Thursday, April 12, 2018

ಆ ಒಂದು ದಿನ.. ಅಣ್ಣಾವ್ರ ನೆನಪಲ್ಲಿ

ಅಣ್ಣಾವ್ರು ನಗುತ್ತಿದ್ದರು..

ನಾ ಸುತ್ತಲೂ ನೋಡುತ್ತಿದ್ದೆ ಮಂಗನ ತರಹ..

"ಶ್ರೀಕಾಂತ.. ನಿನ್ನೆ ಕಣಪ್ಪ.. ನಿನ್ನ ನೋಡಿಯೇ ನಗುತ್ತಿರುವೆ ನಾನು"

 "ಯಾಕೆ ಅಣ್ಣಾವ್ರೇ..  ನಿಮ್ಮ ಪ್ರೇಮದ ಕಾಣಿಕೆ ಚಿತ್ರದ ಹಾಡು ನೆನಪಿಸಲಾ "ನಗುವಿರಾ ಅಣ್ಣಾವ್ರೇ ನಾನು ಜಾರಿ ಬೀಳುವಾಗ.."

"ಇಲ್ಲ ಕಣಪ್ಪ.. ನೀ ಪ್ರತಿ ವರ್ಷವೂ ನನ್ನ ಪುಣ್ಯ ತಿಥಿಯ ದಿನಕ್ಕೆ ಮತ್ತು ಜನುಮದಿನಕ್ಕೆ  ಬರೆಯುತ್ತಿರುವ ಲೇಖನ ಓದುತ್ತಿದ್ದೇನೆ.. ನೀ ಆಯ್ದುಕೊಳ್ಳುವ ವಿಷಯ ಸೊಗಸಾಗಿರುತ್ತದೆ.. ಅದಕ್ಕೆ ಈ ಬಾರಿ ಏನು ವಿಷಯ ಆಯ್ದುಕೊಳ್ಳುವೆ ಎನ್ನುವ ಕುತೂಹಲ ಇದೆ.. ಅದಕ್ಕೆ ನಿನ್ನ ಮೊಗವನ್ನು ನೋಡುತ್ತಿರುವೆ.. ಮೊಗದಲ್ಲಿ ಮೂಡುತ್ತಿರುವ ನೆರಿಗೆಗಳನ್ನು ನೋಡಿ ನಗು ಬರುತ್ತಿದೆ.. "

"ಹ ಹ ಹ.. ನೀವೂ ನನ್ನ ತಮಾಷೆ ಮಾಡ್ತಿದ್ದೀರಾ ಅಣ್ಣಾವ್ರೇ.. ನಿಮ್ಮ ಚಿತ್ರಗಳು ಕಡಲಿನ ತರಂಗಗಳ ಹಾಗೆ.. ಪ್ರತಿಯೊಂದು ವಿಭಿನ್ನ ಮತ್ತು ತರಂಗಗಲು ಎಂದಿಗೂ ಖಾಲಿಯಾಗೋಲ್ಲ.. ನಿಮ್ಮ ಆಶೀರ್ವಾದ ಇದೆ ಅಂತ ಒಂದು ಸಲ ಹಂಗೆ ಅನ್ನಿ.. ತಲೆಗೆ ಬಂದ ವಿಷಯ ಬರೆಯುತ್ತೇನೆ.. "

"ಅಭಿಮಾನಿಗಳೇ ದೇವರು... ಅಭಿಮಾನಿ ದೇವರು ಎಂದು ನನ್ನ ಬಾಯಲ್ಲಿ ನುಡಿಸಿದವರು ನೀವೇ.. ನನ್ನ ಆಶೀರ್ವಾದ ಅನ್ನುವ ಮಾತೆ ಇಲ್ಲ.. ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು.. ಆಕೆಯ ಅಭಯ ಹಸ್ತ ಇದ್ದೆ ಇದೆ.. ಮುಂದುವರೆಸು.. "

"ಸರಿ ಅಣ್ಣಾವ್ರೇ.. ಜೈ ಕನ್ನಡಾಂಬೆ.. "

***********

ಅಂದು ಆಫೀಸಿನಲ್ಲಿ ಕೆಲಸ ಸಾಗುತ್ತಿತ್ತು.. ನನ್ನ ಸಹೋದರ ದೀಪು ಕರೆ ಮಾಡಿದ.. "ಅಣ್ಣಯ್ಯ ನಾನು ಊರಿಗೆ ಹೋಗುತ್ತಿದ್ದೀನಿ.. ನನ್ನ ಫ್ರೆಂಡ್ ಕಡೆಯಿಂದ ಸುದ್ದಿ ಗೊತ್ತಾಯಿತು.. ಅಣ್ಣಾವ್ರು ಹೋಗಿಬಿಟ್ರಂತೆ... ಅಂತಿಮ ದರ್ಶನಕ್ಕೆ ಎಲ್ಲಿ ಸಿದ್ಧತೆ ಎಂದು ಇನ್ನೂ ನಿರ್ಧಾರವಾಗಿಲ್ಲ ಅಂತೇ.. ನೀನು ಬೇಗನೆ ಹೊರತು ಬಿಡು.. ಬಂದ್ ಶುರುವಾಗುತ್ತೆ.. ಸರಿ ಅಣ್ಣಯ್ಯ ಕೇರ್ ಫುಲ್ ಓಕೆ" ಅಂತ ಹೇಳಿ ಫೋನ್ ಇಟ್ಟ..

ಸುದ್ಧಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.. ನಾ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ... ತಕ್ಷಣ ನಾ ನನ್ನ ಆಫೀಸಿಗೆ (ಬಿಟಿಎಂ ಲೇಔಟ್) ಗೆ ಕರೆ ಮಾಡಿ... ಇದು ನಿಜಾ ನಾ ಅಂದೇ.. ಅವರಿಗೆಲ್ಲ ಗೊತ್ತಿತ್ತು ಅಣ್ಣಾವ್ರ ಸಿನೆಮಾಗಳ ಅಭಿಮಾನಿ ನಾನು ಅಂತ... ಆದರೆ ಅವತ್ತು ಅಂತರ್ಜಾಲ ಜಾಮ್ ಆಗಿ ಬಿಟ್ಟಿತ್ತು..ಇಂಟರ್ನೆಟ್ ಕೂಡ ಅಣ್ಣಾವ್ರು ಇನ್ನಿಲ್ಲ ಅನ್ನುವ ಸುದ್ಧಿಯನ್ನು ಅರಗಿಸಿಕೊಳ್ಳಲಾಗದೆ ಅಳುತ್ತಿತ್ತು ಅನ್ನಿಸುತ್ತೆ..

ತಕ್ಷಣ ನಮ್ಮ ಎಚ್ ಆರ್ ಡಿಪಾರ್ಟ್ಮೆಂಟ್ ನಿರ್ಧಾರ ತೆಗೆದುಕೊಂಡು... ಎಲ್ಲರೂ ಬೇಗನೆ ಹೊರಡೋದು ಅಂತ ಹೇಳಿ.. ಎಲ್ಲರಿಗೂ ಸುತ್ತೋಲೆ ಕಳಿಸಿದರು.. ಹತ್ತಿರವಿದ್ದವರು.. ತಮ್ಮ ಬೈಕ್, ಸೈಕಲ್, ನೆಡೆದು ಹೊರಟೆ ಬಿಟ್ಟರು..

ನಮ್ಮ ಮ್ಯಾನೇಜರ್ ಡ್ರೈವರ್ ಓಡುತ್ತಾ ನನ್ನ ಬಳಿ ಬಂದು.. "ಸರ್ ಅಣ್ಣಾವ್ರ ಒಂದು ಚಿತ್ರ ಕೊಡಿ ಸರ್.. ಅದೇನೋ ಕಂಪ್ಯೂಟರ್ ನಲ್ಲಿ ಸಿಗುತ್ತಂತಲ್ಲಾ.. ಪ್ರಿಂಟ್ ಕೊಡಿ ಸರ್"

ನಾನು ಶತ ಪ್ರಯತ್ನ ಮಾಡಿದೆ.. ಇಂಟರ್ನೆಟ್ ಇಲ್ಲ.. ಇದ್ದರೂ ತುಂಬಾ ನಿಧಾನವಾಗಿತ್ತು.. ಪೇಜುಗಳು ಓಪನ್ ಆಗ್ತಾ ಇರಲಿಲ್ಲ.. ಆಗ ಈಗಿನಷ್ಟು ತಾಂತ್ರಿಕತೆ ನನಗೆ ಗೊತ್ತಿರಲಿಲ್ಲ (ಈಗಲೂ ಗೊತ್ತಿಲ್ಲ ಅದು ಬೇರೆ ವಿಷ್ಯ).. ಏನೇ ಲಾಗ ಹಾಗಿದ್ದರೂ ಅಣ್ಣಾವ್ರ ಚಿತ್ರ ಇರುವ ವೆಬ್ಸೈಟ್ ಓಪನ್ ಆಗ್ತಾನೆ ಇಲ್ಲ. ನಮ್ಮ ಆಫೀಸಿಗೂ ಫೋನ್ ಮಾಡಿ.. ಒಂದು ಅಣ್ಣಾವ್ರ ಚಿತ್ರ ಪ್ರಿಂಟ್ ತೆಗೆದು ಫ್ಯಾಕ್ಸ್ ಕಳಿಸಿ.. ಇಲ್ಲಿ ಜೆರಾಕ್ಸ್ ತಗೋತೀನಿ ಅಂದೇ.. ಪಾಪ ಅವರು ಏನೇನೇ ಪ್ರಯತ್ನ ಮಾಡಿದರೂ ಆಗಲೇ ಇಲ್ಲ. .

ಇತ್ತ ನಮ್ಮ ಸೆಕ್ಯೂರಿಟಿ ಸರ್ ಕ್ಯಾಬ್ಗಳೆಲ್ಲ ಹೋರಾಡತ ಇದೆ.. ಎಲ್ಲರೂ ಬೇಗ ಬೇಗ ಬನ್ನಿ ಅಂತ ಕೂಗುತ್ತಿದ್ದರು..

ಏನೂ ಹೊಳೆಯದೆ ನಾವೆಲ್ಲಾ ಕ್ಯಾಬ್ ಹತ್ತಿರ ಹೋದಾಗ ನನಗೆ ಅಚ್ಚರಿ ಕಾದಿತ್ತು.. ನಮ್ಮ ಡ್ರೈವರ್ ತಾನೂ ಎಲ್ಲಾ ಕಡೆ ಪ್ರಯತ್ನ ಮಾಡಿ.. ಸೋತು ಕಡೆಗೆ ತಲೆ ಉಪಯೋಗಿಸಿ.. ಗಾಜಿನ ಮೇಲೆ ಒಂದು ಹಾಳೆ ಅಂಟಿಸಿದ್ದರು.. ಅದರಲ್ಲಿ ಇದ್ದದ್ದು "ಅಣ್ಣಾವ್ರ ಪಾರ್ಥಿವ ಶರೀರದ ದರ್ಶನಕ್ಕೆ" 

ನಾ ಡ್ರೈವರಿಗೆ ಶಭಾಷ್ ಹೇಳಿದೆ.. ಮನೆಯಿಂದ ಆಗಲೇ ಹಲವಾರು ಫೋನ್ ಬಂದಿತ್ತು.. ಹೊರಟಿದ್ದೇನೆ.. ಬರುತ್ತಿದ್ದೇನೆ ಎಂದು ಹೇಳಿ ಅವರ ಉದ್ವೇಗ ಕಡಿಮೆ ಮಾಡಿದ್ದೆ..

ಅಲ್ಲಿಂದ ಇಪ್ಪತೇಳು ಕಿಮೀಗಳು.. ನನ್ನ ಜೀವನದ ಮರೆಯಲಾರದ ಕ್ಷಣಗಳು.. ದಾರಿಯುದ್ದಕ್ಕೂ ಬಸ್ಸಿಗೆ ಕಾಯುತಿದ್ದ ಜನತೆ.. ಎಲ್ಲಾ ಕಡೆಯೂ "ಅಣ್ಣ ಮತ್ತೊಮ್ಮೆ ಹುಟ್ಟಿ ಬನ್ನಿ" ಎನ್ನುವ ಫಲಕಗಳು.. ಅಣ್ಣಾವ್ರ ವಿವಿಧ ಚಿತ್ರಗಳ ಪೋಸ್ಟರುಗಳು.. ಕನ್ನಡ ಬಾವುಟ.. ರೇಡಿಯೋದಲ್ಲಿ ಅಣ್ಣಾವ್ರ ಚಿತ್ರಗಳ ಹಾಡುಗಳು.. ಜೊತೆಯಲ್ಲಿ ಅಣ್ಣಾವ್ರ ಬಗ್ಗೆ ಅವರ ಸಹ ಕಲಾವಿದರ ಮಾತುಗಳು.. .. ಮೈ ರೋಮಾಂಚನವಾಗುತ್ತಿತ್ತು.. ಕ್ಯಾಬಿನಲ್ಲಿ ಸಹೋದ್ಯೋಗಿಗಳ ಜೊತೆ ಮಾತಾಡಬೇಕು ಆದರೆ ಅಣ್ಣಾವ್ರ ಬಗ್ಗೆ ಮಾತುಗಳು ಕೇಳಬೇಕು ಈ ಸಂದಿಗ್ಧದಲ್ಲಿ ಗೆದ್ದದ್ದು ಅಣ್ಣಾವ್ರ ಹಾಡುಗಳೇ..

ಮನೆಗೆ ತಲುಪಿದೆ.. ನನ್ನ ಸೋದರ ಮಾವ ರಾಜ ಮನೆಗೆ ಬಂದಿದ್ದ.. ನನ್ನ ಅಪ್ಪ ಬೆಳಗಿಂದ ಟಿವಿ ಮುಂದೆ ಕೂತಿದ್ದರು.. ಅಣ್ಣಾವ್ರ ಹಾಡುಗಳು.. ಸಿನಿಮಾ.. ಸುದ್ಧಿಗಳು.. ಸಂದರ್ಶನ ಎಲ್ಲವನ್ನು ಅಚ್ಚುಕಟ್ಟಾಗಿ ನೋಡುತ್ತಾ ಕೂತಿದ್ದರು.. ಅಣ್ಣ, ತಮ್ಮ, ಅಕ್ಕ ಎಲ್ಲರೂ ಮನೆ ಸೇರಿಯಾಗಿತ್ತು.

ಅಲ್ಲಿಂದ ಮುಂದೆ ರಾತ್ರಿಯ ತನಕ ಮಾತುಗಳು ಬರಿ ಅಣ್ಣಾವ್ರ ಸುತ್ತಲೇ ಸುತ್ತುತ್ತಿದ್ದವು.. ರಾಜ ಹೇಳಿದ "ಭಕ್ತ ಅಂಬರೀಷ" ಚಿತ್ರ ಮಾಡಬೇಕಿತ್ತು.. ಅದೊಂದು ಆಸೆ ಹಾಗೆ ಉಳಿದುಬಿಟ್ಟಿದ್ದು ಬೇಸರ ಕಣೋ" ಅಂದ.. ಆಗ ನಾ ಹೇಳಿದೆ.. ಅಣ್ಣಾವ್ರ ರಾಜಾಸ್ಥಾನದ ಸಾಹಿತಿ ಶ್ರೀ ಚಿ ಉದಯಶಂಕರ್ ಹೋದ ಮೇಲೆ "ಭಕ್ತ ಅಂಬರೀಷ" ಸಾಧ್ಯವೇ ಇಲ್ಲ ಕಣೋ .. ಅದು ಅಣ್ಣಾವ್ರಿಗೂ ಗೊತ್ತಿತ್ತು ಅನ್ನಿಸುತ್ತೆ..

ಮಾರನೇ ದಿನವೂ ಕೂಡ ಸರ್ಕಾರಿ ರಜೆ ಘೋಷಿಸಿದ್ದರು.. ಆಫೀಸಿಗೆ ರಜೆ ಇತ್ತು.. ಅಂತಿಮ ದರ್ಶನಕ್ಕೆ ಜನಸಾಗರ ಹರಿದಿದ್ದು.. ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋದತ್ತ ಸಾಗಿದ್ದ ಪಾರ್ಥಿವ ಶರೀರ ನಂತರದ ಅಂತಿಮ ಸಂಸ್ಕಾರ ಎಲ್ಲವನ್ನೂ ಟಿವಿಯಲ್ಲಿ ನೋಡುತ್ತಾ ಕೂತಿದ್ದೆವು..

ಕಡೆಗೆ ಅನ್ನಿಸಿದ್ದು.. ಒಬ್ಬ ಕಲಾವಿದನನ್ನು ಈ ಪಾಟಿ ಹಚ್ಚಿಕೊಳ್ಳಲು ಕಾರಣವೇನು ಎಂದಾಗ.. ನನಗೆ ಅನ್ನಿಸಿದ್ದು.. ಅಣ್ಣಾವ್ರ ೨೦೭ ಚಿತ್ರಗಳಲ್ಲಿ.. ಕಂಡದ್ದು ೨೦೭ ವ್ಯಕ್ತಿತ್ವಗಳು. ಒಂದಕ್ಕೊಂದು ಸಂಬಂಧವಿರದ.. ಆದರೆ ಪ್ರತಿಯೊಂದು ಪಾತ್ರವೂ ಕೂಡ ಕಲಿಸಿದ ಪಾಠ.. ಅದರಿಂದ ಅರಿತುಕೊಂಡ ಜೀವನ ದರ್ಶನ.. ಇದು ಅಣ್ಣಾವ್ರನ್ನು ಆ ಸ್ಥಾನಕ್ಕೆ ಒಯ್ದಿತ್ತು.. ಪ್ರತಿಯೊಬ್ಬರೂ ಪರದೆಯ ಮೇಲೆ ಅಣ್ಣಾವ್ರನ್ನು ಕಾಣುತ್ತಿರಲಿಲ್ಲ ಬದಲಿಗೆ ಆ ಪಾತ್ರವನ್ನು ಕಾಣುತ್ತಿದ್ದರು.. ಐತಿಹಾಸಿಕ ಪಾತ್ರ ಮಾಡಿದಾಗ ಆ ರಾಜ ಮಹಾರಾಜರನ್ನೇ ಕಾಣುತಿದ್ದೆವು.. ಪೌರಾಣಿಕ ಪಾತ್ರಗಳಲ್ಲಿ ಕೃಷ್ಣ, ರಾಮ, ರಾವಣ ಅಂದರೆ ಕಣ್ಣಿಗೆ ಕಾಣುವುದು ಅಣ್ಣಾವ್ರ ಮುಖವೇ... ಕೌಟುಂಬಿಕ ಪಾತ್ರಗಳಲ್ಲಿ ನಮ್ಮ ಅಣ್ಣ, ಅಪ್ಪ, ಬಂಧುಗಳು ಕಾಣುತ್ತಿದ್ದರು... ಹೀಗೆ ಮನೆ ಮನೆಗೂ ಮನ ಮನದಲ್ಲೂ ಅಚ್ಚಳಿಯದೆ ನಿಲ್ಲಬೇಕಾದರೆ ಆ ಸೃಷ್ಟಿಕರ್ತ ಬ್ರಹ್ಮ ಕರುನಾಡಿಗಾಗಿಯೇ ಸೃಷ್ಟಿಸಿದ ಅದ್ಭುತ ಜೀವ ನಮ್ಮ ಅಣ್ಣಾವ್ರು..

ಅಣ್ಣಾವ್ರೇ.. ನಿಮ್ಮ ಚಿತ್ರಗಳು ಬರಿ ಚಿತ್ರಗಳಲ್ಲ ಬದಲಿಗೆ ಅದು ೨೦೭ ವಿಶ್ವವಿದ್ಯಾಲಯಗಳು.. ಪ್ರತಿಯೊಂದು ದೃಶ್ಯವೂ ಒಂದೊಂದು ಪದವಿಯ ಪಠ್ಯ.. ಜೀವನ ದರ್ಶನ ಮಾಡಿಸುವ ನಿಮ್ಮ ಚಿತ್ರಗಳ ನೋಡುತ್ತಾ ಬೆಳೆದ ಈ ಜೀವವೇ ಧನ್ಯ..

ಇನ್ನೊಮ್ಮೆ ಅಲ್ಲ ..ಇನ್ಯಾವತ್ತಿಗೂ ಈ ಭುವಿಯಲ್ಲಿ ಇಂತಹ ಒಂದು ಅನರ್ಘ್ಯ ರತ್ನ ಮತ್ತೆ ಜನಿಸೋದು ಸಾಧ್ಯವೇ ಇಲ್ಲ.. ಕಾರಣ ಗೊತ್ತೇ.. ಅಣ್ಣಾವ್ರು ಕರುನಾಡ ಚಿತ್ರರಸಿಕರ ಮನದಿಂದ ಹೊರಗೆ ಹೋಗಿದ್ದರೇ ತಾನೇ ಮತ್ತೊಮ್ಮೆ ಹುಟ್ಟಿ ಬರೋಕೆ ಸಾಧ್ಯ..

ಅಣ್ಣಾವ್ರೇ ನೀವು ಅಜರಾಮರ.. !!!

********

 ಏನೂ ಹೇಳಲಿ.. ನಾನೂ ಏನೂ ಹೇಳಲಿ.
ಕಣ್ಣುಗಳು ತುಂಬಿ ಬಂದಾಗ ಮಾತುಗಳು ಕಷ್ಟ ಕಣೋ ಕಾಂತಾ.. ಶ್ರೀಕಾಂತ
ನಿನ್ನ ಸೋದರಮಾವನ ರಾಜನ ಜೊತೆ ಅವಾಗವಾಗ ಮಾತಾಡುತ್ತಲೇ ಇರುತ್ತೀನಿ..
ಆತನ ಸಿನಿಮಾ ಜ್ಞಾನ.. ನೆನಪು ಅಬ್ಬಬ್ಬಾ ಅನಿಸುತ್ತದೆ.. ಪ್ರತಿಯೊಂದು ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಅವನ ಜಾಣೆ ಇಷ್ಟವಾಗುತ್ತದೆ..
ಅದರಲ್ಲೂ ನನ್ನ ಸಿನೆಮಾಗಳಲ್ಲಿ ಬಾಲಣ್ಣ ಇದ್ದುಬಿಟ್ಟರಂತೂ ಅವನ ವರ್ಣನೆ ಮುಗಿಯೋದೇ ಇಲ್ಲ.. ನೀನು ಅವರು.. ನನ್ನ ಸಿನಿಮಾಗಳನ್ನು ನೋಡಲು ಬೆಂಗಳೂರಿನ ಟಾಕೀಸುಗಳನ್ನು ಸುತ್ತಿದ್ದು.. ಶಂಕರ್ ಗುರು ಚಿತ್ರವನ್ನು ಬೆಂಗಳೂರಿನಲ್ಲಿ ಮರು ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ಇನೋಡಿದ್ದು.. ಎಲ್ಲವೂ ನನಗೆ ಗೊತ್ತು..

ಶ್ರೀಕಾಂತ ಶುಭವಾಗಲಿ.. ಹನ್ನೆರಡು ದಿನ.. ಮತ್ತೆ ನಿನ್ನ ಕೀಲಿ ಮನೆಯಲ್ಲಿ ಬಂದು ಕೂರುತ್ತೇನೆ.. ಬರುತ್ತೇನೆ..

ಅಣ್ಣಾವ್ರು ಹಾಗೆ ಬೆಳಕಿಂದ ಕಿರಣವಾಗಿ.. ಕರುನಾಡ ಚಿತ್ರರಸಿಕರ ಆಗಸದಲ್ಲಿ ಹೊಳೆಯುವ ತಾರೆಯಾಗಿಬಿಟ್ಟರು. .


*******

6 comments:

  1. ಅಣ್ಣಾವ್ರ ಬಗ್ಗೆ ಬರೆಯೋಕೆ ನಮ್ಮ ಶ್ರೀಕಾಂತ್ ಗೆ ಸಾಟಿ ಯಾರೂ ಇಲ್ಲ, ರಾಜ್ಕುಮಾರ್ ಅನ್ನುವ ವ್ಯಕ್ತಿ ನಮ್ಮ ಕಾಲದಲ್ಲಿ ಬದುಕಿದ್ದರು, ಅನ್ನುವುದೇ ನಮ್ಮ ಬದುಕಿನ ಹೆಮ್ಮೆಯ ವಿಚಾರ, ಇನ್ನು ಅವರ ಚಿತ್ರಗಳು ನಮ್ಮ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ನಿತ್ಯ ಸತ್ಯದ ಜೀವನ ಪುಸ್ತಕಗಳಾಗಿದ್ದವು. ಮೇರು ಕಲಾವಿದನ ಅಗಲಿಕೆ ನಿಜಕ್ಕೂ ಕನ್ನಡ ಚಿತ್ರ ರಂಗಕ್ಕೆ ಕೊರತೆ ಅನ್ನೋದು ನಿರ್ವಿವಾದ . ಚಂದದ ಬರಹಕ್ಕಾಗಿ ವಂದನೆಗಳು ಶ್ರೀಕಾಂತ್ .

    ReplyDelete
    Replies
    1. Thank you Balu Sir..your encouragement is a wonderful inspiration

      Delete
  2. Aa dinada anubhava yeleyeleyagi moodibandide...

    ReplyDelete
  3. ooooooooosum job, sri ! annavrige nuDi namana ! excellent work !

    ReplyDelete