"ಯಾರದು ಒಳಗೆ"
"ನಾನು"
"ನಾನು ಅಂದರೆ"
"ನಾನವ್ವೋ ... ಕುರುಬರ ಪಿಳ್ಳೆ.. ಬಾಗಿಲು ಜಡಾಯಿಸಿಕೊಂಡಿವ್ನಿ.. "
"ಬಾಗಿಲು ತೆಗಿ"
"ನಾ ಕೇಳಿದ್ದು ಕೊಡ್ತಿಯೋ.."
"ಕೊಡ್ತೀನಿ.. "
"ಹಾ.. ಹಂಗಾದ್ರೆ ಒಪ್ಪಕ್ಕಿಲ್ಲ, ,ಮುಕ್ಕಣ್ಣನ ಮೇಲೆ ಪ್ರಮಾಣ ಮಾಡು.. ಕೇಳಿದ್ದು ಕೊಡ್ತೀನಿ ಅಂತ"
"ಹಾ ಖಂಡಿತವಾಗಿ ಕೊಡ್ತೀನಿ. "
ಈ ಸಂಭಾಷಣೆ ಕರುನಾಡ ಚಿತ್ರರಸಿಕರ ನಾಲಿಗೆಯ ಮೇಲೆ ಹರಿದಾಡುತ್ತಲೇ ಇರುತ್ತದೆ...
ಮುಂದೆ
ಮುಂದೆ ನೆಡೆದದ್ದು ಪವಾಡ..
ಅಲ್ಲಿಯ ತನಕ ಕುರುಬರ ಪಿಳ್ಳೆಯಾಗಿ.. ಸ್ವಲ್ಪ ಜ್ಞಾನ.. ಬೇಕಾದಷ್ಟು ಮುಗ್ಧತೆ.. ಹೆದರಿಕೆಯಿಲ್ಲದ ಅಭಿನಯ ನೀಡಿದ್ದ ಅಣ್ಣಾವ್ರು.. ಕಾಳಿಮಾತೆಯ ಮುಂದೆ ನಿಂತಾಗ ಬೆದರುಬೊಂಬೆ ಆಗುತ್ತಾರೆ.. ನಾಲಿಗೆ ತೊದಲುತ್ತದೆ.. ಶರೀರ ನಡುಗುತ್ತದೆ.. ಕಾಳಿಯ ಚರಣಕಮಲಗಳ ಮೇಲೆ ತಲೆ ಇಟ್ಟು ಧನ್ಯರಾಗುತ್ತಾರೆ.. ತಮ್ಮ ಎತ್ತರದ ನಿಲುವನ್ನು ಕುಬ್ಜ ಮಾಡಿಕೊಂಡು..
"ನಿನಗೆ ಏನೂ ಬೇಕು" ಎಂದು ಕಾಳಿ ಮಾತೆ ಕೇಳಿದಾಗ
"ವಿದ್ಯಾ ಬುದ್ದಿ" ಎನ್ನುವ ಮಾತನ್ನು ಗೊಗ್ಗರು ದನಿಯಲ್ಲಿ ಹೇಳುತ್ತಾರೆ.
ಮತ್ತೆ ಕೇಳಿದಾಗ.. ಸ್ವಲ್ಪ ದೃಢ ಧ್ವನಿಯಲ್ಲಿ "ನನ್ನ ಹೆಂಡತಿ ಅದನ್ನೇ ಕೇಳು ಅಂದಿದ್ದಾಳೆ ನನಗೆ ಅದೇ ಬೇಕು"
"ಕುಳಿತುಕೋ.. ನಾಲಿಗೆ ಹೊರಗೆ ತೆಗಿ ... "
ಓಂಕಾರ ಬರೆಸಿಕೊಂಡ ಕಾಳಿದಾಸ ಪಾತ್ರಧಾರಿಯ ಅಭಿನಯದ ಮಾರ್ಪಾಡು ನೋಡಬೇಕು..
ಈ ದೃಶ್ಯದ ತನಕ ಪೆದ್ದು ಪೆದ್ದಾಗಿ.. ಗಿಳಿಪಾಠದಂತೆ ಹೇಳಿದ್ದನ್ನು ಮಾತ್ರ ಹೇಳುತ್ತಾ.. ಇರುವ ಅಣ್ಣಾವ್ರು.. ನಂತರದ ಅಭಿನಯ ಕಂಡು ಬೆರಗಾಗುವ ಸರದಿ ಪ್ರೇಕ್ಷಕರದು..
ಅದೇ ಬಟ್ಟೆ.. ಅದೇ ಮೇಕಪ್.. ವಿಭೂತಿ.. ಕೈಯಲ್ಲಿದ್ದ ಉಂಗುರಗಳು.. ಕೊರಳಲ್ಲಿ ಸರ.. ಯಾವುದೂ ಬದಲಾಗಿಲ್ಲ.. ಕೇವಲ ಹತ್ತು ನಿಮಿಷಗಳಲ್ಲಿ ಅಣ್ಣಾವ್ರ ಅಭಿನಯದಲ್ಲಿನ ಬದಲಾವಣೆ.. ಯಾವ ವಿಜ್ಞಾನಿಯ ಉಪಕರಣಗಳಲ್ಲೂ ಅಳೆಯೋಕೆ ಆಗೋಲ್ಲ..
ನಾನು ನೂರಾರು ಬಾರಿ ಕವಿರತ್ನ ಕಾಳಿದಾಸ ಚಿತ್ರ ನೋಡಿದ್ದೇನೆ.. ಈ ದೃಶ್ಯ ಬಂದಾಗ ಮೈ ಜುಮ್ ಎಂದಿದೆ.. ಆದರೂ ಪ್ರತಿ ಸಾರಿ ಈ ದೃಶ್ಯ ನೋಡಿದಾಗಲೂ ಒಂದು ಅನಿರ್ವಚನೀಯ ಅನುಭವ.. ಪದಗಳಲ್ಲಿ ಕಟ್ಟಿಕೊಡಲಾಗದ ಅನುಭವ..
ನಿನ್ನೆ ರಾತ್ರಿ ಅದೇ ದೃಶ್ಯವನ್ನು ನೋಡಿ ಮಲಗಿದ್ದೆ..
ಯಾರೋ ತಟ್ಟಿ ಎಬ್ಬಿಸಿದಂತೆ ಭಾಸವಾಯಿತು..
"ಅಣ್ಣಾವ್ರೇ.. ನಮಸ್ಕಾರ.. ಇದೇನು ನೀವೇ ಇಲ್ಲಿ ಬಂದಿದ್ದೀರಿ... .ಅಥವಾ ನಾನೇ ನಿಮ್ಮ ಹತ್ತಿರ ಬಂದಿದ್ದೇನೆಯೇ"
"ಅದು ಇರಲಿ.. ಶ್ರೀಕಾಂತಾ.. ನಿನ್ನಲ್ಲಿ ಏನೋ ಪ್ರಶ್ನೆ ಉದ್ಭವಿಸಿದೆ.. ಅದಕ್ಕೆ ಉತ್ತರ ನೀಡಲು ನಾ ಬಂದೆ.. ಹೇಳಪ್ಪ.. "
"ಅಣ್ಣಾವ್ರೇ.. ಕುರುಬರ ಪಿಳ್ಳೆಯಿಂದ ಕಾಳಿದಾಸನಾಗಿ ಮಾರ್ಪಾಡಾಗುವ ಆ ದೃಶ್ಯ.. ಇದನ್ನು ಅಳೆಯಲು ಯಾವುದೇ ಪರಿಕರಗಳಿಲ್ಲ ..ಯಾವ ಪುಸ್ತಕದಲ್ಲಿಯೂ ಇದನ್ನು ವಿವರಿಸೋಕೆ ಆಗೋಲ್ಲ.. ಅದು ಹೇಗಾಯಿತು.. ಅದರ ಬಗ್ಗೆ ನಿಮ್ಮ ಮಾತು ಬೇಕಿತ್ತು.. ಹೇಳಿ ಅಣ್ಣಾವ್ರೇ"
"ಶ್ರೀಕಾಂತಾ.. ನಾನು ನಾನಾಗಿಲ್ಲದೆ.. ಹಾಗೆ ಸುಮ್ಮನೆ ಆ ಪಾತ್ರದೊಳಗೆ ಇಳಿದಾಗ ಮಾತ್ರ ಸಾಧ್ಯವಾಗುತ್ತದೆ.. "ನಾ" ಹೋದರೆ ಹೋದೇನು ಎನ್ನುವ ಕನಕದಾಸರ ಅಮೃತವಾಣಿ ನೆನಪಿಗೆ ಬಂದಿತ್ತು.. ನಿರ್ದೇಶಕರು ಹೇಳಿದಂತೆ ಅಭಿನಯಿಸಿದೆ.. ಅಷ್ಟೇ ನಿಮಗೆ ಪವಾಡ ಅನ್ನಿಸುವ ದೃಶ್ಯ ನನಗೆ ತೀರಾ ಸಾಧಾರಣ ಅನ್ನಿಸುತ್ತೆ.. ನನ್ನ ಚಿತ್ರಗಳನ್ನು ನಾ ನೋಡಿಲ್ಲ.. ಮಂತ್ರಾಲಯ ಮಹಾತ್ಮೆ ಮತ್ತು ಕವಿರತ್ನ ಕಾಳಿದಾಸ ಎರಡೇ ಚಿತ್ರಗಳನ್ನು ನಾ ನೋಡಿರೋದು.. ಕಾಳಿದಾಸ ಚಿತ್ರದ ದೃಶ್ಯವನ್ನು ನೋಡಿದಾಗ ನನಗೆ ಅನ್ನಿಸೋದು.. ಅಯ್ಯೋ ಇನ್ನಷ್ಟು ಚೆನ್ನಾಗಿ ಅಭಿನಯಿಸಬಹುದಿತ್ತು.. ಅಲ್ಲಿ ತಪ್ಪಾಗಿದೆ.. ಇಲ್ಲಿ ತಪ್ಪಾಗಿದೆ.. ಅನ್ನಿಸುತ್ತಲೇ ಇರುತ್ತದೆ.. ಹಾಗಾಗಿ ಈ ಚಿತ್ರ ಟಿವಿಯಲ್ಲಿ ಬಂದಾಗಲೂ ಚಿತ್ರ ನೋಡದೆ ಹೊರಗೆ ಹೋಗಿ ಬಿಡುತ್ತೇನೆ.. "
ಮನಸ್ಸಿಗೆ ನೆಮ್ಮದಿ ಸಿಕ್ಕಿತು.. ಅಣ್ಣಾವ್ರ ಮಾತುಗಳು ನಿಜ ಎನಿಸಿತು.. ನಾ ನಾನಾಗದೇ "ನಾ" ಅಳಿದು ಪಾತ್ರವಾದಾಗ ಮಾತ್ರ ಪರಕಾಯ ಪ್ರವೇಶ ಸಾಧ್ಯ.. ಹೌದಲ್ವಾ!
ನಿದ್ದೆಗೆ ಜಾರಿದೆ..
ಒಂದೆರಡು ಘಂಟೆಗಳ ಕಳೆದಿದ್ದವು ಅನ್ನಿಸುತ್ತೆ..
ಯಾರೋ ತಲೆ ಸವರಿದ ಅನುಭವ..
ಮತ್ತೆ ಅಣ್ಣಾವ್ರು..
"ಇನ್ನೊಂದು ವಿಷಯ ಹೇಳೋದು ಮರೆತಿದ್ದೆ.. ನಿನಗೆ ಆಗಲೇ ಉತ್ತರಸಿಕ್ಕಿತ್ತು ಆಲ್ವಾ ಮತ್ತೆ ಯಾಕೆ ಪ್ರಶ್ನೆ ಮಾಡಿದೆ.. ಮತ್ತೆ ಯಾಕೆ ತಲೆಯಲ್ಲಿ ಹುಳ ಬಿಟ್ಟ್ಕೊಂಡೆ.. ?"
"ನನಗೆ ಉತ್ತರವಾ.. ಎಲ್ಲಿ ಸಿಕ್ಕಿದೆ ಯಾರಿಂದ ಸಿಕ್ಕಿದೆ.. "
"ನೀನು ಗುರುಗಳು ಎಂದು ಕರೆಯುವ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಫೇಸ್ಬುಕ್ ನಲ್ಲಿನ ನಿನ್ನ ಪೋಸ್ಟಿಗೆ ಪ್ರತಿಕ್ರಿಯೆ ನೀಡಿದ್ದರಲ್ಲ... ಆಹಾ ಎಷ್ಟು ಚೆನ್ನಾಗಿ ವಿವರಿಸಿದ್ದಾರೆ ..ಅದೇ ಎಲ್ಲವನ್ನು ಹೇಳುತ್ತೆ.. ಆದರೂ ಕಳ್ಳ ನೀನು.. ನನ್ನ ನೋಡಬೇಕು ಎನ್ನುವ ಹಂಬಲ.. ನನ್ನೊಡನೆ ಮಾತಾಡಬೇಕು ಎನ್ನುವ ಹಂಬಲ ಇಟ್ಕೊಂಡು ನಾಟಕ ಮಾಡ್ತೀಯ.." ಎನ್ನುತ್ತಾ ನಗುತ್ತಾ ನಗುತ್ತಾ ನವಿರಾಗಿ ತಲೆ ಸವರಿ.. ಮಾಯವಾದರು..
"ಹೌದು ಗುರುಗಳು ಇದರ ಬಗ್ಗೆ ಮಾತಾಡಿದ್ದರು.. ಪ್ರತಿಕ್ರಿಯೆ ನೀಡಿದ್ದರು.. " ನೋಡೋಣ... ಎನುತ್ತ ಫೇಸ್ಬುಕ್ ಖಾತೆ ತೆಗೆದೇ.. ಆ ಪೋಸ್ಟ್ ಹುಡುಕಿದೆ... ಸಿಕ್ಕಿಯೇ ಬಿಟ್ಟಿತು..
ಆ ಸಂಭಾಷಣೆಯ ತುಣುಕು ಇಲ್ಲಿ ಹಾಕಿದ್ದೇನೆ..
ಶ್ರೀ : ಯಾವ ಉಪಕರಣವೂ ಇದನ್ನು ಮಾಪನ ಮಾಡಲಾಗುವುದಿಲ್ಲ..
ಅಣ್ಣಾವ್ರ ಕುರುಬರ ಪಿಳ್ಳೆಯಿಂದ
ಕಾಳಿದಾಸನ ಪಾತ್ರಕ್ಕೆ ಮಾರ್ಪಾಡು...
ಶ್ರೀ ಮಂಜುನಾಥ ಕೊಳ್ಳೇಗಾಲ :
ನೂರಕ್ಕೆ ನೂರು ನಿಜ... ಅದೊಂದು ಅದ್ಭುತಕ್ಷಣ... ಅದನ್ನು ರಾಜ್ ಕುಮಾರ್ ಸೆರೆಹಿಡಿದಿರುವ ರೀತಿಯೂ ಅಷ್ಟೇ ಅದ್ಭುತ, ಒಂದೆಳೆ ಹೆಚ್ಚಿಲ್ಲ ಒಂದೆಳೆ ಕಡಿಮೆಯಿಲ್ಲ. ಅದೊಂದು multiple ಪರಕಾಯಪ್ರವೇಶದ ಕ್ಷಣ - ರಾಜ್ ಕುಮಾರ್ ಎಂಬ ವ್ಯಕ್ತಿ ಕುರುಬರ ಬೀರನಾಗಿ, ಕುರುಬರ ಬೀರನಿಂದ ಕಾಳಿದಾಸನಾಗಿ... ಸ್ವಂತ ವ್ಯಕ್ತಿತ್ವವನ್ನು ಆ ಕ್ಷಣಕ್ಕೆ ಪೂರ್ಣ ಕೈಬಿಟ್ಟಾಗ ಮಾತ್ರ ಸಾಧ್ಯ ಈ ಜಾದೂ
ಅಣ್ಣಾವ್ರು ಹಾಗೆ ಒಮ್ಮೆ ನಕ್ಕು.. ಸೂಪರ್ ಕಣೋ ಶ್ರೀಕಾಂತ ಅಂದ ಹಾಗೆ ಆಯ್ತು..
****
ಅಣ್ಣಾವ್ರ ಜನುಮದಿನವಿಂದು.. ಯುಗ ಯುಗಕ್ಕೂ ಒಬ್ಬರೇ ಅಣ್ಣಾವ್ರು.. ಹರಿವ ನೀರಿನಂತೆ.. ಯಾವುದೇ ಪಾತ್ರಕ್ಕೂ.. ಪಾತ್ರೆಗೂ ಸಲೀಸಾಗಿ ಇಳಿಯುವ ಆ ಅಭಿನಯ ಕರುನಾಡ ಚಿತ್ರ ಪ್ರೇಮಿಗಳಿಗಾಗಿಯೇ ಹುಟ್ಟು ಬಂದಿದ್ದರು ಅನ್ನಿಸುತ್ತೆ.. ಅನ್ನಿಸೋದೇನು ಅದೇ ನಿಜ .. ಅಲ್ಲವೇ..
ಅಣ್ಣಾವ್ರೇ ಜನುಮದಿನದ ಶುಭಾಶಯಗಳು..
ಶ್ರೀ ಕಾಂತ್ ನಿಮ್ಮ ಬರಹದ ಅದ್ಭುತವನ್ನೂ ಸಹ ಯಾವ ಉಪಕರಣವೂ ಕೂಡ ಅಳೆಯಲಾರದು. ವಸ್ತುನಿಷ್ಟವಾಗಿ ರಸವತ್ತಾಗಿ ಹೇಳೋದು ಅಂದ್ರೆ ಇದೆ. ನಿಜಾ ಕವಿರತ್ನ ಕಾಳಿದಾಸದ ಆ ದೃಶ್ಯಾವಳಿ ನನ್ನ ಸ್ಮೃತಿ ಪಟಲದಲ್ಲಿ ಅಮರವಾಗಿದೆ.ಒಂದು ಪಾತ್ರಕ್ಕೆ ಜೀವ ತುಂಬಲು ಒಬ್ಬ ನಟನಿಗಿಂತ ಪರಿಪೂರ್ಣ ಕಲಾವಿದನಿಗೆ ಮಾತ್ರ ಸಾಧ್ಯ. ಕಲಾದೇವಿಗೆ ಶರಣಾಗಿದ್ದ ಕಲಾವಿದ ವರನಟ ರಾಜಕುಮಾರ್ ಪ್ರೇಕ್ಷಕರ ಹೃದಯ ಸಿಂಹಾಸನ ಅಲಂಕಾರ ಮಾಡಿದರು. ನಿಮ್ಮ ಬರಹಕ್ಕೆ ಪ್ರೀತಿಯ ಸಲಾಂ.
ReplyDeleteDhanyavaadagalu sir...nimma preetiya bennu tattuvike ee barahagalu eddu baruttave
Deleteಅಣ್ಣಾವ್ರು ನನ್ನ ಮಾತನ್ನೂ ಒಮ್ಮೆ ಕಣ್ಣಾಡಿಸಿ ನೋಡಿದರೆಂಬ ಭಾವನೆಯೇ ಧನ್ಯತೆ ತಂದಿತು :)
ReplyDeleteನಿಮ್ಮ ಮಾತು ಸರ್ವಕಾಲಕ್ಕೂ ನಿಜ... ಮಲ್ಟಿಪಲ್ ಪರಕಾಯಪ್ರವೇಶದ ಆ ಕ್ಷಣವಿದೆಯಲ್ಲ, ಅದನ್ನು ಪ್ರತಿಬಾರಿ ನೋಡಿದಾಗಲೂ ರೋಮಾಂಚನವಾಗದೇ ಬಿಡದು. ಅಣ್ಣಾವ್ರ ಬಗ್ಗೆ ಅದೊಂದು ರೀತಿ ಆಗಲೇ ಮನೆಮಾಡಿದ್ದ ’ಪೊಸೆಸ್ಸಿವ್ ನೆಸ್’ಅನ್ನು ಇದೊಂದು ಕ್ಷಣ ನೂರುಪಟ್ಟು ಹೆಚ್ಚಿಸಿದ್ದರಲ್ಲಿ ಅನುಮಾನವಿಲ್ಲ.
Dhanyavaadagalu guruagle
Deletesoooooooper write Sri !!!!
ReplyDeleteThank you Venki
Deleteಬಹಳ ಚೆನ್ನಾಗಿದೆ ಶ್ರೀಕಾಂತ.
ReplyDeleteಅಣ್ಣೋರ ಸಹಜಾಭಿನಯದಂತೆಯೇ ನಿನ್ನ ಸರಳವಾದ ಸಲೀಸಾದ ಮಾತು ಓದುಗರೊಳಗೆ ಸರಾಗವಾಗಿ ಇಳಿದುಬಿಡುತ್ತೆ. ಇಷ್ಟು ಸ್ವಚ್ಛ ಕನ್ನಡ ಬರೆಯೋ ನಿನ್ನ ಕನಸಿನಲ್ಲಿ ಅಣ್ಣೋರು ಬಂದು ನಿನ್ನ ಜೊತೆ ನಾಲ್ಕು ಕನ್ನಡವಾಡಿ ಸಂತೋಷಪಟ್ಟು ತಲೆ ನೇವರಿಸಿದ್ದರೊಳಗೆ ಆಶ್ಚರ್ಯವೇನು ಬಂತು ಶ್ರೀ...👌
Thank you guru
Deleteಶ್ರೀ ನಿಮ್ಮ ಲೇಖನ ನಿರೂಪಣೆ ಅದ್ಭುತ... ತುಂಬ ಸ್ವಾಭಾವಿಕವಾಗಿ ಮೂಡಿಬಂದಿದೆ...
ReplyDeleteThank you friend
Delete