ಅಣ್ಣಾವ್ರು ಯಾಕೋ ತ್ರಾಸದಾಯಕ ಶತಪಥ ಹೆಜ್ಜೆ ಹಾಕುತ್ತಿದ್ದರು.. ಯಾಕೋ ಅರಿವಿಲ್ಲ ಮನಸ್ಸು ತುಮುಲದಿಂದ ಕೂಡಿತ್ತು.. ಅದನ್ನು ಗಮನಿಸಿದ ಅವರ ಮಡದಿ ಬನ್ನಿ ಆ ಮರದ ಹತ್ತಿರ ಕೂತು ಮಾತಾಡೋಣ ಎಂದು ಬಲವಂತವಾಗಿ ಅಣ್ಣಾವ್ರನ್ನು ಆಲದ ಮರದ ಬಳಿ ಕರೆದೊಯ್ದರು..
ನೋಡಿ ನೀವು ಸಾವಿರಾರು ಗೀತೆಗಳನ್ನು ಹಾಡಿದ್ದೀರಾ, ನಿಮಗೆ ಮೆಚ್ಚುಗೆಯಾದ ಕೆಲವು ಗೀತೆಗಳ ಬಗ್ಗೆ ಹೇಳಿ.. ಅದನ್ನು ನೀವು ಹಾಡಿರಬಹುದು, ಅಥವ ನಿಮಗೆ ಬೇರೆಯವರು ಹಾಡಿರಬಹುದು.. ಹೇಳಿ ಅದರ ಬಗ್ಗೆ
ಅಣ್ಣಾವ್ರ ಮುಖದ ಮೇಲಿದ್ದ ಗೆರೆಗಳು ಕೊಂಚ ಕಡಿಮೆಯಾದವು..
ಪಾರ್ವತೀ ಗಂಧದ ಗುಡಿಯ "ನಾವಾಡುವ ನುಡಿಯೇ" ಹಾಡು ನನ್ನ ಮನಸ್ಸಿಗೆ ಬಲು ಇಷ್ಟ.. ಕಾರಣ ಅದು ನನ್ನ ಮನಸ್ಸಿಗೆ ತುಂಬಾ ಇಷ್ಟವಾದ ಹಾಡೂ ಕೂಡ.. ಅದರಲ್ಲೂ ನನ್ನ ಶಾರೀರವೇ ಆಗಿರುವ ಪಿ ಬಿ ಶ್ರೀನಿವಾಸ್ ಅವರು ಎಂಥಹ ಸೊಗಸಾದ ಹಾಡುಗಾರಿಕೆ.. ನಮ್ಮ ಇಂಪಾದ ಸಂಗೀತದ ಪಿತಾಮಹ ರಾಜನ್ ನಾಗೇಂದ್ರ ಅವರ ಸರಳ ಸುಂದರ ಸಂಗೀತ.. ನಮ್ಮ ಉದಯಶಂಕರ್ ಅವರ ಅದ್ಭುತ ಸಾಹಿತ್ಯ ಮನಸ್ಸಿಗೆ ಬಲು ಇಷ್ಟ..
ಅದರಲ್ಲೂ "ಹಸಿರಿನ ಬನಸಿರಿಯೇ ಒಲಿದು" ಈ ಸಾಲುಗಳನ್ನು ಪಿ ಬಿ ಎಸ್ ಹಾಡಿರುವ ಶೈಲಿ ಎಷ್ಟು ಅದ್ಭುತವಾಗಿದೆ ಎಂದರೆ.. ನನಗೆ ಇಷ್ಟವಿರದಿದ್ದರೂ ನನ್ನಿಂದ ಹಾಡಿಸಿದ ಇದೆ ಹಾಡಿನಲ್ಲಿ ಆ ಮಟ್ಟಕ್ಕೆ ಹಾಡಲು ಸಾಧ್ಯವಾಗಲೇ ಇಲ್ಲ.. "ಸೌಂದರ್ಯ ಸರಸತಿ ಧರೆಗಿಳಿದು"... ಅಬ್ಬಬ್ಬಾ ಎಷ್ಟು ಅದ್ಭುತ ಸಾಲುಗಳು.. "ಈ ಕಂಗಳು ಮಾಡಿದ ಪುಣ್ಯವೋ" ನಮ್ಮ ಶ್ರೀನಿವಾಸ್ ಅವರಿಗೆ ಒಂದು ದೊಡ್ಡ ನಮಸ್ಕಾರಗಳು.. ಇಂತಹ ಸುಂದರ ಹಾಡು .. ನನಗೆ ಒದಗಿ ಬಂದಿದೆ ಎಂದರೆ ಅದು ನನ್ನ ಪುಣ್ಯವೇ ಹೌದು..
"ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ"
ಉದಯಶಂಕರ್ ಪದಗಳ ಜಾದೂ ನೋಡು.. ಅದ್ಭುತ ಅದ್ಭುತ ಮತ್ತೊಮ್ಮೆ ರಾಜನ್ ನಾಗೇಂದ್ರ ಬರುತ್ತಾರೆ.. ಆ ಮೃದಂಗ, ಕೊಳಲು, ತಬಲಾ ಇವುಗಳ ಸಮ್ಮಿಶ್ರಣ.. ಒಹೋ ಎನಿಸುವಂತೆ ಮಾಡುತ್ತದೆ ಪಾರ್ವತೀ.. ಅದರಲ್ಲೂ ಈ ನಿರ್ದೇಶಕರು ನನ್ನನ್ನು ಕರುನಾಡ ಭೂಪಟದಲ್ಲಿ ತೋರಿಸಿದ್ದು.. ಎಲ್ಲೋ ಒಮ್ಮೆ ಮಕ್ಕಳು ಟಿವಿ ನೋಡುತ್ತಿದ್ದಾಗ ನೋಡಿದ್ದ ನೆನಪು.. ಎಷ್ಟು ಸುಂದರ ಅನುಭವ.. ಕರುನಾಡಿನಲ್ಲಿ ನಾ ಹುಟ್ಟಿದ್ದೇ ಒಂದು ಪುಣ್ಯ.. ಅದರಲ್ಲಿ ಆ ಭೂಪಟದಲ್ಲಿ ನನ್ನನ್ನು ಸೇರಿಸಿ ತೋರಿಸಿದ್ದು.. ಧನ್ಯನಾದೆ ಅಂತ ಹೇಳಬಹುದು..
"ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೋ ನುಡಿಗಳಂತೆ.
ಕಂಗಳೆರಡೂ ದುಂಬಿಯಾಗಿ ಭ್ರಮರ ಗೀತೆ ಹಾಡಿದಂತೆ"
ಏನು ಹೇಳಲಿ ಇಂತಹ ಹಾಡುಗಳನ್ನು ಹಾಡಲು ನಾ ಪುಣ್ಯ ಮಾಡಿದ್ದೇನೋ ಅಥವ ಭಗವಂತನ ಲೀಲೆಯೋ ಒಂದು ಅರ್ಥವಾಗುತ್ತಿಲ್ಲ..ಗಜಲ್ ರೂಪದ ಈ ಹಾಡನ್ನು ನನ್ನ ಬಳಿ ಹಾಡಿಸಿಯೇ ತೀರಬೇಕೆಂದು ಹಠ ಹಿಡಿದು ಹಾಡಿಸಿದ ನಮ್ಮ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಅವರಿಗೆ ಏನು ಹೇಳಲಿ.. ಅವರೇ ನಿರ್ದೇಶಕ ಅವರೇ ಸಂಗೀತ ನಿರ್ದೇಶಕ.. ನಮ್ಮ ಉದಯಶಂಕರ್ ಹೇಗೆ ಬರೆದರೂ ಸೊಗಸು..
ನಮ್ಮ ಪಂತುಲು ಇಲ್ಲವೇ ಅವರ ಆಸ್ಥಾನದ ಸಂಗೀತ ಗಾರುಡಿಗ ಟಿ ಜಿ ಲಿಂಗಪ್ಪ ಅವರು ಸಾಮಾನ್ಯ ವ್ಯಾಪಾರೀ ಚಿತ್ರಗಳಿಗೆ ಸಂಗೀತ ನೀಡಿದರು.. ನಮ್ಮ ಸಂಸ್ಥೆಯ ಚಿತ್ರವೊಂದಕ್ಕೆ "ಎಂಥ ಸೊಗಸು ಮಗುವಿನ ಮನಸ್ಸು" ಹಾಡಿಗೆ ಆರಂಭದ ಸಂಗೀತ ವಾದ್ಯ ಸಂಯೋಜನೆ ಬಲು ಇಷ್ಟ.. ಈ ರೀತಿಯ ಸಂಗೀತ ನನ್ನ ಚಿತ್ರಗಳಲ್ಲಿ ಬಲು ಅಪರೂಪ.. ಉದಯಶಂಕರ್ ಹೇಗೆ ಬರೆದರೂ ನನಗೆ ಇಷ್ಟವಾಗುವ ಹಾಗೆ ಬರೆಯುತ್ತಾರೋ ಅಥವ ಅವರು ಬರೆದದ್ದು ನನಗೆ ಇಷ್ಟವಾಗುತ್ತದೋ ಭಗವಂತನೇ ಬಲ್ಲ..
ಕರುನಾಡೇ ನನ್ನ ಅಣ್ಣ ಅಂದರೆ.. ನೋಡು ಇವನೊಬ್ಬ ಮಾತ್ರ ತಮ್ಮಯ್ಯ ಅಂತ ಕರೀತಿದ್ದ ನಮ್ಮ ಜಿ ಕಿ ವೆಂಕಟೇಶ್.. ಲೋ ತಮ್ಮಯ್ಯ ನಿನಗೆ ಪಾಶ್ಚಾತ್ಯ ವಾದ್ಯಗಳ ಹಿಮ್ಮೇಳ ಸಂಗೀತ ಕೊಡುತ್ತೇನೆ.. ಹಾಡಿ ಬಿಡು.. ಅಂದ.. ಅದೇ ಜೋಶಿನಲ್ಲಿ ಹಾಡಿದ್ದು "ಇಫ್ ಯು ಕಮ್ ಟುಡೇ".."ಅಲ್ಲಿ ಇಲ್ಲಿ ನೋಡುವೆ ಏಕೆ" .. ಎಷ್ಟೊಂದು ವಾದ್ಯಗಳು.. ಅದರ ಹಾಡುಗಾರಿಕೆ.. ಬಲು ಇಷ್ಟವಾಯ್ತು..
"ಹೇಗಿದೆ ಈಗ ನಿಮ್ಮ ಮನಸ್ಸು.. "
"ಪಾರ್ವತೀ ಸಂಗೀತ ಒಂದು ಮಾಂತ್ರಿಕ ದಂಡ.. ಅದೇ ನನ್ನ ಮನಸ್ಸು ಹಸಿರಾಗಿಸಿದ್ದು.. ನಿನಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಪಾರ್ವತೀ.. ನೀನು ಮಾತಾಡಿಸಿದೆ.. ನನ್ನ ಮನಸ್ಸು ಹಗುರಾಗಿಸಿತು.. "
"ಹೌದು ಕಣ್ರೀ.. ನೀವು ಭುವಿಯನ್ನು ಬಿಟ್ಟು ಬಂದ ದಿನ.. ಅದಕ್ಕೆ ಲೇಖನ ಓದಬೇಕಿತ್ತು.. ಆದರೆ ಯಾಕೋ ತಡವಾಯಿತು.. ಅದಕ್ಕೆ ನಿಮ್ಮನ್ನು ಮಾತಾಡಿಸುತ್ತಾ ಹಾಗೆ ಲೇಖನ ನಿಮಗೆ ಓದಿದೆ. "
"ನಾದಮಯ ಈ ಲೋಕವೆಲ್ಲಾ ನಾದಮಯ ಪಾರ್ವತೀ"
******
No comments:
Post a Comment