Tuesday, March 31, 2026

ಕಣ್ಣಿಗೆ ಅರಿವಾಗದ್ದು ಕರುಳಿಗೆ ಅರಿವಾಗಿ ಕೂಗುವ ಕರುಳಿನ ಕರೆ 1970 (ಅಣ್ಣಾವ್ರ ಚಿತ್ರ ೧೧೭/೨೦೭)

ಶ್ರೀ ಇದೊಂದು ಬಹಳ ತುಂಬು ಹೃದಯದ ಚಿತ್ರಕಥೆ.. ನಮ್ಮ ಪುಟ್ಟಣ್ಣ ಕಣಗಾಲ್ ಇದ್ದಾರಲ್ಲ ಪುಟ್ಟಣ್ಣ ಕಣಗಾಲ್.. ಅವರು ಪುಟ್ಟಣ್ಣ ಅಲ್ಲ ದೊಡ್ಡಣ್ಣ.. ಚಿತ್ರಕಥೆಯನ್ನು ರಜತ ಪರದೆಯಲ್ಲಿ ತೋರಿಸುವುದರಲ್ಲಿ ಎತ್ತಿದ ಕೈ. 

ಅವರ ಜೊತೆ ಮೊದಲು ಚಿತ್ರ ಮಾಡುವ ಸೌಭಾಗ್ಯ ಸಿಕ್ಕಿದ್ದು ಮಲ್ಲಮ್ಮನ ಪವಾಡ ಚಿತ್ರದಲ್ಲಿ.. ಆ ನೆರಳು ಬೆಳಕಿನ ಜೊತೆಯಲ್ಲಿ ಚಿತ್ರವನ್ನು ಮೂಡಿಸಿದ ರೀತಿ ಅದ್ಭುತವಾಗಿತ್ತು... 

ಈ ಚಿತ್ರವೂ ಹಾಗೆ.. ಪ್ರತಿಯೊಂದು ದೃಶ್ಯವನ್ನು ಕಲೆಗಾರ ಕುಂಚದಿಂದ ಚಿತ್ರವನ್ನು ಸಿಂಗರಿಸಿದಂತೆ ಪ್ರತಿ ದೃಶ್ಯವನ್ನು ಕಾವ್ಯವಾಗಿ ಮಾಡಿದ್ದಾರೆ.. ಹಾಸ್ಯ, ಅನುಕಂಪ, ಕ್ರೌರ್ಯ, ದ್ವೇಷ, ಕಿಲಾಡಿತನ ಎಲ್ಲವನ್ನೂ ಚಿತ್ರಕತೆಯಲ್ಲಿ ಅಳವಡಿಸಿ ಒಂದು ಅಮರ ಚಿತ್ರವನ್ನಾಗಿ ಮಾಡಿದ್ದಾರೆ. 

ಪುಟ್ಟಣ್ಣ ಅವರ ಕಲೆಗಾರಿಕೆ ಅದ್ಭುತವಾಗಿದೆ. 

ನನ್ನ ಪಾತ್ರ ಪೋಷಣೆಗೆ ಹೆಚ್ಚಿನ ಅವಕಾಶ ನೀಡಿದ್ದಾರೆ.. ಅಂದರೆ ನನ್ನ ಹಾವಭಾವ, ಹಾಸ್ಯವನ್ನು ನಿಭಾಯಿಸೋದು, ಹೊಡೆದಾಟ, ಹಾಡುಗಾರಿಕೆ, ನೃತ್ಯ ಪ್ರತಿಯೊಂದು ಅವರ ಮನದಲ್ಲಿ ಇದ್ದ ಹಾಗೆ ಮೂಡಿಬರಲು ನನಗೆ ಸಹಕಾರ ನೀಡಿದ್ದಾರೆ 

ಇಲ್ಲಿ ಮುಖ್ಯಪಾತ್ರ ನಾನು ಅನ್ನೋದಕ್ಕಿಂತ ಭೀಷ್ಮ ನಾಗೇಂದ್ರರಾಯರು ಮುಖ್ಯವಾಗಿದ್ದಾರೆ. ಅವರ ನೆರಳಿನಲ್ಲಿ ನಾವೆಲ್ಲಾ ಅಭಿನಯಿಸಿದ್ದೇವೆ ಅಂತ ಎದೆ ತಟ್ಟಿ ಹೇಳಬಹುದು. 

ಲಾರಿ ಚಾಲಕನಾಗಿ ನನಗೆ ಇರಬೇಕಾದ ಕೆಲವು ಹಾವಭಾವಗಳನ್ನು ಹೇಳಿಕೊಟ್ಟರು.. ಕಲ್ಪನಾ ಪಾತ್ರಧಾರಿಯ ಜೊತೆ ಹಾಸ್ಯ, ಛೇಡಿಸುವ ಮಾತುಗಳು .. ಚೆನ್ನಾಗಿ ಮೂಡಿ ಬಂದಿದೆ.. 

ನಾವೆಲ್ಲ ಒಂದು ತೂಕವಾದರೆ.. ನಾಗೇಂದ್ರರಾಯರ ಅಭಿನಯ, ಅವರ ಪಾತ್ರವೇ ಇನ್ನೊಂದು ತೂಕ.. ನಮ್ಮನ್ನು ತೂಗಿಸಿಕೊಂಡು ಹೋಗಿದ್ದಾರೆ ರಾಯರು.. 

ಇದೆ ನನ್ನ ಆಶ್ರಮ, ಇದೆ ನನ್ನ ಕಾಯಕದ ನೆಲೆ ಎಂದು ಹೇಳುವ ಸಂಭಾಷಣೆ ಇಷ್ಟವಾಗುತ್ತದೆ.. ಮನೆ 
ಈ ಎಂಟಾಣಿ ಎಂಟು ಲಕ್ಷ ರೂಪಾಯಿ ಬರುವ ಹಾಗೆ ಆಗಲಿ ಎನ್ನುವಾಗ ಅವರ ಧ್ವನಿ .. ಸೂಪರ್.. 
ಅಂತ್ಯದಲ್ಲಿ ಎಲ್ಲಾ ಗೋಜಲುಗಳನ್ನು ಪರಿಹರಿಸುವ ಆ ಪಾತ್ರವೇ ಚಿತ್ರದ ಹೈಲೈಟ್. 
ಪೋಷಕ ಪಾತ್ರದಲ್ಲಿ ಇವರು ಮತ್ತು ಅಶ್ವಥ್ ಯಾವಾಗಲೂ ದೈತ್ಯರು. 

ಹೌದು ಖಳ ಇರಲೇಬೇಕಲ್ಲ ಚಿತ್ರದಲ್ಲಿ.. ನನ್ನ ಬಹುಪಾಲು ಚಿತ್ರದ ಖಳನಟ ದಿನೇಶ್ ಮತ್ತೊಮ್ಮೆ ಇಲ್ಲಿದ್ದಾರೆ.  ಅವರ ಧ್ವನಿ, ಏರಿಳಿತ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಲು ನಿರ್ದೇಶಕ ಪುಟ್ಟಣ್ಣನವರ ಪ್ರತಿಭೆ ಇಲ್ಲಿ ಅನಾವರಣಗೊಂಡಿದೆ.

ತಾಯಿ ಹೃದಯ.. ಮಿಡಿಯುವ ಮನಸ್ಸು.. ಆದವಾನಿ ಲಕ್ಷ್ಮೀದೇವಿ ಅಕ್ಷರಶಃ ತಾಯಿಯಾಗಿದ್ದಾರೆ. 
ತಂದೆಯ ವಿರುದ್ಧ ಸಿಡಿದು ಬೀಳುವ ಮಗನಾಗಿ, ಒಪ್ಪಿಕೊಂಡ ಹುಡುಗಿಗೆ ಪ್ರೇಮಿಯಾಗಿ, ಗೌರವ ಕೊಡುವ ಭಾವಿ ಅಳಿಯನಾಗಿ ಸುದರ್ಶನ್  ಒಪ್ಪವಾಗಿ ಪಾತ್ರವಾಗಿದ್ದಾರೆ. 

ಕಲ್ಪನಾ ಈ ತಾಯಿ ಯಾವುದೇ ಪಾತ್ರವಾದರೂ ಸಲೀಸಾಗಿ ಹರಿಯುವ ಅದ್ಭುತ ಕಲಾವಿದೆ. ಹಳ್ಳಿಯ ಸೊಗಡಿನ ಪಾತ್ರದಲ್ಲಿ ಕಳ್ಳೇ ಕಾಯಿ ಕಳ್ಳೇ ಕಾಯಿ ಹಾಡು.. ಆ ಹಣ್ಣು, ಪುರಿ ಮಾರುವ ತಳ್ಳುಗಾಡಿಯ  ವ್ಯಾಪಾರಿಯ ಗುಣವನ್ನು ಪರದೆಯ ಮೇಲೆ ಸಾಕ್ಷಾತ್ಕರಿಸಿದ್ದಾರೆ. "ಏ ಲಾರಿ" ಅನ್ನುವಾಗ ಮುಗ್ಧತನ, "ಪರಮೇಶಿ" ಅನ್ನುವಾಗ ತೋರುವ ಪ್ರೀತಿ .. ಅವರಿಗೆ ಅವರೇ ಸಾಟಿ.. 

ಉಳಿದ ಪಾತ್ರಗಳು ಚಿತ್ರಕತೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. 

ಸುಂದರಕೃಷ್ಣ ಅರಸ್, ರತ್ನಾಕರ್, ಬೆಂಗಳೂರು ನಾಗೇಶ್ ಮತ್ತು ಸಹಕಲಾವಿದರ ಹಾಸ್ಯ, ಬೇಜವಾಬ್ಧಾರಿತನ, ಮೂರ್ಖತನ ಪ್ರತಿಯೊಂದನ್ನು ಹಾಸ್ಯಮಯವಾಗಿ ನಿರೂಪಿಸಿದ್ದಾರೆ. ಹೆಣ್ಣಿನ ಸ್ವಯಂವರದ ದೃಶ್ಯ ಚಿತ್ರದ ಪ್ರಮುಖ ಹಾಸ್ಯ ದೃಶ್ಯದಲ್ಲಿ ಒಂದು. ಎಚ್ ರಾಮಚಂದ್ರಶಾಸ್ತ್ರಿ ಅವರ ಹೆಣ್ಣಿನ ತಂದೆಯಾಗಿ ಸಿಡಿದು ಬೀಳುವ ಪರಿ ಸೊಗಸಾಗಿದೆ. 

ಕಥೆ, ಚಿತ್ರಕತೆ ಮಾಡಿ ನಿರ್ದೇಶಿಸಿದ್ದು ನನ್ನ ನೆಚ್ಚಿನ ಪುಟ್ಟಣ್ಣ ಕಣಗಾಲ್. 
ಸಂಗೀತ ಅವರ ಆಪ್ತ ಎಂ ರಂಗರಾವ್ 
ಹಾಡುಗಳನ್ನು ಆರ್ ಎನ್ ಜಯಗೋಪಾಲ್ ರಚಿಸಿದ್ದಾರೆ. 
ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ, ಬಿ ಕೆ ಸುಮಿತ್ರಾ  ಮತ್ತು  ಎಸ್ ಜಾನಕೀ ಹಾಡಿದ್ದಾರೆ ಜೊತೆಗೆ ಆ ಆ ಈ ಈ ಕನ್ನಡ ಅಕ್ಷರಮಾಲೆ ಹಾಡಿನಲ್ಲಿ ಆರ್ ಎನ್ ಜಯಗೋಪಾಲ್ ದನಿಗೂಡಿಸಿದ್ದಾರೆ 
ಶ್ರೀಕಾಂತ್ ಕುಮಾರ್ ಛಾಯಾಗ್ರಹಣದ ಜವಾಬ್ಧಾರಿವಹಿಸಿಕೊಂಡಿದ್ದಾರೆ
ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್ಪ್ರೈಸಸ್ ಲಾಂಛನದಲ್ಲಿ ಶ್ರೀಕಾಂತ್ ನಹತಾ ಹಾಗೂ ಶ್ರೀಕಾಂತ್ ಪಟೇಲ್ ನಿರ್ಮಿಸಿದ್ದಾರೆ 

ಶ್ರೀ ನಿನಗೆ ಗೊತ್ತು ಆದರೂ.. ಪುಟ್ಟಣ್ಣ ಕಣಗಾಲ್ ಚಿತ್ರಗಳಲ್ಲಿ ನಾಡು ನುಡಿಯ ಬಗ್ಗೆ ಬಹಳ ಅಭಿಮಾನ ಬರುವ ಹಾಡುಗಳು ಸದಾ ಚಿತ್ರಿಸಿರುತ್ತಾರೆ.. ಇದು ಚಿತ್ರಕತೆಯ ಓಘಕ್ಕೆ ಭಂಗ ಬರದಂತೆ ಮತ್ತು ಅದು ಕಥೆಯನ್ನು ಮುಂದುವರೆಸುವ ಎಳೆಯಾಗಿ ಮೂಡಿ ಬರೋದು ವಿಶೇಷತೆ 

ಮೈಸೂರು ದಸರಾ ಎಷ್ಟೊಂದು ಸುಂದರ .. ದಸರಾ ಹಬ್ಬವನ್ನು ಪೂರ್ಣವಾಗಿ ತೋರಿಸಿದ್ದಾರೆ. 
ಆ ಆ ಈ ಈ ಕನ್ನಡ ಅಕ್ಷರಮಾಲೆ .. ಮಕ್ಕಳಿಗೆ ಅಕ್ಷರಮಾಲೆ ಸಲೀಸಾಗಿ ಬರುವಂತೆ ಪ್ರತಿ ಅಕ್ಷರಕ್ಕೂ ಒಂದೊಂದು ಬಂಧ ಕಲ್ಪಿಸಿ ಚಿತ್ರಿಸಿದ್ದಾರೆ. 
ಕಂಡೆ ನಾ ಕಂಡೆ ತಾಯಿ ಮಮತೆಯ ಸವಿಯನ್ನು ಅನುಭವಿಸಿದ ಪಾತ್ರ ಹಾಡಿಕೊಂಡು ಹೋಗುತ್ತದೆ
 ತಾಜಾ ತಾಜಾ ಕಳ್ಳೆ ಕಾಯಿ.. ಕಡಲೆ ಕಾಯಿಯ ಮಹತ್ವವನ್ನು ವಿವರಿಸುತ್ತಲೇ ಬೆಂಗಳೂರಿನ ಪ್ರಮುಖ ತಾಣಗಳನ್ನು ತೋರಿಸುತ್ತಾರೆ
ಹೊಡೆಯುವ ಕೈಯೊಂದು ಕಣ್ಣೊರೆಸುವ ಕೈಯೊಂದು ಕೊಲ್ಲುವವ ಒಬ್ಬನಾದರೆ ಕಾಯುವವ ಇನ್ನೊಬ್ಬ ಎನ್ನುವ ಸಂದೇಶವನ್ನು ವಿವರಿಸುತ್ತದೆ 
ನನ್ನವರಿಗೆ ಯಾರು ಸಾಟಿಯೇ ಇಬ್ಬರು ಪ್ರೇಮಿಗಳು ತನ್ನವನೇ ಶ್ರೇಷ್ಠ ಎಂದು ತೋರುವ ಸ್ಪರ್ಧೆಯ ಹಾಡು.. 

ನನಗೆ ಇದು ಪುಟ್ಟಣ್ಣ ಕಣಗಾಲ್ ಜೊತೆಯಲ್ಲಿ ಎರಡನೇ ಸಿನಿಮಾ.. ಒಂದು ಅದ್ಭುತ ಅಭಿನಯ ನೀಡಲು ಅವಕಾಶ ಮಾಡಿಕೊಟ್ಟಿದ್ದಾರೆ 

ರಾಜಕುಮಾರ್ ಸರ್.. ಎಷ್ಟು ಸುಂದರವಾಗಿ ಚಿತ್ರದ ಬಗ್ಗೆ ವಿವರಿಸಿದ್ದೀರಾ.. ಜೊತೆಗೆ ಚಿತ್ರದ ವಿಶೇಷತೆ, ಹಾಡುಗಳ ವೈಶಿಷ್ಟತೆ, ಪಾತ್ರಗಳ ಪರಿಚಯ.. ಪ್ರತಿಯೊಂದು ಸೊಗಸಾಗಿದೆ.. 
ನಿಮ್ಮ ಪಾತ್ರದ ಬಗ್ಗೆ.. 
ಆರಂಭದ ದೃಶ್ಯದಲ್ಲಿ ಕೂಲಿಂಗ್ ಗ್ಲಾಸ್, ಜಾಕೆಟ್ ನಲ್ಲಿ ಲಾರಿಯಿಂದ ಇಳಿಯುವ ದೃಶ್ಯ. .. 
ಕಳ್ಳೇಕಾಯಿ ಎಂದು ಕಲ್ಪನಾ ಪಾತ್ರವನ್ನು ರೇಗಿಸುವುದು, 
ಅಪ್ಪಾಜಿ ಅಪ್ಪಾಜಿ ಎಂದು ನಾಗೇಂದ್ರರಾಯರನ್ನು ಗೌರವಿಸುವುದು... 
ಆದವಾನಿ ಲಕ್ಷ್ಮೀದೇವಿಯವರಲ್ಲಿ ತಮ್ಮ ತಾಯಿ ಪ್ರೇಮವನ್ನು ಕಾಣುವ ದೃಶ್ಯಗಳು 
ದಿನೇಶ್ ಅವರ ಜೊತೆಯಲ್ಲಿನ ದೃಶ್ಯಗಳು 
ನೀನು ತುಂಬಾ ಚೆನ್ನಾಗಿದಾ, ನೀನು ತುಂಬಾ ಮುದ್ದಾಗಿದಾ ಎಂದು ದಿನೇಶ್ ಅವರ ಗೆಳತಿಯನ್ನು ಛೇಡಿಸುವುದು.. 
ಮೈಸೂರು ದಸರಾ ಹಾಡಿನಲ್ಲಿ ನಿಮ್ಮ ನೃತ್ಯ
ಸುದರ್ಶನ್ ಅವರ ಜೊತೆಯಲ್ಲಿ ಮೋಹನಪ್ಪಾ, ಮೋಹನಪ್ಪಾ ನನ್ನ ತಂಗಿಯನ್ನು ನೀವು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತೀರಾ ಎಂದು ತೋರುವ ಅಭಿಮಾನ.. 
ಅಂತಿಮ ದೃಶ್ಯದ ಹೊಡೆದಾಟದ ದೃಶ್ಯಗಳು 
ನಿಮ್ಮನ್ನು ನೀವು ಈ ಪಾತ್ರದಲ್ಲಿ ತೊಡಗಿಸಿಕೊಂಡಿರುವ ರೀತಿ ಅದ್ಭುತ ಸರ್.. 

ಏನಪ್ಪಾ ಇದು ಸಣ್ಣ ಮಾತಿನಲ್ಲಿ ಈ ಪಾಟಿ ಹೇಳುತ್ತಿದ್ದೀಯ ನಿನಗೆ ಮಂಗಳವಾಗಲಿ ಶ್ರೀ 

ರಾಜಕುಮಾರ್ ಸರ್ ನಿಮ್ಮ ಅಭಿಮಾನಕ್ಕೆ ಧನ್ಯೋಸ್ಮಿ.. ಮತ್ತೊಂದು ನಿಮ್ಮ ಚಿತ್ರರತ್ನದ ಜೊತೆ ಸಿಗುವೆ.. 

ಶುಭವಾಗಲಿ ಶ್ರೀ.. ಹನ್ನೆರಡು ಮತ್ತು ಇಪ್ಪತ್ತನಾಲ್ಕು ದಿನಾಂಕಕ್ಕೆ ಮತ್ತೆ ಸಿಗುತ್ತೇನೆ.. !
 










No comments:

Post a Comment