Sunday, February 4, 2024

ಮನ ಮನವನ್ನು ಗಟ್ಟಿಯಾಗಿಟ್ಟುಕೊಂಡಾಗ ಮನೆ ಎಂದಿಗೂ ಮುರಿಯೋದಿಲ್ಲ - ಮುರಿಯದ ಮನೆ (1964 (ಅಣ್ಣಾವ್ರ ಚಿತ್ರ ೫೫/೨೦೭)

ಕೆಲವೊಮ್ಮೆ ಹೀಗಾಗುತ್ತದೆ.. ರಸ್ತೆಗಳು ಏರು ಪೆರು ಇರುತ್ತದೆ.. ಹತ್ತಿದ ಮೇಲೆ ಇಳಿಯುತ್ತದೆ.. ಇಳಿದ ಮೇಲೆ ಹತ್ತುತ್ತದೆ. ಆದರೆ ಆ ಅನುಭವ ಸೊಗಸಾಗಿರುತ್ತದೆ.. ಕಳೆದ ಕೆಲವು ಚಿತ್ರಗಳು ರಾಜಕುಮಾರ್ ಅವರ ಪ್ರತಿಭೆಯನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದವು.. ಆದರೆ ಅವರ ಪ್ರತಿಭೆಯನ್ನು ಪೂರ್ಣ ಪ್ರಮಾಣದದಲ್ಲಿ ಬಳಸಿಕೊಳ್ಳುವ ಶಕ್ತಿ ಕಥೆಯಲ್ಲಿ ಇತರ ಪಾತ್ರಗಳಿಗೆ ಇದ್ದಷ್ಟು ರಾಜಕುಮಾರ್ ಅವರ ಪಾತ್ರಕ್ಕೆ ಇರಲಿಲ್ಲ..  ಆದರೂ ಅವರ ಪಾತ್ರದ ಬಗ್ಗೆ ಅವರ ಶ್ರದ್ಧೆ ನಿಜಕ್ಕೂ ಶ್ಲಾಘನೀಯವಾಗಿತ್ತು.. 


ಮುರಿಯದ ಮನೆ.. ರಾಜಕುಮಾರ್ ಅವರು ಮತ್ತೆ ಪೂರ್ಣ ಪ್ರಮಾಣದಲ್ಲಿ ಫಾರಂ ಗೆ ಬಂದ ಚಿತ್ರ.. ಹಳ್ಳಿಯ ಹೈದನಾಗಿ, ಆರೋಗ್ಯವಾಗಿದ್ದರೂ ಬಾಲ್ಯದಲ್ಲಿ ಆದ ಅಪಘಾತದಿಂದ ಅವರ ಒಂದು ಕೈ ಒಂದು ಕಾಲು ಸ್ವಾಧೀನ ತಪ್ಪಿರುತ್ತದೆ.. ಕುಂಟುತ್ತಾ ನೆಡೆಯುವುದೇ ಬದುಕಾಗಿರುತ್ತದೆ. ಆ ಅಂಗವಿಹೀನತೆಯನ್ನು ಚಿತ್ರದುದ್ದಕ್ಕೂ ಅಭಿನಯಿಸುವ ಮತ್ತು ಒಂದು ದೃಶ್ಯವೂ ಕೂಡ ಅದರಲ್ಲಿ ಅವರ ನೆಡೆ ಬದಲಾಗೋದಿಲ್ಲ.. ಕೈಯ ಬೆರಳು ತಿರುಟಿಕೊಂಡಿರೋದು ಹಾಗೆ ಇಟ್ಟುಕೊಂಡು ಚಿತ್ರದುದ್ದಕ್ಕೂ ಅಭಿನಯಿಸಿದ್ದಾರೆ. ನೆಡೆಯುವಾಗ ಒಂದು ಕಾಲನ್ನು ಹಿಂಗಾಲಿನಿಂದಲೇ ನೆಡೆಯುವುದು ಅದ್ಭುತವಾಗಿದೆ. ಪಾತ್ರದೊಳಗೆ ತನ್ಮಯತೆಯಿಂದ ನುಗ್ಗುವುದು ಮತ್ತು ಅದರಲ್ಲಿ ಯಶಸ್ವಿಯಾಗಿರೋದು ಅವರ ಕಲೆಯ ಮೇಲಿನ ಶ್ರದ್ಧೆಯನ್ನು ತೋರಿಸುತ್ತದೆ. 


ಹಳ್ಳಿಯ ಮಾತಿನ ದಾಟಿ, ಅದರ ಅನುಭವ.. ಹಳ್ಳಿಯಲ್ಲಿ ಕಾಣುವ ಅನ್ಯಾಯವನ್ನು ಪ್ರತಿಭಟಿಸುವ ರೀತಿ ಪಕ್ಕ ಪರಾಕಾಯ ಪ್ರವೇಶ ಮಾಡಿದ್ದಾರೆ. ಚಿತ್ರದುದ್ದಕ್ಕೂ ಬಹುಶಃ ಪ್ರತಿದೃಶ್ಯದಲ್ಲಿಯೂ ಕಾಣುವ ರಾಜಕುಮಾರ್ ಅವರ ಅಭಿನಯವನ್ನು ನೋಡುವುದೇ ಒಂದು ಹಬ್ಬ.. ಪ್ರತಿದೃಶ್ಯದಲ್ಲಿಯೂ ಅವರ ಅಭಿನಯ ಒಂದು ಪಾಠಶಾಲೆ ಎನ್ನಬಹುದು.. ನಗು, ಅಳು, ಸಿಟ್ಟು, ಬೇಸರ, ಕೂಗಾಟ ಎಲ್ಲವೂ ಪಶ್ಚಿಮಘಟ್ಟಗಳಲ್ಲಿ ಪ್ರತಿ ತಿರುವಿನಲ್ಲೂ ಬದಲಾಗುವ ಹವಾಮಾನದಂತೆ ಅವರ ಅಭಿನಯ ಸೊಗಸಾಗಿದೆ. 

ಅವರು ತಾನು ಹೆಳವ ತನಗೆ ಯಾರು ಹೆಣ್ಣು ಕೊಡುತ್ತಾರೆ.. ಆ ಹೆಣ್ಣಿನ ಬಾಳನ್ನು ಯಾಕೆ ಹಾಳು ಮಾಡಬೇಕು ಎನ್ನುವುದನ್ನು ನಿರೂಪಿಸಲು ಅತ್ತ ಕಡೆಯಿಂದ ಇತ್ತ ಕಡೆ ಇತ್ತಕಡೆಯಿಂದ ಅತ್ತ ಕಡೆ ಓಡಾಡಿ ತೋರಿಸುವ ಅಭಿನಯ ಮಂತ್ರಮುಗ್ಧರನ್ನಾಗಿಸುತ್ತದೆ. ಅವರ ದೊಡ್ಡಮ್ಮನ ಪಾತ್ರಧಾರಿ ಪಾಪಮ್ಮ ರಾಜಕುಮಾರ್  ಅವರ ಅಂಗವಿಹೀನತೆಯನ್ನು ಎತ್ತಿ ತೋರಿಸುತ್ತಾ ಹುಟ್ಟುವ ಮಗು ಕೂಡ ಹಾಗೆ ಇರುತ್ತದೆ ಎನ್ನುವ ಮಾತನ್ನು ನೆನಪಿಸಿಕೊಂಡು ಆಗ ತಾನೇ ಜನಿಸಿದ ಮಗುವನ್ನು ನೋಡಲು ಬಂದು ಮೊದಲು ಆ ಮಗುವಿನ ಕೈಯನ್ನು ಕಾಲನ್ನು ಎತ್ತಿ ಪರೀಕ್ಷಿಸುವ ದೃಶ್ಯದಲ್ಲಿ ಅಕ್ಷರಶಃ ಕಣ್ಣೀರಾಗುತ್ತಾರೆ. ಅಂತಿಮ ದೃಶ್ಯದಲ್ಲಿ ವಿದ್ಯುತ್ ಹರಿದು ಕೈ ಕಾಲು ಎರಡೂ ಸರಿಹೋದಾಗ ಅಬ್ಬಬ್ಬಾ ಎಂದು ಕುಣಿಯುವ ಪರಿ ಸೂಪರ್.. 

ಒಟ್ಟಿನಲ್ಲಿ ಇದೊಂದು ರಾಜಕುಮಾರ್ ಅವರ ಚಿತ್ರವಾಗಿದೆ ಎಂದು ಅದ್ಭುತವಾಗಿ ತೋರಿಸಿದ್ದಾರೆ. 

ಅಶ್ವಥ್ ಹಳ್ಳಿಯ ಗೌಡನ ಪಾತ್ರದಲ್ಲಿ ಪ್ರತಿಕ್ಷಣವೂ ಮನೆಯ ಯಜಮಾನ ಹೇಗಿರಬೇಕು.. ಹೇಗೆ ಎಲ್ಲರನ್ನೂ ಸಲಹಬೇಕು.. ಒಡಹುಟ್ಟಿದ ಕುಟುಂಬವನ್ನು ಹೇಗೆ ಕಾಪಾಡಬೇಕು ಎಂದು ಅದ್ಭುತವಾಗಿ ತೋರಿಸಿದ್ದಾರೆ. ಹೆಂಡತಿ ಘಟವಾಣಿಯಾಗಿದ್ದರೂ ತಾನು ತನ್ನ ಸಹೋದರನ ಕುಟುಂಬವನ್ನು ಆತನ ಮನೆಯ ಸದಸ್ಯರನ್ನೂ ಉಪಚರಿಸಿಯುವ ರೀತಿ, ಕ್ಷೇಮವನ್ನು ನೋಡಿಕೊಳ್ಳುವ ರೀತಿ ಸುಂದರವಾಗಿದೆ. ಘಟವಾಣಿ ಹೆಂಡತಿಗೆ ಒಮ್ಮೆ ಮಚ್ಚಿನಿಂದ ಹೊಡೆಯಲು ಹೋಗುವುದು.. ಇನ್ನೊಮ್ಮೆ ಹೆಂಡತಿ ತನ್ನನ್ನು ದರದರನೆ ಎಳೆದುಕೊಂಡು ಹೋಗುವಾಗ ಎಡವಿ ಬೀಳುವ ಹಾಗೆ ಅಭಿನಯಿಸೋದು ಆಹಾ..  ಪ್ರತಿಕ್ಷಣವೂ ತಮ್ಮ ಮನೆಗೆ ಮಿಡಿಯುವ ಅವರ ಮನಸ್ಸು.. ಅಭಿನಯ ನಿಜಕ್ಕೂ ಚಿತ್ರದುದ್ದಕ್ಕೂ ಗಮನಾರ್ಹವಾಗಿದೆ. 

ಪಾಪಮ್ಮ ಘಟವಾಣಿ ಎಂದರೆ ಹೀಗಿರಬೇಕು ಎಂದು ಪ್ರತಿದೃಶ್ಯದಲ್ಲೂ ಕಾಡುತ್ತಾರೆ. ಗಂಡನ ಪಾತ್ರಧಾರಿ ಅಶ್ವಥ್ ಅವರನ್ನು ಹುರಿದು ಮುಕ್ಕುವ ಪಾತ್ರ ಅದ್ಭುತವಾಗಿದೆ.. ಇತ್ತ ಕಡೆ ನಗೆ ಹುಟ್ಟಿಸುತ್ತದೆ. ಇತ್ತ ಕಡೆ ಅಣ್ಣನ ಮಗನ ಕುಹಕ ಮಾತುಗಳು, ಮತಿಹೀನ ಉಪಾಯಗಳು, ಮನೆಮುರಿಯುವ ಸಾಧಕಗಳು ಎಲ್ಲವನ್ನೂ ಕೇಳಿಕೊಂಡು ಅದರ ಪ್ರಕಾರ ರಾಕ್ಷಸಿಯಾಗುವ ಪಾತ್ರದಲ್ಲಿ ಪಾಪಮ್ಮ ಮಸ್ತ್ ಅಭಿನಯ ನೀಡಿದ್ದಾರೆ. ಅದರಲ್ಲೂ ಮೊದಲ ದೃಶ್ಯದಲ್ಲಿ ತಮ್ಮ ತವರುಮನೆಯ ಹೆಮ್ಮೆಯನ್ನು ಹೇಳುವ ಉದ್ದನೆಯ ಸಂಭಾಷಣೆಯನ್ನು ಒಂದೇ ದೃಶ್ಯದಲ್ಲಿ ಚಿತ್ರೀಕರಿಸುವ ರೀತಿ ಮತ್ತು ಅವರ ಅಭಿನಯ ಅದ್ಭುತ. 

ಸಾಮಾನ್ಯ ಅಬ್ಬರಿಸುವ ಖಳನ ಪಾತ್ರ.. ನಾಯಕನ ಪಾತ್ರದಲ್ಲಿ   ಕಾಣುತಿದ್ದ ಉದಯಕುಮಾರ್ ಅವರು ಇಲ್ಲಿ ಬಹುತೇಕ ಸೌಮ್ಯ ಪಾತ್ರ.. ಬೇಡ ಬೇಡವೆಂದರೂ ಮದುವೆಯಾಗುವ ನಿರ್ಧಾರ ಹೊತ್ತ ಮಗನನ್ನು ದಂಡಿಸುವಾಗ ಮಾತ್ರ ಉದಯಕುಮಾರ್ ಅಬ್ಬರಿಸುವ ಪರಿ ಸೊಗಸು. ಇಡೀ ಚಿತ್ರದಲ್ಲಿ ಸೌಮ್ಯವಾಗಿಯೇ ಮಾತಾಡುವ ಉದಯಕುಮಾರ್ ಅವರ ಅಭಿನಯವೂ ಸುಂದರ. 


ಕನ್ನಡಿಗರ ಚಿತ್ರ ಪ್ರೇಮಿಗಳ ತಾಯಿ ಪಂಡರೀಬಾಯಿಯವರು ಮಮತಾಮಯಿ ಪಾತ್ರ. ಒಬ್ಬ ಮಗ ಅಂಗವಿಹೀನ.. ಇನ್ನೊಬ್ಬ ಮಗ ಹೆತ್ತ ಕರುಳಿಗೆ ಬೆಂಕಿ ಇಡುವ ಇನ್ನೊಬ್ಬ ಮಗ.. ಜೊತೆಗೆ ನಾದಿನಿಯ ರಾಕ್ಷಸೀ ಪ್ರವೃತ್ತಿ.. ಈ ಎಲ್ಲವನ್ನೂ ಮೇಳೈಸಿಕೊಂಡು ಸಂಯಮದ ಅಭಿನಯದ ನೀಡಿರುವುದು ಗಮನಾರ್ಹ. ತನ್ನ ಅಂಗವೀಹಿನ ಮಗನನ್ನು ತನ್ನ ನಾದಿನಿ ಪಾಪಮ್ಮ ಶಪಿಸಿದಾಗ ಕಣ್ಣೀರಾಗುವ ಅವರ ಪಾತ್ರ ಮನಸ್ಸನ್ನು ಕರಗಿಸುತ್ತದೆ. 



ತಮ್ಮನ ಪಾತ್ರಧಾರಿ ಮತ್ತು ಆತನ ಮಡದಿಯ ಪಾತ್ರಧಾರಿಗಳು ಸಿನಿಮಾದ ಕಥೆಗೆ ತಕ್ಕಂತೆ ಪಾತ್ರಾಭಿನಯ ಮಾಡಿದ್ದಾರೆ.. 


ನರಸಿಂಹ ರಾಜು ಇಲ್ಲಿ ಒಂದು ರೀತಿಯಲ್ಲಿ ಅತಿಥಿ ಪಾತ್ರ.. ಸದಾ ಅವರ ಯಜಮಾನರ ಸುತ್ತಲೇ ಸುತ್ತುವ ಮಾಸ್ಟರ್ ಮಾಸ್ಟರ್ ಎನ್ನುವುದಕ್ಕೆ ಸೀಮಿತವಾಗಿದೆ.. ಮತ್ತು ಕೆಲವು ಮಾತುಗಳು ಆ ಸಂದರ್ಭಕ್ಕೆ ನಗು ಉಕ್ಕಿಸುತ್ತದೆ... ಆದರೆ ಅವರ ಯಜಮಾನರ ಅಬ್ಬರದಲ್ಲಿ ಇವರ ಮಾತುಗಳು ಗೌಣವಾಗುತ್ತವೆ.. 

ಜಯಂತಿ ಸಂಯಮದ ಪಾತ್ರ.. ಇತ್ತ ಅತ್ತೆ ಮಾವರನ್ನು ಸಂಭಾಳಿಸುತ್ತ, ಪತಿರಾಯನ ಅಂಗವಿಹೀನತೆಯನ್ನು ಆತನಿಗೆ ಬೇಸರವಾಗದಂತೆ ನೋಡಿಕೊಳ್ಳುವ ರೀತಿ, ಸಂಯಮದ ರೀತಿಯಲ್ಲಿ ಮಾತಾಡುವ, ಕೆಲವು ದೃಶ್ಯಗಳಲ್ಲಿ ಕಣ್ಣಲ್ಲಿಯೇ ಮಾತಾಡುವ ರೀತಿ ಇಷ್ಟವಾಗುತ್ತದೆ. ತನ್ನ ಪತಿಗೆ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎನ್ನುವಾಗ ಅವರ ಮುಖಾಭಿನಯ ಸೊಗಸಾಗಿದೆ. 


ಬಾಲಣ್ಣ.. ಅಬ್ಬಬ್ಬಾ ಒಂದು ವಿಶ್ವವಿದ್ಯಾಲಯ ಬೆಳೆಯುತ್ತಿರುವ ಸೂಚನೆ ಈ ಚಿತ್ರದಲ್ಲಿ.. ಕಣ್ತೆರೆದು ನೋಡು, ಚಂದವಳ್ಳಿಯ ತೋಟ ಈ ಚಿತ್ರಗಳಲ್ಲಿ ಅದ್ಭುತವಾಗಿ ತಮ್ಮ ಪ್ರತಿಭೆಯನ್ನು ಮೆರೆದಿದ್ದ ಬಾಲಣ್ಣಇಲ್ಲಿಯೂ ಕೂಡ ಅದ್ಭುತವಾಗಿ ಮಿಂಚಿದ್ದಾರೆ. ನಗರದ ಥಳುಕು ಬಳುಕು ಮಾತುಗಳು ನ್ಯಾಯ ನಾಜೂಕು, ಸದಾ ಹೊಗೆ ಬಿಡುತ್ತಾ ಅತ್ತೆ ಅತ್ತೆ ಎಂದು ಮಾತಾಡುವ.. ಬಟ್ಲರ್ ಅಂತ ಕಿರುಚುವ ಶೈಲಿ.. ಆ ಹೋತನ ಗಡ್ಡ.. ವಯ್ಯಾರದ ನೆಡೆನುಡಿ.. ಮಾತು ಮಾತಿನಲ್ಲಿಯೂ ಟೋಪಿ ಹಾಕುವ ಮನೋಭಾವದ ರೀತಿ.. ಅದ್ಭುತವಾಗಿದ್ದಾರೆ.. 

"ಜಾಸ್ತಿ ಹಲ್ಲು ಉಜ್ಜಬೇಡ ಬ್ರದರ್ ದೇವರು ಕೊಟ್ಟಿರುವ ಪಾಲಿಶ್ ಹೊರಟುಹೋಗುತ್ತೆ"

"ನನಗೆ ಮೊದಲೇ ಗೊತ್ತಿದ್ದರೆ.. ಬೊಂಬಾಯಿಯಲ್ಲಿ ತಲೆಮಾಸಿದವನಿಗೆ ನಿನ್ನ ಕೊಟ್ಟು ಮದುವೆ ಮಾಡಿಸುತ್ತಿದ್ದ .. ಈ ರೀತಿಯ ಕೋಳಿ ಜುಟ್ಟಿನ ಮಂಗನಿಗೆ ನಿನ್ನ ಮಗಳನ್ನು ಕೊಡಬೇಡ ಅಂತ ನಿನ್ನ ಅಪ್ಪನಿಗೆ ಹೇಳ್ತಾ ಇದ್ದೆ"

"ಕಂತೆ ಕಂತೆ ನೋಟು ಗೋಣಿಚೀಲದಲ್ಲಿ ಇಟ್ಟಿದ್ದೀನಿ.. ಅದು ವಿದೇಶಿ ನೋಟುಗಳು.. ಎಕ್ಸ್ಚೇಂಜ್ ತೊಂದರೆ"

"ಅತ್ತೆ ಮೊದಲೇ ಹೇಳಿದ್ದೆ .. ಮಾವನ ತಲೆ ಕತ್ತರಿಸು ತಲೆ ಕತ್ತರಿಸು ಅಂತ"

"ಆಕಾಶದಲ್ಲಿ ವಿಮಾನ ಬಿಡ್ತಾರೆ.. ನೀರಿನಲ್ಲಿ ಹಡಗು ತೇಲಿ ಬಿಡ್ತಾರೆ.. ನೀವು ಗಂಟಲಲ್ಲಿ ಹುಯ್ಗಡುಬು ಬಿಡ್ತೀರಾ"

ಮನೆ ಭಾಗವಾಗುವಾಗ.. ಪಾತ್ರೆ ಪರಟಿಗಳನ್ನು ಆಯ್ದು ಆಯ್ದು ಚೆನ್ನಾಗಿ ಗಟ್ಟಿಯಾಗಿ ದೊಡ್ಡದಾಗಿರುವುದನ್ನು ತನ್ನ ಮನೆಗೆ ಇಟ್ಟುಕೊಂಡು ಸುಮಾರಾಗಿರುವುದನ್ನು ಆ ಮನೆಗೆ ಕೊಡುವ ದೃಶ್ಯ ಸಕತ್.. 

ಸಂಭಾಷಣಕಾರ ಬರೆದಿದ್ದಕ್ಕೆ ತಮ್ಮ ಪ್ರತಿಭೆಯನ್ನು ಸೇರಿಸಿ ಹೇಳುವ ಅವರ ಶೈಲಿ ಸೂಪರ್ ಸೂಪರ್.. 

ಹೀಗೆ ಹತ್ತಾರು ಬಾಲಣ್ಣ ವಾರ ಸಂಭಾಷಣೆಗಳು ಚಿತ್ರಕ್ಕೆ ಮಜಬೂತಾದ ಲಹರಿ ಕೊಡುತ್ತದೆ .

ಇಡೀ ಚಿತ್ರ ಈ ಮೇಲೆ ಹೇಳಿದ ಪಾತ್ರಗಳ ಸುತ್ತಲೇ ಸುತ್ತುವುದರಿಂದ.. ಕಥೆ ಆರಾಮಾಗಿ ಸಾಗುತ್ತದೆ.. ಮತ್ತೆ ಅದರ ತಿರುವುಗಳು ಅರ್ಥವಾಗುತ್ತಾ ಹೋಗುತ್ತದೆ..

ಎಂ ಎಎಸ್  ಸೊಲೈಮಲೈ ಅವರ ಕಥೆ ತಮಿಳಿನಲ್ಲಿ ಸಿನೆಮಾವನ್ನು ಆಧರಿಸಿ ತಯಾರಾದ ಚಿತ್ರವಿದು. ಇದನ್ನು ಕರ್ನಾಟಕ ಫಿಲಂಸ್ ಲಾಂಛನದಲ್ಲಿ ಜಿ  ಎಚ್ ವೀರಣ್ಣ, ಸಿ ಆರ್ ಬಸವರಾಜು ಎಸ್ ಗುರುನಾಥ್ ಸಹಭಾಗಿತ್ವದಲ್ಲಿ ತಯಾರಾದ ಈ ಸಿನೆಮಾಕ್ಕೆ ಸಂಗೀತ ನೀಡಿರುವವರು ವಿಜಯ ಕೃಷ್ಣಮೂರ್ತಿ, ಛಾಯಾಗ್ರಹಣ ಆರ್ ಮಧು ಮತ್ತೆ ನಿರ್ದೇಶನ ವೈ ಆರ್ ಸ್ವಾಮಿ ಅವರದ್ದು. 

ಗಾಯಕರ ತಂದೆ ಈ ಚಿತ್ರದಲ್ಲಿದೆ.. ಆದರೆ ಹಾಡುಗಳಿಗಿಂತ ಸಂಭಾಷಣೆ ಮತ್ತು ನಿರೂಪಣೆ ಸೊಗಸಾಗಿರುವುದರಿಂದ ಹಾಡುಗಳು ಕಥೆಯ ಓಘಕ್ಕೆ ತಕ್ಕ ಹಾಗೆ ಇದೆ. ಪಿ ಬಿ ಶ್ರೀನಿವಾಸ್, ಘಂಟಸಾಲ, ರಾಘವ, ಸುಶೀಲ, ಎಲ್ ಆರ್ ಈಶ್ವರಿ... ಇದ್ದಾರೆ. 

ಈ ಚಿತ್ರದ ಮುಖ್ಯ ಅಂಶ ಸಂಭಾಷಣೆ - ಅದರ ಹೊಣೆ ಹೊತ್ತಿರುವುದು ಕು ರ ಸೀ ಅವರದ್ದು.. ಬಾಲಣ್ಣ ಅವರ ಸಂಭಾಷಣೆ ನಿಜಕ್ಕೂ ಶಿಳ್ಳೆ ಗಿಟ್ಟಿಸುತ್ತದೆ. ಸಂಭಾಷಣೆ ಜೊತೆಗೆ ಹಾಡುಗಳು ಕೂಡ ಕು ರ ಸೀ ಅವರದ್ದೇ. 

ಒಂದು ಉತ್ತಮ ಸಂಸಾರ ಹೇಗೆ ಮೂರನೇ ವ್ಯಕ್ತಿಯ ಕುಯುಕ್ತಿಯಿಂದ ಹಾಳಾಗುತ್ತದೆ ಹಾಗೆಯೇ ಸಂಸಾರದ ಯಜಮಾನ ಗಟ್ಟಿಯಾಗಿ ನಿಂತಾಗ ಅದೇ ಮನೆ ಹೇಗೆ ಉಳಿಯುತ್ತದೆ ಎಂಬುದೇ ಈ ಚಿತ್ರದ ಸಾರ.. ಮತ್ತು ಅದನ್ನು ನಿರೂಪಿಸುವಲ್ಲಿ ಚಿತ್ರದ ನಿರ್ದೇಶಕ ಹಾಗೂ ಪಾತ್ರಧಾರಿಗಳು ಯಶಸ್ವಿಯಾಗಿದ್ದಾರೆ. 

No comments:

Post a Comment