Sunday, April 21, 2019

ಅಬ್ಬಾ ಆ ತಾರಾಗಣ ಎನಿಸುವ ಅಬ್ಬಾ ಆ ಹುಡುಗಿ (1959) (ಅಣ್ಣಾವ್ರ ಚಿತ್ರ ೧೪ / ೨೦೭)


ರಾಜ್ ಅವರ ಹಿಂದಿನ ಹದಿಮೂರು ಚಿತ್ರಗಳನ್ನು ನೋಡುತ್ತಾ ಬಂದ ನನಗೆ ಈ ಚಿತ್ರ  ವಿಭಿನ್ನ ಅನುಭವ ಕೊಟ್ಟಿತು... ಕಾರಣ ಕೊನೆಯಲ್ಲಿ  ಹೇಳುತ್ತೇನೆ.. 

ಈ ಚಿತ್ರ ೨೦.೦೪.೨೦೧೯ ರಂದು ನೋಡಿದ್ದು.. ಅದರ ಹಿಂದಿನ ದಿನ ಎಫ್ ಎಂ ೧೦೨.೯ ವಾಹಿನಿಯಲ್ಲಿ ಸಂಜೆ ೮ಕ್ಕೆ ಬಯೋಸ್ಕೊಪ್ ಬದುಕು ಕಾರ್ಯಕ್ರಮದಲ್ಲಿ ತಾರೆ ಮೈನಾವತಿ ಅವರ ಬಗ್ಗೆ ಮೂವತ್ತು ನಿಮಿಷಗಳಲ್ಲಿ ಈ ಚಿತ್ರದ ಬಗ್ಗೆ ಒಂದಷ್ಟು  ಮಾಹಿತಿಗಳನ್ನು ಹೇಳಿದರು.. ಅದರಲ್ಲಿ ಒಂದು ಆ ಕಾಲಕ್ಕೆ ಈ ಚಿತ್ರ ಸ್ವಲ್ಪ ಆಧುನಿಕತೆಯ ಛಾಪು ಇತ್ತು ಎನ್ನುವುದು.. 

ಮೈನಾವತಿ ಈ ಚಿತ್ರದ  ತುಂಬಾ ವಿಜೃಂಭಿಸಿದ್ದಾರೆ.. ಕ್ಷಣ ಕ್ಷಣಕ್ಕೂ ಬದಲಾಗುವ ಮುಖಭಾವ, ಸಂಭಾಷಣೆಯ ಏರಿಳಿತ, ಆಂಗೀಕ ಅಭಿನಯ, ಕಣ್ಣುಗಳಲ್ಲಿಯೇ ಅಭಿನಯ, ಉಡುಗೆ ತೊಡುಗೆ ಎಲ್ಲದರಲ್ಲಿಯೂ ಬೊಂಬಾಟ್ ಅನ್ನಬೇಕು ಹಾಗಿದೆ ಅವರ ಅಭಿನಯದ ಖದರ್.. !!!

ವಿಲಿಯಂ ಶೇಕ್ಸ್ಪಿಯರ್ ಅವರ ಟೇಮಿಂಗ್ ಆಫ್ ದಿ ಶೃ  ನಾಟಕದ ಆಧಾರಿತ ಈ ಚಿತ್ರಕತೆ.. ಅಬ್ಬಾ ಅನಿಸೋದು ಈ ಚಿತ್ರದ ತಾರಾಗಣ.. ಕನ್ನಡ ಚಿತ್ರರಂಗದಲ್ಲಿ ಅರವತ್ತು ಎಪ್ಪತ್ತರ ದಶಕಗಳಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ  ದೊಡ್ಡ ನಟ ನಟಿಯರೇ ಗುಂಪೇ ಇಲ್ಲಿ ನಟಿಸಿದೆ.. 

ಮೈನಾವತಿ, ಪಂಡರಿಬಾಯಿ, ಲೀಲಾವತಿ, ನರಸಿಂಹರಾಜು, ರಮಾದೇವಿ, ಕಮೆಡಿಯನ್ ಗುಗ್ಗು, ಆದವಾನಿ ಲಕ್ಷ್ಮೀದೇವಿ, ಎಂ ಏನ್ ಲಕ್ಷ್ಮೀದೇವಿ, ಬಿ ಆರ್ ಪಂತಲು, ಎಂ ವಿ ರಾಜಮ್ಮ, ಡಿಕ್ಕಿ ಮಾಧವರಾವ್, ರಾಜಾಶಂಕರ್ ಇವರುಗಳ ಜೊತೆಯಲ್ಲಿ ಸ್ನೇಹಪೂರ್ವಕವಾಗಿ ಈ ಚಿತ್ರದ ನಿರ್ದೇಶಕ ಹೆಚ್ ಎಲ್ ಏನ್ ಸಿಂಹ.. ಇವರುಗಳ ಜೊತೆಯಲ್ಲಿ ಈ ಲೇಖನದ ಮೂಲಭೂತ ಹೀರೋ ರಾಜಕುಮಾರ್.. !!!

ಗಂಡಿನ ದಬ್ಬಾಳಿಕೆ, ಗಂಡಿನ ಹಿರಿಮೆ.. ಗಂಡಿನ ಮುಂದೆ  ಹೆಣ್ಣುಗಳು ಕೀಳು ಎಂಬ ಭಾವ ಇವುಗಳನ್ನು ತನ್ನ ತಲೆಯಲ್ಲಿ ತುಂಬಿಕೊಂಡು ಕನ್ಯಾ ವಿವಾಹ ನಿಷೇದ ಕೇಂದ್ರದ ಪ್ರೆಸಿಡೆಂಟ್ ಪಾತ್ರದಲ್ಲಿ ಮೈನಾವತಿ ಅಬ್ಬಬ್ಬಾ ಎನಿಸುವಂತೆ ನರ್ತಿಸಿದ್ದಾರೆ.. ಒಂದೆರಡು ದೃಶ್ಯಗಳಲ್ಲಿ ಪ್ಯಾಂಟ್ ಶರ್ಟ್ ಗಳಲ್ಲಿ ಕಾಣುವ ಈ ನಟಿ.. ನಿಜಕ್ಕೂ ಆ ಪಾತ್ರವಾಗಿ ಜೀವಿಸಿದ್ದಾರೆ.. 

ಒಂದು ರೀತಿಯಲ್ಲಿ ಚಂಡಿ ಕತೆ ಆಧರಿಸಿ ಈ ಪಾತ್ರವನ್ನು ಸೃಷ್ಟಿಸಿದ್ದಾರೆ  ಎಂದರೆ ತಪ್ಪಿಲ್ಲ.. ಮಾಡಬೇಡ ಅಂದಿದ್ದನ್ನ ಮಾಡುವುದು, ಹೇಳಬೇಡ ಅನ್ನೋದನ್ನ ಹೇಳುವುದು ಹೀಗೆ ಎಲ್ಲದಕ್ಕೂ ವ್ಯತಿರಿಕ್ತವಾಗಿ ಮಾಡೋದು.. ಕಡೆಯಲ್ಲಿ ತನ್ನ ಆಲೋಚನೆಗಳ ಲಹರಿ ತಪ್ಪು ಎನಿಸಿ ಎಲ್ಲರಂತೆ ಬದುಕೋಕೆ ಕಲಿಯೋದು ಎನ್ನುವುದರಲ್ಲಿ ಸುಖಾಂತ್ಯವಾಗುತ್ತದೆ.. !

ಪಂಡರಿಬಾಯಿಯವರ ಸಂಯಮದ ಪಾತ್ರಾಭಿನಯ.. ನರಸಿಂಹರಾಜು ಅವರ ಹಾಸ್ಯ ಭರಿತ ಮಾತುಗಳು, ರಾಜಾಶಂಕರ್ ಅವರ ಕಿಲಾಡಿತನದ ಅಭಿನಯ..  ಮುದ್ದಾಗಿ ಕಾಣುವ ಆದವಾನಿ ಲಕ್ಷ್ಮೀದೇವಿ, ಎಂ ಏನ್ ಲಕ್ಷ್ಮೀದೇವಿ.. ಇವರುಗಳ ಜೊತೆಯಲ್ಲಿ ಒಂದೆರಡು ದೃಶ್ಯಗಳಲ್ಲಿ  ಬಂದು ಹೋಗುವ ಗುಗ್ಗು, ರಮಾದೇವಿ.. ಸಂಸಾರ ನೌಕೆ ನಾಟಕದ ಪಾತ್ರಧಾರಿಗಳಾಗಿ ಪಂತುಲು, ರಾಜಮ್ಮ, ಸಿಂಹ  ಸೊಗಸಾಗಿ ಅಭಿನಯಿಸಿದ್ದಾರೆ..  

ಎಲ್ಲಾ ಕಲಾವಿದರ ಅಭಿನಯ ಚಿತ್ರಕಥೆಗೆ ಪೂರಕವಾಗಿದೆ.. ನಿರ್ಮಾಣ ನಿರ್ದೇಶನ ಸಿಂಹ ಅವರದ್ದು.. ಸಂಗೀತ ಭಾವಗೀತೆಯ ಗಾರುಡಿಗ ಪಿ. ಕಾಳಿಂಗರಾಯರದ್ದು.. ದೊರೈರಾಜ್ ಅವರ ಛಾಯಾಗ್ರಹವಿದ್ದ ಈ ಚಿತ್ರವನ್ನು ಚಿತ್ರಕತೆಯಲ್ಲಿ ಮೂಡಿಸಿದ್ದು  ಅವರು.. ಜೊತೆಯಲ್ಲಿ ಚಿತ್ರಕ್ಕೆ ಬೇಕಾದ ಒಂದು ಮುಖ್ಯ ಪಾತ್ರವನ್ನು ಅಭಿನಯಿಸಿರುವುದು ಈ ಚಿತ್ರದ  ವಿಶೇಷ.. !!!

ಅಲ್ಲ ಲೇ .. ರಾಜ್ ಚಿತ್ರದ ಬಗ್ಗೆ ಬರೆಯುತ್ತೇನೆ ಎಂದು ಹೇಳಿ.. ಬರಿ ಇತರರ ಬಗ್ಗೆ ಹೇಳುತ್ತಿದ್ದೆಯಲ್ಲೋ ಅನ್ನಬೇಡಿ...  ಪಾತ್ರ ಚಿಕ್ಕದೋ ದೊಡ್ಡದೋ.. ಮುಖ್ಯವೋ ಅಮುಖ್ಯವೋ ಯೋಚಿಸದೆ ತಮಗೆ ಬಂದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿರೋದು ರಾಜ್ ಅವರ ಹೆಗ್ಗಳಿಕೆ.. ದೊಗಳೆ ಪ್ಯಾಂಟ್ ಶರ್ಟ್ ಅದಕ್ಕೆ ಟೈ .. ಬೂಟು ಇವುಗಳಲ್ಲಿ  ಕಂಗೊಳಿಸುವ ರಾಜ್ ಮುದ್ದಾಗಿ ಕಾಣುತ್ತಾರೆ.. ಆಂಗ್ಲ ಪದಗಳನ್ನು ಬಳಸುವಲ್ಲಿ  ಅವರ ಸಂಭಾಷಣೆ ಶೈಲಿ ಇಷ್ಟವಾಗುತ್ತದೆ.. ಮನಸ್ಸಿಟ್ಟು ಅಭಿನಯಿಸಿದಾಗ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಬಹುದು ಎನ್ನುವುದಕ್ಕೆ ರಾಜ್ ಅವರ ಈ ಚಿತ್ರ ಉತ್ತಮ ಉದಾಹರಣೆ.. 

ಕಡೆಯ ಒಂದು ಮಾತು ಎಂದರೆ.. ಯು ಟ್ಯೂಬ್ನಲ್ಲಿ ಅಥವಾ ಡಿವಿಡಿಯಲ್ಲಿ ಈ ಚಿತ್ರದ ದೃಶ್ಯಗಳು  ಸಿಗುವುದಿಲ್ಲ, ಸಂಭಾಷಣೆಗಳು, ಕೆಲವು ಕಡೆ ದೃಶ್ಯಗಳು ನೆಗೆಯುತ್ತವೆ.. ಚಿತ್ರದ ಓಘ ಗೊತ್ತಿರೋದರಿಂದ ಅಥವಾ ದೃಶ್ಯಗಳ ಮೂಲಕ ಅರ್ಥ ಮಾಡಿಕೊಳ್ಳೋಕೆ ಆಗುವುದರಿಂದ ಅಷ್ಟೊಂದು ಅಭಾಸ ಆಗೋಲ್ಲ.. ಆದರೂ ಪೂರ್ಣ ಚಿತ್ರವಿದ್ದರೆ ಇನ್ನೂ ಈ ಚಿತ್ರ ಮನಕ್ಕಿಳಿದು ಅಬ್ಬಾ ಅನಿಸುತ್ತದೆ.. !

ಮುಂದಿನ ಚಿತ್ರದೊಂದಿಗೆ ಮತ್ತೆ ಭೆಟ್ಟಿಯಾಗೋಣ.. ಅರೆ ಅರೆ ಸ್ವಲ್ಪ ಇರಿ.. ಈ ಚಿತ್ರದ ಕೆಲವು ಹಾಗೆ ನೋಡಿಬಿಡಿ.. !!

ರಾಜ್ ಅವರ ಆರಂಭಿಕ ದೃಶ್ಯ ತನ್ನ ನಾಯಕಿಯೊಂದಿಗೆ

ಅಬ್ಬಾ ಮೈನಾವತಿ 

ತ್ರಿದೇವಿಯರು .. ಪಂಡರಿಬಾಯಿ, ಮೈನಾವತಿ, ಲೀಲಾವತಿ 

ಮೈನಾವತಿ, ಲೀಲಾವತಿ 

ಪಂಡರಿಬಾಯಿ, ಮೈನಾವತಿ 

ಎಂ ವಿ ರಾಜಮ್ಮ 

ರಾಜ್ ನಾಯಕಿ 

ಮುದ್ದು ರಾಜ್ 

ರಾಜಾಶಂಕರ್, ಪಂಡರಿ ಬಾಯಿ, ನರಸಿಂಹರಾಜು 

ಮುದ್ದಾಗಿ ಕಾಣುವ ರಾಜಾಶಂಕರ್ 

ಲೀಲಾವತಿ, ರಮಾದೇವಿ 

ನರಸಿಂಹರಾಜು, ಸಿಂಹ, ರಾಜಾಶಂಕರ್, ಪಂತುಲು, ರಾಜಮ್ಮ 

ಗುಗ್ಗು, ಮೈನಾವತಿ 

ಡಿಕ್ಕಿ, ಮೈನಾವತಿ  ಮತ್ತು ಪೋಷಕ ನಟ 

ಪಂತುಲು 

ಆದವಾನಿ ಲಕ್ಷ್ಮೀದೇವಿ, ನರಸಿಂಹರಾಜು 

ಆದವಾನಿ ಲಕ್ಷ್ಮೀದೇವಿ ಮುದ್ದಾಗಿ ಕಾಣಿಸುತ್ತಾರೆ 

ಎಚ್ ಎಲ್ ಏನ್ ಸಿಂಹ ಅವರ ಜೊತೆಯಲ್ಲಿ ಪಂತುಲು 

 ಮತ್ತೊಂದು ರಾಜ್ ಅವರ  ಮಹೋನ್ನತ ಚಿತ್ರದ ಜೊತೆಯಲ್ಲಿ ಸಿಗುವ!!!

1 comment:

  1. ಈ ಚಿತ್ರವನ್ನು ನಾನು ಚಿಕ್ಕವನಾಗಿದ್ದಾಗ ನೋಡಿದ್ದೆ. ಸ್ವಲ್ಪರಮಟ್ಟಿಗೆ ಮನದಲ್ಲಿ ಉಳಿದಿತ್ತು. ಇದೀಗ ನೀವು ಅನೇಕ ಚಿತ್ರಗಳ ಮೂಲಕ ಚಿತ್ರದರ್ಶನ ಮಾಡಿಸಿದ್ದೀರಿ. ಸಂತೋಷವಾಯಿತು. ಧನ್ಯವಾದಗಳು. ಇಂತಹ ಹಳೆಯ ಚಿತ್ರಗಳು ನಿಮಗೆ ಸಿಕ್ಕರೆ, ದಯವಿಟ್ಟು ಹಂಚಿಕೊಳ್ಳಿ.

    ReplyDelete