Sunday, March 23, 2025

ಮೀಡಿಯಾದಲ್ಲಿ ಕಾಣದ ಚಿತ್ರ ಪತಿವ್ರತ 1965 (ಅಣ್ಣಾವ್ರ ಚಿತ್ರ ೬೮/೨೦೭)

ಬದಲಾದ ಕಾಲದಲ್ಲಿ ಕೆಲವು ಅನರ್ಘ್ಯ ರತ್ನಗಳು ಹೊಳಪು ಕಳೆದುಕೊಂಡರೂ ಪರವಾಗಿಲ್ಲ ಆದರೆ ಕಾಣದೆ ಹೋದರೆ ಬೇಸರವಾಗುತ್ತದೆ ..

೧೯೬೫ ಇಸವಿ ರಾಜಕುಮಾರ್  ಅವರ ಚಿತ್ರಜೀವನದ ಒಂದು ಪರ್ವಕಾಲ..  ಈ ವರ್ಷದಲ್ಲಿ ಅವರ ಹಲವಾರು ಚಿತ್ರಗಳು ವಿಭಿನ್ನವಾಗಿದ್ದವು ಮತ್ತು ವಿಶೇಷವಾಗಿದ್ದವು. 

ಆ ವರ್ಷದಲ್ಲಿ ಬಂದ  ಇನ್ನೊಂದು ಸಿನಿಮಾ ಪತಿವ್ರತ.. ಆದರೆ ಸಿನಿಮಾದ ಪ್ರಿಂಟ್ ಯು ಟ್ಯೂಬ್, ಸಾಮಾಜಿಕ ತಾಣ, ಸಿಡಿಗಳು ಯಾವುದು ಸಿಗದ ಕಾರಣ.. ಸಿಕ್ಕ ಮೇಲೆ ನೋಡಿ ಬರೆಯುವ ಕಾರ್ಯ ನೋಡುವೆನು. 

ಸುಮಾರು ಆರು ವರ್ಷಗಳಲ್ಲಿ ಚಿತ್ರೀಕರಣಗೊಂಡ ಚಿತ್ರ.. ಅಂದರೆ ೧೯೫೯ರಲ್ಲಿ ಶುರುವಾದ ಚಿತ್ರ ಮುಗಿದಿದ್ದು ೧೯೬೫ ರಲ್ಲಿ.. 

ಪಿ ಎಸ್ ಮೂರ್ತಿ ಅವರ ನಿರ್ದೇಶನದಲ್ಲಿ ಎಮ್ ಎನ್ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಮೂಡಿಬಂದ ಚಿತ್ರ. 

ಸಂಗೀತ ಟಿ ಎ ಮೋತಿ ಮತ್ತು ಛಾಯಾಗ್ರಹಣ ಟಿ ಎಲ್ಲಪ್ಪನ್. 

ರಾಜಕುಮಾರ್ ಅವರ ಜೊತೆ ಉದಯಕುಮಾರ್, ಹರಿಣಿ ಮುಂತಾದವರು ಇದ್ದಾರೆ. ಚಿತ್ರದ ಪೂರ್ಣ  ವಿವರ ಸಿಗುತ್ತಿಲ್ಲ ಸಿಗುವುದು ಕಷ್ಟ ಸಾಧ್ಯ ಎನ್ನುತ್ತಾರೆ ಸಿಕ್ಕ ವಿವರಗಳು 

ಇರಲಿ ಕೆಲವು ಚಿತ್ರಗಳು ಮರು ಬಿಡುಗಡೆ ಭಾಗ್ಯ ಕಾಣದಿರುವುದು ಇದಕ್ಕೆ ಕಾರಣ ಅನ್ನಬಹುದು. 

ಮತ್ತೆ ಮುಂದಿನ ಚಿತ್ರದಲ್ಲಿ ಸಿಗೋಣ..  





 

Saturday, March 22, 2025

ಕುಟುಂಬದ ಹುಚ್ಚಿಡಿಸುವ ಸಮಸ್ಯೆಯನ್ನು ಹುಚ್ಚು ಹಿಡಿಸಿಕೊಂಡು ಬಿಡಿಸಿಕೊಳ್ಳುವ ಮದುವೆ ಮಾಡಿ ನೋಡು 1965 (ಅಣ್ಣಾವ್ರ ಚಿತ್ರ ೬೭/೨೦೭)

ಸುಮಾರು ಐವತ್ತು ನಿಮಿಷಗಳಾದ ಮೇಲೆ ತೆರೆಯ ಮೇಲೆ ಬರುವ ನಾಯಕ - ರಾಜಕುಮಾರ್ 

ನಾಯಕಿಯ ಹಿತಮಿತವಾದ ದೃಶ್ಯಗಳುಗೊಳೋ ಎಂದು ಅಳಬಹುದಾದ ದೃಶ್ಯಗಳ ಅನೇಕ ಸಾಧ್ಯತೆಗಳಿದ್ದರೂ  ಅದು ಇಲ್ಲ  - ಲೀಲಾವತಿ  

ಹಾಸ್ಯ ನಟರ ಗುಂಪು ಇದೆ ಆದರೆ ಹಾಸ್ಯ ಉಕ್ಕಿಸುವಷ್ಟು ದೃಶ್ಯಗಳಿಲ್ಲ - ದ್ವಾರಕೀಶ್, ರತ್ನಾಕರ್, ಗಣಪತಿ ಭಟ್, ನರಸಿಂಹರಾಜು

ಆ ಹೊತ್ತಿನ ಸಿನೆಮಾಗಳಲ್ಲಿ ಖಳ ಪಾತ್ರಗಳಿಗೆ ಹೆಸರಾದ ನಟರಿದ್ದರೂ ಆ ರೀತಿಯ ದೃಶ್ಯಗಳಿಲ್ಲ - ಉದಯಕುಮಾರ್ 

ಸಂಯಮ ನಟನೆಗೆ ಹೆಸರಾಗಿದ್ದ ನಟ ಕಟುವಾಗಿ ಮಾತಾಡುವ ದೃಶ್ಯಗಳಿದ್ದರೂ ಕೋಪ ತರಿಸುವಷ್ಟು ಕ್ಷುದ್ರತೆ ಇಲ್ಲ - ಆರ್ ನಾಗೇಂದ್ರರಾವ್ 

ಸ್ವಲ್ಪ ವಿಚಿತ್ರ ಆಂಗೀಕ ಅಭಿನಯ ತೋರುವ ಪೋಷಕ ನಟ ಇಡೀ ಚಿತ್ರದಲ್ಲಿ ಹರಡಿಕೊಂಡು ಚಿತ್ರಕ್ಕೆ ಅಗತ್ಯವಿರುವ ತಿರುವುದು ನೀಡುತ್ತಾರೆ - ಅಶ್ವಥ್ 

ತಾಯಿ ಪಾತ್ರದಲ್ಲಿ ಯಾವಾಗಲೂ ಅಮೋಘ ಅಭಿನಯ ನೀಡುವ ನಟಿ ಇಲ್ಲೂ ಕೂಡ ಸಮಯಮದ ಅಭಿನಯ - ಜಯಶ್ರೀ 

ಚಿತ್ರದ ಮೊದಲ ಅರ್ಧದಲ್ಲಿ ಚಟ್ ಪಟಾ ಮಾತಾಡುವ ಬಾಲ ಕಲಾವಿದ - ಮಾಸ್ಟರ್ ಬಸವರಾಜು 

ಸಣ್ಣ ಪಾತ್ರವಾದರೂ ಸುಮಾರು ದೃಶ್ಯಗಳಲ್ಲಿ ಎರಡೇ ಎರಡೇ ಸಾಲುಗಳು ಹೇಳುವ ಪಾತ್ರ - ರಮಾ  

ಘಟವಾಣಿ ಪಾತ್ರದಲ್ಲಿ ಯಾವಾಗಲೂ ವಿಜೃಂಭಿಸುವ ಪಾತ್ರ ತಾನು ಇರುವ  ದೃಶ್ಯಗಳನ್ನು ಅಲುಗಾಡಿಸಿವರು - ರಮಾದೇವಿ 

ಚುರುಕು ಸಂಭಾಷಣೆ ಮತ್ತುಗೀತೆಗಳು ಜೊತೆಯಲ್ಲಿ ನಿರ್ದೇಶನ - ಹುಣಸೂರ್ ಕೃಷ್ಣಮೂರ್ತಿ 

ಚಿತ್ರಕತೆ ಕೊಟ್ಟಿರುವ ಸಹ ನಿರ್ಮಾಪಕರಲ್ಲಿ ಒಬ್ಬರು - ನಾಗಿರೆಡ್ಡಿ 

ಉತ್ತಮ ಸಂಸ್ಥೆಯಿಂದ ಮೂಡಿ ಬಂದ ಚಿತ್ರ - ವಿಜಯ ಪ್ರೊಡಕ್ಷನ್ಸ್ 

ನಿರ್ಮಾಪಕರ ಜೋಡಿ - ನಾಗಿರೆಡ್ಡಿ ಚಕ್ರಪಾಣಿ 

ನಿಜ..  ವರದಕ್ಷಿಣೆ ಒಂದು ಸದಾ ಕಾಡುವ ಸಾಮಾಜಿಕ ಪಿಡುಗು.. ತನ್ನ ಅಕ್ಕನನ್ನು ಮದುವೆ ಮಾಡಿ ಕಳಿಸಿದ ಮೇಲೆ ತಾನು ಮದುವೆ ಆಗೋದು ಎಂಬ ತತ್ವ ಹೊಂದಿದ್ದ ತಮ್ಮ ಮನೆಯಲ್ಲಿನ ಒತ್ತಡದಿಂದ ಅಕ್ಕನಿಗೆ ವರ ಹುಡುಕಲು ಹೊರಡುವ ಈತ ಪರಿಸ್ಥಿತಿಯಿಂದ ಒತ್ತಡದಿಂದ ತನ್ನ ಮದುವೆಯಾಗಿ ನಂತರ ಅಕ್ಕನ ಮದುವೆಗೆ ದಾರಿ ಸಿಗುತ್ತದೆ.. 

ಆದರೆ ವರದಕ್ಷಿಣೆಯ ಭೂತ ಕಾಡಿ.. ಮದುವೆಯಾದರೂ ಗಂಡ ಹೆಂಡತಿ ಬೇರೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.. ಅನೇಕಾನೇಕ ಒತ್ತಡಗಳ ನಡುವೆ ಸಿನಿಮಾದ ಅಂತ್ಯದಲ್ಲಿ ವರನ ಅಪ್ಪ ತನ್ನ ತಪ್ಪನ್ನು ತಿದ್ದಿಕೊಂಡು ಮತ್ತೆ ಎಲ್ಲರೂ ಒಂದಾಗುತ್ತಾರೆ. 

ತಡವಾಗಿ ಬಂದರೂ ಬಂದ ಮೇಲೆ ಜಾದೂ ಅಭಿನಯ ನೀಡುವ ರಾಜಕುಮಾರ್.. ಅದರಲ್ಲೂ ತಂದೆಯನ್ನು ಎದುರಿಸಿ ನಿಲ್ಲಬೇಕು ಎನ್ನುವಾಗ ತೋರುವ ಅಭಿನಯ.. ಹುಚ್ಚನಂತೆ ಮಾತಾಡುತ್ತಾ, ಹುಚ್ಚನ ಹಾಗೆ ಅಭಿನಯಿಸುವುದು.. ಮತ್ತೆ ಚಿತ್ರದ ಅಂತ್ಯದಲ್ಲಿ ರೌದ್ರಾವತಾರ ತೋರುವ ಅಭಿನಯ ಸೊಗಸು. 

ನಾಯಕಿಯ ಪಾತ್ರದಲ್ಲಿ ಲೀಲಾವತಿ ಶುಶ್ರೂಷೆ ಮಾಡುವ ದಾದಿಯಾಗಿ ಮನಸೆಳೆಯುತ್ತಾರೆ. 

ಅಶ್ವಥ್ ಒಂದು ರೀತಿಯ ಭಿನ್ನ ಅಭಿನಯ.. ತನ್ನ ಸ್ಥಿತಿ ಸರಿಯಿಲ್ಲದಿದ್ದರೂ ಇತರರ ಸಮಸ್ಯೆಗಳನ್ನು ನೇರಮಾಡುವ .. ಜೊತೆಗೆ ಒಂದು ರೀತಿಯಲ್ಲಿ ದೇಹ, ಕೈಗಳು, ಭುಜ ತಲೆಯನ್ನು ಅಲಗಾಡಿಸುತ್ತಾ ಶೈಲಿ  ಇಷ್ಟವಾಗುತ್ತದೆ 

ಈ ಚಿತ್ರದ ಆತ್ಮ ಆರ್ ನಾಗೇಂದ್ರ ರಾವ್.. ಪುರಾಣದ ಕಥೆಗಳನ್ನೂ ಹೇಳುತ್ತಿದ್ದರೂ, ದುರಾಸೆ, ದೂರಾಲೋಚನೆ.. ಮಗನ ಭವಿಷ್ಯವನ್ನು ಭದ್ರ ಪಡಿಸುವಲ್ಲಿ ತಮ್ಮ ಶ್ರಮಪಡುವ ಪಾತ್ರ.. ಮತ್ತೆ ಚಿತ್ರದ ಅನಾಟ್ಯದಲ್ಲಿ ತಮ್ಮ ತಪ್ಪು ಅಂತ ಗೊತ್ತಿದ್ದರೂ ಅದನ್ನು ತಮ್ಮ ಅಹಂನಿಂದ ಮುಚ್ಚಿಕೊಂಡು ಮಗನ ಭವಿಷ್ಯದ ಬಗ್ಗೆ ಮಾತಾಡುತ್ತಾ.. ಗೋಳಾಡುವ ಪಾತ್ರದಲ್ಲಿ ಶಕ್ತಿಯುತ ಅಭಿನಯ ನೀಡಿದ್ದಾರೆ. 

ಒಟ್ಟಿನಲ್ಲಿ ಇದೊಂದು ಸಾಮಾಜಿಕ ಚಿತ್ರ.. ಸಾಮಾನ್ಯವಾಗಿ ಪೌರಾಣಿಕ ಚಿತ್ರಗಳನ್ನು ಚಿತ್ರಿಸುವಲ್ಲಿ ಸಿದ್ಧಹಸ್ತರಾಗಿರುವ ಹುಣಸೂರ್ ಕೃಷ್ಣಮೂರ್ತಿ ಅವರ ಉತ್ತಮ  ಚಿತ್ರಗಳಲ್ಲಿ ಇದು ಒಂದು!



Friday, March 21, 2025

ಭಯವಿಲ್ಲದೆ ಸವಾಲು ಹಾಕಿ ಗೆದ್ದ ಸತಿ ಸಾವಿತ್ರಿ 1965 (ಅಣ್ಣಾವ್ರ ಚಿತ್ರ ೬೬/೨೦೭)

ಇಮೇಜ್ ಹಂಗು ಇಲ್ಲದೆ ತನ್ನ ಕಾಯಕವನ್ನೇ ಮಾಡುತ್ತಾ ಗಾಣ ಸುತ್ತುವ ಎತ್ತಿನಂತೆ, ನೊಗವನ್ನು ಹೊತ್ತು ರೈತನಿಗೆ ಉಳುಮೆ ಮಾಡುವ ಜೋಡಿ ಎತ್ತುಗಳಂತೆ.. ತನ್ನ ಪಾತ್ರ ತನ್ನ ಅಭಿನಯ ಇವೆ ನನ್ನ ಪ್ರಪಂಚ ಎಂದು ನಂಬಿ ಅಭಿನಯಿಸುವ ರಾಜಕುಮಾರ್ ಅವರ ಚಿತ್ರಗಳನ್ನು ನೋಡುವುದೇ, ಅದರಿಂದ ಕಲಿಯುವುದೇ ಒಂದು ಚಂದದ ಅನುಭವ.. 

ಚಿತ್ರದ ಹೆಸರೇ ಹೇಳುವಂತೆ ಸತಿ ಸಾವಿತ್ರಿ ಸ್ತ್ರೀ ಪ್ರಧಾನ ಕಥಾನಕ ಇರುವ ಚಿತ್ರ.. ಪುರಾಣ ಪ್ರಸಿದ್ಧ ಯಮನೊಡನೆ ಹೋರಾಡಿ ತನ್ನ ಪತಿದೇವನಿಗೆ ಆಯುಷ್ಯವನ್ನು, ತನ್ನ ಅತ್ತೆ ಮಾವಂದಿರಿಗೆ, ತನ್ನ ಹೆತ್ತವರಿಗೆ ಕರುಣಾಳುವಿನಿಂದ ವರಗಳನ್ನು ಪಡೆಯುವ ಕಥೆಯನ್ನು  ಚಿತ್ರೀಕರಿಸಿರುವ ರೀತಿ ಶ್ಲಾಘನೀಯ. 

ರಾಜಕುಮಾರ್, ಕೃಷ್ಣಕುಮಾರಿ, ಅಶ್ವಥ್ಮ್,  ರಾಘವೇಂದ್ರರಾವ್,  ಜಯಶ್ರೀ, ನರಸಿಂಹರಾಜು, ಜಯ, ರಾಮಚಂದ್ರಶಾಸ್ತ್ರಿ ಇವರೆಲ್ಲರ ಜೊತೆಯಲ್ಲಿ ಅಂತಿಮ ಕೆಲವು ದೃಶ್ಯಗಳಲ್ಲಿ ಬರುವ ಉದಯಕುಮಾರ್.. ಸೊಗಸಾದ ನಟನೆಯಿಂದ ಕೂಡಿದೆ. 

ಜಿಕೆ ವೆಂಕಟೇಶ್ ಅವರ ಹದಭರಿತ ಸಂಗೀತ ಚಿತ್ರದ ಪರಿಣಾಮವನ್ನು ಹೆಚ್ಚಿಸಿದೆ. ಚಿ ಸದಾಶಿವಯ್ಯ ಇಲ್ಲಿ ಮುಖ್ಯ ರೂವಾರಿ.  ಕಥೆ ಸಂಭಾಷಣೆ ಪದ್ಯಗಳು ಹಾಗೂ ಸಹ ನಿರ್ದೇಶನದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. 

ಆರ್ ಏನ್ ಜಯಗೋಪಾಲ್ ಮತ್ತು ಚಿ ಉದಯಶಂಕರ್ ಹಾಡುಗಳ ಸಾರಥ್ಯ ವಹಿಸಿಕೊಂಡಿದ್ದಾರೆ. ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕೀ ಹಾಡುಗಳಿಗೆ ಜೀವ ತುಂಬಿದ್ದಾರೆ. ಇಡೀ ಚಿತ್ರವನ್ನು ಸೆರೆ ಹಿಡಿದಿರೋದು ಬಿ ಎನ್ ಹರಿದಾಸ್.. ಇದರ ಕಪ್ತಾನ ಅಂದರೆ ನಿರ್ದೇಶಕ ಪಿ ಆರ್ ಕೌಂಡಿನ್ಯ. 

ನಿರ್ದೇಶಕರ ಜಾಣ್ಮೆ ಚಿತ್ರದ ಹೆಸರು ಪಾತ್ರವರ್ಗ ತೋರಿಸುವಾಗಲೇ ಸಾವಿತ್ರಿಯ ಜನನದ ಕಥಾನಕ ಹೇಳಿರೋದು. ನಂತರ ಪ್ರೌಢಾವಸ್ಥೆಗೆ ಬಂದ ಮೇಲೆ ಚಿತ್ರ ಶುರುವಾಗುತ್ತೆ. ಆ ಕಪ್ಪು ಬಿಳುಪಿನಿನಲ್ಲಿ ನಾಯಕಿ ಕೃಷ್ಣಕುಮಾರಿ ಹಾಗೂ ನಾಯಕ ರಾಜಕುಮಾರ್ ಅವರ ಸೌಂದರ್ಯ ಪರಿಪೂರ್ಣತೆ ಇಂದ ಕೂಡಿದೆ. 

ಎಲ್ಲರಿಗೂ ಗೊತ್ತಿರುವ ಕಥೆ ಸತ್ಯವಾನ ಸಾವಿತ್ರಿಯದು. ಕಥೆಯನ್ನು ಬೋರ್ ಹೊಡೆಸದಂತೆ ಚಾಕಚಕ್ಯತೆಯಿಂದ, ಮತ್ತು ಕ್ಷೀತ್ರಗತಿಯ ಸಂಕಲನದಿಂದ ಮೂಡಿಸಿದಿದ್ದಾರೆ. ಪ್ರತಿಯೊಂದು ಪಾತ್ರಧಾರಿಯೂ ಅಮೋಘ ಅಭಿನಯ ನೀಡಿದ್ದಾರೆ . 

ಸತ್ಯವಾನನ ಪಾತ್ರದಲ್ಲಿ ರಾಜಕುಮಾರ್ ಹದಭರಿತ ಅಭಿನಯ. ತಮ್ಮ ಪಾತ್ರ ದೊಡ್ಡದು ಸಣ್ಣದು ಎಂದು ತಲೆ ಕೆಡಿಸಿಕೊಳ್ಳದೆ ಆ ಪಾತ್ರಕ್ಕೆ ಬೇಕಾಗಿರುವ ಪೋಷಣೆ ನೀಡಿದ್ದಾರೆ. ಮನುಜ ಪರಿಸ್ಥಿತಿಯ ಕೈಗೊಂಬೆ, ಅದನ್ನು ಮೀರಿ ನೆಡೆದುಕೊಳ್ಳಲಾಗದು. ಈ ತತ್ವವನ್ನು ಆತನ ತಂದೆ ತಾಯಿಯರು ಹೇಳಿದಾಗ ತಮ್ಮ ಕುಟುಂಬಕ್ಕೆ ಆದ ಅವಮಾನ, ಮೋಸವನ್ನು ಕಂಡು ಕ್ಷುದ್ರರಾಗಿ ಕೂಗುವ ಅಭಿನಯ ಸೂಪರ್ ಎನಿಸುತ್ತದೆ. ಆದರೆ ಅಷ್ಟೇ ಶಾಂತವಾಗಿ ತಂದೆತಾಯಿಯರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಮತ್ತು ಅದರಲ್ಲೂ ಇಬ್ಬರೂ ವಯೋವೃದ್ಧರು ಹಾಗೂ ದೃಷ್ಟಿ ಹೀನರನ್ನು ನೋಡಿಕೊಳ್ಳುವ ಹೊಣೆ ತನ್ನದು ಎಂದು ಅರಿವಾದಾಗ ತಕ್ಷಣ ಶಾಂತ ಸ್ವಭಾವದ ಅಭಿನಯ ಅವರ ಅಭಿನಯ ಚತುರತೆಯನ್ನು ತೋರಿಸುತ್ತದೆ 

ಹೌದು ಪರಿಸ್ಥಿತಿ ನಮ್ಮನ್ನುಅಲುಗಾಡಿಸುತ್ತದೆ . ಆದರೆ ಆ ಸಮಯದಲ್ಲಿ ಮುಖ್ಯವಾಗಿ ಬೇಕಾಗಿರೋದು ಶಾಂತಿ, ತಾಳ್ಮೆ, ಮುಂದಾಲೋಚನೆ ಮತ್ತು ಪರಿಸ್ತಿಯಂತೆ ನೆಡೆದುಕೊಳ್ಳುವ ಜಾಣ್ಮೆ. ಈ ಗುಣಗಳನ್ನು ಅಂತಃಸತ್ವದಿಂದ ಪ್ರಚುರ ಪಡಿಸುವ ರಾಜಕುಮಾರ್ ನೀಡಿರುವ ಅಭಿನಯ ಸೂಪರ್. 

ಸಾವಿತ್ರಿಯಾಗಿ ಕೃಷ್ಣಕುಮಾರಿ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ, ಸೊಗಸಾದ ಅಭಿನಯ ಕೂಡ ನೀಡಿದ್ದಾರೆ. 


ರಾಘವೇಂದ್ರರಾವ್ ಮತ್ತು ಜಯಶ್ರೀ ಸಾವಿತ್ರಿಯ ತಂದೆತಾಯಿಯರಾಗಿ, ಹಾಗೂ ಸಹಕಲಾವಿದೆಯೊಂದಿಗೆ ರಾಮಚಂದ್ರಶಾಸ್ತ್ರಿ ತಂದೆ ತಾಯಿಯರ ತೊಳಲಾಟ, ವೇದನೆಗಳನ್ನು ಶಕ್ತವಾಗಿ ವ್ಯಕ್ತ ಪಡಿಸಿದ್ದಾರೆ. 




ಈ ರೀತಿಯ ಗಂಭೀರ ಕಥಾವಸ್ತುಗಳಿಗೆ ಸ್ವಲ್ಪ ಹಾಸ್ಯರಸ ಸೇರಿಸುವಲ್ಲಿ ನರಸಿಂಹರಾಜು ಮತ್ತು ಜಯ ಯಶಸ್ವಿಯಾಗಿದ್ದಾರೆ. 



ಕನ್ನಡ ಪೌರಾಣಿಕ ಚಿತ್ರಗಳ ಖಾಯ ನಾರದ ಪಾತ್ರಧಾರಿ ಅಶ್ವಥ್ ಅದ್ಭುತ ಅಭಿನಯದ ಕೇಂದ್ರ. ನಾರದನ ಪಾತ್ರಕ್ಕೆ ಬೇಕಾದ ಮುಗ್ಧತೆ , ತುಂಟತನ, ಜಾಣ್ಮೆ, ಸಮಯಕ್ಕೆ ಸರಿಯಾಗಿ ಪರಿಹಾರ ನೀಡುವ ಯುಕ್ತಿ, ಮಾತಿನ ಚಟಪಟ ಎಲ್ಲವೂ ಮೇಳೈಸಿದೆ!


ಇದೊಂದು ಅಪರೂಪದ ಚಿತ್ರ ಮತ್ತು ಅಷ್ಟೇ ಶಕ್ತಿಶಾಲಿಯಾಗಿ ಮೂಡಿದ ಚಿತ್ರವೂ ಹೌದು. 

ಅರೆ ಅರೆ ಇರಪ್ಪ ಯಮರಾಜ ಭೂಲೋಕದ ಎಲ್ಲರ ನಿಯಂತ್ರಣವನ್ನು ಹೊಂದಿರುವ ನಿನ್ನನ್ನು ಮರೆಯಲಾದೀತೆ. ಉತ್ತಮವಾದದ್ದು ಕಡೆಯಲ್ಲಿ ಬರುತ್ತದೆ ಅರ್ಥಾತ್ Best Comes At The Last ಎನ್ನುವಂತೆ ಉದಯಕುಮಾರ್ ಅವರ ಯಮರಾಜನ ಪಾತ್ರದ ಪ್ರವೇಶ ನಿಜಕ್ಕೂ ಒಮ್ಮೆ ಮೈ ಜುಮ್ ಎನಿಸುತ್ತದೆ. ಆ ನೆರಳು ಬೆಳಕಿನಲ್ಲಿ ಆ ಭರ್ಜರಿ ದೇಹಾಕಾರ ಎತ್ತರದ ನಿಲುವು ಪೊದೆಯಂತಹ ಮೀಸೆ, ಅದರ ಹಿಂದೆ ಕೋಣನ ಆಕೃತಿ ಜೊತೆಗೆ ಅಮೋಘವಾದ ಸಿಂಹನಾದದಂತಹ ಧ್ವನಿ.. ಸಾವಿತ್ರಿಯ ಪ್ರತಿ ಸವಾಲಿಗೂ ಶಾಂತವಾಗಿ ಉತ್ತರ ಕೊಡುತ್ತಲೇ ಸಿಟ್ಟಿಗೆ ಏಳುವಾಗ ತಾರಕಕ್ಕೆ ಹೋಗುವ ಅವರ ಧ್ವನಿ.. ಅಬ್ಬಬ್ಬಾ.. 



ಯಮರಾಜ ಈಗ ಸಂತೋಷವೇ.. 

ಓಯ್ ನನ್ನ ಫೋಟೋ ಹಾಕು ಎಂದರೆ ಕಲಹಪ್ರಿಯ ನಾರದನ ಫೋಟೋ ಹಾಕ್ತೀಯ.. 

ಅಯ್ಯೋ ತಪ್ಪಾಯಿತಪ್ಪ ತಗೋ ನಿನ್ನ ಫೋಟೋ.. 


ಹಾ ಈಗ ಸರಿ.. ಶುಭವಾಗಲಿ!

Saturday, March 1, 2025

ಕರುನಾಡಿನ ಚಿತ್ರರಸಿಕರ ಮನವ ಕದ್ದ ಬೆಟ್ಟದ ಹುಲಿ 1965 (ಅಣ್ಣಾವ್ರ ಚಿತ್ರ ೬೫/೨೦೭)

ಹಿಂದಿನ ಅರವತ್ತನಾಲ್ಕು ಚಿತ್ರಗಳನ್ನು ನೋಡುತ್ತಾ ಬಂದ ನನಗೆ ಈ ಚಿತ್ರ ರಾಜಕುಮಾರ್ ಅವರ ಜೀವನದ ಒಂದು ತಿರುವಿನ ಚಿತ್ರ ಅನಿಸಿತು.. ಅಲ್ಲಿಯ ತನಕ ಭಕ್ತಿ ಪ್ರಧಾನ, ಪೌರಾಣಿಕ, ಕೆಲವು ಗ್ರಾಮೀಣ ಹಿನ್ನೆಲೆಯ ಚಿತ್ರ ಪಾತ್ರಗಳೇ ಹೆಚ್ಚಾಗಿತ್ತು.. ಭಕ್ತಿ ಪರಾಕಾಷ್ಠೆ ತಲುಪಿದ್ದ ಪರ್ವಕಾಲದ ಚಿತ್ರಗಳು.. ಏಕಾಏಕಿ ಬದಲಾವಣೆಯ ಗಾಳಿ ಬೀಸಿದ ಚಿತ್ರವೆನಿಸಿತು ನನಗೆ.. 

ಕಳ್ಳನ ಪಾತ್ರಧಾರಿ ಆದರೆ ಕಳ್ಳತನ ಮಾಡೋದಿಲ್ಲ.. 

ದರೋಡೆಕಾರರ ಗುಂಪಿನ ಜೊತೆ ಇರುತ್ತಾರೆ ಆದರೆ ಮನುಷ್ಯತ್ವ ಕಳೆದುಕೊಳ್ಳದೆ ಇರುವ ಪಾತ್ರ 

ಬಡವರನ್ನು ಸಿರಿವಂತರನ್ನು ನಿಷ್ಕರುಣೆಯಿಂದ ಶೋಷಿಸಬೇಕು ಆದರೆ ಹಾಗೆ ಮಾಡೋದಿಲ್ಲ.. 

ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿ ಅವರನ್ನು ನಗೆಪಾಟಲಿಗೆ ಗುರಿ ಮಾಡಬೇಕು.. ಆದರೆ ಹಾಗಿಲ್ಲ 

ಅತೀವವಾಗಿ ಮೇಕಪ್ ಮಾಡಿಕೊಂಡು ಖಳನ ನಗೆ ನಗುತ್ತಾ ಭಯ ಹುಟ್ಟಿಸಬೇಕು ಆದರೆ ಸಂಯಮದಿಂದ ಕಾಣುತ್ತಾರೆ 

ಹೀಗೆ ಅಂದುಕೊಂಡ ಯಾವುದೇ ಸಿದ್ಧಸೂತ್ರವಿರದ ಪಾತ್ರಪೋಷಣೆಯಿಂದ ಕೂಡಿದ ಚಿತ್ರ ಬೆಟ್ಟದ ಹುಲಿ ಚಿತ್ರ ಇಷ್ಟವಾಗುತ್ತದೆ.

ನಾವೆಲ್ಲಿಯಾದರೂ ಇರಬಹುದು, ಬೆಳೆಯಬಹುದು.. ಆದರೆ ನಮ್ಮೊಳಗಿನ ಸಂಸ್ಕಾರ ಜಾಗೃತವಾಗಿದ್ದಾಗ ಎಲ್ಲಿಯೇ ಇದ್ದರೂ ಹೇಗೆ ಇದ್ದರೂ ನಮ್ಮ ತನವನ್ನು ಉಳಿಸಿಕೊಳ್ಳಬಹುದು ಎನ್ನುವ ಸಾರಾಂಶ ಅದ್ದಿಕೊಂಡು ಹೊರಬಂದ ಚಿತ್ರವಿದು.. 

ರಾಜಕುಮಾರ್ ಮುದ್ದಾಗಿ ಕಾಣುತ್ತಾರೆ. ಎತ್ತಿ ಬಾಚಿದ ತಲೆಗೂದಲು (ಕೃತಕ ಕೇಶವಿನ್ಯಾಸವಾದರೂ ಅದು ಒಪ್ಪುತ್ತದೆ ಮತ್ತು ಮುದ್ದಾಗಿ ಕಾಣುತ್ತಾರೆ). ಸದಾ ಕಪ್ಪು ವರ್ಣದ ವೇಷಭೂಷಣ.. ಕಿವಿಗೆ ಒಂದು ಕಡೆ ರಿಂಗ್.. ಕಡಿದು ಹದಮಾಡಿದಂತ ಶರೀರ.. ಕುದುರೆಯ ಮೇಲೆ "ಆಡುತ್ತಿರುವ ಹಕ್ಕಿಗಳೇ" ಹಾಡನ್ನು ಹಾಡಿಕೊಂಡು ಬರುವಾಗ ಅತಿ ಮುದ್ದಾಗಿ ಕಾಣುತ್ತಾರೆ.. 

ಚಿತ್ರಪಾತ್ರದಲ್ಲಿ ತನ್ನ ತಂದೆ ಎಂದು ಹೇಳುವ ಉದಯಕುಮಾರ್ ಅವರ ಪಾತ್ರದೊಂದಿಗೆ ಕಟುವಾಗಿ ಮಾತಾಡುವ ಅವರು .. ಅತ್ತೆ ಎಂದು ಕರೆಸಿಕೊಂಡರೂ ಮಾತೃ ಪ್ರೇಮವನ್ನು ತೋರುವ ಪಂಡರಿಬಾಯಿ ಅವರೊಂದಿಗೆ ಮಮತಾಮಯಿ ಮಾತುಗಳು.. ತನ್ನ ಕಳ್ಳನೆಂದು ತಿಳಿದಿದ್ದರೂ ತನ್ನನ್ನು ಪ್ರೇಮಿಸುವ ಜಯಂತಿ ಪಾತ್ರದೊಂದಿಗೆ ಮಾತಾಡುವ ಶೈಲಿ, ತನ್ನನ್ನು ಸ್ನೇಹಿತ ಎಂದು ಕರೆದುಕೊಂಡು ಮಾತಾಡುವ ನರಸಿಂಹರಾಜು ಅವರೊಂದಿಗೆ ಜುಗಲಬಂದಿ.. ತಂದೆಯಂತೆ ಭಾಸವಾಗುವ ಅಶ್ವತ್ ಪಾತ್ರದ ಜೊತೆ ಒಂದೆರಡು ದೃಶ್ಯಗಳೇ ಆದರೂ ಭಾವನಾತ್ಮಕವಾಗಿ ಬೆಸೆದುಕೊಳ್ಳುವ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ.. 

ಉದಯಕುಮಾರ್ ಅವರ ಖಳ ಪಾತ್ರ ಈ ಚಿತ್ರದ ವಿಶೇಷ.. ಸರಿಸುಮಾರು ರಾಜಕುಮಾರ್ ಅವರ ವಯೋಮಾನದವರೇ ಆಗಿದ್ದರೂ, ಆತನಿಗೆ ಅಪ್ಪನ ಪಾತ್ರದಲ್ಲಿ ಮಿಂಚುತ್ತಾರೆ.. ಅಬ್ಬರಿಸುವ ಮಾತುಗಳು, ಆ ಭಯ ಹುಟ್ಟಿಸುವ ಕಣ್ಣುಗಳು, ಆಂಗೀಕ ಅಭಿನಯ "ಹೈದ" ಎನ್ನುವಾಗ ಇರುವ ದರ್ಪ ಅದ್ಭುತ

ಮಮತಾಮಯಿ ಪಂಡರಿಬಾಯಿ.. ತಾಯಿ ಪಾತ್ರ ಮಾಡಲೆಂದೇ ಭುವಿಗೆ ಬಂದಿದ್ದಾರೆ ಅನಿಸುವಷ್ಟು ಸಹಜ ಮಾತುಗಳು, ಅಭಿನಯ.. 

ಪೊಲೀಸ್ ಅಧಿಕಾರಿಯಾಗಿ ಖಡಕ್ ಆಗಿ ಕಾಣುವ, ಹಾಗೆ ತನ್ನ ಸಾಕುಮಗಳು ಆಡುವ ಮಾತುಗಳನ್ನು ಕೇಳುತ್ತಾ ವಿಲಿವಿಲಿ ಎಂದು ತಳಮಳಿಸುವ ಪಾತ್ರದಲ್ಲಿ  ಗಮನೀಯ ಅಭಿನಯ ನೀಡಿದ್ದಾರೆ 

ಜಯಂತಿ ಕೆಲವೇ ದೃಶ್ಯಗಳಲ್ಲಿ ಇದ್ದರೂ, ಮುದ್ದಾಗಿ ಕಾಣುತ್ತಾ ಚಿತ್ರದ ಅಂತ್ಯದಲ್ಲಿ ವಿಭಿನ್ನ ತಿರುವು ಕೊಡುವ ಪಾತ್ರದಲ್ಲಿ ಮಿಂಚುತ್ತಾರೆ. 

ಉಳಿದಂತೆ ಚಿತ್ರದ ಹಾಸ್ಯ ದೃಶ್ಯಗಳಲ್ಲಿ ಜಯ ಮತ್ತುನರಸಿಂಹರಾಜು ನಗಿಸುತ್ತಾರೆ. ಕೆಲವು ಹಿತಕರ ಮಾತುಗಳನ್ನು ಹೇಳುವ ಅಡಿಗೆ ಭಟ್ಟನ ಮಾತ್ರದಲ್ಲಿ ಗಣಪತಿ ಭಟ್ ಇಷ್ಟವಾಗುತ್ತಾರೆ. 

ಟಿ ಜಿ ಲಿಂಗಪ್ಪ ಅವರ ಸಂಗೀತದ ಬಗ್ಗೆ ಒಂದೆರಡು ಮಾತು.. ಆಡುತ್ತಿರುವ ಮೋಡಗಳೇ ಹಾಡಿನಲ್ಲಿ ಸಂಗೀತ ವಾದ್ಯ ಹಿತಮಿತವಾಗಿದೆ... ಸುಮಾರು ಮೂರು ನಿಮಿಷ ಸಂಗೀತ ವಾದ್ಯಗಳೇ ಮೊಳಗುವ ಕ್ಯಾಬರೆ ದೃಶ್ಯದ ವಾದ್ಯ ಗೋಷ್ಠಿ ಇಷ್ಟವಾಗುತ್ತದೆ.. ಹಾಡು ಇವಾಗ ಶುರುವಾಗುತ್ತೆ ಆಗ ಶುರುವಾಗುತ್ತೆ ಅಂತ ನೋಡುತ್ತಲೇ ಇದ್ದರೂ ಹಾಡು ಶುರುವಾಗೋದರ ಬದಲಿಗೆ ವಾದ್ಯಗೋಷ್ಠಿಯ ಸಂಯೋಜನೆ ಮನಸೆಳೆಯುತ್ತದೆ.. 

ಭಗವತಿ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ಎ ವಿ ಶೇಷಗಿರಿ ರಾವ್ ಅವರು ನಿರ್ದೇಶಿಸಿ ಕೆ ಜಾನಕಿರಾಮ್ ಅವರ ಛಾಯಾಗ್ರಹಣ ಹೊಂದಿದ್ದ ಈ ಚಿತ್ರಕ್ಕೆ ಸಾಹಿತ್ಯ ಒದಗಿಸಿದವರು ಗೀತಪ್ರಿಯ. ಪಿ ಬಿ ಶ್ರೀನಿವಾಸ್, ಎಸ್ ಜಾನಕೀ, ಎಲ್ ಆರ್ ಈಶ್ವರಿ ದನಿ ನೀಡಿದ್ದಾರೆ. 

ಪುಟ್ಟ ಪಾತ್ರಗಳಲ್ಲಿ ಎಂ ಪಿ ಶಂಕರ್, ದಿನೇಶ್, ಪಾಪಮ್ಮ ಕಾಣಿಸಿಕೊಳ್ಳುತ್ತಾರೆ.. 

ರಾಜಕುಮಾರ್ ಅವರ ಚಿತ್ರಜೀವನದ ಒಂದು ಮುಖ್ಯ ತಿರುವಿನಲ್ಲಿ ಈ ಚಿತ್ರ ಮೂಡಿ ಬಂದಿದೆ. ಈ ಚಿತ್ರದ ಕೆಲವು ತುಣುಕುಗಳು ನಿಮಗಾಗಿ!