ಅಣ್ಣಾವ್ರ ಮೆಚ್ಚಿನ ನಟ, ಸ್ನೇಹಿತ, ಗುರು ಎಲ್ಲವೂ ಆಗಿದ್ದ ಬಾಲಣ್ಣನ ಹತ್ತಿರ ಒಂದು ಪ್ರಶ್ನೆ ಕೇಳಿದೆ
ಇದು ಬಾಲಣ್ಣ ಮತ್ತು ರಾಜಣ್ಣ ಅವರ ಪ್ರೀತಿ |
"ಬಾಲಣ್ಣ ನನಗೆ ನಿಮ್ಮ ಛಲ ಇಷ್ಟ, ನಿಮ್ಮ ಪ್ರತಿಭೆ ಇಷ್ಟ, ಅನಾನೂಕೂಲತೆಗಳ ಮಧ್ಯೆ ಕೂಡ ಅದನ್ನು ಮೆಟ್ಟಿ ನಿಂತು ಬದುಕುವ ರೀತಿ ತೋರಿಸಿದೀರಿ.. ಅದೇ ರೀತಿಯಲ್ಲಿ ನನಗೆ ಇನ್ನೊಂದು ಉದಾಹರಣೆ ಕೊಡಿ.. "
"ಏನಪ್ಪಾ.. ಕಳ್ಳ ನೀನು . ಎಲ್ಲಾ ತಿಳಿದು ನನ್ನನ್ನೇ ಕೇಳ್ತಾ ಇದ್ದೀಯ.. ಕಳ್ಳ ನೀನು ಅದೇನು ಬಾಯಿ ಬಿಟ್ಟು ಹೇಳಬಾರದೇ.. "
"ಇಲ್ಲ ಬಾಲಣ್ಣ.. ಹೇಳಿ ಪ್ಲೀಸ್"
"ನೋಡಪ್ಪ ಕಾಮನಬಿಲ್ಲು ಚಿತ್ರದಲ್ಲಿ ಇದೆ ರೀತಿಯ ಸಂಭಾಷಣೆ ಇದೆ.. ಆ ಸೂರಪ್ಪ ಹಳ್ಳಿಯ ಜನಕ್ಕೆ ಉಪಯೋಗವಾಗಲೆಂದು ನನ್ನ ತೋಟದಲ್ಲಿದ್ದ ಸಿಹಿ ನೀರಿನ ಬಾವಿಯನ್ನು ಹಳ್ಳಿಗರಿಗೆ ಬಿಟ್ಟು ಕೊಡೋಕೆ ಇದೆ ರೀತಿಯ ತಂತ್ರ ಮಾಡುತ್ತಾನೆ.. ಇಲ್ಲಿ ನೀನು ಹಾಗೆ ಶುರು ಮಾಡ್ತಾ ಇದ್ದೀಯ.. ಕಳ್ಳ ನೀನು.. ಅಲ್ಲಿ ಹೇಳಿದಂತೆ.. ಇಲ್ಲೂ ಹೇಳುತ್ತೇನೆ.. ಹೇಳಪ್ಪ ನಿನಗೇನು ಬೇಕು"
"ಬಾಲಣ್ಣ ಗೀತಾಚಾರ್ಯ ಹೇಳಿದ ಭಗವದ್ಗೀತೆ ಇದೆ.. ಅದರಲ್ಲಿ ಎಲ್ಲವೂ ಅಡಗಿದೆ.. ಪ್ರಶ್ನೆಗಳು ಅದಕ್ಕೆ ಉತ್ತರಗಳು ಪರಿಹಾರಗಳು ಎಲ್ಲವೂ ಇದೆ.. ಹಾಗೆ ಡಿವಿಜಿ ಅಜ್ಜ ಬರೆದ ಮಂಕುತಿಮ್ಮನ ಕಗ್ಗಗಳು ಅದರಲ್ಲಿ ಕೂಡ ಸಕಲ ವಿಷಯಗಳನ್ನು ಅಡಗಿಸಿಕೊಂಡು ಇಂದಿಗೂ ಅದೊಂದು ಶ್ರೇಷ್ಠ ಕೃತಿ ಎಂದು ಅನೇಕಾನೇಕ ಮಹನೀಯರು ಅದರ ಬಗ್ಗೆ ಬರೆದಿದ್ದಾರೆ, ಬರೆಯುತ್ತಲೇ ಇದ್ದಾರೆ. ನಾನು ಕೂಡ ಸಣ್ಣ ಪ್ರಯತ್ನ ಮಾಡಲು ಕೈ ಹಾಕಿದ್ದೀನಿ.. ಅದೇ ರೀತಿ ನಿಮ್ಮ ಸಹನಟ ರಾಜಾನಂದ್ ಬರೆದ ಚುಟುಕಗಳು ಎಲ್ಲರ ಬಳಿ ಇಲ್ಲದಿದ್ದರೂ ಅದೂ ಕೂಡ ಅನೇಕರ ಕೈಪಿಡಿಯಾಗಿದೆ.. ಪುಟ್ಟಣ್ಣ ಅವರ ಚಿತ್ರಗಳು ಎಲ್ಲರಿಗೂ ಗೊತ್ತು.. ನಿಮ್ಮ ಪರಿಶ್ರಮ, ನಿಮ್ಮ ಛಲ ಅದೂ ಕೂಡ ಕರುನಾಡಿನಲ್ಲಿ ಜನಜನಿತವಾಗಿದೆ.. ಅದೇ ರೀತಿ ನಿಮ್ಮ ಅತ್ಯುತ್ತಮ ಸ್ನೇಹಿತ, ಶಿಷ್ಯ ರಾಜಕುಮಾರ್ ನಮಗೆಲ್ಲ ಅಣ್ಣಾವ್ರು ಅವರ ಬಗ್ಗೆ ಹೇಳಿ.. "
"ಊಒ ಇದಕ್ಕೆ ಇಷ್ಟೊಂದು ಪೀಠಿಕೆಯ.. ಇರಲಿ ಇರಲಿ.. ನಿಮಗೆಲ್ಲ ರಾಜಕುಮಾರ, ಅಣ್ಣಾವ್ರು, ಅಣ್ಣ, ರಾಜಣ್ಣ.. ಆದರೆ ನನಗೆ ಮಾತ್ರ ಮುತ್ತುರಾಜ.. ಅವನ ಬಗ್ಗೆ ನಾನು ಹೇಳಲಿ.. ದೈವದತ್ತ ಪ್ರತಿಭೆ.. ನನ್ನ ಪುಣ್ಯ ಆತನ ಜೊತೆಯಲ್ಲಿ ಅನೇಕಾನೇಕ ಚಿತ್ರಗಳಲ್ಲಿ ಅಭಿನಯಿಸುವ ಪುಣ್ಯ ಸಿಕ್ಕಿತು.. ಆತನ ಜೊತೆ ನನ್ನ ಕೆಲವು ಚಿತ್ರಗಳು ನನಗೆ ಇಷ್ಟ..
ಕಣ್ತೆರೆದು ನೋಡು ..
ಈ ಚಿತ್ರದ ಬಗ್ಗೆ ಏನು ಹೇಳಲಿ.. ಇವತ್ತಿಗೂ ಆ ಚಿತ್ರ ನೋಡಿದಾಗ ನಗು ಬರುತ್ತದೆ.. ಅದೆಷ್ಟು ಕಾದಿದ್ದೆ ನಿನ್ನ ಅಣ್ಣಾವ್ರನ್ನು.. ಆಗಿನ್ನೂ ರಾಜಕುಮಾರ ಆಗಿದ್ದ.. ಆದರೆ ಅದರ ಪ್ರತಿ ದೃಶ್ಯಗಳಲ್ಲಿ ಆತ ತೋರುತ್ತಿದ್ದ ಶ್ರದ್ದೆ ಇಷ್ಟವಾಗುತ್ತಿತ್ತು.. ಚಿತ್ರೀಕರಣ ಮುಗಿದ ಮೇಲೆ ನಾವಿಬ್ಬರೇ ಅದನ್ನು ನೆನೆದು ನೆನೆದು ನಗುತ್ತಿದ್ದೆವು.. ಅದರಲ್ಲೂ ನನ್ನ ಒಂದು ಸಂಭಾಷಣೆ ... ಪೇಪರ್ ಅಂಗಡಿಯವ "ಏನೂ ನನ್ನ ಹೆಣ ಅವರಿಗೆ ದಾನ" ಅಂದಾಗ ನಾ ಹೇಳೋದು "ಹೋಗೋ ನಿನ್ನ ಹೆಣ ಸುಡುಗಾಡಿಗೆ ದಾನ " ಇದನ್ನು ಮುತ್ತುರಾಜ ನೆನೆಸಿಕೊಂಡು ನೆನೆಸಿಕೊಂಡು ನಗುತ್ತಲೇ ಇರುತ್ತಾನೆ..
ಬಂಗಾರದ ಮನುಷ್ಯ
ರಾಚೂಟಪ್ಪನ ಪಾತ್ರದಲ್ಲಿ ನಾ ಸಿನೆಮಾದ ಅಂತಿಮ ದೃಶ್ಯದಲ್ಲಿ ಹೇಳೋದು "ರಾಜೀವಪ್ಪ ನೀವು ನನ್ನ ಸ್ನೇಹ ಕಳೆದುಕೊಳ್ಳೋಲ್ಲ ಅಂತ ಹೇಳಿದ್ರಿ.. ಇವತ್ತು ನಾನು ನಿಮ್ಮ ಸ್ನೇಹ ಕಳೆದುಕೊಂಡೆನೋ.. ಅಥವ ನೀವು ನನ್ನ ಸ್ನೇಹ ಕಳೆದುಕೊಂಡಿರೋ ಗೊತ್ತಿಲ್ಲ.. ಆದರೆ ಎಲ್ಲೇ ಇರಿ ಹೇಗೆ ಇರಿ ಈ ಊರು ಚೆನ್ನಾಗಿರಲಿ ಅಂತ ಹರಸಿ ನಿಮ್ಮಂಥವರ ಹಾರೈಕೆ ಇಂದಿಗೂ ಸುಳ್ಳಾಗೋಲ್ಲ.. ನಿಮ್ಮ ಆಶೀರ್ವಾದದ ಅಡಿಯಲ್ಲಿ ಈ ಹಳ್ಳಿ ಸುಭಿಕ್ಷವಾಗಿರುತ್ತೆ.. .. ಇದಕ್ಕೆ ಮುತ್ತುರಾಜ ಹೇಳ್ತಾ ಇದ್ದಾ.. ಬಾಲಣ್ಣ ಇಡೀ ಚಿತ್ರದ ಸಾರಾಂಶವನ್ನು ಆ ಕಡೆ ದೃಶ್ಯದಲ್ಲಿ ಎಷ್ಟು ಗಾಢವಾಗಿ ಹೇಳಿದ್ದೀರ.. ಇಡೀ ಚಿತ್ರದ ಸತ್ವವನ್ನು ಆ ಸಂಭಾಷಣೆಯಲ್ಲಿ ಅರೆದು ಕುಡಿದಿದ್ದೀರಿ.. ಇದಲ್ಲವೇ ಒಬ್ಬ ಕಲಾವಿದ ಇನ್ನೊಬ್ಬ ಕಲಾವಿದನಿಗೆ ಕೊಡುವ ಗೌರವ
ಭಾಗ್ಯದ ಲಕ್ಷ್ಮಿ ಬಾರಮ್ಮ
ತರಲೆ ತಮ್ಮಯ್ಯ ಅಂತಾನೆ ಪ್ರಸಿದ್ಧಿ ಈ ಸಿನಿಮಾದಲ್ಲಿ.. ಒಂದು ಸಂಭಾಷಣೆ "ಪಾಂಡು ಪಾಂಡು ನಿನ್ನ ತರಹನೇ ಇನ್ನೊಬ್ಬನನ್ನು ನೋಡಿದೆ.. ಇದೆ ಮುಖ, ಇದೆ ನಗು, ಇದೆ ಮೂಗು.. ಇದೆ ಮೈ ಕಟ್ಟು .. " ಅಂಥ.. ಆದರೆ ನಾ ಹೇಳೋದು.. ಇನ್ನೊಬ್ಬ ಮುತ್ತುರಾಜ ಬರೋಕೆ ಸಾಧ್ಯವೇ ಇಲ್ಲ.. ಭಗವಂತ ಶತಮಾನಗಳ ಕಾಲ ತಪಸ್ಸು ಮಾಡಿ ಸೃಷ್ಟಿಸಿರುವ ಅನರ್ಘ್ಯ ರತ್ನ ನಮ್ಮ ಮುತ್ತುರಾಜ.. ಈ ಚಿತ್ರದ ಒಂದು ಇನ್ನೊಂದು ಸಂಭಾಷಣೆ ಅವನಿಗೆ ಬಲು ಇಷ್ಟ "ಪಾಂಡು ದಾಸನ, ಪುರಂದರ ರಂಗನಾ" ಅಂತ ನಾನು ನಿಂತಲ್ಲೇ ನೃತ್ಯ ಮಾಡೋದು.. ಎಷ್ಟು ಸೊಗಸಾಗಿ ಅಭಿನಯಿಸುತ್ತೀರಾ ಬಾಲಣ್ಣ ಅಂತ ಬೆನ್ನು ತಟ್ಟುತ್ತಲೇ ಇರುತ್ತಿದ್ದ.. .
ಹೀಗೆ ಹತ್ತಾರು ಸಿನಿಮಾಗಳು ಪಟ್ಟಿ ಮಾಡುತ್ತಾ ಹೋದರೆ ಮುಗಿಯದ ಕತೆಯದು.. ನೀನು ಹೇಳಿದ ಹಾಗೆ ಭಗವದ್ಗೀತೆ, ಮಂಕುತಿಮ್ಮನ ಕಗ್ಗದ ಹಾಗೆ ಮುತ್ತುರಾಜನ ಸಿನಿಮಾಗಳು ಕೂಡ ಕಲಿಯುವ ಅನೇಕಾನೇಕ ಪಾಠಗಳು, ಪಾತ್ರಗಳು ಇವೆ.. ಮುತ್ತುರಾಜನ ಪ್ರತಿಯೊಂದು ಚಿತ್ರವೂ ಒಂದೊಂದು ಕಲಿಕಾ ಪಾಠವಿದ್ದಂತೆ ಕಣಪ್ಪ..
ಬಾಲಣ್ಣ ಒಂದಷ್ಟು ಚಿತ್ರಗಳಿಂದ ಆಯ್ದ ಸಂಭಾಷಣೆಗಳಿಂದ.. ಎಷ್ಟು ಸುಂದರವಾಗಿ ಅಣ್ಣಾವ್ರ ಬಗ್ಗೆ ಹೇಳಿದ್ದೀರಿ ಅದ್ಭುತವಾಗಿದೆ.. ನಿಮ್ಮ ಮಾತುಗಳು..
ಮುತ್ತುರಾಜನೂ ಕೂಡ ಶತಮಾನದ ಅದ್ಭುತ ಕಣಪ್ಪ.. ಇವತ್ತು ಅವನ ಜನುಮದಿನ ನಮ್ಮೆಲ್ಲರ ಪ್ರೀತಿಯ ಮುತ್ತುರಾಜನಿಗೆ ಒಂದು ಶುಭಾಶಯ ಹೇಳೋಣ ಅಲ್ವೇನಪ್ಪಾ..
ಹೌದು ಬಾಲಣ್ಣ.. ಅಣ್ಣಾವ್ರಿಗೆ ಜನುಮದಿನದ ಶುಭಾಶಯಗಳು ಹಾಗೆ ನಿಮಗೆ ಧನ್ಯವಾದಗಳು
ವಾಹ್ ಸೂಪರ್ ಆಗಿದೆ ಶ್ರೀ 😍🥰❤ ಅದ್ಭುತವಾದ ಬರೆಹ 👌🏻👍🏻👍🏻
ReplyDeleteಧನ್ಯವಾದಗಳು ಗುರುಗಳೇ
Deleteತುಂಬಾ ಚೆನ್ನಾಗಿದೆ ನಿಮ್ಮ ಈ ಸಂಕಲನ 🙏🏻👌🏻
ReplyDeleteಧನ್ಯವಾದಗಳು ಸರೋಜಾ ಮೇಡಂ
Delete