Tuesday, December 2, 2014

ಮಂಗಳಕರವಾದ ಶುಭಮಂಗಳ (1975)

ನೂಲಿನ ಉಂಡೆಯನ್ನು ನಿಧಾನವಾಗಿ ಬಿಡಿಸುತ್ತಾ ಹೋದಹಾಗೆ. ನೂಲಿನ ಉದ್ದವೂ ವಿಸ್ತರಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ಸಣ್ಣ ಎಳೆಯನ್ನು ನಿಧಾನವಾಗಿ ಹರಡುತ್ತಾ ಹೋದ ಹಾಗೆ ಅದರ ಹರಿವು ಅರಿವಾಗುತ್ತಾ ಹೋಗುತ್ತದೆ,

ಪುಟ್ಟಣ್ಣ ಕಣಗಾಲ್ ಕೂಡ ಹಾಗೆ.. ಒಂದು ಸಣ್ಣ ಛಲವನ್ನು ಹೊತ್ತು ಚಿತ್ರರಂಗಕ್ಕೆ ಬಂದರು. ಚಲನ ಚಿತ್ರದ ಎಲ್ಲಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಫಲಿತಾಂಶ ಪ್ರತಿ ಚಿತ್ರದಲ್ಲಿಯೂ ಹೊಸ ವಿಷಯ, ಹೊಸ ಸಂದೇಶ, ಹೊಸ ಬಗೆಯ ತಾಣ, ಹೊಸ ಲಯ ಎಲ್ಲವೂ ಹೊಸದು

ಅವರ ಎಲ್ಲಾ ಚಿತ್ರಗಳನ್ನು ಸಾಲು ಸಾಲು ನಿಲ್ಲಿಸಿದರೆ ಒಂದಕ್ಕಿಂತ ಒಂದು ವಿಭಿನ್ನ., ಅದು ಅವರು ಕನ್ನಡಾಂಬೆಯ ಪೂಜೆಗೆ ಸಲ್ಲಿಸುವ ವಿವಿಧ ಪುಷ್ಪ ನಾಮಾವಳಿ,

ಇಂದು ಅವರ ಜನುಮದಿನ.. ಶುಭಾಪ್ರದವಾಗಿಯೇ ಇರುತ್ತದೆ ಎನ್ನುವುದಕ್ಕೆ ಅವರ ಶುಭಮಂಗಳ ಚಿತ್ರದ ಮೂಲಕ ಅವರ ಚರಣಕ್ಕೆ ಅರ್ಪಿಸುತ್ತಿರುವ ಈ ಮಾಲಿಕೆ ಸಾಕ್ಷಿ,

ಹುಟ್ಟು ಹಬ್ಬದ ಶುಭ ಕೋರುವ ಮೂಲಕ ಈ ಲೇಖನ ಮಾಲಿಕೆಯನ್ನು ಮುಂದುವರೆಸುತ್ತಿದ್ದೇನೆ... ಬನ್ನಿ ಕಡಲ ಕಿನಾರೆಯಲ್ಲಿ ಸ್ನೇಹದ ಕಡಲಲ್ಲಿ ಮೀಯೋಣ....


 ಶ್ರೀನಿಧಿ ಪ್ರೊಡಕ್ಷನ್ಸ್  ಲಾಂಛನದಲ್ಲಿ ತಯಾರಾದ ಈ ಚಿತ್ರ ತಯಾರಾದದ್ದು ಕರಾವಳಿಯ ಮಡಿಲಲ್ಲಿ. ಕರಾವಳಿಯ ಸುಂದರ ದೃಶ್ಯಗಳನ್ನು ಇಡಿ ಚಿತ್ರದಲ್ಲಿ ಕಾಡುವಂತೆ ಸೆರೆ ಹಿಡಿದಿರುವುದು ಛಾಯಾಗ್ರಾಹಕ ಎನ್ ಜಿ ರಾವ್.

ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರದ ಆರಂಭ ಸೊಗಸಾಗಿದೆ.  ಸ್ನೇಹದ ಉಗಮ ಯಾರಿಗೂ ಅರಿವಾಗುವುದಿಲ್ಲ. ಒಂದು ಸಣ್ಣ ನೋಟ, ಒಂದು ಸಣ್ಣ ನಗು, ಒಂದು ಸಣ್ಣ ಮುನಿಸು ಸ್ನೇಹಕ್ಕೆ ನಾಂದಿ ಹಾಡುತ್ತದೆ. ಹಾಗೆಯೇ ಚಿತ್ರದ ಆರಂಭ ಒಂದು ಸಣ್ಣ ಝರಿಯಿಂದ ಶುರುವಾಗಿ ಚಿತ್ರದ ಹೆಸರು ತಾರಾಗಣ ಎಲ್ಲವನ್ನು ತೋರಿಸುತ್ತಾ ಹೋಗುತ್ತಾರೆ. ಹಾಗೆ ಮುಂದುವರಿದಂತೆಯೇ ಝರಿ, ಸಣ್ಣ ತೊರೆಯಾಗುತ್ತದೆ, ನದಿಯಾಗುತ್ತದೆ, ಬೆಟ್ಟದಿಂದ ಧುಮುಕಿ ಜಲಪಾತವಾಗುತ್ತದೆ, ಕಣಿವೆಯಲ್ಲಿ ಹರಿಯುತ್ತದೆ, ಸಮುದ್ರ ಸೇರುತ್ತದೆ. ಸ್ನೇಹದ ಮಹತ್ವ ತೋರಿಸುವುದಕ್ಕಾಗಿ ಎಷ್ಟು ಸೊಗಸಾದ ವಿಧಾನ ಅನುಸರಿಸಿದ್ದಾರೆ ನಮ್ಮ ಪುಟ್ಟಣ್ಣ,

ಶ್ರೀಮತಿ ವಾಣಿಯವರ ಕಾದಂಬರಿಯ ಒಂದು ಎಳೆಯನ್ನು ಹಿಡಿದು ಈ ಚಿತ್ರವನ್ನು ಮಾಡಿದ್ದರೂ ಅದರ ಸಂಪೂರ್ಣ ಕಾಣಿಕೆ ಕಾದಂಬರಿಕಾರ್ತಿಗೆ ಅರ್ಪಿಸುವುದು ಅವರ ದೊಡ್ಡತನ ತೋರುತ್ತದೆ.

ಸಂಬಂಧಿಕರಾಗಿದ್ದರು ಸ್ನೇಹದ ಅಡಿಪಾಯದ ಮೇಲೆ ಅರಳುವ ನಾಯಕ ನಾಯಕಿಯ ಜೀವನ ಎಲ್ಲೋ ಹುಟ್ಟಿ, ಎಲ್ಲೋ ಹರಿದು, ಸ್ನೇಹದ ಸುಂದರ ಹಂತ ಮಿಲನದಲ್ಲಿ ನಿಲ್ಲುತ್ತದೆ. ಎಷ್ಟು ವಿವಿಧಬಗೆಯ ಯೋಚನೆ ಈ ಕಥಾ ಹಂದರದ್ದು.

ಒಂದು ಹೆಣ್ಣು ಮನಸ್ಸು ಹೇಗೆ ಭಾವನೆಗಳಿಗೆ ಅರಳುತ್ತದೆ, ರೋಷದ ಮಾತುಗಳಿಗೆ ಕೆರಳುತ್ತದೆ ಎನ್ನುವುದು ಚಿತ್ರದುದ್ದಕ್ಕೂ ನಾಯಕಿಯ ಎರಡು ಜಡೆಯಲ್ಲಿ ಬಿಂಭಿತವಾಗಿದೆ.

ಇಲ್ಲಿ ಪ್ರತಿಪಾತ್ರಗಳು ಅಭಿನಯಿಸಿಲ್ಲ ಬದಲಾಗಿ ನಟರೆ ಪಾತ್ರಗಳಾಗಿದ್ದಾರೆ,  ಪುಟ್ಟಣ್ಣ ಅವರು ಮತ್ತೆ ಕೆಲವೇ ನಟ ನಟಿಯರ ತಾರಾಗಣದಲ್ಲಿ ಈ ಚಿತ್ರವನ್ನು  ಚಿತ್ರಿಸಿದ್ದಾರೆ.

ಸಂಗೀತ ವಿಜಯಭಾಸ್ಕರ್ ಅವರ ಭದ್ರ ಕೋಟೆಯಲ್ಲಿ ನಿಂತರೆ, ಛಾಯಾಗ್ರಹಣ  ಎನ್ ಜಿ ರಾವ್ ಅವರ ಸಾರಥ್ಯಕ್ಕೆ ಸಿದ್ಧವಾಗಿರುತ್ತದೆ, ಸೊಗಸಾದ ಸಂಭಾಷಣೆಯ ಕತೃಗಳು ಹಾಸ್ಯ ಪಿತಾಮಹ ಬಿChi, ಜೊತೆಯಲ್ಲಿ ಯೋಗಾನರಸಿಂಹ ಮೂರ್ತಿ.

ತಂದೆಯ ಕೆಲವು  ರೋಷ ಸೇಡು ಹಠದ ಗುಣಗಳನ್ನು ಬಳುವಳಿಯಾಗಿ ಪಡೆದ ನಾಯಕಿ ತನ್ನ ಸ್ವಾಭಿಮಾನ, ಹಠ, ಛಲಕ್ಕೆ ಜೋತು ಬಿದ್ದು ಪಾತ್ರ ನಿರ್ವಹಿಸುತ್ತಾಳೆ. ಜೀವನದ ಕಡಲಿನಲ್ಲಿ ಸ್ನೇಹದ ತರಂಗಗಳು ಬಡಿದು ಬಡಿದು ಅವಳ ಸಿಟ್ಟು ರೋಷ ಹಠ ಇವನ್ನು ಕಮ್ಮಿ ಮಾಡುತ್ತಾ ಸ್ನೇಹದ ಸಂಕೋಲೆಗೆ ಶರಣಾಗುತ್ತಾಳೆ.

ಆರತಿ " ಹೇಮಾ"ಳನ್ನು ಆಲಂಗಿಸಿ ಮುದ್ದಾಡಿ ಅಪ್ಪಿಕೊಂಡು ಅವಳೊಳಗೆ ತೂರಿಕೊಂಡು ಬಿಟ್ಟಿದ್ದಾರೆ. ಇಡಿ ಚಿತ್ರದುದ್ದಕ್ಕೂ ಹೇಳುವ "ಪ್ರಭಾಕರ" ಶಬ್ದ ಅವರ ದನಿಯಲ್ಲೇ ಕೇಳಬೇಕು. ಪ್ರತಿ ದೃಶ್ಯದಲ್ಲೂ ಆವರಿಸಿಕೊಳ್ಳುತ್ತಾ ಹೋಗುವ ಅವರು.. ಅವರಿರಿರದೆ ಚಿತ್ರವಿಲ್ಲ ಎನ್ನುವಷ್ಟು ಕಾಡುತ್ತಾರೆ.

 • ಕಾರನ್ನು ಓದಿಸಿ ಪ್ರಭಾಕರನನ್ನು ಗೋಳು ಹುಯ್ದು ಕೊಳ್ಳುವ ದೃಶ್ಯ 
 • ಲೆಖ್ಖ ಲೆಖ್ಖ ಎನ್ನುತ್ತಾ ಪ್ರತಿ ಬಾರಿಯೂ ಗಲಾಟೆ ಮಾಡುವ ದೃಶ್ಯ 
 • ಇಷ್ಟು ದೊಡ್ಡ ಜಗತ್ತಲ್ಲಿ ನನಗೊಬ್ಬಳಿಗೆ ಜಾಗ ಇರೋಲ್ವೆ.. ಎನ್ನುವಾಗ ಹತಾಶೆ ಕಂಡರೂ ಸ್ವಲ್ಪ ಬಿಗುಮಾನ ಇರುವ ಮಾತುಗಳು 
 • ತಿಮ್ಮ, ಮೂಗ ನಮ್ಮ ಮನೆ ಆಳಲ್ಲ ನನ್ನ ಒಡಹುಟ್ಟಿದವರು ಎನ್ನುವ ಅವರ ಮಾತಿನ ಧಾಟಿ ಸೂಪರ್ 
 • ಕೆಲಸ ಸಿಕ್ಕಿ ಸಂಬಳ ತಂದು ಪ್ರಭಾಕರನನ್ನು ಛೇಡಿಸುವ ದೃಶ್ಯ "ಈ ಶತಮಾನದ ಮಾದರಿ ಹೆಣ್ಣು" ಹಾಡುತ್ತಾ ಪ್ರಭಾಕರನ ಬರುವಿಕೆಗೆ ಕಾಯುವ ಅಭಿನಯ 
 • ಪ್ರಭಾಕರನ ಸ್ನೇಹಕ್ಕೆ ಸೋತು ತನ್ನ ಕೊನೆಗೆ ಬಂದಾಗ ಅಪ್ಪನ ಭಾವ ಚಿತ್ರವನ್ನು ಮಡಚಿಟ್ಟು ಇಂಥಹ ಸ್ನೇಹಕ್ಕೆ ನಾ ಹೇಗಪ್ಪ ಸೋಲದಿರಲಿ ಎನ್ನುವಾಗ ಕಣ್ಣೀರಾಗುತ್ತೇವೆ
 • ಒಂದು ಸನ್ನಿವೇಶದಲ್ಲಿ ಪ್ರಭಾಕರ ಹೇಮಾಳ ಮೇಲೆ ಅನುಮಾನ ಪಟ್ಟು ಅವಮಾನಿಸಿದಾಗ. ಅಳುತ್ತಾ ಕೂತಾಗ .. ತಪ್ಪನ್ನು ಅರಿತ ಪ್ರಭಾಕರ ಕ್ಷಮೆ ಕೇಳುತ್ತಾ ಕಣ್ಣಲ್ಲಿ ನೀರು ತುಂಬಿ ಕೊಂಡಾಗ.. ಅಳುತ್ತ ಇದ್ದ ಹೇಮಾ, ತುಸು ಮುನಿಸಿನಲ್ಲಿ... ಸ್ವಲ್ಪವೇ ನಗುತ್ತಾ.. "ಅದ್ಯಾಕೋ ಪ್ರಭಾಕರ ಅಳ್ತೀಯ ಹೆಣ್ಣಿಗರಾಮ.. " ಈ ದೃಶ್ಯ ಸೂಪರ್. ಒಂದು ಕಡೆ ಅಳು, ಕೋಪ, ಸ್ನೇಹಿತನಿಗೆ ಬೇಸರವಾಯ್ತು ಎನ್ನುವ ಭಾವ ಎಲ್ಲವೂ ಮೇಳೈಸಿ ತೋರಿಸಿರುವ ಅವರ ಭಾವ ಸೂಪರ್ 
 •  ಪ್ರಭಾಕರನ ಮನೆ ತನ್ನ ಹೆಸರಿಗೆ ಇದೆ ಎಂದು ಗೊತ್ತಾದ ಮೇಲೆ.. ಪ್ರಭಾಕರ ಆ ಮನೆಯನ್ನು ಬಿಟ್ಟು ಹೋಗುತ್ತೇನೆ ಎಂದಾಗ.. ಇಲ್ಲೇ ಇರು ಎಂದು ಒತ್ತಾಯ ಮಾಡುತ್ತಾಳೆ... ಆಗ ಹೆಣ್ಣಾದ ನಿನಗೆ ಸ್ವಾಭಿಮಾನ ಇದೆ.. ಗಂಡಾದ ನನಗೆ ಸ್ವಾಭಿಮಾನ ಸತ್ತು ಹೋಗಿದೆಯ ಎಂದಾಗ ಕಪಾಳಕ್ಕೆ ಹೊಡೆಯುವ ಶಬ್ದ ಜೊತೆಯಲ್ಲಿ ಹೇಮಾಳ ಅಭಿನಯ. 
ಒಟ್ಟಿನಲ್ಲಿ ಇಡಿ ಚಿತ್ರವನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿರುವ ಪರಿ ಆರತಿ ಹೇಮಾಳ ಪಾತ್ರವನ್ನು ಅಭಿನಯಿಸೋಕೆ ಜನ್ಮ ತಾಳಿದ್ದಾರೆ ಅನ್ನುವಷ್ಟು ಇಷ್ಟವಾಗುತ್ತಾರೆ. 

ಶ್ರೀನಾಥ್ ಪ್ರಭಾಕರನ ಪಾತ್ರದಲ್ಲಿ ಇಳಿದು ಬಿಟ್ಟಿದ್ದಾರೆ.. ನಾಯಕನಾಗಿ ಮೊದಲ ದೊಡ್ಡ ಚಿತ್ರ ಇದು. ನಂತರ ಪುಟ್ಟಣ್ಣ ಅವರ ಸುಮಾರು ಚಿತ್ರಗಳಲ್ಲಿ ಮಿನುಗಿದ್ದಾರೆ. ಹೇಮಾಳ ಜೊತೆಯಲ್ಲಿನ ಜಗಳ, ತಮಾಷೆ, ಸ್ನೇಹ ಎಲ್ಲವು ಸೂಪರ್. ಅವರ ಜೀವನದ ಒಂದು ಭಾಗವೇ ಆಗಿ ಹೋದ "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಹಾಡು ಸುಂದರವಾಗಿದೆ. ಹೇಮಾಳ ಪ್ರತಿ ಸಂಭಾಷಣೆಗೂ ತಕ್ಕ ಪ್ರತಿಯುತ್ತರ ಕೊಡುತ್ತ ಹೋಗುವ ಅವರ ಪಾತ್ರದ ಹರಿವು ಇಷ್ಟವಾಗುತ್ತದೆ. ಸ್ನೇಹಕ್ಕೆ ಸ್ನೇಹದ ಮನಸ್ಸಿಗೆ ಮನಸೋಲುವ ಅಭಿನಯ ಸುಂದರವಾಗಿದೆ 


ತಿಮ್ಮನ ಪಾತ್ರದಲ್ಲಿ ನಟ ಶಿವರಾಂ ಕೆಲವೊಮ್ಮೆ ನಗಿಸುತ್ತಾರೆ, ಕೆಲವೊಮ್ಮೆ ಮನಸ್ಸಿಗೆ ತಾಕುತ್ತಾರೆ.. "ಹೇಮವ್ವ ಪ್ರಭಾಕರಪ್ಪ ನಿಮ್ಮನ್ನು ಬಚಾಯಿಸಿದರು.. ಎನ್ನುವಾಗ ಕಣ್ಣೀರು ತುಂಬಿಕೊಳ್ಳುತ್ತಾರೆ.. ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. "ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ" ಎನ್ನುವಾಗ ತಿಮ್ಮ ಅನುಭವಿ ರೀತಿಯಲ್ಲಿ ಮಾತಾಡುತ್ತ ಹೋಗುವ ಪಾತ್ರ ಇಷ್ಟವಾದರೆ, ಮನೆಯ ಫೌಂಟನ್ ನಲ್ಲಿ ಸ್ನಾನ ಮಾಡುವಾಗ, ಊಟ ಮಾಡಿದಮೇಲೆ ಹಣ್ಣಿನ ತಟ್ಟೆಯನ್ನು ಎತ್ತಿಕೊಂಡು ಹೋಗುವಾಗ ನಗೆ ಉಕ್ಕಿಸುತ್ತಾರೆ.

ಮೂಗನ ಪಾತ್ರದಲ್ಲಿ ಅಂಬರೀಶ್.. ಅಬ್ಬಾ ಎನ್ನಿಸುತ್ತಾರೆ ಇಡಿ ಚಿತ್ರದಲ್ಲಿ ತಿಮ್ಮನ ನೆರಳಾಗೆ ಇರುವ ಈ ಪಾತ್ರ.. ಹೇಮಾ ಕೆಲಸ ಮಾಡುವ ಅಂಗಡಿಯಲ್ಲಿ ಆ ಅಂಗಡಿಯ ಯಜಮಾನರ ಮಕ್ಕಳು ಅವಳನ್ನು ಪೀಡಿಸಿದರು ಎಂದು ತಿಳಿದಾಗ ರೋಷ ವೇಷದಲ್ಲಿ ಬಂದು ತಿಮ್ಮನ ಕಣ್ಣೀರನ್ನು ಒರೆಸಿ ಅಂಗಡಿಗೆ ನುಗ್ಗಿ ಬಡಿಯುವ ದೃಶ್ಯ ಇಷ್ಟವಾಗುತ್ತದೆ. ಈ ದೃಶ್ಯದಲ್ಲಿ ಹೇಮಾ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮೂಗನನ್ನು ಆರಿಸಿಕೊಳ್ಳುವುದು.. ಭಾವ ವ್ಯಕ್ತ ಪಡಿಸಿಕೊಳ್ಳೋಕೆ ಮಾತಲ್ಲ ಮುಖ್ಯ ಭಾವ ಮತ್ತು ಭಾವನೆ ಮುಖ್ಯ ಎಂದು ತೋರಿಸುತ್ತದೆ.  ಯಾಕೆ ಅಂದ್ರೆ ಈ ದೃಶ್ಯದಲ್ಲಿ ಮಾತು ಬರುವ ಎಲ್ಲರೂ ಹೇಮಾ ತಪ್ಪು ಮಾಡಿದ್ದಾಳೆ ಎಂದೇ ನಂಬಿರುತ್ತಾರೆ.. ಮೂಗ ಒಬ್ಬನೇ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದು. ಪುಟ್ಟಣ್ಣ ಇಂಥಹ ಸಂಕೀರ್ಣ ಪಾತ್ರ ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಅಂಬರೀಶ್ ಇಡಿ ಚಿತ್ರದಲ್ಲಿ ಇಷ್ಟವಾಗುತ್ತಾರೆ.

ಪುಟ್ಟಣ್ಣ ನವರ ನಾಗರಹಾವು ಚಿತ್ರದಲ್ಲಿ ಅಬ್ಬರಿಸಿದ್ದ ಚಾಮಯ್ಯ ಮೇಷ್ಟ್ರು ಈ ಚಿತ್ರದಲ್ಲಿ ಅಶ್ವತ್ ವೈದ್ಯರ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ನಗಿಸುತ್ತಾರೆ. ಪುಟ್ಟಣ್ಣ ಅವರ ಚಿತ್ರಗಳನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಎನ್ನುವ ಹಂತ ಅಶ್ವಥ್ ಅವರ ಚಿಕ್ಕ ಪಾತ್ರವನ್ನು ಒಪ್ಪಿಕೊಳ್ಳುವುದರ ಮೂಲಕ ತೋರಿಸುತ್ತಾರೆ .

ಆದ್ರೆ ರೀತಿಯಲ್ಲಿ ಸೀತಾರಾಂ ಚಿಕ್ಕ ಪಾತ್ರವಾದರೂ ಮುಂದೆ ಉಪಾಸನೆ ಚಿತ್ರದಲ್ಲಿ ಗಮನ ಸೆಳೆಯುವಂಥಹ ಅಭಿನಯ ನೀಡಿ ಮನಗೆಲ್ಲುತ್ತಾರೆ. ಹೀಗೆ ಕಲಾವಿದರಿಗೆ ಅವರ ಆಳವನ್ನು ತೋರಿಸುತ್ತಾ ಅವರ ಪ್ರತಿಭೆಯನ್ನು ಹೊರ ತೆಗೆಯುವ ಶಕ್ತಿ ಪುಟ್ಟಣ್ಣ ಅವರಿಗೆ ಕರಗತವಾಗಿತ್ತು.

ಈ ಚಿತ್ರದ ಹಾಡುಗಳು ಅಜರಾಮರ..

"ಈ ಶತಮಾನದ ಮಾದರಿ ಹೆಣ್ಣು" ವಾಣಿ ಜಯರಾಂ "ಹೆಣ್ಣು" ಎನ್ನುವ ಪದವನ್ನು ಉಲಿಯುವ ರೀತಿ ಸೂಪರ್. ವಿಜಯನಾರಸಿಂಹ ಅವರ ಸಾಹಿತ್ಯವನ್ನು ಎತ್ತರದ ಸ್ಥಾಯಿಯಲ್ಲಿ ಹಾದಿ ಮನ ಗೆದ್ದಿದ್ದಾರೆ ವಾಣಿ ಜಯರಾಂ.

"ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಸ್ನೇಹದ ಮಹತ್ವ, ಬಾಲ್ಯದ ಹುಡುಗಾಟ ಎಲ್ಲವನ್ನು ಕಲಸಿ ಬರೆದಿರುವ ಚಿ ಉದಯಶಂಕರ್ ಸ್ನೇಹಕ್ಕೆ ಒಂದು ಹಾಡು ಎಂದಾಗ ಈ ಹಾಡೇ ನೆನಪಿಗೆ ಬರುವುದು. ಎಸ್ ಪಿ ಬಾಲಸುಬ್ರಮಣ್ಯಂ ಅವರು ಜೀವ ತುಂಬಿ ಹಾಡಿದ್ದಾರೆ. ಶ್ರೀನಾಥ್ ಅವರ ಅನೇಕ ಗೀತೆಗಳನ್ನು ಹಾಡಿರುವ ಇವರಿಬ್ಬರ ಸ್ನೇಹಕ್ಕೆ ಮುನ್ನುಡಿ ಈ ಹಾಡಾಯಿತು.

ಕನಸ್ಸಲ್ಲಿ ಕಂಡು ಬರುವ "ಶುಭ ಮಂಗಳ ಸುಮೂಹೂರ್ತವೆ" ವಾಣಿ ಜಯರಾಂ ಮತ್ತು ಪಿ ಬಿ ಶ್ರೀನಿವಾಸ್ ಗಮನಸೆಳೆಯುತ್ತಾರೆ. ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯವನ್ನು ಅಷ್ಟೇ ಮುದ್ದಾಗಿ ಚಿತ್ರಿಸಿರುವ ಶೈಲಿ ಪಟಾಕಿ ಸಿಡಿಮದ್ದು ಇಲ್ಲದೆ ಬರಿ ಹೂಬಾಣಗಳ ಮಧ್ಯೆ ಸುಂದರವಾಗಿ ಮೂಡಿ ಬಂದಿದೆ.

ಮಲ್ಪೆಯ ಕಡಲ ತೀರದ "ಸೈಂಟ್ ಮೇರಿಸ್" ಸುಂದರ ದ್ವೀಪದಲ್ಲಿ ಚಿತ್ರಿಸಿರುವ ಹಾಡು "ನಾಕೊಂದ್ಲ ನಾಕು" ಎಂ ಎನ್ ವ್ಯಾಸರಾವ್ ಅವರ ತುಂಟ ಸಾಹಿತ್ಯ, ಜೊತೆಯಲ್ಲಿ ಪ್ರಕೃತಿಯ ವಿಹಂಗಮ ಬಣ್ಣನೆ ಇಷ್ಟವಾಗುತ್ತದೆ. ಎಸ್ ಪಿ ಬಾಲಸುಬ್ರಮಣ್ಯಂ ಮತ್ತೆ ತುಂಟ ತನದ ಈ ಹಾಡಿಗೆ ದನಿಯಾಗುತ್ತಾರೆ.

ಪುಟ್ಟಣ್ಣ ಅವರು ಪ್ರತಿಭೆಗಳನ್ನು ಹೇಗೆ ಹುಡುಕುತ್ತಿದ್ದರು ಎನ್ನುವುದಕ್ಕೆ ಉತ್ತಮ ಸಾಕ್ಷಿ "ಸೂರ್ಯಂಗೂ ಚಂದ್ರಂಗೂ" ಹಾಡು. ನಿರ್ದೇಶಕ ರವಿ ಅವರ ದಪ್ಪ ದನಿಯಲ್ಲಿ ಹಾಡಿಸಿರುವ ಈ ಹಾಡು ಇಷ್ಟವಾಗುವುದು ಅದರ ಸಾಹಿತ್ಯ, ಹಳ್ಳಿಯ ಶೈಲಿಯಲ್ಲಿಯೇ ಹಾಡಿರುವ ಬಗೆ, ಜೊತೆಯಲ್ಲಿ ಶಿವರಾಂ ಅವರ ಅಭಿನಯ. ಎಂ ಎನ್ ವ್ಯಾಸರಾವ್ ಅವರ ಅರ್ಥ ಗರ್ಭಿತ ಸಾಹಿತ್ಯ ಮನಗೆಲ್ಲುತ್ತದೆ.

ಇನ್ನೊಬ್ಬ ಸುಂದರ ನಟ ಆರ್ ನಾಗೇಂದ್ರ ರಾಯರ ಮಗ ಸುದರ್ಶನ್ ಅವರ ಸಿರಿ ಕಂಠ ದಲ್ಲಿ ಮೂಡಿರುವ ಗೀತೆ "ಹೂವೊಂದು ಬಳಿ ಬಂದು" ಹಾಡಿಗೆ ಒಂದು ಭಾವುಕ ಚೌಕಟ್ಟು ಒದಗಿಸುವಲ್ಲಿ ಈ ಹಾಡು ಗಾಯನ ತನ್ನ ಕಾಣಿಕೆ ಸಲ್ಲಿಸುತ್ತದೆ. ವಿಜಯನಾರಸಿಂಹ ಅವರ ಸುಂದರ ಪದಗಳ ಜಾದೂ ಶ್ರೀನಾಥ್ ಅವರ ಅಭಿನಯ ಈ ಹಾಡಿಗೆ ಮೆರುಗು ತಂದಿದೆ.

ಇಡಿ ಚಿತ್ರದಲ್ಲಿ ಸ್ನೇಹದ ಕಡಲಿನ ಮೇಲೆ ತೇಲಿಸುವಂತೆ ಅನುಭವ ಕೊಡುವ ಸಂಗೀತ ವಿಜಯಭಾಸ್ಕರ್ ಅವರದ್ದು. ಪ್ರತಿ ಹಾಡಿಗೂ ಪ್ರತಿ ಸನ್ನಿವೇಶಕ್ಕೂ ವಿಭಿನ್ನ ರೀತಿಯಲ್ಲಿ ಸಂಗೀತ ತುಂಬುತ್ತಾ ಜೀವ ತುಂಬುವ ಅವರ ಸಂಗೀತ ಈ ಚಿತ್ರದ ಉತ್ತಮ ಯಶಸ್ಸಿಗೆ ಕಾರಣವಾಗಿತ್ತು. ಅದ್ಭುತ ಗೆಳೆತನ ವಿಜಯಭಾಸ್ಕರ್, ಪುಟ್ಟಣ್ಣ ಮತ್ತು ವಿಜಯನಾರಸಿಂಹ ಅವರದ್ದು. ಈ ಗೆಳೆತನದ ಅಪಾರ ಶಕ್ತಿ ಈ ಚಿತ್ರದ ಯಶಸ್ಸಿಗೆ ದುಡಿದಿದೆ.

ಗುರುಗಳೇ ಇಂಥಹ ಸ್ನೇಹದ ಕಡಲಲ್ಲಿ ನಮ್ಮನ್ನು ತೇಲಿಸಿ ಸಾಗಿಸಿರುವ ಈ ಚಿತ್ರದ ನುಡಿ ನಮನದ ಜೊತೆಯಲ್ಲಿ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ನಿಮ್ಮ ಅಭಿಮಾನಿ ಬಳಗದ ಮೂಲಕ ಕೋರುತ್ತಿದ್ದೇವೆ.  ಶುಭಮಂಗಳಕರ ನೆನಪುಗಳೊಂದಿಗೆ ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.


6 comments:

 1. ಕನ್ನಡ ನಾಡಿನ ಅಮರ ನಿರ್ದೇಶಕ ನಮ್ಮ ಪುಟ್ಟಣ್ಣ ಕಣಗಾಲ್ ಅವರ ಹುಟ್ಟುಹಬ್ಬಕ್ಕೆ ಅದ್ಭುತ ಕೊಡುಗೆ ನಿಮ್ಮಿಂದ ಶ್ರೀಕಾಂತ್ . ಈ ಚಿತ್ರವನ್ನು ಅದೆಷ್ಟು ಸಾರಿ ನೋಡಿರುವೆನೋ ನನಗೆ ಗೊತ್ತಿಲ್ಲಾ , ಆದರೆ ಎಷ್ಟುಸಾರಿ ನೋಡಿದರೂ ಬೇಸರವಾಗದ ತಿಳಿ ಹಾಸ್ಯ ಬೆರೆತ ದೃಶ್ಯಕಾವ್ಯ ಈ ಚಿತ್ರ . ಬಹಳ ಚಿತ್ರಗಳಲ್ಲಿ ಚಿತ್ರ ಹಿಟ್ ಆದ್ರೂ ಎಲ್ಲಾ ಹಾಡುಗಳು ಹಿಟ್ ಆಗಿರೋಲ್ಲಾ , ಆದರೆ ಈ ಚಿತ್ರದಲ್ಲಿ ಎಲ್ಲಾ ಹಾಡುಗಳೂ ಹೀರೊ ಸ್ಥಾನವನ್ನೇ ಅಲಂಕರಿಸಿವೆ . ಚಿತ್ರದಲ್ಲಿನ ಎಲ್ಲಾ ಹಾಡುಗಳೂ ಸುಂದರ ದೃಶ್ಯಕಾವ್ಯದಲ್ಲಿ ಸಪ್ತಸ್ವರಗಳ ರಸಧಾರೆ ಹರಿಸಿವೆ, ಇನ್ನೂ ಕಲಾವಿದರ ಅಭಿನಯ ಅತೀ ಕಡಿಮೆ ಅವಧಿಯ ಪಾತ್ರ ಉಪಾಸನೆ ಸೀತಾರಾಂ ಹಾಗೂ ಮುಸರಿ ಕೃಷ್ಣಮೂರ್ತಿ ನಿರ್ವಹಣೆ ಮಾಡಿದ್ದರೂ ಪ್ರೇಕ್ಷಕರ ಮನದಲ್ಲಿ ನಿಲ್ಲುತ್ತವೆ . 2.45 ಅವಧಿಯಲ್ಲಿ ಎಲ್ಲೂ ಬೇಸರ ತರಿಸದ ಚಿತ್ರವಿದು. ಕರಾವಳಿ ಕರ್ನಾಟಕದ ಸೌಂದರ್ಯ , ಸೈಂಟ್ ಮೇರಿಸ್ ದ್ವೀಪದ ದರ್ಶನ, ಕಡಲ ಅಲೆಗಳ ಹೊಯ್ದಾಟ , ಸಮುದ್ರದಲ್ಲಿ ಚಲಿಸುವ ದೋಣಿ , ಕಡಲ ಕಿನಾರೆ ಇವುಗಳು ಈ ಚಿತ್ರದಲ್ಲಿ ಪಾತ್ರಗಳಾಗಿಬಿಟ್ಟಿವೆ . ಮತ್ತೊಂದು ವಿಶೇಷ ಈ ಚಿತ್ರದಲ್ಲಿ ಆರತಿ ತಮ್ಮ ಮುದ್ದುಮಾತುಗಳಿಂದ ಪ್ರೇಕ್ಷಕರ ಮನಗೆಲ್ಲುತ್ತಾರೆ. ಜೊತೆಗೆ , ಪುಟ್ಟಣ್ಣ ಕಣಗಾಲ್ ಅವರ ಮನದಂಗಳದ ನಾಯಕಿಯಾಗಿಯೂ ಗೆಲ್ಲುತ್ತಾರೆ. ಒಳ್ಳೆಯ ಚಿತ್ರ ದರ್ಶನ ಮಾಡಿಸಿದ್ದಕ್ಕೆ ಜೈ ಹೊ ಶ್ರೀ

  ReplyDelete
  Replies
  1. ಆರತಿಯವರ ಪ್ರಭಾಕರ ಎನ್ನುವ ಮಾತು ಇಂದಿಗೂ ಕಿವಿಯಲ್ಲಿ ಗುಯ್ ಅನ್ನುತ್ತದೆ.. ಸುಂದರ ಹೊರಾಂಗಣವನ್ನು ಬಹುವಾಗಿ ಇಷ್ಟಪಡುತ್ತಿದ್ದ ಪುಟ್ಟಣ್ಣ ಅವರು.. ಹುಡುಕುತ್ತಿದ್ದ ಪರಿ ಸೊಗಸಾಗಿತ್ತು., ಸೈಂಟ್ ಮೇರಿಸ್ ದ್ವೀಪ ಅದ್ಭುತ ತಾಣಗಳಲ್ಲಿ ಒಂದು. ಪ್ರತಿಯೊಂದು ದೃಶ್ಯವನ್ನು ತೂಗಿ ತೂಗಿ ಚಿತ್ರಿಕರಿಸುತ್ತಿದ್ದ ಪರಿ ಇಷ್ಟವಾಗುತ್ತದೆ

   ಸೀತಾರಾಮ್ ಅವರು ತನ್ನ ಮಗಳು ಶ್ರೀನಾಥ್ ಜೊತೆಯಲ್ಲಿದ್ದದ್ದನ್ನು ನೋಡಿ ಅಸಹನೆಯಿಂದ ಶ್ರೀನಾಥ ಅವರನ್ನು ಮೂದಲಿಸುತ್ತಾರೆ.. ಆಗ ಶ್ರೀನಾಥ್ ಅವರ ಕಾಲಡಿಯಿಂದ ಒಂದು ಮರಳಿನ ಗೋಡೆ ನೀರಿಗೆ ಕುಸಿಯುವ ದೃಶ್ಯ ತೋರುತ್ತಾರೆ. ಗೆಳೆತನದ ಸೇತುವೆಯ ಒಂದು ತುಂಡು ಬೀಳುತ್ತದೆ ಮಾತಿನ ಈಟಿಯಿಂದ ಎಂದು ಸಾಂಕೇತಿಕವಾಗಿ ತೋರುವ ದೃಶ್ಯ ಸೂಪರ್ ಕಲ್ಪನೆ.

   ತುಂಬು ಹೃದಯದ ಧನ್ಯವಾದಗಳು ಸುಂದರ ಅನಿಸಿಕೆ ಅಭಿಪ್ರಾಯಕ್ಕೆ ಸರ್ಜಿ

   Delete
 2. Another Excellent article of the series...Super sir.. thank you its an awesome movie

  ReplyDelete
  Replies
  1. ಪುಟ್ಟಣ್ಣ ಅವರು ಆಯ್ದುಕೊಳ್ಳುತ್ತಿದ್ದ ಕಥೆಗಳು, ಪಾತ್ರಗಳು ಯಾವಾಗಲು ವಿಶಿಷ್ಟ ವಾತವರಣದಲ್ಲಿ ಮೂಡಿ ಬರುತ್ತಿದ್ದವು, ಗೆಳೆತನದ ಮಹತ್ವವನ್ನು ಸಾರುವ ಜೊತೆಯಲ್ಲಿಯೇ ಸ್ವಾಭಿಮಾನದ ಬಗ್ಗೆ ಸಂದೇಶ ಸೂಪರ್ ಆಗಿದೆ. ಇಷ್ಟವಾಗುವ ಕಥೆಯನ್ನು ಅಷ್ಟೇ ಜೋಪಾನವಾಗಿ ಕಣ್ಣ ಮುಂದೆ ತಂದಿಡುವ ಶಕ್ತಿ ಅವರಿಗಿತ್ತು.

   ಮನಸ್ಸಿನ ಮೂಲೆಯಿಂದ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರದೀಪ್.

   Delete
 3. ಎನ್.ಜಿ. ರಾವ್ ಛಾಯಾಗ್ರಹಣವಿದ್ದ ಈ ಚಿತ್ರವು ಕ್ಷಣವೂ ನಿಲ್ಲದ, ಒಂದರ ಹಿಂದೊಂದು ಸನ್ನಿವೇಶಗಳನ್ನು ಹೆಣೆದುಕೊಳ್ಳುತ್ತಾ, ನಾಗಾಲೋಟ ಚಿತ್ರಕಥೆಯ ಪ್ರಯೋಗ.

  ReplyDelete
  Replies
  1. :ನಿಮ್ಮ ಮಾತು ನಿಜ ಬದರಿ ಸರ್.. ಒಂದು ದೃಶ್ಯ ನೋಡದೆ ಹೋದರೆ ಮುಂದಿನ ದೃಶ್ಯಕ್ಕೆ ಕೊಂಡಿ ಸಿಗುವುದಿಲ್ಲ ಅನ್ನಿಸುವಷ್ಟು ಹೊಂದಾಣಿಕೆ ಮಾಡಿಕೊಂಡು ನುಗ್ಗುತ್ತದೆ. ಹಾಡುಗಳು ಕೂಡ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. ಸುಂದರ ಕಥೆಗೆ , ಚಿತ್ರಕಥೆ ಬಲಿಷ್ಟವಾಗಿದ್ದಾಗ ಈ ತರಹದ ಚಿತ್ರರತ್ನಗಳು ಮೂಡಿ ಬರುತ್ತವೆ. ಹೌದು ಛಾಯಾಗ್ರಹಣ ಪುಟ್ಟಣ್ಣಅವರ ಎಲ್ಲಾ ಚಿತ್ರಗಳಲ್ಲಿಯೂ ಅದ್ಭುತವಾಗಿ ಇರುತ್ತವೆ. ರಾವ್ ಅವರ ಕೆಲಸ ಇಷ್ಟವಾಗುತ್ತದೆ

   ಧನ್ಯವಾದಗಳು ಬದರಿ ಸರ್

   Delete