Tuesday, October 18, 2022

ಕಾಂತಾ ರಾ ಕಾಂತಾ ರಾ ಕಾಂತಾರ!!!!!

ಏನೆಂದು ನಾ ಹೇಳಲಿ ಮಾನವನಾಸೆಗೆ ಕೊನೆಯೆಲ್ಲಿ

ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ

ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ

ಯಾರನ್ನೂ ಪ್ರೀತಿಸನು ಮನದಲ್ಲಿ

ಏನೊಂದೂ ಬಾಳಿಸನು ಜಗದಲ್ಲಿ


ಪ್ರಾಣಿಗಳೇನು ಗಿಡಮರವೇನು

ಬಿಡಲಾರ ಬಿಡಲಾರ ಬಿಡಲಾರ

ಬಳಸುವನೆಲ್ಲ, ಉಳಿಸುವುದಿಲ್ಲ

ತನ್ನ ಹಿತಕಾಗೆ ಹೋರಾಡುವ


ಪಡೆಯುವುದೊಂದು ಕೊಡುವುದು ಒಂದು

ಸ್ವಾರ್ಥಿ ತಾನಾಗೆ ಮೆರೆದಾಡುವ

ಏನೆಂದು ನಾ ಹೇಳಲಿ

ಮಾನವನಾಸೆಗೆ ಕೊನೆಯೆಲ್ಲಿ

ಲೇ ಶ್ರೀ ಇದೇನ್ಲಾ ಎಂತದೋ ಬ್ಯಾರಿ ಕಥಿ ವದರ್ತಾ ಇದ್ದೀಯ.. ಅಣ್ಣಾವ್ರು ಹಾಡಿಗೂ ಈ ಪಂಜುರ್ಲಿಗೂ ಏನ್ಲಾ ಸಂಬಂಧ... !

ಪ್ರಿಯ ಪಂಜುರ್ಲಿ ಅಣ್ಣಾವ್ರ ಹಾಡಿನಂತೆ ಮನುಷ್ಯನಿಗೆ ಎಲ್ಲವೂ ಬೇಕು.. ಎಲ್ಲರೂ ಬೇಕು.. ಆದರೆ ಬೆಳೆಯುತ್ತ ಬೆಳೆಯುತ್ತಾ ಎಲ್ಲರೂ ಬೇಕು ಎನ್ನುವುದು ಹೊರಟು ಹೋಗುತ್ತೆ.. ಬರೀ ಎಲ್ಲವೂ ಬೇಕು ಎನ್ನುವುದು ಮಾತ್ರ ನಿಲ್ಲುತ್ತೆ.. 

ಓಹ್ ಓಹ್ ಗೊತ್ತಾಯ್ತು.. ಯಾವಾಗಲೂ ನೀನೆ ಬೇರೆ ನಿನ್ನ ಟ್ರಾಕೆ ಬೇರೆ.. ಸರಿ ಮುಂದುವರಿಸು.. 

******** 

ಕಳೆದೊಂದೆರಡು ಸಿನಿಮಾಗಳು ನನಗೆ ಭ್ರಮನಿರಸನ ಹುಟ್ಟಿಸಿತ್ತು.. ಸಾಕಪ್ಪ ಇವರ ಸಹವಾಸ ಅಂತ...ಇವರ ಸಿನಿಮಾಗಳನ್ನು ನೋಡೋದೇ ಬಿಟ್ಟಿದ್ದೆ.. ನಿದ್ದೆ ಮಾಡಿದ ಸಿನಿಮಾ ಒಂದಾದರೆ.. ನಾಯಕಿಯನ್ನು ನೋಡೋಕೆ ಕೂತು ಬೋರ್ ಹೊಡೆಸಿಕೊಂಡು.. ಕಡೆಗೆ ಆ ಚಿತ್ರದ ನಾಯಕಿಗೆ ನಿಮ್ಮ ಪಾತ್ರ ಪೋಷಣೆ ಇನ್ನಷ್ಟು ಬೇಕಿತ್ತು ಅಂತ ಹೇಳಿ.. ಅವರ ಶಭಾಷ್ ಗಿರಿ ಗಿಟ್ಟಿಸಿದ್ದು ಒಂದು ದಂತ ಕತೆ... ಹಃ ಹ ಹ 

ರಾ ರಾ ಕಾಂತಾ ರಾ ರಾ.. 

ನನ್ನ ಸುತ್ತ ಮುತ್ತಲು ನನ್ನ ಇಷ್ಟ ಪಡುವ ಎಲ್ಲರೂ ಕೇಳುತ್ತಿದ್ದದ್ದು ಒಂದೇ ಮಾತು.. ಕಾಂತಾರಾ ನೋಡಿದ್ರ ಅಂತ.. ಅದಕ್ಕೆ ಹೇ ಅವರು ನೋಡೋಲ್ಲ.. ಅವರ ಚಿತ್ರ ನೋಡೋಲ್ಲ.. ಹಂಗೆ ಹಿಂಗೇ ಅಂತ ಜಾತಿ ಗೀತಿ ಎಲ್ಲಾ ಅಡ್ಡ ಎಳೆದು ತಂದಿದ್ದರು .. 

ಚಿತ್ರಕೃಪೆ : ಗೂಗಲೇಶ್ವರ 

ಆದರೂ ನೋಡುವ ಮನಸ್ಸು ಬಂದಿರಲಿಲ್ಲ.. 

ಯಾಕೋ ಎಲ್ಲರೂ ಬಲವಂತ ಮಾಡೋದು ನೋಡಿ.. ಜೊತೆಗೆ ನನ್ನ ಅತಿ ಇಷ್ಟ ಪಡುವವರು ಕಾಂತಾ ಅಂತ ಕರೆಯೋದು ಒಂದು ಕಾರಣವಾಗಿ.. ಅರೆ ನನ್ನ ಹೆಸರು ಒಂದಷ್ಟು ಇದೆಯಲ್ಲ (ಸ್ವ ಬೆನ್ನು ತಟ್ಟುವಿಕೆ..... ಹೌದು ಜೀವನದಲ್ಲಿ ಮತ್ತೆ ಹುಮ್ಮಸ್ಸು ತುಂಬಿಸಿ ಕೊಳ್ಳಲು ಕೆಲವೊಮ್ಮೆ ಸ್ವ ಬೆನ್ನು ತಟ್ಟುವಿಕೆ ಅಗತ್ಯ.. ) ಇರಲಿ.. ನೋಡಿಯೇ ಬಿಡೋಣ ಅಂತ.. ಟಿಕೆಟ್ ಬುಕ್ ಮಾಡಿದಾಗ ನನ್ನ ಮಗಳು ಮಡದಿ ಒಮ್ಮೆ ಅಚ್ಚರಿ ಪಟ್ಟದ್ದು ಉಂಟು.. ಇದೇನಾಯ್ತು ಅಪ್ಪ ಅಂತ ಮಗಳು ಕಣ್ಣಲ್ಲಿಯೇ ಎಸ್ ಎಂ ಎಸ್ ಬಿಟ್ಟರೆ.. ಹನ್ನಾ ಆರಾಮಿದ್ದಿರಾ ಅಂತ ಮಡದಿ ಕೇಳಿದಳು.. 

ಸರಿ.. ನೋಡಿಯೇ ಬಿಡೋಣ ಅಂತ.. ಹೊರಟರೆ.. ಅರೆ ಒಂದು ಕಾಲದಲ್ಲಿ ನಾಲ್ಕಕ್ಷರ ಕಲಿಸಿದ್ದನ್ನೇ ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತ ನನಗೆ ಅಪಾರ ಗೌರವ ತೋರುವ ನಳಿನಿ, ಮಾಲಿನಿ ಮತ್ತೆ ಒಂದರ್ಥದಲ್ಲಿ ನನ್ನ ಗುರು ಎನ್ನಬಹುದಾದ ಪ್ರದೀಪ್ ಮತ್ತೆ ಅವರ ಕುಟುಂಬದವರು ಸಿಕ್ಕಾಗ ಇನ್ನಷ್ಟು ಖುಷಿ.. 

ಚಿತ್ರಕೃಪೆ : ಗೂಗಲೇಶ್ವರ 

ಬೆಂಕಿಯ ಉಂಡೆ ಗುಂಡು ಗುಂಡಗೆ ಸುತ್ತುತ್ತಾ ಕಾಂತಾರ ಎನ್ನುವ ಹೆಸರು ಮೂಡಿದಾಗ ವಾಹ್ ಎನಿಸಿತು ಮನಸ್ಸು.. ಈ ಚಿತ್ರದ ವಿಮರ್ಶೆ ನೋಡಿಲ್ಲ, ಟ್ರೈಲರ್ ನೋಡಿಲ್ಲ.. ಹಾಗಾಗಿ ಮುಂದೆ ಬರುವ ಸನ್ನಿವೇಶಗಳ ಕಲ್ಪನೆ ಕೂಡ ಮಾಡಿಕೊಳ್ಳದೆ ಇದ್ದದರಿಂದ ಸಿನೆಮಾವನ್ನು ಖುಷಿ ಪಟ್ಟು ನೋಡುವಂತಾಯಿತು.. 

ಸ್ಲೋ ಪಾಯಿಸನ್ ಅಥವ ನಿಧಾನಗತಿಯಲ್ಲಿ ವಿಷವನ್ನು ಏರಿಸುವಿಕೆ.. ಹೌದು ಈ ಚಿತ್ರದ ಶುರುವಾದ ನಂತರ ಮೆಲ್ಲಗೆ ರೋಮಾಂಚನ ಅನುಭವಿಸುವ ದೃಶ್ಯಗಳು ಹಲವಾರು ಬರುತ್ತಲೇ ಇದ್ದವು.. ನಾ ಇಷ್ಟ ಪಡುವ ಛಾಯಾಗ್ರಹಣ ಅದ್ಭುತವಾಗಿತ್ತು.. ಛಾಯಾಗ್ರಾಹಕ ಎಲ್ಲೆಲ್ಲಿ ಯಾವ ಯಾವ ಕೋನದಲ್ಲಿ ಕ್ಯಾಮೆರಾ ಇಟ್ಟಿದ್ದಾನೆ ಎಂದು ಹುಡುಕುತ್ತಾ ಸಿನೆಮಾವನ್ನು ನೋಡಲು ಶುರು ಮಾಡಿದೆ.. ಅದ್ಭುತ ಅದ್ಭುತ ಎನ್ನುವಂತಹ ಹಿನ್ನೆಲೆ ಸಂಗೀತ ಮನಸೆಳೆಯಿತು.. ನಾ ಇಷ್ಟ ಪಡದ ಡ್ರೋನ್ ದೃಶ್ಯಗಳು ಚೆನ್ನಾಗಿತ್ತು.. ಆದರೆ ನಸು ಗತ್ತಲೆಯಲ್ಲಿ ನೆರಳು ಬೆಳಕಿನ ಜಾದೂ ಮಾಡಿರುವ ಛಾಯಾಗ್ರಹಣಕ್ಕೆ ಮೊದಲ ಅಂಕ.. ನಂತರ ಹಿನ್ನೆಲೆ ಸಂಗೀತ.. 

ಮಂಗಳೂರು, ತುಳು.. ಭಾಷೆಯ ಹಿಡಿತ ಗೊತ್ತಿದ್ದವರಿಗೆ ಇನ್ನಷ್ಟು ಖುಷಿ ಪಡುವ ಸಿನಿಮಾವಿದು.. ಅಲ್ಲಿಯ ಸ್ಲ್ಯಾಂಗ್ ಅಥವ ತುಂಟ ಮಾತುಗಳು ಕಚಗುಳಿ ಕೊಡುವ ರೀತಿ.. ಚೆನ್ನ.. 

ಒಳ್ಳೆಯ ನೃತ್ಯದಂತೆ ಚಿತ್ರೀಕರಿಸುವ ಹೊಡೆದಾಟದ ದೃಶ್ಯಗಳು ಖುಷಿ ಕೊಡುತ್ತವೆ.. ಕ್ಯಾಮೆರಾ ಕೋನ ಸೂಪರ್ ಸೂಪರ್.. ಕಂಬಳದ ದೃಶ್ಯಗಳು ಇನ್ನಷ್ಟು ಬೇಕಿತ್ತು ಅನಿಸಿತ್ತು.. ಕಾರಣ ಒಂದು ಹತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಕಂಬಳವನ್ನು ಹತ್ತಿರದಿಂದ ನೋಡಿದ್ದೇ.. ನನ್ನ ಕ್ಯಾಮೆರಾದಲ್ಲಿ ನನಗಿಷ್ಟ ಬಂದಂತೆ ಹಲವಾರು ದೃಶ್ಯಗಳು ಸೆರೆಯಾಗಿದ್ದವು.. ಕೋಣಗಳ ಓಟ. .. ಅದರ ಜೊತೆಯಲ್ಲಿ ಅದರ ಸಮಕ್ಕೆ ಓಡುವ ಮಾನವರು.. ಅದರ ಹಿಂದೆ ಕಟ್ಟಿದ ದುಡ್ಡಿನ ರಾಶಿ ಎಲ್ಲವೂ ಆ ಕಂಬಳ ದೃಶ್ಯಗಳನ್ನು ಮತ್ತೆ ಮರುಕಳಿಸುವಂತೆ ಮಾಡಿತು.. 

ಭೂತಾರಾಧನೆ.. ಕೋಲಾ.. ತುಳುನಾಡಿನ ಸಂಸ್ಕೃತಿ, ಕರಾವಳಿಯ ತಿಂಡಿ ತಿನಿಸುಗಳು, ಭಾಷೆ, ವೇಷ ಭೂಷಣ, ಗಡುಸುತನ.. ಎಲ್ಲವೂ ಚಿತ್ರದ ಮೌಲ್ಯವನ್ನು ಮೇಲೆತ್ತಿದೆ.. 

ಚಿತ್ರಕೃಪೆ : ಗೂಗಲೇಶ್ವರ 

ಚಿತ್ರಕೃಪೆ : ಗೂಗಲೇಶ್ವರ 

ಪ್ರತಿಯೊಬ್ಬ ಕಲಾವಿದರು ಇಲ್ಲಿ ಅಭಿನಯಿಸಿಲ್ಲ ಬದಲಿಗೆ ಪಾತ್ರವಾಗಿದ್ದಾರೆ.. ನಾಯಕ ರಿಷಬ್ ಚಿತ್ರದುದ್ದಕ್ಕೂ ಆವರಿಸಿಕೊಂಡರೆ... ತಮ್ಮ ಎಂದು ಪ್ರೀತಿಸುತ್ತಿದ್ದ ಗುರುವ  ಸತ್ತಿದ್ದಾನೆ ಎಂದು ತಿಳಿದ ಮೇಲೆ ರಿಷಬ್ ಅವರ ಅಭಿನಯ ಸಿಳ್ಳೆ ಗಿಟ್ಟಿಸುತ್ತದೆ.. 

ಪರಕಾಯ ಪ್ರವೇಶ ಎಂದರೆ ಇದು ಎನ್ನುವಂತೆ ನಟಿಸಿರುವ ಅಚ್ಯುತ್ ಕುಮಾರ್ ಅಬ್ಬಬ್ಬಾ ಎನಿಸುತ್ತಾರೆ.... "ದಣಿ.... ಮಗು" ಅಂದಾಗ ... "ಇರಲಿ ಬಿಡೋ.. ಬೆಳೆದ ಮೇಲೆ ಪಾಲು ಕೇಳುತ್ತದೆ" ಅಂತ ಹೇಳಿ ತಣ್ಣಗಿನ ಕ್ರೌರ್ಯ ಕಣ್ಣಲ್ಲೇ ತೋರುತ್ತಾ ಗುಂಡು ಹಾರಿಸೋದು.. ಯಪ್ಪಾ ಜುಮ್ ಎನಿಸುವ ಅಭಿನಯ.. 

ರಿಷಬ್ ಚಿತ್ರಗಳು ಅಂದರೆ ಅಲ್ಲಿ ಪ್ರಮೋದ್ ಇರಲೇ ಬೇಕು.. ಆ ಅನ್ಯೋನ್ಯತೆ ಈ ಚಿತ್ರದ ಪಾತ್ರ ಪೋಷಣೆಯಲ್ಲಿ ಕಾಣುತ್ತದೆ.. ಸೂಪರ್ ಧ್ವನಿ.. ಖಡಕ್ ಮಾತುಗಳು.. ಸನ್ನಿವೇಶಕ್ಕೆ ತಕ್ಕಂತೆ ಮಾತಾಡುವ ಶೈಲಿ.. ಸೂಪರ್ ಎನಿಸುತ್ತದೆ.. 

ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ಕಿಶೋರ್ ಮತ್ತೊಮ್ಮೆ ಸೂಪರ್ ಅಭಿನಯ.. ತಣ್ಣಗಿನ ಕೋಪ.. ಕಡೆಯಲ್ಲಿ ನಾಯಕನ ಮಾತುಗಳನ್ನು ಕೇಳೋದು.. ಸಣ್ಣಗೆ ನಗೋದು.. ಕಿಶೋರ್ ಮನ ಸೆಳೆಯುತ್ತಾರೆ.. 

ನಾಯಕಿ ಕೆಲವು ದೃಶ್ಯಗಳಲ್ಲಿ ಮುದ್ದಾಗಿ ಕಾಣುತ್ತಾರೆ.. ಪ್ರತಿಯೊಬ್ಬ ಕಲಾವಿದರು ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ.. 

ಇಡೀ ಚಿತ್ರದ ರಚನೆ, ಅಭಿನಯ, ನಿರ್ದೇಶನ ಎಲ್ಲವನ್ನೂ ಹೊತ್ತು ಚಕ್ರವ್ಯೂಹದ ಅಭಿಮನುವಿನಂತೆ ಹೋರಾಡಿ.. ಕಡೆಗೆ ಚಕ್ರವ್ಯೂಹವನ್ನು ಭೇದಿಸಿ ಗೆಲ್ಲುವ ರಿಷಬ್ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಮನಗೆಲ್ಲುತ್ತಾರೆ.. 

ಕಾಂತಾ ರಾ 

ಕಾಂತಾ ರಾ 

ಕಾಂತಾರ.. ಒಂದು ವಿಭಿನ್ನ ಪ್ರಯತ್ನ.. cult ಚಿತ್ರಗಳು ಅಂದರೆ ಇದೆ ಅಲ್ಲವೇ.. 

ಟಾಕೀಸಿನಿಂದ ಹೊರ ಬರುವಾಗ ಕಾಡಿದ್ದು 

"ಪ್ರಾಣಿಗಳೇನು ಗಿಡಮರವೇನು

ಬಿಡಲಾರ ಬಿಡಲಾರ ಬಿಡಲಾರ

ಬಳಸುವನೆಲ್ಲ, ಉಳಿಸುವುದಿಲ್ಲ

ತನ್ನ ಹಿತಕಾಗೆ ಹೋರಾಡುವ"


******

ಪಂಜುರ್ಲಿ : ಸೂಪರ್ ಶ್ರೀ.. ಸಿನೆಮಾದ ಆಶಯ ಹೇಳದೆ ಸಿನಿಮಾದ ವಿಷಯ ಹೇಳದೆ.. ಸಿನೆಮಾವನ್ನು ನೋಡುವ ಹುಮ್ಮಸ್ಸು ತುಂಬುವ ರೀತಿ ಬರೆದಿದ್ದೀಯ.. ಶಭಾಷ್ ಶ್ರೀ 

ಶ್ರೀ : ಅಣ್ಣಾವ್ರು ಹೇಳಿರೋದನ್ನ ಪಾಲಿಸುತ್ತಿದ್ದೇನೆ ಪಂಜುರ್ಲಿ ... ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿ... ಪ್ರಕೃತಿ ಮಾನವನ ಮಧ್ಯೆ ನೆಡೆಯುವ ಹೋರಾಟಕ್ಕೆ ದೈವ ಬಲವೂ ಇರುತ್ತದೆ..              ಜೊತೆಗೆ  .... .." 

ಪಂಜುರ್ಲಿ : ಶ್ರೀ ನಾವೂ ಇರುತ್ತೇವೆ.. ದೈವಾರಾಧನೆ, ಭೂತಾರಾಧನೆ ನಮ್ಮ ನಾಡಿನ ವೈಶಿಷ್ಟ್ಯ ಕಣೋ.. Any way super experience ನಿಂದು.. ಹೀಗೆ ಸಾಗುತ್ತಿರಲಿ...  .. ಕಾಂತಾ ನಿನ್ನ ಬರಹಕ್ಕೆ ಆಯಸ್ಕಾಂತ ಶಕ್ತಿ ಸದಾ ಇರಲಿ !!!

Tuesday, May 3, 2022

ಸತಿಗೆ ಸಾಟಿಯೇ ಇಲ್ಲ ಅವಳೇ ಶಕ್ತಿ ಎನ್ನುವ ಸತಿ ಶಕ್ತಿ (1963) (ಅಣ್ಣಾವ್ರ ಚಿತ್ರ ೪೫/ ೨೦೭)

ಬದುಕಿನಲ್ಲಿ ಅವಕಾಶಗಳು ಸಿಗುವ ಬಗ್ಗೆ ನೂರಾರು  ಮಾತುಗಳಿವೆ.. ಸಿಕ್ಕ ಅವಕಾಶವನ್ನು  ಉಪಯೋಗಿಸುವ ನಿಟ್ಟಿನಲ್ಲಿ  ಪರಿಶ್ರಮ ಅಗತ್ಯ.. 

ರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಒಂಭತ್ತು ವರ್ಷಗಳಲ್ಲಿ ಹಲವಾರು ರೀತಿಯ ಪಾತ್ರಗಳು ಹುಡುಕಿಕೊಂಡು ಬಂದವು..  ಅದನ್ನು ಎರಡು ಕೈಗಳಲ್ಲಿ ಬಾಚಿಕೊಂಡು ಬೆಳೆಯುತ್ತಾ ಹೋದರು. 

ಕನ್ನಡಿಯ ಮುಂದೆ ನಿಂತಾಗ ನಮ್ಮದೇ ಬಿಂಬ ಕಾಣುತ್ತದೆ ನಿಮಗೆ ಗೊತ್ತಿರುವ ವಿಚಾರ.. ಚಲನಚಿತ್ರಗಳಲ್ಲಿ ದ್ವಿಪಾತ್ರ ಮಾಡಿದಾಗ ಒಂದು ಪಾತ್ರ ಇನ್ನೊಂದು ಪಾತ್ರದ ಮೇಲೆ ಛಾಯೆ ಬೀಳುವುದು ಸಹಜ..  ಆದ್ರೆ ಇಲ್ಲಿ ಈ ಚಿತ್ರದಲ್ಲಿ ರಾಜ್ ಕುಮಾರ್ ಅವರು ದ್ವಿಪಾತ್ರ ಮಾಡಿದ್ದಾರೋ ಅಥವ ಕನ್ನಡ ಕಲಾ ರಸಿಕರ ಪ್ರಕಾರ ಈ ಚಿತ್ರಕ್ಕಾಗಿಯೇ ದೇವರು ಇಬ್ಬರು ರಾಜ್ ಕುಮಾರ್ ಅವರನ್ನು ಸೃಷ್ಟಿಸಿದ್ದಾನೋ ಅನ್ನುವಷ್ಟು ಪ್ರಬುದ್ಧವಾಗಿ ನಟಿಸಿದ್ದಾರೆ. 






ವಿರೂಪಾಕ್ಷ, ರಕ್ತಾಕ್ಷ ಎರಡೂ ಪಾತ್ರಗಳು ಒಬ್ಬರೇ ಮಾಡಿದ್ದಾರೆ ಅನಿಸೋದೇ ಇಲ್ಲಾ .. ಒಂದು ಸೌಮ್ಯ ಪಾತ್ರವಾದರೆ.. ಇನ್ನೊಂದು ರೌದ್ರ ಪಾತ್ರ.  ಆದರೆ ಸಂಭಾಷಣೆ ಹೇಳುವ ರೀತಿ,  ಆಂಗೀಕ  ಅಭಿನಯ.. ಮುಖಾಭಿನಯ ಎಲ್ಲವೂ ವಿಭಿನ್ನ.. 

ತಮ್ಮ ಪಾತ್ರದ ಆಳವನ್ನು ಅರಿತು, ಅದನ್ನು ಬೆಳೆಸಿಕೊಂಡು ಹೋಗಿ ನಿರ್ದೇಶಕರ, ಮತ್ತು ಕಥೆಗೆ ತಕ್ಕ  ಹಾಗೆ ಅಭಿನಯ ನೀಡಿದ್ದಾರೆ. ಅವರ ದೃಶ್ಯಗಳನ್ನು ನೋಡೋದೇ ಒಂದು ಹಬ್ಬ.  


ಅವರ ಅಭಿನಯದಲ್ಲಿ ಶಿಖರವನ್ನು ಏರುತ್ತಿರುವುದು ನಿಚ್ಚಳವಾಗಿ ಕಾಣುತ್ತದೆ.  ಅವರ ಅಭಿನಯ ನೋಡೋದೇ ಒಂದು ಸಂತಸದ ಅನುಭವ ನೀಡುತ್ತದೆ. 

ರಕ್ತಾಕ್ಷ ಪಾತ್ರದ ಮುಖದ ಅಭಿನಯಕ್ಕೆ ಸಿದ್ಧ ಪಡಿಸಿರುವ  ನೆರಳು ಬೆಳಕಿನ ವಿನ್ಯಾಸ ಇಷ್ಟವಾಗುತ್ತದೆ. ಅವರ ಸಂಭಾಷಣೆಯ ರೌದ್ರತೆಗೆ ತಕ್ಕಂತೆ ಬೆಳಕಿನ ಆಟ ಇಷ್ಟವಾಗುತ್ತದೆ. 

ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.  

ಇವರ ಜೊತೆ  ಸರಿಸಾಟಿಯಾಗಿ ಎಂ ವಿ ರಾಜಮ್ಮ ಪಂಪಿಯಾಗಿ ಅದ್ಭುತ ಅಭಿನಯ ನೀಡಿದ್ದಾರೆ. ತಮ್ಮ ಸಂಸಾರ ಕತೆ ಒಂದು  ಕಡೆ.. ರಾಜ್ಯದ ಅರಾಜಕತೆ ಒಂದು ಕಡೆ.. ಜಾತಿ ಗಲಾಟೆ, ತಮ್ಮನ್ನು ಪಟ್ಟದಿಂದ ಇಳಿಸಿ ಉತ್ತಮ ಜಾತಿಯವರನ್ನು  ಪಟ್ಟದ ರಾಣಿಯಾಗಿ  ಬಂದಾಗ ಆ ಸಮಯದಲ್ಲಿ ಅಭಿನಯ ಇಷ್ಟವಾಗುತ್ತದೆ. 

ಗುರುವಿನ ಪಾತ್ರದಲ್ಲಿ ಅಶ್ವಥ್ ಅಭಿನಯ.. ಸಾಹುಕಾರ್ ಜಾನಕೀ ಒಂದು ರೀತಿಯ ಖಳನಾಯಕಿ ಛಾಯೆಯ ಪಾತ್ರ.. ಪ್ರೇತವಾಗಿ ಪಾಪಮ್ಮ, ಹಾಸ್ಯ  ಪಾತ್ರದಲ್ಲಿ ಅಲ್ಲಲ್ಲಿ ಕಾಣ ಸಿಗುವ ನರಸಿಂಹರಾಜು, ಬಿ ರಾಘವೇಂದ್ರರಾವ್ ಇವರ ಜೊತೆಯಲ್ಲಿ ಸಹನಟರ ಅಭಿನಯ ಚಿತ್ರಕ್ಕೆ ಕಳೆ ಕೊಟ್ಟಿದೆ. 





ಪರಶಿವ, ತನ್ನ ಶಿವೆಯ ಜೊತೆ ನಾಟ್ಯವಾಡುವಾಗ ಕಂಕಣಗಳು ಬಿದ್ದು ಹೋದಾಗ.. ಶಿವೆ ಆ ಕಂಕಣಗಳಿಗೆ ಶಾಪ ಕೊಟ್ಟು.. ಭೂಲೋಕದಲ್ಲಿ ಯಾರ ಕೈಗೆ ಸೇರುತ್ತದೆಯೋ  ಅವರ ಮನಸ್ಸು ಚಂಚಲವಾಗಿ ಹದಗೆಟ್ಟು ಎಲ್ಲರಿಗೂ ತೊಂದರೆಯಾಗುತ್ತದೆ...  ಎಂದು ಹೇಳಿ ಬಿಸಾಡುತ್ತಾಳೆ.. ಅದು ಭೂಲೋಕದಲ್ಲಿ ಸಿಕ್ಕವರ  ಬದುಕು ಮೂರಾಬಟ್ಟೆಯಾಗುತ್ತದೆ. 

ದೇವಿ ಮಹಾತ್ಮೆ, ಪಂಪಾಕ್ಷೇತ್ರ ಮಹಾತ್ಮೆ, ಮುಂತಾದ ಪುರಾಣಕತೆಗಳ ಸಾರಾಂಶಗಳನ್ನು ಎತ್ತಿಕೊಂಡು ಕಥೆ ಹೆಣೆದಿದ್ದಾರೆ ಕಣಗಾಲ್ ಪ್ರಭಾಕರ್ ಶಾಸ್ತ್ರಿ. 

ಇದೊಂದು ಪರಿಪೂರ್ಣ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ಮೂಸೆಯಲ್ಲಿ ಅರಳಿದ ಚಿತ್ರವಿದು. ಅದಕ್ಕೆ ಟಿ ಜಿ ಲಿಂಗಪ್ಪ ಅವರ ಸಂಗೀತವಿದೆ.. ಅನೇಕಾನೇಕ ಹಾಡುಗಳಿಗೆ ಘಂಟಸಾಲ, ಪಿ ಬಿ ಶ್ರೀನಿವಾಸ್, ಪಿ ಲೀಲಾ, ಎಸ್ ಜಾನಕೀ, ಕೋಮಲ ಇವರೆಲ್ಲಾ ದನಿಯಾಗಿದ್ದಾರೆ. 

ಕರ್ಣನ್, ಸುಂದರಬಾಬು ಅವರ ಛಾಯಾಗ್ರಹಣ ವಿಶೇಷ ಚಪ್ಪಾಳೆಗಿಟ್ಟಿಸುತ್ತದೆ.   ದ್ವಿಪಾತ್ರಗಳ ಚಿತ್ರೀಕರಣ ಸೊಗಸಾಗಿದೆ.  

ರಾಜ್ ಅವರ ಸೌಮ್ಯ ಪಾತ್ರಗಳೇ ಹಿಂದಿನ ಅಷ್ಟೂ ಚಿತ್ರಗಳಲ್ಲಿ ವಿಜೃಂಭಿಸಿದ್ದಾಗ ಈ ಚಿತ್ರದಲ್ಲಿ ಅವರ ಮಂತ್ರವಾದಿ ಪಾತ್ರ ನಿಜಕ್ಕೂ ಹಿಟ್ ಆಗಿದೆ ಹಾಗೂ ಅದ್ಭುತವಾಗಿದೆ.  ರಾಜ್ ಕುಮಾರ್ ಅವರು ಅಕಸ್ಮಾತ್ ಅನೇಕ ಚಿತ್ರಗಳನ್ನು ಖಳಛಾಯೆ ಇರುವ ಪಾತ್ರಗಳಲ್ಲಿ ಉಪಯೋಗಿಸಿದ್ದರೆ ಅವರ ಅಭಿನಯದ ಇನ್ನೊಂದು ಮಗ್ಗುಲಿನ ಪರಿಚಯವಾಗುತ್ತಿತ್ತು. 

ಮಾತೆಗೆ ಮಿಗಿಲಾದ ದೇವರಿಲ್ಲ ಹಾಡಿನಲ್ಲಿ ಆ ಪುಟ್ಟ ಪುಟಾಣಿಯ ಅಭಿನಯ ಚೆನ್ನಾಗಿದೆ.  ಉಳಿದ ಹಾಡುಗಳು ಚೆನ್ನಾಗಿವೆ. 

ಮತ್ತೊಂದು ರಾಜ್ ಕುಮಾರ್ ಅವರ ಚಿತ್ರದ ಜೊತೆ ಸಿಗೋಣ.. !

Sunday, April 24, 2022

ಗಾನ ಗಂಧರ್ವ ಗಂಧರ್ವ ಸಂಗೀತ ನಿರ್ದೇಶಕರ ಬಗ್ಗೆ ಮಾತುಗಳು ... ಅಣ್ಣಾವ್ರ ಜನುಮದಿನ (2022)

 ಶ್ರೀ ಏನಪ್ಪಾ ಆಗಲೇ ಅರ್ಧ  ದಿನ ಕಳೆದು ಹೋಯ್ತು ಏನೂ ಇಲ್ಲಾ?

ಅಣ್ಣಾವ್ರೇ ನಾ ಕಟ್ಟಿದ ಅಲೆಮಾರಿಗಳು ತಂಡ ಚಟುವಟಿಕೆಯಿಲ್ಲದೆ ಸೊರಗಿತ್ತು ಅದಕ್ಕೆ  ಮತ್ತೆ ಜೀವ ಕೊಡೋಣ ಅಂತ  ಕಬ್ಬನ್ ಪಾರ್ಕಿನಲ್ಲಿ ಸಿಗೋಣ ಅಂತ ಹೋಗಿದ್ದೆ ...ಬಂದು ಮತ್ತೆ ದಿನ ನಿತ್ಯದ ಕೆಲಸ ಮುಗಿಸಿ ಈಗ ಕೂತೆ.. ಇನ್ನೇನು ಕೆಲವು ನಿಮಿಷಗಳು ಅಣ್ಣ ಬರುತ್ತೆ... 




ಶ್ರೀ ನನಗೆ ಗೊತ್ತು ನೀ ಬಿಲ್ಡ್ ಅಪ್ ತಗೋಳೋಲ್ಲ ಅಂತ ಗೊತ್ತು.. ಇನ್ನೂ ಬರಲಿಲ್ಲವಲ್ಲ ಅಂತ ಕೇಳಿದೆ ಅಷ್ಟೇ.. 

ಗೊತ್ತು ಅಣ್ಣಾ.. ನಿಮ್ಮ ಬಗ್ಗೆ ಬರೆಯೋದು ಬೇಕಾದಷ್ಟಿದೆ.. ಇನ್ನೂ ನೋಡಿ ಬರೆಯಬೇಕಾದ ಬೇಕಾದಷ್ಟು ಚಿತ್ರಗಳಿವೆ.. ಈ ವರ್ಷ ಶತಕ ಬಾರಿಸಲೇ ಬೇಕು ಅಂತ ನಿರ್ಧಾರ ಮಾಡಿದ್ದೀನಿ.. ನಿಮ್ಮ ಆಶೀರ್ವಾದ ಇರಲಿ ಸದಾ.. 

ಶ್ರೀ ಶುಭವಾಗಲಿ.... ಇವತ್ತಿನ ಲೇಖನ ಓದೋಕೆ ಕಾತುರದಿಂದ ಕಾಯುತ್ತಾ ಇದ್ದೀನಿ.. !!!

ಸರಿ ಅಣ್ಣಾ.. !

                                                                             *****

ಕರುನಾಡಿನಲ್ಲಿ ಚಿತ್ರರಸಿಕರ ಮನದಲ್ಲಿ ಅಣ್ಣಾವ್ರ ಹಾಡುಗಳು ಅಣ್ಣಾವ್ರ ಗಾಯನ ಧ್ವನಿ ಬಗ್ಗೆ ಕೇಳೋದೇ ಬೇಡಾ.. ಅವರ ಪ್ರತಿ ಹಾಡುಗಳು ಅವರ ಸಂಭಾಷಣೆ ಬಾಯಿ ಪಾಠವಾಗಿ ಹೋಗಿದೆ.. ಅವರ ಗಾಯನಕ್ಕೆ ಹೊಳಪು ಕೊಟ್ಟ ಅನೇಕಾನೇಕ ಸಂಗೀತ ನಿರ್ದೇಶಕರ ಬಗ್ಗೆ ಅಣ್ಣಾವ್ರ ಹೇಳಿರುವ ಕೆಲವು ಮಾತುಗಳು..




ಜಿ ಕೆ ವೆಂಕಟೇಶ್: 



ಶ್ರೀ ಇಡೀ ನಾಡು ನನ್ನನ್ನು ಅಣ್ಣ ಅಂತ ಪ್ರೀತಿಯಿಂದ ಕರೆದರೆ.. ಇವರು ಮಾತ್ರ ನನ್ನನ್ನು ತಮ್ಮಯ್ಯ ಅಂತ ಕರೀತಾ ಇದ್ರು.. ಓಹಿಲೇಶ್ವರ ಚಿತ್ರದಲ್ಲಿ  ನಾ ಬೇಡವೆಂದರೂ ಬಿಡದೆ ಹಾಡಿಸಿದರು.. ನಂತರ ಮಹಿಷಾಸುರ ಮರ್ದಿನಿ ಚಿತ್ರದಲ್ಲಿ ಇನ್ನೊಂದು ಹಾಡು ಹಾಡಿಸಿದರು.. 

ಈತ ಅದ್ಭುತ ಪ್ರತಿಭೆಯಿದ್ದ ಮನುಷ್ಯ.. ಆದರೂ ಪ್ರತಿಭೆಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತ್ತಿದ್ದರು.. ಸನಾದಿ ಅಪ್ಪಣ್ಣ ಚಿತ್ರದಲ್ಲಿ ಶಹನಾಯಿ ಮಹಾರಾಜ್ ಶ್ರೀ ಬಿಸ್ಮಿಲ್ಲಾ ಖಾನ್ ಸಾಹೇಬರ ಜೊತೆಯಲ್ಲಿ ನಾ ಕಳೆದ ಕ್ಷಣ ಅದ್ಭುತ.. ಈ ವೆಂಕಟೇಶ್ ಖಾನ್ ಸಾಹೇಬರು ಹೇಗೆ ಹೇಳಿದ್ದರೋ, ಹಾಗೆ ಮತ್ತೆ ಅದಕ್ಕಿಂತ ತುಸು ಹೆಚ್ಚಾಗಿಯೇ ಅವರನ್ನು  ಸಂತೈಸಿ ಅದ್ಭುತ ಹಾಡುಗಳನ್ನು ಕೊಟ್ಟರು.. ಅದೇ ರೀತಿಯಲ್ಲಿ ಸಂಧ್ಯಾರಾಗ ಚಿತ್ರದ ರಾಗಾಧಾರಿತ ಹಾಡುಗಳು, ಹಾಲು ಜೇನಿನ ಸುಶ್ರಾವ್ಯ ಹಾಡುಗಳು... ಇವೆಲ್ಲಾ ಒಂದು ಕಡೆಯಾದರೆ. ಅವರ ಪ್ರಯೋಗ ಶೀಲತೆಯಿಂದ ಕಳೆಕಟ್ಟಿದ ಹಾಡುಗಳು ಬಾಂಡ್ ಶೈಲಿಯ ಚಿತ್ರದಲ್ಲಿ ಅಪಾರ ಯಶಸ್ಸು ಕಂಡಿತು.. ನನಗೆ ತುಂಬಾ ಇಷ್ಟವಾಗಿದ್ದು.. ದಾರಿ ತಪ್ಪಿದ ಮಗ ಚಿತ್ರದಲ್ಲಿ ಹಡಗಿನಲ್ಲಿ ನೆಡೆಯುವ ಹೊಡೆದಾಟಕ್ಕೆ ಇಂಗ್ಲಿಷ್ ಚಿತ್ರಗಳ ಮಾದರಿಯಲ್ಲಿ ಹಿನ್ನೆಲೆ ಸಂಗೀತ ಕೊಟ್ಟಿದ್ದು.. 

ನನಗೆ ಬಲು ಪ್ರೀತಿಯ  ನಿರ್ದೇಶಕರು ಜಿ ಕೆ ವೆಂಕಟೇಶ್.. 

ರಾಜನ್ ನಾಗೇಂದ್ರ 


ಪಗಡೆಯಾಟದಲ್ಲಿ ಬೇಕಾದ ಗರಗಳು ಬೀಳುವಂತೆ ಶಕುನಿಗೆ ವರವಿತ್ತಂತೆ.. ಈ ಸಂಗೀತ ನಿರ್ದೇಶಕ ಜೋಡಿ ಮುಟ್ಟಿದ್ದೆಲ್ಲ ಅದ್ಭುತ ಯಶಸ್ವೀ ಹಾಡುಗಳೇ.. ಚಿತ್ರಗಳಲ್ಲಿ ಒಂದು ಎರಡು ಹಾಡುಗಳು ಯಶಸ್ವೀ ಆಗೋದು ಸಾಮಾನ್ಯ.. ಆದರೆ ಇವರ ಎರಡು ಕನಸು ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್.. ಬರಿ ಸಾಮಾಜಿಕ ಚಿತ್ರಗಳು ಮಾತ್ರ ಅಂದು ಕೊಂಡರೆ.. ಊಒ ಹೂಂ.. ಶ್ರೀನಿವಾಸ ಕಲ್ಯಾಣ ಚಿತ್ರದ ಹಾಡುಗಳು, ಹಿನ್ನೆಲೆ ಸಂಗೀತ ಕೇಳಿದ್ದೀರಿ..  ಕರುನಾಡಿನ ನಾಡಗೀತೆಯ ಆಗಿರುವ ನಾವಾಡುವ ನುಡಿಯೇ ಕನ್ನಡ ಹಾಡನ್ನು ಯಾರು ಮರೆತಾರು..  ನನ್ನ ಚಿತ್ರಗಳಿಗೆ ಸಂಗೀತ ಕೊಟ್ಟಿದ್ದು ಕಡಿಮೆ ಆದರೆ ಕೊಟ್ಟಿದ್ದೆಲ್ಲಾ ವಿಶಿಷ್ಟ ಹಾಗೂ ಯಶಸ್ವೀ ಹಾಡುಗಳೇ.  

ಸರಳ ಸಂಗೀತವೆನಿಸಿದರೂ, ಗಾಯನಕ್ಕೆ ನಿಂತಾಗಲೇ ಅರಿವಾಗುತ್ತಿತ್ತು ಎಷ್ಟು ಕಷ್ಟ ಈ ಹಾಡುಗಳು ಅಂತ.. 

ದಿನಕ್ಕೆ ಬರುವ ಹತ್ತು ಹಾಡುಗಳಲ್ಲಿ ಕಡೆ ಪಕ್ಷ ನಾಲ್ಕು ಹಾಡುಗಳು ಇವರ ಸಂಗೀತ ನಿರ್ದೇಶನದ್ದಾಗಿರುತ್ತದೆ.. 

ಉಪೇಂದ್ರ ಕುಮಾರ್ 


ಸಂಗೀತಕ್ಕೆ ಭಾಷೆಯೇ ಇಲ್ಲ ಅನ್ನೋದನ್ನ ಇವರು ನಿರೂಪಿಸಿದರು.. ಒರಿಸ್ಸಾ ಮೂಲದವರಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಇವರ ಸಾಧನೆ ಅಪಾರ.. ನಮ್ಮ ನಿರ್ಮಾಣದ ಚಿತ್ರಗಳಲ್ಲಿ ಇವರೇ ಆಸ್ಥಾನದ ಸಂಗೀತಗಾರರು ಅಂದರೆ ತಪ್ಪಿಲ್ಲ.. ನನ್ನ ಹಾಗೂ ನನ್ನ ಮಕ್ಕಳ ಚಿತ್ರಗಳಿಗೆ ಯಶಸ್ವೀ ಹಾಡುಗಳನ್ನು ಕೊಟ್ಟಿರೋದು ಇವರ ವಿಶೇಷ.. 

ರಾಗಗಳನ್ನು ಉಪಯೋಗಿಸಿಕೊಂಡು ಇವರು ಮೂಡಿಸುತ್ತಿದ್ದ ಚಿತ್ರಗೀತೆಗಳು ಬಲು ಸುಂದರ.. ಭಕ್ತಿಗೀತೆಗಳು ಕೂಡ ಇವರ ಸಂಗೀತದಲ್ಲಿ ಭಕ್ತಿರಸ ತುಂಬಿ ತುಳುಕುತ್ತಿದ್ದು ಇಂದಿಗೂ ಜನಮಾನಸದಲ್ಲಿ ನೆಲೆಸಿದೆ.. 

ಎಂ ರಂಗರಾವ್ 



ವೀಣೆ ರಾವ್ ಅಂತ ಹೆಸರಾಗಿದ್ದವರು ಇವರು.. ಚೆಲುವೆಯೇ ನಿನ್ನ ನೋಡಲು ಈ ಹಾಡಿನಲ್ಲಿ ವೀಣೆಯ ಸಂಗೀತ ಬಲು ಇಷ್ಟ.. ಕವಿರತ್ನ ಕಾಳಿದಾಸ ಚಿತ್ರಗೀತೆಗಳು ಅದರ ಹಿನ್ನೆಲೆ ಸಂಗೀತ ಬಲು ಇಷ್ಟ.. ಸಂಸ್ಕೃತ ಶ್ಲೋಕಕ್ಕೆ ಅವರು ನೀಡಿರುವ ಸಂಗೀತ.. ಜೊತೆಯಲ್ಲಿ ಆ ಶಬ್ದಗಳನ್ನು ಉಚ್ಚರಿಸಲು ನನಗೆ ಪ್ರೋತ್ಸಾಹ ನೀಡಿದ್ದು ಎಲ್ಲವೂ ಹಸಿರಾಗಿದೆ.. 

ಕಣ್ಣೀರ ಧಾರೆ ಈ ಹಾಡಲ್ಲಿ ಅವರು ಉಪಯೋಗಿಸಿರುವ ವಾದ್ಯ ಸಂಯೋಜನೆ ಬಲು ಇಷ್ಟ.. 

ರಂಗರಾವ್ ಅಪಾರ ಪ್ರತಿಭೆ ಇರುವ ಸಂಗೀತ ನಿರ್ದೇಶಕ

ವಿಜಯಭಾಸ್ಕರ್

ಇವರನ್ನು ನೋಡಿದಾಗೆಲ್ಲಾ ಸಂಗೀತದ ಮೇಷ್ಟ್ರು ಆಂತಾಲೇ ನನ್ನ ಕಣ್ಣ ಮುಂದೆ ಬರುತ್ತೆ.. ಆ ಎತ್ತರದ ನಿಲುವು.. ಅವರ ಸಂಗೀತ ಸಂಯೋಜನೆ ಬಲು ಶಾಸ್ತ್ರೀಯ ರೀತಿ.. ಓರೇ ಕೋರೆಗಳನ್ನು ಕಗ್ಗಂಟು ಅನಿಸಿದ್ದನ್ನು ಅವರು ಬಿಡಿಸಿ ನಮ್ಮ ಮುಂದೆ ಇಡುತ್ತಿದ್ದದ್ದು ಬಲು ಸೊಗಸು ಇವರ ನಿರ್ದೇಶನದಲ್ಲಿ ಹಾಡುವ ಸೌಭಾಗ್ಯ ಸಿಗಲಿಲ್ಲ.. ನಾ ಹಾಡಿದ್ದು ನೆನಪಿಲ್ಲ.. ಏನಾದರೂ ಹಾಡಿದ್ದಾರೆ ಮುಂದೆ ನಿನಗೆ ಹೇಳುತ್ತೇನೆ.. 

ಆದರೆ ನನ್ನ ಶಾರೀರ ಪಿ ಬಿ ಶ್ರೀನಿವಾಸ್ ಅವರ ಗಾನ ಸುಧೆಯಲ್ಲಿ ಅಪಾರವಾದ ಹಾಡುಗಳಲ್ಲಿ ಇವರ ಸಂಗೀತ ಬಲು ಸೊಗಸು.. 

ಇನ್ನೊಂದು ವಿಶೇಷ ಅಂದರೆ.. ಇವರ ಮತ್ತು ಪುಟ್ಟಣ್ಣ ಕಣಗಾಲ್ ಅವರ ಜುಗಲ್ ಬಂದಿ ಚಿತ್ರಗಳು.. ಪುಟ್ಟಣ್ಣ ಅವರ ತಲೆಯಲ್ಲಿ ಹೇಗೆ ಸಂಗೀತ ಇರಬೇಕು ಅನಿಸುತ್ತಿತ್ತೋ ಹಾಗೆ  ಇವರ ಸಂಗೀತ ಇರುತ್ತಿತ್ತು.. ಪುಟ್ಟಣ್ಣ ಅವರು ಕಟ್ಟಿ ಕೊಡುತ್ತಿದ್ದ ದೃಶ್ಯಗಳಿಗೆ ಪೂರಕವಾಗಿರುತ್ತಿತ್ತು ಇವರ ಸಂಗೀತ ಮೋಡಿ.. 

ಟಿ ಜಿ ಲಿಂಗಪ್ಪ



ಪದ್ಮಿನಿ ಪಿಕ್ಚರ್ಸ್ ಆಸ್ಥಾನದ ಸಂಗೀತ  ಅರಸರು ಇವರು.. ನನ್ನ ನೆಚ್ಚಿನ ಗುರುಗಳು ಬಿ ಆರ್ ಪಂತುಲು ಅವರ ಎಲ್ಲಾ ಚಿತ್ರಗಳಿಗೆ ಇವರದ್ದೇ ಸಂಗೀತ.. ತಾಯಿಗೆ ತಕ್ಕ ಮಗ ಚಿತ್ರದ ಎಂಥ ಸೊಗಸು ಮಗುವಿನ ಮನಸ್ಸು.. ಹಾಡಿಗೆ ಸಂಗೀತ ಬಲು ಸೊಗಸಾಗಿತ್ತು.. ಬಭೃವಾಹನ, ಭಕ್ತ ಪ್ರಹ್ಲಾದ ಚಿತ್ರಗಳ ಸಂಗೀತದ ಬಗ್ಗೆ ನಿಮಗೆ ಗೊತ್ತೇ ಇದೆ.. ಬಲು ಕಷ್ಟಕರವಾದ "ಆರಾಧಿಸುವೆ ಮದನಾರಿ" ಹಾಡಿಗೆ ನನಗೆ ಉತ್ತೇಜಿಸಿ ಹಾಡಿಸಿದ್ದು  ಇನ್ನೂ ನೆನಪಿದೆ.... ಹುಣುಸೂರು ಕೃಷ್ಣಮೂರ್ತಿಗಳ ರಚಿಸಿದ ಕಂದ ಪದ್ಯ 'ಯಾರು ತಿಳಿಯರು ನಿನ್ನ" ಕರುನಾಡಿನ ಪ್ರತಿ ಸಂಭ್ರಮಕ್ಕೂ ಬೇಕೇ ಬೇಕು.. 

ಶ್ರುತಿ ಸೇರಿದಾಗ ಚಿತ್ರದಲ್ಲಿ ಜಾನಕಿಯಮ್ಮ ಹಾಡಿರುವ ಕನಸಲ್ಲಿ ಬಂದವನಾರೇ ನನ್ನಿಷ್ಟದ ಗೀತೆ.. ಅದನ್ನು ನಾನೂ ಹಾಡಬೇಕೆಂಬ ಹಂಬಲ ಇತ್ತು.. ಅದು ಅವರಿಗೆ ತಿಳಿಯಿತೋ ಏನೋ.. ಒಟ್ಟಿನಲ್ಲಿ ಒಂದು ಪುಟ್ಟ ತುಣುಕನ್ನು ಹಾಡುವ ಅವಕಾಶ ಸಿಕ್ಕಿತು.. 

ಸತ್ಯಂ 


ಕಪ್ಪು ಬಿಳುಪು ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನದಲ್ಲಿ ಪಿ ಬಿ ಎಸ್ ಅವರು ಹಾಡಿದ್ದರು.. ಇವರ ಸಂಗೀತದಲ್ಲಿ ನನಗೆ ಹಾಡುವ ಅವಕಾಶ ಸಿಕ್ಕಿದ್ದು ಕೆರಳಿದ ಸಿಂಹ ಚಿತ್ರದಲ್ಲಿ.. ಈ ಚಿತ್ರದ ಎಲ್ಲಾ ಹಾಡುಗಳು ಬಲು ಇಷ್ಟ.. ನನ್ನ ಅಭಿಮಾನಿಗಳು ಅನೇಕರು ಹೇಳಿದ್ದು.. ಇಂಗ್ಲಿಷ್ ಹಾಡಿನ ಸಂಗೀತದಂತಿದ್ದ ಏನೋ ಮೋಹ ಹಾಡು ನಿಮ್ಮ ಚಿತ್ರಗಳಲ್ಲಿಯೇ ವಿಶೇಷವಾದದ್ದು ಅಂತ.. ನಿಜ ಆ ರೀತಿಯ ಸಂಗೀತ ನನ್ನ ಚಿತ್ರಗಳಲ್ಲಿ ಬಂದದ್ದು ಕಡಿಮೆಯೇ.. 

ಅಮ್ಮ ನೀನು ನನಗಾಗಿ ಹಾಡಿನ ಸಂಗೀತವೂ ಬಲು ಸೊಗಸು. . 

ಇಳಯರಾಜ

ನಮ್ಮ ಜಿ ಕೆ ವೆಂಕಟೇಶ್ ಅವರ ಗರಡಿಯಲ್ಲಿ ಶಿಷ್ಯವೃತ್ತಿ ಆರಂಭಿಸಿದ್ದ ಇಳಯರಾಜ ತಮಿಳು, ತೆಲುಗು, ಮತ್ತು ಕೆಲವು ಕನ್ನಡ ಚಿತ್ರಗಳಲ್ಲಿ  ಜಾದೂ ಮಾಡಿದ್ದರು .. ಅವರ ನಿರ್ದೇಶನದಲ್ಲಿ ಹಾಡುವ ಅವಕಾಶ ನನಗೆ ಸಿಕ್ಕಿದ್ದು ನೀ ನನ್ನ ಗೆಲ್ಲಲಾರೆ.. ಚಿತ್ರದ ಫಲಿತಾಂಶ ಏನೇ ಆಗಿರಲಿ.. ಆ ಚಿತ್ರದ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲಿ ನಲಿಯುತ್ತಿದೆ.. ಅವರ ಸಂಗೀತದ ಜಾದೂ ನಿಜಕ್ಕೂ ಅದ್ಭುತ.. ಆ ಚಿತ್ರದಲ್ಲಿ ಮೂಡಿದ ಪ್ರತಿ ಹಾಡಿಗೂ ವಿಭಿನ್ನವಾಗಿ ಸಂಗೀತ ನೀಡಿದ್ದಾರೆ.. ಈ ಕಡೆ ಪಾಶ್ಚಾತ್ಯ, ಈ ಕಡೆ ಪೂರ್ವಾತ್ಯ.. ಜೊತೆಗೆ ನಮ್ಮ ನಾಡಿನ ವಾದ್ಯಗಳ ಕುಸುರಿ ಬೆರೆಸಿ ಅವರು ಬಡಿಸಿದ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಸಂಗೀತ ಸೂಪರ್.. 


ಎಲ್ ವೈದ್ಯನಾಥನ್



ಜಿ ಕೆ ವೆಂಕಟೇಶ್ ಅವರ ಇನ್ನೊಬ್ಬ ಶಿಷ್ಯನ ಸಂಗೀತ ಸಂಯೋಜನೆಯಲ್ಲಿ ನಟಿಸಿ ಹಾಡಿದ ಅನುಭವ ನನ್ನದು. ಒಂದು ಮುತ್ತಿನ ಕತೆಯಲ್ಲಿ ಜಾನಪದ ಛಾಯೆ ಜೊತೆಯಲ್ಲಿ ನಾಡಿನ ವಾದ್ಯಗಳನ್ನು ಉಪಯೋಗಿಸಿಕೊಂಡು ಸಿದ್ಧಪಡಿಸಿದ ಹಾಡುಗಳು, ಅದರ ಹಿನ್ನೆಲೆ ಸಂಗೀತ ಇಷ್ಟವಾಗುತ್ತೆ ನನಗೆ. 

******
 
ಅಣ್ಣಾವ್ರೇ ನಿಮ್ಮ ಅನೇಕಾನೇಕ ಚಿತ್ರಗಳಲ್ಲಿ ನಿಮ್ಮ ಗಾಯನ ಪ್ರತಿಭೆಗೆ ಸಾಣೆ ಹಿಡಿದ ಅನೇಕ ಸಂಗೀತ ನಿರ್ದೇಶಕರಿದ್ದಾರೆ.  ನೀವು  ಗಾಯನ ಶುರು  ಮಾಡಿದ ಮೇಲೆ, ನಿಮ್ಮ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದವರ ಬಗ್ಗೆ ನನಗೆ ತಿಳಿದಷ್ಟು ಮಾತುಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ.. 

ಶ್ರೀ ಬೇಕಾದಷ್ಟು ಇದೆ.. ಮನದಾಳದ ಮಾತುಗಳು ಹಾಗೆ ಮೂಡಿ ಬಂದಿರುವುದು ಹಾಗಾಗಿ ಇಷ್ಟವಾಗುತ್ತೆ 

ಅಣ್ಣಾವ್ರೇ ಪ್ರತಿ ದಿನವೂ, ಪ್ರತಿ ಕ್ಷಣವೂ ನಿಮ್ಮ ಬಗ್ಗೆ ನಿಮ್ಮ ಸಿನಿಮಾಗಳ ಬಗ್ಗೆ ಮಾಡುತ್ತಿದ್ದರೂ ವರ್ಷಕ್ಕೆ ಎರಡು ಬಾರಿ ಒಂದೇ ತಿಂಗಳಲ್ಲಿ ಲೇಖನ ಬರೆಯುವುದು ಓಹ್ ಕ್ಷಮಿಸಿ ನೀವು ನನ್ನಿಂದ ಲೇಖನ ಬರೆಸುವುದು ಇಷ್ಟವಾಗುತ್ತದೆ..  ಏನೇ ಆಗಲಿ ನಿಮ್ಮ ಚಿತ್ರಗಳು ವಿಶ್ವವಿದ್ಯಾಲಯವಿದ್ದಂತೆ.. ಮೊಗೆದಷ್ಟು ಮರಳಿ ಮರಳಿ ಬರುವ ವಿಷಯಗಳು ಸ್ಫೂರ್ತಿಗಳು ಅಪಾರ.. 

ನಿಮ್ಮ ಜನುಮದಿನಕ್ಕೆ ಅಕ್ಷರ, ಪದಗಳ, ವಾಕ್ಯಗಳ ಸಮರ್ಪಣೆ ಅಣ್ಣಾವ್ರೇ... 

ಶ್ರೀ ಧನ್ಯವಾದಗಳು ರಾಜ್ ಜೈತ್ರ ಯಾತ್ರೆ ಮುಂದುವರೆಸಪ್ಪ... ಶುಭವಾಗಲಿ.. !

Friday, April 15, 2022

ಕನ್ನಡ ಗುಡ್ ಫಿಲ್ಮ್ - ಕೆ.ಜಿ.ಎಫ್ II (2022)

 ಪಡುವಾರಹಳ್ಳಿ ಪಾಂಡವರು ಕನ್ನಡ ಒಂದು ಉತ್ತಮ ರೆಬೆಲ್ ಚಿತ್ರ.. ಅವ್ಯವಸ್ಥೆಯ ವಿರುದ್ಧವಾಗಿ ಹೋರಾಡುವ ಚಿತ್ರಕತೆ ಹೊಂದಿತ್ತು.. ಅದರಲ್ಲಿ ಐದು ಮಂದಿ ಸಂತ್ರಸ್ತರು ಸಾಹುಕಾರನ ದಬ್ಬಾಳಿಕೆಯಿಂದ ಬೇಸತ್ತು ನಿಂತಿದ್ದಾಗ, ಐದು ಮಂದಿಯಲ್ಲಿ ಒಬ್ಬರಾದ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಪಾತ್ರ ಕರಿಯನನ್ನು ಹಳ್ಳಿಯಿಂದ ಬಹಿಷ್ಕಾರ ಹಾಕಿದ್ದಾರೆ ಅಂತ ತಮಟೆ ಬಾರಿಸಿಕೊಂಡು ಕುಲ್ವಾಡಿಯುವ ಬರುತ್ತಾನೆ.. ಅದನ್ನು ಕಿತ್ತುಕೊಂಡು ರಾಮಕೃಷ್ಣ ಪಾತ್ರದಾರಿ ರಾಮಣ್ಣ, ಐದು ಜನರನ್ನು ಒಂದೂಗೂಡಿಸಿಕೊಂಡು ಸಾಹುಕಾರನ ಮುಂದೆ ತಮಟೆ ಬಾರಿಸುತ್ತಾ ಬಹಿಷ್ಕಾರವನ್ನು ಪ್ರತಿಭಟಿಸುತ್ತಾರೆ.. 

ಆಗ ಸಾಹುಕಾರನ ಪರಮಾಪ್ತ ಸ್ನೇಹಿತ ಕಾಳಪ್ಪ ಅರ್ಥಾತ್ ಕನಕ್ಸನ್ ಕಾಳಪ್ಪ - ಮುಸುರಿ ಕೃಷ್ಣಮೂರ್ತಿಯವರು "ನಮ್ಮ ಸಾಹುಕಾರರು ಅಂದರೆ ಯಾರು, ಅವರ ಹಿಂದೆ ಯಾರ್ಯಾರು ಇದ್ದಾರೆ, ಎಂತೆಂತವರು ಅವ್ರೆ, ಎಲ್ಲೆಲ್ಲಿ ಅವ್ರೆ, ಹೆಂಗೆಂಗೆ ಅವ್ರೆ, ಅಂತ ವಿಸ್ಯ ನಿಮಗೇನು ಗೊತ್ತಿದೇಯೇನ್ರೋಲೇ ... ತಡಕಾಲಂಟಿ ತಮಟೆ ತಕ್ಕೊಂಡು ಟ ಟ ಟ ಟ ಅಂತ ಬಂದ್ಬಿಟ್ರು.. ನಮ್ ತಾವ  ಬಾರಿ ದೊಡ್ಡ ನಗಾರಿ ಐತಲೇ.. ಒಂದು ಸಾರಿ ಬಾರಿಸಿದರೆ ಚಂಡಮಾರುತ ಬೀಸಿದಂಗೆ.. ಅದರಲ್ಲಿ ನಿಮ್ಮಂತ ತರಗೆಲೆಗಳು ತೂರಿ ಹೋಗ್ತಾವೆ.. "

ಹೌದು ಈ ಚಿತ್ರದ ಸಂಭಾಷಣೆಯಂತೆ.. ಕನ್ನಡ ಚಿತ್ರಗಳು ವಿಜೃಂಬಿಸಿದ ಕಾಲವೊಂದಿತ್ತು.. ನಂತರ ಅನೇಕ ದೊಡ್ಡ ಹೆಸರಾಂತ ನಿರ್ದೇಶಕರು, ಕಲಾವಿದರು, ಸಂಗೀತ, ಸಾಹಿತ್ಯ, ಸಹಕಲಾವಿದರ ತಂಡದ ಸದಸ್ಯರು ಒಬ್ಬೊಬ್ಬರಾಗಿ ಜಗದಿಂದ ಜಾಗ ಖಾಲಿ ಮಾಡಿದರು, ಇಲ್ಲವೇ ನೇಪಥ್ಯಕ್ಕೆ ಸರಿದಿದ್ದರು.. ಕನ್ನಡ ಚಿತ್ರಗಳು ಕೂಡ ಆಹಾ ಒಹೋ ಅನ್ನುವಂತಹ ಚಿತ್ರಗಳ ಸಂಖ್ಯೆ ಕಡಿಮೆಯಾಗಿದ್ದು ಸುಳ್ಳಲ್ಲ.. ಆದರೆ ಮತ್ತೆ ನಗಾರಿ ಬಾರಿಸೋಕೆ ಶುರುವಾದವು.. ಹೊಸ ತಲೆಮಾರಿನ ತಂತ್ರಜ್ಞರು, ಕಲಾವಿದರು, ನಿರ್ದೇಶಕರು ಚಿತ್ರರಂಗಕ್ಕೆ ಬಂದು ತಮ್ಮದೇ ವಿಭಿನ್ನ ದೃಷ್ಟಿಕೋನದಿಂದ ಚಿತ್ರಿಸಿದ ಸಿನೆಮಾಗಳು ವಿಭಿನ್ನವಾಗಿ ಕಾಣತೊಡಗಿದವು.. 

ಈ ದೃಷ್ಟಿಯಿಂದ ಬಂದ ಒಂದು ಚಿತ್ರ ಕೆ ಜಿ ಎಫ್ ೨೦೧೮ ರಲ್ಲಿ ತೆರೆಗೆ ಅಪ್ಪಳಿಸಿ ಅಪಾರ ಸದ್ದು ಮಾಡಿತು.. ಅದರ ಬಗ್ಗೆ ನನಗೆ ತಿಳಿದದ್ದು ಬರೆದಿದ್ದೆ.. KGF Chapter 1 ಈಗ ನಾಲ್ಕು ವರ್ಷಗಳ ಪರಿಶ್ರಮದ ನಂತರ ಎರಡನೇ ಅಧ್ಯಾಯ ಚಂಡಮಾರುತವಾಗಿ ಅಪ್ಪಳಿಸಿದೆ... 

ಕೋಟ್ಯಂತರ ವೀಕ್ಷಕರು ಈ ಚಿತ್ರಕ್ಕೆ ಕಾಯುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ.. ಸಿನಿಮಾ ತಂಡವೂ ಕೂಡ ಪ್ರಚಾರಕ್ಕೆ, ಕುತೂಹಲದ ಮಟ್ಟ ಏರುವಂತೆ ಅನೇಕಾನೇಕ ಪ್ರೋಮೋಗಳು, ಸ್ಟಿಲ್ಲುಗಳು, ಅದರ ಬಗ್ಗೆ ಫೇಸ್ಬುಕ್, ವಾಟ್ಸಪ್ಪ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹೀಗೆ ಸಿಗಬಹುದಾದ ಎಲ್ಲಾ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತಾಪಮಾನವನ್ನು ಏರಿಸಿದ್ದರು.. ಬಿಡುಗಡೆ ದಿನ ನಿಗದಿಯಾದಂತೆ, ಚಿತ್ರಮಂದಿರಗಳ ಸೀಟುಗಳು ಭರ್ತಿಯಾಗತೊಡಗಿತ್ತು... 

ಅಪ್ಪ ಕೆ ಜಿ ಎಫ್ ಹೋಗೋಣ್ವಾ.. ಮಗಳು ಕೇಳಿದಾಗ.. ಮೊದಲ ವಾರ ಬೇಡಾ.. ಸಿಕ್ಕಾಪಟ್ಟೆ ಹೆಚ್ಚಿರುತ್ತದೆ ಟಿಕೆಟ್ ದುಡ್ಡು.. ಒಂದು ವಾರ ಕಳೆಯಲಿ ನಂತರ ಹೋಗೋಣ ಅಂದಿದ್ದೆ.. ಆದ್ರೆ ಅವಳ ಬಾಡಿದ ಮೊಗ ನೋಡಿದಾಗ.. ಜೀವನದಲ್ಲಿ ರಗಳೆ ಇದ್ದದ್ದೇ, ಚಿಕ್ಕ ಪುಟ್ಟ ಆಸೆಗಳನ್ನು ಈಡೇರಿಸಿಕೊಂಡು ಬದುಕೋದೇ ಜೀವನ ಅನ್ನಿಸಿ, ಒಂದಷ್ಟು  ಜಾಲಾಡಿದ ಮೇಲೆ, ಆದಷ್ಟು ಕಡಿಮೆ ದರ ಇರುವ ಟಾಕೀಸು ಆರಿಸಿಕೊಂಡು ಚಿತ್ರ ನೋಡಲು ಹೋದೆವು..


 ಇತ್ತೀಚಿಗೆ ನಮ್ಮನ್ನೆಲ್ಲ ಬಿಟ್ಟು ಹೋದ ಪುನೀತ್ ರಾಜ್ ಕುಮಾರ್ ಅವರ ಹೆಸರು, ಅವರ ಕೆಲವು ಚಿತ್ರಗಳು ತೆರೆಯ ಮೇಲೆ ಮೂಡಿ ಬಂದಾಗ ಶಿಳ್ಳೆಗಳು ಕೂಗಾಟ ಜೈಕಾರ... ಕಿವಿಗಡಚಿಕ್ಕುವಂತೆ ಸದ್ದು.. ನಂತರ ಶುರುವಾದದ್ದೇ ಚಂಡಮಾರುತದ ಆಗಮನ.. 

ಮುಂದಿನ ಎರಡೂವರೆ ಘಂಟೆಗಳು ನೆಡೆದದ್ದು ಇತಿಹಾಸ.. ಕನ್ನಡ ಚಿತ್ರರಂಗದಲ್ಲಿ ಅದ್ದೂರಿ ಅನ್ನುವ ಪದಗಳು ಕೆಲವು ಪುಟ್ಟಣ್ಣ ಕಣಗಾಲ್ ಚಿತ್ರದಲ್ಲಿ, ನಂತರ ರವಿಮಾಮನ ಚಿತ್ರಗಳಲ್ಲಿ.. ಕೋಟಿ ರಾಮು ಚಿತ್ರಗಳಲ್ಲಿ  ಹರಿದಾಡಿದ್ದುಕೇಳಿದ್ದೆ ..ನೋಡಿದ್ದೇ.. ಆದರೆ ಇಲ್ಲಿ ಅಕ್ಷರಶಃ ಪ್ರತಿ ಫ್ರೇಮಿನಲ್ಲೂ ಅದ್ದೂರಿತನ ಎದ್ದು ಕಾಣುತ್ತಿತ್ತು..





 ಯಶ್ ನಾಯಕನಾಗಿ ಈ ಚಿತ್ರವನ್ನು ಆವರಿಸಿಕೊಂಡಿರುವ ರೀತಿ ಇಷ್ಟವಾಗುತ್ತದೆ.. ಅನೇಕಾನೇಕ ಬಿಲ್ಡ್ ಅಪ್ ದೃಶ್ಯಗಳು ಇವೆ.. ಆದರೆ ಅವೆಲ್ಲವೂ ಈ ಚಿತ್ರಕ್ಕೆ, ಕತೆಗೆ ಬೇಕಾದಂತೆಯೇ ಇದೆ.. ಆ ಕಾಲದ ದಿರುಸುಗಳಲ್ಲಿ ಅವರನ್ನು ನೋಡೋದು ಇಷ್ಟವಾಗುತ್ತದೆ.. ಕೇಶವಿನ್ಯಾಸ, ಆ ಗಡ್ಡ, ಇರಿಯುವಂತಹ ನೋಟ.. ಚಿಕ್ಕ ಚೊಕ್ಕ ಇಂಗ್ಲಿಷ್ ಪದಗಳು, ತನ್ನ ತಾಯಿಯ ಆಸೆಯನ್ನು ಈಡೇರಿಸಬೇಕು ಎನ್ನುವಾಗ ಅವರ ಅಭಿನಯ.. ಜಗತ್ತಿಗೆ ಎದುರಾಗಿ ನಿಲ್ಲುತ್ತೇನೆ ಎನ್ನುವಾಗ ಕಣ್ಣಿನ ಹೊಳಪು.. ಎಲ್ಲವೂ ಸೊಗಸಾಗಿದೆ.. 

ಅಕ್ಷರಶಃ ರಾಕಿ ಪಾತ್ರದಲ್ಲಿ ಬೇರೆ ಯಾವ ಕಲಾವಿದರನ್ನೂ ಕಲ್ಪಿಸಿಕೊಳ್ಳಲು ಆಗದಷ್ಟು ಪರಕಾಯ ಪ್ರವೇಶ ಮಾಡಿದ್ದಾರೆ.. ಪಾಂಡವರಹಳ್ಳಿ ಪಾಂಡವರು ಚಿತ್ರದಲ್ಲಿ ಹೇಳಿದಂತೆ ಸಾಹುಕಾರರು ಅಂದರೆ ಪಡುವಾರಹಳ್ಳಿ, ಪಡುವಾರಹಳ್ಳಿ ಅಂದ್ರೆ ಸಾಹುಕಾರರು.. ಅನ್ನುವ ಹಾಗೆ ರಾಕಿ ಅಂದ್ರೆ ಯಶ್.. ಯಶ್ ಅಂದ್ರೆ ರಾಕಿ ಆಗಿ ಬಿಟ್ಟಿದ್ದಾರೆ.. 

ಪ್ರತಿ ಫ್ರೇಮಿನಲ್ಲೂ ಅವರ ಅಬ್ಬರ.. ಅಭಿನಯ.. ಆ ಬಣ್ಣಗಳ ಸಮುದ್ರದಲ್ಲಿ ಅವರು ಮೂಡಿರುವುದು ಅದ್ಭುತ ಎನಿಸುತ್ತದೆ.. 

ತನ್ನ ಪ್ರೇಮಿಯನ್ನು ರಮಿಸುವ ಶೈಲಿ ಕೂಡ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.. ಅದನ್ನು ತೆರೆಯ ಮೇಲೆ ತೋರಿಸಿರುವ ರೀತಿ ಕೂಡ ಯಶ್ ಗೆ ಮಾತ್ರ ಸಾಧ್ಯವೇನೋ ಅನಿಸುವಂತಿದೆ.. ಮತ್ತೆ ಇದು ಹೀಗೆ ಇರಬೇಕು ರಾಕಿಯ ಹಾವಭಾವಕ್ಕೆ ಎನ್ನುವಂತಿದೆ. 

ಈ ಸಿನೆಮಾಗಾಗಿಯೇ ಐದಾರು ವರ್ಷಗಳಿಂದ ಗಡ್ಡ ಮೀಸೆ ತಲೆಗೂದಲನ್ನು ಹುಲುಸಾಗಿ ಬೆಳೆಸಿಕೊಂಡು, ಆ ಪಾತ್ರವೇ ತಾವಾಗಿರುವುದು ಕಲಾವಿದನ ಶ್ರದ್ಧೆಯನ್ನು ತೋರಿಸುತ್ತದೆ... ನಿಜ ಅದಕ್ಕೆ ಬೇಕಾದ ಸಂಭಾವನೆ ಪಡೆದಿರುತ್ತಾರೆ.. ಆದರೆ ಆ ಮಟ್ಟದ ಶ್ರದ್ಧೆ, ತಾಳ್ಮೆ ಅವರನ್ನು ಈ ವೃತ್ತಿಯಲ್ಲಿ ಮೇಲೇರಿಸುತ್ತಿದೆ ಎಂದರೆ ತಪ್ಪಿಲ್ಲ.. 




ನಾಯಕಿ ಶ್ರೀನಿಧಿ ಶೆಟ್ಟಿ ಮೊದಲ ಭಾಗದಲ್ಲಿ ಸ್ಕ್ರೀನ್ ಸಮಯ ಅಷ್ಟೊಂದು ಇರಲಿಲ್ಲ.. ಆದರೆ ಈ ಭಾಗದಲ್ಲಿ ಹಲವಾರು ದೃಶ್ಯಗಳಿವೆ.. ಮತ್ತೆ ಅಷ್ಟೇ ಮುದ್ದಾಗಿ ಕಾಣುತ್ತಾರೆ.. ಅಭಿನಯಕ್ಕೆ ಅಷ್ಟೊಂದು ಅವಕಾಶವಿಲ್ಲದಿದ್ದರೂ, ಸಿಕ್ಕ ಅವಕಾಶದಲ್ಲಿ ಆಹಾ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ. ಮುದ್ದು ಮುದ್ದಾಗಿ ಕಾಣುವ ಅವರ ಮೊಗವನ್ನು ನೋಡುವುದೇ ಕುಶಿ.. ನಾಯಕನ್ನು ದ್ವೇಷಿಸುವಾಗಲಿ, ಅಥವ ಪ್ರೀತಿ ವ್ಯಕ್ತಪಡಿಸುವಾಗಲಿ ಅವರ ಅಭಿನಯ ನೋಡಲು ಚೆನ್ನಾ.. ಆ ಮುಗ್ಧ ಕಣ್ಣುಗಳಲ್ಲಿನ ಅವರ ಸೌಂದರ್ಯವನ್ನು ತೆರೆಯ ಮೇಲೆ ನೋಡಲು ಖುಷಿಯಾಗುತ್ತದೆ.. 







ನನ್ನ ನೆಚ್ಚಿನ ರವೀನಾ ಟಂಡನ್.. ಅರೆ ಇದೆ ಪಾತ್ರವನ್ನು ಅವರ ಯೌವ್ವನ ಕಾಲದಲ್ಲಿ ಮಾಡಿದಿದ್ದರೆ ಎಷ್ಟು ಚೆನ್ನಾ ಅನಿಸಿತ್ತು.. ಸಿಕ್ಕ ಅವಕಾಶವನ್ನು ಸೊಗಸಾಗಿ ಉಪಯೋಗಿಸಿಕೊಂಡಿದ್ದಾರೆ.. ಆ ದೃಶ್ಯಗಳಿಗೆ ಬೇಕಾಗುವ  ಮುಖಾಭಿನಯ ನೋಡಲು ಚೆನ್ನಾ.. ಅವರ ವೇಷಭೂಷಣಗಳು ಮುದ್ದಾಗಿ ಕಾಣಲು ಸಹಕಾರಿಯಾಗಿದೆ .. 

ಸಂಜಯ್ ದತ್ ಅವರ ಅಭಿನಯದ ಅಬ್ಬರತೆಯನ್ನು ತೆರೆಯ ಮೇಲೆ ನೋಡಿಯೇ ಆನಂದಿಸಬೇಕು.. 





ಮಾಳವಿಕಾ ಮೊದಲ ಭಾಗದ ಮುಗ್ಧತೆ, ಸೌಂದರ್ಯ, ಭಾಷಾ ಶುದ್ದತೆ ಎಲ್ಲವನ್ನೂ ಉಳಿಸಿಕೊಂಡಿದ್ದಾರೆ.. ಇಡೀ ಚಿತ್ರದ ನಿರೂಪಣೆಯನ್ನು... ತಿರುವುಗಳ ಬಗ್ಗೆ ಇರುವ ಸುಳಿವನ್ನು, ಅಗತ್ಯವಾದಾಗ ಚಿತ್ರಕ್ಕೆ ನೀಡಬಹುದಾದ ವೇಗವನ್ನು ಕೊಡುವ ಪಾತ್ರದಲ್ಲಿ ಲೀಲಾಜಾಲವಾದ ಅಭಿನಯ ಅವರದ್ದು.. ಭಾಷೆಯನ್ನ ಎಷ್ಟು ಸೊಗಸಾಗಿ ಉಚ್ಚರಿಸುತ್ತಾರೆ.. ಹಾಗೆ ಆ ಜೇನು ಧ್ವನಿ.. ಬಹಳ ಇಷ್ಟವಾಗುತ್ತದೆ.. 

ನಾಗಾಭರಣ ಯತೋಚಿತವಾಗಿ ಅಭಿನಯಿಸಿದ್ದಾರೆ.. ಪ್ರಕಾಶ್ ರೈ ಚಿತ್ರಕ್ಕೆ ಬೇಕಾದ ನಿಟ್ಟಿನಲ್ಲಿ ಅಭಿನಯಿಸಿದ್ದಾರೆ... ಟೀ ಕಾಫೀ ಕೊಡುವ ಪಾತ್ರದಾರಿ ಅರಿವಿಲ್ಲದೆ ಇಷ್ಟವಾಗುತ್ತಾರೆ. .. ತಿರುವು ಕೊಡುವ ಪಾತ್ರದಲ್ಲಿ ಅಚ್ಯುತ್ ಕುಮಾರ್ ಬೊಂಬಾಟ್.. ಅವರ ಸಹಚರರು.. ಅವರ ವೇಷಭೂಷಣ ಎಲ್ಲವೂ ೧೦೦ ಕ್ಕೆ ೧೦೦ ಅಂಕಗಳು.. 



ಉಳಿದ ಸಹಕಲಾವಿದರು ಚಿತ್ರಕ್ಕೆ, ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯ ನೀಡಿದ್ದಾರೆ.. 

ಇಲ್ಲಿ ಎದ್ದು ಕಾಣುವುದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕ್ರಮಬದ್ಧವಾದ ಪರಿಶ್ರಮ.. ತರ್ಕಬದ್ಧವಾದ ಕತೆ, ಅದರ ನಿರೂಪಣೆ.. ಎಲ್ಲಾ ಪರಿಕರಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರುವ ರೀತಿ.. ರವಿಯವರ ತಾಪಮಾನ ಇರುವಂತಹ ಹಿನ್ನೆಲೆ ಸಂಗೀತ, ಭುವನ್ ಅವರ ಅದ್ಭುತ ಛಾಯಾಗ್ರಹಣ... ಕ್ಯಾಮೆರಾ ಎಲ್ಲೆಲ್ಲಿ ಇಟ್ಟಿದರಪ್ಪ ಅಂತ  ಹುಡುಕುವ ಹಾಗೆ ಕ್ಯಾಮೆರಾ ಕೈ ಚಳಕ... ಬೆಳಕನ್ನು ಅದ್ಭುತವಾಗಿ ಉಪಯೋಗಿಸಿರುವ ರೀತಿ.. ನಮ್ಮ ಕನ್ನಡ ಚಿತ್ರರಂಗ ಯಾವುದಕ್ಕೂ ಕಮ್ಮಿ ಇಲ್ಲ ಅಂತ ಜಗತ್ತಿಗೆ ತೋರಿಸಿದ ಚಿತ್ರತಂಡದ ಪರಿಶ್ರಮವಿದು.. 




ಪಕ್ಷಿನೋಟ ಕೊಡುವ ದೃಶ್ಯಗಳು.. ಅದರ ವರ್ಣ ವಿನ್ಯಾಸ, ಆ ಸೈನೈಡ್ ಗುಡ್ಡವನ್ನು ಉಪಯೋಗಿಸಿಕೊಂಡಿರುವ ರೀತಿ.. ಪಂಜಿನ ಬೆಳಕಲ್ಲಿ ಚಿತ್ರೀಕರಿಸುವ ಹಲವಾರು ದೃಶ್ಯಗಳು ಕಣ್ಣಿಗೆ ಹಬ್ಬ ಮಾಡುತ್ತವೆ.. 

ಹೋಳಿ ಸಂಭ್ರಮ.. ದೀಪಾವಳಿಯ ಬೆಳಕು ಎರಡೂ ಒಮ್ಮೆಲೇ ನೋಡಬೇಕೆ.. ಇಲ್ಲಿದೆ ಹೋಗಿ ನೋಡಿ ಬನ್ನಿ.. ಬೆಳ್ಳಿ ಪರದೆಯ ಮೇಲೆ ನೋಡುವ ಅನುಭವ ಮನೆಯಲ್ಲಿ ಟಿವಿಯಲ್ಲಿ ಇಲ್ಲವೇ ಮೊಬೈಲಿನಲ್ಲಿ ಕಾಣಸಿಗುವುದಿಲ್ಲ.. 

(ಇಲ್ಲಿ ಹಾಕಿರುವ ಎಲ್ಲಾ ಚಿತ್ರಗಳು ಗೂಗಲೇಶ್ವರ ದಯಪಾಲಿಸಿದ್ದು)

ಕನ್ನಡ ಚಿತ್ರಗಳನ್ನು ನೋಡೋಣ.. ಬೆಳೆಸೋಣ.. ಗೆಲ್ಲಿಸೋಣ.. !!!

ಹಿಂದಿಯ ಚಿತ್ರಗಳ ನಟಿ ಈ ಚಿತ್ರವನ್ನು ಯಶಸ್ವೀ
ಮಾಡಲು ಹೊರಟಿದ್ದಾರೆ ನಾವು ಹೊರಡೋಣ ಅಲ್ವೇ!!!