Friday, August 15, 2025

ಪಂಚತಂತ್ರ ಮೂಲದ ಮಧುಮಾಲತಿ 1966 (ಅಣ್ಣಾವ್ರ ಚಿತ್ರ ೭೫/೨೦೭)

ಪಂಚತಂತ್ರ ನಮ್ಮ ಭಾರತೀಯ ಕಥೆಗಳಿಗೆ ಅಗ್ರಮೂಲ ವಸ್ತುವಾಗಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಆ ಕಥೆಗಳನ್ನು ಭಿನ್ನ ವಿಭಿನ್ನವಾಗಿ ಅರ್ಥೈಸಿಕೊಂಡು, ಅದನ್ನು ಅಳವಡಿಸಿಕೊಂಡು ಹೆಣೆದ ಚಿತ್ರಕತೆಗಳೆಷ್ಟೋ ಎಣಿಕೆಗೆ ಬಾರದು. 

ಹಾಗೆಯೇ ಇನ್ನೊಂದು ಕಥಾಸರಣಿ ವಿಕ್ರಂ ಮತ್ತು ಬೇತಾಳನ ಕತೆಗಳು.. 

ಆ ಕಾಲದ ಅದ್ಭುತ ಕವಿ ಕಥೆಗಾರ ಭವಭೂತಿ ಅವರ ಮಾಲತಿಮಾಧವ ಕಥೆಯನ್ನು ಆಧರಿಸಿ ಹೆಣೆದ ಚಿತ್ರಕಥೆ ಈ ಚಿತ್ರದ ನಿರ್ದೇಶಕ ಎಸ್ ಕೆ ಎ ಚಾರಿ ಅವರದ್ದು. ಖುಷಿ ಪಡಬೇಕಾದ್ದು ಅಂದರೆ ಕಥೆ ತನ್ನದು ಎಂದು ಹಾಕಿಕೊಂಡಿದ್ದರು ಅದರ ಕೆಳಗೆ ಭವಭೂತಿ ಅವರ ಕಥೆಯಾಧಾರಿತ ಎಂದು ಹಾಕಿರೋದು ಸನ್ನೆಡತೆಯ ಪ್ರತೀಕ ಎಂದು ತೋರಿಸುತ್ತದೆ. 

ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಎಸ್ ಕೆ ಎ ಚಾರಿ ಅವರದ್ದು. ಎಂ ಸಂಪತ್ ಈ ಚಿತ್ರದ ನಿರ್ಮಾಪಕರು. ತ್ರಿಮೂರ್ತಿ ಫಿಲಂಸ್ ಲಾಂಛನದದಲ್ಲಿ, ಬಿ ದೊರೈರಾಜ್ ಛಾಯಾಗ್ರಹಣದಲ್ಲಿ, ಜಿ ಕೆ ವೆಂಕಟೇಶ್ ಅವರ ಸಂಗೀತ ಸಾರಥ್ಯದಲ್ಲಿ ಮಿಂದೆದ್ದ ಚಿತ್ರವಿದು. 

ಮಾನ ಮುಚ್ಚಿಕೊಳ್ಳುವುದಕ್ಕೆ ಸಹಾಯ ಮಾಡಿದವ ಒಬ್ಬ, ಮಾನವನ್ನು ಕಾಪಾಡಿದವ ಒಬ್ಬ, ಮಗುವಿನಂತೆ ಕಂಡವನೊಬ್ಬ.. ಹೀಗೆ ಮೂರು ಭಿನ್ನ ಮನೋದೃಷ್ಟಿಯಿಂದ ನೋಡಿದ ವ್ಯಕ್ತಿತ್ವವನ್ನು ಅಳೆದು ತೀರ್ಪು ನೀಡಿದ ವಿಕ್ರಮಾದಿತ್ಯ ಮಹಾರಾಜಾ ಪಾತ್ರದಲ್ಲಿ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರ ರಾವ್ ಅವರು. 


ಅಲ್ಪಾಯುಸ್ಸಿನ ಮಧುಮಾಲತಿ ಷೋಡಶ ವಯೋಮಾನದಲ್ಲಿ ಯೋಗ್ಯವರನಿಗೆ ಮದುವೆ ಮಾಡಿ ಕೊಟ್ಟರೆ ಆತನ ಪರಾಕ್ರಮದಿಂದ ಷೋಡಶ ವಯಸ್ಸಿನ ಕಂಟಕ ಕಳೆಯುವುದು ಎಂಬ ಗುರುಗಳ ಮಾತಿನಂತೆ ವ್ಯಾಪಾರೀ ಕೇಶವಗುಪ್ತ, ಆತನ ಮಡದಿ ಹಾಗು ಮಗ ಈ ಮೂವರಿಗೂ ಭಿನ್ನವಾದ ಅನುಭವ ಬಂದು ಮಧುಮಾಲತಿಯನ್ನು ರಕ್ಷಿಸಿದ್ದು ತಿಳಿದು ಆತನೇ ಸರಿಯಾದ ಜೋಡಿ ಎಂದು ಮೂವರು ನಿರ್ಧರಿಸುತ್ತಾರೆ. ಆದರೆ ಅವರಿಗೆ ತಿಳಿಯದ ವಿಷಯ ಎಂದರೆ ಆ ಮೂವರು ಗುಣಾತ್ಮರು ಒಂದೇ ಗುರುವಿನ ಬಳಿ ಶಿಕ್ಷಣ ಪಡೆದ ಜೀವದ ಗೆಳೆಯರು ಎಂದು. 

ಒಬ್ಬ ಜ್ಯೋತಿಶ್ಶಾಸ್ತ್ರದಲ್ಲಿ ನಿಪುಣ 

ಒಬ್ಬ ವೀರ ಪರಾಕ್ರಮಿ   

ಇನ್ನೊಬ್ಬ ಅಥರ್ವ ವಿದ್ಯೆ ಅಂದರೆ ಮಾಯಾಜಾಲದಲ್ಲಿ ನಿಷ್ಣಾತ. 

ಮಧುಮಾಲತಿಯನ್ನು ಮಂತ್ರವಾದಿಯಿಂದ ರಕ್ಷಿಸುವ ಘಟನೆಯಲ್ಲಿ ಜ್ಯೋತಿಷಿ ತಂದೆಯಂತೆ ಕಾಪಾಡುತ್ತಾನೆ  

ಮಾನಹಾನಿಯಿಂದ ಪರಾಕ್ರಮಿ ರಕ್ಷಣೆ ಮಾಡಿರುತ್ತಾನೆ 

ಮಗುನಂತೆ ತನ್ನ ತಾಯಿಯನ್ನು ರಕ್ಷಿಸುವ ಹಾಗೆ ಅಥರ್ವ ವಿದ್ಯೆ ಕಲಿತವನು ರಕ್ಷಿಸಿರುತ್ತಾನೆ. 

ಒಬ್ಬ ತಂದೆಯಂತೆ, ಒಬ್ಬ ಪತಿಯಂತೆ ಒಬ್ಬ ಮಗನಂತೆ ಕಾಪಾಡಿರುವುದರಿಂದ ಆ ವೀರಪರಾಕ್ರಮಿಯೇ ಕೈ ಹಿಡಿಯಬೇಕು ಎಂದು ತೀರ್ಪು ನೀಡುತ್ತಾರೆ ವಿರ್ಕ್ರಮಾದಿತ್ಯ ಮಹಾರಾಜ. 

ಒಬ್ಬರಿಗಿಂತ ಒಬ್ಬರು ಪೈಪೋಟಿ ನೀಡಿ ಅಭಿನಯಿಸಿರುವ ಚಿತ್ರವಿದು. 

ಜ್ಯೋತಿಷಿಯಾಗಿ ಅರುಣ್ ಕುಮಾರ್.. ಮುದ್ದಾದ ರೂಪು, ಭಾಷ ಸ್ಪಷ್ಟತೆ, ಅಭಿನಯ 


ವೀರಪರಾಕ್ರಮಿಯಾಗಿ ದಕ್ಷ ಅಭಿನಯ, ಹೋರಾಟಗಳಲ್ಲಿ ಅದ್ಭುತ ಚಾಣಾಕ್ಷತೆಯಿಂದ ಮಿಂಚುವ ರಾಜಕುಮಾರ್ 



ಅಂಗೀಕಾ ಅಭಿನಯಕ್ಕೆ ಸದಾ ಹೆಸರಾಗಿರುವ ಉದಯಕುಮಾರ್ ಇಲ್ಲಿಯೂ ಕೂಡ ಸಂಭಾಷಣೆ ಮತ್ತು ಮುಖಭಾವದಿಂದ ಮಿಂಚುತ್ತಾರೆ. 


ವ್ಯಾಪಾರಿ ಕೇಶವ ಗುಪ್ತನಾಗಿ ಅಶ್ವಥ್ ಅವರದ್ದು ಸೊಗಸಾದ ಅಭಿನಯ. ಮಗಳ ಭವಿಷ್ಯ, ಮಗಳ ಬದುಕು, ಆ ತಳಮಳ, ಹೇಗಾದರೂ ಸರಿ ಮಗಳ ಭವಿಷ್ಯ ಮುಖ್ಯ ಎಂದು ಹಪಹಪಿಸುವ ತಂದೆಯ ಪಾತ್ರದಲ್ಲಿ  ಸೊಗಸಾದ ಅಭಿನಯ. 


ಅಶ್ವಥ್ ಅವರಿಗೆ ತಕ್ಕಂತೆ ತಾಯಿಯಾಗಿ ಜಯಶ್ರೀ ಅಭಿನಯ ಕಳೆಕಟ್ಟುತ್ತದೆ 


ಮಧುಮಾಲತಿಯ ಅಣ್ಣನಾಗಿ ರಂಗ ಉತ್ತಮ ಪಾತ್ರಪೋಷಣೆಯಿಂದ ಇಷ್ಟವಾಗುತ್ತಾರೆ. 


ಮಂತ್ರವಾದಿಯಾಗಿ ಎಂ ಪಿ ಶಂಕರ್ ಅಬ್ಬರಿಸುತ್ತಾರೆ. ಆ ಗಹಗಹಿಸುವ ನಗು, ಕ್ರೂರತೆ, ತಾನು ಆಳಿದರು ತನ್ನ ಕಾರ್ಯ ಸಾಧನೆ ನಿಲ್ಲಬಾರದು ಎಂದು ಹೋರಾಡುವ ಅವರ ಪಾತ್ರ ಚಿತ್ರದುದ್ದಕ್ಕೂ ಸೊಗಸಾಗಿ ಮೂಡಿಬಂದಿದೆ. 


ಮಂತ್ರವಾದಿಯ ಜೀ ಹೂಜೂರ್ ಪಾತ್ರಧಾರಿ ಪ್ರಚಂಡನಾಗಿ ಕುಪ್ಪುಸ್ವಾಮಿ ಕಡೆಯ ದೃಶ್ಯದ ತನಕ ಕಾಡುತ್ತಾರೆ. 


ರಾಜಕುಮಾರಿಯೆಂದರೆ ಹೀಗೆ ಇರಬೇಕು ಎನ್ನುವ ಹಾಗೆ ಅಭಿನಯ ನೀಡಿರುವ ಭಾರತಿ ಈ ಚಿತ್ರದಲ್ಲಿ ಮೊದಲ ಬಾರಿಗೆ ರಾಜಕುಮಾರ್ ಅವರಿಗೆ ನಾಯಕಿಯಾಗಿದ್ದಾರೆ. 


ಎಲ್ಲರಿಗೂ ಆವಕಾಶವಿರುವಂತೆ ಚಿತ್ರಕತೆ ಹೆಣೆದು ನಿರ್ದೇಶಿಸಿರುವ ಈ ಚಿತ್ರದ ಹೆಚ್ಚುಗಾರಿಕೆ ಇದೆ. ಪ್ರತಿ ಪಾತ್ರವೂ ಹೆಚ್ಚು ಇಲ್ಲ ಕಡಿಮೆಯೂ ಇಲ್ಲ. ಮೂವರು ಮಿತ್ರರಿಗೂ ಅಭಿನಯಕ್ಕೆ ಸಮಾನ ಅವಕಾಶ. ಮೂವರು ಮುದ್ದಾಗಿ ಕಾಣುತ್ತಾರೆ. ಸಂಭಾಷಣೆ ಹೇಳುವ ವೈಖರಿ, ಆಂಗೀಕ ಅಭಿನಯ, ಹಾಡುಗಳಲ್ಲಿ ತೋರುವ ತನ್ಮಯತೆ ಎಲ್ಲೂ ಹೆಚ್ಚಿಲ್ಲ ಕಡಿಮೆ ಇಲ್ಲ. 

ರಾಜಕುಮಾರ್ ಅವರು ಈ ಚಿತ್ರದ ಹೊತ್ತಿಗೆ ಎಪ್ಪತ್ತನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಕೂಡ ತಮ್ಮ ಪಾತ್ರದ ಅಳತೆಯನ್ನು ಅರಿತು ಸಹ ಕಲಾವಿದರ ಜೊತೆಯಲ್ಲಿ ಮನೋಜ್ಞ ಅಭಿನಯ ನೀಡಿರುವುದು ಅವರ ವೃತ್ತಿಪರತೆಯನ್ನು ತೋರಿಸುತ್ತದೆ. 

ಎಲ್ಲರಂತೆಯೇ ನಾನು ಎನ್ನುವ ಮನೋಭಾವ ಅವರ ಎಲ್ಲಾ ಚಿತ್ರಗಳಲ್ಲಿಯೂ ಕಂಡು ಬರುತ್ತದೆ.. ಈ ಚಿತ್ರ ಕೂಡ ಅದಕ್ಕೆ ಹೊರತಲ್ಲ.  ಸಹನಾಯಕರ ಜೊತೆಗಿನ ಹೊಂದಾಣಿಕೆಯ ಅಭಿನಯ, ಅವರ ಜೊತೆ ಪೈಪೋಟಿಯಂತೆ ನಟನೆ... ಇದೆಲ್ಲದರ ಜೊತೆ ಮುದ್ದಾಗಿ ಕಾಣುವ ಅವರ ವೇಷಭೂಷಣ. ಅದಕ್ಕೆ ತಕ್ಕ ಗಾಂಭೀರ್ಯ.. ರಾಜಕುಮಾರ್ ಒಬ್ಬ ನಟರಲ್ಲ ಬದಲಿಗೆ ಮೆಲ್ಲನೆ ತಯಾರಾಗುತ್ತಿರುವ ಒಂದು ಅಭಿನಯದ ವಿಶ್ವಕೋಶ ಎಂದು ಸಾರಿ ಸಾರಿ ಹೇಳುತ್ತದೆ. 

No comments:

Post a Comment