Friday, December 19, 2014

ಕಥೆಗಳ ಸಂಗಮ ಹಾಗೆಯೇ ಭಾವ ಸಂಗಮ ಕೂಡ - ಕಥಾಸಂಗಮ (1976)

ಉತ್ಸಾಹದ ಚಿಲುಮೆಯಾಗಿದ್ದಾಗ ಕಣ್ಣಿಗೆ ಕಾಣುವ ಚಿಕ್ಕ ಚಿಕ್ಕ ರತ್ನಗಳು ಮುತ್ತುಗಳಾಗುತ್ತವೆ. ಈ ವಾಕ್ಯದ ಸತ್ಯದರ್ಶನ ನಮಗೆ ಮಾಡಿಸಿದ್ದು ಪುಟ್ಟಣ್ಣ ಅವರ ಕಥಾಸಂಗಮ ಚಿತ್ರ.  ಲೇಖಕರೆ ಹೇಳುವಂತೆ ನನ್ನ ಸಣ್ಣ ಕಥೆಯನ್ನು ಆರಿಸಿ ಚಿತ್ರ ಮಾಡಿದ್ದಾರೆ. ಅದನ್ನು ಬೆಳ್ಳಿತೆರೆಯ ಮೇಲೆ ಹೇಗೆ ತರುತ್ತಾರೆ ಎನ್ನುವ ಕುತೂಹಲ ನನಗೂ ಇದೆ ಎಂದು,

ಪುಟ್ಟಣ್ಣ ಅವರ ತಾಖತ್ ಇದ್ದದ್ದು ಮನಸ್ಸಿಗೆ ಹಿಡಿಸುವ ಕಥೆಗಳನ್ನು ಲೇಖನಗಳನ್ನು ಹುಡುಕುವುದು ಮತ್ತು ಅದು ಕಾಡಿದರೆ ಅದನ್ನು ಚಿತ್ರಕ್ಕೆ ಅಳವಡಿಸುವುದು.

ಇಂಥಹ ಒಂದು ಅಭೂತಪೂರ್ವ ಘಟನೆ ನಡೆದದ್ದು ೧೯೭೬ ಇಸವಿಯಲ್ಲಿ.  ಹೊರಜಗತ್ತಿಗೆ ಸಾಮಾನ್ಯ ಅನ್ನಿಸುವ ಚಿಕ್ಕ ಚಿಕ್ಕ ಕತೆಗಳನ್ನು ಹುಡುಕಿ ಆರಿಸಿ ಅದನ್ನು ಬೆಳ್ಳಿತೆರೆಯ ಮೇಲೆ ಉತ್ತು ಬಿತ್ತು ಬೆಳಗಿಸಿದ್ದು ಕಥಾಸಂಗಮ ಎನ್ನುವ ಒಂದು ಪುಷ್ಪಮಾಲಿಕೆಯಲ್ಲಿ.


ಸಾಮಾನ್ಯ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಪಾತ್ರಗಳು, ಕಲಾವಿದರು ಕಾಡುತ್ತಾರೆ. ಆದರೆ ಇಲ್ಲಿ ಕಾಡುವುದು ಕಲಾವಿದರಾದರೂ.. ಅದರ ಗಾಢತೆಯಿಂದ ಕಾಡುವುದು ಆ ಕಲಾವಿದರು ನಿರ್ವಹಿಸಿದ ಪಾತ್ರಗಳು ಮತ್ತು ಅದರ ಪೋಷಣೆ.

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರಕ್ಕೆ ಹಾಡುಗಳನ್ನು ಬರೆದದ್ದು ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯನಾರಸಿಂಹ.. ಸಂಗೀತ ಪ್ರಾಣ ಸ್ನೇಹಿತ ವಿಜಯಭಾಸ್ಕರ್. ಮೂರು ಹಾಡುಗಳಲ್ಲಿ  ಒಂದನ್ನು ಪಿ ಬಿ ಶ್ರೀನಿವಾಸ್ ಮತ್ತು ಉಳಿದ ಎರಡನ್ನು ಕಸ್ತೂರಿ ಶಂಕರ್ ತಮ್ಮ ಕೋಮಲ ಕಂಠದಲ್ಲಿ ಸೊಗಸಾಗಿ ಹಾಡಿದ್ದಾರೆ. ಕಪ್ಪು ಬಿಳುಪು ವರ್ಣದಲ್ಲಿ ಇಡಿ ಚಿತ್ರವನ್ನು ಸೆರೆಹಿಡಿದದ್ದು ಹರಿದಾಸ್.

ಮಾನವನ ವಿಭಿನ್ನ ಮುಖಗಳ, ಭಾವಗಳ, ಅಂತಃಕರಣ ಎಲ್ಲವನ್ನು ನವಿರಾದ ಬಟ್ಟೆಯ ಹಾಗೆ ತಮ್ಮ ಕಥೆಗಳಲ್ಲಿ ತುಂಬಿದ್ದನ್ನು ಅಷ್ಟೇ ಜೋಪಾನ ವಾಗಿ ಕಥೆಯ ಮತ್ತು ಲೇಖಕರ ಆಶಯಕ್ಕೆ ಭಂಗ ಬರದಂತೆ ಅಷ್ಟೇ ಸುಂದರಾದ ರಂಗವಲ್ಲಿ ಹಾಕಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ಪುಟ್ಟಣ್ಣ ಕಣಗಾಲ್.

ಆರಂಭದಲ್ಲಿ ಲೇಖಕರನ್ನು ತೆರೆಯ ಮೇಲೆ ಬರುವಂತೆ ಮಾಡಿ, ಅವರ ಕಿರುಪರಿಚಯ ಮಾಡಿಕೊಟ್ಟು, ಅವರನ್ನು ಮಾತಾಡಲು ತೆರೆಯನ್ನು ಬಿಟ್ಟುಕೊಟ್ಟು ತಾವು ಲೇಖಕರನ್ನು ಎಷ್ಟು ಆದರಿಸುತ್ತಿದ್ದರು ಎನ್ನುವುದನ್ನು ಸೂಕ್ಷವಾಗಿ ತೋರಿದ್ದಾರೆ. ಅದಕ್ಕಿಂತ ಕೊಂಚ ಮೊದಲು ಕನ್ನಡ ಸಾಹಿತ್ಯ ಭಂಡಾರವನ್ನು ಪರಿಚಯಿಸುತ್ತಾ ಅನೇಕಾನೇಕ ಲೇಖಕ/ಕಿಯರನ್ನು ಅವರ ಭಾವಚಿತ್ರಗಳ ಮೂಲಕ ತೋರುವುದು ಒಂದು ವಿಭಿನ್ನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಶ್ರೀ ಗಿರೆಡ್ಡಿ ಗೋವಿಂದರಾಜು ಅವರ "ಹಂಗು" ಎನ್ನುವ ಪುಟ್ಟ ಕಥೆಯನ್ನು ಪರಿಣಾಮಕಾರಿಯಾಗಿ ಮೂಡಿಸಲು ಪುಟ್ಟಣ್ಣ ಅವರಿಗೆ ಕೈ ಜೋಡಿಸಿರುವುದು ಜಿ ಕೆ ಗೋವಿಂದರಾವ್, ಲೋಕನಾಥ್.

ತನ್ನ ಸ್ವಾರ್ಥಕ್ಕೆ, ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಅವರನ್ನು ಬಳಸಿಕೊಳ್ಳಲು ಹೋರಾಡುವ/ಕಾಡಿಸುವ ಪಾತ್ರದಲ್ಲಿ ಲೋಕನಾಥ್ ಗಮನ ಸೆಳೆಯುತ್ತಾರೆ. ರಾಗವಾಗಿ ಮಾತಾಡುತ್ತ, ಧ್ವನಿಯನ್ನು ಕೇಳಿದರೆ ಸಿಟ್ಟು ಬರುವಂತೆ ಮೈ ಕೈ ಪರಚಿಕೊಳ್ಳುವಂತೆ ಮಾಡಬಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಲ್ಲಿ ಗೆಲ್ಲುವುದು ಅವರ ಪಾತ್ರವೇ ಆದರೂ ಆ ಪಾತ್ರದ ಸುತ್ತಲೂ ನಿಲ್ಲುವ ಇತರ ಪಾತ್ರಗಳು ಗಮನಾರ್ಹ ಕೊಡುಗೆ ನೀಡಿದ್ದಾವೆ.

ಒಣಗಿ ಹೋದ ಮರದ ಹಿನ್ನೆಲೆಯಲ್ಲಿ ನಿಂತ ಅಪ್ಪ, ಲೋಹದ ಬಲೆಯ ಹಿಂದೆ ನಿಂತ ತನ್ನ ತಂಗಿ, ಖಾಯಿಲೆ ಇಂದ ನರಳುತ್ತಿರುವ ಮಗು, ಔಷದಿ ತರಲು ಬೇಕಾಗುವ ಹಣಕ್ಕೆ ಪಕ್ಕದ ಮನೆಯಿಂದ ಸಾಲ ತರುವೆ ಎನ್ನುವ ಮಡದಿ, ಇಡಿ ಸನ್ನಿವೇಶಕ್ಕೆ ಯಜಮಾನರಾಗುವ ಗೋವಿಂದರಾವ್ ಗಮನ ಸೆಳೆಯುತ್ತಾರೆ. ತನ್ನ ಧ್ಯೇಯ ಒಂದು ಕಡೆ, ಸಂಸಾರದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ತಾನು ನಂಬಿರುವ ಸಿದ್ಧಾಂತಗಳನ್ನು ಗಾಳಿಗೆ ತೂರಿಬಿಡಬೇಕಾದ ಧ್ವಂಧ್ವ ಇವುಗಳನ್ನು ಗುರುತರವಾಗಿ ಪ್ರದರ್ಶನ ಮಾಡಿದ್ದಾರೆ ತಮ್ಮ ಅಭಿನಯದ ಮೂಲಕ.

ಇಷ್ಟವಾಗುವ ದೃಶ್ಯ.. ಸಾಹುಕಾರ ತನ್ನ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಮನೆಗೆ ನುಗ್ಗಿ ಅವರಿಗೆ ಬೇಕಾದ ಅನುಕೂಲತೆ ಮಾಡಿಕೊಟ್ಟು ಹೋದ ಮೇಲೆ.. ಸುಮ್ಮನೆ ಯೋಚನೆ ಮಾಡುತ್ತಾ ಕೂರುವ ಪ್ರೊಫೆಸರ್ ತಲೆಯ ಮೇಲೆ ನೆರಳಿನಲ್ಲಿ ಎರಡು ಕೈಗಳು ಇವರನ್ನು ಆವರಿಸಿಕೊಳ್ಳುತ್ತಾ ಬರುವಂತೆ ತೋರುವ ದೃಶ್ಯ.

ಕಡೆಯ ದೃಶ್ಯದಲ್ಲಿ ಉತ್ತರ ಪತ್ರಿಕೆ ಅವರನ್ನು ಓಡಿಸಿಕೊಂಡು ಬರುವುದು, ಮತ್ತು ಸಾಹುಕಾರ ಹಿಂದೆ ಓಡಿ ಬರುತ್ತಾ, ಗಹಗಹಿಸಿ ನಗುತ್ತಾ ನನ್ನ ಹಂಗೇಕೆ ನಿಮಗೆ ಒಂದು ನಾಲ್ಕು ಮಾರ್ಕ್ಸ್ ಹಾಕಿಬಿಡಿ ಎನ್ನುವುದು.. ಭ್ರಷ್ಟಾಚಾರದ ವಿರೋಧಿಯಾದರೂ ಪರಿಸ್ಥಿತಿ ಆ ನಂಬಿಕೆಯನ್ನು ಹೇಗೆ ಬದಲಾಯಿಸಲು ಕಾಡುತ್ತಾ ಬರುತ್ತದೆ ಎನ್ನುವುದೇ ಇದರ ಕಥಾವಸ್ತು.
*******************
ಹಂಗು ಮಾನವನನ್ನು ಮುಲಾಜಿಗೆ ಸಿಕ್ಕಿಸಿ.. ಪರಿಸ್ಥಿತಿಯನ್ನು ಬಲೆಯಂತೆ ಹೆಣೆದು ಸಿಕ್ಕಿಸುವ ಪ್ರಯತ್ನವಾದರೆ.. ಶ್ರೀಮತಿ ವೀಣಾ ಅವರ "ಅತಿಥಿ" ಪರಿಸ್ಥಿತಿ ಅನುಕೂಲವಾಗಿದ್ದರೂ ತಾ ಅಂದುಕೊಂಡ ವಿಚಿತ್ರ ಆದರ್ಶಗಳು ಹೇಗೆ ಬದುಕಿನ ಸುಖವನ್ನು ಹಿಂಡಿ ಹಿಪ್ಪೆ ಮಾಡಿ ಮನಸ್ಸನ್ನು ಮುದುಡಿ ಹಾಕುತ್ತದೆ ಎಂಬುದನ್ನು ಸಾಂಕೇತಿಕವಾಗಿ ಕಥೆಯ ಮೂಲಕ ಹೇಳುತ್ತದೆ.

ರೂಪ, ಯೌವನ ಮನಷ್ಯನ್ನು ಗರ್ವಿ ಅಥವಾ ತಾ ಅಂದುಕೊಂಡಿದ್ದು ಸರಿ ಎನ್ನುವ ಒಂದು ಪೊಳ್ಳು ಪೊರೆಯನ್ನು ಸೃಷ್ಟಿಸಿರುತ್ತದೆ. ಅದರಲ್ಲಿಯೂ ಆ ಪೊರೆ ಹೆಣ್ಣಲ್ಲಿ ಇದ್ದರೆ, ಅದು ಇನ್ನು ಕಾಡುತ್ತದೆ. ಯೌವನ ಕಾಲದಲ್ಲಿ ಗಂಡಸರು ಎಂದರೆ ಹಾಗೆ ಹೀಗೆ ಎನ್ನುವ ಒಂದು  ಮಿಥ್ಯ ವಲಯವನ್ನು ಸೃಷ್ಟಿಸಿಕೊಂಡು ಜೇಡ ತಾ ಕಟ್ಟಿದ ಬಲೆಯೊಳಗೆ ಕೆಲವೊಮ್ಮೆ ತಾನೇ ಸಿಕ್ಕಿಕೊಂಡು ಹೊರಬರಲಾರದೆ ತವಕಿಸುವ ಹುಳುವಂತೆ ಆಗಿ ಬಿಡುತ್ತದೆ.

ನೋಡುವ ನೋಟ ಸರಿಯಾಗಿ ಇರಬೇಕು ಎನ್ನುವುದು ನಿಜವಾದರೂ, ಎಲ್ಲಿ ನೋಡುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ, ಈ ಮಾತನ್ನು ಪುಷ್ಠಿಕರಿಸುವ ಸಂಭಾಷಣೆ ಇಲ್ಲಿ ಕಾಣುತ್ತದೆ.
"ಪಶ್ಚಿಮ ದಿಕ್ಕಿನತ್ತ ಬಾಗಿಲು ತೆರೆದಿಟ್ಟುಕೊಂಡು ನೋಡಿದರೆ ಬರಿ ಸೂರ್ಯ ಮುಳುಗೋದು ಮಾತ್ರ ಕಾಣುತ್ತದೆ. ಪೂರ್ವ ದಿಕ್ಕಿನತ್ತ ನೋಡ್ರಿ ಗಂಡಸು ಏನು ಎಂದು ಅರ್ಥವಾಗುತ್ತದೆ"

ನಿರ್ಧಾರ ತೆಗೆದುಕೊಳ್ಳುವಾಗ.. ಕೂತಲ್ಲಿಯೇ ಕೂರೋಲ್ಲ, ನಿಂತಲ್ಲಿಯೇ ನಿಲ್ಲೋಲ್ಲ.. ಆದರೆ ಜಾಗಬದಲಾಯಿಸಿದಾಕ್ಷಣ ನಿರ್ಧಾರವೂ ಬದಲಾಗಲೇ ಬೇಕಿಲ್ಲ ಎನ್ನುವುದು ಈ ಸಂಭಾಷಣೆಯಲ್ಲಿ ಇಣುಕುತ್ತದೆ.

"ಜಾಗ ಬದಲಾಯಿಸಿದಾಗ ನಿರ್ಧಾರವೂ ಬದಲಾಯಿಸುತ್ತೀರಿ ಎಂದುಕೊಂಡೆ.. ಆದರೆ ಮತ್ತೆ ಅದೇ ಜಾಗದಲ್ಲಿ ಹೋಗಿ ಕೂತ್ರಿ"
ಒಂದು ಮಾತಲ್ಲಿಯೇ ಮುಗಿಸಬಹುದಾದ ದೃಶ್ಯವನ್ನು ಕಥಾನಾಯಕಿ ನಾಲ್ಕು ಕಲ್ಲಿನ ಬೆಂಚುಗಳಲ್ಲಿ ಕೆಲ ಕ್ಷಣ ಕೂತು ಎದ್ದು ಬರುವುದು ಮತ್ತು ಕಡೆಯಲ್ಲಿ ತನ್ನ ಹಳೆ ನಿರ್ಧಾರವೇ ಸರಿ ಎಂಬ ತೀರ್ಮಾನಕ್ಕೆ ಬರುವುದು ಈ ದೃಶ್ಯದ ಸಾರಾಂಶ. ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.

ಪ್ರೀತಿ ಪ್ರೇಮ ಅನುರಾಗ ಇವೆಲ್ಲ ಬದುಕಿಗೆ ಉತ್ಸಾಹ ತುಂಬುವ ಚೇತನಗಳು ಎನ್ನುವುದನ್ನು "ಕಾಳಿದಾಸನ ಕಾವ್ಯಲಹರಿಗೆ" ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ಪರಿಣಾಮಕಾರಿಯಾಗಿ ಹೇಳಿದ್ದಾರೆ.
ಗಂಡಿನ ಹಂಗಿಲ್ಲದೆ ನಾ ಬದುಕಿ ತೋರಿಸುತ್ತೇನೆ ಎನ್ನುವ ನಾಯಕಿಯ ಮಾತಿಗೆ ನಾಯಕ ಹೇಳುವ ಮಾತುಗಳು ಇಷ್ಟವಾಗುತ್ತವೆ.

"ನೀವು.. ಇದನ್ನು ಸಾಧಿಸಬಹುದು.. ಗೆಲ್ಲಲೂ ಬಹುದು, ಆದರೆ ಗಂಡು ಹೆಣ್ಣಿನ ಮಧುರ ಪ್ರೇಮದಲ್ಲಿ ಸುಪ್ತವಾದ ಒಂದು ಅವ್ಯಕ್ತ ಆನಂದವನ್ನು ಕಳೆದುಕೊಳ್ಳುತ್ತೀರಿ" ಸೂಪರ್ ಸಂಭಾಷಣೆ.

ಕಡೆಯಲ್ಲಿ.. "ಈ ಜೀವನಕ್ಕೆ ನಾ ಅತಿಥಿಯಾಗಿ ಬಂದವಳೇ" ಎನ್ನುವ ಮಾತು ನಿರ್ಧಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಇಲ್ಲವೇ ತುಕ್ಕು ಹಿಡಿದ ಕಬ್ಬಿಣದಂತಾಗುತ್ತದೆ ಎನ್ನುವ ಸಂದೇಶ ಹೇಳುತ್ತದೆ.

ಈ ಭಾಗದ ಚಿತ್ರದಲ್ಲಿ ಸರೋಜಾದೇವಿ ಮತ್ತು ಕಲ್ಯಾಣ್ ಕುಮಾರ್ ಅವರ ಜುಗಳಬಂಧಿ ಇಷ್ಟವಾಗುತ್ತದೆ, ಸೇರಿಗೆ ಸವ್ವಾ ಸೇರು ಎನ್ನುವಂತೆ ಇರುವ ಸಂಭಾಷಣೆಗಳು ಮನಕ್ಕೆ ತಾಕುತ್ತದೆ.

                                                         *******************

ಕಣ್ಣಿದ್ದು ಪರಿಸ್ಥಿತಿಗೆ ಬಲಿಪಶುವಾಗಿ ಹಂಗಿಗೆ ಬೀಳುವ ಕತೆಯಾದರೆ.. ಹೃದಯವಿದ್ದೂ ಪರಿಸ್ಥಿಯನ್ನು ಸರಿಯಾಗಿ ನೋಡದೆ ಅತಿಥಿಯಾದೇ ಎನ್ನುವ ನೋವಲ್ಲಿ ನಿಲ್ಲುವ ನಾಯಕಿ ಇನ್ನೊಂದು ಕತೆಯಾಗುತ್ತಾರೆ. 

ಶ್ರೀ ಈಶ್ವರ ಚಂದ್ರ ಅವರ "ಮುನಿತಾಯಿ" ಕತೆಯಲ್ಲಿ ಜೀವನದ ಆನಂದವನ್ನು ಅನುಭವಿಸಲು ಕೆಲವರಿಗೆ ಕಣ್ಣು ಬೇಕು ಕೆಲವರಿಗೆ ಕಣ್ಣು ಬೇಡ.. ಆದರೆ  ಹೃದಯ ವೈಶಾಲ್ಯತೆ ಬೇಕು ಎಂಬ ಮಾತನ್ನು ಹೇಳುತ್ತದೆ..

ಹುಟ್ಟು ಕುರುಡಿಯಾಗಿದ್ದರೂ ಮನದ ಕಣ್ಣುಗಳಿಂದ ಲೋಕವನ್ನು ನೋಡುವ ಕಥಾನಾಯಕಿ.. ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಶಕ್ತಳಾಗಿರುತ್ತಾಳೆ. ಹೃದಯವೈಶಾಲ್ಯವುಳ್ಳ ನಾಯಕ ಅವಳಿಗೆ ಬಾಳು ಕೊಡುತ್ತಾನೆ.

ಕಣ್ಣಿದ್ದು ಕುರುಡರು ಅನ್ನುವ ಮಾತಿನಂತೆ.. ಲೋಕವನ್ನು ಕಣ್ಣಿಗೆ ಕಾಣುವಂತೆ ನೋಡುವ ಕಾಮಾಲೆ ಕಣ್ಣಿನ ಕೆಲ ಮಂದಿ ಹೇಗೆ ಮನದ ಕೊಳವನ್ನು ರಾಡಿ ಮಾಡುತ್ತಾರೆ ಎನ್ನುವುದೇ ಕಥಾ ವಸ್ತು.

"ಓ ದ್ಯಾವ್ರೆ ನಿನ್ನ ಅಂದ ಚಂದವೇನೋ" ಈ ಹಾಡು ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ.
೧. ಕಣ್ಣು ಕಾಣದ ಹೆಣ್ಣು ತಾ ಕಂಡಿದ್ದೇನೆ ಎನ್ನುವಂತೆ ವರ್ಣಿಸುವ ಹಾಡು ಒಮ್ಮೆ ಬಂದರೆ.. ಇನ್ನೊಮ್ಮೆ ಕಾಣದ ದೇವರನ್ನು ಕಂಡಿದ್ದೇನೆ ಎನ್ನುವಂತೆ ಅವನಿಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಇನ್ನೊಮ್ಮೆ ಬರುತ್ತದೆ
೨. ಕಸ್ತೂರಿ ಶಂಕರ್ ಅವರ ಮಧುರ ಧ್ವನಿ ಈ ಹಾಡನ್ನು ಇನ್ನಷ್ಟು ಮೇಲಕ್ಕೆ ಏರಿಸಿದೆ.

ನೋಡಬಾರದ ದೃಶ್ಯವನ್ನು ನೋಡುವಂತೆ ಮನಸ್ಸು ಪ್ರಚೋಧಿಸಿದಾಗ.. ಬೇಡ ಬೇಡ ಅನ್ನುತ್ತಲೇ ಕಣ್ಣಲ್ಲೇ ಭಾವನೆ ವ್ಯಕ್ತ ಪಡಿಸುವ ಉಮೇಶ್ ಈ ಚಿತ್ರದ ಮುಖ್ಯ ಪಾತ್ರ. ಬಹುಶಃ ನನಗೆ ಅನ್ನಿಸಿದಂತೆ ಒಂದು ಮಸಾಲೆ ದೃಶ್ಯವನ್ನು ಅಶ್ಲೀಲವಾಗಿ ಚಿತ್ರಿಸದೆ ಅದ್ಭುತವಾಗಿ ಕಣ್ಣಿನ ಭಾವದಲ್ಲಿಯೇ ಚಿತ್ರಿಸಿರುವುದು ಇದೆ ಮೊದಲು.. ಈ ದೃಶ್ಯ ಸಂಯೋಜನೆಗೆ ಪುಟ್ಟಣ್ಣ ಅವರಿಗೆ ಸಲಾಂ ಹೇಳಲೇ ಬೇಕು.
ಇದೆ ರೀತಿಯಲ್ಲಿ ರಜನಿಕಾಂತ್ ಕೂಡ ಹಾಗೆಯೇ ಅಭಿನಯಿಸಿದ್ದಾರೆ. ಮನಸ್ಸು ಒಮ್ಮೆ ಹಾಗೆ ಝಲ್ ಎನ್ನಿಸುತ್ತದೆ. ಅರೆ ಚಲನಚಿತ್ರಗಲ್ಲಿ ಅಶ್ಲೀಲ ಎನ್ನಿಸಬಹುದಾದ ದೃಶ್ಯಗಳನ್ನು ತನ್ನ ಕಸುಬುದಾರಿಕೆಯಿಂದ ಈ ಮಟ್ಟಕ್ಕೆ ಅದ್ಭುತವಾಗಿ ಚಿತ್ರಿಕರಿಸಬಹುದಾದರೆ ಅಶ್ಲೀಲತೆ ಎನ್ನುವುದೇ ಈ ಪ್ರಪಂಚದಲ್ಲಿ ದೃಶ್ಯ ಮಾಧ್ಯಮದಲ್ಲಿ ಇರಲಾರದು ಎನ್ನಿಸುತ್ತದೆ.

ಕಡೆಯಲ್ಲಿ ಕಥಾನಾಯಕ ಹೇಳುವ ಮಾತು "ಅಹಲ್ಯೆಯನ್ನು ತಪ್ಪು ದಾರಿಗೆ ಎಳೆದದ್ದು ದೇವೇಂದ್ರ ಅವನಿಗೆ ಶಾಪ ಕೊಟ್ಟರು ಗೌತಮರು ಅದು ಸರಿ... ಜೊತೆಯಲ್ಲಿ ತಪ್ಪೇ ಮಾಡಿರದ ಅಹಲ್ಯೆಗೂ ಶಾಪ ಕೊಟ್ಟರು.. ಆದರೆ ನಾ ಆ ತಪ್ಪು ಮಾಡೋಲ್ಲ. ನಿನಗೆ ಶಾಪ ಕೊಡೋಲ್ಲ.. ಬದಲಿಗೆ ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುತ್ತೇನೆ" ಅದ್ಭುತ ಮಾತುಗಳು.

ಈ ಭಾಗದ ಚಿತ್ರ ಇಷ್ಟವಾಗೋದು..

 • ಕುರುಡಿ ಅಂದರೆ ಹೀಗೆ ಇರುತ್ತಾರೆ.. ಮತ್ತೆ ನಟಿ ಆರತಿ ಕುರುಡಿಯೇ ಎನ್ನುವಷ್ಟು ನೈಜತೆಯಿಂದ ಮುನಿತಾಯಿ ಪಾತ್ರದಲ್ಲಿ ಅಭಿನಯಿಸಿರುವ ಆರತಿ. 
 • ಕುರುಡಿಯನ್ನು ಗೋಳು ಹುಯ್ದು ಕೊಂಡು ಅವಳ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುವ ತಿಮ್ಮರಾಯಿ ಪಾತ್ರದಲ್ಲಿ ಎಂ ಎಸ್ ಉಮೇಶ್. ಬಹುಶಃ ತಿಮ್ಮರಾಯಿ ಪಾತ್ರ ಅವರ ಚಿತ್ರ ಜೀವನದ ಅತ್ಯುತ್ತಮ ಪಾತ್ರದಲ್ಲಿ ಮೊದಲಿಗೆ ನಿಲ್ಲುತ್ತದೆ 
 • ರಜನಿಕಾಂತ್ ಮೊದಲಬಾರಿಗೆ ತೆರೆಗೆ ಬಂದ ಈ ಚಿತ್ರದಲ್ಲಿ ಅವರ ಚಿಕ್ಕ ಸ್ಟೈಲ್ ಇಷ್ಟವಾಗುತ್ತದೆ.  
 • ಗಂಗಾಧರ್, ಸಂಪತ್ ಅವರ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. 
ಕಣ್ಣಿದ್ದು ಹಂಗಿಗೆ ಸಿಕ್ಕಿ ಹಾಕಿಕೊಳ್ಳುವರು ಹಂಗು ಕಥಾವಸ್ತುವಲ್ಲಿ ಸಿಕ್ಕರೆ,  ಕಣ್ಣಿದ್ದು ಹೃದಯವಿಲ್ಲದೆ ಜೀವನದಲ್ಲಿ ನೋವು ಅನುಭವಿಸುವರು "ಅತಿಥಿ" ಭಾಗದಲ್ಲಿ ಕಾಡುತ್ತಾರೆ, ಕಣ್ಣಿಲ್ಲದೆ ಇದ್ದರೂ ಮಾಡದ ತಪ್ಪಿಗೆ ಹೃದಯ ಕಣ್ಣಿರುವವವರ ಕ್ಷಮೆ ಸಿಗುವ ಸುಂದರ ನೋಟವನ್ನು "ಮುನಿತಾಯಿ" ಪ್ರಸಂಗದಲ್ಲಿ ಕಾಣುತ್ತೇವೆ. 


ಇಡಿ ಚಿತ್ರ ನಿಂತಿರುವುದು ಸಂಭಾಷಣೆಯ ಮೇಲೆ.. ಅದರ ಕೀರ್ತಿ ಸಂಭಾಷಣಕಾರ ಯೋಗಾನರಸಿಂಹ ಮೂರ್ತಿ ಅವರಿಗೆ ಸಲ್ಲುತ್ತದೆ.

ಒಂದು ಕಥೆಯನ್ನು ಹಲವು ಬಗೆಯಲ್ಲಿ ಹೇಳುವುದು ನೋಡಿದ್ದೇವೆ.. ಆದರೆ ಇಲ್ಲಿ ವಿವಿಧ ಕಥೆಯನ್ನು ಸರಿಯಾಗಿ ಹೊಂದಿಸಿ, ಮತ್ತು ಅದನ್ನು ಅನುಕ್ರಮವಾಗಿ ಜೋಡಿಸಿ ಮುತ್ತಿನ ಸರ ಪೋಣಿಸಿರುವ ರೂವಾರಿ "ಪುಟ್ಟಣ್ಣ" ಅವರಿಗೆ ಮನದಲ್ಲಿ ವಂದಿಸುತ್ತದೆ ತ್ರಿವೇಣಿ ಕತೆಯ ಸಮಾಗಮ ಅದುವೇ ಕಥಾಸಂಗಮ!

2 comments:

 1. ಮೂರು ವಿಭಿನ್ನ ಕಥೆಗಳನ್ನು ತೆರೆಗೆ ಏರಿಸುವ ಮೂಲಕ ಒಂದು ಪ್ರಯೋಗಕ್ಕೆ ಪುಟ್ಟಣ್ಣ ವೇದಿಕೆ ಮಾಡಿಕೊಟ್ಟರು.
  ಭಾರತದ ಯಾವುದೇ ಚಿತ್ರರಂಗದಲ್ಲೂ ಮತ್ತೆ ಇಂತಹ ಪ್ರಯೋಗ ನಡೆದಿದೆಯೇ ಎಂಬುದು ನನಗೆ ಅರಿವಿಲ್ಲ.
  ದೂರದರ್ಶನದಲ್ಲಿ ಮಾತ್ರ ಕಥಾ ಸಂಗಮ ಅಂತಲೋ ಏನೋ ಬಂದಂತೆ ನೆನಪು!

  ReplyDelete
  Replies
  1. ಒಂದೇ ಕಥೆಯನ್ನು ಮೂರು ಹಂತದಲ್ಲಿ ಹೇಳುವ ಅನೇಕ ಚಿತ್ರಗಳು ಬಂದಿದ್ದರೂ... ಒಂದಕ್ಕೊಂದು ಸಂಬಂಧವಿಲ್ಲದ ಮೂರು ಕಥೆಗಳನ್ನು ಹಿಡಿತದಲ್ಲಿಟ್ಟುಕೊಂಡು ಅದನ್ನು ಎಲ್ಲರಿಗೂ ದಾಟಿಸುವ ಸಾಹಸ ಪುಟ್ಟಣ್ಣ ಅವರಿಂದ ಮಾತ್ರ ಸಾಧ್ಯವಾಗಿತ್ತು.
   ಸುಂದರ ಅನಿಸಿಕೆಗೆ ಧನ್ಯವಾದಗಳು ಬದರಿ ಸರ್

   Delete