Sunday, November 10, 2024

ಅಣ್ಣ ತಂಗಿಯರ ಬಾಂಧವ್ಯ ಅದೇ - ವಾತ್ಸಲ್ಯ 1965 (ಅಣ್ಣಾವ್ರ ಚಿತ್ರ ೬೧/೨೦೭)

ಹೇಗೆ ಸೈಕಲ್ ಹೊಡೆದರೂ ರಕ್ತ ಸಂಬಂಧ ಎಂದಿಗೂ ದೂರಾಗದು.. ಮನಸ್ಸು ಕೆಲವು ಕಠಿಣ ಮಾತುಗಳಿಂದ, ಅಥವ ಸುತ್ತ ಮುತ್ತಾ ಕಾಡುವ ಹಿಂಸೆ ಮಾಡುವ ಮನಸ್ಸುಗಳಿಂದ, ಜೀವಿಗಳಿಂದ ಹಿಂಸೆಯಾಗಬಹುದು ಆದರೆ ಬಂಧ ಮಾತ್ರ ಎಂದೂ ಮುಗಿಯದು, ಹರಿಯದು.. ಅದೊಂದು ಗಿರಿಶಿಖರಗಳಲ್ಲಿ ಪುಟ್ಟ ನೀರಿನ ಸೆಲೆಯಾಗಿ, ನಂತರ ಝರಿಯಾಗಿ, ತೊರೆಯಾಗಿ, ನದಿಯಾಗಿ, ಕಡಲು ಸೇರುವ ಬಂಧವದು.. ಹೌದು ಮಾರ್ಗದಲ್ಲಿ ಅಡಚಣೆ ಬರಬಹುದು.. ಬೆಟ್ಟ ಗುಡ್ಡಗಳು, ಕಲ್ಲು ಬಂಡೆಗಳು, ಅಣೆಕಟ್ಟುಗಳು, ಪ್ರಪಾತ ಎಲ್ಲವೂ ಇದ್ದರೂ ಅದರ ಓಟ ನಿಲ್ಲದು. 

ಅದೇ ತಳಹದಿಯ ಮೇಲೆ ತಮಿಳಿನ ಚಿತ್ರದ ಕನ್ನಡದ ಅವತರಣಿಕೆಯಾದರೂ ಇಲ್ಲಿ ರಾಜಕುಮಾರ್, ಲೀಲಾವತಿ, ನರಸಿಂಹರಾಜು, ಪಾಪಮ್ಮ, ಉದಯಕುಮಾರ್, ರಮಾ ಮತ್ತು ಗಣಪತಿ ಭಟ್ ಮುಖ್ಯ ಪಾತ್ರಗಳಲ್ಲಿ ಕಥೆಯ ಹಾದಿಯಲ್ಲಿ ಕಾಣಸಿಗುತ್ತಾರೆ,, 

ಪುಟ್ಟ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಳ್ಳುವ ಅಣ್ಣ ತಂಗಿ ಮುಂದೆ ಬೆಳೆಯುತ್ತಾ ಹೋದ ಹಾಗೆಲ್ಲ.. ಅವರ ಬೆಳವಣಿಗೆಯಂತೆಯೇ ಅವರ ಬಾಂಧ್ಯವ ಕೂಡ ಬೆಳೆಯುತ್ತದೆ.. ಹರಿಯದ, ಮುರಿಯದ, ಉಳಿಯುವ ಬಂಧವದು 

ರಾಜಕುಮಾರ್ ಮತ್ತು ಲೀಲಾವತಿ ಅಣ್ಣ ತಂಗಿಯ ಪಾತ್ರದಲ್ಲಿ ಬಹುಶಃ ಮೊದಲ ಬಾರಿಗೆ ಮತ್ತು ಕಡೆಯ ಬಾರಿಗೆ ನಟಿಸಿದ್ದಾರೆ.. 


ಒಟ್ಟಿಗೆ ಕಷ್ಟ ಸುಖಗಳಲ್ಲಿ ಬೆಳೆಯುವ ಅಣ್ಣ ತಂಗಿ.. ಮುಂದೆ ಅಣ್ಣನ ಪಾತ್ರದಲ್ಲಿ ರಾಜಕುಮಾರ್  ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ .. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುವ ಉದಯಕುಮಾರ್ ಇವರಿಗೆ ಬಲು ಆಪ್ತ ಸ್ನೇಹಿತರು.. ಮುಂದಿನ ಕೆಲವು ದೃಶ್ಯಗಳಲ್ಲಿ ರಾಜಕುಮಾರ್ ತಂಗಿ ಲೀಲಾವತಿಯಲ್ಲಿ ಉದಯಕುಮಾರ್ ಅನುರಕ್ತರಾಗುತ್ತಾರೆ.. ಆದರೆ ಅಣ್ಣನ ಭಯ, ಮತ್ತು ಗೆಳೆಯನ ಜೊತೆಯ ಸ್ನೇಹ ಸೆಳೆತ.. ಇಬ್ಬರೂ ಇದನ್ನು ಅಣ್ಣನ ಮುಂದೆ ವ್ಯಕ್ತಪಡಿಸೋಕೆ ಹಿಂಜರಿಯುತ್ತಾರೆ.. 



ಮುಂದೆ ಕೆಲವು ಘಟನಾವಳಿಯಲ್ಲಿ ಉದಯಕುಮಾರ್ ತಮ್ಮ ಹಳ್ಳಿಗೆ ಕೆಲಸ ಮೇಲೆ ಹೋಗಿರುತ್ತಾರೆ.. ಅದೇ ಸಮಯದಲ್ಲಿ ರಾಜಕುಮಾರ್ ಒಂದು ಬೊಂಬೆ ತಯಾರು ಮಾಡುವ ಕಂಪನಿ ತೆಗೆದು.. ನಂತರ ಮೊದಲು ಕೆಲಸ ಮಾಡುತ್ತಿದ್ದ ಕಾರ್ಖಾನೆಯನ್ನೇ ಕೊಂಡು ಅದರ ಮಾಲೀಕರಾಗಿರುತ್ತಾರೆ.. ಕೆಲಸಾರ್ಥಿಯಾಗಿ ಉದಯಕುಮಾರ್ ವಾಪಸ್ ಬಂದಾಗ ಬದಲಾದ ಕಾಲಘಟ್ಟದಲ್ಲಿ ರಾಜಕುಮಾರ್ ವಿಧಿಯಿಲ್ಲದೇ ಸ್ನೇಹಕ್ಕೆ ಕಟ್ಟುಬಿದ್ದು ಅವರಿಗೆ ಕೆಲಸ ನೀಡುತ್ತಾರೆ. ಹಾಗೆಯೇ ತಂಗಿಯ ಮಮತಾಮಯಿ ಹೃದಯಕ್ಕೆ ಕರಗಿ, ಆಕೆಯನ್ನು ಉದಯಕುಮಾರ್ ಅವರಿಗೆ ಕೊಟ್ಟು ಮದುವೆ ಮಾಡಿ ಮನೆಯ ಅಳಿಯನಾಗಿ ಇಟ್ಟುಕೊಳ್ಳುತ್ತಾರೆ.. 



ಚಿತ್ರ ಇಲ್ಲಿಯ ತನಕ ಹೂವಿನಂತೆ ಸಾಗುತ್ತದೆ.. ಆದರೆ ಪಾಪಮ್ಮ, ಮತ್ತು ನರಸಿಂಹರಾಜು ಅವರ ಎಡಬಿಡಂಗಿತನದ ಕುಯುಕ್ತಿಯಿಂದ ಅಣ್ಣ ತಂಗಿಯರ ಬದುಕು ಮೂರಾಬಟ್ಟೆಯಾಗುತ್ತದೆ.. ತನ್ನ ಅಣ್ಣ ಮದುವೆ ಮಾಡಿಕೊಂಡರೂ, ವಿಧಿಯಾಟ ಹೆಂಡತಿ ಸತ್ತು.. ಮಗುವಿನ ಜವಾಬ್ಧಾರಿಯನ್ನು ಹೊತ್ತು..ಜೊತೆಗೆ ತಂಗಿಯ ಮನೆಯವಲ್ಲಿನ ಕುಯುಕ್ತಿಗಳಿಂದ ತಮ್ಮ ಆಸ್ತಿ, ಅಂತಸ್ತು, ಸ್ಥಾನ ಮಾನ ಎಲ್ಲವನ್ನು ಕಳೆದುಕೊಂಡು ಕಡೆಗೆ ನಿರ್ಗತಿಕರಾಗಿ ತನ್ನ ಮಗುವನ್ನು ತಂಗಿಯ ಮಡಿಲಿಗೆ ಹಾಕಿ ಅಸು ನೀಗುತ್ತಾರೆ.. ಅಣ್ಣನ ಅಂತ್ಯವನ್ನು ನೋಡಲಾಗದೆ ತಾನೂ ಅಸು ನೀಗುತ್ತಾಳೆ.. ಕಡೆಯಲ್ಲಿ ತನ್ನ ಮಗು ಮತ್ತು ತನ್ನ ಸ್ನೇಹಿತನ ಮಗುವನ್ನು ಕರೆದುಕೊಂಡು ಉದಯಕುಮಾರ್ ನಿಲ್ಲುವಲ್ಲಿ ಚಿತ್ರ ಮುಗಿಯುತ್ತದೆ.. 

ಇಲ್ಲಿ ವಿಶೇಷತೆಯೆಂದರೆ ರಾಜಕುಮಾರ್ ಅವರ ಇಂಗ್ಲಿಷ್ ಮಾತುಗಳು, ಕಾರ್ಮಿಕನಾಗಿ, ಮಾಲೀಕನಾಗಿ ಅವರ ಅಭಿನಯ.. ಹಾಗೆಯೇ ತನ್ನ ತಂಗಿಯನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸುವ, ಆಕೆಗೆ ಒಂದು ಚೂರು ನೋವಾಗದಂತೆ, ತನ್ನ ಸ್ಥಿತಿ ಹಾಳಾದರೂ ಪರವಾಗಿಲ್ಲ ತಂಗಿ ಮನೆ ಚೆನ್ನಾಗಿರಬೇಕು ಎಂದು ಹಾರೈಸುವ, ಹರಸುವ ಅದರಂತೆ ನೆಡೆದುಕೊಳ್ಳುವ ಪಾತ್ರದಲ್ಲಿ ಅದ್ಭುತ ಅಭಿನಯ.. ರಾಜಕುಮಾರ್ ಧೂಮಪಾನ ಮಾಡುವ ದೃಶ್ಯಗಳು ಅವರ ಚಿತ್ರಜೀವನದಲ್ಲಿ ಬಲು ವಿರಳ.. ಈ ಚಿತ್ರದಲ್ಲಿ ಕೆಲವು ದೃಶ್ಯಗಳಲ್ಲಿ ಧೂಮಪಾನ ಮಾಡುತ್ತಾರೆ...ಅವರ ವೇಷಭೂಷಣ, ಆಂಗೀಕ ಅಭಿನಯ, ಇಂಗ್ಲೀಷಿನಲ್ಲಿ ಮಾತಾಡುವ ಶೈಲಿ, ಆ ಸಿರಿವಂತರ ಸೋಗಿನ ಅಭಿನಯ ಎಲ್ಲವೂ ಅದ್ಭುತ.. ತಾನೊಬ್ಬ ಬೆಳೆಯುತ್ತಿರುವ ನಟ ಎಂದು ಅಮೋಘವಾದ ಶೈಲಿಯಲ್ಲಿ ಅಭಿನಯಿಸಿದ್ದಾರೆ.. 

ತಂಗಿಯಾಗಿ ಲೀಲಾವತಿ ಅದ್ಭುತ.. ಅಣ್ಣನ ಮೇಲಿನ ಪ್ರೀತಿ, ಒಲವಿನ ಹೃದಯದ ಮೇಲಿನ ಪ್ರೇಮ, ಮಮತಾಮಯಿಯಾಗಿ ಪ್ರತಿ ದೃಶ್ಯದಲ್ಲಿಯೂ ಸೊಗಸಾದ ಅಭಿನಯ ನೀಡಿದ್ದಾರೆ.. ತೂಕಬದ್ಧವಾದ ಅಭಿನಯ.. ಅದರಲ್ಲೂ ಅಣ್ಣ ನಿನಗೆ ಮದುವೆ ಮಾಡುತ್ತೇನೆ ಎಂದಾಗ, ನೀನು ಯಾವ ಹುಡುಗನನ್ನು ನೋಡಿದರೂ ಮದುವೆಯಾಗುತ್ತೇನೆ ಎಂದು ಹೇಳಿ.. ನಂತರ ತನ್ನ ಪ್ರಿಯಕರನೇ ತನ್ನ ಅಣ್ಣ ಆರಿಸಿದ ಹುಡುಗ ಎಂದು ಅರಿವಾದಾಗ.. ಮತ್ತು ಕಡೆಯ ದೃಶ್ಯದಲ್ಲಿನ ಅಭಿನಯ ಮನಸ್ಸಿಗೆ ನಾಟುತ್ತದೆ.. 

ಗೆಳೆಯನಾಗಿ ಉದಯಕುಮಾರ ಅವರ ಅಭಿನಯ ಸೊಗಸು.. ಗೆಳೆಯನ ಮೇಲಿನ ಅಭಿಮಾನ, ಕೆಲಸ ಕೇಳುವುದೋ ಬೇಡವೋ ಎನ್ನುವ ಗೊಂದಲದ ದೃಶ್ಯ, ನಂತರ ಗೆಳೆಯನ ಕಾರ್ಖಾನೆಯಲ್ಲಿ ತನ್ನ ಸಹೋದ್ಯೋಗಿಗಳನ್ನು ರಕ್ಷಿಸಲು ಮಾಡುವ ಮುಷ್ಕರದ ದೃಶ್ಯದಲ್ಲಿ ಅಭಿನಯ.. ಸೊಗಸಾಗಿದೆ. 

ಉಳಿದ ಪಾತ್ರಗಳಲ್ಲಿ ನರಸಿಂಹರಾಜು ಅವರಿಗೆ ಇತ್ತ ಹಾಸ್ಯ ದೃಶ್ಯವೂ ಅಲ್ಲ.. ಇತ್ತ ಖಳನು ಅಲ್ಲ ಎನ್ನುವ ವಿಚಿತ್ರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.. ಎಂದಿನಂತೆ ಪಾಪಮ್ಮ ಮನೆ ಮುರುಕಿಯ  ಪಾತ್ರದಲ್ಲಿ ಯಥಾಪ್ರಕಾರ ಮಿಂಚುತ್ತಾರೆ.. ಒಂದೆರಡು ದೃಶ್ಯಗಳಲ್ಲಿ ಕಾಣುವ ಜಯಂತಿ ಮುದ್ದಾಗಿ ಕಾಣುತ್ತಾರೆ.. ಗಣಪತಿ ಭಟ್ ಕೆಲವು ದೃಶ್ಯಗಳಲ್ಲಿ ಕಾಣುತ್ತಾರೆ.


 

ಇಡೀ ಚಿತ್ರದಲ್ಲಿ ಕಾಣ ಸಿಗುವುದು ಅಣ್ಣ ತಂಗಿಯರ ಬಾಂಧವ್ಯ ಮತ್ತು ಒಬ್ಬರು ಚೆನ್ನಾಗಿರಲಿ ಅಂತ ಇನ್ನೊಬ್ಬರು ಕಷ್ಟ ಪಡುವುದು.. ಹುಳಿ ಹಿಂಡುವರು ಇದ್ದರೂ ಕೂಡ, ಅಣ್ಣ ತಂಗಿಯ ಪ್ರೀತಿ ಕಡಿಮೆಯಾಗೋಲ್ಲ.. ಜೊತೆಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಅಸೂಯೆ, ಅನುಮಾನ ಬರೋಲ್ಲ ಬದಲಿಗೆ .. ಈ ಕಷ್ಟಗಳೆಲ್ಲ ಅವರ ಸುತ್ತಮುತ್ತಲೂ ಇರುವ ಕೆಟ್ಟ ಮನಸ್ಸುಗಳು ಮಾಡುವ ಆತ ಎಂದು ನಿಶ್ಚಿತವಾಗಿ ನಂಬುವ ಚಿತ್ರಕಥೆ ಇಷ್ಟವಾಗುತ್ತದೆ..

ಸುಚಿತ್ರ ಮೂವೀಸ್ ಲಾಂಛನದಲ್ಲಿ ಕೆ ವಿ ಕೊಟ್ಟಾರಕರ್ ಕತೆಯನ್ನು ವಿಜಯ ಕೃಷ್ಣಮೂರ್ತಿಯವರ ಸಂಗೀತದಲ್ಲಿ, ಸೋರಟ್ ಅಶ್ವಥ್ ಅವರ ಸಂಭಾಷಣೆ ಹಾಗೂ ಗೀತೆಗಳಲ್ಲಿ ಆರ್ ಮಧುವಿನ ಛಾಯಾಗ್ರಹಣದಲ್ಲಿ ವೈ ಆರ್ ಸ್ವಾಕ್ಮೀ ನಿರ್ದೇಶಿಸಿದ್ದಾರೆ.... 

ರಾಜಕುಮಾರ್ ಈ ಪಾತ್ರದ ಶಕ್ತಿ.. ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ..