Thursday, October 22, 2020

ಜೀವನದ ಕಡಲಿನಲ್ಲಿ ತರಂಗಗಳ ಮೇಲಿನ ಸವಾರಿ ಜೀವನ ತರಂಗ (1963) (ಅಣ್ಣಾವ್ರ ಚಿತ್ರ ೩೯ / ೨೦೭)

 ಜೀವನ ಒಂದು ಕಡಲು ಎನ್ನುವುದಾದರೆ ಅಲ್ಲಿ ಏಳುವ ತೆರೆಗಳು ಬದುಕಿನ ಘಟನೆಗಳು ಎನ್ನಬಹುದು.. ಕೆಲವೊಂದು ದೊಡ್ಡದಾದ ತೆರೆಗಳಾದರೆ ಕೆಲವು ಪುಟ್ಟದಾಗಿ ಎದ್ದು ಹಾಗೆ ಸಾಗಿಬಿಡುತ್ತವೆ.. 

ಸುಂದರ ಕುಟುಂಬದಲ್ಲಿ ಬೇಡದ ಒಂದು ಅಲೆ ಎದ್ದಾಗ ಬದುಕಿನ ದೋಣಿಯನ್ನು ದಿಕ್ಕು ತಪ್ಪಿಸಿ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ  ಎನ್ನುವ ಸಂದೇಶ ಸಾರುವ ಈ ಚಿತ್ರವೇ ಜೀವನ ತರಂಗ. 

ಡಿಕ್ಕಿ ಮಾಧವರಾವ್, ಅಶ್ವಥ್ ಹಾಗೂ ರಾಜ್ ಕುಮಾರ್ ಅಣ್ಣ ತಮ್ಮಂದಿರು.  ಅಶ್ವಥ್ ಪಟ್ಟಣದಲ್ಲಿ ವೈದ್ಯರಾಗಿ ಸ್ಥಿತಿವಂತರಾಗಿರುತ್ತಾರೆ.. ಅವರ ಸಹಾಯದ ಮೇಲೆ ಹಳ್ಳಿಯಲ್ಲಿನ ಅವರ ಅಣ್ಣನ ಕುಟುಂಬ ನಿಂತಿರುತ್ತದೆ. 

ಆದರೆ ಅಶ್ವಥ್ ಅವರ ಹೆಂಡತಿ ಆದವಾನಿ ಲಕ್ಷ್ಮೀದೇವಿ ಈ ಸಂಸಾರದಲ್ಲಿ ಹುಳಿಹಿಂಡುವ ಕೆಲಸ ಮಾಡುತ್ತಾರೆ.. ಹಳ್ಳಿಯಿಂದ ಬಂದ ಯಾವ ಸಹಾಯ ಕೇಳುವ ಪತ್ರವನ್ನು ತನ್ನ ಪತಿರಾಯನಿಗೆ ಹೇಳದೆ ಮುಚ್ಚಿಡುತ್ತಾರೆ. 

ಸಹಾಯವಿಲ್ಲದೆ ತಂಗಿ ಮದುವೆ ನಿಂತುಹೋಗುತ್ತದೆ.. ಅಣ್ಣನ ಕುಟುಂಬ ಮದುವೆಗೆ ಮಾಡಿದ್ದ ಸಾಲದ ಭಾದೆ ಹೆಚ್ಚಾಗಿ... ರಾಜಕುಮಾರ್ ಪಟ್ಟಣಕ್ಕೆ ಹೋಗಿ ಕೆಲಸ ಹುಡುಕಿಕೊಂಡು ತನ್ನ ಅಣ್ಣನ ಸಂಸಾರವನ್ನು ಎತ್ತಿಹಿಡಿಯುತ್ತಾರೆ. ಆದರೆ ಅಷ್ಟರಲ್ಲಿ ತಂಗಿ ಗೌರಿ ಮನೆ ಬಿಟ್ಟು ಹೋಗುತ್ತಾಳೆ.. 

ಇತ್ತ ಪಟ್ಟಣದಲ್ಲಿ ರಾಜಕುಮಾರ್ ಲೀಲಾವತಿ ಅವರ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡಲು ಶುರುಮಾಡಿ, ಹಾಗೆ ಲೀಲಾವತಿ ಮತ್ತು ರಾಜಕುಮಾರ್ ಪ್ರೀತಿಸಲು ಶುರು ಮಾಡುತ್ತಾರೆ. 

ಇತ್ತ ಗೌರಿಯ ಗಂಡ ಆಸ್ತಿಯ ದುರಾಸೆಯಿಂದ, ಬಾಲಕೃಷ್ಣನ ಸಹಾಯ ಪಡೆದು, ಲೀಲಾವತಿಯನ್ನು ಮದುವೆಯಾಗಿ ಆಸ್ತಿ ಹೊಡೆಯುವ ಉಪಾಯ ಮಾಡಿರುತ್ತಾರೆ.. 

ಆದರೆ ಭಗವಂತ ಎಲ್ಲಾ ಕೆಟ್ಟ ನೆಡೆಗೂ ಒಂದು  ಇಟ್ಟಿರುತ್ತಾನೆ..

ಆದವಾನಿ ಲಕ್ಷ್ಮೀದೇವಿಯವರ ದುರ್ಗುಣದ ಕತೆಯನ್ನು ಅರಿತು .. ಹೆಂಡತಿಗೆ ಅಶ್ವಥ್ ಛೀಮಾರಿ ಹಾಕುತ್ತಾರೆ. ಬುದ್ದಿ ಬರುತ್ತದೆ.. 

 ಗೌರಿ ತನ್ನ ಪತಿರಾಯನ ಬಗ್ಗೆ ಲೀಲಾವತಿಗೆ ಹೇಳಿ.. ಮದುವೆಯನ್ನು ನಿಲ್ಲಿಸುವ ಪ್ರಯತ್ನಕ್ಕೆ ಬಾಲಕೃಷ್ಣ ಮತ್ತು ರಾಜಾಶಂಕರ್ ಅಡ್ಡ ಬರುತ್ತಾರೆ.. ಈ ವಿಷಯ ರಾಜಕುಮಾರ್ ಅವರಿಗೆ ತಿಳಿದು ಎಲ್ಲವನ್ನೂ ಸರಿ ಮಾಡುತ್ತಾರೆ. 

ಇಡೀ ಕತೆಯನ್ನು ಚಿತ್ರಕತೆ ರಚಿಸಿ ಸರಳವಾಗಿ ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಜಿ ಬಂಗಾರ್ ರಾಜ್.. ಸಂಭಾಷಣೆ ಹಾಗೂ ಹಾಡುಗಳ ಹೊಣೆಯನ್ನು  ಎಸ್ ಕೆ ಕರೀಂಖಾನ್ ಹೊತ್ತಿದ್ದಾರೆ. ಪಿ ಬಿ ಶ್ರೀನಿವಾಸ್, ಎಸ್ ಜಾನಕಿ ಗಾಯನದ ಜವಾಬ್ಧಾರಿ ಹೊತ್ತಿದ್ದಾರೆ. 

ಅಭಿನಯಿಸಿದ ಪ್ರತಿಕಲಾವಿದರು ಅತಿ ಪ್ರಶಂಸನೀಯ  ನೀಡಿದ್ದಾರೆ. 

ಡಿಕ್ಕಿ ಮಾಧವರಾವ್ ಅಣ್ಣನ ಪಾತ್ರದಲ್ಲಿ ದಯನೀಯ ಪರಿಸ್ಥಿತಿಯನ್ನು ನಿಭಾಯಿಸುವ ಪಾತ್ರ ಯಶಸ್ವಿಯಾಗಿದ್ದಾರೆ.  ಆತನ ಮಡದಿಯಾಗಿ ಜಯಶ್ರೀ ಉತ್ತಮ ಅಭಿನಯ ನೀಡಿದ್ದಾರೆ. ಅವರ ತಮ್ಮನಾಗಿ ಅಶ್ವಥ್ ವೈದ್ಯರಾಗಿ ಅದಕ್ಕೆ ಬೇಕಾದ ಘನತೆ ತಂದುಕೊಟ್ಟಿದ್ದಾರೆ. 

ದುರಾಸೆಯ ಪತಿರಾಯನಾಗಿ ಅಂತ್ಯದಲ್ಲಿ ತನ್ನ ತಪ್ಪು ತಿದ್ದಿಕೊಳ್ಳುವ ಪಾತ್ರದಲ್ಲಿ ರಾಜಾಶಂಕರ್ ಗಮನಸೆಳೆಯುತ್ತಾರೆ. 

ಹಾಸ್ಯಕ್ಕೆ ನರಸಿಂಹರಾಜು ಇದ್ದಾರೆ .. ಅವರಿಗೆ ಜೊತೆಯಾಗಿ ಅಪ್ಪನ ಪಾತ್ರದಲ್ಲಿ ಬಾಲಕೃಷ್ಣ ಹಾಗೂ ತಾಯಿಯಾಗಿ ರಮಾದೇವಿ ತುಸು ಹಾಸ್ಯ ತುಂಬಿದ್ದಾರೆ. ಪೈಲ್ವಾನ್ ಪಾತ್ರದಲ್ಲಿ ನರಸಿಂಹರಾಜುವನ್ನು ಕಾಡುವ ಹನುಮಂತಾಚಾರ್ ಇಷ್ಟವಾಗುತ್ತಾರೆ. 

ನಾಯಕಿಯಾಗಿ ಲೀಲಾವತಿ ಪ್ರೀತಿಯಿಂದ ಒಮ್ಮೆ ಕಂಡರೆ.. ಇನ್ನೊಮ್ಮೆ ಅಂತಸ್ತಿನ ಗತ್ತು ತೋರಿಸುತ್ತಾರೆ. 

ಮನೆಮುರುಕಿಯ ಪಾತ್ರದಲ್ಲಿ ಆದವಾನಿ ಲಕ್ಷ್ಮೀದೇವಿ ಘಟವಾಣಿಯಾಗಿ ಅಭಿನಯಿಸಿದ್ದಾರೆ. 

ಚಿತ್ರದ ನಾಯಕ ರಾಜಕುಮಾರ್ ಅವರ ಅಭಿನಯ ತುಂಬಾ ಸಹಜವಾಗಿದೆ. ಅಣ್ಣನ ಪ್ರೀತಿಯ ತಮ್ಮನಾಗಿ, ಮನೆಯ ಹೊಣೆಗಾರಿಕೆಯನ್ನು ಹೊತ್ತು ಹಳ್ಳಿಬಿಟ್ಟು ಪಟ್ಟಣಕ್ಕೆ ಬಂದಾಗ ಪಟ್ಟಣದ ನೆಡುವಳಿಕೆಯನ್ನು ಸೊಗಸಾಗಿ ಅಭಿನಯಿಸಿದ್ದಾರೆ. ತನ್ನ ಚಿಕ್ಕ ಅತ್ತಿಗೆ ಆದವಾನಿ ಲಕ್ಷ್ಮೀದೇವಿಯವರ ಹತ್ತಿರ ಕಿತ್ತಾಡುವಾಗಲೂ, ಅಣ್ಣ ಅಶ್ವಥ್ ಅವರ ಹತ್ತಿರ ನಿಷ್ಠುರವಾಗಿ ಮಾತಾಡುವಾಗಲೂ, ತನ್ನ ದೊಡ್ಡಣ್ಣ ಅತ್ತಿಗೆಯವರಿಗೆ ಸಮಾಧಾನ ಹೇಳುತ್ತಾ, ಮನೆಯ ಹೊಣೆಗಾರಿಕೆಯನ್ನು ನಾ ಹೊರುವೆ ನೀವು ಸಮಾಧಾನದಿಂದಿರಿ ಎಂದು ಸಾಂತ್ವನ ಹೇಳುವ ಪಾತ್ರ, ಮುರಿದುಬಿದ್ದು ಮದುವೆಯಿಂದ ನೊಂದಿರುವ ತಂಗಿಗೆ ಸಮಾಧಾನ ಹೇಳಿ ಪಟ್ಟಣಕ್ಕೆ ಹೊರಡುವಾಗ .. ಪಟ್ಟಣದಲ್ಲಿ ನರಸಿಂಹರಾಜು ಅವರ ಜೊತೆ ಸೇರಿಕೊಂಡು ಎಲ್ಲವನ್ನು ಸರಿ ಮಾಡುವ ಅಭಿನಯ.. ರಾಜಕುಮಾರ್ ಮನಸೆಳೆಯುತ್ತಾರೆ. 

ಎಲ್ಲರ ಜೊತೆ ಅಭಿನಯಿಸುತ್ತಲೇ ತನ್ನ ವಿಶಿಷ್ಟ ಛಾಪು ಒತ್ತುವ ರಾಜಕುಮಾರ್ ಇಷ್ಟವಾಗುತ್ತಾರೆ.  

ಈ ಚಿತ್ರದ ಕೆಲವು ತುಣುಕುಗಳು ನಿಮಗಾಗಿ.. 














ಮತ್ತೊಮ್ಮೆ ಇನ್ನೊಂದು ಚಿತ್ರದೊಂದಿಗೆ ಸಿಗೋಣ ... !

No comments:

Post a Comment