Tuesday, May 3, 2022

ಸತಿಗೆ ಸಾಟಿಯೇ ಇಲ್ಲ ಅವಳೇ ಶಕ್ತಿ ಎನ್ನುವ ಸತಿ ಶಕ್ತಿ (1963) (ಅಣ್ಣಾವ್ರ ಚಿತ್ರ ೪೫/ ೨೦೭)

ಬದುಕಿನಲ್ಲಿ ಅವಕಾಶಗಳು ಸಿಗುವ ಬಗ್ಗೆ ನೂರಾರು  ಮಾತುಗಳಿವೆ.. ಸಿಕ್ಕ ಅವಕಾಶವನ್ನು  ಉಪಯೋಗಿಸುವ ನಿಟ್ಟಿನಲ್ಲಿ  ಪರಿಶ್ರಮ ಅಗತ್ಯ.. 

ರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಒಂಭತ್ತು ವರ್ಷಗಳಲ್ಲಿ ಹಲವಾರು ರೀತಿಯ ಪಾತ್ರಗಳು ಹುಡುಕಿಕೊಂಡು ಬಂದವು..  ಅದನ್ನು ಎರಡು ಕೈಗಳಲ್ಲಿ ಬಾಚಿಕೊಂಡು ಬೆಳೆಯುತ್ತಾ ಹೋದರು. 

ಕನ್ನಡಿಯ ಮುಂದೆ ನಿಂತಾಗ ನಮ್ಮದೇ ಬಿಂಬ ಕಾಣುತ್ತದೆ ನಿಮಗೆ ಗೊತ್ತಿರುವ ವಿಚಾರ.. ಚಲನಚಿತ್ರಗಳಲ್ಲಿ ದ್ವಿಪಾತ್ರ ಮಾಡಿದಾಗ ಒಂದು ಪಾತ್ರ ಇನ್ನೊಂದು ಪಾತ್ರದ ಮೇಲೆ ಛಾಯೆ ಬೀಳುವುದು ಸಹಜ..  ಆದ್ರೆ ಇಲ್ಲಿ ಈ ಚಿತ್ರದಲ್ಲಿ ರಾಜ್ ಕುಮಾರ್ ಅವರು ದ್ವಿಪಾತ್ರ ಮಾಡಿದ್ದಾರೋ ಅಥವ ಕನ್ನಡ ಕಲಾ ರಸಿಕರ ಪ್ರಕಾರ ಈ ಚಿತ್ರಕ್ಕಾಗಿಯೇ ದೇವರು ಇಬ್ಬರು ರಾಜ್ ಕುಮಾರ್ ಅವರನ್ನು ಸೃಷ್ಟಿಸಿದ್ದಾನೋ ಅನ್ನುವಷ್ಟು ಪ್ರಬುದ್ಧವಾಗಿ ನಟಿಸಿದ್ದಾರೆ. 






ವಿರೂಪಾಕ್ಷ, ರಕ್ತಾಕ್ಷ ಎರಡೂ ಪಾತ್ರಗಳು ಒಬ್ಬರೇ ಮಾಡಿದ್ದಾರೆ ಅನಿಸೋದೇ ಇಲ್ಲಾ .. ಒಂದು ಸೌಮ್ಯ ಪಾತ್ರವಾದರೆ.. ಇನ್ನೊಂದು ರೌದ್ರ ಪಾತ್ರ.  ಆದರೆ ಸಂಭಾಷಣೆ ಹೇಳುವ ರೀತಿ,  ಆಂಗೀಕ  ಅಭಿನಯ.. ಮುಖಾಭಿನಯ ಎಲ್ಲವೂ ವಿಭಿನ್ನ.. 

ತಮ್ಮ ಪಾತ್ರದ ಆಳವನ್ನು ಅರಿತು, ಅದನ್ನು ಬೆಳೆಸಿಕೊಂಡು ಹೋಗಿ ನಿರ್ದೇಶಕರ, ಮತ್ತು ಕಥೆಗೆ ತಕ್ಕ  ಹಾಗೆ ಅಭಿನಯ ನೀಡಿದ್ದಾರೆ. ಅವರ ದೃಶ್ಯಗಳನ್ನು ನೋಡೋದೇ ಒಂದು ಹಬ್ಬ.  


ಅವರ ಅಭಿನಯದಲ್ಲಿ ಶಿಖರವನ್ನು ಏರುತ್ತಿರುವುದು ನಿಚ್ಚಳವಾಗಿ ಕಾಣುತ್ತದೆ.  ಅವರ ಅಭಿನಯ ನೋಡೋದೇ ಒಂದು ಸಂತಸದ ಅನುಭವ ನೀಡುತ್ತದೆ. 

ರಕ್ತಾಕ್ಷ ಪಾತ್ರದ ಮುಖದ ಅಭಿನಯಕ್ಕೆ ಸಿದ್ಧ ಪಡಿಸಿರುವ  ನೆರಳು ಬೆಳಕಿನ ವಿನ್ಯಾಸ ಇಷ್ಟವಾಗುತ್ತದೆ. ಅವರ ಸಂಭಾಷಣೆಯ ರೌದ್ರತೆಗೆ ತಕ್ಕಂತೆ ಬೆಳಕಿನ ಆಟ ಇಷ್ಟವಾಗುತ್ತದೆ. 

ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.  

ಇವರ ಜೊತೆ  ಸರಿಸಾಟಿಯಾಗಿ ಎಂ ವಿ ರಾಜಮ್ಮ ಪಂಪಿಯಾಗಿ ಅದ್ಭುತ ಅಭಿನಯ ನೀಡಿದ್ದಾರೆ. ತಮ್ಮ ಸಂಸಾರ ಕತೆ ಒಂದು  ಕಡೆ.. ರಾಜ್ಯದ ಅರಾಜಕತೆ ಒಂದು ಕಡೆ.. ಜಾತಿ ಗಲಾಟೆ, ತಮ್ಮನ್ನು ಪಟ್ಟದಿಂದ ಇಳಿಸಿ ಉತ್ತಮ ಜಾತಿಯವರನ್ನು  ಪಟ್ಟದ ರಾಣಿಯಾಗಿ  ಬಂದಾಗ ಆ ಸಮಯದಲ್ಲಿ ಅಭಿನಯ ಇಷ್ಟವಾಗುತ್ತದೆ. 

ಗುರುವಿನ ಪಾತ್ರದಲ್ಲಿ ಅಶ್ವಥ್ ಅಭಿನಯ.. ಸಾಹುಕಾರ್ ಜಾನಕೀ ಒಂದು ರೀತಿಯ ಖಳನಾಯಕಿ ಛಾಯೆಯ ಪಾತ್ರ.. ಪ್ರೇತವಾಗಿ ಪಾಪಮ್ಮ, ಹಾಸ್ಯ  ಪಾತ್ರದಲ್ಲಿ ಅಲ್ಲಲ್ಲಿ ಕಾಣ ಸಿಗುವ ನರಸಿಂಹರಾಜು, ಬಿ ರಾಘವೇಂದ್ರರಾವ್ ಇವರ ಜೊತೆಯಲ್ಲಿ ಸಹನಟರ ಅಭಿನಯ ಚಿತ್ರಕ್ಕೆ ಕಳೆ ಕೊಟ್ಟಿದೆ. 





ಪರಶಿವ, ತನ್ನ ಶಿವೆಯ ಜೊತೆ ನಾಟ್ಯವಾಡುವಾಗ ಕಂಕಣಗಳು ಬಿದ್ದು ಹೋದಾಗ.. ಶಿವೆ ಆ ಕಂಕಣಗಳಿಗೆ ಶಾಪ ಕೊಟ್ಟು.. ಭೂಲೋಕದಲ್ಲಿ ಯಾರ ಕೈಗೆ ಸೇರುತ್ತದೆಯೋ  ಅವರ ಮನಸ್ಸು ಚಂಚಲವಾಗಿ ಹದಗೆಟ್ಟು ಎಲ್ಲರಿಗೂ ತೊಂದರೆಯಾಗುತ್ತದೆ...  ಎಂದು ಹೇಳಿ ಬಿಸಾಡುತ್ತಾಳೆ.. ಅದು ಭೂಲೋಕದಲ್ಲಿ ಸಿಕ್ಕವರ  ಬದುಕು ಮೂರಾಬಟ್ಟೆಯಾಗುತ್ತದೆ. 

ದೇವಿ ಮಹಾತ್ಮೆ, ಪಂಪಾಕ್ಷೇತ್ರ ಮಹಾತ್ಮೆ, ಮುಂತಾದ ಪುರಾಣಕತೆಗಳ ಸಾರಾಂಶಗಳನ್ನು ಎತ್ತಿಕೊಂಡು ಕಥೆ ಹೆಣೆದಿದ್ದಾರೆ ಕಣಗಾಲ್ ಪ್ರಭಾಕರ್ ಶಾಸ್ತ್ರಿ. 

ಇದೊಂದು ಪರಿಪೂರ್ಣ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ಮೂಸೆಯಲ್ಲಿ ಅರಳಿದ ಚಿತ್ರವಿದು. ಅದಕ್ಕೆ ಟಿ ಜಿ ಲಿಂಗಪ್ಪ ಅವರ ಸಂಗೀತವಿದೆ.. ಅನೇಕಾನೇಕ ಹಾಡುಗಳಿಗೆ ಘಂಟಸಾಲ, ಪಿ ಬಿ ಶ್ರೀನಿವಾಸ್, ಪಿ ಲೀಲಾ, ಎಸ್ ಜಾನಕೀ, ಕೋಮಲ ಇವರೆಲ್ಲಾ ದನಿಯಾಗಿದ್ದಾರೆ. 

ಕರ್ಣನ್, ಸುಂದರಬಾಬು ಅವರ ಛಾಯಾಗ್ರಹಣ ವಿಶೇಷ ಚಪ್ಪಾಳೆಗಿಟ್ಟಿಸುತ್ತದೆ.   ದ್ವಿಪಾತ್ರಗಳ ಚಿತ್ರೀಕರಣ ಸೊಗಸಾಗಿದೆ.  

ರಾಜ್ ಅವರ ಸೌಮ್ಯ ಪಾತ್ರಗಳೇ ಹಿಂದಿನ ಅಷ್ಟೂ ಚಿತ್ರಗಳಲ್ಲಿ ವಿಜೃಂಭಿಸಿದ್ದಾಗ ಈ ಚಿತ್ರದಲ್ಲಿ ಅವರ ಮಂತ್ರವಾದಿ ಪಾತ್ರ ನಿಜಕ್ಕೂ ಹಿಟ್ ಆಗಿದೆ ಹಾಗೂ ಅದ್ಭುತವಾಗಿದೆ.  ರಾಜ್ ಕುಮಾರ್ ಅವರು ಅಕಸ್ಮಾತ್ ಅನೇಕ ಚಿತ್ರಗಳನ್ನು ಖಳಛಾಯೆ ಇರುವ ಪಾತ್ರಗಳಲ್ಲಿ ಉಪಯೋಗಿಸಿದ್ದರೆ ಅವರ ಅಭಿನಯದ ಇನ್ನೊಂದು ಮಗ್ಗುಲಿನ ಪರಿಚಯವಾಗುತ್ತಿತ್ತು. 

ಮಾತೆಗೆ ಮಿಗಿಲಾದ ದೇವರಿಲ್ಲ ಹಾಡಿನಲ್ಲಿ ಆ ಪುಟ್ಟ ಪುಟಾಣಿಯ ಅಭಿನಯ ಚೆನ್ನಾಗಿದೆ.  ಉಳಿದ ಹಾಡುಗಳು ಚೆನ್ನಾಗಿವೆ. 

ಮತ್ತೊಂದು ರಾಜ್ ಕುಮಾರ್ ಅವರ ಚಿತ್ರದ ಜೊತೆ ಸಿಗೋಣ.. !

No comments:

Post a Comment