Saturday, April 24, 2021

ತಮ್ಮ ಇಷ್ಟವಾದ ನಟರ ಬಗ್ಗೆ ಅಣ್ಣಾವ್ರ ಮಾತುಗಳು ... ಅಣ್ಣಾವ್ರ ಜನುಮದಿನ (2021)

ನನ್ನ ಬಿಡಪ್ಪ ಶ್ರೀಕಾಂತಪ್ಪ.. ಪ್ರತಿ ದಿನ ಪ್ರತಿ ಕ್ಷಣ ನನ್ನ ನೆನಪಿಸಿಕೊಳ್ಳದೆ ಇರೋದಕ್ಕೆ ಆಗೋದೇ ಇಲ್ವಾ.. ನಿನ್ನ ಮಡದಿಯ ಜೊತೆ ಮಾತಾಡುವಾಗಲೂ ನಾನ್ ಆಲ್ಲಿರ್ತೀನಿ, ನಿನ್ನ ಬರಹಗಳಲ್ಲೂ ಅಲ್ಲಲ್ಲಿ ನಾ ಬರುತ್ತಲೇ ಇರುತ್ತೀನಿ.. ಅದ್ಯಾಕಪ್ಪ ನನ್ನ ಬಿಡೋಲ್ಲ..ನನ್ನ ಅದ್ಭುತ ಗೆಳೆಯ ಬಾಲಣ್ಣನ ಬಗ್ಗೆ ಬರೆಯೋದಿದೆ... ನನ್ನ ತಂದೆಯಂತಹ ಅಶ್ವಥ್ ಅವರ ಚಿತ್ರಗಳ ಬಗ್ಗೆ ಬರೆಯೋದಿದೆ. ನನ್ನ ಕೆಲವು ಚಿತ್ರಗಳಲ್ಲಿ ಅದ್ಭುತ ಅಭಿನಯ ನೀಡಿದ (ಮಯೂರ, ರಾಜ ನನ್ನ ರಾಜ, ಧ್ರುವತಾರೆ, ಎರಡು ಕನಸು.... ) ರಾಜಾನಂದ್ ಅವರ ಬಗ್ಗೆ ಬರೆಯೋದಿದೆ, ಕನ್ನಡದ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಚಿತ್ರ ಯಾತ್ರೆ ಮುಗಿಸಿದೆ, ಆದರೂ ಅವರ ಬಗ್ಗೆ ಬರೆಯೋದು ತುಂಬಾ ಇದೆ ನಿನಗೆ... ಇಷ್ಟೆಲ್ಲಾ ಬಿಟ್ಟು ನನ್ನ ಹಿಂದೆ ಮುಂದೆ ಓಡಾಡ್ತಾನೆ ಇದ್ದೀಯಲ್ಲ ಶ್ರೀ.. 

ಅಣ್ಣಾವ್ರೇ .. ಮಗುವನ್ನು ತಾಯಿ ಒಂದು ಕ್ಷಣ ಮುದ್ದಿಸಿದಾಕ್ಷಣ, ತಾಯಿ ಮಗುವನ್ನು ಬಿಟ್ಟು ಬಿಡುತ್ತಾಳೆಯೇ.. ಮತ್ತೆ ಮತ್ತೆ ಮುದ್ದಿಸೋದಿಲ್ವೇ.. ಹಾಗೆ ಮಗುವನ್ನು ಮುದ್ದಿಸುತ್ತಾ ಕೂತಳು ಅಂದು ಬಿಟ್ರೆ, ಬೇರೆ ಕೆಲಸ ಮಾಡೋದೇ ಇಲ್ವೇ.. ಅದರ ಪಾಡಿಗೆ ಅದು.. ಇದರ ಪಾಡಿಗೆ ಇದು.. ಹಾಗೆ ಬಾಲಣ್ಣ, ಅಶ್ವಥ್, ರಾಜಾನಂದ್, ಪುಟ್ಟಣ್ಣ ಇವರ ಬಗ್ಗೆ ಬರೆಯೋಕೆ ಮತ್ತೆ ಶುರು ಮಾಡುವೆ.. ಆದರೆ ಇಂದು ನಿಮ್ಮ ವಿಶೇಷ ದಿನ... ನಿಮ್ಮನ್ನು ನೆನಸಿಕೊಳ್ಳದೆ (ಮರೆತಿದ್ದರೇ ತಾನೇ) ಶುರು ಮಾಡೋಕೆ ಆಗುತ್ತಾ... 

ಶ್ರೀ.. ಸರಿ ಕಣಪ್ಪ ಚಿ ಉದಯಶಂಕರ್ ಬರೆದಿದ್ದ ಸಂಭಾಷಣೆಗಳು ನಿನ್ನನ್ನು ಪ್ರಭಾವಿತ ಮಾಡಿದೆ.. ಅದನ್ನೇ ನನ್ನ ಮೇಲೂ ಪ್ರಯೋಗ ಮಾಡುತ್ತೀಯಾ. ಸರಿ ಇವತ್ತೇನು ಬರೀತೀಯ.. !!!

ಅಣ್ಣಾವ್ರೇ ತಿಳಿದೋ ತಿಳಿಯದೆಯೋ ಭಗವಂತನೇ ನಿಮ್ಮ ಮೂಲಕ ನನಗೆ ಸೂಚನೆ ಕೊಟ್ಟಿದ್ದಾನೆ.. ಈಗ ನೀವೇ ಈ ನಾಲ್ವರ ಬಗ್ಗೆ ಹೇಳಿ.. ಅದೇ ಇವತ್ತಿನ ನುಡಿಮುತ್ತಿನ ನಮನಗಳು ನಿಮಗೆ.. 

ಸರಿಯಾಗಿ ನನಗೆ ಬತ್ತಿ ಇಟ್ಟು ಬಿಟ್ಟೆಯ.. ಜಾಣ ನೀನು.. !

ಅದು ಬಿಡಿ ಅಣ್ಣಾವ್ರೇ ಈಗ ಶುರು ಹಚ್ಕೊಳ್ಳಿ.. !!

ಸರಿ ಕಣಪ್ಪ.. ಮೊದಲು ನನ್ನ ಗುರು ಸಮಾನರಾದ ಬಾಲಣ್ಣ ಅವರ ಬಗ್ಗೆ 

ಬಾಲಕೃಷ್ಣ: ಇವರ ಬಗ್ಗೆ ಬರೆಯೋದು ಅಂದರೆ ಕಡಲನ್ನು, ಸೂರ್ಯನನ್ನು ಹೊಗಳಿದ ಹಾಗೆ. ಆರಂಭದ ದಿನಗಳಿಂದಲೂ ನಾ ಇವರ ಜೊತೆ ಬೆರೆತಿದ್ದೆ.. ಅದೇನು ಹಾಸ್ಯ, ಅದೇನು ಸಮಯಪ್ರಜ್ಞೆ.. ಅಬ್ಬಬ್ಬಾ.. ಪ್ರಾತ್ರಧಾರಿಗಳ ಅಭಿನಯ ನೋಡುತ್ತಾ, ತಮ್ಮ ಅಭಿನಯವನ್ನು, ಸಂಭಾಷಣೆ ಹೇಳುವ ಧಾಟಿಯನ್ನು ಬದಲಿಸಿಕೊಂಡು, ಆ ಸನ್ನಿವೇಶಗಳಿಗೆ ಅದ್ಭುತ ಪರಿಣಾಮವನ್ನು ತಂದು ಕೊಡುತ್ತಿದ್ದರು.. ನನ್ನ ಅವರ ಚಿತ್ರಗಳು, ಸಂಭಾಷಣೆಗಳ ಜುಗಲ್ ಬಂಧಿ ನನಗೆ ಬಲು ಇಷ್ಟ.. ಕಣ್ತೆರೆದು ನೋಡು ಚಿತ್ರವನ್ನು ಎಷ್ಟು ಬರಿ ನೆನೆದರೂ ನನಗೆ ಸಮಾಧಾನವಿಲ್ಲ...ಪ್ರತಿ ಚಿತ್ರವೂ ವಿಶೇಷ... ಬಾಲಣ್ಣ ಬರಿ ನನ್ನ ಸಹನಟ ಮಾತ್ರವೇ ಅಲ್ಲ.. ಅವರು ನನ್ನ ಗುರುಗಳು.. ಸಂಭಾಷಣೆ ಹೇಳುವ ಶೈಲಿ ಅವರಿಂದ ನಾನು ಕಲಿತಿದ್ದೀನಿ.. ನನಗೆ ಆರಂಭದ ದಿನಗಳಲ್ಲಿ ಇಂಗ್ಲಿಷ್ ಭಾಷೆ ಹೇಳಿ ಕೊಟ್ಟ ಗುರುಗಳು ಅವರು.. ಬಾಲಣ್ಣ ನನ್ನ ಅದ್ಭುತ ಗೆಳೆಯ.. ಅವರ ಜೊತೆಯಲ್ಲಿ ಇನ್ನಷ್ಟು ಚಿತ್ರಗಳನ್ನು ಮಾಡುವ ಆಸೆಯಿತ್ತು.. ಆದರೆ ಭಗವಂತ.. ಬಿಡಪ್ಪ.. ಸಿಕ್ಕಷ್ಟೇ ತೃಪ್ತಿ ನನಗೆ.. 


ಅಶ್ವಥ್: ನನ್ನ ಚಿತ್ರಗಳಲ್ಲಿ ತಾಯಿಯ ಪಾತ್ರಗಳು ಬೆಳಗಿದ್ದೆ ಹೆಚ್ಚು.. ಆದರೂ ಅಶ್ವಥ್ ಅವರು ನನ್ನ ಚಿತ್ರಗಳಲ್ಲಿ ಆವರಿಸಿಕೊಳ್ಳೋದು ಇಷ್ಟವಾಗುತ್ತಿತ್ತು... ಅವರ ಪಾತ್ರವಿಲ್ಲದಿದ್ದರೆ ನನ್ನ ಪಾತ್ರ ಏನೂ ಇರುತ್ತಿರಲಿಲ್ಲ ಅನ್ನಿಸುತಿತ್ತು..  ಅವರು ಒಮ್ಮೆ ಪಾತ್ರದೊಳಗೆ ಇಳಿದುಬಿಟ್ಟರೆ ಆ ಪಾತ್ರವೇ ತಾವಾಗಿ ಬಿಡುತ್ತಿದ್ದರು, ಆ ಪಾತ್ರದ ಗುಣಗಳು ಅವರಲ್ಲಿಯೂ ಇರುತ್ತಿದ್ದವು.. ಅವರು ಖಳ ಛಾಯೆ ಇರುವ ಪಾತ್ರಗಳು ಮಾಡಿದ್ದು ಕಡಿಮೆ.. ಪ್ರತಿಯೊಂದರಲ್ಲ್ಲೂ ಅವರದ್ದೇ ಛಾಪು ಮೂಡಿಸುತ್ತಿದ್ದರು.. ನನಗೆ ಅನಿಸೋದು.. ಈ ನಿನ್ನ ರಾಜಕುಮಾರನ  ಹಾಗೆ ಅಭಿನಯ ಮಾಡೋರು ಸಿಗಬಹುದು ಆದರೆ  ಅಶ್ವಥ್ ಅವರ ಹಾಗೆ ಅಪ್ಪನ ಪಾತ್ರದಲ್ಲಿ ಆವರಿಸಿಕೊಳ್ಳುವ ತಾಕತ್ತು ಬಹುಶಃ ಇಲ್ಲವೇ ಇಲ್ಲ.. ಕಸ್ತೂರಿ ನಿವಾಸದ ರಾಮಯ್ಯನ ಪಾತ್ರದಲ್ಲಿ ಕಡೆ ದೃಶ್ಯದ ಅಭಿನಯ ಕಣ್ಣೀರು ತರಿಸುತ್ತೆ.. ಎರಡು ಕನಸು ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹೇಳುವ ಮಾತು "ನೋಡಪ್ಪ ನಿನ್ನ ತಾಯಿಯನ್ನು ಉಳಿಸಿಕೊಡಪ್ಪ ಇದು ನಿನ್ನ ಕೈಯಲ್ಲ ಕಾಲ್ ..... " ಎನ್ನುವ ಮಾತು ಅಬ್ಬಬ್ಬಾ ಅನಿಸುತ್ತೆ.. ನನ್ನ ಅನೇಕ ಚಿತ್ರಗಳಲ್ಲಿ ಅವರ ಅಭಿನಯ ನನ್ನ ಪಾತ್ರಕ್ಕೆ ಸಮ ಸಮವಾಗಿದೆ.. ಅಶ್ವಥ್ ಕನ್ನಡ ಚಿತ್ರರಂಗದ ಅಶ್ವಥ್ ವೃಕ್ಷ.. 


ರಾಜಾನಂದ್:  ಇವರೊಬ್ಬ ಅದ್ಭುತ ನಟ.. ನನ್ನ ಕೆಲವೇ ಚಿತ್ರಗಳಲ್ಲಿ ಅಭಿನಯಿಸಿದ್ದರು.. ಇವರು ನನ್ನ  ಗೆಳೆಯ ವಿಷ್ಣುವಿನ ಚಿತ್ರಗಳಲ್ಲಿ ಮಿಂಚಿದ್ದು ಹೆಚ್ಚು. .. ರಾಜಾನಂದ್ ಅವರ ಮಯೂರ, ರಾಜ ನನ್ನ ರಾಜ, ಎರಡು ಕನಸು, ಧೃವತಾರೆ, ಎರಡು ನಕ್ಷತ್ರ, ಬಹದ್ದೂರ್ ಗಂಡು.. ಹೀಗೆ ಹತ್ತಾರು ಚಿತ್ರಗಳಲ್ಲಿ ನನ್ನ ಅವರ ಅಭಿನಯ ಸೊಗಸಾಗಿದೆ... ಅವರ ಸ್ಪಷ್ಟ ಉಚ್ಚಾರಣೆ.. ಗಡುಸಾಗಿ ಮಾತಾಡುವ ಅವರ ಪಾತ್ರಗಳ ಶೈಲಿ. ಅದ್ಭುತ.. ಧೃವತಾರೆ ಚಿತ್ರದಲ್ಲಿ "ನನ್ನ ಹಳ್ಳಿಯನ್ನು, ನನ್ನ ಜನರನ್ನು ಕಾಪಾಡಪ್ಪ" ಎಂದು ಕೊರಗುವ ದೃಶ್ಯ ಮನದಾಳದಲ್ಲಿ ಇಳಿಯುತ್ತದೆ.. ಅಶ್ವಥ್ ಅವರ ಹಾಗೆ ಅಪ್ಪನ ಪಾತ್ರಕ್ಕೆ ಜೀವ ತುಂಬುವ ನಟ ಇವರು.. !



ಪುಟ್ಟಣ್ಣ ಕಣಗಾಲ್: ಇವರು ಪುಟ್ಟಣ್ಣ ಅಲ್ಲವೇ ಅಲ್ಲ.. ನಿರ್ದೇಶಕರ ದೊಡ್ಡಣ್ಣ ಅಂತ ನೀನೆ ಹೇಳಿದ್ದೀಯ.. ಹೇಳ್ತಾ ಇರ್ತೀಯ.. ಅದು ನಿಜ..  ಮೂರು ಚಿತ್ರಗಳಲ್ಲಿ ಇವರ ನಿರ್ದೇಶನದಲ್ಲಿ ಅಭಿನಯಿಸುವ ಭಾಗ್ಯ ಸಿಕ್ಕಿತ್ತು. ಮಲ್ಲಮ್ಮನ ಪವಾಡದಲ್ಲಿ ಪ್ರತಿದೃಶ್ಯವನ್ನು ಅವರು ಸೃಷ್ಟಿಸುತ್ತಿದ್ದ ಪರಿ ಸೂಪರ್.. ಪ್ರಪಂಚದ ಅರಿವಿಲ್ಲದ ಮುಗ್ಧನಿಂದ ಎಲ್ಲವನ್ನು ಅರಿತುಕೊಳ್ಳುವ ನನ್ನ ಪಾತ್ರವನ್ನು ಅವರು ಬೆಳೆಸಿದ್ದು ಸೊಗಸಾಗಿತ್ತು... ಅವರಿಗೆ ಏನು ಬೇಕು ಅದನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ಬಿಡಿಸಿ ಬಿಡಿಸಿ ಹೇಳುತ್ತಿದ್ದರು.. ಒಮ್ಮೆ ನಮ್ಮ ಮನಸ್ಸಿಗೆ ಬಂದ ತಕ್ಷಣ ಅದನ್ನು ತೆರೆಯ ಮೇಲೆ ತೆರೆದಿಡುತ್ತಿದ್ದ ರೀತಿಗೆ ಅದ್ಭುತ ಎನ್ನಬೇಕು... ಕರುಳಿನ ಕರೆಯಲ್ಲಿ ನನ್ನ ಪಾತ್ರವನ್ನು ಭಿನ್ನವಾಗಿ ಮೂಡಿಸಿದರು. ಹಾಡು, ಹೊಡೆದಾಟ, ಅಭಿನಯ ಎಲ್ಲವನ್ನು ಸರಿಸಮನಾಗಿ ತುಂಬಿದ್ದ ಚಿತ್ರದ ಪಾತ್ರವದು.. ಸಾಕ್ಷಾತ್ಕಾರ ಅಬ್ಬಬ್ಬಾ ಈ ಚಿತ್ರದ ಬಗ್ಗೆ ಹೇಳಿದಷ್ಟು ಕಡಿಮೆಯೇ... ಅಂತಿಮ ದೃಶ್ಯದಲ್ಲಿ ಬರುವ ಒಲವೇ ಜೀವನ ಸಾಕ್ಷತ್ಕಾರ ಹಾಡಿಗೆ ಅವರು ಕ್ಯಾಮರಾವನ್ನು ಉಪಯೋಗಿಸಿದ ರೀತಿ ಅದ್ಭುತ. ಒಲವು ಇನ್ನೇನು ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ ಮತ್ತೆ ಕ್ಯಾಮರಾ ಹಿಂದಕ್ಕೆ ಹೋಗುತ್ತದೆ.. ಸಿಗೋಲ್ಲ ಅನ್ನುವ ಹೊತ್ತಿಗೆ ಮತ್ತೆ ಕ್ಯಾಮರಾ ಮುಂದಕ್ಕೆ ಬರುತ್ತದೆ.. ಅದ್ಭುತ ಸೃಷ್ಟಿಯದು.. ಮತ್ತೆ ಭಾರತ 
ಚಿತ್ರರಂಗದ ಅದ್ಭುತ ನಟ ಶ್ರೀ ಪೃಥ್ವಿರಾಜ್ ಕಪೂರ್ ಅವರ ಜೊತೆಯಲ್ಲಿ ಅಭಿನಯ, ಅವರ ಜೊತೆಯಲ್ಲಿ ಕಳೆದ ಕ್ಷಣ.. ಹೇಳಲಿಕ್ಕೆ ಪದಗಳಿಲ್ಲ... 


ಅಣ್ಣಾವ್ರೇ ನಿಮ್ಮ ಹುಟ್ಟು ಹಬ್ಬಕ್ಕೆ ನಾವು ನಿಮಗೆ ಉಡುಗೊರೆ ಕೊಡಬೇಕಿತ್ತು.. ಆದರೆ ನಿಮ್ಮ ನೆಚ್ಚಿನ ನಟರ  ಬಗ್ಗೆ ನೀವು ನಿಮ್ಮ ಮನದಾಳದ ಮಾತುಗಳನ್ನು ಹೇಳಿ, ನಮಗೆ ಉಡುಗೊರೆ ಕೊಟ್ಟು ಬಿಟ್ಟಿರಿ.. 

ಶ್ರೀಕಾಂತಪ್ಪ.. ಹಾಗೇನು ಇಲ್ಲ. ಈ ಅಭಿಮಾನಿ ದೇವರುಗಳು ನನ್ನ ಮೇಲೆ , ನನ್ನ ಚಿತ್ರಗಳ ಮೇಲೆ ಇಟ್ಟಿರುವ ಅಭಿಮಾನವೇ ನನಗೆ ದೊಡ್ಡ ಉಡುಗೊರೆ. ಹಾಗೆ ಎಷ್ಟೇ ವರ್ಷಗಳಾದರೂ ನೀವೆಲ್ಲ ನನ್ನನ್ನು ನಿಮ್ಮ ಹೃದಯದಲ್ಲಿ ರಾಜನಾಗೆ ಇಟ್ಟುಕೊಂಡಿರುವ ನಿಮ್ಮ ಅಭಿಮಾನಕ್ಕೆ ನಾ ಬೆಲೆ ಕಟ್ಟಲು ಸಾಧ್ಯವೇ... ನಿಮ್ಮ ಅಭಿಮಾನವೇ ನನ್ನ ಬೆಳೆಸಿದ್ದು,.. ಹರಸಿದ್ದು.. ಅರಳಿಸಿದ್ದು.. !

ಧನ್ಯೋಸ್ಮಿ ಅಣ್ಣಾವ್ರೇ.. 

ಬರ್ತೀನಿ ಶ್ರೀಕಾಂತಪ್ಪ ಮುಂದಿನ ಚಿತ್ರ ಶುರು ಹಚ್ಕೋ... !

9 comments:

  1. Kya Bath hai! Wonderful! You are as imaginative as Puttanna Kanagal.

    ReplyDelete
    Replies
    1. ಧನ್ಯವಾದಗಳು ಪ್ರಸಾದ್ ಸರ್

      Delete
  2. Very nice 👍👍👌👌🙏🙏🌹🌹

    ReplyDelete
  3. ನಿಮ್ಮ ಈ ಬರಹ ಬಲು ಇಷ್ಟವಾಗಲು ಕಾರಣಗಳು ಅನೇಕ ಶ್ರೀಮಾನ್...
    ಮೊದಲಿಗೆ ಸಾಕ್ಷಾತ್ಕಾರದ ಈ ಚಿತ್ರವನ್ನೇ ತೆಗೆದುಕೊಂಡರೆ, ಅಣ್ಣಾವ್ರು ಸಲೀಸಾಗಿ ಎಲ್ಲರೊಂದಿಗೆ ಬೆರೆತು ಹೋಗುವ ಮನಸಿನಿಂದಾಗ ಕೆಳಗಿನ ಸಾಲಿನಲ್ಲಿ ನಡುವಲ್ಲಿ ಸರಳ ಕೂತಿರುವ ಭಂಗಿ. ನಟರು ಇಷ್ಟು ಸರಳರೇ ಎನಿಸುವಷ್ಟು ಅವರು ಸರಳ.

    ಅವರು ನಿರ್ದೇಶಕನ ನಟ, ಛಾಯಾಗ್ರಾಹಕನ ನಟ: ಹೀಗಾಗಿ ಎಚ್.ಎಲ್.ಎನ್. ಸಿಂಹರಿಂದ ಮೊದಲುಗೊಂಡು ಎಸ್. ನಾರಾಯಣ ರವರೆಗೆ - ಮಾರುತಿ ರಾವ್ ಅವರಿಂದ ಕಡೆಯ ಚಿತ್ರದ ಛಾಯಾಗ್ರಾಹಕ ಗಿರಿಯವರವರ ತನಕ ಅವರು ಕಥನದ ಒಳನೋಟವನ್ನು ಚಿತ್ರಿಸುವವರಿಗೆ ಬೇಕಾದ ರೀತಿಯಲ್ಲೇ ನಟಿಸಿಕೊಟ್ಟ ನಟ. ಚಿತ್ರೀಕರಣದ ಸ್ಥಳದಲ್ಲಿ ಅವರು ವಾದಕ್ಕೆ ಎಡೆಯೇ ಮಾಡದ ನಟ ಅಂತಲೂ ಕೇಳಿದ್ದೇನೆ.

    ನೀವು ಹೇಳುವಂತೆ ನ ಭೂತೋ ನ ಭವಿಷ್ಯತಿ ಎನ್ನುವಂತ ಅಗ್ರ ನಟ ಬಾಲಣ್ಣ. ಇಂದಿನ‌ ನಟರಿಗೆ ಅವರ ನಟನೆಯೊಂದು encyclopedia.

    ನನಗೂ ಅಶ್ವಥ್ ಮತ್ತು ರಾಜಾನಂದ್ ನೆಚ್ಚಿನ ನಟರೇ.

    ಲವ್ಲೀ ಬರಹ...

    ReplyDelete
    Replies
    1. ಬದರಿ ಸರ್..ಸವಿವರಗಳೊಂದಿಗೆ ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿದೆ...

      ಧನ್ಯವಾದಗಳು ಬದರಿ‌ ಸರ್

      Delete
  4. ಸೂಪರ್... ಅಣ್ಣಾವ್ರಿಗೆ ನುಡಿ ನಮನ ಅವರ ಜನ್ಮದಿನದಂದು... 🙏🙏🙏

    ReplyDelete
    Replies
    1. ಸುಂದರ ಮಾತುಗಳು ಸರ್..ಧನ್ಯವಾದಗಳು ಉಮೇಶ್ ಸರ್

      Delete
  5. ಒಂದು ಚಿತ್ರದ ಸಂಭಾಷಣೆ ಬರೆದಹಾಗಿದೆ.ಇದು 'ದೇವರು ಕೊಟ್ಟ ವರ'ಎಲ್ಲರಿಗೂ ಬರುಲ್ಲಾ.
    ಅದ್ಭುತವಾದ ವರ್ಣನೆ ಚೆನ್ನಾಗಿದೆ,ಮುಂದುವರಿಸು.

    ReplyDelete