೇಷಭೂಷಣ ಸಿಕ್ಕಿದ ಅವಕಾಶದಲ್ಲಿಯೇ ವಿಜೃಂಭಿಸಿದ್ದಾರೆ.. 

ರುದ್ರಾ೦ಬೆಯ ಪತಿರಾಯನಾಗಿ ಅರಮನೆ  ಮತ್ತು ರಾಜ್ಯವನ್ನು ನೋಡಿಕೊಳ್ಳುವ ಅರಸನಾಗಿ,ನಂತರ ಚೆನ್ನಮ್ಮನನ್ನು ರಾಜಕೀಯ ಪ್ರೇರಿತರಾಗಿ ಕಿತ್ತೂರನ್ನು ಬಲಪಡಿಸುವ ಕಾರಣಕ್ಕಾಗಿ ಮದುವೆಯಾಗಿ, ಚೆನ್ನಮ್ಮನ ರಾಜ್ಯಾಡಳಿತವನ್ನು ನೋಡಿಕೊಳ್ಳುವ ಗುಣಗಳನ್ನು ಮೆಚ್ಚುವ ಅರಸನಾಗಿ ನೀಡಿರುವ ಅಭಿನಯ ಇಷ್ಟವಾಗುತ್ತದೆ ... 


ತನ್ನ ಅಂತ್ಯ ಸಮೀಪಿಸುತ್ತಿದೆ ಎಂದು ಗೊತ್ತಾದಾಗ ತನ್ನ ತಾಯಿನಾಡಾದ ಕಿತ್ತೂರಿನ ದರ್ಶನ  ಪಡೆದು ಅಲ್ಲಿಯೇ ಮಣ್ಣಾಗಬೇಕು ಎನ್ನುವ ದೃಶ್ಯದಲ್ಲಿ ಅಭಿನಯ ಮನಮುಟ್ಟುತ್ತದೆ.. 

ರಾಜ್ ಕುಮಾರ್  ಪಾತ್ರಕ್ಕೆ ತಕ್ಕ ಅಭಿನಯ, ಸಂಭಾಷಣೆಯ ಚತುರತೆ, ಆ ಗಾಂಭೀರ್ಯ ಎಲ್ಲವನ್ನು ಹೊತ್ತು ಈ ಚಿತ್ರದಲ್ಲಿ  ಮಿಂಚಿದ್ದಾರೆ. 

 ಈ ಚಿತ್ರದ ನಾಯಕಿ ಬಿ ಸರೋಜಾದೇವಿ ಅವರ ಚಿತ್ರಜೀವದಲ್ಲಿ ಮೈಲುಗಲ್ಲಾದ ಚಿತ್ರವಿದು. ಆರಂಭದಲ್ಲಿ ತಾಳ್ಮೆಯ ಪ್ರತಿರೂಪವಾಗಿ ಮೂಡಿ ಬರುವ ಅವರ ಪಾತ್ರ ಬರು ಬರುತ್ತಾ ಸಮಸ್ಯೆಗಳು, ಒತ್ತಡಗಳನ್ನು ನಿಭಾಯಿಸುವ ದಕ್ಷ ಅಧಿಕಾರಿಣಿಯಾಗಿ ಮನಮುಟ್ಟುತ್ತದೆ ಅವರ ಅಭಿನಯ.  ಸಂಭಾಷಣೆ  ಹೇಳುವ ಶೈಲಿ, ಕಣ್ಣುಗಳಿಂದ ತೋರುವ ಮಮಕಾರ ಹಾಗೆಯೇ ಸಿಟ್ಟು,  ವಾಹ್ ಎನಿಸುತ್ತದೆ.  ವಿಶ್ವವಿಖ್ಯಾತವಾದ "ನಿಮಗೇಕೆ ಕೊಡಬೇಕು ಕಪ್ಪಾ" ಇದರಲ್ಲಿ ಅಕ್ಷರಶಃ ಬೆಂಕಿ ಕಾರುತ್ತಾರೆ..  ಚಿತ್ರದ ಅಂತ್ಯದಲ್ಲಿ ಕಿತ್ತೂರಿನ ಮಣ್ಣಿನಲ್ಲಿ ಆಂಗ್ಲ ಧ್ವಜ ಹಾರಾಡುವುದನ್ನು ಕಂಡು ಕೋಪದಿಂದ ಸಿಡಿಮಿಡಿಗೊಳ್ಳುತ್ತಾ ಹೇಳುವ ಸಂಭಾಷಣೆ  ನೆನಪಲ್ಲಿ  ಉಳಿಯುತ್ತದೆ. 





ರುದ್ರಾ೦ಬೆಯ ಎಂ ವಿ ರಾಜಮ್ಮ ಮಾತೃಹೃದಯಿಯಾಗಿ ಕಂಡರೆ, ಅವರ ಮಗನಾಗಿ ಶಿವಲಿಂಗ  ಪಾತ್ರದಲ್ಲಿ ಮುದ್ದುಮೊಗದ ರಾಜಾಶಂಕರ್, ಮತ್ತೆ ಗುರುಗಳಾಗಿ ಕೆ ಎಸ್ ಅಶ್ವಥ್ ತಮ್ಮ ಅಭಿನಯ ಸಾಮರ್ಥ್ಯ ತೋರುತ್ತಾರೆ. ಮಂತ್ರಿಯಾಗಿ ಈಶ್ವರಪ್ಪ ಪಾತ್ರದಲ್ಲಿ ಮುಳುಗಿದ್ದಾರೆ. 



ಇತಿಹಾಸದ ಚಿತ್ರ ಹೇಳುವಾಗ ಕೆಲವು ಸ್ವತಂತ್ರ ತೆಗೆದುಕೊಳ್ಳಬೇಕಾಗುತ್ತದೆ.. ಕೊಂಚ ಕಾಲ್ಪನಿಕ ಸನ್ನಿವೇಶಗಳನ್ನು ಹೇಳಬೇಕಾಗುತ್ತದೆ.. ಅದರಲ್ಲಿ ಭಾಗವಾಗಿ ಬರುವ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿ ಕತೆಯ ಓಟಕ್ಕೆ ಬೇಕಾಗುವ ಹಾಸ್ಯರಸವನ್ನು ತಂದಿದ್ದಾರೆ.. 




ಕಿತ್ತೂರು ಸಂಸ್ಥಾನ ಸ್ಮಶಾನವಾಗಲು ಕಾರಣರಾಗುವ ಮನೆಹಾಳರ ಪಾತ್ರಗಳು ವೆಂಕೋಬರಾವ್ ಮತ್ತು ಮಲ್ಲಪ್ಪ ಶೆಟ್ಟರು... ಈ ಪಾತ್ರಗಳಲ್ಲಿ ಹನುಮಂತಾಚಾರ್ ಮತ್ತು ಡಿಕ್ಕಿ ಮಾಧವರಾವ್ ಅವರಿಗೆ ಚೆನ್ನಾಗಿ ಬಯ್ಯುವಷ್ಟು ಖಳಪಾತ್ರಕ್ಕೆ ಜೀವ ತುಂಬಿದ್ದಾರೆ.. 




ಕಿತ್ತೂರು ಎಂದಾಗ ಸಂಗೊಳ್ಳಿ ರಾಯಣ್ಣನ ಹೆಸರು ಇಲ್ಲದೆ ಮುಗಿಯದು .. ಚೆನ್ನಮ್ಮನ ನೆಚ್ಚಿನ ಬಂಟನಾಗಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಾಯಣ್ಣ.. ಕಡೆಗೆ ರಾಯಣ್ಣನನ್ನು ಸೆರೆ ಹಿಡಿದಿದ್ದಾರೆ ಎನ್ನುವ ಸುದ್ದಿ ಚೆನ್ನಮ್ಮನಿಗೆ ಗೊತ್ತಾದಾಗ, ತನ್ನ ಆಶಾಕಿರಣ ಮುಗಿದುಹೋಯಿತು ಎನ್ನುವ ಮಾತಿನಲ್ಲಿ ರಾಯಣ್ಣನ ಪಾತ್ರದ ಆಳ ಗೊತ್ತಾಗುತ್ತದೆ.



ಎಂಥಹ ಸಂಸ್ಥಾನವೇ ಆಗಿರಲಿ ಅಥವ ದೊಡ್ಡ ಮನೆತನವೇ ಆಗಿರಲಿ... ಈ ರೀತಿಯ ಖಳಪಾತ್ರಗಳು ಯಾವ  ಮಟ್ಟಿಗೆ ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಾರೆ ಎನ್ನುವುದಕ್ಕೆ ಉದಾಹರಣೆ.. 

ಲೀಲಾವತಿ ಪಾತ್ರ ಚಿಕ್ಕದಾಗಿ ಚೊಕ್ಕವಾಗಿದೆ. ಚಿಂದೋಡಿ ಲೀಲಾ ಒಂದು ಸಣ್ಣ ಪಾತ್ರದಲ್ಲಿ ಕಾಣಿಸುತ್ತಾರೆ.. 

ಉಳಿದಂತೆ ಈ ಚಿತ್ರದ ಮೊದಲ ನಾಯಕ ಚಿತ್ರನಾಟಕ, ಸಂಭಾಷಣೆ, ಮತ್ತು ಹಾಡುಗಳನ್ನು ರಚಿಸಿರುವ ಜಿ ವಿ  ಅಯ್ಯರ್.. ಮಾತುಗಳು ಮೊನಚು,  ಹಾಗೆ ಕೆಲವು ಹಾಡುಗಳು ಮನಸ್ಸನು ಸೂರೆ ಮಾಡುತ್ತವೆ. 

ಸಂಗೀತ ನೀಡಿರುವವರು ಪದ್ಮಿನಿ ಪಿಕ್ಟರ್ಸ್ ಸಂಸ್ಥಾನದ ಆಸ್ಥಾನದ ಟಿ ಜಿ ಲಿಂಗಪ್ಪ.. ಅವರೇ ಹಾಡಿರುವ ಸ್ಕೂಲ್ ಮಾಸ್ಟರ್ ಚಿತ್ರದ ಸ್ವಾಮಿ ದೇವನೇ ಲೋಕ ಪಾಲನೆ ಹಾಡನ್ನು ಟೈಟಲ್ ಕಾರ್ಡ್ ನಲ್ಲಿ ಉಪಯೋಗಿಸಿದ್ದಾರೆ.. 

ನೀಟಾಗಿ ಎಲ್ಲರನ್ನು ಒಂದು ಗೂಡಿಸಿ, ಅದ್ಭುತ ಚಿತ್ರರತ್ನವನ್ನು ನಿರ್ಮಿಸಿ ನಿರ್ದೇಶಿಸಿರುವುದು ಬಿ ಆರ್ ಪಂತುಲು. 

ಆರಂಭದಲ್ಲಿ ಮತ್ತು ಕೊನೆಯಲ್ಲಿ ಕಿತ್ತೂರಿನ  ಬಗ್ಗೆ ಕತೆ ಹೇಳುವ ಶಾಲೆಯ ಮಾಸ್ತರಾಗಿ ಅಭಿನಯಿಸಿದ್ದಾರೆ.

ನಿಜಕ್ಕೂ ಅವರ  ಪರಿಶ್ರಮ ಎದ್ದು ಕಾಣುತ್ತದೆ.. ಪ್ರತಿ ದೃಶ್ಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿರುವ ಮತ್ತು ಯುದ್ಧ ದೃಶ್ಯಗಳನ್ನು ಸೊಗಸಾಗಿ ಮೂಡಿಸಿರುವ ಇವರ ಪರಿಶ್ರಮಕ್ಕೆ ಸಾತ್ ನೀಡಿರುವ ಛಾಯಾಗ್ರಾಹಕ ಡಬ್ಲ್ಯೂ ಆರ್ ಸುಬ್ಬರಾವ್ ಮತ್ತು ಎಂ ಕರ್ಣನ್. 



ಈ ಚಿತ್ರದ ವಿಶೇಷತೆ ಅಂದರೆ.. ನಾಯ
ಕಿಯಾದ ಬಿ ಸರೋಜಾದೇವಿ ಹೆಸರನ್ನು ವಿಶೇಷವಾದ  ರೀತಿಯಲ್ಲಿ ತೋರಿಸಿರುವುದು. 

ನಿರ್ದೇಶಕನ ಸ್ಥಾನಕ್ಕೆ ಗೌರವ ಮತ್ತು ಘನತೆ ಜೊತೆಯಲ್ಲಿ ತಾರಾಮೌಲ್ಯ ತಂದುಕೊಟ್ಟ ಪುಟ್ಟಣ್ಣ ಕಣಗಾಲ್ ಅವರು ಸಹ ನಿರ್ದೇಶಕನಾಗಿಕೆಲಸಮಾಡಿರುವುದು .. 


ಎಲ್ಲರ ಪರಿಶ್ರಮ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ ಮತ್ತು ಕರುನಾಡಿಗೆ ಒಂದು ಅನರ್ಘ್ಯ ಚಿತ್ರ ಮಾಡಿಕೊಟ್ಟಿದ್ದಾರೆ.. 

ಕಿತ್ತೂರಿನ ಕತೆ ಯಾರಿಗೆ ಗೊತ್ತಿಲ್ಲ.. ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿರುವ ಈ  ಚಿತ್ರ ತಂಡಕ್ಕೆ ಅಭಿನಂದನೆಸಲ್ಲಿಸುತ್ತಾ ... ಮುಂದಿನ ಚಿತ್ರದಲ್ಲಿ  ಮತ್ತೆ ಸಿಗೋಣ..!

Monday, March 30, 2020

ದೃಢ ನಿಲುವು ಹೊಂದಿದ್ದರೂ ವಿಧಿಯ ಕೈಚಳಕ - ಶ್ರೀ ಶೈಲ ಮಹಾತ್ಮೆ (1961) (ಅಣ್ಣಾವ್ರ ಚಿತ್ರ ೨೦ / ೨೦೭)

ನಮ್ಮ ಪಾಡಿಗೆ  ನಾವು ಇದ್ದರೂ ಕೆಲವೊಮ್ಮೆ ಕಾಣದ ವಿಧಿಯ ಕೈವಾಡ ಜೀವನದಲ್ಲಿ ಅಲೆಗಳನ್ನು ಎಬ್ಬಿಸುತ್ತದೆ... ಅಂತಹ ಒಂದು ಕಥೆಯಾಧಾರಿತ ಶ್ರೀ ಶೈಲ ಕ್ಷೇತ್ರದ ಮಹಿಮೆ ಸಾರುವ ಚಿತ್ರ.

ರಾಜ ಚಂದ್ರಗುಪ್ತನ ಹಿಂದಿನ ಜನ್ಮದಲ್ಲಿ ಋಷಿಕುಮಾರನಾಗಿರುತ್ತಾನೆ..  ಅವನನ್ನು ಮೋಹಿಸುವ ಯಕ್ಷಕನ್ಯೆಯ ಪ್ರೀತಿಯನ್ನು ನಿರಾಕರಿಸುತ್ತಾನೆ.. ಕುಪಿತಗೊಂಡ ಕನ್ಯೆ .. ನಿನ್ನ ಮಗಳನ್ನೇ ಮೋಹಿಸುವ ಮತ್ತು ಮೋಹದ ಮಾಯೆಯಿಂದ ಹುಚ್ಚನಾಗಿ ಅಲೆಯುವಂತೆ ಶಾಪ ಕೊಡುತ್ತಾಳೆ..

ಇತ್ತಾ ನಾರದ ಲೋಕ ಕಲ್ಯಾಣಕ್ಕಾಗಿ ದೂರ್ವಾಸ ಮುನಿಯನ್ನು ಬಲವಂತವಾಗಿ ಕೈಲಾಸಕ್ಕೆ ಶಿವ ಪಾರ್ವತಿಯ ಪ್ರಣಯ ನೃತ್ಯವನ್ನು ನೋಡಲು ಕರೆದುಕೊಂಡು ಹೋಗುತ್ತಾನೆ.. ಶಿವ ಶಿವೆಯ ಅಂತರಂಗವಿಲಾಸದ ಸಮಯದಲ್ಲಿ ದೂರ್ವಾಸನನ್ನು ಕಂಡು ಪಾರ್ವತಿ ಕುಪಿತಗೊಂಡು ಭೂಲೋಕದಲ್ಲಿ ನೋವು, ನಲಿವು ಕಾಣುವ ಸಾಮಾನ್ಯ ಮನುಷ್ಯನಾಗಿರುವಂತೆ ಶಪಿಸುತ್ತಾಳೆ.. ತನ್ನ ಭಕ್ತನನ್ನು ಶಪಿಸಿದ್ದಕ್ಕೆ ಕೋಪಗೊಂಡ ಶಿವ.. ಕಾಮಾದಿ ಬಯಕೆಗಳಿಂದ ಹೀಗೆ ಮಾಡಿದೆ.. ಭೂಲೋಕದಲ್ಲಿ ಕಾಮಾದಿ ಬಯಕೆಗಳಿಂದ ದೂರವಾಗಿ ನರಳುವ ಹೆಣ್ಣಾಗಿ ಜನಿಸುವಂತೆ ಶಪಿಸುತ್ತಾನೆ.. !

ನಾರದ ಇದಕ್ಕೆ ಪರಿಹಾರ ಕೊಡುತ್ತಾ ಪಾರ್ವತಿಗೆ ಶಿಶುವಾಗಿ ಭುವಿಯಲ್ಲಿ ಜನಿಸುವಂತೆ ಹೇಳುತ್ತಾನೆ ..
ಶಿವಾಲಯದಲ್ಲಿ ಮಕ್ಕಳಿಲ್ಲದ ಚಂದ್ರಗುಪ್ತ ರಾಜನಿಗೆ ಈ ಶಿಶು ಸಂತೋಷ ಕೊಡುತ್ತದೆ..

ಇನ್ನೊಬ್ಬ ಭಕ್ತ ತನ್ನ ಶಿವ ಭಕ್ತಿಯ ವರಪ್ರಸಾದದಿಂದ  ನಂದಿ ಮತ್ತು ಪರ್ವತ ಎನ್ನುವ ಗಂಡು ಮಕ್ಕಳನ್ನು ಪಡೆದಿರುತ್ತಾನೆ..  ಆ ಮಕ್ಕಳಿಗೆ ಶಿವನ ಮೇಲೆ ಅಪಾರ ಪ್ರೀತಿ ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು ತಪಸ್ಸು ಮಾಡಲು ಅಪ್ಪನ ಅನುಮತಿ ಕೋರಿ ಶೈಲ ಗುಡ್ಡದಲ್ಲಿ ತಪಸ್ಸಿಗೆ ಕೂರುತ್ತಾರೆ..

ಹೀಗೆ ಈ ನಾಲ್ಕು ಘಟನೆಗಳನ್ನು ಒಂದಕ್ಕೊಂದು ಕೊಂಡಿ ಹಾಕಿ ಹೆಣೆದ ಕಥೆ  ಇದು.. ಶ್ರೀ ಕ್ಷೇತ್ರದ ಮಹಿಮೆಯನ್ನು ಸಾರುವ ಈ ಕಥೆಯಲ್ಲಿ ರಾಜ್ ಕುಮಾರ್ ಅವರ ಬಹುಮುಖದ ಪ್ರತಿಭೆಯನ್ನು  ಪರಿಚಯಿಸುವ ಚಿತ್ರವಿದಾಗಿದೆ..
ಸೌಮ್ಯ ರಾಜನಾಗಿ, ಪತ್ನಿಯನ್ನು ಪ್ರೀತಿಸುತ್ತಾ, ರಾಜ್ಯವನ್ನು ಪಾಲಿಸುತ್ತಾ, ಗುರು ಹಿರಿಯರಿಗೆ ಗೌರವ ಸಲ್ಲಿಸುವ ಪಾತ್ರ ಆರಂಭದಲ್ಲಿ ಸಿಕ್ಕಿದರೆ, ಶತ್ರು ರಾಜರನ್ನು ಮಟ್ಟ ಹಾಕುವ ವೀರ ಯೋಧನಾಗಿಕಾಣುತ್ತಾರೆ .. ನಂತರ ಹದಿನಾರು ವರ್ಷ ಯುದ್ಧ ಮುಗಿಸಿ, ಮತ್ತೆ ತನ್ನ ರಾಜ್ಯಕ್ಕೆ ಬರುವಾಗ, ಅನುಪಮಾ ಸುಂದರಿಯನ್ನು ಕಂಡು ಮೋಹಿಸುತ್ತಾನೆ, ಆ ದೃಶ್ಯದಲ್ಲಿ ಪ್ರಣಯ ಪರಿತಾಪ ಪಡುವ ಅಭಿನಯ ಸೊಗಸಾಗಿದೆ.. ನಂತರ ಆ ಸುಂದರಿ ತನ್ನ ಮಗಳೇ ಎಂದು ಗೊತ್ತಾದಾಗ ಆ ಅಭಿನಯ ಸೊಗಸು.. ಯಕ್ಷ ಕನ್ಯೆಯ ಮಾಯೆಯಲ್ಲಿ ತಾನು ಜನ್ಮ ಕೊಟ್ಟ ಮಗಳಲ್ಲ  ಹಾಗಾಗಿ ಇವಳನ್ನು ಮದುವೆಯಾದರೆ ತಪ್ಪಿಲ್ಲ ಎನ್ನುವ ದರ್ಪದ ಅಭಿನಯ.. ನಂತರ ಹುಚ್ಚನಾಗಿ ಅಳೆಯುವ ಪಾತ್ರ.. ಅದ್ಭುತವಾಗಿದೆ..



ಡಿಕ್ಕಿ ಮಾಧವರಾವ್ ಅದ್ಭುತ  ರಂಗನಟ.. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆಯಲ್ಲಿ ಕಾಣುವ ಅವಕಾಶವಿದೆ..  ಸಂಭಾಷಣೆ ಹೇಳುವ ಶೈಲಿ. ಆ ಕಣ್ಣುಗಳು, ಆಂಗೀಕ ಅಭಿನಯ., ಪಾತ್ರದ ಅಭಿನಯದಲ್ಲಿ ಏರಿಳಿತ.. ಎಲ್ಲವೂ ಅದ್ಭುತವಾಗಿದೆ.. ಗುರುವಾಗಿ ಅವರ ಅಭಿನಯ ಇಷ್ಟವಾಗುತ್ತದೆ..


ಜಯಲಲಿತ ಈ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದು ವಿಶೇಷ .. ಆಕೆಯ ತಾಯಿ ಸಂಧ್ಯಾ ಈ ಚಿತ್ರದ ಒಬ್ಬ ನಾಯಕಿ.. ಇಬ್ಬರದೂ ಸೊಗಸಾದ ಅಭಿನಯ..



ಹಾಸ್ಯ ಎನ್ನುವುದು ಚಿತ್ರಗಳಲ್ಲಿ ಅರಳುತಿದ್ದ ಕಾಲವದು..ಬಾಲಕೃಷ್ಣ, ಹನುಮಂತಾಚಾರ್,
ಎಂ ಎನ್ ಲಕ್ಷ್ಮೀದೇವಿ ಇವರ ಅಭಿನಯ ಹಾಸ್ಯದ  ಹೂರಣವನ್ನು ಹರಡುತ್ತದೆ.. ವಿಶೇಷತೆ ಎಂದರೆ ಹಾಸ್ಯದೃಶ್ಯಗಳಿಗೆ ಸಂಭಾಷಣೆಯನ್ನು ಬರೆಯುವ  ಬಾಲಕೃಷ್ಣ ಅವರಿಗೆ ಸಿಕ್ಕಿರುವುದು.. ಅವರ ಚುರುಕು ಸಂಭಾಷಣೆ ಸಂತಸ ಕೊಡುತ್ತದೆ..



ನಾಯಕಿ ಕೃಷ್ಣಕುಮಾರಿ..  ಕಪ್ಪು ಬಿಳುಪು ವರ್ಣದಲ್ಲಿ ಅವರ ಸೌಂದರ್ಯ ಇಷ್ಟವಾಗುತ್ತದೆ.. ಅವರು ಸಾಮಾನ್ಯ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವುದು ರಾಜ್ ಕುಮಾರ್ ಚಿತ್ರಗಳಲ್ಲಿ ಹೆಚ್ಚು ಮತ್ತು ಎಲ್ಲವೂ ಪೌರಾಣಿಕ, ದೇವರ ಕಥೆಯಾಧಾರಿತ ಚಿತ್ರಗಳೇ ಹೆಚ್ಚು..


 ಚಿತ್ರವನ್ನು ಚಿತ್ರಕಥೆ ಬರೆದು ನಿರ್ದೇಶಿಸಿರುವುದು ಆರೂರು ಪಟ್ಟಾಭಿ, ನಿರ್ಮಾಪಕರು ನೀರ್ಲಹಳ್ಳಿ ತಾಳಿಕೇರಪ್ಪ ಶ್ರೀ ಶೈಲಾ ಪಿಕ್ಚರ್ ಲಾಂಛನದಲ್ಲಿ..

 ಸಂಭಾಷಣೆ ಸೋರಟ್ ಅಶ್ವತ್ ಅವರದ್ದು.. ಅನೇಕಾನೇಕ ಹಾಡುಗಳಿರುವ ಈ ಚಿತ್ರದಲ್ಲಿ ಸಾಹಿತ್ಯ ಒದಗಿಸಿರುವವರು ಹುಣಸೂರು ಕೃಷ್ಣಮೂರ್ತಿ,ವಿಜಯನಾರಸಿಂಹ, ರತ್ನಾಕರ್, ನರೇಂದ್ರಬಾಬು.

 ಸಂಗೀತ ಟಿ ಕೆ ಕಲ್ಯಾಣವರ್ ಮತ್ತು ಛಾಯಾಗ್ರಹಣ ಕೆ ಜಾನಕಿರಾಮ್..

ಗಾನಸುಧೆ ಹರಿಸಿರುವವರು ಪಿ ಬಿ  ಶ್ರೀನಿವಾಸ್, ಮಂಗುಪತಿ,ಸಿ ಎಸ್ ಸರೋಜಿನಿ, ಟಿ ಎಸ್ ಭಗವತಿ, ರುಕ್ಮಿಣಿ, ಗಜಲಕ್ಷ್ಮಿ..

ವಿಶೇಷತೆ ಎಂದರೆ ದೇವಾಲಯದ ಹೊರಾಂಗಣ ಮತ್ತು ಸುತ್ತ  ಪ್ರದೇಶದ  ಚಿತ್ರೀಕರಣ ಶ್ರೀ ಶೈಲದಲ್ಲಿ ನೆಡೆದಿರುವುದು.


ಮತ್ತೊಂದು ಚಿತ್ರದ ಜೊತೆಯಲ್ಲ ಬರೋಣ ..ನೀವು ಬರುತ್ತೀರಾ ಅಲ್ಲವೇ.. !

Friday, March 27, 2020

ಮನುಜಕುಲಕ್ಕೆ ಅನೇಕ ಎಚ್ಚರಿಕೆ ನೀಡುವ ಭಕ್ತ ಕನಕದಾಸ (1960) (ಅಣ್ಣಾವ್ರ ಚಿತ್ರ ೧೯ / ೨೦೭)

 ಮ್ಯಾರಥಾನ್ ಓಟವಿರುತ್ತದೆ... ಕಡಿಮೆ ದೂರದ  ಹೆಚ್ಚು ದೂರದ ಓಟವಿರುತ್ತದೆ , ರಿಲೇ ಓಟವಿರುತ್ತದೆ.. ಆದರೆ ನೂರು ಮೀಟರ್ ಓಟ  ಎಲ್ಲದಕ್ಕಿಂತ ಭಿನ್ನ.. 

ಬೇಡರ ಕಣ್ಣಪ್ಪ ಆದ ಮೇಲೆ ಒಂದೇ ಪಾತ್ರದ ಸುತ್ತಾ ಸುತ್ತುವ  ರಾಜ್ ಕುಮಾರ್ ಅವರ ಚಿತ್ರಗಳು ಬಂದದ್ದು ಕಡಿಮೆ..  ಮಹಾನ್ ಘಟಾನುಘಟಿಗಳ ಮಧ್ಯೆ  ತಮ್ಮದೇ ಛಾಪು ಮೂಡಿಸುವ ಚಿತ್ರಗಳಲ್ಲಿ ಅಭಿನಯಿಸುತ್ತಾ ಬಂದಿದ್ದರು.. 

ಈ ಭಕ್ತ ಕನಕದಾಸ ಚಿತ್ರ ಒಂದು ರೀತಿಯಲ್ಲಿ ತಡೆ ಹಿಡಿದಿದ್ದ ನೀರನ್ನು ನಿಯಂತ್ರಣವುಳ್ಳ ಅಣೆಕಟ್ಟಿನ ಬಾಗಿಲನ್ನು ತೆರೆದಂತೆ  ಅಭಿನಯವಿದೆ.. ಸಂಯಮ ಪಾತ್ರ, ಪಾತ್ರಕ್ಕೆ ತಕ್ಕ ಅಭಿನಯ. .. ಕಡೆದು ನಿಲ್ಲಿಸಿದಂತಹ ಮೈಕಟ್ಟು.. ಮುದ್ದಾಗಿ ಕಾಣುವ ರಾಜ್ ಕುಮಾರ್ ತಮ್ಮ  ಅಮೋಘ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ.. 

ಪ್ರತಿ ಚೌಕಟ್ಟಿನಲ್ಲಿಯೂ, ಪ್ರತಿ ದೃಶ್ಯದಲ್ಲಿಯೂ ಇಷ್ಟವಾಗುವಂತೆ ಅಭಿನಯ ನೀಡಿದ್ದಾರೆ.. ಅವಕಾಶಗಳು  ಆಗ ನನ್ನ ಛಾಪು ತೋರಿಸುತ್ತೇನೆ ಎನ್ನುವ ಅವರ ತಾಳ್ಮೆಯ ಗುಣ ಈ ಚಿತ್ರದಲ್ಲಿ ಕಾಣುತ್ತದೆ.  ಎಲ್ಲದಕ್ಕೂ ಸಮಯ ಬರಬೇಕು ಅದಕ್ಕೆ ಕಾಯಬೇಕು ಜೊತೆಯಲ್ಲಿ ಮಾಡುವ  ಪ್ರಯತ್ನ ಸದಾ ಇರಲೇ ಬೇಕು.. ಅವಕಾಶಗಳು ಬಂದಾಗ ಎರಡೂ ಕೈಯಲ್ಲಿ ಹಿಡಿದುಕೊಳ್ಳಬೇಕು ಎನ್ನುವ ನೀತಿ ಪಾಠ ರಾಜ್ ಕುಮಾರ್ ಅವರ ಈ ಚಿತ್ರ ಹೇಳುತ್ತದೆ.. 

ಶಾಮ್ ಪ್ರಸಾದ್ ಮೂವೀಸ್ ಲಾಂಛನದಲ್ಲಿ ಡಿ ಆರ್ ನಾಯ್ಡು ಅವರು ವೈ ಆರ್ ಸ್ವಾಮೀ ಅವರ  ನಿರ್ದೇಶನದಲ್ಲಿ ಈ ಚಿತ್ರ ನಿರ್ಮಿಸಿದ್ದಾರೆ.. 

ಜನಜನಿತವಾಗಿರುವ ಕನಕದಾಸರ ಇತಿಹಾಸವನ್ನು ಸಿನಿಮಾಕ್ಕೆ ಒಗ್ಗುವ ರೀತಿಯಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.. ಕನಕದಾಸ ವಿರಚಿತ ನೂರಾರು ಪದಗಳಲ್ಲಿ ಕೆಲವನ್ನು ಈ ಚಿತ್ರಕ್ಕೆ ಬಳಸಿಕೊಂಡಿದ್ದಾರೆ ಹಾಗೆ ಚಿತ್ರಕ್ಕೆ ಅನುಕೂಲವಾಗುವಂತೆ ಕೆಲವು ಹಾಡುಗಳಿಗೆ  ಒದಗಿಸಿದ್ದಾರೆ ಹುಣುಸೂರ್ ಕೃಷ್ಣಮೂರ್ತಿ ಅವರು..  

ಟ್ರಿಕ್ ಶಾಟ್ ಈ ಚಿತ್ರಗಳಲ್ಲಿ ಅನೇಕ ಕಡೆ ಉಪಯೋಗಿಸಿದ್ದಾರೆ ಅದಕ್ಕೆ ಈ ಚಿತ್ರಕ್ಕೆ ಆರ್ ಮಧುಸೂಧನ್ ಅವರ ಛಾಯಾಗ್ರಹಣದ ಕೈಚಳಕವಿದೆ.. ಈ ಚಿತ್ರದ ಯಶಸ್ಸಿಗೆ ಇನ್ನೊಂದು ಕಾರಣ ಎಂ ವೈಕುಂಠರಾಜು ಅವರ ಸುಮಧುರ ಸಂಗೀತ. ಅವರ ಸಂಗೀತ ನಿರ್ದೇಶನದಲ್ಲಿ ಹಲವಾರು ಚಿತ್ರಗಳು ಬರದೇ ಇದ್ದರೂ, ಈ ಚಿತ್ರ ಅವರ ಜೀವನದ ಮೈಲಿಗಲ್ಲಾಯಿತು 
 

ತಿಮ್ಮ ನಾಯಕನಾಗಿ  ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಜನಿಸುವ ಮಗು..  ಪಾಳೇಗಾರರ ವಂಶದಲ್ಲಿ ಬೆಳೆದರೂ ಆ ದರ್ಪ ತೋರಿಸದೆ, ಇತ್ತ ಕಡೆ ವಿಧ್ಯಾಭ್ಯಾಸದ ಕಡೆಗೂ ಗಮನ ಕೊಡದೆ, ತನ್ನದೇ ರೀತಿಯಲ್ಲಿ ಬೆಳೆಯುವ ತಿಮ್ಮಪ್ಪ ನಾಯಕ, ಲಚ್ಚಿ ಎನ್ನುವ ಇವರ ವಂಶವನ್ನೇ ದ್ವೇಷ ಮಾಡುವ ಮಲ್ಲನಾಯಕನ ಮಗಳನ್ನು ಇಷ್ಟ ಪಡುತ್ತಾನೆ.. 


ಆದರೆ ದೈವ ಸಂಕಲ್ಪದ ಮುಂದೆ ಯಾವುದು ನೆಡೆಯುತ್ತದೆ.. ಭಗವಂತ  ಕನಸಲ್ಲಿ ಬಂದು, ಕಾಗಿನೆಲೆಯಲ್ಲಿ ನಾ ಅವತರಿಸುತ್ತೇನೆ ಎಂದು ಹೇಳಿ, ಅಲ್ಲಿಯೇ ನನಗೆ ಗುಡಿ  ಕಟ್ಟಬೇಕು ಎನ್ನುವ ಅಣತಿಯಂತೆ ನೆಲವನ್ನು ಅಗೆಯುವಾಗ ಮೂರ್ತಿ ಜೊತೆಯಲ್ಲಿ ಏಳು ಕೊಪ್ಪರಿಗೆ  ಕನಕ ಸಿಕ್ಕಿದ್ದರಿಂದ ತಿಮ್ಮನಾಯಕ ಕನಕನಾಯಕನಾಗುತ್ತಾನೆ.. 



ಭಗವಂತ ಕಣ್ಣ ಮುಂದೆ ಬಂದು, ಆಧ್ಯಾತ್ಮದ ಕಡೆ ಗಮನ ಕೊಡು, ನನ್ನ ದಾಸನಾಗು ಎನ್ನುವ ಅಪ್ಪಣೆಯಂತೆ ಗುರುಗಳು ವ್ಯಾಸರಾಯರ ಹತ್ತಿರ ಬಂದು, ಅವರ ಶಿಷ್ಯರ ಅನೇಕ ಕಷ್ಟಕೋಟಲೆಗಳನ್ನು ಎದುರಿಸಿ, ಭಗವಂತನ ಲೀಲೆಯಿಂದ ಅದನ್ನೆಲ್ಲ ದಾಟುತ್ತಾ, ಗುರುಗಳ ಮಾತಿನಂತೆ ಉಡುಪಿ ಮಠಕ್ಕೆ ಬರುವ ಕನಕ, ತನ್ನ ಭಕ್ತಿಗೆ ಸೋತ ಶ್ರೀ ಕೃಷ್ಣ ತನ್ನ ಇರುವ ದಿಕ್ಕನ್ನೇ ಬದಲಿಸಿಕೊಂಡು ಹಿಂದು ಮುಂದಾಗಿ ಕನಕನಿಗೆ ದರ್ಶನ ಕೊಟ್ಟು ಪುನೀತನನ್ನಾಗಿ ಮಾಡುತ್ತಾನೆ .. 


ಅಲ್ಲಿಗೆ ಕನಕನ ಬದುಕಿನ ಹಂತ ಮುಗಿಯುತ್ತದೆ.. ಮುಂದೆ ಶ್ರೀ ಕೃಷ್ಣನ ಆಶೀರ್ವಾದ ಬಲದಿಂದ ಅನೇಕ ಕೃತಿಗಳನ್ನು ರಚಿಸುತ್ತಾ ಕಾಲ ಕಳೆದು, ತನ್ನ ಸಮಯ ಬಂದಿದೆ ಎಂದಾಗ ಭಗವಂತನಲ್ಲಿ ಲೀನವಾಗುತ್ತಾನೆ ..

ಇಡೀ ಚಿತ್ರದಲ್ಲಿ ರಾಜ್ ಕುಮಾರ್ ಅಕ್ಷರಶಃ ಕನಕದಾಸರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ .. ಆರಂಭದ ದೃಶಗಳಲ್ಲಿ ಆರಾಮಾಗಿ ನಟಿಸುತ್ತಾ, ಹರಿದಾಸನಾದ ಮೇಲೆ ಅತ್ಯಂತ ಉತ್ತಮ ಅಭಿನಯ ನೀಡಿದ್ದಾರೆ.. ಬಾಗಿಲನು ತೆರೆದು ಹಾಡಿನಲ್ಲಿ ಅವರ ಅಭಿನಯ ಮನಮುಟ್ಟುತ್ತದೆ.. ಅವರ ಮೈಕಟ್ಟು ಅದ್ಭುತವಾಗಿದೆ.. 

ಲಚ್ಚಿಯಾಗಿ ಕೃಷ್ಣ ಕುಮಾರಿ ಮುದ್ದಾಗಿ  ಕಾಣುತ್ತಾರೆ.. ಮಲ್ಲನಾಯಕನಾಗಿ ಅಬ್ಬರಿಸುವ ಉದಯಕುಮಾರ್ , ತಿಮ್ಮಪ್ಪನಾಯಕನ ತಾಯಿಯಾಗಿ ಜಯಶ್ರೀ,  ಗುರುವಾಗಿ ಸೋರಟ್ ಅಶ್ವಥ್, ವ್ಯಾಸಗುರುಗಳಾಗಿ ಎಚ್ ಆರ್ ರಾಮಚಂದ್ರಶಾಸ್ತ್ರಿ, ಅವರ ಶಿಷ್ಯಕೋಟಿಗಳಲ್ಲಿ ಕನಕನಿಗೆ ಕಾಟ ಕೊಡುವ ಹನುಮಂತ ಚಾರ್, ರತ್ನಾಕರ್ ಹಾಗೂ ಇತರರು ಅಭಿನಯ ಚಿತ್ರಕ್ಕೆ ಬೇಕಾದ ಹಾಗೆ ಇದೆ 
ಒಂದೆರಡು ದೃಶ್ಯಗಳಲ್ಲಿ ಬರುವ ಅಶ್ವತ್ ಇಷ್ಟವಾಗುತ್ತಾರೆ. 





ಹಾಡುಗಳು ಇಷ್ಟವಾಗುವ ಈ ಚಿತ್ರಕ್ಕೆ ತಮ್ಮ ಗಾನ ಪ್ರಭೆಯನ್ನು  ಹರಿಸಿರುವುದು ಪಿ ಬಿ ಶ್ರೀನಿವಾಸ್ ಜೊತೆಯಲ್ಲಿ ಎಸ್ ಜಾನಕೀ ಮತ್ತು ಪಿ ಜಿ ಕೃಷ್ಣವೇಣಿ. 


ರಾಜ್ ಕುಮಾರ್ ಹಂತ ಹಂತವಾಗಿ ಬೆಳೆಯುವ ಹಂತಕ್ಕೆ ಈ ಚಿತ್ರ ಸಾಕ್ಷಿ.. 

Wednesday, March 25, 2020

ನಾನಾ ಅವತಾರಗಳ ದಶಾವತಾರ (1960) (ಅಣ್ಣಾವ್ರ ಚಿತ್ರ ೧೮ / ೨೦೭)

ಈಗಿನ ಕಾಲದ ಬಫೆ ಊಟದಲ್ಲಿ ಹಲವಾರು ತಿಂಡಿ ತಿನಿಸುಗಳ ಖಾದ್ಯಗಳ ಆಹಾರ ಪದಾರ್ಥಗಳ ಮಿಶ್ರಣವಾಗಿರುತ್ತದೆ.. ನಮಗೆ ಬೇಕಾದ್ದು ಆಯ್ದುಕೊಂಡು ತಿಂದು ಸುಖಿಸಬೇಕು..

ಈ ಮಾತು ಯಾಕೆ ಬಂತು ಅಂದರೆ.. ದಶಾವತಾರ ಚಿತ್ರ ನೋಡಿದ ಮೇಲೆ ಅನಿಸಿತು... ವಿಷ್ಣುವಿನ ಹತ್ತು ಅವತಾರಗಳು.. ಪ್ರತಿಯೊಂದು ಅವತಾರವನ್ನೇ ಒಂದು ಸಿನಿಮಾ ಮಾಡಬಹುದು ಅಷ್ಟು ಬೃಹತ್ ಕಥಾನಕಗಳು.. ಆದರೆ ಹತ್ತು ಅವತಾರಗಳ ಕತೆಯನ್ನು ಎಲ್ಲೂ ಲೋಪ ಬಾರದಂತೆ, ಅವತಾರಗಳ ವಿಶೇಷತೆ ಮರೆಯಾಗದಂತೆ, ವೀಕ್ಷಕರಿಗೆ ಆ ಕಥೆಯ ಸಾರವನ್ನು ಮಾತ್ರ ಬಡಿಸಿ ಮಿಕ್ಕ ಕಥೆಯನ್ನು ಅವರಿಗೆ ಬಿಟ್ಟಿರುವ ಚಾಣಾಕ್ಷತನ ಚಿತ್ರನಾಟಕ ಬರೆದ ಜಿ ವಿ ಅಯ್ಯರ್ ಅವರಿಗೆ ಸಲ್ಲುತ್ತದೆ.. ಪ್ರತಿ ಪಾತ್ರದ ಸಂಭಾಷಣೆ ಮನ ಮುಟ್ಟುವಂತಿದೆ, ಅದರಲ್ಲೂ ರಾಕ್ಷಸ ಪಾತ್ರಧಾರಿಗಳ ವೈಭವೀಕೃತ ವೀರಾವೇಶ ಮಾತುಗಳು, ದೇವತೆಗಳ, ನಾರದನ, ವಿಷ್ಣುವಿನ ಅಷ್ಟೇ ಸಂಯಮ ಮಾತುಗಳು ಇಷ್ಟವಾಗುತ್ತದೆ.. ಜಿ ವಿ ಅಯ್ಯರ್ ಅವರಿಗೆ ಅಭಿನಂದನೆಗಳು ಸಲ್ಲಬೇಕು.. ಹಾಗೆಯೇ ಅನೇಕ ಹಾಡುಗಳಿರುವ ಈ ಸಿನಿಮಾದಲ್ಲಿ ಹಿಟ್ ಗೀತೆ ಅಂದರೆ "ವೈದೇಹಿ ಏನಾದಳು" ಪಿ ಬಿ ಶ್ರೀನಿವಾಸ್ ಅವರ ಮೆಚ್ಚಿನ ಗೀತೆಗಳಲ್ಲಿ ಇದು ಒಂದು, ಅದೇ ರೀತಿ ಶಬರಿ ಪಾತ್ರದಲ್ಲಿ ಹಾಡಿರುವ "ರಘುಪತಿ ರಾಘವ ರಾಜಾರಾಮ" ಇಷ್ಟವಾಗುತ್ತದೆ.  ಒಂದೇ ಬಳ್ಳಿಯ ಹೂಗಳು ಹಾಡಿನಲ್ಲೂ ಹಾಡುಗಾರಿಕೆ ಇಷ್ಟವಾಗುತ್ತದೆ. ಇದರ  ರಚನೆಕಾರರು ಮತ್ತೆ ಜಿ ವಿ ಅಯ್ಯರ್ ಅವರ ಹೆಸರು ಕೇಳಿಬರುತ್ತದೆ..

ಈ ಚಿತ್ರ ಒಂದು ರೀತಿಯಲ್ಲಿ ಜಿ ವಿ ಅಯ್ಯರ್ ಮಯ ಅನ್ನಬಹುದು.. ಚಿತ್ರನಾಟಕ, ಸಂಭಾಷಣೆ, ಗೀತೆಗಳು, ಮತ್ತು ಸಂಯುಕ್ತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ..

ಚಿತ್ರರಂಗದ ಧೀಮಂತ ಹೆಸರು ಬಿ ಎಸ್ ರಂಗ ಮತ್ತು ಅವರ ವಿಕ್ರಮ್  ಪ್ರೊಡಕ್ಷನ್ಸ್.. ಹೆಸರು ಮಾಡಿರುವ ಈ ಸಂಸ್ಥೆಯಿಂದ ಮೂಡಿಬಂದ ಈ ಚಿತ್ರ ರಾಜಕುಮಾರ್ ಅವರ ಅಭಿನಯಕ್ಕೆ ಸಾಣೆ ಹಿಡಿದಿದೆ..

ದೈತ್ಯ ಪಾತ್ರಗಳಾದ ಹಿರಣ್ಯಕಶಿಪು, ಶಿಶುಪಾಲ, ರಾವಣ ಪಾತ್ರಗಳಲ್ಲಿ ಮಿಂಚಿದ್ದಾರೆ. ಸಂಭಾಷಣೆ ವೈಖರಿ, ಆ ದರ್ಪ, ಆಂಗೀಕ ಅಭಿನಯ ಇಷ್ಟವಾಗುತ್ತದೆ.. ತಾನೊಬ್ಬ ಪರಿಪೂರ್ಣ ಕಲಾವಿದನಾಗುತಿದ್ದೇನೆ ಎನ್ನುವ ಕುರುಹನ್ನು ತೋರಿಸುತ್ತ ಹೋಗುತ್ತಾರೆ.  ಸುತ್ತಮುತ್ತಲ ಪಾತ್ರಗಳನ್ನೂ ಕಬಳಿಸಿ ಮುಗಿಸುವಷ್ಟು ಅವರ ಅಭಿನಯ ಸೊಗಸಾಗಿದೆ..

ಒಂದೇ ಚಿತ್ರದಲ್ಲಿ ಹಲವಾರು ಮಗ್ಗಲುಗಳ ಅಭಿನಯವನ್ನು ನೋಡಬಹುದು.. ರಾಜಕುಮಾರ್ ಇಷ್ಟವಾಗುತ್ತಾರೆ ಈ ಚಿತ್ರದಲ್ಲಿ..

ಉಳಿದಂತೆ ಹನುಮಂತನ ಪಾತ್ರದಲ್ಲಿ ಉದಯಕುಮಾರ್, ವಿಷ್ಣುವಿನ ಮೊದಲ ಅವತಾರ ಮತ್ಸ್ಯಾವತಾರದಲ್ಲಿನ ದೈತ್ಯನ ಪಾತ್ರದಲ್ಲಿ ಮಿಂಚುತ್ತಾರೆ.. ಅನೇಕ ಪಾತ್ರಗಳಲ್ಲಿ ಬರುವ ಹೆಚ್ ಆರ್ ರಾಮಚಂದ್ರಶಾಸ್ತ್ರಿ, ಲೀಲಾವತಿ, ಆದವಾನಿ ಲಕ್ಷ್ಮೀದೇವಿ, ನರಸಿಂಹರಾಜು, ಗಣಪತಿ ಭಟ್, ನಾರದನಾಗಿ ಪ್ರತಿಯೊಂದು ಅವತಾರದಲ್ಲಿಯೂ ಕಾಣುವ ಅಶ್ವಥ್ ಮತ್ತೆ ವಿಷುವಿನ ಪಾತ್ರದಲ್ಲಿ ಚಿರಪೂರ್ತಿ ಬರುವ ರಾಜಾಶಂಕರ್ ಇಷ್ಟವಾಗುತ್ತಾರೆ..

ಜಿ ಕೆ ವೆಂಕಟೇಶ್ ಅವರ ಸುಮಧುರ ಸಂಗೀತ ಚಿತ್ರದುದ್ದಕ್ಕೂ ಕಾಡುತ್ತದೆ. ಅದರಲ್ಲೂ ವೈದೇಹಿ ಏನಾದಳೂ ಹಾಡಿಗೆ ಮೂಡಿಸಿರುವ ಸಂಗೀತ ಮನಸೆಳೆಯುತ್ತದೆ..

ತಟ್ಟೆ ತುಂಬಾ ಊಟವಿರುವಾಗ ಅಗತ್ಯಕ್ಕೆ ತಕ್ಕಂತೆ ಬೇಕಾದ್ದು ಬಡಿಸಿಕೊಂಡು ಇಷ್ಟವಾಗುವ ಹಾಗೆ ತಿನ್ನುವ ಪಾಠವನ್ನು ಈ ಚಿತ್ರ ಒದಗಿಸುತ್ತದೆ..

ಇನ್ನೊಂದು ವಿಶೇಷತೆ ಎಂದರೆ.. ರಾಜ್ ಕುಮಾರ್ ಅವರ ಅನೇಕ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ ದೊರೈ ಭಗವಾನ್ ಜೋಡಿ .. ಈ ಚಿತ್ರದಲ್ಲಿ ಬಿಡಿ ಬಿಡಿಯಾಗಿ ಕೆಲಸ ಮಾಡಿದ್ದಾರೆ.. ಛಾಯಾಗ್ರಾಹಕರಾಗಿ ಬಿ ದೊರೈರಾಜ್ ಮಿಂಚಿದ್ದಾರೆ.. ಸಹಾಯಕ ನಿರ್ದೇಶಕನಾಗಿ ಎಸ್ ಕೆ ಭಗವಾನ್ ಕೆಲಸ ಮಾಡಿದ್ದಾರೆ..

ತಾಂತ್ರಿಕವಾಗಿಯೂ ಉತ್ತಮ ಎನಿಸುವ ಈ ಕಸುಬುದಾರಿಕೆ ಈ ಚಿತ್ರದಲ್ಲಿ ಕಾಣುತ್ತದೆ.. ರಾವಣನ ಹತ್ತೂ ತಲೆಗಳು ಒಂದೊಂದು ಬಾರಿ ಮಾತಾಡುವ ರೀತಿ ಚಿತ್ರದಲ್ಲಿ ತೋರಿಸಿದ್ದಾರೆ.. ಜೊತೆಯಲ್ಲಿ ರಾಮ ಪರಶುರಾಮ ಅವರ ದ್ವಿಪಾತ್ರ ಅಭಿನಯ ಚೂರು ಅನುಮಾನ ಬಾರದಂತೆ ತೋರಿಸಿದ್ದಾರೆ... ಉತ್ತಮ ತಂತ್ರಗಾರಿಕೆಯುಳ್ಳ ಈ ಸಿನೆಮಾವನ್ನು ಪಿ ಜಿ ಮೋಹನ್ ನಿರ್ದೇಶಿಸಿದ್ದಾರೆ..


ದಶಾವತಾರದ ಕಥೆ ಎಲ್ಲರಿಗೂ ತಿಳಿದಿದೆಯಾದ್ದರಿಂದ ಕಥೆಯನ್ನು ಹೇಳೋಕೆ ಹೋಗಿಲ್ಲ.. !

ಕೆಲವು ಚಿತ್ರಗಳು ನಿಮಗಾಗಿ!