ಎಲ್ಲವೂ ಪೂರ್ಣತೆಗೆ ಅವಕಾಶ ಸಿಗೋಲ್ಲ.. ಇಲ್ಲ ಕೆಲವೊಮ್ಮೆ ಸಾಧ್ಯವಾಗೋಲ್ಲ.. ಪೂರ್ಣ ಚಂದ್ರ ಬರೋದು ಮೂವತ್ತು ದಿನಗಳಿಗೊಮ್ಮೆ ಮಾತ್ರ..
ಏಕೆ ಹೀಗೆ ಹೇಳ್ತೀನಿ ಅಂದ್ರಾ..
ಮೇಯರ್ ಮುತ್ತಣ್ಣ ಸಿನೆಮಾ ನೋಡಿದಾಗ ಈ ಮಾತುಗಳು ಹಾಗೆಯೇ ಮನಸ್ಸಿಗೆ ಬಂದವು..
ರಾಜಕುಮಾರ್ ಕರುನಾಡಿನ ಸಾಂಸ್ಕೃತಿಕ ರಾಯಭಾರಿ ಎನ್ನುವಂತೆ ಎಲ್ಲರಿಗೂ ಗೊತ್ತಾಗಿದ್ದು ಬಹುಶಃ ಈ ಸಿನಿಮಾದಿಂದ ಅನಿಸುತ್ತದೆ.
ಕಾರಣ ಹಳ್ಳಿಯ ಮುಗ್ಧ ಪಟ್ಟಣದ ತಳುಕು ಬಳುಕು ಜಾಲ ಹೆಣೆಯುವ ಜನ ಇವರ ಮಧ್ಯೆ ಸಿಕ್ಕಿಕೊಂಡರೂ ತನ್ನ ತನವನ್ನು ಮರೆಯದೆ.. ಎಲ್ಲರಿಗೂ ಮಾದರಿಯಾಗಿ ನಿಲ್ಲುವ ಕಥಾವಸ್ತುವುಳ್ಳ ಈ ಚಿತ್ರದಲ್ಲಿ ಎಲ್ಲವೂ ಇದೆ.
ಹಳ್ಳಿಯ ಮುಗ್ಧತೆ.. ತನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಜಯಶ್ರೀ ಕುಟುಂಬಕ್ಕೆ ಒದಗಿದ ಆಘಾತ... ಅದನ್ನು ಸರಿಪಡಿಸಲು ದೇವರ ಮೇಲೆ ಕೂಡ ಪ್ರಮಾಣ ಮಾಡುತ್ತೇನೆ ಎಂದು ಹೇಳುವ ದೃಶ್ಯ..
ಪಟ್ಟಣದಲ್ಲಿ ದುಶ್ಚಟಗಳಿಗೆ ಸಾಲ ಮಾಡಿ ಅದನ್ನು ತೀರಿಸಲಾಗದೆ, ತೊಳಲಾಡುವ ಊರಿನ ಪ್ರಮುಖನ ಮಗನನ್ನು ಕಾಪಾಡಲು ಕಳ್ಳತನದ ಆಪಾದನೆಯನ್ನು ತನ್ನ ಮೇಲೆ ಹಾಕಿಕೊಂಡು ಊರಿಂದ ಬಹಿಷ್ಕಾರಗೊಂಡು ಹಳ್ಳಿಯನ್ನು ಬಿಟ್ಟು ಓಡುವ ದೃಶ್ಯ..
ಹೊಟ್ಟೆ ಹಸಿದು ಊಟ ತಯಾರಾಗಿದೆ ಎನ್ನುವ ಬೋರ್ಡ್ ನೋಡಿ ಕಂಠ ಪೂರ್ತಿ ತಿಂದು ದುಡ್ಡಿಲ್ಲದೆ ಪರದಾಡುವ ದೃಶ್ಯ
ಪಟ್ಟಣಕ್ಕೆ ಬಂದು, ಬದುಕಿಗಾಗಿ ಸ್ನೇಹಿತನ ಗುಡಿಸಲಿಗೆ ಹೋದಾಗ, ಅಲ್ಲಿ ಬರುವ ಮಾರ್ವಾಡಿಯ ಸಾಲವನ್ನು ಮುಗ್ಧತೆಯಿಂದ ತೀರಿಸಿ, ಆ ಕೊಳೆಗೇರಿಯಲ್ಲಿ ಜೀವನ ಶುರು ಮಾಡುವ ದೃಶ್ಯ
ಪಟ್ಟಣದ ಹುಡುಗಿಗೆ ಚಿತ್ರಕಲೆಯಲ್ಲಿ ನಮ್ಮ ದೇಶದ ಬಡತನವನ್ನಲ್ಲ ಸಿರಿತನವನ್ನು ತೋರಿಸಬೇಕು ಎಂದು ತಿಳಿ ಹೇಳುವ ದೃಶ್ಯ
ತನ್ನ ಊರಿನ ಹೆಣ್ಣು ಮಗಳು ದಾರಿಯಲ್ಲಿ ಸಿಕ್ಕಾಗ, ಮನೆಗೆ ಕರೆದು ತಂದು ಕ್ಷೇಮ ಸಮಾಚಾರ ನೋಡಿಕೊಳ್ಳುವ ದೃಶ್ಯ
ತಾನು ವಾಸಮಾಡುವ ಪ್ರದೇಶ ಕೊಂಪೆಯಾಗಿದ್ದು ಕಂಡು, ಅದನ್ನು ಶುಚಿಗೊಳಿಸಲು ಮಂದಿಯನ್ನು ಒಟ್ಟುಗೂಡಿಸಿ, ಅಲ್ಲಿನ ನಾಯಕರಿಗೆ ಈ ಜಾಗವನ್ನು ಸರಿಯಾಗಿ ನೋಡಿಕೊಳ್ಳಲು ಪ್ರಯತ್ನ ಮಾಡಿ ಎಂದು ಕೇಳಿಕೊಳ್ಳುವ ದೃಶ್ಯ
ತನ್ನ ಸುತ್ತಮುತ್ತಲು ವಾಸಿಸುವ ಜನರ ಒತ್ತಾಸೆಯಂತೆ ಮೇಯರ್ ಚುನಾವಣೆಗೆ ನಿಂತು ಗೆಲ್ಲುವ ದೃಶ್ಯ..
ಕಡೆಯಲ್ಲಿ ತಾನು ಬಹಿಷ್ಕರಿಸಿಕೊಂಡ ಹಳ್ಳಿಯ ಜನರಿಂದಲೇ ಆನೆಯ ಮೇಲೆ ಮೆರವಣಿಗೆ ಮಾಡಿಸಿಕೊಳ್ಳುವ ದೃಶ್ಯ..
ಹೀಗೆ ಒಂದು ವ್ಯಾಪಾರೀ ಚಿತ್ರಕ್ಕೆ ಬೇಕಾದ ಎಲ್ಲಾ ಸರಕುಗಳನ್ನು ಅಚ್ಚುಕಟ್ಟಾಗಿ ಬಾಸುಮಣಿಯವರ ಮೂಲಕತೆಯನ್ನು ಅಚ್ಚುಕಟ್ಟಾದ ಚಿತ್ರಕಥೆಯ ಮೂಲಕ ಒಂದು ಸಹ್ಯ ಚಿತ್ರವನ್ನಾಗಿಸಿ ರಾಜಕುಮಾರ್ ಅವರನ್ನು ಮೆರೆಸಿದ ಚಿತ್ರದ ನಿರ್ದೇಶಕ ಸಿದ್ದಲಿಂಗಯ್ಯ ಅವರದ್ದು ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ ಅನಿಸೋದೇ ಇಲ್ಲ.
ದ್ವಾರಕೀಶ್ ಚಿತ್ರ ಲಾಂಛನದಡಿ ಶ್ರೀಮತಿ ಅಂಬುಜಾ ದ್ವಾರಕೀಶ್ ನಿರ್ಮಿಸಿದ ಚಿತ್ರವಿದು.
ಸಾಹಿತ್ಯ ಮತ್ತು ಸಂಭಾಷಣೆ ಚಿ ಉದಯಶಂಕರ್ ಮನಮುಟ್ಟುವಂತೆ ರಚಿಸಿದ್ದಾರೆ
ಇಂಪಾದ ಸರಳ ಸಂಗೀತ ರಾಜನ್ ನಾಗೇಂದ್ರ ಅವರದ್ದು, ಗಾಯನದಲ್ಲಿ ಪಿ ಬಿ ಶ್ರೀನಿವಾಸ್, ಎಲ್ ಆರ್ ಈಶ್ವರಿ, ಪಿ ಸುಶೀಲ
ಪಿ ಎಸ್ ಪ್ರಕಾಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ
ನಾಯಕ ಬೇಕೇ ಅದಕ್ಕೆ ರಾಜಕುಮಾರ್ ಇದ್ದಾರೆ. ಹಳ್ಳಿಯ ಹೈದನಾಗಿ ಅದೇ ಭಾಷೆ ಮಾತಾಡುತ್ತ ಮುಗ್ಧತೆಯಿಂದ ನಟಿಸಿದ್ದಾರೆ. ಪಟ್ಟಣಕ್ಕೆ ಬಂದಾಗ ಪಟ್ಟಣದ ರೀತಿ ರಿವಾಜುಗಳಿಗೆ ಬಾಗಿ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ ಹೋಟೆಲಿನ ಊಟದಲ್ಲಿ, ದೋಸೆಯ ಪಾತ್ರೆಗೆ ಇಲಿ ಬಿದ್ದುದ್ದನ್ನು ಹೇಳುವ, ನಾಗರೀಕತೆಯ ಹಮ್ಮಿನಿಂದ ಮೆರೆಯುವ ನಾಯಕಿಗೆ ದೇಶ, ಭಾಷೆಯ ಬಗ್ಗೆ ಅಭಿಮಾನ ಬರುವ ಹಾಗೆ ಹೇಳುವ, ಅನ್ಯಾಯ ಕಂಡಾಗ ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವ, ತಾನು ಇರುವ ಜಾಗವನ್ನು ಸ್ವರ್ಗವನ್ನಾಗಿ ಮಾಡಬೇಕು ಎನ್ನುವ ಹಂಬಲದ, ನಾಯಕಿ ತನ್ನನ್ನು ಇಷ್ಟಪಟ್ಟಿದ್ದಾಳೆ ಎಂದು ಅರಿವಾದಾಗ ಅದನ್ನು ಒಪ್ಪಿಕೊಳ್ಳುವ, ಪುರ ಪ್ರಮುಖನಾದಾಗ ಪಟ್ಟಣದ ಕುಂದುಕೊರತೆಗಳನ್ನು ನಿವಾರಿಸಬೇಕು ಎನ್ನುತ್ತಲೇ ಖಳನಾಯಕನನ್ನು ಮೆಟ್ಟಿ ನಿಲ್ಲುವ .. ವೈವಿಧ್ಯಮಯ ಪಾತ್ರದಲ್ಲಿ ರಾಜಕುಮಾರ್ ಕಂಗೊಳಿಸುತ್ತಾರೆ
ಹಳ್ಳಿಯ ಮುಗ್ಧತೆ ಎಷ್ಟು ಚಂದವೋ, ನಾಗರೀಕತೆಯೇ ತುಂಬಿದ ಪಾತ್ರವೂ ಕೂಡ ಅಷ್ಟೇ ಸುಂದರ.
ಹಳ್ಳಿಯಾದರೇನು ಶಿವ
ಅಯ್ಯಯ್ಯೋ ಹಳ್ಳಿ ಮುಖ
ಹಾವಿಗೆ ಮುಂಗುಸಿಯುಂಟು
ಒಂದೇ ನಾಡು ಒಂದೇ ಕುಲವು
ಈ ಎಲ್ಲಾ ಹಾಡುಗಳಲ್ಲಿ ಅವರ ಅಭಿನಯ ಉತ್ತಮೋತ್ತಮ.
ಇನ್ನೊಂದು ಕ್ಯಾಬರೆ ಹಾಡು ಹಲ್ಲೋ ಹಲ್ಲೋ ...ಗಾಯಕಿ ಎಲ್ ಆರ್ ಈಶ್ವರಿ ಅದ್ಭುತ
ನಾಯಕಿ ಎಂದರೆ ಬರಿ ಬಳುಕುವ ಬಳ್ಳಿಯಲ್ಲ.. ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಪಾತ್ರವೂ ಹೌದು ಎನ್ನುವಂತೆ ರೂಪುಗೊಂಡಿದೆ ಭಾರತಿಯವರ ಪಾತ್ರ. ಹಳ್ಳಿಯ ಹೈದನನ್ನು ಮೆಚ್ಚಿಕೊಂಡು, ಆತನ ಆಶಯಕ್ಕೆ ಆಸರೆಯಾಗಿ ನಿಲ್ಲುವ ಪಾತ್ರದಲ್ಲಿ ಭಾರತಿಯವರ ಅಭಿನಯ ಸುಂದರ
ಹಾಸ್ಯಕ್ಕೆ ದ್ವಾರಕೀಶ್ ಇದ್ದರೂ ಅವರ ಪಾತ್ರ ಪಟ್ಟಣದ ಮಂದಿಯ ಸೋಗಲಾಡಿತನವನ್ನು ಎತ್ತಿ ತೋರಿಸುವ ಸಂದೇಶ ಕೊಡುವ ಪಾತ್ರ.
ಒಳ್ಳೆಯವರಿದ್ದ ಮೇಲೆ ಒಳ್ಳೆಯತನವಿಲ್ಲದವರೂ ಬೇಕಲ್ಲವೇ.. ಎಂಪಿ ಶಂಕರ್, ರಾಜಾನಂದ್, ಬಾಲಕೃಷ್ಣ ಇದ್ದಾರೆ.
ಪೋಷಕ ಪಾತ್ರಗಳಲ್ಲಿ ಎಚ್ ಆರ್ ರಾಮಚಂದ್ರಶಾಸ್ತ್ರಿ ಜಯಶ್ರೀ, ಬಿವಿ ರಾಧಾ, ಜೋಕರ್ ಶ್ಯಾಮ್, ನಾಗಪ್ಪ, ಬಿ ಎಂ ವೆಂಕಟೇಶ್ , ತೂಗುದೀಪ ಶ್ರೀನಿವಾಸ್ ಇದ್ದಾರೆ.
ಹಳ್ಳಿಯ ಕಥೆ, ಹಳ್ಳಿಯ ಒಳಜಗಳ, ಒಗ್ಗಟ್ಟು, ಪಟ್ಟಣದ ಬಣ್ಣದ ಬದುಕು, ಸಿರಿವಂತರ ಆಡಂಬರ, ಸಿರಿವಂತರನ್ನು ಲೂಟಿ ಮಾಡುವ ಖದೀಮರು.. ಉತ್ತಮ ಕಥಾವಸ್ತು, ಹಾಡುಗಳು, ಮನಮುಟ್ಟುವ ಸಂಭಾಷಣೆ, ಅಭಿನಯ ಎಲ್ಲವೂ ಮೇಳೈಸಿ ಇದೊಂದು ಅಪರೂಪದ ಪೂರ್ಣಪ್ರಮಾಣದ ಮನೋರಂಜನೆಯ ಚಿತ್ರವಾಗಿದೆ.

No comments:
Post a Comment