ಇನ್ನೂ ಬೆಳಕು ಹರಿದಿರಲಿಲ್ಲ.. ಆದರೆ ಒಂದು ಪುಟ್ಟ ಬೆಳಕು ನನ್ನ ಮಲಗುವ ಕೋಣೆಯಲ್ಲಿ ಬೆಳಗಿನ ಜಾವ ನಸುಕು ನಸುಕು ಮಸುಕು ಮಸುಕು.. ಯಾರೋ ಬಾಗಿಲು ತಟ್ಟಿದ ಸದ್ದು.. ಕಾಲಿಂಗ್ ಬೆಲ್ ಬ್ಯಾಟರಿ ಹೋಗಿತ್ತು ಆದ್ದರಿಂದ ಬಾಗಿಲು ಬಡಿಯುತ್ತಿದ್ದರು..
ಕಣ್ಣುಜ್ಜಿಕೊಂಡೆ ಬಾಗಿಲು ತೆರೆದೆ ... ಪ್ರಕಾಶಮಾನವಾದ ಒಂದು ಜ್ಯೋತಿ ಮೆಲ್ಲಗೆ ಆಕೃತಿ ತಳೆಯುತಿತ್ತು...ಬಿಳಿ ಅಂಗಿ.. ಬಿಳಿ ಪಂಚೆ.. ಆ ನಸುಕಿನಲ್ಲೂ ಹುಣ್ಣಿಮೆಯಾಗಿದ್ದರಿಂದ ತೇಜೋಮಯವಾದ ಹೊಳೆಯುವ ಮುಖ ನೋಡಿದ ಕೂಡಲೇ ಗೊತ್ತಾಯ್ತು..
ನನ್ನ ಕಣ್ಣನ್ನು ನಾನೇ ನಂಬಲಿಲ್ಲ.. ಕಣ್ಣುಜ್ಜಿಕೊಂಡೆ.. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದೆ ಬಿಟ್ಟರು.. ತಮ್ಮದೇ ಚಿತ್ರವನ್ನು ನನ್ನ ಮನೆಯಲ್ಲಿ ನೋಡಿ.. ಅರೆ ಈ ಫೋಟೋ ಇನ್ನೂ ಇದೆ ಇಲ್ಲಿ .. ಎಂದು ತಮ್ಮದೇ ಶೈಲಿಯಲ್ಲಿ ಬಂದು ಚಾಪೆ ಮೇಲೆ ಕೂತೆ ಬಿಟ್ಟರು..
ಇನ್ನೂ ನನಗೆ ಗಾಬರಿ, ಕುತೂಹಲ, ಕಂಪನ.. ಮಾತು ಹೊರಡುತ್ತಿಲ್ಲ.. ಅವರೇ ತಮ್ಮ ಬಳಿ ನನ್ನ ಕೂರಿಸಿಕೊಂಡು.. ನೋಡಪ್ಪ ಶ್ರೀ ನಿನ್ನ ಲ್ಯಾಪ್ಟಾಪ್ ನೋಡಿದೆ.. ನನ್ನ ಬಗ್ಗೆ ನೀನೇನೋ ಬರೀತೀಯ ಅಂತ ಗೊತ್ತು.. ಅದಕ್ಕೆ ಮೊದಲೇ ನಾ ಇಲ್ಲಿಗೆ ಬಂದೆ.. ನೋಡು ಇವತ್ತು ನನ್ನ ಹಾಡಿ ಹೊಗಳೋದು.. ಅಣ್ಣಾವ್ರು..ದೇವರು .. ನಟಸಾರ್ವಭೌಮ.. ಗಾನ ಗಂಧರ್ವ ಈ ಪಳೆಯುಳಿಕೆ ಮಾತುಗಳನ್ನು ಮತ್ತೆ ಬರೆಯಬಾರದು ಅಂತ ಮೊದಲೇ ಓಡಿ ಬಂದೆ..
ಅಣ್ಣಾವ್ರೇ ಸಂಧ್ಯಾರಾಗ ಚಿತ್ರದ ಹಾಡಿನಲ್ಲಿರುವಂತೆ "ದೀನ ನಾ ಬಂದಿರುವೆ" ಅಂತ "ಕೃಷ್ಣಾಲಯದಾಚೆ ನಿಂತ ಕನಕನ ಹಾಗೆ" ಎನ್ನುವಂತೆ ನಾ ನಿಮ್ಮ ಮುಂದೆ ಇರುವೆ.. ನೀವು ಹೇಳಿ ನಾ ಅದನ್ನು ಇಲ್ಲಿ ದಾಖಲಿಸುತ್ತೇನೆ ಅಷ್ಟೇ ಅಣ್ಣಾವ್ರೇ"
"ಶಭಾಷ್ ಜಮಾಯಿಸಿ ಬಿಡು ಹಾಗಾದರೆ ಶ್ರೀ.. ನೋಡು ಇಂದು ನಾ ಹೇಳ ಹೊರಟಿರುವುದು ನನ್ನ ಸಹಕಲಾವಿದರು ನನ್ನನ್ನು ಮೀರಿಸಿರೋದರ ಬಗ್ಗೆ.. .. ನಾ ಅವರ ಅಭಿನಯ ಮೆಚ್ಚಿಕೊಂಡಿರುವುದು .. ನನಗೆ ಇಷ್ಟವಾಗಿರೋದು.. ಅದರ ಬಗ್ಗೆ ಹೇಳುತ್ತೇನೆ..
ವಜ್ರಮುನಿ : ಅದೇನೋ ಒಂದು ಸೆಳೆತ ಇವರ ಅಭಿನಯ ಕಂಡಾಗ.. ಮಲ್ಲಮ್ಮನ ಪವಾಡದಿಂದ ಆಕಸ್ಮಿಕ ಚಿತ್ರದ ತನಕ ನನ್ನ ಅವರ ಜುಗಲ್ ಬಂದಿ ನನಗೆ ಇಷ್ಟ..
ಅದರಲ್ಲೂ ಸಂಭಾಷಣೆಯೇ ಇಲ್ಲದೇ ಗಿರಿಕನ್ಯೆ ಚಿತ್ರದಲ್ಲಿ ಇಬ್ಬರೂ ನಗುತ್ತಿರುವುದು..
ಮಯೂರ ಚಿತ್ರದ ದರ್ಬಾರ್ ದೃಶ್ಯ..
ಶಂಕರ್ ಗುರು ಚಿತ್ರದಲ್ಲಿ ನನ್ನ ದ್ವಿಪಾತ್ರ ಅವರ ಹೆಗಲ ಮೇಲೆ ಕೈಯಿಟ್ಟು ಮಾತಾಡುವ ದೃಶ್ಯ..
ದಾರಿ ತಪ್ಪಿದ ಮಗ ಚಿತ್ರದ ದರೋಡೆ ದೃಶ್ಯಗಳು..
ಪ್ರೇಮದ ಕಾಣಿಕೆ ಚಿತ್ರದಲ್ಲಿ ಮನೆಯಲ್ಲಿ ನಮ್ಮಿಬ್ಬರ ಹೊಡೆದಾಟಕ್ಕೆ ಮುಂಚಿನ ದೃಶ್ಯ..
ಬಡವರ ಬಂಧು ಚಿತ್ರದಲ್ಲಿ ನಮ್ಮಿಬ್ಬರ ಅನೇಕಾನೇಕ ದೃಶ್ಯಗಳು
ಬಹದ್ದೂರ್ ಗಂಡು ಚಿತ್ರದ ಕತ್ತಿ ಕಾಳಗ
ಸಂಪತ್ತಿಗೆ ಸವಾಲ್.. ನಿನ್ನ ಸಂಪತ್ತಿಗೆ ನನ್ನ ಸವಾಲ್ ದೃಶ್ಯ
ಬಂಗಾರದ ಮನುಷ್ಯದಲ್ಲಿ ಮಾವ ನನಗೆ ದುಡ್ಡು ಬೇಕು ಮಾತಿನ ದೃಶ್ಯ
ಹೀಗೆ ಹತ್ತಾರು ಸಿನಿಮಾಗಳು ಹತ್ತಾರು ಸ್ಮರಣೀಯ ಅಭಿನಯ
ತೂಗುದೀಪ ಶ್ರೀನಿವಾಸ್: ಇವರಿದ್ದಾಗಭಯವಾಗುತ್ತಿತ್ತು ನನಗೆ.. ನನ್ನ ಅಭಿನಯ ತಿಂದು ಬಿಡ್ತಾರೆ ಅಂತ..
ನೀ ನನ್ನ ಗೆಲ್ಲಲಾರೆ ಅಂತಿಮ ದೃಶ್ಯದಲ್ಲಿ ನಮ್ಮಿಬ್ಬರ ಮಾತುಗಳು
ಶಂಕರ್ ಗುರು ಚಿತ್ರದಲ್ಲಿ ಓಕೆ ೫೦ : ೫೦ ಎಂದು ಹೇಳುವುದು
ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಬಾಕ್ಸಿಂಗ್ ದೃಶ್ಯಗಳು
ಅದೇ ಕಣ್ಣು ನನ್ನ ನೆರಳಾಗಿ ಕಾಪಾಡುವ ಹಾಗೂ ಕಾಣುವ ಅಭಿನಯ
ಧ್ರುವತಾರೆ ಚಿತ್ರದ ಕೆಲವು ದೃಶ್ಯಗಳು
ಜ್ವಾಲಾಮುಖಿಯಲ್ಲಿ ಮಟ್ಕಾ ಕಿಂಗ್
ಕೆರಳಿದ ಸಿಂಹದ ಅಂತಿಮ ದೃಶ್ಯಗಳು
ಕಾಮನಬಿಲ್ಲು ಚಿತ್ರದ ಕಿರಿ ಗೌಡ
ಇವರು ಖಳರಷ್ಟೇ ಅಲ್ಲದೆ ಅನೇಕ ಪೋಷಕಪಾತ್ರಗಳ ಅಭಿನಯ ನನಗೆ ಇಷ್ಟ
ಬಾಲಣ್ಣ : ಇವರನ್ನು ಹೇಗೆ ಮರೆಯೋದು.. ನನಗೆ ಅಕ್ಷರ ಕಲಿಸಿದ ಗುರು ಇವರು.. ಆರಂಭದಲ್ಲಿ ಖಳರಾಗಿ ಮುರಿಯದ ಮನೆ, ಕಣ್ತೆರೆದು ನೋಡು, ಗಂಧದ ಗುಡಿ, ಬಡವರ ಬಂಧು, ತ್ರಿಮೂರ್ತಿ , ಕರುಣೆಯೇ ಕುಟುಂಬದ ಕಣ್ಣು, ಭಕ್ತ ಕುಂಬಾರ, ಸಂತ ತುಕಾರಾಂ, ಧ್ರುವತಾರೆ, ಸಂಪತ್ತಿಗೆ ಸವಾಲ್ ಹೀಗೆ ಹತ್ತಾರು ಚಿತ್ರಗಳು.. ಆದರೆ ನಂತರ ಪೋಷಕ ಪಾತ್ರಗಳಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ, ನಾ ನಿನ್ನ ಮರೆಯಲಾರೆ, ಕಾಮನಬಿಲ್ಲು, ಬಂಗಾರದ ಮನುಷ್ಯ, ಪ್ರೇಮದ ಕಾಣಿಕೆ, ಶಂಕರ್ ಗುರು, ತಾಯಿಗೆ ತಕ್ಕ ಮಗ ಮುಂತಾದ ಚಿತ್ರಗಳಲ್ಲಿ ಅಷ್ಟೇ ಮನೋಜ್ಞ ಅಭಿನಯ ನೀಡಿದ್ದರು
ಇವರು ನನ್ನ ಚಿತ್ರಗಳಲ್ಲಿ ಖಾಯಂ ಖಳನಾಯಕರು.. ಇವರಲ್ಲದೆ ಎಂ ಪಿ ಶಂಕರ್, ಪ್ರಭಾಕರ್, ನಾಗಪ್ಪ, ದಿನೇಶ್, ಸುದರ್ಶನ್, ಶ್ರೀನಾಥ್, ಉದಯಕುಮಾರ್, ಕಲ್ಯಾಣ್ ಕುಮಾರ್ ಹೀಗೆ ಇವರು ಒಂದು ಕಡೆ..
ನನ್ನ ಪಾತ್ರಕ್ಕೆ ಇನ್ನಷ್ಟು ತೂಕ ಕೊಡುತ್ತಿದ್ದರು ಸಹಕಲಾವಿದರು
ನನ್ನ ಎರಡನೇ ತಾಯಿ ಅಂತಲೇ ಹೆಸರಾಗಿದ್ದ ಪಂಡರಿಬಾಯಿ..
ಇವರ ನಂತರ ನನ್ನ ಇನ್ನೊಬ್ಬ ತಾಯಿ ಆದವಾನಿ ಲಕ್ಷ್ಮೀದೇವಿ
ನನಗೆ ತಾಯಿ ಪ್ರೇಮವನ್ನು ಉಣಬಡಿಸಿದವರು
ಆರಂಭದ ಚಿತ್ರಗಳಲ್ಲಿ ದುಷ್ಟ ಪಾತ್ರಗಳಲ್ಲಿ ನನಗೆ ಕಾಟ ಕೊಡುತ್ತಿದ್ದ ಪಾಪಮ್ಮ ನಂತರ ಕರುಣಾಮಯಿ ಪಾತ್ರಗಳಲ್ಲಿ ಮಿಂಚಿದರು..
ನನ್ನ ಕುಟುಂಬದ ಒಂದು ಭಾಗವೇ ಆಗಿದ್ದ ಶಾಂತಮ್ಮ
ಸುಮಾರು ನಾಲ್ಕು ದಶಕಗಳು ನನ್ನ ಕುಟುಂಬದ ಅವಿಭಾಜ್ಯವಾಗಿದ್ದ ಹೊನ್ನವಳ್ಳಿ ಕೃಷ್ಣ
ಒಂದೇ ಎರಡೇ ಅನೇಕಾನೇಕ ಕಲಾವಿದರು ನನ್ನನ್ನು ಮುತ್ತುರಾಜನಿಂದ ರಾಜಕುಮಾರ್ ಮಾಡಿದ್ದಾರೆ,
ಇಪ್ಪತ್ತನಾಲ್ಕನೆ ತಾರೀಕು ನನ್ನ ಇನ್ನೊಬ್ಬ ನೆಚ್ಚಿನ ಕಲಾವಿದನ ಬಗ್ಗೆ ನೀ ಬರೆಯಬೇಕು.. ನಿನಗೆ ಹನ್ನೆರಡು ದಿನಗಳ ಸಮಯ ಕೊಟ್ಟಿದ್ದೀನಿ.. ಇದರ ಜವಾಬ್ಧಾರಿ ನಿನದು..
ಆಗಲಿ ಅಣ್ಣಾವ್ರೇ.. ನೀವು ನನಗೆ ಕೆಲಸ ಕೊಡುವುದು.. ಅದನ್ನು ನಾ ಮಾಡುವುದು ಅದಕ್ಕಿಂತ ಈ ಬದುಕಿಗೆ ಇನ್ನೇನು ಬೇಕಾಗಿದೆ!
ಶುಭವಾಗಲಿ ಶ್ರೀ.. ನಿಮ್ಮಿಂದಲೇ ಮಣ್ಣಾಗಿ ಹತ್ತೊಂಬತ್ತು ವರ್ಷಗಳಾಯಿತು ಶ್ರೀ.. ನಂಬೋಕೆ ಆಗ್ತಿಲ್ಲ.. ಮಣ್ಣಾದೆ ಅಷ್ಟೇ ಆದರೆ ನಿಮ್ಮಗಳ ಹೃದಯದಲ್ಲಿ ಸದಾ ಈ ನಿಮ್ಮ ರಾಜಕುಮಾರ ಅಜರಾಮರ!