"ಮಸಣದ ಹೂವು ಸಿನಿಮಾ ಮುಗಿಸಿದ್ದರೇ ಇನ್ನೊಂದಷ್ಟು ಸಿನಿಮಾ ತೆಗೆಯುವ ಆಸೆ ಇತ್ತು.. ಇನ್ನಷ್ಟು ಕಾದಂಬರಿಗಳನ್ನು ಕೊಡುವ ಮನಸ್ಸು ಇತ್ತು.. ಆದರೆ ಆ ಜಗನ್ಮಾತೆ ಪುಟ್ಟಣ್ಣ ಬಂದು ಬಿಡು ಅಂದಳು ಹೊರಟೆ ಬಿಟ್ಟೆ ಶ್ರೀ.. "
ಬೆಳಗಿನ ಜಾವ ಈ ಮಾತುಗಳು ನನ್ನ ಕಿವಿಯಲ್ಲಿ ಯಾರೋ ಹೇಳುತ್ತಿದ್ದಾರೆ ಅನ್ನುವ ಹಾಗೆ ಕನಸು..
ಅರೆ ಹೌದು ನನ್ನ ನೆಚ್ಚಿನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರದ್ದೇ ಧ್ವನಿ.. ಅದೇ ಎಣ್ಣೆ ಹಾಕಿ ಬಾಚಿದ ಕಪ್ಪು ಬಿಳಿ ತಲೆಗೂದಲು.. ಹಣೆಯಲ್ಲಿ ವಿಭೂತಿ.. ಅದರ ಮಧ್ಯೆ ಕುಂಕುಮ.. ಆಗ ತಾನೇ ಸಂಧ್ಯಾವಂದನೆ ಮುಗಿಸಿ ಬಂದಿದ್ದರು..
ನನ್ನ ನೆಚ್ಚಿನ ವ್ಯಕ್ತಿಯನ್ನು ಬೆಳಿಗ್ಗೆಯೇ ನೋಡಿ ಖುಷಿಯೋ ಖುಷಿ. "ಪುಟ್ಟಣ್ಣ ಸರ್.. ನಿಮ್ಮ ಚಿತ್ರಗಳಿಂದ ಪ್ರಭಾವಕ್ಕೆ ಒಳಗಾದವನು ನಾನು. ನಿಮ್ಮ ಚಿತ್ರಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ನಿಮ್ಮ ಜೊತೆ ಒಂದಷ್ಟು ಮಾತಾಡಬೇಕಿತ್ತು.. "
"ಶ್ರೀ ಮಾತಾಡೋಣ.. ಈಗ ನೀನು ಸಂಧ್ಯಾವಂದನೆ ಮಾಡೋಕೆ ಹೊರಟಿದ್ದೀಯ... ನಾನು ಇಲ್ಲಿಯೇ ನಿನ್ನ ಮನೆಯ ಬಾಲ್ಕನ್ನಿಯಲಿ ಕುಳಿತು ನೀ ಬರೆದ ನನ್ನ ಇಪ್ಪತ್ತನಾಲ್ಕು ಚಿತ್ರಗಳ ಬ್ಲಾಗ್ ಓದುತ್ತಾ ಇರುತ್ತೇನೆ.. ಮೊದಲು ಸಂಧ್ಯಾವಂದನೆ ಮುಗಿಸು.. ಆ ಗಾಯತ್ರಿ ದೇವಿ ನಿನಗೆ ಒಳ್ಳೆಯದನ್ನೇ ಮಾಡುತಾಳೆ.. "
"ಸರಿ ಪುಟ್ಟಣ್ಣ ಸರ್.. "ಎಂದು ಹೇಳಿ ಸಂಧ್ಯಾವಂದನೆ ಮಾಡೋಕೆ ಕುಳಿತೆ..
ನಾ ಬರುವ ಹೊತ್ತಿಗೆ.. ಅವರು ಅಷ್ಟು ಲೇಖನಗಳನ್ನು ಓದಿದ್ದರು.. ಅವರ ಜನುಮದಿನ ಮತ್ತು ಲಾಗ್ ಔಟ್ ಆದ ದಿನಗಳ ಬಗ್ಗೆ ಬರೆದಿದ್ದ ಲೇಖನಗಳನ್ನು ಓದಿದ್ದರು..
"ಶ್ರೀ ಎಷ್ಟು ಚೆನ್ನಾಗಿ ಬರೆದಿದ್ದೀಯ.. ನನ್ನ ಚಿತ್ರಗಳನ್ನು ಉತ್ತಮವಾಗಿ ವಿಮರ್ಶೆ ಮಾಡಿದ್ದೀಯಾ.. ಧನ್ಯವಾದಗಳು"
"ಪುಟ್ಟಣ್ಣ ಸರ್.. ಅದು ದೊಡ್ಡ ಮಾತು.. ವಿಮರ್ಶೆ ಖಂಡಿತ ಅಲ್ಲ ಅನಿಸುತ್ತೆ.. ನಿಮ್ಮ ಚಿತ್ರಗಳನ್ನು ವಿಮರ್ಶೆ ಮಾಡಲು ಇಬ್ಬರಿಗೆ ಮಾತ್ರ ಸಾಧ್ಯ.. "
"ಹೌದಾ ಯಾರಪ್ಪ ಆ ಇಬ್ಬರು"
"ಒಬ್ಬರು ಜಗನ್ಮಾತೆ.. ಇನ್ನೊಬ್ಬರು ನೀವು... "
ಜೋರಾಗಿ ನಕ್ಕರು.... "ಸರಿ ಏನೋ ಮಾತಾಡಬೇಕು ಅಂದೆಯಲ್ಲ ಏನಪ್ಪಾ ಅದು.."
"ಪುಟ್ಟಣ್ಣ ಸರ್.. ನೀವು ಚಿತ್ರಗಳಿಗೆ ನೆಡೆಸುವ ತಯಾರಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ.. ನಾ ಮಾಡುವ ಕೆಲಸಗಳಲ್ಲಿಯೂ ಕೂಡ ಅದೇ ರೀತಿಯ ತಯಾರಿ ಮಾಡಿಕೊಳ್ಳಬೇಕು.. ಅದನ್ನು ಕಲಿತುಕೊಳ್ಳಬೇಕು ಎನ್ನುವ ಹಂಬಲ ದಯಮಾಡಿ ಅದರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುತ್ತೀರಾ.."
"ಆಗಲಿ ಶ್ರೀ.. ನನ್ನ ಚಿತ್ರಗಳು ಅನ್ನೋದಕ್ಕಿಂತ.. ಕನ್ನಡ ಚಿತ್ರಗಳ ಬಗ್ಗೆ ನಿನಗಿರುವ ಅಭಿಮಾನಕ್ಕೆ ನಾ ನಮಸ್ಕರಿಸುತ್ತೇನೆ.. ಶ್ರೀ ಯಾವುದೇ ಚಿತ್ರ ಮಾಡಬೇಕು ಎನ್ನುವ ಮನಸ್ಸು ಬರೋದಕ್ಕೆ ನಾ ಸಿದ್ಧಗೊಳ್ಳುತ್ತಿದ್ದ ರೀತಿ ಹೀಗಿದೆ.. "
"ಮೊದಲು ನೀನು ಏನು ಮಾಡಬೇಕು ಎಂದು ನಿರ್ಧರಿಸು ನಿರ್ಧರಿಸದ ಮೇಲೆ ಮತ್ತೆ ಆ ನಿರ್ಧಾರದಲ್ಲಿ ಬದಲಾವಣೆ ತರಬೇಡ ನಿನ್ನ ತಲೆಯೊಳಗೆ ಆ ಯೋಜನೆ ಪೂರ್ಣ ಸಿದ್ಧವಾಗಬೇಕು ಒಮ್ಮೆ ಸಿದ್ಧವಾದ ಮೇಲೆ.. ಕಥಾವಸ್ತುವನ್ನು ಕೈಗೆತ್ತಿಕೊ ಅದರಲ್ಲಿನ ಒಳ್ಳೆಯ ಅಂಶಗಳನ್ನು ಪಟ್ಟಿ ಮಾಡಿಕೊಅದಕ್ಕೆ ಕಥಾರೂಪ ಕೊಡು.. ಕಥಾರೂಪಕ್ಕೆ ಚಿತ್ರಕತೆಯ ಚೌಕಟ್ಟು ಕೊಡು ಈ ನಿನ್ನ ತಲೆಯೊಳಗಿರುವ ಯೋಜನೆಗೆ ಒಂದು ಚೌಕಟ್ಟು ಸಿಕ್ಕ ಹಾಗೆ ಆಯ್ತು ಇನ್ನು ಮುಂದೆ ಮಾಡಬೇಕಿರುವುದು ಆ ಚೌಕಟ್ಟಿನೊಳಗೆ ಪಾತ್ರಗಳನ್ನು ಕೂರಿಸುವುದುಆ ಪಾತ್ರಗಳಿಗೆ ಸರಿಯಾದ ನಟ ನಟಿಯರನ್ನು ಆಯ್ಕೆ ಮಾಡಿಕೊ ನಂತರ ಬರುವುದು ಸಂಭಾಷಣೆ.. ಸಿನಿಮಾಗಳಿಗೆ ಹಾಡು ಬೇಕೇ ಹೊರತು.. ಹಾಡುಗಳಿಗೆ ಸಿನಿಮಾ ಅಲ್ಲ.. ಹಾಗಾಗಿ ಸನ್ನಿವೇಶವನ್ನು, ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಹಾಡುಗಳನ್ನು ಸಿದ್ಧ ಮಾಡಿಕೊ .. ಅದಕ್ಕೆ ಸಂಗೀತ ನಿರ್ದೇಶಕರು, ಸಾಹಿತಿಗಳು ನಿನ್ನ ಕೈಗೆ ಕೈಯನ್ನುಜೋಡಿಸುತ್ತಾರೆ.. ಇಷ್ಟು ಆದ ಮೇಲೆ.. ಒಂದಷ್ಟು ಹೊತ್ತು, ದಿನಗಳನ್ನು ಬಿಟ್ಟು ಬಿಡು.. ಆ ದಿನಗಳಲ್ಲಿ ಪ್ರತಿ ದೃಶ್ಯಗಳನ್ನು ಚಿತ್ರಿಸುವ ರೀತಿ, ಸ್ಥಳ, ಹಗಲು, ಇರುಳು, ಮಳೆ, ಬಿಸಿಲು, ಚಳಿ ಇವನ್ನೆಲ್ಲ ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಪಟ್ಟಿ ಮಾಡಿಕೊ..
ಈಗ ನಿನ್ನ ತಲೆಯೊಳಗೆ ಇಡೀ ಚಿತ್ರ ಸಿದ್ಧವಾಗಿದೆ.. ಇನ್ನು ಮಾಡಬೇಕಿರುವುದು ತಲೆಯೊಳಗಿರುವುದನ್ನು ಕ್ಯಾಮೆರಾದೊಳಗೆ ತರುವುದು.. ಇಷ್ಟು ಮಾಡಿದರೆ ನಿನ್ನ ಚಿತ್ರ ಗೆದ್ದಂತೆ..
ಇವಿಷ್ಟು ನನ್ನ ಬೆಳ್ಳಿಮೋಡ ದಿನದಿಂದ ಮಸಣದ ಹೂವಿನ ಅರ್ಧ ಚಿತ್ರದ ತನಕ ನಾ ಪಾಲಿಸಿಕೊಂಡು ಬಂದ ಜಗನ್ಮಾತೆ ಹೇಳಿಕೊಟ್ಟ ಪಾಠಗಳು.. ಒಂದು ಚೂರು ಬದಲಾವಣೆ ಮಾಡಿಕೊಳ್ಳಲಿಲ್ಲ.. ಕೆಲವು ಚಿತ್ರಗಳು ಗೆದ್ದವು.. ಕೆಲವು ಚಿತ್ರಗಳು ಬಿದ್ದವು.. ಆದರೆ ಚಿತ್ರರಸಿಕರಿಗೆ ನನ್ನ ಎಲ್ಲಾ ಚಿತ್ರಗಳು ರತ್ನಗಳಾಗಿ ಉಳಿದಿದ್ದು ಸೋಜಿಗ ಅನಿಸುತ್ತಿದೆ.. "
"ಪುಟ್ಟಣ್ಣ ಸರ್.. ಅದ್ಭುತ ಮಾತುಗಳು.. ನಿಮ್ಮ ಜಗನ್ಮಾತೆ ಹೇಳಿಕೊಟ್ಟಿದ್ದನ್ನು ಪಾಲಿಸಿ ಚಿತ್ರರತ್ನಗಳನ್ನು ಕೊಟ್ಟಿರಿ.. ನೀವು ಹೇಳಿದ ಚಿತ್ರ ತಯಾರಿಕೆಯ ಸಿದ್ಧತೆಗಳನ್ನೇ ನಾನು ನನ್ನ ಕೆಲಸಗಳು, ಯೋಜನೆಗಳು, ಮತ್ತು ಯೋಚನೆಗಳಿಗೆ ಹೊಂದಿಸಿಕೊಂಡು ಮುಂದುವರೆಯುತ್ತೇನೆ.. ನಿಮ್ಮ ಆಶೀರ್ವಾದವಿರಲಿ.. "
"ಶ್ರೀ.. ನಿನಗೆ ಖಂಡಿತ ಶುಭವಾಗುತ್ತೆ.. ನೆಡೆಯುವ ಹಾದಿ ನಮಗೆ ಸ್ಪಷ್ಟವಿದ್ದಾಗ ಗೆಲುವು, ಸೋಲು, ಜಯ, ಅಪಜಯಗಳ ಗೊಂದಲ ನಮ್ಮ ತಲೆಗೆ ತಟ್ಟುವುದೇ ಇಲ್ಲ.. ಜೊತೆಗೆ ಯಶಸ್ಸು ಸೋಲು ತಲೆಗೆ ಹೋಗದೆ.. ಅದರಿಂದ ಪಾಠ ಕಲಿಯುತ್ತ ಹೋದಾಗ ಜೀವನ ಆಗಸದಲ್ಲಿ ಸದಾ ಬೆಳ್ಳಿ ಮೋಡ ಇದ್ದೆ ಇರುತ್ತದೆ.. "
ಪ್ರವರ ಹೇಳಿ ಪುಟ್ಟಣ್ಣನವರಿಗೆ ನಮಸ್ಕರಿಸಿದೆ.. "ಶತಮಾನಂಭವತಿ ಶತಾಯುಹ್ ಪುರುಷಃ ಶತೇಂದ್ರಿ ಯೈ ಪ್ರತಿತಿಷ್ಠತಿ"
"ಶ್ರೀ ಶ್ರೀ.. ತಡವಾಗ್ತಿದೆ ಆಫೀಸಿಗೆ ಹೋಗೋಲ್ವ.. ಏಳಿ ಏಳಿ" ಅಂತ ಅಲುಗಾಡಿಸಿದಾಗ ಎಚ್ಚರ..
ಆಹಾ ಇಂತಹ ಸುಂದರ ಕನಸ್ಸು ನನಸಾಗಿದ್ದರೆ ಎಷ್ಟು ಚೆನ್ನಾ ಅನಿಸಿತ್ತು.. ಆದರೆ ನಿರ್ದೇಶಕರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಆಶೀರ್ವಾದ ಈ ಕರುನಾಡಿನ ಚಿತ್ರ ರಸಿಕರ ಮೇಲೆ ಸದಾ ಇರುತ್ತದೆ ಎನ್ನುವ ಮಾತು ಮನಸ್ಸಿಗೆ ಬಂದು ಸಮಾಧಾನ ಆಯ್ತು..
ಇಂದು ಪುಟ್ಟಣ್ಣವರು ಧರೆಗಿಳಿದ ದಿನ.. ಆ ಜಗನ್ಮಾತೆ ಕರುನಾಡಿಗೆ ಬಳುವಳಿಯಾಗಿ ಕೊಟ್ಟ ಅತಿ ದೊಡ್ಡ ವರ ಇವರು...
Sir 🙏🙏🙏, no words
ReplyDeleteಸರಿ ಪುಟ್ಟಣ್ಣನವರು ಯೋಜನಾಬದ್ಧವಾಗಿ ಆಶೀರ್ವಚನ ನೀಡಿದ್ದಾರಲ್ಲಾ ಇನ್ನೇಕೆ ತಡ ಕಥೆ, ಚಿತ್ರಕತೆ, ಸಂಭಾಷಣೆ, ನಟಿಯರ ಆಯ್ಕೆ ಮಾಡು.ಹೇಗಿದ್ದರೂ ಚಿತ್ರದ ನಾಯಕ ನಟ ನೀನೇ ಇದ್ದೀಯಾ.ಶುಭಸ್ಯ ಶೀರ್ಘಂ. ತಡಮಾಡದೆ ಪ್ರಾರಂಭಿಸು.
ReplyDeleteಚಿತ್ರ ಪ್ರಾರಂಭಿಸುವ ಮುನ್ನ ಪುಟ್ಟಣ್ಣಾಜೀ ಗೆ ಶುಭಾಶಯಗಳನ್ನು ತಿಳಿಸು. ಆಲ್ ದ ಬೆಸ್ಟ್.
ವಾಹ್..... ಅಧ್ಬುತ ಶ್ರೀ ಎಂತಹ ಸುಂದರ ಕಲ್ಪನೆ ಮತ್ತು ಚೊಕ್ಕವಾದ ಬರಹ ನಿಜಕ್ಕೂ ಉತ್ತಮದಲ್ಲಿ ಅತ್ಯುತ್ತಮವಾದ ಅರ್ಪಣೆ ನಮ್ಮ ಕನ್ನಡದ ಹೆಸರಾಂತ ನಿರ್ದೇಶಕರಿಗೆ ಧನ್ಯೋಸ್ಮಿ
ReplyDeleteಹೀಗೆ ಸಾಗಲಿ ನಿನ್ನ ಬರವಣಿಗೆ ಶ್ರೀ.....
namaskara srikanth.estu channagi baradideera.thumba santhosha aiythu.. nimma abhimanakae dodda namaskara sri
ReplyDelete