Saturday, April 12, 2025

ಮಂತ್ರ ಹಾಕಿದಂತೆ ಪರಕಾಯ ಪ್ರವೇಶ ಮಾಡಿದ ಮಂತ್ರಾಲಯ ಮಹಾತ್ಮೆ 1966 (ಅಣ್ಣಾವ್ರ ಚಿತ್ರ ೬೯/೨೦೭)

ಒಂದು ನಾನು ನಾನಾಗಿರಬಹುದು.. ಇಲ್ಲವೇ ನಾನು ಏನಾದರೂ ಆಗಬಹುದು.. ಇದು ಎರಡು ಬಿಟ್ಟು ಇನ್ನೊಂದು ಸಾಧ್ಯತೆ ಇದೆ.. ಅದಕ್ಕೆ ದೈವ ಅನುಗ್ರಹದ ಜೊತೆಗೆ ಆ ಶಕ್ತಿಗೆ ಶರಣಾಗಬೇಕು.. 

ರಾಜಕುಮಾರ್ ಅವರು ಈ ಚಿತ್ರದಲ್ಲಿ ಆ ಮೂರನೇ ಹಂತದಲ್ಲಿ ವಿಜೃಂಭಿಸಿದ್ದಾರೆ.. ಈ ರೀತಿಯ ಸಂಕೀರ್ಣ ಪಾತ್ರಗಳನ್ನ ಹಿಂದಿನ ಅನೇಕ ಚಿತ್ರ ಪಾತ್ರಗಳಲ್ಲಿ ಮಾಡಿಕೊಂಡು ಬಂದಿದ್ದರು.. ಆದರೆ ಇಲ್ಲಿನ ಪಾತ್ರ ವಿಶೇಷ ಮತ್ತು ಅನೇಕಾನೇಕ ಭಕ್ತಾದಿಗಳು ತಮ್ಮ ಅಂತರಂಗ ಶಕ್ತಿ ಎಂದೇ ನಂಬಿ ಶತಮಾನಗಳಿಂದಲೂ ಮತ್ತು ಮುಂದಿನ ಶತಮಾನಗಳಲ್ಲೂ ಅನುಸರಿಸುವ.. ಭಕ್ತಿಯಿಂದ ನೆಡೆದುಕೊಳ್ಳುವ ಮಂತ್ರಾಲಯದ ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರ.. 

ಇಲ್ಲಿ ರಾಜಕುಮಾರ್ ಅಭಿನಯಿಸಿಲ್ಲ ಬದಲಿಗೆ ಅನೇಕ ಪವಾಡಗಳನ್ನು ಮಾಡಿ ರಾಘವೇಂದ್ರ ಸ್ವಾಮಿಗಳು ಇಲ್ಲಿ ಇನ್ನೊಂದು ಪವಾಡವನ್ನು ಮಾಡಿ.. ರಾಜಕುಮಾರ್ ಅವರ ಅಭಿನಯದೊಳಗೆ ಸೇರಿಕೊಂಡುಬಿಟ್ಟಿದ್ದಾರೆ.. ರಾಜಕುಮಾರ್ ಅವರು ಪರಕಾಯ ಪ್ರವೇಶ ಮಾಡಿಲ್ಲ ಬದಲಿಗೆ ರಾಯರೇ ರಾಜಕುಮಾರ್ ಅವರ ಬೆನ್ನ ಹಿಂದೆ ನಿಂತು ಈ ಪಾತ್ರವನ್ನು ಅಭಿನಯ ಮಾಡುವಂತೆ ಶಕ್ತಿ ನೀಡಿದ್ದಾರೆ ಅಂದರೆ ಇದು ಅತಿಶಯೋಕ್ತಿ ಅನ್ನೋಕೆ ಆಗೋಲ್ಲ.. ಕಾರಣ ಕಟ್ಟು ನಿಟ್ಟಾದ ವ್ರತವನ್ನು ಅನುಸರಿಸಿ ಈ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 

ಮಠದ ಜವಾಬ್ಧಾರಿಯನ್ನು ಹೊತ್ತು ನಿಭಾಯಿಸುವಾಗ ಬೇಕಾದ ಸಂಯಮ..  ಸ್ವಾಮಿಗಳಿಗೆ ಇರಬೇಕಾದ ತಾಳ್ಮೆ, ಅದಕ್ಕೆ ತಕ್ಕಂತೆ ತಮ್ಮ ಸಂಭಾಷಣೆಯ ಶೈಲಿಯನ್ನು ಒಗ್ಗಿಸಿಕೊಂಡಿರುವುದು.. ಅವರ ದೇಹದಾರ್ಢ್ಯ.. ಮುಖಭಾವ.. ಅದರಲ್ಲೂ ಯತಿಗಳಾದ ಮೇಲೆ ಗಡ್ಡಧಾರಿಯಾಗಿ ನೀಡಿದ ಅಭಿನಯ.. ಅಬ್ಬಬ್ಬಾ ಅನಿಸುತ್ತದೆ.. ರಾಯರನ್ನು ನೋಡಲೇ ಬೇಕಿಲ್ಲ.. ಈ ಸಿನೆಮಾವನ್ನು ಒಮ್ಮೆ ನೋಡಿದರೆ ಸಾಕು.. ಗುರು ರಾಘವೇಂದ್ರರೆ ಕಣ್ಣೆದುರು ನಿಂತಂತೆ ಭಾಸವಾಗುತ್ತದೆ. 

ನಮಗರಿವಿಲ್ಲದೆ ಮನಸ್ಸು ಕೈ ಮುಗಿಯುತ್ತದೆ. 

ಇಲ್ಲಿನ ಪ್ರತಿಯೊಂದು ಪಾತ್ರವೂ ಜೀವಿಸಿದೆ.. 

ಉದಯಕುಮಾರ್,ಆದವಾನಿ ಲಕ್ಷ್ಮಿದೇವಿ, ಕಲ್ಪನಾ, ಜಯಂತಿ ತಮ್ಮ ಪುಟ್ಟ ಪಾತ್ರಗಳಲ್ಲಿ ಸಲೀಸಾಗಿ ನಟಿಸಿದ್ದಾರೆ..

ಚಿತ್ರದ ಸುಮಾರು ದೃಶ್ಯಗಳಲ್ಲಿ ಬರುವ ಸುಧೀಂದ್ರ ತೀರ್ಥ ಪಾತ್ರದಲ್ಲಿ ಎಚ್ ರಾಮಚಂದ್ರ ಶಾಸ್ತ್ರೀ ಜೀವ ತುಂಬಿದ ಅಭಿನಯ ನೀಡಿದ್ದಾರೆ.. 

ಈ ಚಿತ್ರದ ಬಗ್ಗೆ ಬರೆದಷ್ಟು ಮುಗಿಯೋಲ್ಲ.. 

ಸುಶ್ರಾವ್ಯ ಸಂಗೀತ ನೀಡಿದ ರಾಜನ್ ನಾಗೇಂದ್ರ ಜೋಡಿ 

ಗೀತೆಗಳನ್ನು ರಚಿಸಿದ ಜಿ ವಿ ಅಯ್ಯರ್ 

ರಾಯರೇ ರಚಿಸಿದ ಇಂದು ಎನಗೆ ಗೋವಿಂದ ಹಾಡಿಗೆ ಸುಮಧುರ ಸಂಗೀತ ನೀಡಿದ್ದಾರೆ ಅಷ್ಟೇ ಸೊಗಸಾಗಿ ಪಿ ಬಿ ಶ್ರೀನಿವಾಸ್ ಅವರ ಗಾಯನ ಮನಸ್ಸೆಳೆಯುತ್ತದೆ. 

ಜಗಜ್ಯೋತಿ ಫಿಲಂಸ್ ಲಾಂಛನದಡಿ ತಯಾರಾದ ಚಿತ್ರಕ್ಕೆ 

ಹಾಡುಗಳಿಗೆ ಪಿ ಶ್ರೀನಿವಾಸ್, ಎಸ್ ಜಾನಕೀ, ಪಿ ಲೀಲಾ ಎಲ್ ಆರ್ ಈಶ್ವರಿ ಸಿ ಎಸ್ ಸರೋಜಿನಿ ಬೆಂಗಳೂರು ಲತಾ ಮತ್ತು ವೀರಮಣಿ ತಮ್ಮ ಧ್ವನಿ ನೀಡಿದ್ದಾರೆ. 

ಬಿ ದೊರೈರಾಜ್ ಛಾಯಾಗ್ರಹಣ ಮತ್ತು ಅವರ ಸ್ನೇಹಿತ ಭಗವಾನ್ ಸಹ ನಿರ್ದೇಶನ  ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. 

ಟಿ ವಿ ಸಿಂಗ್ ಠಾಕೂರ್ ಜೊತೆಗೆ ದೊರೈರಾಜ್ ಮತ್ತು ಭಗವಾನ್ ನಿರ್ಮಾಪಕರಾಗಿದ್ದಾರೆ. 

ನಿರ್ದೇಶನವನ್ನು ಟಿ ವಿ ಸಿಂಗ್ ಠಾಕೂರ್ ನೋಡಿಕೊಂಡಿದ್ದಾರೆ. 










No comments:

Post a Comment