ಅಣ್ಣಾವ್ರೇ ನಿಮ್ಮಲ್ಲಿ ಒಂದು ಮಾತು ಕೇಳಬೇಕಿತ್ತು..
ಯಾಕಪ್ಪ ಶ್ರೀಕಾಂತ ಇವತ್ತು ಬಹಳ ತಡವಾಗಿದೆ.. ನಿನ್ನ ಬರಹವನ್ನು ಓದೋಕೆ ಅಂತ ನಾನು ಪಾರ್ವತಿ ಕಾದು ಕುಳಿತಿದ್ದೀವಿ.. !
ಅಣ್ಣಾವ್ರೇ ಇದು ದೊಡ್ಡ ಮಾತು.. ನನ್ನ ಬರಹ ನೀವು ಓದೋಕೆ ಕಾಯೋದು.. ಯಪ್ಪೋ.. ತಲೆ ಮೇಲೆ ಕೊಂಬು ಬೆಳೆಯುತ್ತೆ ಅಣ್ಣಾವ್ರೇ.. ನಿಮ್ಮ ಮೇಲಿನ ಅಭಿಮಾನ.. ನಿಮ್ಮ ಚಿತ್ರಗಳಿಂದ ನಾ ಕಲಿತ, ನಾ ಕಲಿಯುತ್ತಿರುವ ಪಾಠಗಳು ನನಗೆ ದಾರಿ ದೀವಿಗೆ ಆಗಿವೆ. ಅಂತಹ ಹಾದಿಯಲ್ಲಿ ನಾ ನೆಡೆಯಲು ಪ್ರಯತ್ನ ಪಡುತ್ತಿರುವಾಗ ನೀವು ನನ್ನ ಬರಹಕ್ಕೆ ಕಾಯುತ್ತಿರುವುದು ಎಂದಾಗ ಮೈ ಜುಮ್ ಎನ್ನಿಸುತ್ತದೆ..
ಮನದಲ್ಲಿ ನವಿರಾದ ಭಾವ ಇರುವಾಗ.. ಅಹಂ ಬರೋದಿಲ್ಲ ಕಣಪ್ಪ.. ಇರಲಿ ಅದೇನೋ ಮಾತು ಅಂದೆಯಲ್ಲ ಏನದು.. ?
ಅಣ್ಣಾವ್ರೇ ಇನ್ನೂರಕ್ಕೂ ಹೆಚ್ಚಿನ ಚಿತ್ರಗಳು, ಸಾವಿರಾರು ಹಾಡುಗಳು.. ಕೋಟಿ ಕೋಟಿ ಅಭಿಮಾನಿಗಳು.. ಅಲ್ಲಲ್ಲ ನಿಮ್ಮ ಭಾಷೆಯಲ್ಲಿ ಹೇಳೋದಾದರೆ ಅಭಿಮಾನಿ ದೇವರುಗಳು.. ನಿಮ್ಮ ಚಿತ್ರಗಳನ್ನು ನೋಡಿ ಬದುಕನ್ನು ಹಸನು ಮಾಡಿಕೊಂಡವರು.. ಇಂದಿಗೂ ನಿಮ್ಮನ್ನು ಆರಾಧ್ಯ ದೈವವಾಗಿ ಕಾಣುವವರು.. ದೇವರಂತೆ ನಿಮ್ಮನ್ನು ಪೂಜಿಸುವವರು.. ಹೀಗೆ ಸುಮಾರು ಐವತ್ತಕ್ಕೂ ಹೆಚ್ಚಿನ ವರ್ಷಗಳ ಆ ಅಭಿಮಾನದ ಸಾಗರದ ಅಲೆಗಳನ್ನು ಹೇಗೆ ನಿಭಾಯಿಸಿದಿರಿ.. ಎಲ್ಲೂ ನಿಮ್ಮ ಪಾತ್ರಗಳಲ್ಲಿಯೇ ಆಗಲಿ.. ನಿಮ್ಮ ಸಾಮಾಜಿಕ ನಡೆವಳಿಕೆಯಲ್ಲಾಗಲಿ, ಸಂಗೀತ ಕಾರ್ಯಕ್ರಮಗಳಲ್ಲಿ, ಸಂದರ್ಶನಗಳಲ್ಲಿ, ನಿಮ್ಮ ಸಹಕಲಾವಿದರ ಬಗ್ಗೆ ಮಾತಾಡುವಾಗ.. ಹೀಗೆ ಅನೇಕಾನೇಕ ಪ್ರಸಂಗಗಳಲ್ಲಿ ನಿಮ್ಮ ಮುಗ್ಧಮಾತುಗಳು , ನಿಮ್ಮ ಮುಗ್ಧ ಪ್ರೀತಿ ಎಂದಿಗೂ ಮರೆಯಾಗಿರಲಿಲ್ಲ.. ನಿಮ್ಮನ್ನು ಅಷ್ಟೆತ್ತರಕ್ಕೆ ಕೂರಿಸಿದ್ದರೂ, ಪ್ರತಿಯೊಬ್ಬ ಸಿನಿ ರಸಿಕರ ಮನದಲ್ಲಿ ಅನಭಿಷಿಕ್ತ ರಾಜನಾಗಿದ್ದರೂ ನಿಮ್ಮ ಸರಳತೆ ಮಾಯವಾಗಲಿಲ್ಲ.. ಇದರ ಬಗ್ಗೆ ಒಂದಷ್ಟು ಮಾತುಗಳನ್ನು ಹೇಳಿ ..ಇವತ್ತ್ಯಾಕೋ ನಿಮ್ಮ ಚಿತ್ರಗಳ ಬಗ್ಗೆ, ಅಭಿನಯದ ಬಗ್ಗೆ ಬಿಟ್ಟು ಬೇರೆ ಮಾತಾಡೋಣ ಅನ್ನಿಸುತ್ತಿದೆ.. !
ಶ್ರೀ.. ನಿನ್ನ ಹೀಗೆ ಕರೆಯಬಹುದಾ.. ಸುಮಾರು ವರ್ಷಗಳಿಂದ ನನ್ನ ಪುಣ್ಯದಿನದಂದು, ಹಾಗೂ ಜನುಮದಿನಕ್ಕೆ ಏನಾದರೂ ಹೊಸ ಹೊಸದಾಗಿ ಬರೆಯುತ್ತಲೇ ಇದ್ದೀಯ.. ನನ್ನ ಅಭಿನಯದ ಅಷ್ಟೂ ಚಿತ್ರಗಳ ಬಗ್ಗೆ ಬರೆಯೋಕೆ ಶುರು ಮಾಡಿದೀಯ.. ಹಾಗಾಗಿ ಆ ಸಲುಗೆಯಿಂದ ನಿನ್ನ ಶ್ರೀ ಅಂತ ಕರೆಯುತ್ತೇನೆ.. ಬೇಸರವಿಲ್ಲವೇ.. !
ಅಣ್ಣಾವ್ರೇ.. ನನ್ನ ಪ್ರೀತಿ ಮಾಡೋರು.. ನನ್ನ ಇಷ್ಟ ಪಡೋರು.. ನನ್ನ ಕರೆಯೋದೆ ಹಾಗೆ.. ಆ ಪಟ್ಟಿಯಲ್ಲಿ ನೀವು ಇದ್ದೀರಾ ಅನ್ನೋದನ್ನ ನೆನೆಸಿಕೊಂಡರೆ.. ಮೈ ಜುಮ್ ಅನ್ನಿಸುತ್ತದೆ.. ಹೇಳಿ ಅಣ್ಣಾವ್ರೇ.. !
ಶ್ರೀ.. ಬದುಕು ಒಂದು ಹೂವಿನ ಹಾಗೆ.. ನಗುವೇ ಆ ಸುಮದ ಪರಿಮಳವು.. ಅದೇ ಕಣ್ಣು ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್ ಹಾಡಿದ ಸಾಲಿದು.. ಬಹುಶಃ ನಾ ಇದನ್ನೇ ಪಾಲಿಸಿಕೊಂಡುಬರುವಂತೆ ಆ ಭಗವಂತ ನನಗೆ ಆಜ್ಞೆ ಮಾಡಿದ ಅನ್ನಿಸುತ್ತೆ.. ಹಾಗೆ ಬದುಕಿದೆ.. ಹೂವಿನ ಆಯಸ್ಸು ಕಡಿಮೆ ಇರುತ್ತೆ.. ಆದರೆ ಅದರ ಜೀವನದ ಭಾಗದಲ್ಲಿ ಪರಿಮಳವನ್ನು ಸೂಸುತ್ತಿರುತ್ತದೆ.. ಅವರು ಇವರು ಅಂತಿಲ್ಲ.. ಆ ದೇವರು ಈ ದೇವರು ಅಂತಿಲ್ಲ .. ಎಲ್ಲರಿಗೂ ಸಲ್ಲುತ್ತದೆ.. ಮತ್ತೆ ಭಗವಂತ ಕೊಟ್ಟಿರುವ ಪರಿಮಳವನ್ನು, ಸೌಂದರ್ಯವನ್ನು ಧಾರೆಯೆರೆದು ತನ್ನ ಸುತ್ತ ಮುತ್ತಲ ತಾಣವನ್ನು, ಅದನ್ನು ತಾನು ಉಪಯೋಗಕ್ಕೆ ಬರುವ ತಾಣದ ಪಾವಿತ್ರತೆಯನ್ನು ಹೆಚ್ಚಿಸುವದಷ್ಟೇ ಅದರ ಕಾಯಕ.. ಅದನ್ನೇ ನಾನು ಪಾಲಿಸಬೇಕು ಎಂದು ನನ್ನ ಅಪ್ಪಾಜಿ ಹೇಳಿಕೊಟ್ಟಿದ್ದರು.. ಅವರೂ ಕೂಡ ಹಾಗೆ ಬದುಕಿದ್ದರು, ಅದನ್ನೇ ಪಾಲಿಸಬೇಕೆಂದು ಹೇಳಿದ್ದರು ಅಷ್ಟೇ.. ಅದೇ ಹಾದಿಯಲ್ಲಿ ನೆಡೆಯೋಕೆ ಪ್ರಯತ್ನ ಮಾಡಿದೆ ಅಷ್ಟೇ..
ಅಣ್ಣಾವ್ರೇ ಸರಳವಾದ ಮಾತು ನಿಮ್ಮದು.. ಹಾಗೆ ಸರಳವಾದ ಜೀವನ ಸೂತ್ರ.. ಆದರೆ ಇದನ್ನು ಅನುಸರಿಸುವುದು ಕಷ್ಟ ಅನಿಸೋದಿಲ್ವೇ..
ಇಲ್ಲಾ ಶ್ರೀ.. ಕಷ್ಟ ಹಾದಿಯನ್ನು ತುಳಿಯೋದರಲ್ಲಿಯೇ ಸಾಧನೆ ಇರೋದು.. ಇದನ್ನು ಮಾಸ್ಟರ್ ಪ್ಲಾನ್ ಅಂತಾರೆ.. ನನ್ನ ಚಿತ್ರ ನೀ ನನ್ನ ಗೆಲ್ಲಲಾರೆ .. ನೋಡಿದೆಯಾ ಚಿತ್ರದ ಹೆಸರು ನೀ ನನ್ನ ಗೆಲ್ಲಲಾರೆ ಅಂತಿದೆ.. ಅಂದರೆ ಭಗವಂತ ಹೇಳುತ್ತಿರುತ್ತಾನೆ.. ನೀ ನನ್ನ ಗೆಲ್ಲಲಾರೆ.. ನೀ ನಿನ್ನ ಮನವನ್ನು ಗೆದ್ದರೆ.. ನೀನು ನಿನ್ನನ್ನು ಗೆಲ್ಲಬಹುದು.. ಅಂತ.. ಅಷ್ಟೇ ಕಣಪ್ಪ.. ಹಾ.. ನೀ ನನ್ನ ಗೆಲ್ಲಲಾರೆ ಚಿತ್ರದಲ್ಲಿ ಅಂತಿಮ ದೃಶ್ಯಗಳಲ್ಲಿ ನನ್ನ ನೆಚ್ಚಿನ ಸಹನಟ.. ತೂಗುದೀಪ ಹೇಳುತ್ತಾರೆ.. "ನೋಡಿದೆಯಾ ನನ್ನ ಮಾಸ್ಟರ್ ಪ್ಲಾನ್ ಹೇಗಿದೆ" ಅಂತ.. ಆಗ ನಮ್ಮ ಚಿ ಉದಯಶಂಕರ್ ಬರೆದಿರುವ ಸಂಭಾಷಣೆ ತುಣುಕು ನೋಡು..
ಕಪ್ಪೆನ ನುಂಗೋಕೆ ಹಾವು ಕಾಯ್ತಾ ಇರುತ್ತಂತೆ
ಹಾವನ್ನು ತಿನ್ನೋಕೆ ಗರುಡ ಹಾರಾಡ್ತಾ ಇರುತ್ತಂತೆ
ಆ ಗರುಡನ ಮೇಲೆ ಒಬ್ಬ ಕೂತು ನೋಡ್ತಾ ಇರ್ತಾನಂತೆ... ಅವನದು ಮಾಸ್ಟರ್ ಕಣೋ.. ನಂದು ನಿಂದು ಅಲ್ಲ..
ಅವರ ಭಂಗಿಯನ್ನು .. ಸರಳ ಜೀವನವನ್ನು ಅನುಸರಿಸುವ ಒಂದು ಪ್ರಯತ್ನ |
ಅಣ್ಣಾವ್ರ ಗಾಜನೂರು ಮನೆಗೆ ಭೇಟಿ ಕೊಟ್ಟಾಗ.. ! |
ಅತ್ಯುತ್ತಮ ನುಡಿ ನಮನ ಸಾರ್...
ReplyDelete