Sunday, April 20, 2025

ಮಕ್ಕಳ ಕಾಲದಿಂದಲೂ ಕೇಳಿ ಬೆಳೆದ ಕಥೆ ಬಾಲನಾಗಮ್ಮ 1966 (ಅಣ್ಣಾವ್ರ ಚಿತ್ರ ೭೧/೨೦೭)

ಓಡಿ ಓಡಿ ಸುಸ್ತಾಗಿದ್ದಾಗ ಮತ್ತೆ ಸ್ವಲ್ಪ ಓಡಬೇಕು ಅಂತ ಅಪ್ಪಣೆ ಬಂದಾಗ.. ಮೊದಲಿದ್ದ ಉತ್ಸಾಹ ಇರುತ್ತದೆ.. ಆದರೆ ದೇಹ ಕೆಲವೊಮ್ಮೆ ಅಲ್ಪ ವಿರಾಮ ಕೇಳುತ್ತದೆ.. ಆಗ ಮುಂದೆ ಇರುವ ಬದಲು ಕೊಂಚ ಹಿಂದೆ ಬಂದು ಸಹಕಾರ ನೀಡಿ ನೆಡೆಯುತ್ತಿರುವ ಓಟದ ಕಾರ್ಯಕ್ರಮಕ್ಕೆ ಬಲ ನೀಡೋದು.. 

ಈ ನಾಲ್ಕು ವರ್ಷಗಳು ರಾಜಕುಮಾರ್ ಅವರ ಪಾಲಿಗೆ ಬಿಡುವಿಲ್ಲದ ವರ್ಷಗಳು ಸರಿ ಸುಮಾರು ೪೬ ಚಿತ್ರಗಳು.. ಅಬ್ಬೊ.. ಆದರೆ ಅಷ್ಟೊಂದು ಸಿನೆಮಾಗಳಲ್ಲಿ ಅಭಿನಯಿಸಿದರೂ ಅಭಿನಯದಲ್ಲಿ ಯಾವುದೇ ರಾಜಿಯಿಲ್ಲ.. ತನ್ನ ಪಾತ್ರ ಪ್ರಮುಖವೋ, ಪ್ರಾಮುಖ್ಯತೆ ಇಲ್ಲವೋ, ಹೆಚ್ಚು ದೃಶ್ಯಗಳು ಇಲ್ಲವೋ ಯೋಚಿಸಿದೆ ಸಿನೆಮಾರಂಗದ ಏಳಿಗೆಗೆ ತಮ್ಮದೇ ರೀತಿಯಲ್ಲಿ ಕಾಣಿಕೆ ಕೊಟ್ಟವರು ಅವರು. 

ಇಷ್ಟೇಕೆ ಪೀಠಿಕೆ ಅಂತೀರಾ.. ಈ ಸಿನಿಮಾದಲ್ಲಿ ಅವರ ಪಾತ್ರ ಬರೋದು ಸುಮಾರು  ಐವತ್ತ ನಾಲ್ಕು ನಿಮಿಷಗಳಾದ ಮೇಲೆ.. ಅಂದರೆ ಚಿತ್ರದ ಎರಡೂವರೆ ಘಂಟೆಯಲ್ಲಿ ಅರ್ಧಭಾಗ ಎನ್ನಬಹುದು.. ನಂತರವೂ ಕೂಡ ಸುಮಾರು ಒಂದು ಎಂಟು ಹತ್ತು ದೃಶ್ಯಗಳು ಇರಬಹುದು.. ಅದರಲ್ಲೂ ಸಹಕಲಾವಿದರ ಜೊತೆಯಲ್ಲಿಯೇ ಹೆಚ್ಚು.. ಏಕಾಂಗಿ ದೃಶ್ಯಗಳು ಇಲ್ಲವೇ ಇಲ್ಲ.. ಮೊದಲೇ ಈ ಕಥೆಯ ಹೆಸರಿನಂತೆ ಬಾಲನಾಗಮ್ಮನ ಪಾತ್ರದ ಸುತ್ತಲೇ ಸುತ್ತುವ ಕಥೆ.. ಆದ್ದರಿಂದ ರಾಜಕುಮಾರ್ ಅವರ ಪಾತ್ರ ಪೋಷಣೆಗೆ ಹೆಚ್ಚು ಅವಕಾಶವಿಲ್ಲ.. ಆದರೂ ಅವರ ಪಾತ್ರವನ್ನು ಕೊಂಚ ಬೆಳೆಸಿದ್ದಾರೆ.. ವಾಣಿಜ್ಯ ದೃಷ್ಟಿಯಿಂದ ಇರಬಹದು.  ಆದರೆ ನಮಗೆ ಆ ಕಾಲದ ಜಾನಪದ ಕಥೆಯನ್ನು ನೋಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯವೇ ಹೌದು..



 
ರಾಜಕುಮಾರ್ ರಾಜಕುಮಾರನಾಗಿಯೇ ಈ ಚಿತ್ರದಲ್ಲಿ ಇರುತ್ತಾರೆ.. ಸರಳವಾದ ಅಭಿನಯ.. ಮುದ್ದಾಗಿ ಕಾಣುವ ಅವರ ವೇಷಭೂಷಣ. ಮಾತಿನ ಧಾಟಿ.. ಎಲ್ಲವೂ ಅವರ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದೆ.. ರಾಜಕುಮಾರ್ ಇಲ್ಲದ ಸಿನೆಮಾವನ್ನು ಊಹಿಸಿಕೊಳ್ಳದ ಕಾಲ ಎಂದು ಆ ಕಾಲದ ಮಾಧ್ಯಮ ಹೇಳಿದ್ದು ಓದಿದ ನೆನಪು.. 

ಪೋಷಕ ಪಾತ್ರವಲ್ಲ ಆದರೆ ನಾಯಕ ಪಾತ್ರಕ್ಕೆ ಹೆಚ್ಚು ಅಭಿನಯ ಅವಕಾಶವಿಲ್ಲ.. ಆದರೂ ಅವರ ನಟನಾ ಹಸಿವು ಈ ಚಿತ್ರದಲ್ಲಿ ಮುಂದುವರೆದಿದೆ.. 


ಸಪ್ತಸಾಗರದಾಚೆ ದುರ್ಗಮ ಹಾದಿಯಲ್ಲಿ ದಟ್ಟ ಗೊಂಡಾರಣ್ಯದ ಮಧ್ಯೆ ಗವಿಯಲ್ಲಿ ಪಂಜರದ ಗಿಳಿಯಲ್ಲಿ ತನ್ನ ಪ್ರಾಣ ಇಟ್ಟು.. ತನ್ನ ಮಾಯಾವಿ ವಿದ್ಯೆಯಿಂದ ಜಗತ್ತನ್ನೇ ವಶಮಾಡಿಕೊಳ್ಳಲು ಹಂಬಲಿಸುವ ಮಾಯಾ ಮರಾಠಿ ಪಾತ್ರದಲ್ಲಿ ಉದಯಕುಮಾರ್ ಝಲ್ ಎನ್ನಿಸುತ್ತಾರೆ. ಆ ಅಭಿನಯ, ಗತ್ತು, ಧ್ವನಿ.. ಕಣ್ಣುಗಳು.. ಅವರ ವೇಷಭೂಷಣಕ್ಕೆ ಒಳ್ಳೆಯ ಸಾತ್ ಕೊಟ್ಟಿದೆ. 


ಗೊಂಬೆ ಎಂದರೆ ಗೊಂಬೆ ಅನ್ನಿಸುವ ರಾಜಶ್ರೀ ಈ ಚಿತ್ರದ ನಾಯಕಿ ಬಲನಾಗಮ್ಮನ ಪಾತ್ರಧಾರಿ. 


ಉಳಿದಂತೆ ಆರಂಭದಲ್ಲಿ ಕಾಣಿಸಿಕೊಳ್ಳುವ ಬಾಲಕೃಷ್ಣ, ಪಂಡರಿಬಾಯಿ, ಕಲ್ಪನಾ, ರಮಾದೇವಿ, ವಿ. ನಾಗಯ್ಯ, ಚಿತ್ರಕಥೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ. 







ಸುಮಾರು ಚಿತ್ರದ ಅಂತ್ಯದ ವೇಳೆ ಬರುವ ಮಾಸ್ಟರ್ ಬಾಬು ಅರ್ಥಾತ್ ಬಾಲನಾಗಮ್ಮನ ಮಗನ ಪಾತ್ರಧಾರಿ ಬಾಲವರ್ದನ ಗಮನ ಸೆಳೆಯುತ್ತಾನೆ. ಮರಿ ರಾಜಕುಮಾರನಿಗಿರಬೇಕಾದ ಗತ್ತು, ಮಾತುಗಳು, ಚಾಕಚಕ್ಯತೆ, ಕಣ್ಣುಗಳು ಎಲ್ಲವೂ ಸೊಗಸಾಗಿ ಮೇಳೈಸಿದೆ. 


ನರಸಿಂಹರಾಜು ಅವರ ಪಾತ್ರ ಹಾಸ್ಯ ಉಕ್ಕಿಸುತ್ತದೆ.. ಎರಡು ಹೆಂಡಿರ ಗಂಡನಾಗಿ ಪಡುವ ಪಾಡು, ಇದರ ಜೊತೆಯಲ್ಲಿ ಜವಾಬ್ಧಾರಿ ಸ್ನೇಹಿತನಾಗಿ, ಕೋಟೆಯ ರಕ್ಷಣೆ ಜವಾಬ್ಧಾರಿ ಹೊತ್ತ ಪಾತ್ರದಲ್ಲಿ ಮಿಂಚುತ್ತಾರೆ. ಅನಿಸುತ್ತದೆ ನಾಯಕನಿಗಿಂತ ಇವರಿಗೆ ಕೊಂಚ ಹೆಚ್ಚು ದೃಶ್ಯಗಳಿವೆ ಅಂತ :-)

ತಮ್ಮ ಹಾದಿಯಲ್ಲಿ ಬಂದ ಪ್ರತಿಯೊಂದು ಹೂವನ್ನು ಮಾಲೆಗೆ ಸೇರಿಸಿಕೊಂಡು ಮಿಂಚುತ್ತಾ ನೆಡೆಯುತ್ತಿರುವ ರಾಜಕುಮಾರ್ ಅವರ ಮುಂದಿನ ಚಿತ್ರದಲ್ಲಿ ಸೇರೋಣ!

No comments:

Post a Comment