Saturday, February 17, 2024

ಅನ್ನಪೂರ್ಣೇಶ್ವರಿಯಂತಹ ಅನ್ನಪೂರ್ಣ (1964 (ಅಣ್ಣಾವ್ರ ಚಿತ್ರ ೫೬/೨೦೭)

ಕರುನಾಡು ಚಿತ್ರರಂಗದ ಅಷ್ಟೇ ಏಕೆ  ದಕ್ಷಿಣ ಭಾರತ ಚಿತ್ರರಂಗದ ಅಮ್ಮ  ಎಂದೇ ಅಷ್ಟರ ಹೊತ್ತಿಗೆ ಖ್ಯಾತರಾಗಿದ್ದ ಪಂಡರಿಬಾಯಿ  ಅವರ ಪಾಂಡುರಂಗ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ತಯಾರಾದ  ಚಿತ್ರವಿದು. ತಮಿಳು ಸಿನಿಮಾದ ಕನ್ನಡ ಅವತರಣಿಕೆಯಾಗಿದ್ದ ಈ ಸಿನೆಮಾದ ವಿಶೇಷತೆ  ಬಾಲಕೃಷ್ಣ ಅವರ ಅತ್ಯದ್ಭುತ ಅಭಿನಯ. ಕಿರುಚಾಡದೆ, ಕೂಗಾಡದೆ ಖಳ ಛಾಯೆ ಹೊತ್ತು ಅಭಿನಯಿಸಬಹುದು ಎಂದು ತೋರಿಸಿದ್ದಾರೆ . 


ಅಜಾಗರೂಕತೆಯಿಂದ ಸಿಡಿದ ಬಂದೂಕಿನ ಗುಂಡು ಯಾರಿಗೂ ಹಾನಿ ಮಾಡದಿದ್ದರೂ, ಅದರ ಲಾಭ ಪಡೆದು ಬಂದೂಕು ಹೊಂದಿದ್ದವನನ್ನು ಕಾಡಿಸಿ ಪೀಡಿಸಿ ಹಣ ಸುಲಿಯುವ ಪಾತ್ರ.  ದೃಶ್ಯದಲ್ಲಿಯೂ ಸಿಗರೇಟಿನ ಧೂಮ ಹೊರಹಾಕುತ್ತಾ ತುಸುವೇ ನಗುತ್ತಾ ಆದರೆ ತಾನು ಮಾಡಬೇಕಾದ ಕೆಲಸ, ತಾನು ಆಡಬೇಕಾದ ಮಾತನ್ನು ನಾಟಕೀಯವಾಗಿ ಮಾತಾಡುತ್ತಾ ಕಾಡಿಸಿ ಪೀಡಿಸುವುದೇ ಹಣಗಳಿಸುವ ಹಾದಿ, ಬದುಕುವ ದಾರಿ ದಾರಿ ಎಂದು ನಂಬಿ ಬದುಕುವ ಅವರ ಪಾತ್ರಾಭಿನಯ ಅದ್ಭುತ. 

ಬಾಲಕೃಷ್ಣ  ಇಷ್ಟವಾಗುತ್ತಾರೆ ಏಕೆ ಎಂದು ಕೇಳಿದರೆ ಅವರ ನೂರಾರು ಚಿತ್ರಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ  ಚಿತ್ರಗಳಲ್ಲಿ ಇದು ಒಂದು

ಚಿತ್ರದ ನಿರ್ಮಾಪಕಿ ತಾನೇ ಆಗಿದ್ದರೂ ಉಳಿದವರ ಪಾತ್ರ ಪೋಷಣೆಗೆ ಅಗತ್ಯವಿರುವಂತೆ ಚಿತ್ರಕತೆಯಲ್ಲಿ ಸ್ಥಳ ಕೊಟ್ಟಿರುವ ಪಂಡರಿಬಾಯಿ ಅವರ ಮನಕ್ಕೆ ಒಂದು ಸಲಾಂ. 


ಅಶ್ವಥ್ ಹಾಗೂ ಪಂಡರಿಬಾಯಿಯವರ ಅಭಿನಯ ಈ ಚಿತ್ರದ ಹೈಲೈಟ್. ಸಂಯಮ ಪಾತ್ರಧಾರಿಯಾಗಿ, ನಂತರ ಚಿತ್ರ ಮುಂದುವರೆದಂತೆ ಅದಕ್ಕೆ ತಕ್ಕ ಹಾಗೆ ಅಭಿನಯ ನೀಡಿರುವ ಈ ಕಲಾವಿದರು ಕರುನಾಡ ಚಿತ್ರರಂಗದ ಅತಿ ಉತ್ತಮ ಪೋಷಕ ಪಾತ್ರಧಾರಿಗಳು. 


ಅಶ್ವಥ್ ಆ ಸೂಟುಬೂಟುಗಳಲ್ಲಿ ಮುದ್ದಾಗಿ ಕಾಣುತ್ತಾರೆ . ಸಂಭಾಷಣೆ ಹೇಳುವ ವೈಖರಿ, ಅದಕ್ಕೆ ಬೇಕಾದ ಮುಖಭಾವ, ತಾನು ಸೋತೆ ಎಂದು ತಿಳಿದಾಗ ಅವರ ಅಭಿನಯ ಸೊಗಸು. 

ಪಂಡರಿಬಾಯಿ ಇಡೀ ಚಿತ್ರವನ್ನು  ಹೆಗಲ ಮೇಲೆ ಹೊತ್ತು ನಿಂತಿದ್ದಾರೆ. ಕತೆ ಅವರ ಪಾತ್ರದ ಪಾತ್ರದ ಸುತ್ತಲೇ ಸುತ್ತುವುದರಿಂದ ಸಿನೆಮಾದ ಉದ್ದಕ್ಕೂ ಅವರು ಕಾಣಸಿಗುತ್ತಾರೆ. ಬದಲಾಗುವ ವಯೋಮಾನಕ್ಕೆ ತಕ್ಕಂತೆ ಅಭಿನಯವನ್ನು ಒಗ್ಗಿಸಿಕೊಂಡಿದ್ದಾರೆ.  ಪ್ರತಿ ಮಾತುಗಳನ್ನು ಅಳೆದು ತೂಗಿ ಮಾತಾಡುವ ಶೈಲಿ ಸೊಗಸು.     






ಉಳಿದಂತೆ ಅತಿಥಿ ಪಾತ್ರದಲ್ಲಿ ಕಲ್ಯಾಣ್  ಕುಮಾರ್, ಕಥೆಗೆ ಮುಖ್ಯ ತಿರುವು ಕೊಡುವ ಬಾಲಕೃಷ್ಣ ಅವರ ಸುಳಿಯಲ್ಲಿ  ಹಾಕಿಕೊಂಡು ಚಿತ್ರ ಕಥೆಗೆ ಮುಖ್ಯ ತಿರುವುದು ಕೊಡುವ ರತ್ನಾಕರ್ ಪಾತ್ರ. ಆರ್ ಟಿ ರಮಾ  ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. 

ಆರ್ ನಾಗೇಂದ್ರ ರಾಯರು, ರಮಾದೇವಿ, ವಿ ನಾಗಯ್ಯ, ಮೈನಾವತಿ  ಮುಖ್ಯ ಪಾತ್ರದಲ್ಲಿ ಕಾಣುತ್ತಾರೆ. 

ಹಳ್ಳಿಯಲ್ಲಿ ಸಾಗುವ ಬಸ್ಸು ಅಂಕು  ಡೊಂಕು ರಸ್ತೆಗಳನ್ನು ದಾಟುವ ತನಕ ಮೆಲ್ಲಗೆ ಸಾಗುತ್ತ ಮುಖ್ಯ ಹೆದ್ದಾರಿಗೆ ಬಂದಾಗ ಬಸ್ಸು ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವಂತೆ ವಿರಾಮದ ನಂತರದ  ನಿಮಿಷಗಳ ತನಕ ಚಿತ್ರಕತೆ ಆರಾಮಾಗಿ ಸಾಗುತ್ತಿರುತ್ತದೆ. ಮುಖ್ಯ ನಾಯಕನ ಪ್ರವೇಶ ಆಗೋದು  ಒಂದೂವರೆ ಘಂಟೆ ಆದಮೇಲೆ. ಆಗ ಬರುವ ರಾಜಕುಮಾರ್ ಚಿತ್ರದ ವೇಗವನ್ನು ಹೆಚ್ಚಿಸಿ ತಮ್ಮ ಮೇಲೆ ಚಿತ್ರವನ್ನು ಎಳೆದುಕೊಳ್ಳುವಂಥಹ ಅಭಿನಯ ನೀಡಿದ್ದಾರೆ. 




"ಮೆಲ್ಲ ಮೆಲ್ಲನೆ ಬಂದನೆ ಗೋಪಮ್ಮ ಕೇಳೇ" ಎನ್ನುವ ಎನ್ನುವ ಹಾಡಿಗೆ ಅವರು ಮಾಡುವ ಅಭಿನಯ ಸೊಗಸಾಗಿದೆ. ಪರದೇಶದಲ್ಲಿ ಓದಿ ಬಂದು, ನಂತರ ತನ್ನ ಅಪ್ಪ ಅಮ್ಮ ನೋಡಿದ ಹುಡುಗಿಯನ್ನು ಒಪ್ಪಿಕೊಂಡು ಹಾಡಿ  ಕುಣಿದಾಡುವ ದೃಶ್ಯಗಳು ಸುಂದರ. ಅಷ್ಟರ ಹೊತ್ತಿಗೆ ಸುಮಾರು  ಐವತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ, ಈ ಸಿನಿಮಾದಲ್ಲಿ ಭಾಗಶಃ ಉಪನಾಯಕನ ಸ್ಥಾನವಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಅಭಿನಯ ನೀಡಿದ್ದಾರೆ. ರಾಜಕುಮಾರ್ ಇಷ್ಟವಾಗೋದು ಇದಕ್ಕಾಗಿಯೇ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇರಲಿ ಬಿಡಲಿ ತನಗೆ ನೀಡಿರುವ ಪಾತ್ರ, ಅದರ ಪೋಷಣೆ ಅಷ್ಟೇ ಅವರ ತಲೆಯಲ್ಲಿ ಕೂತಿರುತ್ತೆ ಅನ್ನೋದಕ್ಕೆ ಈ ಚಿತ್ರ ಉದಾಹರಣೆ. 

ಚಿ ಉದಯಶಂಕರ್ ಈ ಚಿತ್ರದ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ. ಅವರ ತಂದೆ ಚಿ ಸದಾಶಿವಯ್ಯ ಸಂಭಾಷಣೆ ಒದಗಿಸಿದ್ದಾರೆ.  ರಾಜನ್ ನಾಗೇಂದ್ರ ಅವರ ಸಂಗೀತ ಸಂಯೋಜನೆಯಲ್ಲಿ ಎಲ್ಲಾ ಹಾಡುಗಳು ಸೊಗಸಾಗಿವೆ .  





ಕನ್ನಡವೇ ತಾಯ್ನಾಡು - ಪಿ ಬಿ ಶ್ರೀನಿವಾಸ್ -
 (ಈ ಹಾಡಿನಲ್ಲಿ ವಿಜಯಭಾಸ್ಕರ್,  ರಾಜನ್ ನಾಗೇಂದ್ರ ಅವರು ಕಾಣುತ್ತಾರೆ)
ಅಂದ ಚಂದದ ಹೂವೆ - ಪಿ ಲೀಲಾ ಮತ್ತು ಟಿ ಆರ್ ಜಯದೇವ್ 
ಹೃದಯ ವೀಣೆ ಮಿಡಿಯೇ ತಾನೇ - ಪಿ ಬಿ ಶ್ರೀನಿವಾಸ್ 
ಚೆಲುವಿನ ಸಿರಿಯೆ - ಎ ಎಲ್ ರಾಘವನ್ 
ಕೃಷ್ಣ ಬಿಡು ಬಿಡು ಕೋಪವ - ಎಸ್ ಜಾನಕೀ 

ಆರ್ ಮಧು ಅವರ ಛಾಯಾಗ್ರಹಣವಿದ್ದ ಈ ಚಿತ್ರವನ್ನು ಸಂಕಲನ ಮಾಡಿ ನಿರ್ದೇಶನದ ರೂವಾರಿ ಆರೂರು ಪಟ್ಟಾಭಿಯವರದ್ದು. 

ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಎಂಬ ನಾಣ್ಣುಡಿಯನ್ನು ಎತ್ತಿ ಹಿಡಿಯುವ ಈ ಚಿತ್ರ ರಾಜಕುಮಾರ್ ಅವರ ಅನೇಕಾನೇಕ ಉತ್ತಮಚಿತ್ರಗಳಲ್ಲಿ ಇದು ಒಂದು (ಅವರು ಮಾಡಿದ್ದೆಲ್ಲ ಉತ್ತಮೋತ್ತಮ ಚಿತ್ರಗಳೇ)

No comments:

Post a Comment