ಬಿ ಎಸ್ ರಂಗ ಅವರು ವಸಂತ್ ಪಿಚ್ಚರ್ ಲಾಂಛನದಲ್ಲಿ ನಿರ್ಮಿಸಿದ ಈ ಚಿತ್ರವನ್ನು ಚಿತ್ರರಂಗದ ಆರಂಭದ ದಿನಗಳಿಂದಲೂ ಒಂದಲ್ಲ ಒಂದು ರೀತಿ ತೊಡಗಿಸಿಕೊಂಡಿದ್ದ ಜಿ ವಿ ಅಯ್ಯರ್ ಅವರು.
ಈ ಚಿತ್ರ Anthony Hope ಅವರ ಇಂಗ್ಲಿಷ್ ಕಾದಂಬರಿ The Prisoner of Zendaಯಿಂದ ಪ್ರೇರೇಪಿತ ಅಂತ ವಿಕಿಪೀಡಿಯ ಹೇಳುತ್ತದೆ. ಯು ಟ್ಯೂಬಿನಲ್ಲಿ ಸಿಗದೇ ಸಿಡಿ ಸಿಕ್ಕಿರದೆ ಸ್ವಲ್ಪ ತಡವಾಯಿತು.. ಆದರೆ ಕಳೆದ ತಿಂಗಳು ಯು ಟ್ಯೂಬಿನಲ್ಲಿ ಸಿಕ್ಕ ಕಾರಣ.. ಜೊತೆಯಲ್ಲಿ ಸುಮಾರು ದೃಶ್ಯಗಳು ಜಂಪ್ ಆಗಿರುವ ಕಾರಣ ಚಿತ್ರ ಶೀರ್ಷಿಕೆ ಸರಿಯಾಗಿ ಸಿಗಲಿಲ್ಲ. ಆದ್ದರಿಂದ ಈ ಚಿತ್ರಕತೆಗೆ ಕಾದಂಬರಿ ಆಧಾರಿತವಾಗಿದೆ ಎನ್ನುವ ವಿಷಯ ಗೊತ್ತಾಗಲಿಲ್ಲ.
ಇರಲಿ ಜಗತ್ತಿನ ಕತೆಗಳು ಒಂದಲ್ಲ ಒಂದು ರೀತಿ ಹಲವಾರು ಕಡೆಯಿಂದ ಪ್ರೇರೇಪಿತವಾಗಿರೋದು ಸಹಜ.. ಜಿ ವಿ ಅಯ್ಯರ್, ಸದಾಶಿವ ಬ್ರಹ್ಮ ಮತ್ತು ಚಿ ಸದಾಶಿವಯ್ಯನವರ ಚಿತ್ರಕಥೆ ಹೊತ್ತು ಚಿತ್ರನಾಟಕ, ಸಂಭಾಷಣೆ ಮತ್ತು ನಿರ್ದೇಶನ ಹೊಣೆ ಹೊತ್ತವರು ಜಿ ವಿ ಅಯ್ಯರ್.
ಜಿ ಕೆ ವೆಂಕಟೇಶ್ ಅವರ ಸಂಗೀತ, ಪಿಬಿ ಶ್ರೀನಿವಾಸ್, ಎಸ್ ಜಾನಕೀ, ಪೀಠಾಪುರಂ ನಾಗೇಶ್ವರ ರಾವ್, ಎಲ್ ಆರ್ ಈಶ್ವರಿ ಅವರ ಗಾಯನ.. ಬಿ ಎನ್ ಹರಿದಾಸ್ ಅವರ ಛಾಯಾಗ್ರಹ ಈ ಚಿತ್ರಕ್ಕಿದೆ.
ರಾಜಕುಮಾರ್ ಅವರದ್ದು ದ್ವಿಪಾತ್ರ.. ಒಂದು ಪಾತ್ರ ರಾಜಕುವರನದ್ದು ಇನ್ನೊಂದು ಸಾಮಾನ್ಯ ಪ್ರಜೆ ಆದರೆ ಕಳ್ಳನ ಪಾತ್ರಧಾರಿ. ಅಧಿಕಾರ ದಾಹ ಹೆಚ್ಚಾದಾಗ ಅಪ್ಪ ಅಮ್ಮ ತಮ್ಮ ಬಂಧು ಬಳಗ ಯಾವುದು ಲೆಕ್ಕಕ್ಕೆ ಇರೋದಿಲ್ಲ. ಇದು ಸತ್ಯ ಎನ್ನುವ ಮಾತು ಈ ಚಿತ್ರದ ತಳಹದಿ.
ರೋಗಪೀಡಿತ ರಾಜ ತನ್ನ ಮುಂದಿನ ಉತ್ತರಾಧಿಕಾರಿಯನ್ನಾಗಿ ತನ್ನ ಹಿರಿಯ ಹೆಂಡತಿಯ ಮಗ ಸಂಜಯನೇ ( ರಾಜಕುಮಾರ್) ಆಗಬೇಕು ಎಂದು ರಾಜಾಜ್ಞೆ ಬರೆದಿರುತ್ತಾನೆ. ಆತನ ಕಿರಿಯ ರಾಣಿಯ ಮಗ ದುರ್ಜಯ (ಎಂ ಪಿ ಶಂಕರ್) ಆತನೇ ಹಿರಿಯನಾಗಿದ್ದರೂ ಅಧಿಕಾರದ ಲಾಲಸೆ, ಪ್ರಜಾಪೀಡಕನಾಗಿದ್ದರಿಂದ ಆತ ರಾಜನಾಗಬಾರದು ಎಂದು ಈ ರೀತಿ ಮಾಡಿರುತ್ತಾನೆ.
ಆದರೆ ಸಂಜಯನಿಗೆ ಅಧಿಕಾರ ಆಸೆಯಿರೋಲ್ಲ ಜೊತೆಯಲ್ಲಿ ತನ್ನ ಅಣ್ಣ ಅಧಿಕಾರಕ್ಕಾಗಿ ತನ್ನ ಅಪ್ಪ ಅಮ್ಮನನ್ನು ಮತ್ತೆ ತನ್ನನ್ನು ಪೀಡಿಸುತ್ತಾ ಇರೋದರಿಂದ.. ಅಧಿಕಾರದ ಆಸೆ ಬಿಟ್ಟು.. ಮದಿರೆಯಲ್ಲಿ ಆ ದುಃಖವನ್ನು ಮರೆಯಲು ಪ್ರಯತ್ನ ಮಾಡುತ್ತಿರುತ್ತಾನೆ..
ಅರಮನೆಗೆ ಅಚಾನಕಕ್ಕಾಗಿ ಬರುವ ಕಳ್ಳನ ಪಾತ್ರಧಾರಿಯ ಹೆಸರು ರಂಗ (ರಾಜಕುಮಾರ್ ಎರಡನೇ ಪಾತ್ರ) ನಿಗೆ ಸಂಜಯನನ್ನ ಮುಗಿಸಿ, ತಾನೇ ರಾಜನಾಗುವ ಷಡ್ಯಂತ್ರ ಮಾಡುವ ವಿಚಾರ ತಿಳಿದು.. ಸಂಜಯನನ್ನು ಈ ಷಡ್ಯಂತ್ರದಿಂದ ಕಾಪಾಡುವ ಪಣ ತೊಡುತ್ತಾನೆ.. ಅದೇ ಚಿತ್ರದ ಆಶಯ ಮತ್ತು ವಿಷಯವಾಗುತ್ತದೆ.
ಈ ಹಾದಿಯಲ್ಲಿ ಮಂತ್ರಿ ತನ್ನ ಪ್ರಾಣವನ್ನು ಪಣವಾಗಿಟ್ಟು ಸಂಜಯನನ್ನು ರಕ್ಷಿಸುತ್ತಾರೆ.. ಸಂಜಯ ವೇಷಮರೆಸಿಕೊಂಡು ಹಳ್ಳಿಯಲ್ಲಿ ಸಾಮಾನ್ಯನಾಗಿ ವಾಸಿಸಲು ಶುರು ಮಾಡುತ್ತಾರೆ.
ಇತ್ತ ವೇಷಧಾರಿ ರಂಗ .. ದುರ್ಜಯನ ಮಾತನ್ನು ಕೇಳುತ್ತಿದ್ದೇನೆ ಎಂದು ನಂಬಿಸುತ್ತಲೇ ದುರ್ಜನನ್ನು ಹಣಿಯಲು ಉಪಾಯ ಮಾಡುತ್ತಾನೆ.. ಕಡೆಯಲ್ಲಿ ರಂಗನ ಕಿಲಾಡಿತನದಿಂದ ಕಿಲಾಡಿರಂಗನಾಗಿ ಸಂಜಯನನ್ನು ಉಳಿಸಿ, ರಕ್ಷಿಸಿ, ರಾಜ್ಯವನ್ನು ರಕ್ಷಣೆ ಮಾಡಿ, ದುರ್ಜಯನ ಮರಣಕ್ಕೆ ಕಾರಣನಾಗುತ್ತಾನೆ.
ಇದೊಂದು ಸರಳ ಕತೆ.. ಅಷ್ಟೇ ಸರಳವಾಗಿ ಚಿತ್ರಿಸಿದ್ದಾರೆ. ಅನವಶ್ಯಕ ದೃಶ್ಯಗಳಾಗಲಿ, ಹಾಡುಗಳಾಗಲಿ ಇಲ್ಲದೆ ನೇರವಾಗಿ ಕತೆ ಹೇಳುತ್ತಾ ಯಾವುದೇ ವಿಧವಾದ ತಿರುವುಗಳನ್ನು ಕೊಡದೆ.. ಸೀದಾ ಕತೆ ಹೇಳುತ್ತಾ ಅಂತ್ಯದತ್ತ ನೆಡೆಯುವುದು ಈ ಚಿತ್ರದ ವಿಶೇಷ.
ಎರಡೂ ಪಾತ್ರಗಳಲ್ಲಿ ರಾಜಕುಮಾರ್ ಅವರ ಅಭಿನಯ ವಿಭಿನ್ನವಾಗಿದೆ. ರಾಜನಾಗಿ ಗತ್ತು ಗಾಂಭೀರ್ಯ ತೋರುವ.. ಮಾತುಗಳಲ್ಲಿ ತೂಕವಿಡುತ್ತಾ ಹಾಗೆಯೇ ಹಳ್ಳಿಗನಾಗಿ ನಿಂತಾಗ ಅದೇ ಮುಗ್ಧತೆ ತೋರುವ ಪಾತ್ರ ಒಂದು ಕಡೆ.. ಅದೇ ರಂಗನ ಪಾತ್ರದಲ್ಲಿ ಕಿಲಾಡಿತನ, ಗಟ್ಟಿತನ, ಧೈರ್ಯ, ಚಾಲಾಕಿತನ ಎಲ್ಲವನ್ನೂ ಸೇರಿಸಿಕೊಂಡಿದ್ದಾರೆ..
ಜಯಶ್ರೀ ಅಮ್ಮನಾಗಿ ಕೆಲವು ದೃಶ್ಯಗಳಲ್ಲಿ ಬಂದರೂ ತಾಯಿಮಮತೆಯ ತೋರುವ ದೃಶ್ಯಗಳಲ್ಲಿ ರಾಜಕುಮಾರ್ ಅವರ ಜೊತೆಯಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ
ಚಿತ್ರದ ಮಧ್ಯದಲ್ಲಿಯೇ ಮರಣ ಹೊಂದುವ ಮಂತ್ರಿಯಾಗಿ ರಾಘವೇಂದ್ರರಾವ್ ಅವರ ಪಾತ್ರ ಪೋಷಣೆ ಚೆನ್ನಾಗಿದೆ.
ಎಂ ಪಿ ಶಂಕರ್ ಖಳನಾಗಿ. ಅವರ ಪಾತ್ರಾಭಿನಯ ಸೊಗಸಾಗಿದೆ
ಉಳಿದಂತೆ ನರಸಿಂಹರಾಜು, ಜಯಂತಿ, ಬಿವಿ ರಾಧಾ, ಬೆಂಗಳೂರು ನಾಗೇಶ್, ದಿನೇಶ್ ಪಾತ್ರಗಳು ಚಿತ್ರದ ವೇಗಕ್ಕೆ ಅನುಕೂಲವಾಗಿವೆ.
ಇದೊಂದು ಸರಳ ಸಾಮಾಜಿಕ ಚಿತ್ರ...