ಎಲ್ಲರ ಬದುಕಲ್ಲೂ ನೆಡೆಯುವ ಘಟನೆಗಳೇ ಸಿನೆಮಾವಾಗುತ್ತವೆಯೋ, ಅಥವ ಸಿನಿಮಾದ ದೃಶ್ಯಗಳು ನಮ್ಮ ಬದುಕಲ್ಲಿ ಬರುತ್ತವೆಯೋ.. ಇದೊಂದು ರೀತಿ ಬೀಜ ವೃಕ್ಷ, ಕೋಳಿ ಮೊಟ್ಟೆ ಕಥೆ ಇದ್ದ ಹಾಗೆ. ಯಾವುದು ಮೊದಲು ಯಾವುದು ನಂತರ ಯಾರಿಗೂ ಅರಿವಿಗೆ ಬರುವುದಿಲ್ಲ, ಬರಿ ಚರ್ಚೆಗಷ್ಟೇ ಸೀಮಿತವಾಗಿರುತ್ತದೆ.
ಬಾಲ್ಯದಲ್ಲಿ ಕಂಡ ಒಂದು ಕನಸು, ಒಂದು ಆಸೆ.. ಬಡವರಿಗೆ ಉಚಿತ ಖಚಿತ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಬೇಕು ಎನ್ನುವ ಹಂಬಲ ಹೊತ್ತ ಬಾಲಕ.. ತನ್ನ ತಂದೆಯರ ಅಪರಿಮಿತ ನಿಸ್ವಾರ್ಥ ಕೃಪಾಚಾಯೆಯಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಗೆದ್ದು ವೈದ್ಯನಾಗುತ್ತಾನೆ.
ಆದರೆ ನಗರದ ವ್ಯಾಮೋಹ, ಓದುವಾಗ ನೆಡೆಯುವ ಕೆಲವು ಕೀಟಲೆ ಪ್ರಸಂಗಗಳು, ಆತನನ್ನು ಒಬ್ಬ ಸಿರಿವಂತ ಹುಡುಗಿಗೆ ಪರಿಚಯ ಮಾಡಿಕೊಳ್ಳುವ ಸಂದರ್ಭ ಒದಗಿಬರುತ್ತದೆ, ನಂತರ ಈತನ ಪ್ರತಿಭೆಯನ್ನು ಅರಿತ ಆ ಸಿರಿವಂತ ಮನೆಯ ಯಜಮಾನಿ, ತನ್ನ ಮಗಳನ್ನು ಆತನಿಗೆ ಕಟ್ಟಿ, ವೈದ್ಯಕೀಯ ವೃತ್ತಿಯಲ್ಲಿ ಬೆಳೆಯುವಂತೆ ಮಾಡುವುದೇ ಅಷ್ಟೇ ಅಲ್ಲದೆ, ಆತನ ತಂದೆಯ ತಾಯಿಯರು ಈತನನ್ನು ಭೇಟಿ ಮಾಡುವ ಅಥವ ಯೋಗಕ್ಷೇಮ ತಿಳಿಸುವ ಎಲ್ಲಾ ಮಾಹಿತಿಗಳಿಂದ ದೂರವಿಡುತ್ತಾಳೆ. ಮತ್ತೆ ಆತನಿಗೆ ತನ್ನ ತಂದೆ ತಾಯಿಯರು ಹೇಳದೆ ಕೇಳದೆ ತಾನು ಮದುವೆ ಮಾಡಿಕೊಂಡದ್ದು ಕೋಪತರಿಸಿದೆ, ಹಾಗಾಗಿ ಬೇಸರವಾಗಿ ತೀರ್ಥಯಾತ್ರೆಗೆ ಹೋಗಿದ್ದೇವೇ ಅಂತ ಸುಳ್ಳು ಸುಳ್ಳು ತಂತಿ ಕೊಟ್ಟು.. ಒಂದು ರೀತಿಯಲ್ಲಿ ಶಾಶ್ವತ ಬಿರುಕು ತಂದಿಡುತ್ತಾಳೆ. ಅದನ್ನೇ ನಂಬಿಕೊಂಡ ಈತ, ಪೂರ್ಣ ನಗರ ಜೀವನದ ಆಡಂಬರಕ್ಕೆ ಮರುಳಾಗಿ ತನ್ನ ಹೆತ್ತರವರನ್ನು ನೋಡಲು ಹೋಗೋದೇ ಇಲ್ಲ .. ಆದರೆ ಅವರ ವಾತ್ಸಲ್ಯ, ಅವರ ಅಪರಿಮಿತ ಪ್ರಯತ್ನದಿಂದ ತಾನು ವೈದ್ಯನಾದೆ ಎನ್ನುವುದನ್ನು, ಬಾಲ್ಯದ ಅಚ್ಚಳಿಯದ ನೆನಪುಗಳನ್ನು ಪದೇ ಪದೇ ಮೆಲುಕು ಹಾಕುತ್ತ ತನ್ನ ಮಡದಿಗೆ ಹೇಳುತ್ತಿರುತ್ತಾನೆ.
ಮಗನ ಅರಿವಿಲ್ಲದ ತಿರಸ್ಕಾರದ ಘಟನೆಗಳಿಂದ ನೊಂದ ಅಪ್ಪ ಅಸು ನೀಗುತ್ತಾನೆ.. ಗಂಡನಿಲ್ಲದ ಮಡದಿ, ತನ್ನ ಮಗನ ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವ ಆಯಾ ಆಗಿ ಕೆಲಸಕ್ಕೆ ಸೇರಿಕೊಂಡು, ಕಡೆ ಪಕ್ಷ ತನ್ನ ಮೊಮ್ಮಗುವನ್ನಾದರೂ ಲಾಲನೆ ಪಾಲನೆ ಮಾಡುವ ಅವಕಾಶ ಪಡೆಯುತ್ತಾಳೆ.
ಪರಿಸ್ಥಿತಿ, ಈಕೆಯ ತನ್ನ ತಾಯಿ ಎಂದು ತಿಳಿದು, ಜೀವನದಲ್ಲಿ ನೆಡೆದ ಘಟನೆಗಳು ಹೇಗೆ ತನ್ನನ್ನು ಕುರುಡನ್ನಾಗಿ ಮಾಡಿತ್ತು ಎಂದು ಹಳಿಹಳಿಯುತ್ತ ಮತ್ತೆ ತನ್ನ ಬಾಲ್ಯದ ಪ್ರತಿಜ್ಞೆ ನೆನಪಿಸಿಕೊಂಡು, ಮರಳಿ ತನ್ನ ಹಳ್ಳಿಯ ಬದುಕಿಗೆ ಹಿಂದಿರುಗುತ್ತಾನೆ, ಜೊತೆಗೆ ಆತನ ಮಡದಿ, ಹಾಗು ಆಕೆಯ ಸಿರಿವಂತ ತಾಯಿಯೂ ಬದಲಾಗುತ್ತಾರೆ.
ಇದು ಕಥಾ ಹಂದರ.
ಅಶ್ವಥ್ ಅವರಿಗೆ ತಕ್ಕಂತೆ ಪಂಡರಿಬಾಯಿ ಮಮತಾಮಯಿ. ಆ ಪ್ರೀತಿ, ಮಮತೆ, ಮಗ ತಮ್ಮನ್ನು ಅಲಕ್ಷ್ಯಮಾಡಿದ್ದಾನೆ ಎನ್ನುವುದನ್ನು ಕೆಲವು ಪ್ರಸಂಗಗಳಿಂದ ಅರಿತುಕೊಂಡರೂ, ತಾಯಿ ಕರುಳು ಮಗನ ಪ್ರೀತಿಗೆ ಅವನ ಏಳಿಗೆಗೆ ಹಂಬಲಿಸುತ್ತದೆ. ಆ ಪಾತ್ರದಲ್ಲಿ ಅಕ್ಷರಶಃ ತಾಯಿಯೇ ಆಗಿದ್ದರೆ.
ಜಯಂತಿ, ಅತಿ ಮುದ್ದಾಗಿ ಕಾಣುತ್ತಾರೆ. ಸುಂದರ ಅಭಿನಯ
ನರಸಿಂಹರಾಜು ನಾಯಕನನ್ನು ನಗರವ್ಯಾಮೋಹಕ್ಕೆ ಒಗ್ಗಿಕೊಳ್ಳುವಂತೆ ಮಾಡುವ ಪಾತ್ರದಲ್ಲಿ ಅಭಿನಯ ಸುಂದರವಾಗಿದೆ. ಹೆಚ್ಚಿನ ಹಾಸ್ಯ ದೃಶ್ಯಗಳಿಗೆ ಅವಕಾಶವಿಲ್ಲವಾದರೂ, ಇರುವ ದೃಶ್ಯಗಳಲ್ಲಿಯೇ ಅವರ ಅಭಿನಯ ಚಿತ್ರಕ್ಕೆ ತಕ್ಕ ಹಾಗೆ ಇದೆ.
ಜಯ ನರಸಿಂಹರಾಜುವಿನ ಗೆಳತೀ, ಮಡದಿಯಾಗಿ ಸಲೀಸಾದ ಅಭಿನಯ
ರಮಾದೇವಿ ಕರುನಾಡಿನ ಗಯ್ಯಾಳಿ ಅತ್ತೆ, ಅಮ್ಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.
ಗಣಪತಿ ಭಟ್, ನಾಯಕನ ಮನೆಯ ಹಿತಚಿಂತಕನಾಗಿ ಸಣ್ಣ ಪಾತ್ರವಾದರೂ ಆರಂಭದಲ್ಲಿ ಮತ್ತು ಕೊನೆಯಲ್ಲಿ ಅವರ ಅಭಿನಯ ಸೊಗಸು.
ಇನ್ನೂ ಕಥಾನಾಯಕ ರಾಜಕುಮಾರ್. ಈ ರೀತಿಯ ಪಾತ್ರಗಳಲ್ಲಿಯೂ ತಾನು ಅಭಿನಯಸಬಲ್ಲೆ ಎನ್ನುವುದನ್ನು ಶ್ರದ್ದೆಯಿಂದ ಕೂಡಿದ ಅಭಿನಯದಲ್ಲಿ ಮೂಡಿಸಿದ್ದಾರೆ. ಮೆಲ್ಲಗೆ ಉತ್ತುಂಗಕ್ಕೆ ಏರುತ್ತಿರುವ ವಾರ ಸಿನೆಮಾಯಾನದಲ್ಲಿ ಈ ರೀತಿಯ ಪಾತ್ರ ಕೊಂಚ ಖಳಛಾಯೆ ಇರುವ ಪಾತ್ರ ಅಂದರೆ ಪರಿಸ್ಥಿತಿಯ ಕೈಗೊಂಬೆಯಾಗಿ ತನ್ನ ಹೆತ್ತರವರಿಂದ ದೂರವಾಗುವ, ಅವರ ಕಷ್ಟದಲ್ಲಿ ತಾನು ಭಾಗಿಯಾಗದೆ, ಅವರ ಉಪಕಾರ ಮಾತ್ರ ನೆನೆಯುತ್ತ, ಅವರ ಯೋಗಕ್ಷೇಮ ನೋಡಿಕೊಳ್ಳಲು ಆಗದ ಪಾತ್ರ. ಸಾಮಾನ್ಯ ರಾಜಕುಮಾರ್ ಅವರ ಸಿನೆಮಾಗಳ ಕಥಾವಸ್ತುವಿನಲ್ಲಿ ಈ ರೀತಿಯ ನಾಯಕನ ಧೋರಣೆ ಇರುವುದು ಕಡಿಮೆ, ಆದರೆ ಅದನ್ನು ಅಭಿನಯಿಸುವಾಗ ಅವರು ತೋರುವ ಶ್ರದ್ಧೆ ಅನನ್ಯ. ಹಳ್ಳಿ ಉಡುಪಿನಲ್ಲಿ ಎಷ್ಟು ಮುದ್ದಾಗಿ ಕಾಣುತ್ತಾರೆಯೋ ಅಷ್ಟೇ ಚೆಲುವಾಂತ ಚೆನ್ನಿಗನಾಗಿ ಪಟ್ಟಣದ ದಿರುಸಿನಲ್ಲಿಯೂ ಮಿಂಚುತ್ತಾರೆ. ಅವರ ಸಂಭಾಷಣೆ ವೈಖರಿ, ಆ ನಸು ನಗು ಎಲ್ಲವೂ ಸೊಗಸು.
\ಇದೊಂದು ಉತ್ತಮಚಿತ್ರವಾಗಿದೆ. ಆದರೆ ತಂತ್ರಜಾನದ ಇತಿಮಿತಿ ಸುಮಾರು ದೃಶ್ಯಗಳನ್ನು ನುಂಗಿಹಾಕಿದೆ. ಜಾಲತಾಣದಲ್ಲಿ ಸಿಗುವ ಚಿತ್ರ, ಸಿಡಿಯೂ ಕೂಡ ಅದೇ ಆಗಿದೆ. ಕಥೆಗೆ ಕೆಲವೊಮ್ಮೆ ಲಿಂಕ್ ಸಿಗುವುದು ಕಷ್ಟ ಎನಿಸುತ್ತದೆ. ಆದ್ರೆ ಪ್ರಖ್ಯಾತ ನಿರ್ಮಾಪಕ ನಿರ್ದೇಶಕ ವಿಕ್ರಂ ಪ್ರೊಡಕ್ಷನ್ಸ್ ಮಾಲೀಕ ಬಿಸ್ ಎಸ್ ರಂಗ ಚಿತ್ರವಾಗಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ತುಂಡಾದ ದೃಶ್ಯಗಳು ಕತೆಯನ್ನು ಒಟ್ಟುಗೂಡಿಸಲು ಕೊಂಚ ಒದ್ದಾಡುತ್ತದೆ.
ಶ್ರೀಮತಿ ಶಾಮಲಾದೇವಿ ಅವರ ಕಥೆಯನ್ನು ಚಿತ್ರಕ್ಕೆ ಸಂಭಾಷಣೆ ಹಾಡುಗಳನ್ನು ಕೊಟ್ಟು ಸಿದ್ಧಪಡಿಸಲು ನೆರವಾಗಿರೋದು ಚಿ. ಸದಾಶಿವಯ್ಯ. ಸಂಗೀತ ಎಸ್ ಹನುಮಂತಾಚಾರ್. ಗಾಯಕರ ದಂಡೇ ಈ ಚಿತ್ರದ ಹಾಡುಗಳಲ್ಲಿ ಇದೆ. ಛಾಯಾಗ್ರಹಣದ ಹೊಣೆ ಬಿ ಎಸ್ ರಂಗ ಅವರದ್ದು.
ಆಸ್ಪತ್ರೆಯ ದೃಶ್ಯಗಳನ್ನು ನೈಜವಾಗಿ ತೋರಿಸುವಲ್ಲಿ ಸಹಕರಿಸಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿರುವುದು ಗಮನ ಸೆಳೆಯುತ್ತದೆ. ಹಾಗೆ ಮಾಹಿತಿಗಳ ಪ್ರಕಾರ ರಾಜಕುಮಾರ್ ಅವರು ಮೊತ್ತ ಮೊದಲ ಬಾರಿಗೆ ವೈದ್ಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬೆಳೆದು ಬಂದ ಹಾದಿಯನ್ನು ಎಷ್ಟೇ ಕಷ್ಟಬಂದರೂ ಮರೆಯಬಾರದು ಎಂದು ನಿರೂಪಿಸುವ ಚಿತ್ರ ಪ್ರತಿಜ್ಞೆ.