Sunday, April 24, 2022

ಗಾನ ಗಂಧರ್ವ ಗಂಧರ್ವ ಸಂಗೀತ ನಿರ್ದೇಶಕರ ಬಗ್ಗೆ ಮಾತುಗಳು ... ಅಣ್ಣಾವ್ರ ಜನುಮದಿನ (2022)

 ಶ್ರೀ ಏನಪ್ಪಾ ಆಗಲೇ ಅರ್ಧ  ದಿನ ಕಳೆದು ಹೋಯ್ತು ಏನೂ ಇಲ್ಲಾ?

ಅಣ್ಣಾವ್ರೇ ನಾ ಕಟ್ಟಿದ ಅಲೆಮಾರಿಗಳು ತಂಡ ಚಟುವಟಿಕೆಯಿಲ್ಲದೆ ಸೊರಗಿತ್ತು ಅದಕ್ಕೆ  ಮತ್ತೆ ಜೀವ ಕೊಡೋಣ ಅಂತ  ಕಬ್ಬನ್ ಪಾರ್ಕಿನಲ್ಲಿ ಸಿಗೋಣ ಅಂತ ಹೋಗಿದ್ದೆ ...ಬಂದು ಮತ್ತೆ ದಿನ ನಿತ್ಯದ ಕೆಲಸ ಮುಗಿಸಿ ಈಗ ಕೂತೆ.. ಇನ್ನೇನು ಕೆಲವು ನಿಮಿಷಗಳು ಅಣ್ಣ ಬರುತ್ತೆ... 




ಶ್ರೀ ನನಗೆ ಗೊತ್ತು ನೀ ಬಿಲ್ಡ್ ಅಪ್ ತಗೋಳೋಲ್ಲ ಅಂತ ಗೊತ್ತು.. ಇನ್ನೂ ಬರಲಿಲ್ಲವಲ್ಲ ಅಂತ ಕೇಳಿದೆ ಅಷ್ಟೇ.. 

ಗೊತ್ತು ಅಣ್ಣಾ.. ನಿಮ್ಮ ಬಗ್ಗೆ ಬರೆಯೋದು ಬೇಕಾದಷ್ಟಿದೆ.. ಇನ್ನೂ ನೋಡಿ ಬರೆಯಬೇಕಾದ ಬೇಕಾದಷ್ಟು ಚಿತ್ರಗಳಿವೆ.. ಈ ವರ್ಷ ಶತಕ ಬಾರಿಸಲೇ ಬೇಕು ಅಂತ ನಿರ್ಧಾರ ಮಾಡಿದ್ದೀನಿ.. ನಿಮ್ಮ ಆಶೀರ್ವಾದ ಇರಲಿ ಸದಾ.. 

ಶ್ರೀ ಶುಭವಾಗಲಿ.... ಇವತ್ತಿನ ಲೇಖನ ಓದೋಕೆ ಕಾತುರದಿಂದ ಕಾಯುತ್ತಾ ಇದ್ದೀನಿ.. !!!

ಸರಿ ಅಣ್ಣಾ.. !

                                                                             *****

ಕರುನಾಡಿನಲ್ಲಿ ಚಿತ್ರರಸಿಕರ ಮನದಲ್ಲಿ ಅಣ್ಣಾವ್ರ ಹಾಡುಗಳು ಅಣ್ಣಾವ್ರ ಗಾಯನ ಧ್ವನಿ ಬಗ್ಗೆ ಕೇಳೋದೇ ಬೇಡಾ.. ಅವರ ಪ್ರತಿ ಹಾಡುಗಳು ಅವರ ಸಂಭಾಷಣೆ ಬಾಯಿ ಪಾಠವಾಗಿ ಹೋಗಿದೆ.. ಅವರ ಗಾಯನಕ್ಕೆ ಹೊಳಪು ಕೊಟ್ಟ ಅನೇಕಾನೇಕ ಸಂಗೀತ ನಿರ್ದೇಶಕರ ಬಗ್ಗೆ ಅಣ್ಣಾವ್ರ ಹೇಳಿರುವ ಕೆಲವು ಮಾತುಗಳು..




ಜಿ ಕೆ ವೆಂಕಟೇಶ್: 



ಶ್ರೀ ಇಡೀ ನಾಡು ನನ್ನನ್ನು ಅಣ್ಣ ಅಂತ ಪ್ರೀತಿಯಿಂದ ಕರೆದರೆ.. ಇವರು ಮಾತ್ರ ನನ್ನನ್ನು ತಮ್ಮಯ್ಯ ಅಂತ ಕರೀತಾ ಇದ್ರು.. ಓಹಿಲೇಶ್ವರ ಚಿತ್ರದಲ್ಲಿ  ನಾ ಬೇಡವೆಂದರೂ ಬಿಡದೆ ಹಾಡಿಸಿದರು.. ನಂತರ ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ಇನ್ನೊಂದು ಹಾಡು ಹಾಡಿಸಿದರು.. 

ಈತ ಅದ್ಭುತ ಪ್ರತಿಭೆಯಿದ್ದ ಮನುಷ್ಯ.. ಆದರೂ ಪ್ರತಿಭೆಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದ್ದರು.. ಸನಾದಿ ಅಪ್ಪಣ್ಣ ಚಿತ್ರದಲ್ಲಿ ಶಹನಾಯಿ ಮಹಾರಾಜ್ ಶ್ರೀ ಬಿಸ್ಮಿಲ್ಲಾ ಖಾನ್ ಸಾಹೇಬರ ಜೊತೆಯಲ್ಲಿ ನಾ ಕಳೆದ ಕ್ಷಣ ಅದ್ಭುತ.. ಈ ವೆಂಕಟೇಶ್ ಖಾನ್ ಸಾಹೇಬರು ಹೇಗೆ ಹೇಳಿದ್ದರೋ, ಹಾಗೆ ಮತ್ತೆ ಅದಕ್ಕಿಂತ ತುಸು ಹೆಚ್ಚಾಗಿಯೇ ಅವರನ್ನು  ಸಂತೈಸಿ ಅದ್ಭುತ ಹಾಡುಗಳನ್ನು ಕೊಟ್ಟರು.. ಅದೇ ರೀತಿಯಲ್ಲಿ ಸಂಧ್ಯಾರಾಗ ಚಿತ್ರದ ರಾಗಾಧಾರಿತ ಹಾಡುಗಳು, ಹಾಲು ಜೇನಿನ ಸುಶ್ರಾವ್ಯ ಹಾಡುಗಳು... ಇವೆಲ್ಲಾ ಒಂದು ಕಡೆಯಾದರೆ. ಅವರ ಪ್ರಯೋಗ ಶೀಲತೆಯಿಂದ ಕಳೆಕಟ್ಟಿದ ಹಾಡುಗಳು ಬಾಂಡ್ ಶೈಲಿಯ ಚಿತ್ರದಲ್ಲಿ ಅಪಾರ ಯಶಸ್ಸು ಕಂಡಿತು.. ನನಗೆ ತುಂಬಾ ಇಷ್ಟವಾಗಿದ್ದು.. ದಾರಿ ತಪ್ಪಿದ ಮಗ ಚಿತ್ರದಲ್ಲಿ ಹಡಗಿನಲ್ಲಿ ನೆಡೆಯುವ ಹೊಡೆದಾಟಕ್ಕೆ ಇಂಗ್ಲಿಷ್ ಚಿತ್ರಗಳ ಮಾದರಿಯಲ್ಲಿ ಹಿನ್ನೆಲೆ ಸಂಗೀತ ಕೊಟ್ಟಿದ್ದು.. 

ನನಗೆ ಬಲು ಪ್ರೀತಿಯ  ನಿರ್ದೇಶಕರು ಜಿ ಕೆ ವೆಂಕಟೇಶ್.. 

ರಾಜನ್ ನಾಗೇಂದ್ರ 


ಪಗಡೆಯಾಟದಲ್ಲಿ ಬೇಕಾದ ಗರಗಳು ಬೀಳುವಂತೆ ಶಕುನಿಗೆ ವರವಿತ್ತಂತೆ.. ಈ ಸಂಗೀತ ನಿರ್ದೇಶಕ ಜೋಡಿ ಮುಟ್ಟಿದ್ದೆಲ್ಲ ಅದ್ಭುತ ಯಶಸ್ವೀ ಹಾಡುಗಳೇ.. ಚಿತ್ರಗಳಲ್ಲಿ ಒಂದು ಎರಡು ಹಾಡುಗಳು ಯಶಸ್ವೀ ಆಗೋದು ಸಾಮಾನ್ಯ.. ಆದರೆ ಇವರ ಎರಡು ಕನಸು ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್.. ಬರಿ ಸಾಮಾಜಿಕ ಚಿತ್ರಗಳು ಮಾತ್ರ ಅಂದು ಕೊಂಡರೆ.. ಊಒ ಹೂಂ.. ಶ್ರೀನಿವಾಸ ಕಲ್ಯಾಣ ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಕೇಳಿದ್ದೀರಿ..  ಕರುನಾಡಿನ ನಾಡಗೀತೆಯ ಆಗಿರುವ ನಾವಾಡುವ ನುಡಿಯೇ ಕನ್ನಡ ಹಾಡನ್ನು ಯಾರು ಮರೆತಾರು..  ನನ್ನ ಚಿತ್ರಗಳಿಗೆ ಸಂಗೀತ ಕೊಟ್ಟಿದ್ದು ಕಡಿಮೆ ಆದರೆ ಕೊಟ್ಟಿದ್ದೆಲ್ಲಾ ವಿಶಿಷ್ಟ ಹಾಗೂ ಯಶಸ್ವೀ ಹಾಡುಗಳೇ.  

ಸರಳ ಸಂಗೀತವೆನಿಸಿದರೂ, ಗಾಯನಕ್ಕೆ ನಿಂತಾಗಲೇ ಅರಿವಾಗುತ್ತಿತ್ತು ಎಷ್ಟು ಕಷ್ಟ ಈ ಹಾಡುಗಳು ಅಂತ.. 

ದಿನಕ್ಕೆ ಬರುವ ಹತ್ತು ಹಾಡುಗಳಲ್ಲಿ ಕಡೆ ಪಕ್ಷ ನಾಲ್ಕು ಹಾಡುಗಳು ಇವರ ಸಂಗೀತ ನಿರ್ದೇಶನದ್ದಾಗಿರುತ್ತದೆ.. 

ಉಪೇಂದ್ರ ಕುಮಾರ್ 


ಸಂಗೀತಕ್ಕೆ ಭಾಷೆಯೇ ಇಲ್ಲ ಅನ್ನೋದನ್ನ ಇವರು ನಿರೂಪಿಸಿದರು.. ಒರಿಸ್ಸಾ ಮೂಲದವರಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಇವರ ಸಾಧನೆ ಅಪಾರ.. ನಮ್ಮ ನಿರ್ಮಾಣದ ಚಿತ್ರಗಳಲ್ಲಿ ಇವರೇ ಆಸ್ಥಾನದ ಸಂಗೀತಗಾರರು ಅಂದರೆ ತಪ್ಪಿಲ್ಲ.. ನನ್ನ ಹಾಗೂ ನನ್ನ ಮಕ್ಕಳ ಚಿತ್ರಗಳಿಗೆ ಯಶಸ್ವೀ ಹಾಡುಗಳನ್ನು ಕೊಟ್ಟಿರೋದು ಇವರ ವಿಶೇಷ.. 

ರಾಗಗಳನ್ನು ಉಪಯೋಗಿಸಿಕೊಂಡು ಇವರು ಮೂಡಿಸುತ್ತಿದ್ದ ಚಿತ್ರಗೀತೆಗಳು ಬಲು ಸುಂದರ.. ಭಕ್ತಿಗೀತೆಗಳು ಕೂಡ ಇವರ ಸಂಗೀತದಲ್ಲಿ ಭಕ್ತಿರಸ ತುಂಬಿ ತುಳುಕುತ್ತಿದ್ದು ಇಂದಿಗೂ ಜನಮಾನಸದಲ್ಲಿ ನೆಲೆಸಿದೆ.. 

ಎಂ ರಂಗರಾವ್ 



ವೀಣೆ ರಾವ್ ಅಂತ ಹೆಸರಾಗಿದ್ದವರು ಇವರು.. ಚೆಲುವೆಯೇ ನಿನ್ನ ನೋಡಲು ಈ ಹಾಡಿನಲ್ಲಿ ವೀಣೆಯ ಸಂಗೀತ ಬಲು ಇಷ್ಟ.. ಕವಿರತ್ನ ಕಾಳಿದಾಸ ಚಿತ್ರಗೀತೆಗಳು ಅದರ ಹಿನ್ನೆಲೆ ಸಂಗೀತ ಬಲು ಇಷ್ಟ.. ಸಂಸ್ಕೃತ ಶ್ಲೋಕಕ್ಕೆ ಅವರು ನೀಡಿರುವ ಸಂಗೀತ.. ಜೊತೆಯಲ್ಲಿ ಆ ಶಬ್ದಗಳನ್ನು ಉಚ್ಚರಿಸಲು ನನಗೆ ಪ್ರೋತ್ಸಾಹ ನೀಡಿದ್ದು ಎಲ್ಲವೂ ಹಸಿರಾಗಿದೆ.. 

ಕಣ್ಣೀರ ಧಾರೆ ಈ ಹಾಡಲ್ಲಿ ಅವರು ಉಪಯೋಗಿಸಿರುವ ವಾದ್ಯ ಸಂಯೋಜನೆ ಬಲು ಇಷ್ಟ.. 

ರಂಗರಾವ್ ಅಪಾರ ಪ್ರತಿಭೆ ಇರುವ ಸಂಗೀತ ನಿರ್ದೇಶಕ

ವಿಜಯಭಾಸ್ಕರ್

ಇವರನ್ನು ನೋಡಿದಾಗೆಲ್ಲಾ ಸಂಗೀತದ ಮೇಷ್ಟ್ರು ಆಂತಾಲೇ ನನ್ನ ಕಣ್ಣ ಮುಂದೆ ಬರುತ್ತೆ.. ಆ ಎತ್ತರದ ನಿಲುವು.. ಅವರ ಸಂಗೀತ ಸಂಯೋಜನೆ ಬಲು ಶಾಸ್ತ್ರೀಯ ರೀತಿ.. ಓರೇ ಕೋರೆಗಳನ್ನು ಕಗ್ಗಂಟು ಅನಿಸಿದ್ದನ್ನು ಅವರು ಬಿಡಿಸಿ ನಮ್ಮ ಮುಂದೆ ಇಡುತ್ತಿದ್ದದ್ದು ಬಲು ಸೊಗಸು ಇವರ ನಿರ್ದೇಶನದಲ್ಲಿ ಹಾಡುವ ಸೌಭಾಗ್ಯ ಸಿಗಲಿಲ್ಲ.. ನಾ ಹಾಡಿದ್ದು ನೆನಪಿಲ್ಲ.. ಏನಾದರೂ ಹಾಡಿದ್ದಾರೆ ಮುಂದೆ ನಿನಗೆ ಹೇಳುತ್ತೇನೆ.. 

ಆದರೆ ನನ್ನ ಶಾರೀರ ಪಿ ಬಿ ಶ್ರೀನಿವಾಸ್ ಅವರ ಗಾನ ಸುಧೆಯಲ್ಲಿ ಅಪಾರವಾದ ಹಾಡುಗಳಲ್ಲಿ ಇವರ ಸಂಗೀತ ಬಲು ಸೊಗಸು.. 

ಇನ್ನೊಂದು ವಿಶೇಷ ಅಂದರೆ.. ಇವರ ಮತ್ತು ಪುಟ್ಟಣ್ಣ ಕಣಗಾಲ್ ಅವರ ಜುಗಲ್ ಬಂದಿ ಚಿತ್ರಗಳು.. ಪುಟ್ಟಣ್ಣ ಅವರ ತಲೆಯಲ್ಲಿ ಹೇಗೆ ಸಂಗೀತ ಇರಬೇಕು ಅನಿಸುತ್ತಿತ್ತೋ ಹಾಗೆ  ಇವರ ಸಂಗೀತ ಇರುತ್ತಿತ್ತು.. ಪುಟ್ಟಣ್ಣ ಅವರು ಕಟ್ಟಿ ಕೊಡುತ್ತಿದ್ದ ದೃಶ್ಯಗಳಿಗೆ ಪೂರಕವಾಗಿರುತ್ತಿತ್ತು ಇವರ ಸಂಗೀತ ಮೋಡಿ.. 

ಟಿ ಜಿ ಲಿಂಗಪ್ಪ



ಪದ್ಮಿನಿ ಪಿಕ್ಚರ್ಸ್ ಆಸ್ಥಾನದ ಸಂಗೀತ  ಅರಸರು ಇವರು.. ನನ್ನ ನೆಚ್ಚಿನ ಗುರುಗಳು ಬಿ ಆರ್ ಪಂತುಲು ಅವರ ಎಲ್ಲಾ ಚಿತ್ರಗಳಿಗೆ ಇವರದ್ದೇ ಸಂಗೀತ.. ತಾಯಿಗೆ ತಕ್ಕ ಮಗ ಚಿತ್ರದ ಎಂಥ ಸೊಗಸು ಮಗುವಿನ ಮನಸ್ಸು.. ಹಾಡಿಗೆ ಸಂಗೀತ ಬಲು ಸೊಗಸಾಗಿತ್ತು.. ಬಭೃವಾಹನ, ಭಕ್ತ ಪ್ರಹ್ಲಾದ ಚಿತ್ರಗಳ ಸಂಗೀತದ ಬಗ್ಗೆ ನಿಮಗೆ ಗೊತ್ತೇ ಇದೆ.. ಬಲು ಕಷ್ಟಕರವಾದ "ಆರಾಧಿಸುವೆ ಮದನಾರಿ" ಹಾಡಿಗೆ ನನಗೆ ಉತ್ತೇಜಿಸಿ ಹಾಡಿಸಿದ್ದು  ಇನ್ನೂ ನೆನಪಿದೆ.... ಹುಣುಸೂರು ಕೃಷ್ಣಮೂರ್ತಿಗಳ ರಚಿಸಿದ ಕಂದ ಪದ್ಯ 'ಯಾರು ತಿಳಿಯರು ನಿನ್ನ" ಕರುನಾಡಿನ ಪ್ರತಿ ಸಂಭ್ರಮಕ್ಕೂ ಬೇಕೇ ಬೇಕು.. 

ಶ್ರುತಿ ಸೇರಿದಾಗ ಚಿತ್ರದಲ್ಲಿ ಜಾನಕಿಯಮ್ಮ ಹಾಡಿರುವ ಕನಸಲ್ಲಿ ಬಂದವನಾರೇ ನನ್ನಿಷ್ಟದ ಗೀತೆ.. ಅದನ್ನು ನಾನೂ ಹಾಡಬೇಕೆಂಬ ಹಂಬಲ ಇತ್ತು.. ಅದು ಅವರಿಗೆ ತಿಳಿಯಿತೋ ಏನೋ.. ಒಟ್ಟಿನಲ್ಲಿ ಒಂದು ಪುಟ್ಟ ತುಣುಕನ್ನು ಹಾಡುವ ಅವಕಾಶ ಸಿಕ್ಕಿತು.. 

ಸತ್ಯಂ 


ಕಪ್ಪು ಬಿಳುಪು ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನದಲ್ಲಿ ಪಿ ಬಿ ಎಸ್ ಅವರು ಹಾಡಿದ್ದರು.. ಇವರ ಸಂಗೀತದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿದ್ದು ಕೆರಳಿದ ಸಿಂಹ ಚಿತ್ರದಲ್ಲಿ.. ಈ ಚಿತ್ರದ ಎಲ್ಲಾ ಹಾಡುಗಳು ಬಲು ಇಷ್ಟ.. ನನ್ನ ಅಭಿಮಾನಿಗಳು ಅನೇಕರು ಹೇಳಿದ್ದು.. ಇಂಗ್ಲಿಷ್ ಹಾಡಿನ ಸಂಗೀತದಂತಿದ್ದ ಏನೋ ಮೋಹ ಹಾಡು ನಿಮ್ಮ ಚಿತ್ರಗಳಲ್ಲಿಯೇ ವಿಶೇಷವಾದದ್ದು ಅಂತ.. ನಿಜ ಆ ರೀತಿಯ ಸಂಗೀತ ನನ್ನ ಚಿತ್ರಗಳಲ್ಲಿ ಬಂದದ್ದು ಕಡಿಮೆಯೇ.. 

ಅಮ್ಮ ನೀನು ನನಗಾಗಿ ಹಾಡಿನ ಸಂಗೀತವೂ ಬಲು ಸೊಗಸು. . 

ಇಳಯರಾಜ

ನಮ್ಮ ಜಿ ಕೆ ವೆಂಕಟೇಶ್ ಅವರ ಗರಡಿಯಲ್ಲಿ ಶಿಷ್ಯವೃತ್ತಿ ಆರಂಭಿಸಿದ್ದ ಇಳಯರಾಜ ತಮಿಳು, ತೆಲುಗು, ಮತ್ತು ಕೆಲವು ಕನ್ನಡ ಚಿತ್ರಗಳಲ್ಲಿ  ಜಾದೂ ಮಾಡಿದ್ದರು .. ಅವರ ನಿರ್ದೇಶನದಲ್ಲಿ ಹಾಡುವ ಅವಕಾಶ ನನಗೆ ಸಿಕ್ಕಿದ್ದು ನೀ ನನ್ನ ಗೆಲ್ಲಲಾರೆ.. ಚಿತ್ರದ ಫಲಿತಾಂಶ ಏನೇ ಆಗಿರಲಿ.. ಆ ಚಿತ್ರದ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲಿ ನಲಿಯುತ್ತಿದೆ.. ಅವರ ಸಂಗೀತದ ಜಾದೂ ನಿಜಕ್ಕೂ ಅದ್ಭುತ.. ಆ ಚಿತ್ರದಲ್ಲಿ ಮೂಡಿದ ಪ್ರತಿ ಹಾಡಿಗೂ ವಿಭಿನ್ನವಾಗಿ ಸಂಗೀತ ನೀಡಿದ್ದಾರೆ.. ಈ ಕಡೆ ಪಾಶ್ಚಾತ್ಯ, ಈ ಕಡೆ ಪೂರ್ವಾತ್ಯ.. ಜೊತೆಗೆ ನಮ್ಮ ನಾಡಿನ ವಾದ್ಯಗಳ ಕುಸುರಿ ಬೆರೆಸಿ ಅವರು ಬಡಿಸಿದ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಸಂಗೀತ ಸೂಪರ್.. 


ಎಲ್ ವೈದ್ಯನಾಥನ್



ಜಿ ಕೆ ವೆಂಕಟೇಶ್ ಅವರ ಇನ್ನೊಬ್ಬ ಶಿಷ್ಯನ ಸಂಗೀತ ಸಂಯೋಜನೆಯಲ್ಲಿ ನಟಿಸಿ ಹಾಡಿದ ಅನುಭವ ನನ್ನದು. ಒಂದು ಮುತ್ತಿನ ಕತೆಯಲ್ಲಿ ಜಾನಪದ ಛಾಯೆ ಜೊತೆಯಲ್ಲಿ ನಾಡಿನ ವಾದ್ಯಗಳನ್ನು ಉಪಯೋಗಿಸಿಕೊಂಡು ಸಿದ್ಧಪಡಿಸಿದ ಹಾಡುಗಳು, ಅದರ ಹಿನ್ನೆಲೆ ಸಂಗೀತ ಇಷ್ಟವಾಗುತ್ತೆ ನನಗೆ. 

******
 
ಅಣ್ಣಾವ್ರೇ ನಿಮ್ಮ ಅನೇಕಾನೇಕ ಚಿತ್ರಗಳಲ್ಲಿ ನಿಮ್ಮ ಗಾಯನ ಪ್ರತಿಭೆಗೆ ಸಾಣೆ ಹಿಡಿದ ಅನೇಕ ಸಂಗೀತ ನಿರ್ದೇಶಕರಿದ್ದಾರೆ.  ನೀವು  ಗಾಯನ ಶುರು  ಮಾಡಿದ ಮೇಲೆ, ನಿಮ್ಮ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದವರ ಬಗ್ಗೆ ನನಗೆ ತಿಳಿದಷ್ಟು ಮಾತುಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ.. 

ಶ್ರೀ ಬೇಕಾದಷ್ಟು ಇದೆ.. ಮನದಾಳದ ಮಾತುಗಳು ಹಾಗೆ ಮೂಡಿ ಬಂದಿರುವುದು ಹಾಗಾಗಿ ಇಷ್ಟವಾಗುತ್ತೆ 

ಅಣ್ಣಾವ್ರೇ ಪ್ರತಿ ದಿನವೂ, ಪ್ರತಿ ಕ್ಷಣವೂ ನಿಮ್ಮ ಬಗ್ಗೆ ನಿಮ್ಮ ಸಿನಿಮಾಗಳ ಬಗ್ಗೆ ಮಾಡುತ್ತಿದ್ದರೂ ವರ್ಷಕ್ಕೆ ಎರಡು ಬಾರಿ ಒಂದೇ ತಿಂಗಳಲ್ಲಿ ಲೇಖನ ಬರೆಯುವುದು ಓಹ್ ಕ್ಷಮಿಸಿ ನೀವು ನನ್ನಿಂದ ಲೇಖನ ಬರೆಸುವುದು ಇಷ್ಟವಾಗುತ್ತದೆ..  ಏನೇ ಆಗಲಿ ನಿಮ್ಮ ಚಿತ್ರಗಳು ವಿಶ್ವವಿದ್ಯಾಲಯವಿದ್ದಂತೆ.. ಮೊಗೆದಷ್ಟು ಮರಳಿ ಮರಳಿ ಬರುವ ವಿಷಯಗಳು ಸ್ಫೂರ್ತಿಗಳು ಅಪಾರ.. 

ನಿಮ್ಮ ಜನುಮದಿನಕ್ಕೆ ಅಕ್ಷರ, ಪದಗಳ, ವಾಕ್ಯಗಳ ಸಮರ್ಪಣೆ ಅಣ್ಣಾವ್ರೇ... 

ಶ್ರೀ ಧನ್ಯವಾದಗಳು ರಾಜ್ ಜೈತ್ರ ಯಾತ್ರೆ ಮುಂದುವರೆಸಪ್ಪ... ಶುಭವಾಗಲಿ.. !

No comments:

Post a Comment