Monday, August 25, 2025

ಅಪೂರ್ವ ರಾಗ ಪೂರ್ವಿ ಕಲ್ಯಾಣಿಯ ಸಂಧ್ಯಾರಾಗ 1966 (ಅಣ್ಣಾವ್ರ ಚಿತ್ರ ೭೯/೨೦೭)

ಹಿಂದೆ ಮಲ್ಲಯುದ್ಧ ಕಾಳಗವನ್ನು ಘೋಷಿಸಿದರೆ ಅನೇಕಾನೇಕ ಜಗಜಟ್ಟಿಗಳು ಸೇರುತ್ತಿದ್ದರು.. ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳು.. 

ಈ ಸಿನಿಮಾ ಕೂಡ ಹಾಗೆಯೇ ಅದ್ಭುತ ಪ್ರತಿಭೆಗಳ ಸಂಗಮವೇ ಈ ಸಂಧ್ಯಾರಾಗ.. 

ಕಾದಂಬರಿ ಸಾರ್ವಭೌಮ ಎಂದೇ ಹೆಸರಾದ ಶ್ರೀಯುತ ಅ ನ ಕೃಷ್ಣರಾಯರು 

ಸಂಗೀತ ಸಾರ್ವಭೌಮ ಎಂದು ಅದ್ಭುತ ಸಂಗೀತ ನೀಡಿದ ಜಿ ಕೆ ವೆಂಕಟೇಶ್ 

ನಟಸಾರ್ವಭೌಮ ಎಂದು ಖ್ಯಾತರಾದ ರಾಜಕುಮಾರ್ 

ಕರುನಾಡಿನ ತಾಯಿ ಪಂಡರಿಬಾಯಿ 

ಪೋಷಕ ಪಾತ್ರಗಳ ಪಿತಾಮಹ ಅಶ್ವಥ್ 

ಹಾಸ್ಯ ಚಕ್ರವರ್ತಿ ಎಂದು ಬಿರುದಾಂಕಿತರಾದ ನರಸಿಂಹರಾಜು 

ಅಭಿನಯದ ಕುಶಲ ಕಲಾವಿದೆಯಾದ ಭಾರತಿ 

ಕಲಾಕೇಸರಿ ಉದಯಕುಮಾರ್ 

ಅದ್ಭುತ ಮುಖಭಾವ ತೋರುವ ರಾಘವೇಂದ್ರರಾವ್ 

ಪುಟ್ಟ ಪಾತ್ರಗಳನ್ನೂ ಸ್ಮರಣೀಯ ಮಾಡುತ್ತಿದ್ದ ಎಚ್ ಆರ್ ರಾಮಚಂದ್ರಶಾಸ್ತ್ರಿ 

ರಾಜಕುಮಾರ್ ಚಿತ್ರಗಳ ಖಾಯಂ ಕಲಾವಿದೆಯಾಗಿ ಬೆಳದ ಶಾಂತಮ್ಮ 

ಕರುನಾಡಿನ ಚಿತ್ರರಂಗದ ಆರಂಭದಿಂದಲೂ ಒಂದಲ್ಲ ಒಂದು ರೀತಿ ತೊಡಗಿಕೊಂಡಿದ್ದ ಜಿ ವಿ ಅಯ್ಯರ್ 

ಹಿಂದೂಸ್ತಾನಿ ಗಾಯನದ ಸಾರ್ವಭೌಮ ಶ್ರೀಯುತ ಭೀಮಸೇನ್ ಜೋಶಿ 

ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕ ಶ್ರೀಯುತ ಎಂ ಬಾಲಮುರಳಿಕೃಷ್ಣ 

ಗಾನ ಕೋಗಿಲೆ ಎಸ್ ಜಾನಕೀ 

ರಾಜಕುಮಾರ್ ಅವರಿಗೆ ಅದ್ಭುತವಾಗಿ ಹೊಂದುತ್ತಿದ್ದ ಗಾಯಕ ಪಿ ಬಿ ಶ್ರೀನಿವಾಸ್ 

ಮುಂದೆ ಅದ್ಭುತ ಚಿತ್ರಗಳನ್ನು ತೆರೆಗೆ ತಂದ ಜೋಡಿ ನಿರ್ದೇಶಕ ಭಗವಾನ್ ಮತ್ತು ಛಾಯಾಗ್ರಾಹಕ ಬಿ ದೊರೈರಾಜ್ 

ಎಂದಿಗೂ ಸಲ್ಲುವ ಅತ್ಯುತ್ತಮ ಸಾಹಿತಿ ಆರ್ ಎನ್ ಜಯಗೋಪಾಲ್ 

ಈ ಚಿತ್ರದ ನಂತರ ಮತ್ತೆ ಕಾಣದ ನಿರ್ದೇಶಕ (ನನ್ನ ಅನುಭವದ ಸೀಮೆಯಲ್ಲಿ) ಎ ಸಿ ನರಸಿಂಹಮೂರ್ತಿ

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಸಾಲಿದು.. 

ಈ ಚಿತ್ರದಲ್ಲಿ ಅನೇಕಾನೇಕ ಮೆಚ್ಚತಕ್ಕ ಅಂಶಗಳಿವೆ 

ಮೊದಲನೆಯದು "ಸಂಧ್ಯಾರಾಗ" ಕಾದಂಬರಿಯ ಕತೃ ಅ ನ ಕೃ ಅವರಿಗೆ ಗೌರವ ಸಲ್ಲಿಸುವ ನಾಮಫಲಕ.. 

ಕರ್ನಾಟಕ ಸಂಗೀತದ ಅನುಭವವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಅದರ ಕತೃ ಎಂ ಬಾಲಮುರಳಿಕೃಷ್ಣ ಅವರಿಗೆ ಗೌರವ ತೋರಿಸಿರುವುದು.. 

ಶೈಲಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಪಕ ಎ ಸಿ ನರಸಿಂಹಮೂರ್ತಿ ಮತ್ತು ಎ ಪ್ರಭಾಕರ್ ರಾವ್ ನಿರ್ಮಿಸಿದ ಚಿತ್ರವಿದು. 

ಕಾದಂಬರಿಯನ್ನು ಆಧರಿಸಿದ ಚಿತ್ರವೆಂದರೆ ಸಾಮಾನ್ಯವಾಗಿ ಕಾದಂಬರಿಯಲ್ಲಿ ಬಳಸಿದ ಅನೇಕ ಸಂಭಾಷಣೆಗಳನ್ನು ಕೆಲವು ಕಡೆ ಯಥಾವತ್ತಾಗಿ.. ಕೆಲವು ಕಡೆ ದೃಶ್ಯದ ಅನುಕೂಲಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ ಸಂಭಾಷಣೆಗಳನ್ನು ಉತ್ತಮ ಪಡಿಸುವ ಕೆಲಸವೂ ನೆಡೆಯುತ್ತದೆ. 

ಹಾಗಾಗಿ ಸಂಭಾಷಣೆಯ ಶ್ರೇಯಸ್ಸು ಆನಕೃ ಅವರಿಗೂ ಸಲ್ಲಬೇಕು ಜೊತೆಗೆ ನರೇಂದ್ರಬಾಬು ಮತ್ತು ಭಗವಾನ್ ಅವರಿಗೂ ಕೂಡ. 

ಸಂಗೀತದಲ್ಲಿ ಜಾದೂ ಮಾಡಿರುವ ಜಿ ಕೆ ವೆಂಕಟೇಶ್ ಒಂದೇ ಹಾಡನ್ನು ಭಿನ್ನ ಭಿನ್ನವಾಗಿ ಸಂಯೋಜಿಸಿ ಮೂವರು ಗಾಯಕ ಶ್ರೇಷ್ಠರಿಂದ ಹಾಡಿಸಿರುವುದು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿ. 

ನಂಬಿದೆ ನಿನ್ನ ನಾದ ದೇವತೆಯೇ - ಎಸ್ ಜಾನಕೀ, ಎಂ ಬಾಲಮುರಳಿಕೃಷ್ಣ ಹಾಗೂ ಭೀಮಸೇನ್ ಜೋಶಿ ಅವರಿಂದ ಹಾಡಿಸಿರುವುದು ಮತ್ತು ಅದರ ಚಿತ್ರೀಕರಣ ಕೂಡ. 

ಪಿ ಬಿ ಶ್ರೀನಿವಾಸ್ ಅವರ ದೀನ ನಾ ಬಂದಿರುವೇ .. ಶಿಷ್ಯ ವೃತ್ತಿಯ ಅಭಿಲಾಷೆಯಿಂದ ರಾಜಕುಮಾರ್ ಅವರು ತಂಜಾವೂರು ಕೃಷ್ಣನಯ್ಯರ್ ಅವರ ಬಳಿ ಬಂದಾಗ ಅವರು ನಿರಾಕರಿಸುತ್ತಾರೆ.. ಆಗ ಈ ಹಾಡು.. .. ಪಿ ಬಿ ಶ್ರೀನಿವಾಸ್ ಅವರ ಅದ್ಭುತ ಗಾಯನ.. ಅದಕ್ಕೆ ಅಷ್ಟೇ ಮನೋಜ್ಞ ಅಭಿನಯ ನೀಡಿರುವ ರಾಜಕುಮಾರ್.. 

ಹಾಡಿನ ಅದ್ಭುತ ಜಾದೂ.. ಓಡಾಡಲು ಶಕ್ತಿಯಿಲ್ಲದೆ ಮಲಗಿದ್ದ ಕೃಷ್ಣನಯ್ಯರ್ ಅವರು ಮೆಲ್ಲನೆ ಎದ್ದು ನೆಡೆಯುತ್ತ ಬಂದು ಹಾಡುತ್ತಿರುವ ರಾಜಕುಮಾರ್ ಅವರನ್ನು ಕಾಣಲು ಹೊರಗೆ ಬರುತ್ತಾರೆ.. ಅದನ್ನು ಕಂಡು ಸಂತಸದಿಂದ ರಾಜಕುಮಾರ್ತ ಹಾಡು ನಿಲ್ಲಿಸ ಹೊರಟಾಗ.. ತಮ್ಮ ಪತಿರಾಯರು ನೆಡೆಯುವುದನ್ನು ಕಂಡು.. ರಾಜಕುಮಾರ್ ಅವರಿಗೆ ನಿಲ್ಲಿಸಬೇಡ ಹಾಡಪ್ಪ ಎಂದು ಸನ್ನೆ ಮಾಡುತ್ತಾರೆ.. ಮುಗ್ಧತೆಯಿಂದ ಕಣ್ಣೀರನ್ನು ಒರೆಸಿಕೊಂಡು, ಆಗಲಿ ಎನ್ನುತ್ತಾ ತಲೆಯಾಡಿಸುವ ರಾಜಕುಮಾರ್ ಅವರ ಅಭಿನಯ ಮನದಾಳದಲ್ಲಿ ನಿಲ್ಲುತ್ತದೆ. 

ಈ ಚಿತ್ರ ಸಂಗೀತಗಾರನ ಸಂಗೀತದ ಅಭಿಮಾನ, ಪ್ರೀತಿ.. ಸಂಗೀತ ಬಿಟ್ಟರೆ ಪ್ರಪಂಚದಲ್ಲಿ ಬೇರೆ ಏನೂ ಇಲ್ಲ ಎಂದು ತನ್ನ ಬದುಕನ್ನೇ ಸಂಗೀತಕ್ಕೆ ಮೀಸಲಿಟ್ಟ ಅದ್ಭುತ ಗಾಯಕನ ಕಥೆಯಿದು. 

ಮುಳುಬಾಗಿಲ ಚನ್ನಪ್ಪ "ಈ ಪರಿಯ ಸೊಬಗು"  ಹಾಡಿನಲ್ಲಿ ಎಷ್ಟು ಚಂದ ಹಾಡ್ತೀಯಾ ಮಗ.. ಹಾಡೊಂದನ್ನು ಬಿಟ್ಟ ನನಗೆ ಹಾಡು ಹಾಡುವಷ್ಟು ಚೆನ್ನಾಗಿ ಹಾಡುತ್ತೀಯ ಎಂದು ಶಭಾಷ್ ಕೊಡುವ ದೃಶದಲ್ಲಿ ಕೂಡ ರಾಮಚಂದ್ರಶಾಸ್ತ್ರಿ ಮತ್ತು ರಾಜಕುಮಾರ್ ಅವರ ಅಭಿನಯ ಅದ್ಭುತ. 

ಜಿ ವಿ ಅಯ್ಯರ್ ಅವರ ರಚನೆ "ನಂಬಿದೆ ನಿನ್ನ ನಾದ ದೇವತೆಯೇ", ಕನ್ನಡತಿ ತಾಯೆ ಬಾ" 

ದಾಸ ಶ್ರೇಷ್ಠರು ಪುರಂದರದಾಸರ ರಚನೆ "ಈ ಪರಿಯ ಸೊಬಗು", "ತೇಲಿಸೊ ಇಲ್ಲ ಮುಳುಗಿಸೊ", "ಗುರುವಿನ ಗುಲಾಮನಾಗುವ ತನಕ" 

"ದೀನ ನಾ ಬಂದಿರುವೆ" ಆರ್ ಎನ್ ಜಯಗೋಪಾಲ್ ರಚನೆ 

ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿ ಬಂದಿದೆ.. 

ಭಾರತಿ ಮುಗ್ಧವಾಗಿ ನಟಿಸಿದ್ದಾರೆ.. ನೆರಳು ಬೆಳಕಿನ ಹಿನ್ನೆಲೆಯಲ್ಲಿ ಅವರ ಅದ್ಭುತ ಮುಗ್ಧ ಮೊಗವನ್ನು ಚಿತ್ರೀಕರಿಸುವುದು. 

ಅಬ್ಬರದ ಉದಯಕುಮಾರ್ ಚಿತ್ರಪೂರ್ತಿ ಖಳನಾಗಿಯೇ ಅಭಿನಯಿಸಿರುವುದು.. ಅವರ ಪತ್ನಿಯಾಗಿ ಶೈಲಶ್ರೀ ಅವರ ಮುಗ್ಧ ಮೊಗ, ಅಭಿನಯ ಇಷ್ಟವಾಗುತ್ತದೆ. ಆಕೆಯ ತಂದೆಯಾಗಿ ಕುಪ್ಪುರಾಜ್ ಅವರ ಪುಟ್ಟ ಪಾತ್ರವೂ ಕೂಡ ಮುಖ್ಯವಾಗುತ್ತದೆ. 

ಪಂಡರಿಬಾಯಿಯವರ ತಾಯಿ ಮಮತೆ 

ಅಶ್ವಥ್ ಅವರ ವಿಭಿನ್ನ ಕೇಶ ವಿನ್ಯಾಸ ಹಾಗೂ ಮೀಸೆಯಲ್ಲಿ ವಿಭಿನ್ನವಾಗಿ ಕಾಣುವುದು ಅಷ್ಟೇ ಅಲ್ಲದೆ ಅವರ ಅಭಿನಯ ಸೊಗಸಾಗಿದೆ 

ಅವರ ಗೆಳೆಯನಾಗಿ ರಾಘವೇಂದ್ರ ರಾವ್ ಅವರ ನಟನೆ ಇಷ್ಟವಾಗುತ್ತದೆ. 

ಆರಂಭಿಕ ದೃಶ್ಯಗಳಲ್ಲಿ ಹಾಸ್ಯ ಚೆಲ್ಲಿದರೂ ಚಿತ್ರ ಬೆಳೆದಂತೆ ಸಾಮಾಜಿಕ ಕಾಳಜಿಯಿಂದ ತನ್ನ ಪತ್ನಿಯ ಗಂಡನ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯುವ ಪಾತ್ರದಲ್ಲಿ ನರಸಿಂಹರಾಜು ಮಿಂಚುತ್ತಾರೆ. 

ನರಸಿಂಹರಾಜು ಅವರ ಪಾತ್ರದ ಪತ್ನಿಯಾಗಿ ಶಾಂತಲಾ ಎಂಬ ನಟಿ ಅಭಿನಯಿಸಿದ್ದಾರೆ. 

ಹೌದು ಇದರ ಮುಖ್ಯ ಆಧಾರ ರಾಜಕುಮಾರ್ ಅವರ ಪಾತ್ರ.. ಸಂಗೀತದ ಮೇಲಿನ ಆಸಕ್ತಿ, ಅದನ್ನು ರೂಢಿಸಿಕೊಳ್ಳಲು ಅವರು ಪಡುವ ಪಾಡು.. ಪತ್ನಿಯ ಆಸಕ್ತಿಯಂತೆ ಮತ್ತು ಇಚ್ಚೆಯಂತೆ ಸಂಗೀತ ಕಲಿಯಲು ಅವರ ಅಭಿನಯ.. ಅದ್ಭುತ

ಪ್ರತಿ ದೃಶ್ಯವನ್ನು ತಮ್ಮ ಭುಜದ ಮೇಲೆ ಹೊತ್ತು ಚಿತ್ರದ ಭಾರವನ್ನು ತಮ್ಮ ಬೆನ್ನ ಮೇಲೆ ಹೊತ್ತು ನಿಭಾಯಿಸಿಕೊಂಡು ಅಭಿನಯಿಸಿರುವ ಅವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ.. ಆ ಉಡುಪು, ತಲೆಗೂದಲು, ಮೀಸೆಯಿಲ್ಲದ ಮುಖ.. ಆದರೆ ಅಷ್ಟೇ ಮುಗ್ಧವಾಗಿ, ಮುದ್ದಾಗಿ ಕಾಣುವ ಅವರನ್ನು ಈ ಚಿತ್ರದಲ್ಲಿ ನೋಡುವುದೇ ಒಂದು ಖುಷಿ. 

ಇಮೇಜ್ ಅದೂ ಇದು ಎನ್ನುವ ಯಾವ ಹಂಗೂ ಇಲ್ಲದೆ ಪಾತ್ರಕ್ಕೆ ಒಗ್ಗಿಕೊಂಡು ಪಾತ್ರವೇ ತಾವಾಗಿರುವ ಈ ಚಿತ್ರ ..  ರಾಜಕುಮಾರ್ ಅವರ ಚಿತ್ರಜೀವನದ ಒಂದು ಮೈಲಿಗಲ್ಲು.. 




















No comments:

Post a Comment