Wednesday, April 1, 2026

ಕೈಗೆ ಸಿಗದೇ ಸತಾಯಿಸುತ್ತಿರುವ ವರ್ಣಮಯ ಮಿ. ರಾಜಕುಮಾರ್ 1970 (ಅಣ್ಣಾವ್ರ ಚಿತ್ರ ೧೨೦/೨೦೭)

ವರ್ಣಮಯವಾಗಿ ಕಂಡ ಶ್ರೀ ಕೃಷ್ಣದೇವರಾಯರು .. ಮುಂದಿನ ಚಿತ್ರಗಳಲ್ಲಿ ವರ್ಣವಾಗಬಹುದು ಅಂತ ನಿರೀಕ್ಷೆಯಿದ್ದಾಗ ಬಂದ ಚಿತ್ರ ಮಿ. ರಾಜಕುಮಾರ್.. 

ಬಹುಶಃ ನಟನ ಹೆಸರಲ್ಲಿ ಚಿತ್ರವಾಗಿದ್ದು ನನ್ನ ಜ್ಞಾನದಲ್ಲಿ ಇದೆ ಮೊದಲಿರಬಹುದು.. ಕನ್ನಡದಲ್ಲಿ. ಇತರ ಭಾಷಾ ಚಿತ್ರರಂಗದಲ್ಲಿ ಆಗಿರಬಹುದು.. 


ಇರಲಿ ಮತ್ತೆ ಈ ಚಿತ್ರದ ವಿಷಯಕ್ಕೆ ಬಂದರೆ.. ಯು ಟ್ಯೂಬ್ ಇಲ್ಲ ಮಾರಾಯ ಅಂತ .. ನನ್ನ ವಿಸಿಡಿ ಭಂಡಾರದಲ್ಲಿ ಈ ಚಿತ್ರ ಏಕೆ ಇಲ್ಲ  ಅಂತ ಖಡ್ಗ ಹಿರಿದು ನಿಂತಿತ್ತು... ಜಾಲತಾಣದಲ್ಲಿ ಜಾಲಾಡಿದರೂ ಅದು ಅರಣ್ಯ ರೋದನವಾಯಿತು .. .

ಏನು ಮಾಡಲಿ ನಾನು ಏನು ಹೇಳಲಿ ಅಂತ ಸುಮ್ಮನೆ ಕೂತು ವಾರಗಳೇ ಕಳೆದವು.. ಅರೆ ಏಪ್ರಿಲ್ ೧೨ ಬರುತ್ತಿದೆ.. ಅಷ್ಟರ ಹೊತ್ತಿಗೆ ಒಂದೂವರೆ ಶತಕ ಅಂತ ಇದ್ದ ಗುರಿ ಮಠ ಸೇರುವ ಪರಿಸ್ಥಿತಿ ಬಂದಿದೆ.. 

ಸರಿ.. ಊಟಕ್ಕೆ ಕರೆದವರು ಬರುವ ನಿರೀಕ್ಷೆಯಿದ್ದಾಗ ಅವರಿಗಾಗಿ ಒಂದು ಎಲೆ ಹಾಕಿ.. ಕಾಯುತ್ತಾ ಮಿಕ್ಕ ಪಂಕ್ತಿಯ ಊಟಕ್ಕೆ ಚಾಲನೆ ಕೊಡುವುದು ಸರಿ ಎನ್ನಿಸಿ.. ಈ ಚಿತ್ರದ ಬಗ್ಗೆ ಜಾಲತಾಣದಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನು ಹಂಚಿಕೊಂಡು ಮುಂದಿನ ಚಿತ್ರದ ಕಡೆಗೆ ಹೆಜ್ಜೆ ಹಾಕುತ್ತೇನೆ.. ನಿಮ್ಮೆಲ್ಲರ ಕ್ಷಮೆ ಕೋರಿ, ರಾಜಕುಮಾರ್ ಅವರ ಕ್ಷಮೆ ಕೋರಿ ಮುಂದುವರೆಯುತ್ತೇನೆ.. 

ಮತ್ತೆ ಶಪಥ ಕೂಡ ಮಾಡುತ್ತೀನಿ. ಈ ಚಿತ್ರದ ವಿಸಿಡಿಯನ್ನು ಹುಡುಕಿ.. ಚಿತ್ರ ನೋಡಿ.. ಇದರ ಮುಂದೆ ಬರೆಯುತ್ತೇನೆ.. ಓಕೇ ನಾ.. 

 ಇದು ರಾಜಕುಮಾರ್ ಅವರ ಎರಡನೇ ವರ್ಣ ಚಿತ್ರ... ಮೊದಲನೆಯದು ಐತಿಹಾಸಿಕವಾಗಿತ್ತು.. ಎರಡನೆಯದು ಸಾಮಾಜಿಕ.. ಹಾಗಾಗಿ ರಾಜಕುಮಾರ್ ಅವರ ಸಾಮಾಜಿಕ ಚಿತ್ರಗಳಲ್ಲಿ ಇದೆ ಮೊದಲನೇ ವರ್ಣ ಚಿತ್ರ.. 

ಪ್ರಸಿದ್ಧ ನಿರ್ಮಾಪಕ ನಿರ್ದೇಶಕ ಬಿ ಎಸ್ ರಂಗ ಅವರ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗಿದ್ದು ಈ ಚಿತ್ರ.. 

ಕಥೆ ಚಿತ್ರಕತೆ ಜಿ ಬಿ ಬಾಲಸುಬ್ರಮಣ್ಯಂ ಅವರದ್ದು 

ಸಂಭಾಷಣೆ ಮತ್ತು ಹಾಡುಗಳು ಚಿ ಉದಯಶಂಕರ್ 

ಸಂಗೀತ ಎಸ್ ರಾಜೇಶ್ವರರಾವ್

ಛಾಯಾಗ್ರಹಣ ಬಿ ಎನ್ ಹರಿದಾಸ್ ಅವರದ್ದು 

ರಾಜಕುಮಾರ್ ಅವರ ಜೊತೆ ರಾಜಶ್ರೀ ನಾಯಕಿ 

ಉಳಿದಂತೆ ನಾಗಪ್ಪ, ದ್ವಾರಕೀಶ್, ರಾಘವೇಂದ್ರರಾವ್, ರಮಾದೇವಿ, ಬೆಂಗಳೂರು ನಾಗೇಶ್ ಮುಂತಾದವರಿದ್ದಾರೆ. 

ಹಾಡುಗಳು ಜನಪ್ರಿಯವಾಗಿದೆ ಗಂಗಿ ನಿನ್ ಮ್ಯಾಲೆ ನಂಗೆ ಮನಸೈತೆ ಇಂದಿಗೂ ಜನಪ್ರಿಯ.. 

ಗಂಗಿ ನಿನ್ ಮ್ಯಾಲೆ ನಂಗೆ ಮನಸೈತೆ

                                                         ಬಳ್ಳಿಯೊಂದು ಬಳುಕುತಿದೆ 

ರೋಜಾ ಎನ್ನಿ ಗುಲಾಬಿ ಎನ್ನಿ 

ಬೇಗನೆ ಸಿನಿಮಾ ನೋಡುವಂತಾಗಲಿ ಎಂದು ಆಶಿಸೋಣ.. ! 

ರಾಂಗ್ ಆದ ಖಳನಿಗೆ ರಂಗನಾದ ಭೂಪತಿ ರಂಗ 1970 (ಅಣ್ಣಾವ್ರ ಚಿತ್ರ ೧೧೯/೨೦೭)

ರೈಲುಪಟ್ಟಿಯ ಹಾಗೆ ಸಮಾನಾಂತರವಾಗಿ ಸಾಗುವ ಕತೆಯುಳ್ಳ ಚಿತ್ರವಿದು.. ಅಪಾಯದ ಕೋಟೆಯಲ್ಲಿದ್ದುಕೊಂಡೇ ತಾನು ಸುರಕ್ಷಿತವಾಗಿದ್ದೀನಿ ಎಂಬ ಭ್ರಮೆ ಕಳಚಿದ ಮೇಲೆ ತಿರುವು ಸಿಗುವ ಚಿತ್ರವೇ ಇದು. 

ಸಮಾಜದಲ್ಲಿ ಒಂದು ಒಳ್ಳೆಯ ಹೆಸರಾದ ಮೇಲೆ ಅದನ್ನು ಕಾಪಿಡಿಕೊಳ್ಳುವುದು ಸಾಹಸ.. ಜೊತೆಯಲ್ಲಿ ಪರದೆಯ ಹಿಂದೆ ಮಾಡುವ ಕುಕೃತ್ಯಗಳು ಬೆಳಕಿಗೆ ಬರದಂತೆ ತಡೆಯುವುದು ಸಾಹಸ.. ಅದಕ್ಕಾಗಿ ಹಣ ಚೆಲ್ಲುವುದು, ಭದ್ರ ಕೋಟೆಯನ್ನು ಸೃಷ್ಟಿಸಿಕೊಳ್ಳುವುದು, ಅದನ್ನು ಜೋಪಾನ ಮಾಡಿಕೊಳ್ಳೋದಕ್ಕೆ ಒಬ್ಬನನ್ನು ನೇಮಿಸಿಕೊಳ್ಳುವುದು.. ಆತ ಅನ್ಯಾಯ ಕಂಡರೂ.. ಅದನ್ನು ಮಾಡುವುದರಲ್ಲಿ ಯಜಮಾನರಿಗೆ ಸಹಕರಿಸುತ್ತಿದ್ದರೂ ಕೂಡ ಪಾಪ ಪ್ರಜ್ಞೆಯಿಲ್ಲದೆ ಭಾಗಿಯಾಗುವುದು.. ಯಾವುದೋ ಸಂದರ್ಭದಲ್ಲಿ ಉದ್ಭವವಾಗುವ ನಾಯಕಿಂಗೆ ಜೊತೆಯಾಗಿ ಆ ದುಷ್ಟತನದ ಖಳನನ್ನು ಸದೆಬಡಿಯುವುದು.. ಇದು ತಿರುಳು.. 

ಈ ಕಥೆಯನ್ನು ಮೂಡಿಸಿರುವುದು ನಿರ್ಮಾಪಕ ತಂಡ ಭಾಸ್ಕರ್ ಮೂವೀಸ್. ಅದಕ್ಕೆ ಚಿತ್ರಕತೆ ರೂಪಿಸಿರುವುದು ವಲಂಪುರಿ  ಸೋಮನಾಥನ್.. 

ಸಮರ್ಥ ನಿರೂಪಣೆ ಮಾಡಿರುವುದು ನಿರ್ದೇಶಕ ಗೀತಪ್ರಿಯ. 

ನಿರ್ಮಾಣ ಎನ್ ಬಿ ವತ್ಸಲನ್ 

ನಾಗರೀಕ ಮಾನವ 
ಹಕ್ಕಿಯು ಹಾರುತಿದೆ 
ಒಹೋ ಮುದ್ದಿನ ಮಲ್ಲಿಗೆ 
ರಸಿಕ ರಸಿಕ 
ಗೂಡಲ್ಲಿ ತಾಯಿ ಹಕ್ಕಿ 
ಹಸುವಿನ ವೇಷದ ಹೆಬ್ಬುಲಿ ನೀನು 

ಮೆಲುಕು ಹಾಕುವ ಹಾಡುಗಳನ್ನು ಮತ್ತು ಅರ್ಥಗರ್ಭಿತ ಸಂಭಾಷಣೆಗಳನ್ನು ರಚಿಸಿರುವುದು ಗೀತಪ್ರಿಯ. .

ಅದಕ್ಕೆ ಇಂಪಾದ ಸಂಗೀತ ವಿಜಯಭಾಸ್ಕರ್ ಅವರದ್ದು. 
ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ ಮತ್ತು ಪಿ ಸುಶೀಲ ಗಾಯಕ ಗಾಯಕಿಯಾಗಿದ್ದಾರೆ. 
ಪ್ರಕಾಶ್ ಅವರ ಛಾಯಾಗ್ರಹಣವಿದೆ 

ಮುದ್ದಾಗಿ ಕಾಣುವ ಉದಯಚಂದ್ರಿಕಾ ನಾಯಕಿ.. ಅವರು ಚಿತ್ರದಲ್ಲಿ ಅತಿ ಸುಂದರವಾಗಿ ಕಾಣುತ್ತಾರೆ..ನಯನಗಳು, ಆ ಮಾತಿನ ಭಂಗಿ, ಹಾವ ಭಾವ. ಇಷ್ಟವಾಗುತ್ತಾರೆ.. 

ನರಸಿಂಹರಾಜು ಅವರದ್ದು ಸಂಕೀರ್ಣತೆಯ ಪಾತ್ರ.. ಹಾಸ್ಯವೂ ಅಲ್ಲದ.. ಖಳ ಛಾಯೆ ಇರುವ ಆದರೆ ಖಳನಲ್ಲದ.. ಅಂತಃಕರಣವುಳ್ಳ ಪಾತ್ರ 

ಖಳನ ದೌರ್ಜನ್ಯಕ್ಕೆ ಬಲಿಯಾಗುವ ಪಾತ್ರದಲ್ಲಿ ರೇಣುಕಾ ಚಿತ್ರದುದ್ದಕ್ಕೂ ಅಳುತ್ತಲೇ ಇರುತ್ತಾರೆ 

ಮರ್ಯಾದೆಗೆ ಅಂಜುವ ಪಾತ್ರದಲ್ಲಿ ಜಯಶ್ರೀ.. ಪ್ರಾಣಕ್ಕಿಂತ ಮಾನವೇ ಹೆಚ್ಚು ಎಂದು ತಂಗಿಗಾಗಿ ಮಾವಿನಹಣ್ಣನ್ನು ಕದ್ದ ಸ್ವಂತ ಮಗನನ್ನೇ ಮನೆಯಿಂದ ಹೊರಗೆ ಹಾಕುವ ಪಾತ್ರ.. ತನ್ನ ಮಗಳು ದುಷ್ಟನಿಗೆ ಬಲಿಯಾಗಿದ್ದಾಳೆ ಎಂದು ತಿಳಿದಾಗ ಸತ್ತು ಹೋಗು ಎಂದು ಶಪಿಸಿ.. ತಾನೇ ಹೃದಯಾಘಾತದಿಂದ ಸಾಯುವ ಪಾತ್ರದಲ್ಲಿ ಜಯಶ್ರೀ ಅದ್ಭುತ. 
 
ಹಳ್ಳಿಯವನಾಗಿ ಅಶ್ವಥ್ ನಾರಾಯಣ್.. ಇವರೇ ಕಥೆಗೆ ತಿರುವುದು ಕೊಡುವ ಮಾವಿನ ತೋಪಿನ ಮಾಲೀಕ.. ಅಣ್ಣ ತನ್ನ ಪ್ರೀತಿಯ ತಂಗಿಗೆ ಮಾವಿನ ಹಣ್ಣನ್ನು ಕಿತ್ತುಕೊಟ್ಟಿದ್ದನ್ನ ದೊಡ್ಡದು ಮಾಡಿ ಕಥೆಗೆ ತಿರುವುದು ನೀಡುತ್ತಾರೆ.. ಮತ್ತೆ ನಾಯಕ ಮರಳಿ ತನ್ನ ಮನೆಗೆ ಬಂದಾಗ ನೆಡೆದ ಘಟನೆ ಹೇಳಿ.. ತನ್ನಿಂದ ಈ ಪ್ರಮಾದವಾಯಿತು ಎಂದು ಹೇಳುತ್ತಾರೆ.. 

ನಗರದಲ್ಲಿ ಅಂತಃಕರಣವುಳ್ಳ ಪಾತ್ರದಲ್ಲಿ ಸಹಕಲಾವಿದರು.. 

ದಿನೇಶ್ ಗೋಮುಖ ವ್ಯಾಘ್ರನಾಗಿ ದೌರ್ಜನ್ಯ ಎಸುಗುವುದು... ದಾನ ಧಾರ್ಮ ಮಾಡುವುದು.. ಒಂದು ಕಡೆ ಮೃದು ಮಾತು.. ಇನ್ನೊಂದು ಕಡೆ ಕಟು ಮಾತು.. ಮಿಂಚುತ್ತಾರೆ. 

ರಾಜಕುಮಾರ್.. ಆಹಾ ಏನೂ ಹೇಳುವ ಹಾಗೆ ಇಲ್ಲ.. ಅದ್ಭುತ ಪಾತ್ರ ಪೋಷಣೆ ಮತ್ತು ಅಭಿನಯ.. ಕೆಲಸ ಬೇಕಾದ ತೀವ್ರತೆ.. ಅದಕ್ಕೆ ಒಪ್ಪುವಂಥಾ ಕೆಲಸವಲ್ಲದಿದ್ದರೂ ಬದುಕು ಸಾಗಿಸಲು ಕೆಲಸಕ್ಕೆ ಬರುವುದು.. ತನ್ನ ಯಜಮಾನರ ಒಳಗುಣದ ಬಗ್ಗೆ ಅರಿವಿಲ್ಲದೆ.. ತನ್ನ ತಂಗಿಯ ಬದುಕನ್ನು ಈತನೇ ಹಾಳುಮಾಡಿದ್ದು ಎಂದು ಅರಿವಾಗದೇ.. ಯಜಮಾನರೇ ದೇವರು ಎಂದು ಅವರನ್ನು ಕಾಪಾಡುವುದು.. ನಂತರ ನಿಜ ಅರಿವಾದಾಗ ಯಜಮಾನರಿಗೆ ಸರಿಯಾಗಿ ಬುದ್ದಿ ಕಲಿಸುವುದು.. ಇದರ ಜೊತೆಯಲ್ಲಿ ನಾಯಕಿಯ ಮನೆಯಲ್ಲಿ ಇದ್ದುಕೊಂಡು.. ನಾಯಕಿಯ ಪ್ರೀತಿಯನ್ನು ಸಂಪಾದಿಸಿದರು.. ತನ್ನ ಇತಿಮಿತಿಯಲ್ಲಿ ಇರುವಂತಹ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.  ತನ್ನ ತಂಗಿಯೆಂದು ತಿಳಿಯದೆ ಹೀನಾಮಾನವಾಗಿ ಬಯ್ದು ನಂತರ ತಂಗಿ ಎಂದು ತಿಳಿದ ಮೇಲೆ ಪೇಚಾಡುವ ದೃಶ್ಯದಲ್ಲಿ ಅದ್ಭುತ ಅವರು.. 

ಒಂದು ಸಾಮಾಜಿಕ ಚಿತ್ರದಲ್ಲಿ ಸಹಜವಾಗಿ ಅಭಿನಯಿಸುವ ಕಲೆ ಸಿದ್ಧಿಸಿರುವ ಅವರ ಮುಂದಿನ ಚಿತ್ರಗಳೆಲ್ಲ ಸಾಮಾನ್ಯವಾಗಿ  ಅದೇ ಹಾದಿಯಲ್ಲಿ ಸಾಗುತ್ತದೆ. ಸಿಗೋಣವೇ ಮುಂದಿನ ಚಿತ್ರಗಳಲ್ಲಿ.








ಮನೆಗೂ ಮನಕ್ಕೂ ಕಟ್ಟಿದ ತೋರಣವೇ ಹಸಿರು ತೋರಣ 1970 (ಅಣ್ಣಾವ್ರ ಚಿತ್ರ ೧೧೮/೨೦೭)

ರಾಜಕುಮಾರ್ ಅವರಿಗೆ ಅರಸಿ ಬರುತ್ತಿದ್ದ ಪಾತ್ರಗಳ ವೈಶಿಷ್ಠತೆಯಿಂದ ಕೂಡಿ ಬರುತ್ತಿತ್ತು.. ಸಣ್ಣದಾಗಿ ಝರಿಯಿಂದ ಹುಟ್ಟಿ ಸಾಗರ ಸೇರುವ ನದಿಯಂತೆ.. ಅವರ ಪಾತ್ರ ಚಿಕ್ಕದಾಗಿ ಶುರುವಾಗಿ ವಿಸ್ತಾರವಾಗುತ್ತಿತು. 

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾಗರ ಸೇರುವ ನದಿಯಂತೆ.. ಮೂರು ಮುಖ್ಯ ಪಾತ್ರಗಳು ರಾಜಕುಮಾರ್, ನರಸಿಂಹರಾಜು ಮತ್ತು ಭಾರತಿ.. ಆರಂಭದ ದೃಶ್ಯಗಳಲ್ಲಿ ಸೇರುವ ಪಾತ್ರಗಳು ಚಿತ್ರದುದ್ದಕ್ಕೂ ಅನೇಕ ತಿರುವುಗಳಲ್ಲಿಯೂ ಕೂಡ ವಿಚಲಿತರಾಗದೆ ಸಮಚಿತ್ತಗಳಿಂದ ಕೂಡುವ ಚಿತ್ರವಿದು. 


ಶ್ರೀಮತಿ ಸುನಂದಮ್ಮ ಅವರ ಕಥೆಯನ್ನು ಆಧರಿಸಿ ನಿರ್ದೇಶಕ ಟಿ ವಿ ಸಿಂಗ್ ಠಾಕೂರ್ ನಿರ್ದೇಶಿಸಿರುವು ಚಿತ್ರವಿದು. 
ಉಪೇಂದ್ರಕುಮಾರ್ ಅವರ ಹಿತವಾದ ಸಂಗೀತ, ಆರ್ ಏನ್ ಜಯಗೋಪಾಲ್ ಮತ್ತು ಜಿ ವಿ ಅಯ್ಯರ್ ಅವರ ಹಾಡುಗಳಿಗೆ ದನಿಯಾದವರು ಪಿ ಬಿ ಶ್ರೀನಿವಾಸ್, ಎಸ್ ಜಾನಕೀ ಮತ್ತು ಎಲ್ ಆರ್ ಈಶ್ವರಿ. 
ಛಾಯಾಗ್ರಹಣ ಶ್ರೀಕಾಂತ್ ಮತ್ತುರಾಜಾರಾಮ್ ಮತ್ತೆ ಕುಮಾರ್.  



ರಾಜಕುಮಾರ್ ಮತ್ತು ನರಸಿಂಹರಾಜು ಒಂದು ಮುರುಕಲು ಹಡಗಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹಗಲು ಹೊತ್ತಿನಲ್ಲಿ ಕೆಲಸ.. ರಾತ್ರಿ ಅಲ್ಲಿಯೇ ವಾಸ. .. ಒಂದು ದಿನ ಭಾರತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಸಮುದ್ರಕ್ಕೆ ಹಾರಿದಾಗ ಅದನ್ನು ಕಂಡ ರಾಜಕುಮಾರ್ ಅವರನ್ನು ಬದುಕಿಸಿ ದಡಕ್ಕೆ ತಂದು.. ಏತಕ್ಕೆ ಆತ್ಮಹತ್ಯೆ ಎಂದು ಕಾರಣ ಕೇಳಿದಾಗ ಇಷ್ಟವಿಲ್ಲದ ಮದುವೆ ಕಾರಣ ಎನ್ನುತ್ತಾರೆ.. ಮತ್ತೆ ನನ್ನನ್ನು ಎಲ್ಲಿಗೂ ಕಳಿಸಬೇಡಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಒತ್ತಾಯ ಮಾಡುತ್ತಾರೆ 



ಮೂವರು ಅದೇ ಮುರುಕಲು ಹಡಗಿನಲ್ಲಿ ವಾಸ ಮಾಡುವಾಗ.. ಆ ಹಡಗಿನ ಮಾಲೀಕ.. ಇಲ್ಲಿಗೆ ಕೆಲಸ ಮುಗಿಯಿತು.. ನಾಳೆಯಿಂದ ನಿಮ್ಮ ಹಾದಿ ನೋಡಿಕೊಳ್ಳಿ ಎಂದಾಗ ಇವರಿಗೆ ಸಮಸ್ಯೆ ಶುರು.. 

ಅತ್ತ ರಾಜಕುಮಾರ್ ಅವರ ಮನೆಯಲ್ಲಿ ತಾಯಿ ಮತ್ತು ತಮ್ಮನನ್ನು ಹಳ್ಳಿಯಲ್ಲಿ ಬಿಟ್ಟು ಬಂದಿರುತ್ತಾರೆ.. ಸಂಪಾದನೆ ಮಾಡಿ ಮನೆಗೆ ಕಲಿಸಬೇಕು ಎಂದು.. ಆದರೆ ಊಟಕ್ಕೆ ತತ್ವಾರ.. ಕೆಲಸವಿಲ್ಲ.. ಜೊತೆಯಲ್ಲಿ ಇನ್ನೊಬ್ಬರ ಹೊಣೆಗಾರಿಕೆ.. 

ಈ ಹಾದಿಯಲ್ಲಿ ಚಿತ್ರ ಮುಂದುವರೆಯುತ್ತದೆ.. 

ರಾಘವೇಂದ್ರರಾವ್ ಅವರು ಭಾರತಿ ಅವರ ತಂದೆಯ ಪಾತ್ರ.. ಆಕೆಯನ್ನು ಮದುವೆ ಮಾಡಿಕೊಂಡು ಮಾವನ ಆಸ್ತಿಯನ್ನು ಕಬಳಿಸಲು ಉದಯಕುಮಾರ್ ಸಂಚು.. ಅದನ್ನು ನಿಷ್ಪಲ ಮಾಡುವುದು ರಾಜಕುಮಾರ್ ಮತ್ತು ನರಸಿಂಹರಾಜು ಅವರ ಕಾಯಕವಾಗುತ್ತದೆ 

ಇದರ ಮಧ್ಯೆ ರಾಜಕುಮಾರ್ ಅವರ ತಮ್ಮ ಪುಟ್ಟ ಬಾಲಕ.. ಮತ್ತು ದೇವರಿಗೆ ಬರೆಯುವ ಪತ್ರ.. ಅದನ್ನು ನೆರವೇರಿಸಲು ರಾಘವೇಂದ್ರರಾವ್ ಅವರ ಪರಿಶ್ರಮ.. ಹೀಗೆ ಸಾಗುವ ಚಿತ್ರ. ಅಂತ್ಯದಲ್ಲಿ ಎಲ್ಲವೂ ಶುಭವಾಗುತ್ತದೆ.. 

ಪಂಡರಿಬಾಯಿ ಆ ಪುಟ್ಟ ಬಾಲಕನ ಮುಗ್ಧ ತಾಯಿಯ ಪಾತ್ರ.. 
ಕುಪ್ಪುರಾಜ್, ಎಚ್ ಆರ್ ಶಾಸ್ತ್ರೀ, ಜಯಶ್ರೀ, ಗಣಪತಿ ಭಟ್, ಶನಿಮಹಾದೇವಪ್ಪ, ಕಮೆಡಿಯನ್ ಗುಗ್ಗು, ಇಂದಿರಾ ಜಾರ್ಜ್ ಪಾತ್ರಗಳಿಗೆ ಜೀವ ತುಂಬುತ್ತಾರೆ.. 













ರಾಜಕುಮಾರ್ ಅವರ ಅಭಿನಯ ಈ ಚಿತ್ರದ ಶ್ರೀ ರಕ್ಷೆ.. ಅದರಲ್ಲೂ ಅಂತಿಮ ದೃಶ್ಯದಲ್ಲಿ ತನ್ನ ತಮ್ಮನ ಮುಂದೆ ಕೈಜೋಡಿಸಿಕೊಂಡು ಕ್ಷಮೆ ಕೇಳುವ ಪಾತ್ರದಲ್ಲಿ ಕಣ್ಣೇರು ತರಿಸುತ್ತಾರೆ.  ಚಿತ್ರದುದ್ದಕ್ಕೂ ಸಮಯೋಚಿತ ಅಭಿನಯ ನೀಡುವ ಅವರ ಪಾತ್ರಾಭಿನಯ ಖುಷಿ ನೀಡುತ್ತದೆ. ಶ್ರೀರಾಮನಾಗಿ ನಾಟಕದಲ್ಲಿನ ಅಭಿನಯ.. ಸೂಪರ್ 

ಭಾರತಿ ಮುಗ್ಧೆಯಾಗಿ ಅಭಿನಯ ಇಷ್ಟವಾಗುತ್ತದೆ.. ಹಿತವಾದ ಮಾತು, ಕಂಗಳು ಮಾತಾಡುವುದು.. ನಾಯಕನ ಮೇಲೆ ಗೌರವ, ಪ್ರೀತಿ , ಮಮತೆ ಎಲ್ಲವೂ ಮಿಳಿತವಾದ ಸಂಭಾಷಣೆಗಳು ಖುಷಿ ಕೊಡುತ್ತದೆ. 
ಸೀತೆಯಾಗಿ ನಾಟಕದಲ್ಲಿನ ಅಭಿನಯ ಕಳೆಕಟ್ಟುತ್ತದೆ.. 

ನರಸಿಂಹರಾಜು ಹಾಸ್ಯದಲ್ಲೂ ಮತ್ತು ನಾಯಕನಿಗೆ ಪ್ರತಿ ಸನ್ನಿವೇಶದಲ್ಲೂ ಸಹಾಯ ಮಾಡುವ ಪಾತ್ರ. 

ಖಳನಾಗಿ ಉದಯ್ ಅಬ್ಬರಿಸುತ್ತಾರೆ. 

ರಾಘವೇಂದ್ರರಾವ್ ಅಪ್ಪನ ಪಾತ್ರದಲ್ಲಿನ ತೊಳಲಾಟ ಸೊಗಸಾಗಿದೆ.. ಹಾಗೆ ತಂಗಿಯಾಗಿ ಜಯಶ್ರೀ ಪಾತ್ರವೂ ಕೂಡ. 

ಹಾಡುಗಳು ಖುಷಿ ಕೊಡುತ್ತದೆ 
ಒಂದು ದಿನ ಎಲ್ಲಿಂದಲೋ ನೀ ಬಂದೆ
ನೋಡು ನೋಡು ಮೆಲ್ಲಗೆ 
ಒಂದೇ ತಾಯಿ ಮಕ್ಕಳು 
ಈ ಮೀನಂತ ಹೆಣ್ಣು 
ಸೀತೆ ಹೃದಯದ ಹೆಣ್ಣು 
ನೀ ಯಾರೋ ಏನೋ ಸಖ 

ಇನ್ನೊಂದು ವಿಶೇಷ ಎಂದರೆ.. ಪ್ರಣಯದ ಚಿತ್ರಗೀತೆಗಳಲ್ಲಿ ನಾಯಕ ನಾಯಕಿಯನ್ನು ಎತ್ತಿ ಕೊಳ್ಳುವುದು ಸಾಮಾನ್ಯ.. ಆದರೆ ಇಲ್ಲಿ ನಾಯಕಿ ನಾಯಕನನ್ನು ಎತ್ತಿ ಕೊಳ್ಳುವುದು.. 
ಹೌದು ಚಿತ್ರದ ತುಣುಕು ಇದೆ ನೋಡಿ.. 

ಒಂದು ಸುಂದರ ಚಿತ್ರವನ್ನು ನೋಡಿದ ಖುಷಿ ನನ್ನದು.. ಹಾಗೆ ರಾಜಕುಮಾರ್ ಎಂಬ ನಟನ ಉಲ್ಕೆ ಕರುನಾಡಿನ ಬೆಳ್ಳಿ ಬರದೆಯಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿನಿರಸಿಕರನ್ನು ರಂಜಿಸಿ ಮುಂದುವರೆಯುತ್ತಿರುವುದು..