Saturday, October 11, 2025

ನಾರದನ ಲೋಕ ಕಲ್ಯಾಣದ ಭಾಗವೇ ಈ ಪಾರ್ವತಿ ಕಲ್ಯಾಣ 1967 (ಅಣ್ಣಾವ್ರ ಚಿತ್ರ ೮೦/೨೦೭)


ಸೀದಾ ಮಾಡಲು ಕೆಲವೊಮ್ಮೆ ಉಲ್ಟಾ ಮಾಡಬೇಕಂತೆ.. 
ಹೌದು.. ವೈರಸ್ ಬಂದು ಉಪಟಳ ಮಾಡಿದಾಗ ಅದಕ್ಕೆ ವಿರುದ್ಧವಾಗಿ ಔಷಧಿ ಕೂಡ ತಯಾರಾಗಬೇಕಾಗುತ್ತದೆ.. 

ಅಸುರರು ಭುವಿಯಲ್ಲಿ ಅಶಾಂತಿ ಹರಡಬೇಕು.. ತಮ್ಮ ಹಠ ಸಾಧಿಸಬೇಕು.. ಸುರರನ್ನು ಬಗ್ಗು ಬಡಿದು ಮೂಲೋಕದ ಒಡೆಯರಾಗಬೇಕು.. ಸದಾ ಇದೆ ಹಪಹಪಿಯಲ್ಲಿಯೇ ತಮ್ಮ ತಮ್ಮ ಶಕ್ತಿ ಸಾಮರ್ಥ್ಯವನ್ನು, ತಪಃ ಶಕ್ತಿಯನ್ನು ವ್ಯರ್ಥವಾಗಿ ಉಪಯೋಗಿಸಿಕೊಂಡು ಅಳಿದು ಹೋಗುತ್ತಾರೆ.. 

ಇದು ಆ ಕಾಲದಿಂದಲೂ ಈ ಕಾಲಕ್ಕೂ ನೆಡೆಯುತ್ತಾ ಬಂದಿರುವ ವಿಷಯ.. 

ಪೌರಾಣಿಕ ಕಥಾವಸ್ತುವನ್ನು ಅನೇಕ ಪ್ರಾಕಾರಗಳಲ್ಲಿ ಚಿತ್ರಕತೆಯನ್ನು ಮಾಡುತ್ತಲೇ ಬಂದಿದ್ದಾರೆ.  ಅನೇಕ ವೇಳೆ ಒಂದೇ ಕಥೆಯನ್ನು ಭಿನ್ನವಾಗಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬಂದಿರುವುದು ಉಂಟು.. 

ಅಂತಹ ಒಂದು ಕಥೆ ಜನಜನಿತವಾಗಿರುವ ದಕ್ಷ ಯಜ್ಞ, ದಾಕ್ಷಾಯಿಣಿಗೆ ಅವಮಾನ, ವೀರಭದ್ರನಿಂದ ದಕ್ಷನ ಸಂಹಾರ, ತಾರಕ ವೈಭವ, ಮನ್ಮಥ ದಹನ, ಪಾರ್ವತಿ ಕಲ್ಯಾಣ, ಕುಮಾರ ಸಂಭವ, ತಾರಕ ಸಂಹಾರ... 

ಯಶಸ್ವಿ ಬ್ಯಾನರ್ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ ಎಸ್ ರಂಗ ನಿರ್ಮಿಸಿ ನಿರ್ದೇಶಿಸಿದ ಚಿತ್ರ ಪಾರ್ವತೀ ಕಲ್ಯಾಣ. 

ಚಿ ಸದಾಶಿವಯ್ಯನವರ ಸಾಹಿತ್ಯ ಜಿ ಕೆ ವೆಂಕಟೇಶ್ ಅವರ ಸಂಗೀತ ಬಿ ಎನ್ ಹರಿದಾಸ್ ಅವರ ಛಾಯಾಗ್ರಹಣ ಹಾಗೂ ಇನ್ನೂ ಅನೇಕಾನೇಕ ಪ್ರತಿಭಾವಂತರ ತಂಡದ ಶ್ರಮ ಈ ಚಿತ್ರದಲ್ಲಿ ಅಡಗಿದೆ!

ಸಾಹಿತ್ಯದಲ್ಲಿ ಚಮತ್ಕಾರ ಮಾಡಿರುವ ಸದಾಶಿವಯ್ಯನವರ ಅದ್ಭುತ ಪ್ರತಿಭೆ ಎಂದರೆ ಪಾರ್ವತಿ ಶಿವನ ಆರಾಧಕಿ, ನಾರದ ನಾರಾಯಣನ ಆರಾಧಕ. ಈ ಇಬ್ಬರ ಜುಗಲಬಂಧಿ 

ವನಮಾಲಿ ವೈಕುಂಠ ಪತೆಯೇ, 
ಘನಶೂಲೇ  ಕೈಲಾಸ ಪತಯೇ 

 ಇಡೀ ಹಾಡು ಹೀಗೆ ಇದೆ.. ಒಂದು ಸಾಲು ಹರಿಯ ಗುಣಗಾನವಾದರೆ, ಅದರ ಮುಂದಿನ ಸಾಲು ಹರನ ಗುಣಗಾನ.. ನಿಜಕ್ಕೂ ಅದ್ಭುತ ಪ್ರತಿಭೆ ಇದು.. 

ಗಂಗೆಯ ಧರಿಸಿದವನ 
ಚಂದಿರನ ಮುಡಿದವನ

ಈ ಹಾಡಿನಲ್ಲಿ ಶಿವನ ವರ್ಣನೆ ಸೊಗಸಾಗಿದೆ.. 

ಎಲ್ಲರಿಗೂ ಗೊತ್ತಿರುವ ಕಥಾನಕವನ್ನು ಯಶಸ್ವಿಯಾಗಿ ತೆರೆಯ ಮೇಲೆ ತರುವುದು ಸವಾಲಿನ ಕೆಲಸವೇ ಹೌದು.. ಅಲ್ಲೊಂದಷ್ಟು ಚಮತ್ಕಾರ ನೆಡೆಯಬೇಕಾಗುತ್ತದೆ.. 

ಆ ಚಮತ್ಕಾರವನ್ನು ನಿರ್ದೇಶಕರು ಮಾಡಿದ್ದಾರೆ.. ಅದಕ್ಕೆ ಸಹಯೋಗ ತಾರಾಗಣ ಕೊಟ್ಟಿದೆ ..

ಇವರು ಯಾರಿಗೆ ಗೊತ್ತಿಲ್ಲ ಅಲ್ಲವೇ 

ಶಿವನಾಗಿ ರಾಜಕುಮಾರ್ ಪರಕಾಯ ಪ್ರವೇಶವೇ ಹೌದು.. ಶಿವ ಎಂದರೆ ಹೀಗೆ ಇರಬೇಕು ಎನ್ನುವಷ್ಟು ತಾದ್ಯಾತ್ಮತೆಯಿಂದ ಅಭಿನಯಿಸಿದ್ದಾರೆ ಅಲ್ಲ ಅಲ್ಲ  ಶಿವನೇ ಆಗಿದ್ದಾರೆ. 
ದಾಕ್ಷಾಯಿಣಿಗೆ ದಕ್ಷನ ಮನೆಗೆ ಹೋಗಬೇಡ ಎಂದು ಹೇಳುವಲ್ಲಿ ತೋರಿಸುವ ಗೊಂದಲತೆ.. ನಂತರ ದಾಕ್ಷಿಯಿಣಿ ಆತ್ಮಹತ್ಯೆ ಮಾಡಿಕೊಂಡರು ಎಂಬ ವಿಷಯ ಗೊತ್ತಾದಾಗ ಕ್ಷುದ್ರರಾಗಿ ನಿಲ್ಲುವ ಅಭಿನಯ ವೀರಭದ್ರನನ್ನು ಕರೆದು ದಕ್ಷನನ್ನು ಸಂಹರಿಸು ಎಂದು ಹೇಳಿ ಕ್ಷುದ್ರರಾಗಿ ನಿಲ್ಲುವ ಪರಿ.. 
ನಂತರ ನಾರದನ ಮೂಲಕ ಪಾರ್ವತಿಯ ಬಗ್ಗೆ ಮಾತುಗಳನ್ನು ಕೇಳುತ್ತಾ ಅದಕ್ಕೆ ಅಭಿನಯಿಸುವ ರೀತಿ ಸೊಗಸಾಗಿದೆ. 
ಮನ್ಮಥ ದಹನವಾದ ಮೇಲೆ, ಮನಸ್ಸು ಚಂಚಲವಾದ ರೇಷ್ಮೆ ಬಟ್ಟೆಗಳನ್ನು ತಾ, ಚಂದನ ಲೇಪ ಬೇಕು, ಕೂದಲಿಗೆ ಸುವಾಸಿತ ಲೇಪ ಬೇಕು ಎನ್ನುತ್ತಾ ಅಭಿನಯಿಸುವ ... ಹಾಗೆ ಮತ್ತೆ ಯೋಗನಿದ್ರೆಯಲ್ಲಿ ಕೂರುವೆ ಎಂದು ಹೋಗುವಾಗ ಅವರ ನೆಡಿಗೆ.. ನಂತರ ಪಾರ್ವತಿಯನ್ನು ಪರೀಕ್ಷೆ ಮಾಡುತ್ತಾ ಕೀಟಲೆ ಮಾಡುವುದು.. ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. 
ಮತ್ತೊಂದು ವಿಶೇಷತೆ ಎಂದರೆ ಮನ್ಮಥ ದಹನದ ದೃಶ್ಯದಲ್ಲಿ ಶಿವನಾಗಿ ರಾಜಕುಮಾರ್ ನಿಜವಾದ ಹಾವನ್ನೇ ಧರಿಸಿರುತ್ತಾರೆ. 
ನಿಜವಾದ ಹಾವಿನ ಜೊತೆಯಲ್ಲಿ 

ನಮ್ಮ ಕಣ್ಣ ಮುಂದೆ ಶಿವನನ್ನೇ ತಂದು ನಿಲ್ಲಿಸುವ ರಾಜಕುಮಾರ್ ಅವರ ಪ್ರತಿಭೆ ನಿಜಕ್ಕೂ ಅಮೋಘ!

ಚಂದ್ರಕಲಾ 

ದಾಕ್ಷಾಯಿಣಿಯಾಗಿ, ಪಾರ್ವತಿಯಾಗಿ ಚಂದ್ರಕಲಾ ಸೊಗಸಾದ ಅಭಿನಯವಿದೆ. ಮುದ್ದಾಗಿ ಕಾಣುವ ಅವರು ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಲು ಪ್ರಯತ್ನ ಮಾಡುವಾಗ ಅವರ ಅಪ್ಪ ಅಮ್ಮ ಊಟ ಉಪಚಾರ, ನಿದ್ರೆ, ವಿಶ್ರಾಂತಿ ಇದನ್ನು ಹೇಳುತ್ತಾ ಬರುವಾಗ ಚಂದ್ರಕಲಾ ತೋರುವ ಅಭಿನಯ.. ಆ ಮಾತಿನಲ್ಲಿ ಇರುವ ಅಸಮಾಧಾನ ಚೆನ್ನಾಗಿದೆ 

ಎಂ ಪಿ ಶಂಕರ್ 

ತಾರಕನಾಗಿ ಎಂ ಪಿ ಶಂಕರ್ ಅಬ್ಬರಿಸುತ್ತಾರೆ.. ಬ್ರಹ್ಮದೇವನಿಗೆ ನಾನು ಕೇಳುವ ವರಗಳನ್ನು ಕೊಡಲು ಆಗದು ಎಂದರೆ.. ಇಲ್ಲಿಂದ ಹೊರಟು ಹೋಗು ಎನ್ನುವ ದೃಶ್ಯ ಮನಸ್ಸೆಳೆಯುತ್ತದೆ. ಚಿತ್ರದುದ್ದಕ್ಕೂ ಅವರ ಅಬ್ಬರದ ಅಭಿನಯ ಇಷ್ಟವಾಗುತ್ತದೆ 

ಉದಯ್ ಕುಮಾರ್ 


ಉದಕುಮಾರ್ ಪ್ರಾಯಶಃ ಹಿಂದಿನ ಅನೇಕ ಚಿತ್ರಗಳಲ್ಲಿನ ಅಭಿನಯ ದಾಟಿ ಇಲ್ಲಿ ನಾರದನಾಗಿ ಗಮನಸೆಳೆಯುತ್ತಾರೆ.. ಆ ತುಂಟತನ, ಕಿಲಾಡಿತನ, ಸೌಮ್ಯತೆ.. ಚೆನ್ನಾಗಿ ಮೇಳೈಸಿದೆ. 

ಉಳಿದ ಪಾತ್ರಗಳಲ್ಲಿ ತಾರಕನ ತಾಯಿ ಕಾಳಿಂದಿಯಾಗಿ ಪಂಡರಿಬಾಯಿ, ನಾಗರಾಜನಾಗಿ ಕುಪ್ಪುರಾಜ್, ಪಾರ್ವತಿಯ ತಾಯಿಯಾಗಿ ಜಯಶ್ರೀ, ತಂದೆಯಾಗಿ ರಾಘವೇಂದ್ರ ರಾವ್, ನಂದಿಯಾಗಿ ದಿನೇಶ್ ಹಾಗೂ ಉಳಿದವರು ಜೊತೆಯಾಗಿದ್ದಾರೆ. 

ದಿನೇಶ್ 

ಜಯಶ್ರೀ 

ಕುಪ್ಪುಸ್ವಾಮಿ 

ಮಚ್ಚೇರಿ 

ಪಂಡರಿಬಾಯಿ 

ರಾಘವೇಂದ್ರ ರಾವ್ 

ಆರ್ ಟಿ ರಮಾ 



ಒಂದು ಉತ್ತಮ ಚಿತ್ರ.. ಉತ್ತಮ ಅಭಿನಯ.. ಉತ್ತಮ ತಂಡ.. !